Monday, January 29, 2024

ONE WHO have NO Children NO PACE ಅಪುತ್ರಸ್ಯ ಗತಿರ್ನಾಸ್ತಿ

ಅಪುತ್ರಸ್ಯ ಗತಿರ್ನಾಸ್ತಿ


ಪುತ್ರಸ್ಯ ಗತಿರ್ನಾಸ್ತಿ - ಒಂದು ಚಿಂತನೆ
ಶ್ರೀರಾಮಚಂದ್ರನೇ ಮಗನಾಗಿದ್ದರೂ ದಶರಥನ ಅಂತ್ಯಕಾಲದಲ್ಲಿ ಯಾವ ಮಕ್ಕಳು ಅಲ್ಲಿ ಇರಲ್ಲಿಲ್ಲ.
ಮಕ್ಕಳಿಲ್ಲದ ಜಟಾಯು; ಬಂಧುಬಾಂಧವರಿಲ್ಲದ ಶಬರಿಗೆ ಪರಮಾತ್ಮ ಸ್ವಯಂ ಅಂತ್ಯೇಷ್ಠಿ ಯನ್ನೂ ಕೂಡ ಶ್ರೀ ರಾಮಚಂದ್ರನೇ ನೆರವೇರಿಸಿದ..
ದುರ್ಯೋಧನ ನಂತಹ ನೂರು ಮಕ್ಕಳಿದ್ದರೂ ಸಹ ಧೃತರಾಷ್ಟ್ರನಿಗೆ ತಮ್ಮ ಮಕ್ಕಳಿಗೆ ತರ್ಪಣ ಕೊಡುವಂತಾಯಿತು.....ಯಾರಿಗೆ ಯಾರು ?
" ಅಪುತ್ರಸ್ಯ ಗತಿರ್ನಾಸ್ತಿ " - " ಮಕ್ಕಳಿಲ್ಲದವನಿಗೆ ಸದ್ಗತಿಯಿಲ್ಲ ". ಈ ಮಾತು ಪುರಾಣಗಳಲ್ಲಿ ಪ್ರಸಿದ್ಧ. " ತ್ರಾತಾ ಯಾ ಏವ ನರಕಾತ್ ಸಹಿ ಪುತ್ರನಾಮ " ಎಂದು ಸುಮಧ್ವವಿಜಯದಲ್ಲಿ ಹೇಳಿರುವಂತೆ " ಪುತ್ " ಯೆಂಬ ನರಕದಿಂದ ರಕ್ಷಿಸುವವನೇ " ಪುತ್ರ, ಪುತ್ರನಿಲ್ಲದವನು ಈ ನರಕದಿಂದ ಪಾರಾಗಲು ಸಾಧ್ಯವಿಲ್ಲ. ಸತ್ಪುತ್ರನನ್ನು ಪಡೆದಾಗ ಮಾತ್ರ " ಪಿತೃ ಋಣ " ದಿಂದ ಮುಕ್ತಿ. ಎಂದರೆ ಸಂತಾನವಿಲ್ಲದವನಿಗೆ " ಸದ್ಗತಿ " ಇಲ್ಲವೆಂದು ಶಾಸ್ತ್ರಗಳ ಅಭಿಪ್ರಾಯವಲ್ಲ. " ಸ್ವಕರ್ಮಣಾ ತಮಭ್ಯರ್ಚ ಸಿದ್ಧಿಂ ವಿಂದತಿ ಮಾನವಃ " ಎಂಬ ಶ್ರೀ ಕೃಷ್ಣ ಪರಮಾತ್ಮನ ಮಾತಿನಂತೆ ತನ್ನ ವರ್ಣಾಶ್ರಮಗಳಿಗೆ ವಿಹಿತವಾದ ಕರ್ತವ್ಯವನ್ನು ಪ್ರಾಮಾಣಿಕವಾಗಿ ಅನುಷ್ಠಾನ ಮಾಡುವುದರಿಂದಲೇ ಮನುಷ್ಯನು " ಸದ್ಗತಿ " ಯನ್ನು ಹೊಂದುವನು.
ಜೀವನು ಮೋಕ್ಷವನ್ನು ಹೊಂದಲು ಮಕ್ಕಳು ಕಾರಣರಲ್ಲ. " ನಾನ್ಯಪಂಥಾವಿದ್ಯತೇsಯನಾಯ " ಶ್ರುತಿಯು ಇತರ ಮಾರ್ಗಗಳನ್ನು ನಿಷೇಧಿಸಿ ಕೇವಲ ತಾನು ಸಂಪಾದಿಸಿದ ಭಗವಂತನ ಜ್ಞಾನ, ಭಕ್ತಿ ಪ್ರಸಾದವೇ " ಮೋಕ್ಷ " ಕ್ಕೆ ಕಾರಣವೆಂದು ಸ್ಪಷ್ಟ ಪಡಿಸಿದೆ.
" ಐತರೇಯ ಭಾಷ್ಯ " ಹೇಳುವಂತೆ....
ದುರ್ಗಂಧಮಯವಾದ ನರಕದಿಂದ ರಕ್ಷಿಸುವವನು " ಜನಾರ್ದನನೇ ". ಆದ್ದರಿಂದ ಪುತ್ರನಲ್ಲಿದ್ದು " ಪುತ್ರ " ಶಬ್ದದಿಂದ ವಾಚ್ಯನಾಗಿರುವನು. ಇಂತಹ ಪರಮಾತ್ಮನ ಉಪಾಸನೆಯಿಂದಲೇ ನಾವು " ಪುತ್ " ಯೆಂಬ ನರಕದಿಂದ ಪಾರಾಗುವೆವು
ಗರುಡಪುರಾಣದಲ್ಲಿ ಭಗವಂತನು ನುಡಿಯುತ್ತಾನೆ: ‘ಯಾವನು ಪುತ್ ಎಂಬ ನರಕದಿಂದ ಪಿತೃಗಳನ್ನು ಪಾರುಮಾಡುತ್ತಾನೋ ಅವನೇ ಪುತ್ರ’. ಆದುದರಿಂದ ಯಾವುದೇ ಜಾತಿಬೇಧವಿಲ್ಲದೆ ಕರ್ಮಾಕಾರ ಇದ್ದಲ್ಲಿ ಪಿತೃಗಳಿಗೆ ಶ್ರಾದ್ಧ, ತರ್ಪಣ ಹಾಗೂ ದಾನಗಳನ್ನು ಮಾಡಿ ತಮ್ಮ ಋಣ ತೀರಿಸಲೇಬೇಕು.
ಯಕ್ಷಪ್ರಶ್ನೆ ೧೪ ; ಕಿಂಸ್ವಿದಾತ್ಮಾ ಮನುಷ್ಯಸ್ಯ ಕಿಂ ಸ್ವಿದ್ದೈವಕೃತಃ ಸಖಾ।  ಉಪಜೀವನಂ ಕಿಂಸ್ವಿದಸ್ಯ ಕಿಂಸ್ವಿದಸ್ಯ ಪರಾಯಣಮ್॥
ಮನುಷ್ಯನಿಗೆ ಆತ್ಮ ಯಾವುದು? ಭಗವಂತನಿತ್ತ ಮಿತ್ರನ್ಯಾರು ? ಜೀವನಕ್ಕೆ ಆಧಾರ ಯಾವುದು ? ಜೀವನದ ಮುಖ್ಯ ಕರ್ತವ್ಯವೇನು ? 
ಯಕ್ಷನ ಮೇಲಿನ ಪ್ರಶ್ನೆಗೆ ಧರ್ಮರಾಯ ಉತ್ತರಿಸುವುದು ಹೀಗೆ: 
ಪುತ್ರ ಆತ್ಮಾ ಮನುಷ್ಯಸ್ಯ ಭಾರ್ಯಾ ದೈವಕೃತಃ ಸಖಾ। 
ಉಪಜೀವನಂ ಚ ಪರ್ಜನ್ಯೋ ದಾನಮಸ್ಯ ಪರಾಯಣಮ್॥ 
ಜೀವಿಗ ಆತ್ಮ ಪುತ್ರ. ಪತ್ನಿ ದೈವದತ್ತ ಮಿತ್ರಳು. ಮೋಡಕ್ಕೆ ನೀರು ಜೀವಾಧಾರ. ದಾನವೇ ಜೀವನದಲ್ಲಿ ಅತೀ ಮುಖ್ಯವಾದುದು. 
ಪುತ್ರ ಎನ್ನುವ ಪದಕ್ಕೆ  " ಪುತ್ " ಎಂಬ ನರಕದಿಂದ ಮೇಲೆತ್ತುವವನು. ದುಃಖ ನೋವು ನರಳಾಟಗಳ ನಿರಂತರ ಅನುಭವವೇ ನರಕ. ಇದು ಸ್ವಯಾರ್ಜಿತ, ಕರ್ಮಸಂಬಂಧವಾಗಿ ಬರುವಂತದ್ದು. ಸುಖ ದುಃಖಗಳು ನಮ್ಮಿಂದಲೇ ಸೃಷ್ಟಿಸಲ್ಪಟ್ಟವು ಎಂಬುದನ್ನು ನೆನಪಿಟ್ಟುಕೊಂಡು,ಆ ಫಲವನ್ನು ಭಗವದ ರೂಪಣ ಮಾಡುವವನು ಮುಕ್ತನಾಗುತ್ತಾನೆ. (ಪತ್ನಿಯನ್ನು ದೈವದತ್ತ ಸಖೀ ಎಂದರೆ ಗೆಳತಿ, ಮಿತ್ರಳು ಎಂದರು ಬಲ್ಲವರು. ಧರ್ಮಪತ್ನಿಗೆ ಬದುಕಿನಲ್ಲಿ ಸಮಾನ ಸ್ಥಾನವಿತ್ತು. ಯಜ್ಞ ಯಾಗಾದಿಗಳಿಂದ, ದಾನದ ವರೆಗೆ ಪತ್ನಿಯ ಅನುಮತಿ ಸಹಕಾರವಿಲ್ಲದಿದ್ದರೆ ಅದು ನಿಷ್ಫಲವೆನಿಸುತ್ತದೆ.ಪತ್ನಿ ಮಿತ್ರಳೂ ಹೌದು. ಮಾಡಿದ ಕ್ರಿಯೆಯ ಬಗ್ಗೆ ಆಳವಾಗಿ ವಿವೇಚಿಸಿ ಅದರ ಸಾಧಕ ಭಾದಕಗಳ ತುಲನೆಯಿಂದ ಸಮಾಜಕ್ಕೆ ತನ್ನ ವೈಯಕ್ತಿಕ ಜೀವನಕ್ಕೆ ಒತ್ತು ಕೊಡುವಂತಿದ್ದರೆ ಉಳಿಸಲು ನಿಶ್ಚಯಿಸುವುದೇ ಪ್ರಾಯಶ್ಚಿತ್ತ.  
ಬದುಕಿಗೊಂದು ಗತಿಯಿದೆ. ಅದರ ಅರಿವಿರಲೀ, ಇಲ್ಲದಿರಲಿ, ಪ್ರತಿಯೊಂದು ಕ್ರಿಯೆಯೂ ಒಂದು ನಿಶ್ಚಿತ ಫಲನೀಡುತ್ತದೆ. ಯಜ್ಞ ಯಾಗಗಳ ಮೂಲಕ ಪ್ರಕೃತಿಯನ್ನೇ ಒಲೆಸಿಕೊಳ್ಳುವ ತಂತ್ರವನ್ನು ರೂಪಿಸಿತ್ತು ನಮ್ಮ ಪ್ರಾಚೀನ ಸಭ್ಯತೆ. ಭೌತಿಕವಾದುದನ್ನು ಗಮನಿಸಿದರೆ " ಜೀವಾಧಾರ ಮಳೆ  " ಆಧ್ಯಾತ್ಮಿಕವಾಗಿ ಅರ್ಥೈಸಿದರೆ ಸಂಚಿತ ಕರ್ಮಫಲಗಳ ಕೊಳೆ ತೊಳೆಯುವ ದೈವಕೃಪೆ. ಈ ಎರಡೂ ವರ್ಷಧಾರೆಗಳೇ ಜೀವನಾಧಾರ. )

ಸ ಏವ ಪುತ್ರ ಸಂಸ್ಥಶ್ಚ ಪುತ್ರನಾಮಾ ಜನಾರ್ದನಃ ।
ತ್ರಾಣಾತ್ ಪೂತಿತ ಏವಾಸೌ ।।
ಯಾವ ಉದ್ಧೇಶದಿಂದ ಜೀವನು ಜನ್ಮ ತಾಳಿರುವನೋ ಆ ಉದ್ಧೇಶ ನೆರವೇರದೇ ಅವನಿಗೆ ಸದ್ಗತಿಯಿಲ್ಲ. ಆದ್ದರಿಂದಲೇ " ಪಾಂಡು ಚಕ್ರವರ್ತಿಗೆ " ಬ್ರಹ್ಮ ಲೋಕ " ವನ್ನು ಕುರಿತು ತೆರಳಲು ಸಾಧ್ಯವಾಗಲಿಲ್ಲ. ಭೀಮಸೇನ - ಅರ್ಜುನ - ಧರ್ಮರಾಜ ಉತ್ತಮ ಮಕ್ಕಳನ್ನು ಪಡೆಯುವ ಭಾಗ್ಯ ಪಾಂಡು ಚಕ್ರವರ್ತಿಯದಾಗಿತ್ತು. ಇಂತಹಾ ಮಕ್ಕಳನ್ನು ಪಡೆಯದೇ ಅವನಿಗೆ ಸದ್ಗತಿಯಿಲ್ಲ...
ರುಕ್ಮಾಂಗದನ ಮಗ ಧರ್ಮಾಂಗದನಿಗೆ ಮಕ್ಕಳಿರಲಿಲ್ಲ. " ಏಕಾದಶೀ ವ್ರತಾಚರಣೆ " ಯ ಪುಣ್ಯದಿಂದ ಸದ್ಗತಿಯನ್ನು ಪಡೆದ. ತಂದೆ ತಾಯಿಯನ್ನು ಉತ್ತಮ ಲೋಕಕ್ಕೆ ಕರೆದೊಯ್ದ. ಈ ಪ್ರಸಂಗವನ್ನು " ಶ್ರೀಮದಾಚಾರ್ಯರು ಭಾಗವತ ತಾತ್ಪರ್ಯ ನಿರ್ಣಯ " ದಲ್ಲಿ ಉದಾಹರಿಸಿ ಮಕ್ಕಳನ್ನು ಪಡೆಯದಿದ್ದರೂ ಸದ್ಗತಿಯನ್ನು ಹೊಂದಲು ಸಾಧ್ಯವಿದೆ ಎಂದು ತಿಳಿಸಿರುವರು. ಮಕ್ಕಳಿಲ್ಲದವನು ತನ್ನ ಧರ್ಮದ ಆಚರಣೆಯಿಂದ ಉತ್ತಮ ಲೋಕವನ್ನು ಹೊಂದುವನು.
" ಅನಪತ್ಯೋsಪಿ ಸದ್ಧರ್ಮಾ ಸಂಶಯಃ "
ಜರತ್ಕಾರುವು ತನ್ನ ವಂಶದ ಪಿತೃ ಪಿತಾಮಹರ ತೃಪ್ತಿಗಾಗಿ ಮಕ್ಕಳನ್ನು ಪಡೆದ. ಆ ಋಷಿ ಮದುವೆ ಆಗದಿದ್ದಲ್ಲಿ " ಆಸ್ತಿಕ " ನಂಥಹಾ ಉತ್ತಮ ಜ್ಞಾನಿ ಆ ವಂಶದಲ್ಲಿ ಹುಟ್ಟುವ ಅವಕಾಶವೇ ತಪ್ಪುತ್ತಿತ್ತು.
" ಮನುಸ್ಮೃತಿ " ಯಂತೆ...
ಪುನ್ನಾಮ್ನೋ ನರಕಸ್ಮಾತ್ ತ್ರಾಯತೇ ಪಿತರಂ ಸುತಃ ।
ತಸ್ಮಾತ್ಪುತ್ರ ಇತಿ ಪ್ರೋಕ್ತಃ ಸ್ವಯಮೇವ ಸ್ವಯಂಭುವಃ ।।
ನಿರಂತರ ಅಧ್ಯಯನದಿಂದ ಜ್ಞಾನ ಸಂಪಾದಿಸಿರುವ; ತಪಸ್ವಿಯಾದ; ವೇದಾಧ್ಯಯನದಲ್ಲೇ ಆಸಕ್ತನಾದ; ಭಗವಂತನಲ್ಲಿ ಸತತ ಧ್ಯಾನಶೀಲನಾದ; ತಂದೆ ತಾಯಿ ಗಳಲ್ಲಿ ಭಕ್ತಿ ಸಂಪನ್ನನಾದ; ಇಂದ್ರಿಯ ನಿಗ್ರಹಾದಿಗಳನ್ನು ಹೊಂದಿದವನೇ " ಸತ್ಪುತ್ರ " ಇಂಥಹಾ ಮಗನು ಮಾತ್ರ " ಪುತ್ " ಯೆಂಬ ನರಕದಿಂದ ತಂದೆ ತಾಯಿಯನ್ನು ರಕ್ಷಿಸುವವನು.
ಸನಕಾದ್ಯಾ ನಾರದಾಶ್ಚ ಋಭುರ್ಹಂಸೋsರುಣಿರ್ಯತಿಃ । ನೈತೇ ಗೃಹಾನ್ ಬ್ರಹ್ಮಸುತಾ ಹೃದಸನ್ನೂರ್ಧ್ವರೇತಸಃ ।।
ಶ್ರೀ ನಾರದರು, ಶ್ರೀ ಸನಕ ಸನಂದರೇ ಮೊದಲಾದ ಶ್ರೀ ಬ್ರಹ್ಮದೇವರ ಮಕ್ಕಳೂ ಗೃಹಸ್ಥಾಶ್ರಮವನ್ನು ಸ್ವೀಕರಿಸದೇ ಸಂನ್ಯಾಸಿಗಳಾಗಿ ಸದ್ಗತಿಯನ್ನು ಹೊಂದಿದವರು.
ಶ್ರೀ ಭೀಷ್ಮಾಚಾರ್ಯರು ಬ್ರಹ್ಮಚರ್ಯ ವ್ರತದ ಪ್ರತಿಜ್ಞೆ ಯನ್ನು ಮಾಡಿದಾಗ ದೇವತೆಗಳೂ ಪುಷ್ಪ ವೃಷ್ಟಿಯನ್ನು ಸುರಿಸಿ ಸ್ವಾಗತಿಸಿದ್ದಾರೆ. ಜ್ಞಾನ ಭಕ್ತಿಗಳಿಂದಲೇ  ಭೀಷ್ಮಾಚಾರ್ಯರು ಸದ್ಗತಿಯನ್ನು ಹೊಂದಿದವರು.
ಗೃಹಸ್ಥಾಶ್ರಮಿಯು ಸಂತಾನವನ್ನು ಪಡೆಯುವುದು ಮೂಲ ಉದ್ದೇಶ ಮತ್ತು ಕರ್ತವ್ಯವಾಗಿದೆ. ಆದರೆ ಪಡೆಯದಿದ್ದರೂ ಅನರ್ಥ ಸಂಭವಿಸಲಾರದು. " ಅಪುತ್ರಸ್ಯ ಗತಿರ್ನಾಸ್ತಿ " ಯೆಂಬ ಶಾಸ್ತ್ರ ವಾಕ್ಯವು ಪ್ರಾಶಸ್ತ್ಯ ಬೋಧಕವಾಗಿದೆ. ಮಕ್ಕಳನ್ನು ಪಡೆಯದಿದ್ದರೆ ಸದ್ಗತಿಯೇ ಇಲ್ಲವೆಂದು ಈ ವಾಕ್ಯದ ಅಭಿಪ್ರಾಯವಲ್ಲ.
ಸರ್ವೇಷಾಂ ಪುತ್ರ ಹೀನಾನಾಂ ಮಿತ್ರಃ ಪಿಂಡ ಪ್ರದಾಪಯೇತ್ । ಕ್ರಿಯಾಲೋಪೋ ನ ಕರ್ತವ್ಯಃ ಸರ್ವಭಾವೇ ಪುರೋಹಿತಃ ।।
ಸ್ನೇಹಿತನೂ ಪಿಂಡಾಧಿಕಾರಿಯಾಗುವನು. ಶಿಷ್ಯರು ಗುರುಗಳಿಗೆ ಅಂತ್ಯಕ್ರಿಯೆ, ಶ್ರಾದ್ಧಾದಿಗಳನ್ನು ಮಾಡಬಹುದು. ಯಾರೂ ಇಲ್ಲದಿದ್ದಾಗ ಪುರೋಹಿತರು ಅಧಿಕಾರಿಗಳಾಗಲು ಅವಕಾಶವಿದೆ. ಉಪಕೃತರು ಉಪಕಾರ ಮಾಡಿದವರ ಶ್ರಾದ್ಧಾದಿಗಳನ್ನೂ ಮಾಡಬಹುದು 
ಅನಾಥ ಪ್ರೇತ ಸಂಸ್ಕಾರಾತ್ ಕೋಟಿ ಯಜ್ಞ ಫಲಂಲಭೇತ್ ।।
ಅನಾಥವಾದ ಪ್ರೇತ ಸಂಸ್ಕಾರದಿಂದ ಕೋಟಿ ಯಜ್ಞದ ಫಲವು ಪ್ರಾಪ್ತವಾಗುವುದು.
" ಅಪುತ್ರಸ್ಯ ಗತಿನಾ೯ಸ್ತಿ "
ಈ ಮಾತು ಅಕ್ಷರಶಃ ಸತ್ಯ. 
ಅಪುತ್ರಸ್ಯ ಗತಿನಾ೯ಸ್ತಿ ಈ ವಾಕ್ಯೋಕ್ತಿಯಲ್ಲಿ ಅಪುತ್ರಸ್ಯ ಎಂಬ ಶಬ್ದದ ಗ್ರಹಿಕೆ  ಪುತ್ರ ಸಂತಾನ ಇಲ್ಲದವರು ಎಂದು ಭಾವಿಸಿದರೆ ಗ್ರಹಿಕೆ ಕುಬ್ಜವಾಗಿ ಮೌಡ್ಯದ ನೆಲೆಗಟ್ಟಿನಲ್ಲಿ ನಿಂತು ಶಬ್ದದ ಅಪಾಥ೯ಕ್ಕೆ ಎಡೆ ಮಾಡಿಕೊಡುತ್ತದೆ. ಆದ್ದರಿಂದ  ಈ ಶಬ್ದವನ್ನು ಪುತ್ರ ಸಂತಾನ ಇಲ್ಲದವ ಎಂದು ಗ್ರಹಿಸದೇ ಸಂತಾನ ಭಾಗ್ಯ ಇಲ್ಲದವ ಎಂದು ಗ್ರಹಿಸುವುದು ಸೂಕ್ತ . ಆಗ ಗ್ರಾಹಿಯ ಅರಿವು ಎತ್ತರ ಮತ್ತು ವಿಶಾಲ ಎನಿಸುತ್ತದೆ. ಅಂತೆಯೇ " ಗತಿನಾ೯ಸ್ತಿ " ಶಬ್ದವನ್ನು ನಾವು  ಸದ್ಗತಿ ಇಲ್ಲ  ಎಂದು ಏಕಾಏಕಿ ಗ್ರಹಿಸಿದರೆ ಅದೂ ಸಹ ತಪ್ಪು ಗ್ರಹಿಕೆಯೇ ಆಗುತ್ತದೆ. 
ಏಕೆಂದರೆ  ಗತಿಯು ಸದ್ಗತಿಗೆ ಬದಲಾಗಿ ಅಧೋಗತಿಯೋ, ಇಲ್ಲವೆ ದುಗ೯ತಿಯೋ ಆಗಿರಲು ಸಾಕು. ಭರತ, ಭಗೀರಥ, ಭೀಷ್ಮರಂಥ, ಸೀತಾ, ಶಕುಂತಲಾ, ಈಗಿನ ಸುಧಾಮೂತಿ೯ ಯವರಂಥಹ ಸಂತಾನಗಳು ಸದ್ಗತಿಗೆ ಕಾರಣವಾದರೆ ಇತರೆ ದಂಡಪಿಂಡಗಳು ಅಧೋಗತಿಗೋ ಇಲ್ಲವೇ ದುಗ೯ತಿಗೋ ಕಾರಣರಾಗಿರಬಹುದು. 
ಹಾಗೆ ನೋಡಿದರೆ ಈ ಸದ್ಗತಿ, ಅಧೋಗತಿ, ಇಲ್ಲವೆ ದುಗ೯ತಿಗೆ ಯಾವುದೇ ಕಾರಣಕ್ಕೂ ಸಂತಾನಗಳು ( ಮಕ್ಕಳು) ಕಾರಣರಲ್ಲ. 
ಕಾಮನೆಯಿಂದ ಸಂಸಾರ, ಮೋಹದಿಂದ  ಹೆಂಡತಿ, ಮಮಕಾರದಿಂದ ಮಕ್ಕಳು, ಮಕ್ಕಳ ಮೇಲಿನ ವ್ಯಾಮೋಹದಿಂದ ಮಾಡಬಾರದ ಅನಾಚಾರ, ಯಾವ ಗತಿ ಕಾಣಿಸಬಲ್ಲದು ಎಂಬುದಕ್ಕೆ ಮಹಾಭಾರವೇ ಸಾಕ್ಷಿ. ಯಾರ ಸದ್ಗತಿಗೆ ಯಾರೂ ಕಾರಣರಲ್ಲ, ಪ್ರತಿಜೀವಿಯ ಗತಿಯೂ ಆ ಜೀವಿಯ ವಯುಕ್ತಿಕ ಕಮಾ೯ನುಷ್ಠಾನವನ್ನು ಅವಲಂಬಿಸಿದೆ. ಸದ್ಗತಿಯು ಕೊಡಲು ಕೊಳ್ಳಲು ಲೌಕಿಕ ವಸ್ತು ವಿಚಾರವಲ್ಲ. 
ಉತ್ತಮ ಸಂತಾನಗಳು ಲೌಕಿಕ ಗತಿಯನ್ನು ಮಾತ್ರ ನಿದೇ೯ಸಿಸುವವು. ಹಾಗೇ  ಅಂತಹ ಉತ್ತಮ ಸಂತಾನಗಳು ಲೌಕಿಕ ಸದ್ಗತಿ ದೊರಕಿಸಬಲ್ಲವು. ಇಲ್ಲಿ ಸಲ್ಲದವ ಅಲ್ಲಿಯೂ ಸಲ್ಲದವನು  ಎಂಬ ಭೀತಿಯಿಂದ ಪಾರುಮಾಡಿ ತನ್ನ ಪುತ್ರರು ತಾನು ಮಾಡುವ ಉತ್ತಮ ಕೆಲಸ ಕಾಯ೯ಗಳನ್ನು ಮುಂದುವರಿಸಿಕೊಂಡು ಹೋಗುವುದನ್ನು ಕಂಡಾಗ ಆ ವ್ಯಕ್ತಿಯು ತಾನು ಪಡೆದ ಸಂತಾನ ಭಾಗ್ಯದ ಧನ್ಯತಾಬಾವ ಅವನಿಗೆ ಲೌಕಿಕ ನೆಮ್ಮದಿ ಮತ್ತು ನಿರಾಳತೆಯನ್ನು ಹಾಗೆ ಅಂತರಂಗದಲ್ಲಿ ಸಂತಾನದ ಬಗೆಗಿನ ಹೆಮ್ಮೆ ತನ್ನ ಜೀವನ ಸಂತೃಪ್ತಿ ಮತ್ತು ಧನ್ಯ ಎನ್ನವ ನಿಧಾ೯ರವನ್ನು ತರುತ್ತದೆ. 
" ಮಳೆ ಬಾರದಿದ್ದರೆ ಕೇಡು. ಮಕ್ಕಳಾಗದಿದ್ದರೆ ಕುಲಗೇಡು. ಮಕ್ಕಳಾದರೆ ಮತಿಗೇಡು. ಮರ ಗಿಡ ಬೆಳಸದಿದ್ದರೆ ಗತಿಗೇಡು "  ಎಂಬ ಉಕ್ತಗಳಿವೆ. 
ಬದಲಾವಣೆ ಜಗದ ನಿಯಮ ಎಂದು ನಾವು ಒಪ್ಪುವುದಾದರೆ ಅಪುತ್ರಸ್ಯ ಗತಿನಾ೯ಸ್ತಿ ಎಂಬ ಮಾತನ್ನು ಬದಲಾವಣೆಗೆ ಒಳಪಡಿಸಬೇಕು, ಸಂಸ್ಕಾರದ ವಿದ್ಯೆಯನ್ನು ಕಲಿಸಲಾರದ ತಂದೆಗೆ ಎಷ್ಟು ಪುತ್ರರಿದ್ದರೂ  ಸದ್ಗತಿ ದೊರೆಯಲಾರದು ನೂರು ಪುತ್ರರನ್ನು ಪಡೆದ ಧೃತರಾಷ್ಟ್ರನಿಗೆ ಕೊನೆಯಲ್ಲಿ ತಿಲೋದಕ ಬಿಡಲು ಒಬ್ಬ ಮಗನೂ ಬದುಕಲಿಲ್ಲ ಸಂಸ್ಕಾರಹೀನ ಪುತ್ರರು ಎಷ್ಟಿದ್ದರೂ ಸದ್ಗತಿ ದೊರೆಯಲಾರದು ಸಂಸ್ಕಾರವಂತೆ ಒಬ್ಬ ಪುತ್ರಿ ಎರಡು ಮನೆಗಳನ್ನು ಬೆಳಗಬಲ್ಲಳು ಅದೇ ಸಂಸ್ಕಾರರಹಿತ ಪುತ್ರಿಯಿಂದ ಎರಡು ಮನೆಯವರಿಗೂ ದುರ್ಗತಿಯೆ ಪ್ರಾಪ್ತವಾಗುವುದು ಇಲ್ಲಿ ಗಂಡು ಹೆಣ್ಣು ಎನ್ನುವ ಪ್ರಶ್ನೆಯಲ್ಲ ತಂದೆ ತಾಯಿಯರು ಮಕ್ಕಳಿಗೆ ಕಲಿಸುವ ಸಂಸ್ಕಾರದ ಆಧಾರದ ಮೇಲೆ ಸದ್ಗತಿ ಅಥವಾ ದುರ್ಗತಿ ಪ್ರಾಪ್ತವಾಗುತ್ತದೆ.
"ಅಪುತ್ರಸ್ಯ ಗತಿರ್ನಾಸ್ತಿ" ಎಂಬುದು ವೇದ ಕಾಲದ ಉಕ್ತಿ..ಇದನ್ನು ಬಲ್ಲವರು ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಆದರೆ ಇದರ ಹಿಂದೆ ಇರಬಹುದಾದ ಸಾಮಾಜಿಕ ಕಳಕಳಿ ಮತ್ತು ವಾಸ್ತವದ ದೃಷ್ಟಿಕೊನವನ್ನು ಅರ್ಥ ಮಾಡಿಕೊಂಡರೆ ಯಾವುದೇ ಗೊಂದಲಕ್ಕೆ ಅವಕಾಶ ಇರಲಾರದು.‌ ಈ ಉಕ್ತಿಯ ಸಾಮಾನ್ಯ ಅರ್ಥವೆಂದರೆ ಮಕ್ಕಳಿಲ್ಲದವರಿಗೆ ಗತಿಯಿಲ್ಲ ಎಂಬುದಾಗಿದೆ. ಪುತ್ರರು ಎಂದರೆ ಕೇವಲ ಅಧಿಕಾರಕ್ಕಾಗಿ ಇರುವಂಥವರಲ್ಲ. ಬದಲಿಗೆ ಪುತ್ರರಾಗಿ ಪಾಲಕರ ಬಗ್ಗೆ ತಮ್ಮ ಪಾಲಿನ ಕರ್ತವ್ಯಗಳನ್ನು ನಿಭಾಯಿಸುವವರು ಎಂದರ್ಥ, ಹಾಗಾಗಿ ಇಲ್ಲಿ ಕುಪುತ್ರರಿಗೆ ಯಾವುದೇ ಸ್ಥಾನವಿಲ್ಲ. ಇನ್ನು ಗ್ರಹಸ್ಥರಾದವರು, ತಮ್ಮ ಜೀವನದಲ್ಲಿ ಒಂದು ಬಾರಿಯಾದರೂ ತಂದೆ-ತಾಯಿಯ ಪಟ್ಟ ಅಲಂಕರಿಸಬೇಕು ಎಂದು ಹಂಬಲಿಸುವದು ಸಾಮಾನ್ಯ. ಇದಕ್ಕಾಗಿ ಪೂಜೆ, ಹೋಮ, ಹವನ, ಯಜ್ಞ ಮುಂತಾದವುಗಳನ್ನು ಮಾಡಿದ ಉದಾಹರಣೆಗಳು ಕಾಣಸಿಗುತ್ತವೆ. ಇಲ್ಲಿ ಸದ್ಗತಿ ಎಂಬುದಾಗಿ ಹೇಳಿಯೇ ಇಲ್ಲ  ಕೇವಲ ಗತಿರ್ನಾಸ್ತಿ ಅಂದರೆ ಗತಿಯಿಲ್ಲ ಎಂದು ಮಾತ್ರ ಹೇಳಿದ್ದಾರೆ. ಸದ್ಗತಿ ಎಂದರೆ ಮೋಕ್ಷ, ಸ್ವರ್ಗ ಎಂದು ಅರ್ಥ. ಹಾಗಾದರೆ "ಗತಿ" ಇದಕ್ಕೆ ವಿವಿಧ ಅರ್ಥಗಳಿವೆ. ಒಂದು ಅರ್ಥದಲ್ಲಿ ಗತಿ ಎಂದರೆ ಚಲನೆ, ವೇಗ ಅಥವಾ ರಭಸ  ಉದಾಹರಣೆ : ವಾಹನದ ಗತಿ‌. ನಮಗೆ ಯಾರು ಗತಿ ? ಮಕ್ಕಳ ಆಟ-ಪಾಟ ನೋಡುವದೇ ಕಣ್ಣಿಗೆ ಒಂದು ಹಬ್ಬ.  ಅದರ ಸುಖ, ಸಂತಸಗಳನ್ನು ಸವಿದವನಿಗೆ ಬಾಳಿನಲ್ಲಿ ನಿರಂತರ ಗತಿ ಅಂದರೆ ಚಲನೆ ಇರುತ್ತದೆ. ಬದುಕು ನಿಂತ ನೀರಾಗಲಾರದು.
"ಗತಿ" ಶಬ್ದದ ಇನ್ನೊಂದು ಅರ್ಥ ಸ್ಥಿತಿ, ದಿಕ್ಕು, ಗಮ್ಯ. ಮಕ್ಕಳು, ಹಿರಿಯರಿಗೆ ಊರುಗೊಲಿದ್ದಂತೆ. ಮಕ್ಕಳಿಲ್ಲದವರಿಗೆ ಯಾರು ದಿಕ್ಕು? ಯಾರು ಗತಿ? ಎಂಬ ಪ್ರಶ್ನೆಗಳು ಸಾಮಾನ್ಯ. ಈ ಅರ್ಥದಲ್ಲಿ ವೃದ್ಧಾಪ್ಯದಲ್ಲಿ ನೆರವಿಗೆ ಮಕ್ಕಳಿರಬೇಕು. ಅದಕ್ಕಾಗಿಯೇ ಅಪುತ್ರಸ್ಯ ಗತಿರ್ನಾಸ್ತಿ ಎಂದಿರಬಹುದು.
ಇನ್ನು ಪುತ್ರ, ಪುತ್ರಿಯರ ಬಗ್ಗೆ. ಕೆಲವರು ಪುತ್ರ ಎಂದರೆ ಗಂಡು ಸಂತಾನ ಮಾತ್ರ ಎಂದು ತಿಳಿದಿರುವದು ಸರಿಯಲ್ಲ . "ಪುತ್ರ" ಈ ಶಬ್ದವನ್ನು  ಸಾಮಾನ್ಯ ಲಿಂಗವಾಗಿ ಮಕ್ಕಳು ಎಂಬ ವಿಶಾಲ ಅರ್ಥದಲ್ಲಿ ತೆಗೆದುಕೊಳ್ಳುವದು ಒಳ್ಳೆಯದು. ಹಿಂದಿನ ಕಾಲದಲ್ಲಿ ಪುರುಷ ಪ್ರಧಾನ  ವ್ಯವಸ್ಥೆಯಲ್ಲಿ ಗಂಡು ಈ ಅರ್ಥ ಬಳಕೆಗೆ ಬಂದಿರಲೂ ಸಾಕು‌. ನಮ್ಮ ಉಪನಿಷತ್ ಗಳ ಪ್ರಮಾಣ ಪುರುಷ ಈ ಶಬ್ದಕ್ಕೆ ಲಿಂಗ  ಪ್ರಭೇದವೇ ಇಲ್ಲ ಅದಕ್ಕಾಗಿ " ಉದ್ಯೋಗಂ ಪುರುಷ ಲಕ್ಷಣಂ" ಎಂದು ಹೇಳಿದ್ದು. ಗಂಡೇ ಆಗಿರಲಿ, ಹೆಣ್ಣೇ ಆಗಿರಲಿ ಪ್ರತಿ ಒಬ್ಬರೂ ತಮ್ಮ ತಮ್ಮ ಕರ್ತವ್ಯವನ್ನು ಮಾಡುವುದು ಅವಶ್ಯಕ ಎಂದೇ ಸೂಚ್ಯ ವಾಗಿದೆ.   
ಇನ್ನು ಸ್ವಂತ ಮಕ್ಕಳು ಇಲ್ಲದವರು ದತ್ತು ಪಡೆಯುವ ಉಪಾಯ ಇದ್ದೇಯಿದೆ. ಒಟ್ಟಿನಲ್ಲಿ ಮನೆಯಲ್ಲಿ ಮಕ್ಕಳಿದ್ದರೆ ಬದುಕಿಗೆ ಒಂದು ಗತಿ, ಚಲನೆ, ಉತ್ಸಾಹ, ತುಂಬಿರುತ್ತದೆ ಎಂದು ಅರ್ಥ ಮಾಡಿಕೊಳ್ಳಬಹುದು. ಇನ್ನು "ಜಗತ್ತೇ ನನ್ನ ಮನೆ" ಎಂಬ ವಿಶ್ವ ಕುಟುಂಬಿಗಳಿಗೆ ಜಗತ್ತೇ ಆಸರೆ, ಗತಿ ಎಲ್ಲವೂ..
ಅಪುತ್ರಸ್ಯ ಗತಿರ್ನಾಸ್ತೀ - 
ಇದು ಯಾವ ಕಾಲದಲ್ಲಿ ಪ್ರಚಲಿತಕ್ಕೆ ಬಂತೋ ಆ ಕಾಲದಲ್ಲಿ,ಎಲ್ಲಾ ವಿಪ್ರರೂ ಬ್ರಹ್ಮಜ್ಞಾನದಿಂದ,ಎಲ್ಲಾ ಕ್ಷತ್ರಿಯರೂ,ಧರ್ಮ ರಕ್ಷಣೆಯ ಕಾರ್ಯದಿಂದ, ಎಲ್ಲಾ ವೈಶ್ಯರೂ, ಸಾವಯವ ಕೃಷಿ ಮತ್ತು ಪಶು ಸಂಗೋಪನೆಯಿಂದ, ಉದ್ಯೋಗ. ವ್ಯವಸಾಯ ಗಳಿಂದ,ಎಲ್ಲಾ ಶೂದ್ರರೂ ತಮ್ಮ ತಮ್ಮ ಸೇವಾ ಕಾರ್ಯಗಳಿಂದ, ಮೇಲಿನೆಲ್ಲಾ ವೃತ್ತಿ ಪ್ರವೃತ್ತಿಗಳಿಗೆ ಆಧಾರವೇ ತಾವಾಗಿದ್ದರು.
ಆ ಕಾಲದಲ್ಲಿ ಪ್ರಚಲಿತಕ್ಕೆ ಬಂದ ಮಾತು ಇದು ಇರಬಹುದು . ತನ್ನ ಮುಂದಿನ ಸಂತಾನಕ್ಕೆ, ಅದರಲ್ಲೂ ತನ್ನ ಮನೆತನದ ಕುಲಕಸುಬನ್ನು ಮುಂದುವರೆಸಿ,ಸಕಲ ಸಮಾಜಕ್ಕೂ ಉಪಯೋಗಿಯಾಗಬೇಕು ಎಂದು ತನ್ನ ಸಂಜಾತನು ತನ್ನ ಕಸಬನ್ನು ಕಲಿತು, ಸಮಾಜವನ್ನು ಸಮೃದ್ಧವಾಗಿಡಬೇಕೆಂದು, ಇಲ್ಲದೇ ಇದ್ದರೆ, ಸಮಾಜಕ್ಕೆ ಗತಿಯ ಸಾತತ್ಯಕ್ಕೆ ಕುಂದು ಉಂಟಾಗುವುದೆಂದು, ಅಪುತ್ರನಿಂದ ಸಮಾಜವು ಗತಿಯಿಂದ ಪತಿತ ವಾಗೀತೆಂದು ಭಾವಿಸುತ್ತಿದ್ದ ದಿನಗಳವು.
ಅಪುತ್ರಸ್ಯ ಗತಿರ್ನಾಸ್ತಿ ಇಲ್ಲಿ ಪುತ್ರ ಎನ್ನುವ ಶಬ್ದಕ್ಕೆ ಗಂಡು ಮಗ ಅಂತ ಅರ್ಥವಲ್ಲ ಮಗು ಮಾತ್ರ ಎನ್ನುವ ಅರ್ಥ. ಉದಾಹರಣೆಗೆ ದಶರಥ ಪುತ್ರಕಾಮೇಷ್ಟಿ ಯಾಗ ಮಾಡುತ್ತಾನೆ ಅಲ್ಲಿ ಅವನ ಕಾಮನೆ ಗಂಡು ಮಗು ಅನ್ನುವುದಲ್ಲ ಮಗು ಎನ್ನುವ ಕಾಮನೆ ಅಷ್ಟೆ.
ಸಾಮಾನ್ಯವಾಗಿ ಹೇಳುವಾಗ  ಪುಲ್ಲಿಂಗವನ್ನೇ ಸಂಸ್ಕೃತದಲ್ಲಿ ಬಳಸುವುದು.ಕೆಲವು ಪ್ರದೇಶಗಳಲ್ಲಿ ಹುಡುಗರು ಅನ್ನುವ ಶಬ್ದಕ್ಕೆ ಮಕ್ಕಳು ಅನ್ನುವ ಅರ್ಥವಿಲ್ಲವೇ ಹಾಗೆಯೇ..  ಪ್ರತಿ ಪದದ ಅರ್ಥ (ಶಬ್ದಾರ್ಥದ) ಅನುವಾದವನ್ನು ಅನುಸರಿಸಿದರೆ ಹೀಗೆ ಬರುವುದಾದರೂ, ಶ್ಲೋಕದ ಭಾವ ಅದಲ್ಲ ಎನಿಸುತ್ತದೆ.  ಸಮಾಜಕ್ಕೆ ನಿಮ್ಮ ಜೀವನಕಾಲದ ಕೊಡುಗೆ ಏನು ? 
ಆ ಕೊಡುಗೆಯನ್ನು  ಮುಂದುವರೆಸಿಕೊಂಡು ಹೋಗಲು ನೀವು ಏನು ಏರ್ಪಾಡು ಮಾಡಿದ್ದೀರಿ ಎಂಬ ಪ್ರಶ್ನೆ ಬಂದಾಗ, ಅದನ್ನು ಮುಂದುವರೆಸಿ-ಕೊಂಡು ಹೋಗಲು ಒಂದು ಪುತ್ರನು (ಸಂತತಿ) ಇರಬೇಕು ಎಂಬ ಭಾವದಲ್ಲಿ ಬರೆದಿರಬೇಕು ಎಂಬುದು ಒಂದು  ಅಭಿಮತ.  ಹಾಗಿಲ್ಲದಿದ್ದಲ್ಲಿ, ಜನ್ಮಪೂರ್ತಿ ಅಧರ್ಮವನ್ನೇ ಅನುಸರಿಸಿದ್ದರೂ ಅವರಿಗೆ ಒಂದು ಪುತ್ರನಿದ್ದರೆ ಅವರಿಗೆ ಸ್ವರ್ಗ ಅಥವಾ ಮೋಕ್ಷವೇ ಸಿಗಬೇಕಾಗಿತ್ತು.  ಪಾಪ/ಪುಣ್ಯ, ಧರ್ಮ/ಅಧರ್ಮ, ಸರಿ/ತಪ್ಪು, ಒಳ್ಳೆಯದು/ಕೆಟ್ಟದ್ದು ಎಂದು ನಡವಳಿಕೆಯನ್ನು ನಿರ್ದೇಶಿಸುವ ಅವಶ್ಯಕತೆಯೇ ಇರಲಿಲ್ಲ.  ಕರ್ಮ/ಕರ್ಮಫಲ ಎನ್ನುವ ಮಾತುಗಳೇ ಅರ್ಥಹೀನವಾಗಿ ಬಿಡುತ್ತವೆ.  ಇಷ್ಟೇ ಅಲ್ಲದೇ, ಶಿಷ್ಯನೂ ಕೂಡ ಪುತ್ರನಂತೆ ಎನ್ನುವ ಮತ್ತೊಂದು ಅಭಿಪ್ರಾಯಕ್ಕೆ ಹೋಲಿಸಿ ನೋಡಿದರೆ, ನೀವು ಮಾಡಿದ ಸತ್ಕರ್ಮಗಳ ಫಲ ನಿಮ್ಮ ತದನಂತರವೂ ಸಮಾಜಕ್ಕೆ ಸಿಗಬೇಕೆಂದು ನೀವು ಬಯಸುವಿರಾದರೆ, ನಿಮಗೆ ಒಬ್ಬ ಪುತ್ರನು ಇರಬೇಕು ಎಂದು ಈ ಶ್ಲೋಕದ ಅರ್ಥ ಇರಲೂಬಹುದು, ಪಿತೃ ಋಣ ತೀರಿಸಬೇಕಾದರೆ ಮಗ/ಮಗಳನ್ನು ಹೊಂದಿರಬೇಕು.
ಅಂತ್ಯಸಂಸ್ಕಾರ ಸಂದರ್ಭದಲ್ಲಿ ಯಾರಾದರೂ ಒಬ್ಬರು ಬೇಕಾಗುತ್ತದೆ. ಮಕ್ಕಳು ಇಲ್ಲದಿದ್ದರೆ ಅವನ ಕುಟುಂಬದ ಬೆಳವಣಿಗೆ ಅಲ್ಲಿಗೇ ನಿಲ್ಲುತ್ತದೆ.ಇಲ್ಲಿ ಸಾಮಾಜಿಕ ಬಿಕ್ಕಟ್ಟೇ ಹೊರತು, ಆಧ್ಯಾತ್ಮಿಕವಾಗಿ ಗತಿ ಎಂದರೆ ಸದ್ಗತಿ ಇಲ್ಲ ಅಂತ ಅಲ್ಲ. ಸದ್ಗತಿ ಅಥವಾ ಮುಕ್ತಿ ವ್ಯಕ್ತಿಗತ ಸಾಧನೆ, ಬೇರೆಯವರ ಸಹಯೋಗ ಇರುವುದಿಲ್ಲ.  ಸದ್ಗತಿಗಾಗಿ ಹೆಂಡತಿ, ಮಕ್ಕಳನ್ನು ಬಿಟ್ಟು ಹೋಗುವುದಿಲ್ಲವೆ ? ಅಂತ್ಯ ಸಂಸ್ಕಾರವನ್ನು ಮನೆತನದವರು ಯಾರಾದರೂ ರಕ್ತಸಂಬಂಧಿಗಳು ಮಾಡಬಹುದು.
ಅಪುತ್ರಸ್ಯ ಗತಿರ್ನಾಸ್ತಿ ಎಂದರೆ ಪುತ್ರರಿಲ್ಲದವರಿಗೆ ಸದ್ಗತಿಯಿಲ್ಲ. ಪಿತೃ-ಮಾತೃ ಸಂಬಂಧದ ಫಲವೇ ಪುತ್ರ. ಪುತ್ರ ಅಂದರೆ  ಗಂಡು ಅಂತ ತಪ್ಪಾಗಿ ಅರ್ಥೈಸಲಾಗಿದೆ. ಪುತ್ರಕಾಮೇಷ್ಠಿಯಾಗ-ಸಂತಾನ ಗೋಪಾಲಕೃಷ್ಣನ ಆರಾಧನೆಯಲ್ಲಾ ಹೇಳುವುದು ಗಂಡು ಬೇಕು ಎಂಬರ್ಥವನ್ನು ಅವಲಂಭಿಸಿ ಇಲ್ಲ..ಸಂತಾನವನ್ನು ಪಡೆಯುಡುವ ಉದ್ದೇಶವಾಗಿದೆ. ಧರ್ಮ ಅರ್ಥವೆಲ್ಲಾ ಪ್ರಾಪ್ತಿಯಾದರೂ ಕಾಮಪೂರ್ಣವಾಗದೇ ಮೋಕ್ಷವಿಲ್ಲ ಅಂತ.. ಮಕ್ಕಳಾದಾಗ ಅವರಾಡುವ ಆಟಗಳನ್ನು ಕಂಡಾಗ ಸಂತೋಷವಾಗುತ್ತದೆ.ಅವರು ಬೆಳೆದು ಜವಾಬ್ದಾರಿ ಯುತರಾದಾಗ ಸುಖ-ನೆಮ್ಮದಿಯು ಪ್ರಾಪ್ತಿಯಾಗಿ ಕಾಮನಾಪೂರ್ಣವಾಗುತ್ತದೆ. ಆಗಲೇ ಸರಿಯಾದ ಗತಿಯು ಎಂಬರ್ಥವನ್ನೇ ಕೊಡುತ್ತದೆ. ಪುತ್ರಕಾಮೇಷ್ಠಿ ಎಂಬುದರಿಂದ ಹೆಣ್ಣು ಸಂತತಿ ಪ್ರಾಪ್ತವಾದ ಕಥೆ  ಚರಿತ್ರೆಗಳಲ್ಲಿ ಇವೆ..ಮಾನವ ಜನ್ಮ ದೊಡ್ಡದು ಇದನ್ನು ಹಾಳು ಮಾಡಿಕೊಳ್ಳದೆ ಜನ್ಮ ಸಾರ್ಥಕ ಮಾಡಿಕೊಳ್ಳುವುದು ಮಾನವ ಜನ್ಮದ ಪರಮಾರ್ಥ. ಎಂದರೆ ಸಂಸಾರ ಸಾಗರ ದಾಟಲು ಪ್ರಯತ್ನಿಸಬೇಕು. ಇದಕ್ಕಾಗಿ ನಿತ್ಯಾನಿತ್ಯ ವಸ್ತು ವಿವೇಕ ಜ್ಞಾನ ಪಡೆಯುವುದು ಮುಖ್ಯ. ಇದಕ್ಕೆ ಪೂರ್ವ ಜನ್ಮದ ಸುಕೃತ ದೊಂದಿಗೆ ಗುರುಕೃಪೆ ದೊರೆತು ಜ್ಞಾನ ಪ್ರಾಪ್ತಿಯಾದರೆ ಜೀವಾತ್ಮ ಪರಮಾತ್ಮರ ಬಗ್ಗೆ ಅರಿವು ಉಂಟಾಗಿ ಜ್ಞಾನ ಪುತ್ರನ ಜನನವಾಗಿ ಇಹ ಪರಗಳ ಅರಿವಾಗಿ ಮಾನವ ಜನ್ಮದ ಸಾರ್ಥಕತೆಯ ಬಗ್ಗೆ ತಿಳುವಳಿಕೆ ಬರುತ್ತದೆ ಎಂದು ವೇದಾಂತ ಸಾರುತ್ತದೆ. ಜ್ಞಾನ ಪುತ್ರನ ಜನನವಾಗುವುದು ಮುಖ್ಯ. ಇಲ್ಲವಾದಲ್ಲಿ ಜೀವನ ಪರಿಭ್ರಮಣ ತಪ್ಪುವುದಿಲ್ಲ ಎಂದು ಇದರ ಅಂತರಾರ್ಥವನ್ನು ಗ್ರಹಿಸಬೇಕಿರುತ್ತದೆ. ಇಲ್ಲವಾದಲ್ಲಿ ಭಗವಂತನ ಸ್ಮರಣೆ ಮಾಡಿ ಇದೇ ಮುಖ್ಯ ಸಂಸಾರ ನಿಸ್ಸಾರ ಎಂದು ತಿಳಿದು ನಡೆಯಬೇಕು ಎಂದು ಶಾಸ್ತ್ರಗಳು ಏಕೆ ಸಾರುತ್ತವೆ?  

ಅಪುತ್ರಸ್ಯ ಗತಿರ್ನಾಸ್ತಿ'  ಪುತ್ರನಿಲ್ಲದಿದ್ದರೆ ಸದ್ಗತಿಯಿಲ್ಲ ಎಂಬುದು ಈ ಮಾತಿನ ಅರ್ಥ. ಆದರೆ 'ಅಪುತ್ರಸ್ಯ ಗತಿರ್ನಾಸ್ತಿ' ಎಂಬ ಮಾತು ಸರ್ವಕಾಲಕ್ಕೂ ಸಮ್ಮತವಲ್ಲ. ಇತ್ತೀಚಿನ ದಿನಗಳಲ್ಲಿ ಹೆಣ್ಣು, ಗಂಡು ಎನ್ನುವ ಭೇದ ಭಾವವಿಲ್ಲ. ಯಾವ ಮಗುವಾದರೇನು ಅದು ಆರೋಗ್ಯವಂತವಾಗಿರಬೇಕು, ವಿವೇಕವಂತ ವಾಗಿರಬೇಕು. ಹಾಗಿದ್ದರೆ ಮಾತ್ರ ಸಂಸಾರದಲ್ಲೂ ಸುಖ ಮನೆಯಲ್ಲೂ ನೆಮ್ಮದಿ. ಈ ಚಿಂತನೆಯಲ್ಲಿ ಇನ್ನೂ ಅನೇಕ ವಿಚಾರಗಳಿಗೆ ಎಡೆಯಿದ್ದು, ತಿಳಿದವರು ಯೋಚಿಸಬಹುದು.
ಧನ್ಯವಾದಗಳು   

No comments:

Post a Comment