ಭೀಮಾತಟ ವಿಹಾರ
ಜಗದ ಗುರಿಗಳ ಭಾರ | ಬೆಂಬಿಡದ ಸಂಸಾರ
ವಹಿಸುವ ಮನಬಲವ ನೀಡು ಕರುಣಾಪಾರ | ಭೀಮಾತಟ ವಿಹಾರ || ಪ ||
ಜಾಣ್ಮೆಯದು ಮಗುವಾಗಿ | ತಾಳ್ಮೆಯದು ಮಗನಾಗಿ
ಹಿರಿಮೆಯದು ಎಲ್ಲದಕು ಮನೆತನದ ಕುಡಿಯಾಗಿ | ಬಯಸುವರು ಹರಿಯೆ ||
ಗಂಡಾಗಿ ಗಾಂಭೀರ್ಯ | ಹೆಣ್ಣಾಗಿ ಸೌಂದರ್ಯ |
ಇಬ್ಬರು ಸೇರಿರಲು ಸಂಸಾರ ಮಾಧುರ್ಯ | ಬಯಸುವರು ಹರಿಯೇ ||
ಪತಿಯಲ್ಲಿ ರಾಮನನು | ಸತಿಯಲ್ಲಿ ಸೀತೆಯನು |
ಸೇವಕನ ಪರಿಯಲ್ಲಿ ವೈರಾಗಿ ಹನುಮನನು | ಬೇಡುವರು ಹರಿಯೇ ||
ಧರ್ಮದಲಿ ಕರ್ಮವನು | ಕರ್ಮದಲಿ ಧರ್ಮವನು |
ಹುಡುಕಾಡಿ ತಳಕಾಡಿ ತಿಳಿಯದೇ ಮರ್ಮವನು | ಕೇಳುವರು ಹರಿಯೇ ||
ಇಹಲೋಕ ಸುಖವನ್ನು | ಪರಲೋಕ ನಾಕವನು |
ಇಹ-ಪರದ ಗಡಿದಾಟಿ ಹರಿಚರಣ ಮುಕುತಿಯನು | ಬೇಡುವರು ಹರಿಯೇ ||
ಜಗವನ್ನು ನಾನರಿತು | ಜಗದಲ್ಲಿ ನಾ ಬೆರೆತು |
ಜಗವ ನಾ ಬಿಡುವಾಗ ಮೊಗದಿ ನಗು ಒಂದಿನಿತು | ಸಾಕು ಸುರ ತರುವೇ ||
ಜಾನಕಿರಾಮ (ಸೀತಾರಾಮಾಚಾರ್ಯ ಕಟ್ಟಿ)
No comments:
Post a Comment