Wednesday, June 12, 2024

Madhwanama ಜಯ ಜಯ ಜಗತ್ರಾಣ

      ಮಧ್ವನಾಮ  ಜಯ ಜಯ ಜಗತ್ರಾಣ 



ಜಯ ಜಯ ಜಗತ್ರಾಣ
ಜಯ ಜಯ ಜಗತ್ರಾಣ 
ಜಗದೊಳಗೆ ಸುತ್ರಾಣ

ಅಖಿಳ ಗುಣ ಸದ್ಧಾಮ ಮಧ್ವನಾಮ || ಪ. ||

ಆವ ಕಚ್ಚಪ ರೂಪದಿಂದ 
ಲಂಡೋದಕವ ಓವಿ ಧರಿಸಿದ ಶೇಷಮೂರುತಿಯನು 
ಆವವನ ಬಳಿ ವಿಡಿದು ಹರಿಯ ಸುರರೆಯ್ದುವರು 
ಆ ವಾಯು ನಮ್ಮ ಕುಲ ಗುರುರಾಯನು || 1 ||

ಆವವನು ದೇಹದೊಳಗಿರಲು ಹರಿ ನೆಲಸಿಹನು 
ಆವವನು ತೊಲಗೆ ಹರಿ ತಾ ತೊಲಗುವ 
ಆವವನು ದೇಹದ ಒಳ ಹೊರಗೆ ನಿಯಾಮಕನು 
ಆ ವಾಯು ನಮ್ಮ ಕುಲ ಗುರುರಾಯನು || 2 ||

ಕರುಣಾಭಿಮಾನಿ ಸುರರು ದೇಹವ ಬಿಡಲು 
ಕುರುಡ ಕಿವುಡ ಮೂಕನೆಂದೆನಿಸುವ 
ಪರಮ ಮುಖ್ಯಪ್ರಾಣ ತೊಲಗಲಾ ದೇಹವನು 
ಅರಿತು ಪೆಣವೆಂದು ಪೇಳುವರು ಬುಧ ಜನ || 3 ||

ಸುರರೊಳಗೆ ನರರೊಳಗೆ ಸರ್ವ ಭೂತಗಳೊಳಗೆ 
ಪರತರನೆನಿಸಿ ನಿಯಾಮಿಸಿ ನೆಲಸಿಹ 
ಹರಿಯನಲ್ಲದೆ ಬಗೆಯ ಅನ್ಯರನು ಲೋಕದೊಳು 
ಗುರು ಕುಲ ತಿಲಕ ಮುಖ್ಯ ಪವಮಾನನು || 4 ||

ತ್ರೇತೆಯಲಿ ರಘುಪತಿಯ ಸೇವೆ ಮಾಡುವೆನೆಂದು 
ವಾತ ಸುತ ಹನುಮಂತನೆಂದೆನಿಸಿದ
ಪೋತ ಭಾವದಿ ತರಣಿ ಬಿಂಬಕ್ಕೆ ಲಂಘಿಸಿದ 
ಈತಗೆಣೆಯಾರು ಮೂರ್ಲೋಕದೊಳಗೆ || 5 ||

ತರಣಿ ಗಭಿಮುಖನಾಗಿ ಶಬ್ದ ಶಾಸ್ತ್ರವ ರಚಿಸಿ 
ಉರವಣಿಸಿ ಹಿಂದು ಮುಂದಾಗಿ 
ನಡೆದ ಪರಮ ಪವಮಾನಸುತ ಉದಯಾಸ್ತ 
ಶೈಲಗಳಭರದಿಯೈದಿದಗೀತಗುಪಮೆ ಉಂಟೇ || 6 ||

ಅಖಿಳ ವೇದಗಳ ಸಾರ ಪಠಿಸಿದನು ಮುನ್ನಲ್ಲಿ 
ನಿಖಿಳ ವ್ಯಾಕರಣಗಳ ಇವ ಪಠಿಸಿದ 
ಮುಖದಲ್ಲಿ ಕಿಂಚಿದಪ ಶಬ್ದ ಇವಗಿಲ್ಲೆಂದು
ಮುಖ್ಯಪ್ರಾಣನನು ರಾಮನನುಕರಿಸಿದ || 7 ||

ತರಣಿ ಸುತನನು ಕಾಯ್ದು ಶರಧಿಯನು 
ನೆರೆ ದಾಟಿ ಧರಣಿ ಸುತೆಯಳ ಕಂಡು ದನುಜರೊಡನೆ 
ಭರದಿ ರಣವನೆ ಮಾಡಿ ಗೆಲಿದು ದಿವ್ಯಾಸ್ತ್ರಗಳ
ಉರುಹಿ ಲಂಕೆಯ ಬಂದ ಹನುಮಂತನು || 8 ||

ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿ 
ಶರಧಿಯನು ಕಟ್ಟಿ ಬಲು ರಕ್ಕಸರನು ಒರಸಿ ರಣದಲಿ 
ದಶ ಶಿರನ ಹುಡಿ ಗುಟ್ಟಿದ
ಮೆರೆದ ಹನುಮಂತ ಬಲವಂತ ಧೀರ || 9 ||

ಉರಗ ಬಂಧಕೆ ಸಿಲುಕಿ ಕಪಿವರರು ಮೈಮರೆಯೆ 
ತರಣಿ ಕುಲ ತಿಲಕನಾಜ್ಞೆಯ ತಾಳಿದಗಿರಿ ಸಹಿತ 
ಸಂಜೀವನವ ಕಿತ್ತು ತಂದಿತ್ತ ಹರಿವರಗೆ 
ಸರಿಯುಂಟೆ ಹನುಮಂತಗೆ || 10 ||

ವಿಜಯ ರಘುಪತಿ ಮೆಚ್ಚಿ ಧರಣಿ ಸುತೆಯಳಿಗೀಯೆ 
ಭಜಿಸಿ ಮೌಕ್ತಿಕದ ಹಾರವನು ಪಡೆದ 
ಅಜ ಪದವಿಯನು ರಾಮ ಕೊಡುವೆನೆನೆ ಹನುಮಂತ 
ನಿಜ ಭಕುತಿಯನೆ ಬೇಡಿ ವರವ ಪಡೆದ || 11 ||

ಆ ಮಾರುತನೆ ಭೀಮನೆನಿಸಿ ದ್ವಾಪರದಲ್ಲಿ 
ಸೋಮ ಕುಲದಲಿ ಜನಿಸಿ ಪಾರ್ಥನೊಡನೆ 
ಭೀಮ ವಿಕ್ರಮ ರಕ್ಕಸರ ಮುರಿದೊಟ್ಟಿದ 
ಆ ಮಹಿಮನಮ್ಮ ಕುಲ ಗುರು ರಾಯನು || 12 ||

ಕರದಿಂದ ಶಿಶು ಭಾವನಾದ ಭೀಮನ ಬಿಡಲು. 
ಗಿರಿ ವಡೆದು ಶತ ಶೃಂಗವೆಂದೆನಿಸಿತು 
ಹರಿಗಳ ಹರಿಗಳಿಂ ಕರಿಗಳ ಕರಿಗಳಿಂ ಅರೆವ ವೀರನಿಗೆ 
ಸುರ ನರರು ಸರಿಯೇ || 13 ||

ಕುರುಪ ಗರಳವನಿಕ್ಕೆ ನೆರೆ ಉಂಡು ತೇಗಿ 
ಹಸಿದುರಗಗಳ ಮ್ಯಾಲೆ ಬಿಡಲದನೊರಸಿದ 
ಅರಗಿನರಮನೆಯಲ್ಲಿ ಉರಿಯನಿಕ್ಕಲು ವೀರ ಧರಿಸಿ 
ಜಾಹ್ನವಿಗೊಯ್ದ ತನ್ನನುಜರ || 14 ||

ಅಲ್ಲಿರ್ದ ಬಕ ಹಿಡಿಂಬಕರೆಂಬ ರಕ್ಕಸರನಿಲ್ಲದೊರಸಿದ 
ಲೋಕ ಕಂಟಕರನು ಬಲ್ಲಿದಸುರರ ಗೆಲಿದು 
ದ್ರೌಪದಿಯ ಕೈವಿಡಿದು 
ಎಲ್ಲ ಸುಜನರಿಗೆ ಹರುಷವ ತೋರಿದ || 15 ||

ರಾಜಕುಲ ವಜ್ರನೆನಿಸಿದ ಮಾಗಧನ ಸೀಳಿ 
ರಾಜಸೂಯ ಯಾಗವನು ಮಾಡಿಸಿದನು 
ಆಜಿಯೊಳು ಕೌರವರ ಬಲವ ಸವರುವೆನೆಂದು 
ಮೂಜಗವರಿಯೆ ಕಂಕಣ ಕಟ್ಟಿದ || 16 ||

ಮಾನನಿಧಿ ದ್ರೌಪದಿಯ ಮನದಿಂಗಿತವನರಿತು 
ದಾನವರ ಸವರಬೇಕೆಂದು ಬ್ಯಾಗಕಾನನವ ಪೊಕ್ಕು 
ಕಿಮ್ಮೀರಾದಿಗಳ ತರಿದು
ಮಾನಿನಿಗೆ ಸೌಗಂಧಿಕವನೆ ತಂದ || 17 ||

ದುರುಳ ಕೀಚಕನು ತಾಂ ದ್ರೌಪದಿಯ 
ಚಲುವಿಕೆಗೆ ಮರುಳಾಗಿ ಕರೆ ಕರೆಯ ಮಾಡಲವನಾ
ಗರಡಿ ಮನೆಯಲ್ಲಿ ವರೆಸಿ ಅವನನ್ವಯದ ಕುರುಪನಟ್ಟಿದ 
ಮಲ್ಲ ಕುಲವ ಸದೆದ || 18 ||

ಕೌರವರ ಬಲ ಸವರಿ ವೈರಿಗಳ ನೆಗ್ಗೊತ್ತಿ 
ಓರಂತೆ ಕೌರವನ ಮುರಿದು ಮೆರೆದ 
ವೈರಿ ದುಶ್ಯಾಸನ್ನ ರಣದಲ್ಲಿ ಎಡೆ ಗೆಡಹಿ 
ವೀರ ನರಹರಿಯ ಲೀಲೆಯ ತೋರಿದ || 19 ||

ಗುರು ಸುತನು ಸಂಗರದಿ ನಾರಾಯಣಾಸ್ತ್ರವನು 
ಉರವಣಿಸಿ ಬಿಡಲು ಶಸ್ತ್ರವ ಬಿಸುಟರು 
ಹರಿ ಕೃಪೆಯ ಪಡೆದಿರ್ದ ಭೀಮ ಹುಂಕಾರದಲಿ 
ಹರಿಯ ದಿವ್ಯಾಸ್ತ್ರವನು ನೆರೆ ಅಟ್ಟಿದ || 20 ||

ಚಂಡ ವಿಕ್ರಮನು ಗದೆಗೊಂಡು ರಣದಿ 
ಭೂಮಂಡಲದೊಳಿದಿರಾಂತ ಖಳರನೆಲ್ಲಾಹಿಂಡಿ 
ಬಿಸುಟಿಹ ವೃಕೋದರನ ಪ್ರತಾಪವನುಕಂಡು
ನಿಲ್ಲುವರಾರು ತ್ರಿಭುವನದೊಳು || 21 ||

ದಾನವರು ಕಲಿಯುಗದೊಳವತರಿಸಿ ವಿಬುಧರೊಳು
ವೇನನ ಮತ ವನರುಹಲದನರಿತು 
ಜ್ಞಾನಿ ತಾ ಪವಮಾನ ಭೂತಳದೊಳವತರಿಸಿ 
ಮಾನನಿಧಿ ಮಧ್ವಾಖ್ಯನೆಂದೆನಿಸಿದ || 22 ||

ಅರ್ಭಕತನದೊಳೈದಿ ಬದರಿಯಲಿ 
ಮಧ್ವಮುನಿ ನಿರ್ಭಯದಿ ಸಕಳ ಶಾಸ್ತ್ರವ ಪಠಿಸಿದ 
ಉರ್ವಿಯೊಳು ಮಾಯೆ ಬೀರಲು ತತ್ವ ಮಾರ್ಗವನು 
ಓರ್ವ ಮಧ್ವಮುನಿ ತೋರ್ದ ಸುಜನರ್ಗೆ || 23 ||

ಸರ್ವೇಶ ಹರಿ ವಿಶ್ವ ಎಲ್ಲ ತಾ ಪುಸಿಯೆಂಬ 
ದುರ್ವಾದಿಗಳ ಮತವ ನೆರೆ ಖಂಡಿಸಿ 
ಸರ್ವೇಶ ಹರಿ ವಿಶ್ವ ಸತ್ಯವೆಂದರುಹಿ
ದಾಶರ್ವಾದಿ ಗೀರ್ವಾಣ ಸಂತತಿಯಲಿ || 24 ||

ಬದರಿಕಾಶ್ರಮಕೆ ಪುನರಪಿಯೈದಿ ವ್ಯಾಸಮುನಿ 
ಪದಕೆರಗಿ ಅಖಿಳ ವೇದಾರ್ಥಗಳನು 
ಪದುಮನಾಭನ ಮುಖದಿ ತಿಳಿದು 
ಬ್ರಹ್ಮತ್ವಯ್ಯೆದಿದ ಮಧ್ವಮುನಿರಾಯಗಭಿವಂದಿಪೆ || 25 ||

ಜಯ ಜಯತು ದುರ್ವಾದಿ ಮತ 
ತಿಮಿರ ಮಾರ್ತಾಂಡ ಜಯ ಜಯತು ವಾದಿ ಗಜ ಪಂಚಾನನ 
ಜಯ ಜಯತು ಚಾರ್ವಾಕ ಗರ್ವ ಪರ್ವತ ಕುಲಿಶ 
ಜಯ ಜಯ ಜಗನ್ನಾಥ ಮಧ್ವನಾಥ || 26 ||

ತುಂಗ ಕುಲ ಗುರು ವರನ ಹೃತ್ಕಮಲದಲಿ ನಿಲಿಸಿ 
ಭಂಗ ವಿಲ್ಲದೆ ಸುಖದ ಸುಜನಕೆಲ್ಲ 
ಹಿಂಗದೆ ಕೊಡುವ ನಮ್ಮ ಮಧ್ವಾಂತರಾತ್ಮಕ 
ರಂಗವಿಠಲನೆಂದು ನೆರೆ ಸಾರಿರೈ || 27 ||

*“ಮಧ್ವನಾಮ” ಕೃತಿಗೆ
ಶ್ರೀ ಜಗನ್ನಾಥದಾಸರ ಫಲಶ್ರುತಿ

ಸೋಮ ಸೂರ್ಯೋಪ ರಾಗದಿ 
ಗೋಸಹಸ್ರಗಳ ಭೂಮಿ ದೇವರಿಗೆ 
ಸುರ ನದಿಯ ತೀರದಿ ಶ್ರೀಮುಕುಂದಾರ್ಪಣವೆನುತ 
ಕೊಟ್ಟ ಫಲಮಕ್ಕುಈ ಮಧ್ವನಾಮ ಬರೆದೋದಿದರ್ಗೆ || 1 ||

ಪುತ್ರರಿಲ್ಲದವರು ಸತ್ಪುತ್ರರೈದುವರು 
ಸರ್ವತ್ರದಲಿ ದಿಗ್ವಿಜಯವಹುದು 
ಸಕಲಶತ್ರುಗಳು ಕೆಡುವರಪಮೃತ್ಯು ಬರಲಂಜವುದು 
ಸೂತ್ರ ನಾಮಕನ ಸಂಸ್ತುತಿ ಮಾತ್ರದಿ || 2 ||

ಶ್ರೀಪಾದರಾಯ ಪೇಳಿದ 
ಮಧ್ವನಾಮ ಸಂತಾಪ ಕಳೆದಖಿಳ 
ಸೌಖ್ಯವ ನೀವುದು ಶ್ರೀಪತಿ ಜಗನ್ನಾಥವಿಠಲನ 
ತೋರಿ ಭವಕೂಪಾರದಿಂದ ಕಡೆ ಹಾಯಿಸುವುದು || 3 ||

ಶ್ರೀ ಶ್ರೀಪಾದರಾಯರ ಕೃತಿ

No comments:

Post a Comment