Saturday, March 16, 2024

HOLIKA POURNIMA. ಹೋಳಿ ಹಬ್ಬ

 ಹೋಲಿಕಾ ಪೌರ್ಣಮಾ

ಹೋಳಿ ದಹನದ ಕಥೆಯು ರಾಕ್ಷಸ ರಾಜ ಹಿರಣ್ಯ ಕುಶಿಪು ಹಾಗೂ ಅವನ ಮಗ ವಿಷ್ಣುವಿನ ಭಕ್ತ ಪ್ರಹ್ಲಾದನ ಸುತ್ತ ಕೇಂದ್ರಿಕೃತವಾಗಿದೆ. ಹಿರಣ್ಯಕಶಿಪು ಒಬ್ಬ ನಿರಂಕುಶ ಅಧಿಕಾರಿಯಾಗಿದ್ದು, ತನ್ನನ್ನು ತಾನು ವಿಶ್ವದಲ್ಲಿಯೇ ಅತ್ಯಂತ ಶಕ್ತಿಶಾಲಿ ಎಂದು ಕೊಂಡಿದ್ದನು ಮತ್ತು ಎಲ್ಲರೂ ಅವನನ್ನೇ ಪೂಜಿಸಿ ಆರಾಧಿಸಬೇಕೆಂದು ಒತ್ತಾಯಿಸುತ್ತಿದ್ದನು. ಆದರೆ ಆತನ ಮಗ ಪ್ರಹ್ಲಾದನೆ ಇದನ್ನು ನಿರಾಕರಿಸುತ್ತಾನೆ. ಅವನು ಭಗವಾನ ವಿಷ್ಣುವಿನ ಆರಾಧನೆಯನ್ನು ಮುಂದುವರೆಸುತ್ತಾನೆ, ಇದು ಅವನ ತಂದೆಯನ್ನು ಕೆರಳಿಸುತ್ತದೆ. ಅವನು ತನ್ನ ಮಗನನ್ನು ಕೊಲ್ಲುವ ಯೋಚನೆ ಮಾಡಿ, ತನ್ನ ಸಹೋದರಿ ಹೋಲಿಕಾಳ ಸಹಾಯ ಪಡೆಯುತ್ತಾನೆ. ಹೋಲಿಕಾಳಿಗೆ ಬೆಂಕಿಯಲ್ಲಿ ಸುಡದೆ ಇರುವ ವರ ಪ್ರಾಪ್ತವಿತ್ತು ಕೇವಲ ಜನ ಕಲ್ಯಾಣಕ್ಕಾಗಿ ಉಪಯೋಗ ಮಾಡಬೇಕಿತ್ತು ಆದರೇ ಹೋಲಿಕಾ ಮೋಸದಿಂದ ಪ್ರಹ್ಲಾದನನ್ನು ತನ್ನೊಂದಿಗೆ ಬೆಂಕಿಯಲ್ಲಿ ಕುಳ್ಳಿರಿಸಿಕೊಳ್ಳುತ್ತಾಳೆ, ಇದರಿಂದ ಅವನು ಬೆಂಕಿಯಲ್ಲಿ ಸುಟ್ಟು ಹೋಗಬಹುದು ಎಂದು ಅವಳು ಭಾವಿಸುತ್ತಾಳೆ. ಆದರೆ ಎಲ್ಲರೂ ಆಶ್ಚರ್ಯ ಪಡುವಂತೆ ಹೋಲಿಕಾಳೇ ಬೆಂಕಿಯಲ್ಲಿ ಸುಟ್ಟು ಹೋಗುತ್ತಾಳೆ, ಪ್ರಹ್ಲಾದ ಯಾವುದೇ ಜೀವ ಅಪಾಯವಿಲ್ಲದೆ ಬೆಂಕಿಯಿಂದ ಹೊರ ಬರುತ್ತಾನೆ. ಈ ಘಟನೆಯು ದುಷ್ಟರ ವಿರುದ್ಧ ಒಳ್ಳೆಯತನ ಎಂದಿಗೂ ಗೆಲ್ಲುತ್ತದೆ ಎಂಬುದನ್ನು ಸಂಕೇತಿಸುತ್ತದೆ. ಅಂದಿನಿಂದ ಇದನ್ನು ಹೋಳಿ ಹುಣ್ಣಿಮೆಯಂದು ಆಚರಿಸಿಕೊಂಡು ಬರಲಾಗುತ್ತಿದೆ.

      ಪೂರ್ವದಲ್ಲಿ ತಾರಕಾಸುರನೆಂಬ ರಾಕ್ಷಸನಿದ್ದನು. ಆತ ದುರಹಂಕಾರಿಯೂ ಹಾಗೂ ಕ್ರೂರಿಯೂ ಆಗಿದ್ದನು. ತಾರಕಾಸುರ ತನಗೆ ಸಾವು ಬರದಿರಲಿ ಎಂದು ತಪಸ್ಸು ಮಾಡುತ್ತಾನೆ. ಆಗ ಬ್ರಹ್ಮ ಪ್ರತ್ಯಕ್ಷನಾಗುತ್ತಾನೆ. ನನಗೆ ಮರಣ ಬಾರದಿರಲಿ, ಬಂದರೂ ಅದು ಶಿವನಿಗೆ ಜನಿಸಿದ ಮಗುವಿನಿಂದ ಬರಲಿ ಎಂಬ ವರವನ್ನು ಕೇಳುತ್ತಾನೆ. ತಾರಕಾಸುರನ ತಪ್ಪಸ್ಸನ್ನು ಮೆಚ್ಚಿ ಬ್ರಹ್ಮ ವರವನ್ನು ಕೊಡುತ್ತಾನೆ. ಆಗ ತನಗೆ ವರ ಸಿಕ್ಕಿದೆ ಎಂದು ತಾರಕಾಸುರ ಸೊಕ್ಕಿನಿಂದ ಮೆರೆಯುತ್ತಿರುತ್ತಾನೆ. ದುಷ್ಟ ಬುದ್ಧಿಯನ್ನು ತೋರುವ ಕಾರ್ಯ ಎಸೆಯುತ್ತಾನೆ.  ಇತ್ತ ಸಮಾಧಿಯಲ್ಲಿದ್ದ ಶಿವ, ಪಾರ್ವತಿಯ ಜೊತೆ ಹೊಂದಲು ಸಾದ್ಯವಿರಲಿಲ್ಲ. ಆಗ ದೇವತೆಗಳು ಶಿವನು ಪಾರ್ವತಿಯಲ್ಲಿ ಮೋಹ ಹೊಂದುವಂತೆ ಮಾಡಲು ಕಾಮನಲ್ಲಿ ಬೇಡಿದರು. ಕಾಮ ಅಂದರೆ (ಮನ್ಮಥ) ಮತ್ತು ಅವನ ಪತ್ನಿ ರತಿದೇವಿ ಈ ಸತ್ಕಾರ್ಯಕ್ಕೆ ಒಪ್ಪಿದರು. 

     ಈ ವೇಳೆಯಲ್ಲಿ ಸಮಾಧಿಯಲ್ಲಿದ್ದ ಶಿವನಿಗೆ ಹೂ ಬಾಣಗಳಿಂದ ಹೊಡೆದು ಸಮಾಧಿಯಿಂದ ಎಚ್ಚರಿಸಿದರು. ಇದರಿಂದ ಕುಪಿತಗೊಂಡ ಶಿವನು ತನ್ನ ಮೂರನೇ ಕಣ್ಣಿಂದ ಕಾಮನನ್ನು ಸುಟ್ಟು ಭಸ್ಮ ಮಾಡಿದನು. ರತಿದೇವಿ ದು:ಖದಿಂದ ಶಿವನಲ್ಲಿ ಪತಿಭಿಕ್ಷೆಯನ್ನು ಬೇಡಿದಳು. ಶಾಂತಗೊಂಡ ಶಿವನು ಪತ್ನಿಯೊಡನೆ ಮಾತ್ರ ಶರೀರಿಯಾಗುವಂತೆ ಕಾಮನಿಗೆ ವರ ಕೊಟ್ಟನು. ಲೋಕಕಲ್ಯಾಣಕ್ಕಾಗಿ ಪ್ರತಿಯೊಬ್ಬರ ಮನಸ್ಸಿನಲ್ಲೂ ಹುದುಗಿದ್ದ ಮನ್ಮಥನು ಅನಂಗನಾದ. ಈ ಘಟನೆ ನಡೆದದ್ದು ಫಾಲ್ಗುಣ ಶುದ್ಧ ಪೂರ್ಣಿಮೆಯಂದು. ಆದ್ದರಿಂದ ಈ ದಿನವನ್ನು “ಕಾಮನ ಹುಣ್ಣಿಮೆ”ಯಾಗಿ ಆಚರಿಸುತ್ತಾರೆ. ಪ್ರತಿ ಮನೆಯಲ್ಲೂ ಮನರಂಜಕವಾಗಿ, ರೋಚಕವಾಗಿ ಆಚರಿಸುವ ಪದ್ಧತಿ ಇದೆ.

        ತಳಿರು ತೋರಣಗಳಿಂದ ಮನೆ ಅಲಂಕರಿಸಿ ಕುಲದೇವರ ಪೂಜೆ ನೈವೇದ್ಯ ಮಾಡಿ ಮನೆಯ ಎಲ್ಲರೂ ಅಂಗಳಕ್ಕೆ ಬಂದು ಭೂಮಿ ಸ್ವಚ್ಛ ಗೊಳಿಸಿ, ನೀರು ಚಿಮುಕಿಸಿ ರಂಗೋಲಿ ಹಾಕಿ ಒಣಗಿದ ಸೊಪ್ಪುಗಳನ್ನು ಬೇಕಾಗದ ಹಳೆಯ ಕಟ್ಟಿಗೆಗಳು ಜೊತೆ ಬೆರಣಿ ಕುಳ್ಳುಗಳನ್ನು ಉಪಯೋಗಿಸಿ ಅಡುಗೆ ಮನೆಯ ಒಲೆಯಲ್ಲಿಯ ಬೆಂಕಿ ತಂದು ಹಚ್ಚಿ ಅರಿಷಿಣ ಕುಂಕುಮ ಹೂವು ಹಣ್ಣು ಧಾನ್ಯಗಳನ್ನು ಹಾಕಿ ಪೂಜಿಸಿ ಒಂದು ಹೋಳಿಗೆ ನೈವೇದ್ಯ ತೋರಿಸಿ ಅದೇ ಹೋಳಿಗೆ ಅಗ್ನಿಗೆ ಸಮರ್ಪಿಸಿ, ಚಿಕ್ಕ ಮಕ್ಕಳು ಹಿರಿಯರು ಹೋಳಿಯ ಸುತ್ತಲೂ ಪ್ರದಕ್ಷಿಣೆ ಹಾಕಿ ಬೊಬ್ಬೆ ಹೊಡೆಯುವ ರೂಢಿ ಉಂಟು 

         ಕೆಟ್ಟತನ ಎದುರು ಒಳ್ಳೆಯತನದ ವಿಜಯವಾಗುತ್ತದೆ ಎಂಬುದನ್ನು ಸಂಕೇತಿಸುತ್ತದೆ. ದುಷ್ಟಶಕ್ತಿಯ ನಾಶ ಮಾಡುವ ದುಷ್ಟ ಬುದ್ಧಿಯನ್ನು ಸುಟ್ಟುಹಾಕುವ ಉದ್ದೇಶದಿಂದ ಬೆಂಕಿ ಉರಿಸುವ ದ್ಯೋತಕ ಎನ್ನಬಹುದು. ಹೋಲಿಕಾಳ ಮರಣವು ದುಷ್ಟತನ ವಿರುದ್ಧ ಒಳ್ಳೆಯತನದ ವಿಜಯ ಹಾಗೂ ಪಾಪದ ಮೇಲೆ ಸದಾಚಾರದ ವಿಜಯವನ್ನು ಸಂಕೇತಿಸುತ್ತದೆ.

ವಿಚಿತ್ರ ವೇಷ ಧರಿಸಿ ಮೋಜು ಮಾಡುವ ಕಾರ್ಯಗಳು ಸಾಮೂಹಿಕವಾಗಿ ನಡೆಸುವ ಪರಂಪರೆಯೂ ಇದೆ.  ಹೋಳಿ ದಹನವು ಚಳಿಗಾಲದ ಅಂತ್ಯ ಹಾಗೂ ವಸಂತಕಾಲದ ಆರಂಭವನ್ನೂ ಸಹ ಸೂಚಿಸುತ್ತದೆ. ಜನರೆಲ್ಲ ಒಟ್ಟಾಗಿ ಸೇರಿ ಸಂಭ್ರಮದಿಂದ ವಸಂತಕಾಲವನ್ನು ಅನೇಕ ಬಣ್ಣಗಳಿಂದ ಕೂಡಿದ ಜೀವನವನ್ನು ಪ್ರತಿ ನಿಧಿಸುವ ಸ್ವಾಗತಿಸುವ ಹಬ್ಬವೂ ಹೌದು ಈ ಹಬ್ಬ ಧಾರ್ಮಿಕ, ಸಾಂಸ್ಕೃತಿಕ ಪ್ರಾಮುಖ್ಯತೆಯನ್ನೂ ಹೊಂದಿದೆ. ಇದರೊಂದಿಗೆ ಹೋಳಿ ದಹನವು ಪರಿಸರ ಸ್ವಚ್ಛತೆಯ ಪ್ರಾಮುಖ್ಯವನ್ನೂ ಹೊಂದಿದೆ. ಈ ದಿನದಂದು ಒಣ ಎಲೆ ಹಾಗೂ ಕೊಂಬೆಗಳಿಂದ ಹೋಲಿ ದಹನಕ್ಕಾಗಿ ಬೆಂಕಿ ಹಚ್ಚಲಾಗುತ್ತದೆ.  ಹೋಳಿ ದಿನವೂ ವೈಯಕ್ತಿಕವೂ ಸಾರ್ವಜನಿಕವಾಗಿಯೂ ನಡೆಸುವ ಹಬ್ಬ. ಇದು ಪರಿಸರ ಶುದ್ಧೀಕರಣ ಹಾಗೂ ರೋಗಗಳು ಬಾರದಂತೆ ತಡೆಯುವ ವಿಧಾನವೂ ಹೌದು  ಬೆಂಕಿ ಹೊತ್ತಿಕೊಂಡ ಕುಳ್ಳುಗಳ ಮೇಲೆ ಕಡಲೆಗಳೂ ಕೊಬ್ಬರಿಯನ್ನು ಸುಟ್ಟು ತಿನ್ನುವ ಪರಿಪಾಠವಿದೆ. ಇದರಿಂದ ಹಲ್ಲು ಗಟ್ಟಿಯಾಗಿ ಪಚನ ಶಕ್ತಿಯು ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ ಹುಣ್ಣಿಮೆಯ ಮರುದಿನ ಧೂಲೀವಂದನ,  ಇದು ಭೂಮಿ ತಾಯಿಯ ಮಣ್ಣಿನ ಸುವಾಸನೆಯನ್ನು ಆರಾಧಿಸುವ ಪದ್ಧತಿ




No comments:

Post a Comment