Thursday, February 22, 2024

FOLK SONGS ಜನಪದ ಹಾಡುಗಳು

FOLK SONGS 
ಜನಪದ ಹಾಡುಗಳು 

ಗ್ರಂಥಸ್ಥ ಅಕ್ಷರದ ಅರಿವು ಆರಂಭವಾಗುವ ಅವಕಾಶಕ್ಕೂ ಮುನ್ನ ಹುಟ್ಟಿಕೊಂಡ ಈ ಜನಪದ ಸಾಹಿತ್ಯ ಇತರರನ್ನು ಮೆಚ್ಚಿಸಲಿಕ್ಕಾಗಿ ಹುಟ್ಟಿದ್ದಲ್ಲ. ಜನಪದರು ತಾವು ಅನುಭವಿಸಿದ ನೋವು-ನಲಿವು, ದುಃಖ-ದುಮ್ಮಾನ, ಆಶೆ-ನಿರಾಶೆಗಳನ್ನು ಹೃದಯದಿಂದ ಹಾಡಿದರು, ಹೇಳಿದರು. ಅದು ಕಿವಿಯಿಂದ ಕಿವಿಗೆ ಹಾಡಾಗಿ, ಗೀತೆ, ಕಥೆ, ನೀತಿ, ಲಾವಣಿ, ಒಗಟು, ನಾಟಕ, ಚಿತ್ರ, ಶಿಲ್ಪ, ನಂಬಿಕೆ, ಆಚಾರ-ವಿಚಾರ ಸಂಪ್ರದಾಯ ಈ ರೀತಿ ವ್ಯಾಪಕವಾಗಿದೆ. ಇವರಲ್ಲಿ ಗ್ರಾಮೀಣ ಜನರ ಬದುಕು, ಜೀವನ, ಸಂಸ್ಕೃತಿ, ನಿಸರ್ಗ ಇವೆಲ್ಲ ಒಳಗೊಂಡಿರುತ್ತದೆ.


ಜನಪದ ಸಾಹಿತ್ಯದಲ್ಲಿ ಮಹಿಳೆಗೆ ಪ್ರಮುಖ ಸ್ಥಾನ. ಮಹಿಳೆ ಪತಿವ್ರತೆ, ಗರತಿ, ಉದಾರಿ, ತ್ಯಾಗಿಯ ಸ್ಥಾನದಲ್ಲಿ ಚಿತ್ರಿತಳಾಗಿದ್ದಾಳೆ. ಇವೆಲ್ಲವನ್ನು ಮಹಿಳೆ ತಾಯಿಯಾಗಿ, ಪತ್ನಿಯಾಗಿ, ಸಹೋದರಿಯಾಗಿ, ಮುತ್ತೈದೆಯಾಗಿ, ದೇವತೆಯಾಗಿ ಹಲವು ರೂಪಗಳ ಮುಖಾಂತರ ಅಭಿವ್ಯಕ್ತಳಾಗುತ್ತಾಳೆ. 
ಮಹಿಳೆಯ ತಾಯ್ತನ, ಮುತ್ತೈದೆತನ, ದಾಪಂತ್ಯಜೀವನ, ತವರಿನ ಹಂಬಲ, ಸಹೋದರರ ವಾತ್ಸಲ್ಯ ಇವು ಒಂದು ಮುಖವಾದರೆ, ಬಂಜೆತನ, ವೈಧವ್ಯ, ಇವುಗಳ ಮುಖವೂ ಕಾಣುತ್ತದೆ. ಇವೆಲ್ಲ ಗರತಿಯ ಹಾಡುಗಳು. ಮಹಿಳೆ ತನ್ನ ಹಲವಾರು ಕಾಯಕಗಳಲ್ಲಿ ದಣಿವು ಆರಿಸಿಕೊಳ್ಳಲು ನಿವಾರಿಸಲು ಅನೇಕ ಹಾಡುಗಳನ್ನು ಹಾಡುತ್ತಿದ್ದಳು.

"ಬೆಳಗಾಗಿ ನಾನೆದ್ದು ಯಾರ‍್ಯಾರ ನೆನೆಯಲಿ
ಎಳ್ಳು ಜೀರಿಗೆ ಬೆಳೆಯೋಳೆ 2 | ಭೂತಾಯಿ|
ಎದ್ದೊಂದು ಗಳಿಗೆ ನೆನೆದೇನು"

"ಅತ್ತೆ ಮಾವಗೆ ಶರಣು ಮತ್ತೆ ಗುರುವಿಗೂ ಶರಣು|ಮತ್ತೊಂದು ಶರಣು ದೇವನಿಗೆ 2 |  ನಾ ಬಗ್ಗಿದೆ ನನ್ನ ಕೆಲಸಕ್ಕೆ"

"ಶರಣೆಂಬೆ ರುದ್ರನಿಗೆ ಶರಣೆಂಬೆ ಗುರುವಿಗೆ
ಶರಣೆಂಬೆ ಶಿವನ ಮಡದಿಗೆ 2| ಗೌರಮ್ಮ
ಶರಣೆಂದು ಕಲ್ಲು ಹಿಡಿದೇನ "

ಕಲ್ಲಮ್ಮ ತಾಯಿ ಮೆಲ್ಲಮ್ಮ ರಾಗಿಯ
ಜಲ್ಲ ಜಲ್ಲನೆ ಉದುರಮ್ಮ  2 | ನಾನಿನಗೆ
ಬೆಲ್ಲದಾರತಿಯ ಬೆಳಗೇನು|

ಅಂದುಳ್ಳ ಅಡಿಗಲ್ಲು ಚಂದುಳ್ಳ ಮೇಗಲ್ಲು
ಚಂದ್ರಮತಿಯೆಂಬ ಹಿಡಿಗೂಟ 2 |ಹಿಡಕೊಂಡು
ತಂದೆ ತಾಯಿಗಳ ನೆನೆದೇನ|

ರಾಗಿಯು ಮುಗಿದಾವು ರಾಜಾನ್ನ ಹೆಚ್ಯಾವು
ನಾನ್ಹಿಡಿದ ಕೆಲಸ ವದಗ್ಯಾವು  2| ಕಲ್ಲೇ
ನಾ ತೂಗಿ ಬಿಡುತೀನಿ ಬಲದೋಳು|

ಕಲ್ಲು ಬಿಟ್ಟೆನೆಂದು ಸಿಟ್ಯಾಕೆ ಸರಸತಿಯೆ
ಕುಕ್ಕೇಲಿ ರಾಗಿ ಬೆಳೆಯಾಲಿ 2|ತಕ್ಕೊಂಡು
ಮತ್ತೆ ರಾತ್ರಿಗೆ ಬರುತೀನಿ|

ಕಲ್ಲು ಕೊಟ್ಟಮ್ಮಗೆ ಎಲ್ಲಾ ಭಾಗ್ಯವು ಬರಲಿ
ಪಲ್ಲಕಿ ಮ್ಯಾಲೆ ಮಗ ಬರಲಿ 2 | ಆ ಮನೆಗೆ
ಮಲ್ಲಿಗೆ ಮುಡಿಯೋ ಸೊಸಿ ಬರಲಿ|

ಹೆಣ್ಣುಮಗಳು ಮದುವೆ ಆಗಿ ಗಂಡನ ಮನೆಗೆ ಹೋಗುವ ಸಂದರ್ಭದಲ್ಲಿ ತಾಯಿ ತನ್ನ ಮಗಳಿಗೆ ಕೆಲವು ಜೀವನ ಮೌಲ್ಯಗಳನ್ನು ಉಪದೇಶಿಸುವಳು. ಎಷ್ಟೇ ಕಷ್ಟಗಳು ಕುತ್ತಿಗೆವರೆಗೂ ಬಂದರೂ ತಾಳ್ಮೆಯಿಂದ ಸಹಿಸಿ ಕೊಳ್ಳಬೇಕು ಎಂದು ಕುತ್ತಿಗೆಗೆ ತಾಳಿ ಕಟ್ಟುವರು ಎಂಬರ್ಥದಲ್ಲಿ ತಿಳುವಳಿಕೆ ಹೇಳುವಳು. ಇದರ ಜೊತೆಗೆ ಕೆಲವು ನೀತಿ ಮಾತುಗಳನ್ನು ಹೇಳುತ್ತಾಳೆ.

"ಕರಿಸೀರೆ ಉಡಬ್ಯಾಡ ಕಡಿವಾಣ ಬಿಡಬೇಡ
ನಡು ಓಣ್ಯಾಗ ನಿಂತು ನಗಬೇಡ 2 | ನನ ಮಗಳೆ ತವರಿಗೆ ಮಾತ ತರಬೇಡ"

ಮಾತ್ಗಂಟಿ ಮಗಳಲ್ಲ ತಾಟ್ಗಿತ್ತಿ ಸೊಸೆಯಲ್ಲ
ಧೂಪರದ ಚಕ್ಕಿ ಒಲೆಗಲ್ಲ 2| ತವರಿಗೆ
ಮಾತು ತಂದೋಳು ಮಗಳಲ್ಲ

"ಅತ್ತೆ ಮಾವರಿಗಂಜಿ ಸುತ್ತೇಳು ನೆರೆಗಂಜಿ
ಮತ್ತೆ ಆಳುವ ದೊರೆಗಂಜಿ 2| ನನ ಮಗಳೆ
ಅತ್ತೀ ಮನೆಯೊಳಗ ಬಾಳವ್ವ

"ನೆರೆಮನೆಯ ಸಿರಿದೇವಿ ನೀನಾಗು ಮಗಳೆ
ಮನೆಯಾಗ ಭೇದ ಬಗಿಬಾಡ 2| ನನ ಮಗಳೆ
ತುಂಬಿದ ಮನೆಯ ಒಡಿಬಾಡ||

ಹಸುರೀನ ನಾಡಿಗೆ ದೊರೆಯಾರು ಗೊತ್ತೆನ?
ಹಿರಿಹೋಳಿ ದಂಡೀಲಿ ಕರಿಹೋರೀ 2 |  ಮೇಯಿಸುವ |ನೋರಿಹಾಲ ಕುಡಿವ ಸರ್ದಾರ  

ನಾ ಬರ್ತೀನಿ ಹೊತ್ತ ಮುಳುಗುದಕ ss|
ಬುತ್ತಿ ತೊಗೊಂಡು ಹೋಗ್ತೀನಿ ಹೊಲಕ |

"ಅತ್ತೆ ಮನೆಯಲಿ ಮುತ್ತಾಗಿ ಇರಬೇಕು
ಹೊತ್ತಾಗಿ ನೀಡಿದರೂ ಉಣಬೇಕು 2| ಮಗಳೆ ನೀ ತವರಿಗೆ ಹೆಸರು ತರಬೇಕು"

"ಗಂಡನೇ ಗುರು ಅವ್ವ ಗಂಡನೇ ದೇವರು 
ಗಂಡನ ಹೊರತು ಗತಿಯಿಲ್ಲ 2| ಹೆಣ್ಣಿಗೆ
ಗಂಡನೆ ಸಕಲ ಸೌಭಾಗ್ಯ"

"ತಾವರೆಯ ಗಿಡಹುಟ್ಟಿ ದೇವರಿಗೆ ನೆರಳಾಗಿ
ನಾಹುಟ್ಟಿ ಮನೆಗೆ ಎರವಾದೆ 2| ಹಡೆದವ್ವ
ನೀ ಕೊಟ್ಟ ಮನೆಗೆ ಹೆಸರಾದೆ" 

"ಹಾಲು ಬಾನ ಉಣಿಸಿ ಮಾರಿ ಸೆರಗಲಿ ಒರಸಿ
ನೀ ಯಾರಿಗ್ಯಾದೋ ನನ ಮಗನೆ 2| ಬಂದಂತೆ
ನಾರಿಗಾದ್ಯಲ್ಲೋ ಹಡದಪ್ಪ 

"ಎಲ್ಲೆಲ್ಲಿ ನೋಡಿದರ ನಲ್ಲನಂಥವರಿಲ್ಲ
ಹಲ್ಲು ನೋಡಿದರ ಹವಳವ 2| ನಲ್ಲನ
ಸೊಲ್ಲು ಕೇಳಿದರ ಸಮಾಧಾನ"

"ಸರದಾರ ನಿಮ್ಮಿಂದ ಸರುವೆಲ್ಲ ಮರೆತೀನ
ಸರದಾರ ಇರುವ ಗುಳದಾಳಿ 2| ನಿಮ್ಮಿಂದ
ಸರುವ ಬಳಗೆಲ್ಲ ಮರೆತೀನ"

"ಮುಂಗೋಳಿ ಕೂಗ್ಯಾವು ಮೂಡು ಕೆಂಪೆರ್ಯಾವು| ಸ್ವಾಮಿ ನನ್ನಯ್ಯ ರಥವೇರಿ 2 |ಬರುವಾಗ  ನಾನೆದ್ದು ಕೈಯ ಮುಗಿದೇನ "

ಕಂಚಿನ ಘಂಗಾಳ ದ್ಹಂಚಿನಂಗ ಕ್ವಾರಿ 
ಚಂದ್ರಾಮ ಮಿಂಚ್ಯಾವ ಮುಗಲಾಗ

"ಅತ್ತೆ ಅತ್ತಿಕಾಯಿ ಮಾವ ಮಲ್ಲಿಗ್ಹೂವ
ಬಂಗಾರಕೋಲ ಹಿರಿಭಾವ 2| ನನ ಮನಿಯ
ಅರಸರು ಹಾರ ಪರಿಮಳ"

ಕೂಲಿ ಮಾಡಿದರೇನ ಕೋರಿ ಹೊತ್ತರೇನ
ನಮಗ ನಮ ರಾಯ ಜಡಮೇನ 2| ಬಂಗಾರ
ಮಾಲ ಇದ್ಹಾಂಗ ಮನಿಯಾಗ"

"ಹಚ್ಚಡದ ಪದರಾಗ ಅಚ್ಚಮಲ್ಲಿಗೆ ಹೂವ
ಬಿಚ್ಚಿ ನನಮ್ಯಾಗ ಒಗೆವಂಥ 2| ರಾಯರನ
ಬಿಟ್ಹಾಂಗ ಬರಲೇ ಹಡೆದವ್ವ "

ದಾಂಪತ್ಯ ಜೀವನದಲ್ಲಿ ವಿರಸ ಸಹಜ. ’ಗಂಡ ಹೆಂಡಿರ ಜಗಳ ಗಂಧ ತೀಡಿದ್ಹಂಗ’  ಮತ್ತೆ  ’ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ’  ಎಂಬ ಈ ಗಾದೆಗಳು ಬಹಳ ಹಿಂದಿನಿಂದಲೂ ಪ್ರಚಲಿತವಾಗಿವೆ.

"ಬಟ್ಟಲ ಗಣ್ಣೀಲಿ ದಿಟ್ಟಿಸಿ ನೋಡ್ಯಾರ
ಸಿಟ್ಟ್ಯಾಕೋ ರಾಯ ನನಮ್ಯಾಗ 2| ನಾ ಅಂಥ
ಹುಟ್ಟಿಸ್ಯಾಡವರ ಮಗಳಲ್ಲ"

"ಕಟ್ಟಾಣಿ ಗುಂಡೀಗಿ ಸಿಟ್ಟು ಮಾಡಲಿ ಬೇಡ
ಬಿಟ್ಟು ಬಂದೀನಿ ಬಳಗೆಲ್ಲ  2| ಪತಿರಾಯ
ಕಟ್ಟ್ಯಾರ ತಮ್ಮ ಪದರಾಗ" 

"ಹಂತ್ಯಾಕ ಇಟಗೊಂಡು ಚಿಪ್ಪಾಡಿ ಬಳಿವಾಕೆ
ಚಿಂತಿಲ್ಲ ಏನ ನಿನಗಿಷ್ಟು 2| ನಿನ ಗಂಡ
ಅಲ್ಲೊಬ್ಬಳ ಕೂಡ ನಗುತಿದ್ದ"

"ನಕ್ಕರೆ ನಗಲೆವ್ವ ನಗಿ ಮುಖದಿ ಕ್ಯಾದಿಗಿ
ನಾ ಮುಚ್ಚಿ ಮುಡಿವ ಪರಿಮಳದ 2| ಆ ಹೂವ
ಅವಳೊಂದು ಗಳಿಗೆ ಮುಡಿಯಲಿ" 

"ಎಲ್ಲಿ ಹೋಗಿದ್ದಿ ರಾಯ ಸೆಲ್ಲ್ಯಾವ ಮಾಸೇದ
ಅಲ್ಲೊಬ್ಬಳ ಕೂಡ ಸಲಗೀಯ 2| ಮಾಡಿ
ಇಲ್ಲೆಂಬುದೇನ ನನಮುಂದೆ" 

"ಅಂಗಿಯ ಮ್ಯಾಲಂಗಿ ಛಂದೇನೋ ನನರಾಯ ರಂಭೀಯ ಮ್ಯಾಲ ಪ್ರತಿರಂಭಿ 2| ಬಂದಾರ ಛಂದೇನೋ ರಾಯ ಮನಿಯಾಗ"

"ಹಣ್ಣ ಹಾಗಲಕಾಯಿ ಎಣ್ಣ್ಯಾಗ ಕರಿದೀನಿ
ಉಂಡಾರೆ ನೋಡು ಸವಿಗಾರ 2| ನನಮ್ಯಾಗ
ತಂದರೆ ನೋಡು ಸವತೀನ"

"ವಾರಿ ರುಂಬಾಲ ಸುತ್ತಿ ದಾರ‍್ಯಾಗ ನಿಂತಿದ್ದು
ಹ್ವಾರ‍್ಯಾ ಇಲ್ಲೇನೋ ಮನಿಯಾಗ 2| ನನ ತಮ್ಮ
ನಾರಿ ಯಿಲ್ಲೋನೋ ಮನಿಯಾಗ" 

"ಹೆಣ್ಣೆಂದು ರಾವಣ ಮಣ್ಣು ಮುಕ್ಕಿದನಯ್ಯ
ಹೆರವರ ಹೆಣ್ಣು ಬಯಸದೆ 2| ಲಗ್ನದ
ಸತಿಯೊಡನೆ ಸುಖದಿ ಬಾಳಣ್ಣ" 

"ತಾಯಿದ್ರ ತವರೆಚ್ಚು | ತಂದಿದ್ರ ಬಳಗ್ಹೆಚ್ಚು
ಸಾವಿರಕ ಹೆಚ್ಚು ಪತಿ ಪುರುಷ 2| ಹೊಟ್ಟೆಯ. 
ಮಾಣಿಕ್ಯದ ಹರಳು ಮಗ ಹೆಚ್ಚು "

"ಬ್ಯಾಸಗೀ ದಿವಸಕ್ಕ ಬೇವೀನ ಮರತಂಪ
ಭೀಮಾರತಿ ಎಂಬ ಹೊಳಿ ತಂಪ 2| ಹಡದವ್ವ
ನೀ ತಂಪ ನಾ ನನ್ನ ತವರೀಗಿ "

"ಕಾಶಿಗೆ ಹೋಗಾಕ ಏಸೊಂದ ದಿನ ಬೇಕ
ತಾಸ್ಹೊತ್ತಿನ್ಹಾದಿ ತವರೂರ 2| ಮನಿಯಾಗ
ಕಾಶಿ ಕುಂತಾಳ ಹಡೆದವ್ವ"

" ಹಾಲುಂಡ ತವರೀಗಿ ಏನೆಂದು ಹರಸಲೇ
ಹೊಳಿ ದಂಡ್ಯಾಗಿನ ಕರಕೀಯ 2 |ಹಿಡಿ ಹಾಂಗ
ಹಬ್ಬಲೀ ತವರ ರಸಬಳ್ಳಿ"

"ತವರ ಮನಿಯ ದೀಪ ತವಕೇರಿ ನೋಡೇನ
ಹತ್ತು ಬೆರಳ್ಹಚ್ಚಿ ಶರಣೆಂದೆ 2| ತಮ್ಮಂದಿರು
ಜಯವಂತರಾಗಿ ಇರಲೆಂದೆ"

"ಯಾರೂ ಇದ್ದರು ನನ್ನ ತಾಯವ್ವನ್ಹೋಲಾರ
ಸಾವಿರ ಕೊಳ್ಳಿ ಒಲಿಯಾಗ 2| ಇದ್ದರು
ಜ್ಯೋತಿ ನೀನ್ಯಾರು ಹೋಲರು"

"ಕಣ್ಣೆಂಜಲ ಕಾಡಿಗೆ ಬಾಯೆಂಜಲ ವೀಳ್ಯವ
ಯಾರೆಂಜಲುಂಡಿ ನನ ಮನವೆ 2| ಹಡೆದವ್ವ
ಬಾಯೆಂಜಲುಂಡು ಬೆಳೆದೇನ"

"ಉಂಗುರ ಉಡುದಾರ ಮುರಿದು ಮಾಡಿಸ ಬೋದು.ಮಡದಿ ಸತ್ತರ ತರಬೋದು 2| ಹಡೆದ
ತಂದೆ-ತಾಯಿಯೆಲ್ಲಿ ಸಿಕ್ತಾರ"

"ತಾವರೆಯ ಗಿಡ ಹುಟ್ಟಿ ದೇವರಿಗೆ ನೆರಳಾಗಿ
ನಾ ಹುಟ್ಟಿ ಮನೆಗೆ ಎರವಾದೆ 2| ಹಡೆದವ್ವ
ನೀ ಕೊಟ್ಟ ಮನೆಗೆ ಹೆಸರಾದೆ" 

"ಹೆಣ್ಣು ಹಡೆಯಲು ಬೇಡ ಹೆರವರಿಗೆ ಕೊಡಬೇಡ | ಹೆಣ್ಣು ಹೋಗಾಗ ಅಳಬ್ಯಾಡ 2 | ಹಡದವ್ವ ಸಿಟ್ಟಾಗಿ ಶಿವಗ ಬೈಬ್ಯಾಡ"

"ಅರಗಿನಂಥ ತಾಯಿ ಮರದಂಥ ಮಕ್ಕಳು
ಕರಗಿದರ ಬೆಣ್ಣೆ ತಿಳಿತುಪ್ಪ 2| ಧಂಥಕ್ಕಿ
ಕರಗದಂಥ ತಾಯಿ ಇರಬೇಕು"

"ಮಕ್ಕಳ ಕೊಡು ಶಿವನೇ ಬಾಳ ಮಕ್ಕಳಿರಲಿ
ಮ್ಯಾಗ ಗುರುವಿನ ದಯವಿರಲಿ 2| ನನ ಗುರುವೆ
ಬಡತನದ ಚಿಂತೆ ನನಗಿರಲಿ||

"ಕೂಸಿ ಇದ್ದ ಮನೆಗೆ ಬೀಸಣಿಕೆ ಯಾತಕ
ಕೂಸು ಕಂದಮ್ಮ ಒಳಹೊರಗ 2| ಆಡಿದರ
ಬೀಸಣಿಕೆ ಗಾಳಿ ಸುಳಿದಾಂಗ" 

"ಬಾಲಕರಿಲ್ಲದ ಬಾಲಿದ್ಯಾತರ ಜನ್ಮ
ಬಾಡಿಗೆ ಎತ್ತು ದುಡಿದ್ಹಾಂಗ 2| ಬಾಳೆಲೆಯ
ಹಾಸುಂಡು ಬೀಸಿ ಒಗೆದ್ಹಾಂಗ

"ಬಸಿರ ಬಯಕೆ ಚಂದ ಹಸಿರು ಕುಪ್ಪಸ ಚಂದ
ನಸುಗೆಂಪಿನವಳ ನಗೆ ಚೆಂದ 2| ನನ ಮಗಳು
ಬಸುರಾದರೆ ಚಂದ ಬಳಗಕ" .

"ಜೋಗುಳ ಹಾಡಿದರ ಆಗಲೇ ಕೇಳ್ಯಾನ
ಹಾಲ ಹಂಬಲ ಮರೆತಾನ 2| ಕಂದನ
ಜೋಗುಳದಾಗ ಅತಿ ಮುದ್ದ"

"ಅತ್ತಾನ ಕಾಡ್ಯಾನ ಮತ್ತೇನು ಬೇಡ್ಯಾನ
ಮೆತ್ತ ಮೆತ್ತನ್ನ ದಿಂಭವ 2| ಕೊಟ್ಟರೆ
ಗುಪ್ಪು ಚಿಪ್ಪಾಗಿ ಮಲಗ್ಯಾನೆ"

"ತೂಗು ತೊಟ್ಟಿಲಿಗೊಂದು ಪಾಗು ಪಚ್ಚೆಯ ಹಾಸಿ ಮಾಗಾಯಿ ಮಗನ ಮಲಗಿಸಿ 2| ಅವನವ್ವ ಜೋಗುಳ ಹಾಡಿ ತೂಗ್ಯಾಳ "

"ಯ್ಯಾಕ ಅಳತಾನಂತ ಎಲ್ಲರನ ಕೇಳಿದೆ
ನಾಕೆಮ್ಮಿ  ಕರೆದ ನೊರೆ ಹಾಲು 2| ಸಕ್ಕರಿ
ನೀ ಬೇಡಿದಾಗ ಕೊಡುವೆನ"

ಅಳುವ ಕಂದನ ತುಟಿಯು ಹವಳದ ಕುಡಿಹಂಗ
ಕುಡಿಹುಬ್ಬು ಬೇವಿನೆಸಳಂಗ 2 | ಕಣ್ಣೋಟ
ಶಿವನ ಕೈಯಲಗು ಹೊಳೆದ್ಹಂಗ"

"ಹಾಲಬೇಡಿ ಅತ್ತಾನ ಕೋಲಬೇಡಿ ಕುಣಿದಾನ
ಮೊಸರಬೇಡಿ ಕೆಸರ ತುಳಿದಾನ 2| ಕಂದನ
ಕುಸುಲದ ಗೆಜ್ಜಿ ಕೆಸರಾಯ್ತು"

"ಕೂಸ ಕಂದಯ್ಯ ತೊಡಿಮ್ಯಾಗ ಆಡಿದರ ಬಂದ ಬ್ಯಾಸರಕಿ ಬಯಲಾಯ್ತು" 

"ಹತ್ತು ಗಂಡ್ಹೆಡೆದರೂ ಮತ್ತೆ ಬಂಜೆಂಬರು
ದಟ್ಟಿಯ ಉಡುವ ಧರಣೀಯ 2| ಹಡೆದರ
ಹೆತ್ತಾಯಿಯೆಂದು ಕರೆದಾರ"

"ನಾಕು ಮಕ್ಕಳ ಕೊಟ್ಟು ಸಾಕು ಮಾಡೋ ಶಿವನೇ ನಾಕರ ಮ್ಯಾಲೆ ಆರತಿ 2| ಹಿಡಿಯೋಕೆ
ನಾರಿಯ ಕೊಟ್ಟು ಕಡೆ ಮಾಡೋ"

"ಆಚಾರಕ್ಕನುವಾಗು ನೀತಿಗೆ ಪ್ರಭುವಾಗು
ಮಾತಿನಲಿ ಚೂಡಾ ಮಣಿಯಾಗು 2| ನನಕಂದ
ಜ್ಯೋತಿಯೆ ಆಗು ಜಗಕೆಲ್ಲ"

"ಬಂಜೆ ಬಾಗಿಲ ಮಂದೆ ಅಂಜೂರ ಗಿಡ ಹುಟ್ಟಿ
ಟೊಂಗಿ ಟೊಂಗೆಲ್ಲ ಗಿಳಿ ಕುಂತು 2| ಹೇಳ್ಯಾವ
ಬಂಜೆಯ ಬದುಕು ಹೆರವರಿಗೆ" 

ಮಕ್ಕಳಾಟವು ಚಂದ ಮತ್ತೇ ಯೌವನ ಚೆಂದ
ಮುಪ್ಪಿನಲಿ ಚೆಂದ ನೆರೆಗಡ್ಡ  2| ಜಗದೋಳು
ಎತ್ತ ನೋಡಿದರು ನಗು ಚೆಂದ"

ಆನಿ ಬಂತೊಂದು ಆನಿ| ಯಾವೂರ ಆನಿ| ಇತ್ತಲ್ಯಾಕ ಬಂತು | ಹಾದಿ ತಪ್ಪಿ ಬಂದಿತ್ತ| ಹಾದೀಗೊಂದು ದುಡ್ಡು|ಬೀದಿಗೊಂದು ದುಡ್ಡು| ಅದೂ ದುಡ್ಡು ಕೊಟ್ಟು|ಸೇರ ಕೊಬ್ರಿ ತಂದು| ಲಡಾ ಲಡಾ ಮುರಿದು|ಲಟ್ಟಿನ ಕೈಯಾಗ ಕೊಟ್ಟು| ಕಂದನ ಬಾಯಾಗಿಟ್ಟು| .....

ತೊಡೆಯ ಮೇಲೆ ಆನಿ ಆಡಿಸಿ, ಕೊಬ್ರಿ ತಂದು ಎಲ್ಲರಿಗೂ ಹಂಚಿ, ಕಂದನ ಹಲ್ಲು ಮೂಡದ ಬಾಯಿಗೆ ಕೊಬ್ರಿ ಕೊಡದೇ ಅದಕ್ಕೆ ಅದರ ಬೆರಳನ್ನೇ ಚೀಪಿಸುತ್ತಾಳೆ.

ಗುಡುಗುಡು ಮುತ್ಯಾ ಬಂದಾನೋ
ಬೆಣ್ಣಿ-ರೊಟ್ಟಿ ತಂದಾನೋ ಎಂದು ಗುಡುಗಿನ ಭಯವನ್ನು ನಿವಾರಿಸುವಳು.

"ಅತ್ತು ಕಾಡುವನಲ್ಲ ಹಸ್ತು ಉಂಬುವನಲ್ಲ
ಲಕ್ಷಣವಂತ ಗುಣವಂತ 2| ತಮ್ಮಯ್ಯ
ಲಕ್ಷಣಕ ಲಕ್ಷ್ಮಿ ಒಲಿದಾಳೋ" 

"ಒಂಟೇ ಮೇಲೆ ಬರುವ ಬಂಟನ ನೋಡಿದೆ 
ಎಂಟಾಳಿಗಿಂತ ಚೆಲುವನ 2| ನನ ತಮ್ಮನ
ಸೊಂಟವ ನೋಡಿ ಹೆಣ್ಣ ಕೊಡುವೆನು "

"ಬಾಳ ನೀ ಅಳದಿರು| ಬಾಗಿಲಿಗೆ ಬರದಿರು|
ಬಾಳೆಯೊಳಗಿನ ತಿಳಿನೀರು 2| ತಕ್ಕೊಂಡು
ಬಾಳ ನಿನ್ನ ಮಾರಿ ತೊಳೆದೇನು"

"ಆಡಿ ಬಾ ನನ ಕಂದ ಅಂಗಾಲ ತೊಳೆದೇನು
ತೆಂಗಿನಕಾಯಿ ತಿಳಿನೀರ 2| ತಕ್ಕೊಂಡು
ಬಂಗಾರದ ಮಾರಿ ತೊಳೆದೇನು" 

"ಅತ್ತರ ಅಳಲವ್ವ ಈ ಕೂಸು ನನಗಿರಲಿ
ಕೆಟ್ಟರೆ ಕೆಡಲಿ ಮನೆಗೆಲಸ 2| ಕೆಟ್ಟರು
ಮತ್ತೊಮ್ಮೆ ಮಾಡಿ ಮುಗಿಸೇನಿ" 

"ಕೂಸಿನ ಕುಂಚಿಗ್ಗೆ ರೇಶೀಮೀ ಗೊಂಡ್ಯಾವು
ದೇಶಕ್ಹಡದವ್ವ ಹೊಲಶ್ಯಾಳು 2 | ಈ ದಿನ
ಅಜ್ಜನೇ ನೋಡಿ ಬೆರಗಾದ"

"ಕಂದಯ್ಯ ಅತ್ತರ ಕಣಗೀಲ ಕಾಣತಾವ
ಒಣಗಿದ್ದ ಬಾಳೆ ಚಿಗಿತಾವ 2| ಬರಡು ಹಸುಗಳೂ ಹಯನಾಗೀ "

"ಜನಕರಾಯನ ಮಗಳು ವನಕ ತೊಟ್ಟಿಲ ಕಟ್ಟಿ
ಲವಕುಶರನಿಟ್ಟು ತೂಗ್ಯಾಳ 2 | ನಗುತ
ವನವಾಸ ಕಳೆದಾಳ"

ಕೂಸು ಕುಂಚಿಗಿ ತಿಂತು ಹಾಸೀಗಿ ನೆಲ ತಿಂತು
ಮಾಡಿದ ಅಡಿಗಿ ಒಲಿತಿಂತು  2| ಕಂದಯ್ಯನ
ಇದ್ದಷ್ಟು ಮೂಗ ಇಲಿ ತಿಂತು"

"ಕಂದಮ್ಮ ಕಾಪೀತು ಕವಳಿಯ ಹಣ್ಣಿಗೆ
ತುಂಬುಚ್ಚಿ ಬಿದ್ದ ಮಗಿಮಾವು 2| ಸಕ್ಕರಿ
ನೀ ಕೇಳಿದಾಗ ನಾ ಕೊಡುವೆ"

" ಎಲ್ಲಾದರೂ ಇರಲೆವ್ವ ಹುಲ್ಲಾಗೀ ಬೆಳೆಯಲೀ
ನೆಲ್ಲಿ ಬಡ್ಡ್ಯಾಗಿ ಚಿಗಿಯಲೀ 2| ನನ ಕಂದ
ಜೀವಂತವಾಗಿ ಬಾಳಲಿ "

"ಹೆಣ್ಣಲ್ಲವದು ನಮಗೆ ರವಿ ಚೆನ್ನ ತಾಯಿಗೆ 
ಸೂರ್ಯಕಾಂತಿಯ ರವಿ ಚಿನ್ನ 2 | ಸಿಂಗಾರಿ
ನನ್ನ ಮನೆಯ ಬಂಗಾರಿ"

"ಹೆಣ್ಣಿದ್ದ ಮನೆಗೆ ಕನ್ನಡಿ ಯಾತಕ್ಕ
ಹೆಣ್ಣು ಕಂದವ್ವ ಒಳಹೊರಗು 2| ಓಡಾಡಿದರ
ಕನ್ನಡಿ ಹಂಗ ಹೊಳೆವಳು"

"ಬಂಗಾರ ಬಾ ನಿನ್ನ ಸಿಂಗಾರ ಮಾಡೇನ
ಗೊಂಡೆ ಹಾಕೇನಿ ಹೆರಳೀಗೆ 2| ಪುಟ್ಟಕ್ಕ
ಗೊಂಬೀಯ ಆಟ ಕಲಿಸೇನ"

"ನನ್ನಯ್ಯನಂಥೋರು ಹನ್ನೆರಡು ಮಕ್ಕಳು
ಹೊನ್ನೆಯ ಮರದ ನೆರಳಲಿ  2 | ಆಡುವಾಗ
ಸಂನ್ಯಾಸಿ ಜಪವ ಮರೆತಾನು" 

"ಎಲ್ಲೆಲ್ಲಿ ನೋಡಿದರೂ ನಲ್ಲನಂಥವರಿಲ್ಲ
ಹಲ್ಲು ನೋಡಿದರೆ ಹವಳವು 2| ನಲ್ಲನೆ
ಸೊಲ್ಲು ಕೇಳಿದರೆ ಸರ್ವಸ್ವ"

"ಕಾಣದೆ ಇರಲಾರೆ ಕನ್ನಡಿ ಮುಖದವರ
ಕಾಮನಿಗಿಂತ ಚೆಲುವ್ಹಾರ 2| ಚೆನ್ನಿಗರ
ಕಾಣದರಗಳಿಗೆ ಇರಲಾರೆ"

"ಕೂಲಿ ಮಾಡಿದರೇನ ಕೋರಿ ಹೊತ್ತರೇನ
ನನಗ ನನ ರಾಮ ಬಡವೇನ 2| ಬಂಗಾರದ
ಮಾಲ ಇದ್ಹಾಂಗ ಮನಿಯಾಗ" 

"ಹಾಸಿಗೆ ಹಾಸೆಂದ ಮಲ್ಲೀಗಿ ಮುಡಿ ಎಂದ
ಬ್ಯಾಸತ್ತರೆ ಮಡದಿ ಮಲಗೆಂದ 2| ತನರಾಯ
ತನ ನೋಡಿ ತವರ ಮರೆಯೆಂದ"

ಮಡದಿಯ ಬಡದಾನ ಮನದಾಗ ಮರುಗ್ಯಾನ
ಒಳಗ್ಹೋಗಿ ಸೆರಗ ಹಿಡದಾನ 2| ತಾ ಕೇಳ್ಯಾನ
ನಾ ಹೆಚ್ಚೋ ನಿನ್ನ ತವರ‍್ಹೆಚ್ಚೋ" 

"ಹಚ್ಚಡದ ಪದರಾಗ ಅಚ್ಚಮಲ್ಲಿಗಿ ಹೂವ
ಬಿಚ್ಚಿ ನನ ಮೇಲೆ ಬಗೆವಂಥ  2 | ರಾಯರನ
ಬಿಟ್ಹಾಂಗ ಬರಲೇ ಹಡೆದವ್ವ

"ಆಕಾಶದಂಥ ಅತ್ತೆ ಗೋಕುಲದಂಥ ಮಾವ
ಶ್ರೀ ಕೃಷ್ಣನಂಥ ಪತಿರಾಯ 2| ಇದ್ದರ
ಸಾಕೀದ ತವರು ಮರತೇನ" 

"ಅಡಗೀಯ ಮನಿಯಾಗ ಮಡದೀಯ ಸುಳಿವಿಲ್ಲ ಅಡಗೀ ಬಾಯಿಗಿ ರುಚಿಯಿಲ್ಲ 2| ಹಡೆದವ್ವ ಮಡದಿ ತವರಿಗಿ ಹೋಗ್ಯಾಳು"

"ಗಂಜೀಯ ಕುಡಿದರೂ ಗಂಡನ ಮನೆ ಲೇಸು
ಅಂದಣದ ಮ್ಯಾಲ ತವರವ 2|  ಸಾರಿದರ
ಹಂಗಿನ ತವರ ಮನಿಸಾಕ" 

"ಸೊಸೆಯು ಬರುತಾಳಂತ ಖುಷಿ ಭಾಳ ಮನದಾಗ ಸೊಸಿಬಂದು ಮಗನ ಕಸಗೊಂಡು 2| ಬಾಳ್ವಾಗ ಮುಗಿಲೀಗಿ ಬಾಯಿ ತೆರದಾಳ"

"ಹಡೆದವ್ವ ಇರುತನಕ ನಡುಮನಿ ನಂದೆನ್ನೆ
ಕಡಗದ ಕೈ ಸೂಸಿ ಬಂದಾಗ 2| ನಡಿವಾಗ
ತುದಿಗಟ್ಟೆ ನನಗ ಎರವಾದೆ"

"ತಾಯಿಯಿಲ್ಲದ ತವರಿಗೆ ಹೋಗಬ್ಯಾಡ
ನೀರಿಲ್ದ ಕೆರಿಗೆ ಕರುಬಂದ 2| ತಿರುಗಾಗ
ಬಂದು ದಾರಿಯ ಹಿಡಿತಾಳ"

"ಹೆಣ್ಣಿನ ಜನುಮಕ ಅಣ್ಣತಮ್ಮರು ಬೇಕು
ಬೆನ್ನ ಕಟ್ಟುವರು ಸಭೆಯೊಳಗೆ 2| ಸಾವಿರ
ಹೊನ್ನ ಕಟ್ಟುವರು ಉಡಿಯೊಳಗೆ"

"ಸೊಲ್ಲಾಪುರದಣ್ಣಗ ನಿಲ್ಲದಲೆ ಬರಹೇಳು|
ಸೀರೊಲ್ಲೆ ಅವನ ಕುಬಸೊಲ್ಲೆ 2| ಅಣ್ಣನ
ಮಾರಿ ನೋಡಂಥ ಮನವಾಗಿ"

"ಅಣ್ಣ ಬರತಾನಂತ ಅಂಗಳಕೆ ಥಳಿಕೊಟ್ಟೆ
ರನ್ನ ಬಚ್ಚಲಕೆ ಮಣಿ ಹಾಕಿ 2| ಕೇಳೀನ
ತಣ್ಣಗಾಗಿರ‍್ಲಿ ತವರವರು"

ಕುದರಿಯ ಕುಣಿಸೂತ| ಆನಿಯ ನಡೆಸೂತ
ಅರಗಿಣಿಗೆ ಮಾತ ಕಲಿಸೂತ 2| ಬರತಾನೆ
ಬರಿಗೊಡದಮ್ಮ ದಾರಿಬಿಡ.

"ಕಾರ ಹುಣ್ಣಿಮೆ ಹಬ್ಬಕ ಕರಿಲಾಕ ಬರಬ್ಯಾಡ ಕಾಲಬಾಡಿಗೆ ಕೊಡಬ್ಯಾಡ 2| ನನ್ನಣ್ಣ ಹೊನ್ನ ದೀವಳಿಗೆ ಮರಿಬ್ಯಾಡ||

"ತಂಗೀಗಿ ಕಳುಹ್ಯಾನ ತೆವರೇರಿ ನಿಂತಾನ
ಅಂಗೀಲಿ ನೀರ ವರಸ್ಯಾನ  2 |ನನ್ನಣ್ಣ
ಇಂದಿಗಿ ತಂಗಿ ಎರವಾಗಿ"

"ಹಣ್ಣುಮೆಣ‌ಸಿನಕಾಯಿ ಕಣ್ಣೀಗಿ ನುಣ್ಣಗ
ಸಣ್ಣಕ್ಕಿ ಎನ್ನ ನೆಗೆಣ್ಣಿ 2 | ಆಕಿ ಮಾತು
ಬೆಣ್ಯಾಗ ಮುಳ್ಳ ಮುರದ್ಹಂಗ "

"ಸಾಂವಕ್ಕಿ ಕುಟ್ಟಂದ್ರೆ ಸೆರಗ್ಹಾಸಿ ಮಲಗ್ಯಾಳೆ
ಎಬ್ಬಿಸಣ್ಣ ನಿನ್ನ ಮಡದೀನ" ಎಂದಾಗ ಅಣ್ಣ ಹೇಳಿದ್ದು
"ಮಡದೀನ ಎಬ್ಬಿಸಿದ್ರ ಅರನಿದ್ರೆ ಆದಾವ
ಎರಡೊಬ್ಬಿ ಮಾಡಿ ನೀ ಕುಟ್ಟವ್ವ ಎಂದನು.
ನೀನೇ ಎರಡು ಭಾಗ ಮಾಡಿ ಕುಟ್ಟು ಎಂದನು. ಆಗ ತಂಗಿ ಹೇಳುವಳು. "ಎರಡೊಬ್ಬಿ ಮಾಡಿದರ ಸರಿಯಾಗಿ ಸುರಿಯೋಲ್ಲ. ಒಂದಬ್ಬಿ ಸಣ್ಣವಾಗಬಹುದು ಇನ್ನೊಂದಬ್ಬಿ ಉರುಮ ಆಗಬಹುದು. ಒಂದೇ ಸಲ ಕುಟ್ಟುವುದಕ್ಕೆ ಎಬ್ಬಿಸು" ಮತ್ತು ಅತ್ತಿಗೆಯನ್ನು ಎಬ್ಬಿಸಲು ಒತ್ತಾಯಿಸುವಳು. ಆಗ ಅಣ್ಣನಿಂದ ಬಂದ ಉತ್ತರ
"ಕುಟ್ಟಿದರ ಕುಟ್ಟವ್ವ ಕಿರಿ ಕಿರಿ ಹಚಬ್ಯಾಡ| ಬಂದ್ಹಾದಿ ಹಿಡಿದು ನಡಿ ತಂಗಿ" ಎನ್ನುವನು. ಆಗ ತಂಗಿ
"ಚಕ್ಕಡಿಯೊಳಗ ಕೂಡಿಸಿಕೊಂಡು ನಡೀ ನನ್ನ ಲಗೂನ ಕಳಿಸು" ಎಂದಾಗ ಎತ್ತು ಚಕ್ಕಡಿ ನಮ್ಮನ್ಯಾಗ ಇಲ್ಲ. ಬರೋಮುಂದ ನೀ ಹ್ಯಾಂಗ ಬಂದಿ ಹಾಂಗು ಸುಮ್ಮನೆ ಬಂದ ಹಾದಿ ಹಿಡಿ" ಅಂದಕೂಡ್ಲೆ, ನಿಂತ ಕಾಲ ಮೇಲೆ ಗಂಡನ ಮನೆ ಹಾದಿ ಹಿಡಿದಳು. ಇತ್ತ ಮರುದಿನ ಅತ್ತಿಗೆಗೆ ಭಾರೀ ಚಳಿಜ್ವರ ಬಂದವು. ಅಣ್ಣ ದೇವರ ಕೇಳಿಸಿದಾಗ- ಮನಿ ಹೆಣಮಗಳ ನಿಟ್ಟುಸಿರು, ಅವಳು ಪಟ್ಟ ತಾಪದ ಪರಿಣಾಮ  
ಅಣ್ಣ ಚಕ್ಕಡಿ ಕಟಿಗೊಂಡು ತಂಗಿ ಮನೆಗೆ ಬಂದಾಗ, ಎಂದೂ ಬರಲಾರದ ಅಣ್ಣ ಬಂದಾನೆಂದು ಆತಿಥ್ಯ ನೀಡಿದ್ದು, ತಂಗಿನ ತವರಿಗೆ ಬಾ ಎಂದು ಕರೆದರೂ ವಿವಿಧ ಕಾರಣಗಳನ್ನು ಹೇಳಿ ತಪ್ಪಿಸಿ ಕೊಂಡಳು. ತವರಿನ ಮೋಹ ತೆಗೆದಳು. ತಾಯಿಯಿಲ್ಲದ ತವರು ದೂರವಾಯಿತು. ಹೀಗೆ ಮನೆಯ ಹೆಣ್ಣುಮಕ್ಕಳು ಉಸಿರು ಹಾಕಿದರೆ ಶಾಪವಾಗಿ ಪರಿಣಮಿಸುತ್ತದೆ.

ಹೆಣ್ಣು ದೇವರಲ್ಲಿ ಕೇಳುವುದು ಒಂದೇ ಒಂದು ಮುತ್ತೈದೆತನ. ಹಾಗೂ ಮುತ್ತೈದೆಯಾಗಿ ಸಾಯುವುದು. ಅದಕ್ಕಾಗಿ ವ್ರತ ನೇಮಗಳನ್ನು ಮಾಡುತ್ತಾಳೆ. ದೇವರಲ್ಲಿ ಈ ಪರಿ ಬೇಡುತ್ತಾಳೆ.

"ಮುತ್ತೈದೆತನ ಬೇಡಿ ಮೂರುತಾಸು ನಿಂತೆ
ಮುತ್ತಿನ ತುರಾಯಿ ಅರಸರ 2| ಸಂಗ ಬೇಡಿ
ಸುತ್ತೇನ ಶಿವನ ಶಿಖರವ||

"ಗಂಡನಿಲ್ಲದ ಬಾಳು ದಂಡನಾಳಿದರೇನು
ಪುಂಡಿಯ ಹೂವ ಹೊಲ ತುಂಬ 2| ಅರಳಿದರೆ
ಗಂಡನಿಲ್ಲದ ಬಾಳು ಬೀಳಲ್ಲವೇ" 

ಜನಪದ ಸಾಹಿತ್ಯದಲ್ಲಿ ಕುಟುಂಬ ಯೋಜನೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಕಂಡುಬರುತ್ತದೆ. 

"ಎರಡು ಮಕ್ಕಳ ಕೊಟ್ಟು ಸಾಕು ಮಾಡು ಶಿವನೇ ಎರಡರ ಮ್ಯಾಲೆ ಆರುತಿ 2|-ಹಿಡಿಲಾಕ
ಪೋರಿಯ ಕೊಟ್ಟು ಕಡೆಮಾಡೋ"

ಆವಾಗಲೇ ಮಿತ ಕುಟುಂಬದ ಕಲ್ಪನೆ ಅವರಲ್ಲಿತ್ತು.  ಇನ್ನೊಬ್ಬ ಹೆಣ್ಣು ಮಗಳು...

"ಹತ್ತು ಹಡೆಯುವುದಕ್ಕಿಂತ ಮುತ್ತೊಂದು ಹಡೇದಿನಿ ಎತ್ತಿಕೋ ತಮ್ಮ ಬಗಲಾಗ 2 |-ನನ್ನ ತಮ್ಮ ಮುತ್ತಿನ ಶಲ್ಯ ಮರೆಮಾಡೋ"

"ಮಕ್ಕಳಿಲ್ಲವರಿಗೆ ಮಕ್ಕಳ ಕೊಡುದೇವ
ಮಕ್ಕಳು ಸಾಕೆಂದು ತಿರುದುಂಬ 2 | -ಬಡವರಿಗೆ
ಮಕ್ಕಳ ಕೊಡಬ್ಯಾಡ ಮನಿತುಂಬ" 

"ಉಪ್ಪರಿಗೆ ಮನಿ ಬೇಕು ಕೊಪ್ಪರಿಗೆ ಹಣಬೇಕು
ರುಕ್ಮಿಣಿಯಂತ ಸೊಸಿಬೇಕು 2 |-ನನಮನೆಗೆ
ಕೃಷ್ಣದೇವನಂಥ ಮಗಬೇಕು"

"ಮಾಳಿಗೆ ಮನೆ ಬೇಕು, ಜೋಳಿಗೆ ಹಣ ಬೇಕು
ಜಾನಕಿಯಂಥ ಸೊಸಿಬೇಕು 2 |ನನ ಮನೆಗೆ
ರಾಮದೇವರಂಥ ಮಗ ಬೇಕು"

’ನಾನು ತಿಮ್ಮಯ್ಯನ ಏನು ಬೇಡೋಳಲ್ಲ
ಹೂಡೋವೆರಡೆತ್ತು ಕರಿಎಮ್ಮೆ 2 |-ಮುತ್ತಿನ 
ಆಡುಂಬೊನೊಬ್ಬ ಮಗ ಸಾಕು"

ಹೀಗೆ ಕುಟುಂಬ ಯೋಜನೆ ಪದ್ಧತಿಯನ್ನು ಬೆಂಬಲಿಸುವಂತೆ ಹಲವಾರು ತ್ರಿಪದಿಗಳು ಜನಪದದಲ್ಲಿವೆ

"ಕಪ್ಪು ಹೆಂಡತಿಯಂತ ಕಿರಿಕಿರಿ ಮಾಡಬೇಡ
ನೇರಲದ ಹಣ್ಣು ಬಲು ಕಪ್ಪು 2 | ಇದ್ದರು
ತಿಂದು ನೋಡಿದರ ಭಾಳ ರುಚಿ"

"ಕೆಂಪು ಹೆಂಡತಿ ಅಂತ ಬಾಯಿಬಾಯಿ ಬಿಡಬ್ಯಾಡ ಅತ್ತಿಯ ಹಣ್ಣು ಬಲುಕೆಂಪು 2| ಇದ್ದರು ಒಡೆದು ನೋಡಿದರೆ ಹುಳಭಾಳ"

"ಮಂದೀ ಮಂದೀ ಎಂದು ಮಂದಿ ನಂಬಲಿ ಹೋದ ಮಂದಿ ಬಿಟ್ಟಾರ ನಡುನೀರ 2 |ಮಲ್ಲಯ್ಯ ತಂದಿ ನನ ಕೈಯ ಬಿಡಬ್ಯಾಡ"

"ಮಾದೇವ ನಿನ ಹೊರತು ನಾನ್ಯಾರ ನಂಬಿಲ್ಲ
ನಾ ಮಾಡಿದೆನೆಂಬ ಅಳವಿಲ್ಲ 2 | ಮಹಾದೇವ
ನೀ ನಡೆಸು ನನ್ನ ಸರುವೆಲ್ಲ"

ಹೆಣ್ಣಾಗಿ ಹುಟ್ಟೋಕ್ಕಿಂತ ಮಣ್ಣಾಗಿ ಹುಟ್ಟಿದರೆ
ಮಣ್ಣಿನ ಮೇಲೊಂದು ಮರವಾಗಿ 2 | ಹುಟ್ಟಿದರೆ
ಪುಣ್ಯವಂತರಿಗೆ ನೆರಳಾದೆ"

ಪುರುಷ ಪ್ರಧಾನ ಸ್ವಾರ್ಥದ ’ಕೆರೆಗೆ ಹಾರ’ಕ್ಕೆ ’ಭಾಗೀರಥಿ’ಯರು ಬಲಿಯಾಗಬಾರದು. ಈ ರೀತಿ ಸಾಧಿಸಿದಾಗ ಹೆಣ್ಣಿಗೆ ಸಮಾನತೆ ಬರುವುದು.

ಸಾಕ್ಷರರಾಗಲು ಸಾಲಿ ಕಲಿಯಿರೀ |ಜಾಣರಾಗಿ ಬಾಳಲು ‌ಬೇಕು |ರಾಕ್ಷಸರಾಗಿಹ ಮೂಢತೆ ಕಳೆಯಲು |ರಾತ್ರಿ ಸಾಲಿಗೆ ಹೋಗ್ಬೇಕು  |ಗೀಯಗ ಗೀಯಗ ಗಾಗೀಯಗ ಗೀ ಗೀ ಗೀ....

ಗುರ್ಚೀ ಗುರ್ಚೀ ಎಲ್ಯಾಡಿ ಬಂದೀ |ಹಳ್ಳ ಕೊಳ್ಳ ಹರದ್ಯಾಡಿ ಬಂದsss |
ಕಳ್ಳೇ ಮಿಳ್ಳೆ ಚಿಪಾಟಿ ಮುಳ್ಳೇ |ಬಸರೀ ಗಿಡದಗ ಬಸಪ್ಪ ಕುತ್ತನ|ಮಳಿ ಹೊಡಿಯೋ ಹೆಚ್ಚಮಳಿ ಹೊಡಿಯೋ 

ಶರಣ ನೆನೆದರೆ ಸರಗೀಯ ಇಟ್ಟಂಗ | ಹವಳ ಮಲ್ಲಿಗಿ ಮುಡಿದಂಗ 2| ಕಲ್ಯಾಣಶರಣರ ನೆನೆಯೋ ನನ ಮನವೆ

ಬಸವಣ್ಣ ನಿನ್ನಂಥ ಭಕ್ತಿವಾನರಿಲ್ಲ| ನೀಲಮ್ಮ ನಂಥ ಶರಣರಿಲ್ಲ 2 | ಹೇಮರೆಡ್ಡಿ ಮಲ್ಲಮ್ಮ ನಂಥ ಸೊಸಿಯಿಲ್ಲ

ಒಕ್ಕಲಿಗ ಹಾಡಿದರ ನಾಡೆಲ್ಲ ನಕ್ಕೀತ| ಹಾಡವ ಮರೆತರ ನಾಡೆಲ್ಲ ಬಿಕ್ಕೀತ 2| ಜತಿಗೂಡಿ ಜನಪದ ಹಾಡೂನು 

ಕೂಸು ಕಂದಯ್ಯ ಒಳ ಹೊರಗ| ಆಡಿದರೆ
ಬೀಸಣಿಗೆ ಗಾಳಿ ಸುಳಿದಾವ||

ಹಾಲ್ಬೇಡಿ ಅತ್ತಾನ ಕೋಲಬೇಡಿ ಕುಣದಾನ
ಮೊಸರ್ಬೇಡಿ ಕೆಸರ ತುಳದಾನ|
ನನ ಕಂದನ ಕುಶಲಾದ ಗೆಜ್ಜಿ ಕೆಸರಾಗಿ  ||

ಅತ್ತರ ಅಲಲೆವ್ವ ಈ ಮುತ್ತ ನನಗಿರಲಿ
ಕೆಟ್ಟರ ಕೆಡಲಿ ಮನಿಗೆಲಸ |
ಸಮರ್ಥನಂಥ ಮಕ್ಕಲಿರಲೆವ್ವ ಮನಿಯಾಗ  ||

ಅಕಿ ನನ್ನ ಶಿವಾನಿ ಮಾತೀಲಿ ಶ್ಯಾನ್ಯಾಕಿ
ಮಾತ ಮಾತೀಗಿ ನಗುವಾಕಿ | ಶಿವಾನಿ
ಮಾತ ಬಲ್ಲವರ ಮಗಳವ್ವ  ||

ಅತ್ತರ ನನ ಕಂದನ ಮುತ್ತೆಲ್ಲಿ ಉದರ್ಯಾವ
ಸತ್ತೀಗಿ ಮಾನೆದ ಹೊಲದಾಗ |
ಅವರನ್ನ ಸುಪ್ಪಲಿ ಒಯ್ದ ಬಳತಂದ  ||

ಅತ್ತ ಕಾಡವನಲ್ಲ ಮತ್ತ ಬೇಡವನಲ್ಲ
ಮೆತ್ತನ್ನ ಎರಡು ಕೈ ಮುಟಗಿ (ಸ್ಯಾಂಡ್ವಿಚ್) ಕೊಟ್ಟರೆ
ಗಪ್ಪುಚಿಪ್ಪಾಗಿ ಮಲಗ್ಯಾನ  ||

ಯಾತರ್ಯಾತರ ಗಾಳಿ ಎಳೆಯ ತೋಟದ ಗಾಳಿ
ಸುತ್ತಲೂ ಗಾಳಿ ಸುಳಿಗಾಳಿ | ನನ ಕಂದನ
ನಿನ್ನ ತೊಟ್ಟಿಲ ಗಾಳಿ ಮನೆತುಂಬಾ  ||

ಅಳಬುರುಕ ಗಿಳುಬುರುಕ ಇದ ಎಂಥ ಮಗನವ್ವ
ಉಣಗೊದದ ರೊಟ್ಟಿ ಸುದಗೊದದ | ನನ ಮಗನ
ಎತ್ತಿ ಕೊಲ್ಲವರು ಯಾರಿಲ್ಲ  ||

ಮಾಳಿಗೆ ಮನೆ ಬೇಕ ಜೋಳಿಗೆ ಹಣ ಬೇಕ
ರಾಮದೇವರಂತ ಮಗ ಬೇಕ |
ನಮ್ಮನಿಗೆ ಜಾನಕಿಯಂತ ಸೊಸೆ ಬೇಕು  ||

ಉಪ್ಪರಿಗೆ ಮನೆ ಬೇಕ ಕೊಪ್ಪರಿಗೆ ಹಣ ಬೇಕ
ಕೃಷ್ಣದೇವರಂತ ಮಗ ಬೇಕ | ನನ ಸಮರ್ಥ
ನಮ್ಮನಿಗೆ ರುಕ್ಮಿಣಿಯಂತ ಸೊಸೆ ಬೇಕ  ||

ಸಂಗಮಕ ಹೋಗಾಕ ಸಂಗಾಟ ಮಗ ಬೇಕ
ತಂಬಿಗಿ ಹಿಡಿಯಾಕ ಸೋಸಿ ಬೇಕ |
ಕೂಡಲ ಸಂಗಮಕ ಹೋಗಿ ಬರಬೇಕ ||

ಬಾಲಕರಿಲ್ಲದ ಬಾಲಿದ್ಯಾತರ ಜನ್ಮ
ಬಾಡಿಗಿ ಎತ್ತು ದುಡಿಧಂಗ |
ಬಾಳೆಲಿ ಹಾಸುಂದ ಬೀಸಿ ಒಗೆಧಂಗ ||

ಹಸುಮಕ್ಕಳಾಡಿದರೆ ಹಸನವ್ವ ಅಂಗಳ
ದೆಸೆ ಮುಖದವನು ನನ ಕಂದ | ಆಡಿದರೆ

ತಾಯಿಲ್ದ ಮಕ್ಕಳಿಗೆ ಬಾಯಿಲ್ಲ ಸಿರಿಯಿಲ್ಲ
ಬಾ ಎಂದು ಕರಿವಾರು ಯಾರಿಲ್ಲದಾಯ್ತೆ ಅಬ್ಬಯ್ಯ
ಹಾಲ ಕುಡಿಸುವರ‍್ಯಾರು ಅನ್ನ ಉಣಿಸುವರ‍್ಯಾರು
ಓಡಿ ನಾವು ಬೀಳಾಲು ಎತ್ತುವರ‍್ಯಾರು ಅಬ್ಬಯ್ಯ  ||

ಕೂಸು ಇದ್ದ ಮನಿಗೆ ಬೀಸಣಿಕೆ ಯಾತಕ
ಕೂಸು ಕಂದಮ್ಮ ಒಳ-ಹೊರಗ
ಕೂಸು ಕಂದಮ್ಮ ಒಳ-ಹೊರಗ ಆಡಿದರ
ಬೀಸಣಿಕೆ ಗಾಳಿ ಸುಳಿದಾವ  ||

ಬೆಳಗಾಗಿ ನೆನೆದ್ದು ಯಾರ್ ಯಾರ ನೆನೆಯಾಲಿ
ಎಳ್ಳು ಜೀರಿಗೆ ಬೆಳಿಯೋ ಭೂಮಿತಾಯಿ
ಎದ್ದೊಂದು ಗಳಿಗೆ ನೆನೆದೇನು  ||

ತೊಟ್ಟಿಲ ಹೊತ್ಕೊಂಡು ತವರ್ಬಣ್ಣ ಉಟ್ಕೊಂಡು
ಅಪ್ಪ ಕೊಟ್ಟೆಮ್ಮೆ ಹೊಡ್ಕೊಂಡು! ತೌರೂರ
ತಿಟ್ಟಹತ್ತಿ ತಿರುಗಿ ನೋಡ್ಯಾಳೋ  ||

ಹೆಣ್ಣುಮಕ್ಕಳ ಕಳುಹಿ ಹೆಂಗಿದಿ ನನ ಹಡೆದವ್ವಾ
ಹನ್ನೆರಡಂಕನ ಪಡೆಸಾಲಿ
ಹನ್ನೆರಡು ಅಂಕನ ಪಡಸಾಲಿ ಒಳ ಹೊರಗ
ಹೆಣ್ಣು ಮಕ್ಕಳ ಉಲವಿಲ್ಲ  ||

ಆಡಿ ಬಾ ನನ ಕಂದ
ಅಂಗಾಲ ತೊಳದೇನ
ತೆಂಗಿನ ಕಾಯಿ ತಿಳಿ ನೀರು
ತೆಂಗಿನ ಕಾಯಿ ತಿಳಿ ನೀರ ತಕ್ಕೊಂಡು
ಕಂದಮ್ನ ಪಾದ ತೊಳದೇನ...||

         ಜಾನಪದದ ಹಾಡುಗಳು ಮುಂದುವರಿಯುವುವು


No comments:

Post a Comment