ಬಾರ್ಬರೀಕ
ಬರ್ಬರೀಕ ಭೀಮಸೇನನ ಮೊಮ್ಮಗ. ಭೀಮಸೇನನ ಪುತ್ರ ಘಟೋತ್ಕಚನಿಗೆ ಅಹಿಲವತಿ ಎಂಬ ಪತ್ನಿಯಲ್ಲಿ ಹುಟ್ಟಿದ ಮಗ.
ಬಿಲ್ವಿದ್ಯೆಯಲ್ಲಿ ಪ್ರವೀಣ.. ತಪಶ್ಚರ್ಯ ನಡೆಸಿ ಮಹಾದೇವನಿಂದ ವರಗಳನ್ನು ಪಡೆದಿದ್ದ ಕೂಡಾ. ಬಿಲ್ಗಾರಿಕೆಯಲ್ಲಿ ಕರ್ಣಾರ್ಜುನರೂ ಇವನನ್ನು ಸರಿಗಟ್ಟಲಾರರು ಅನ್ನುವಷ್ಟು ಹಬ್ಬಿತ್ತು ಬರ್ಬರೀಕನ ಖ್ಯಾತಿ.
ಇಂಥಾ ಬರ್ಬರೀಕ ಕುರುಕ್ಷೇತ್ರ ಯುದ್ಧ ಘೋಷಣೆಯಾದಾಗ ತಾನೂ ಯುದ್ಧದಲ್ಲಿ ಪಾಲ್ಗೊಳ್ಳುವೆನೆಂದು ರಣಾಂಗಣಕ್ಕೆ ಬರುತ್ತಾನೆ. ಆಗ ಕೃಷ್ಣ ಯುದ್ಧದ ತಯಾರಿ ನಡೆಸುತ್ತಾ, “ಕುರುಕ್ಷೇತ್ರ ಯುದ್ಧ ಮುಗಿಯಲು ಸುಮಾರು ಎಷ್ಟು ದಿನಗಳು ಬೇಕಾಗಬಹುದು?” ಎಂದು ಕೌರವ – ಪಾಂಡವ ಪ್ರಮುಖರನ್ನು ಕೇಳುತ್ತಾನೆ. ಇದಕ್ಕೆ ಉಭಯ ಬಣಗಳ ಮಹಾರಥಿಗಳು ಇಪ್ಪತ್ತನಾಲ್ಕು, ಇಪ್ಪತ್ತೈದು , ಇಪ್ಪತ್ತಾರು , ಹೀಗೆ ತಮಗೆ ತೋಚಿದಷ್ಟು ದಿನಗಳನ್ನು ಹೇಳುತ್ತಾರೆ. ಆದರೆ ಬರ್ಬರೀಕ, “ಕುರುಕ್ಷೇತ್ರ ಯುದ್ಧ ಮುಗಿಸಲು ಕೆಲವು ನಿಮಿಷಗಳು ಸಾಕು” ಅಂದುಬಿಡುತ್ತಾನೆ.
ಆಗ ಕೃಷ್ಣ, “ನಿನಗೆ ಕುರುಕ್ಷೇತ್ರ ಯುದ್ಧದಲ್ಲಿ ಕೌರವರು ಹಾಗೂ ಪಾಂಡವರ ಬಳಿ ಎಷ್ಟು ಅಕ್ಷೋಹಿಣಿ ಸೈನ್ಯಗಳಿವೆ ಎಂದು ತಿಳಿದಿದೆಯೇ? ಅಷ್ಟೊಂದು ಸೈನ್ಯವನ್ನು ಕೆಲವು ನಿಮಿಷಗಳಲ್ಲಿ ಹೇಗೆ ಧ್ವಂಸ ಮಾಡಲು ಸಾಧ್ಯ !?” ಎಂದು ಪ್ರಶ್ನಿಸುತ್ತಾನೆ.
ಇದಕ್ಕೆ ಉತ್ತರವಾಗಿ, “ ಕೃಷ್ಣ ಪರಮಾತ್ಮ, ನನಗೆ ಪರಶಿವನ ಅನುಗ್ರಹದಿಂದ ಅದ್ಭುತವಾದ ಮೂರು ಬಾಣಗಳು ದೊರಕಿವೆ. ಈ ಮೂರು ಬಾಣಗಳನ್ನು ಎಷ್ಟು ಬಾರಿಯಾದರೂ ಉಪಯೋಗಿಸಬಹುದು. ಒಮ್ಮೆ ಬಿಟ್ಟ ಬಾಣ, ತನ್ನ ಗುರಿಯನ್ನು ತಲುಪಿ, ಕೆಲಸವನ್ನು ಮುಗಿಸಿ, ಪುನಃ ಅಗ್ನಿ ದೇವತೆಯಿಂದ ಕೊಡಲ್ಪಟ್ಟಿರುವ ನನ್ನ ಬತ್ತಳಿಕೆಗೆ ಬಂದು ಸೇರುತ್ತದೆ. ಈ ಬಾಣಗಳ ವಿಶೇಷತೆ ಹೇಳುತ್ತೇನೆ ಕೇಳು. ಮೊದಲನೆಯ ಬಾಣವು, ನಾನು ನನ್ನ ಸಂಕಲ್ಪಕ್ಕೆ ಅನುಗುಣವಾಗಿ ಯಾರ ಮೇಲೆ ಪ್ರಯೋಗವಾಗಬೇಕೆಂದು ಗುರುತಿಸುತ್ತದೆ. ಎರಡನೆಯ ಬಾಣವು, ಶತ್ರು ಪಾಳಯದಲ್ಲಿ ನಾನು ಯಾರನ್ನು ನಾಶ ಮಾಡಲು ಇಚ್ಛಿಸುವುದಿಲ್ಲವೋ ಅವುಗಳನ್ನು ಗುರುತು ಮಾಡುತ್ತದೆ. ಮತ್ತು ಮೂರನೆ ಬಾಣವು. ಮೊದಲನೆಯ ಬಾಣ ಗುರುತು ಮಾಡಿದ ವಸ್ತು, ವ್ಯಕ್ತಿಗಳನ್ನು ಒಂದೇ ಏಟಿಗೆ ಕ್ಷಣಾರ್ಧದಲ್ಲಿ ನಾಶ ಮಾಡುತ್ತದೆ. ಜೊತೆಗೆ ಎರಡನೆಯ ಬಾಣ ಗುರುತು ಮಾಡಿದ ವಸ್ತು, ವ್ಯಕ್ತಿಗಳಿಗೆ ಯಾವುದೇ ತೊಂದರೆ ಆಗದಂತೆ ರಕ್ಷಿಸುತ್ತದೆ. ಈ ಎಲ್ಲ ಕ್ರಿಯೆಯಗಳು ಕೇವಲ ಹಲವು ನಿಮಿಷಗಳಲ್ಲಿ ನಡೆದುಹೋಗುವುದು. ಆದ್ದರಿಂದ ನನ್ನ ಉತ್ತರ ಸರಿಯಾಗಿದೆ ಎಂದು ದೃಢವಾಗಿ ನಂಬಿದ್ದೇನೆ” ಅನ್ನುತ್ತಾನೆ ಬಾರ್ಬರೀಕ.
ಬಾರ್ಬರೀಕನ ಉತ್ತರ ಕೇಳಿ ಶ್ರೀಕೃಷ್ಣನಿಗೆ ಅವನನ್ನು ಪರೀಕ್ಷಿಸುವ ಮನಸ್ಸಾಗುತ್ತದೆ. “ಹಾಗಾದರೆ, ಈ ಆಲದ ಮರದಲ್ಲಿರುವ ಎಲ್ಲ ಎಲೆಗಳನ್ನು ನಿನ್ನ ಮೊದಲನೆಯ ಬಾಣದಿಂದ ಗುರುತಿಸಿ, ನಂತರದ ಬಾಣದಿಂದ ಅವುಗಳನ್ನು ಒಟ್ಟುಗೂಡಿಸಿ ನಾಶ ಮಾಡು ನೋಡೋಣ?” ಎಂದು ಸವಾಲು ಹಾಕುತ್ತಾನೆ.
ಅದರಂತೆ ಬರ್ಬರೀಕ ಮರದ ಎಲೆಗಳನ್ನು ಗುರುತು ಮಾಡಿ ಬಾಣ ಹೂಡುತ್ತಾನೆ. ಅದರ ನಡುವೆ ಕೃಷ್ಣ ಗುರುತಾದ ಒಂದು ಎಲೆಯನ್ನು ತನ್ನ ಪಾದದಡಿ ಮುಚ್ಚಿಟ್ಟುಕೊಂಡುಬಿಡುತ್ತಾನೆ. ಬಾರ್ಬರೀಕ ಬಿಟ್ಟ ಬಾಣ ಮರದ ಎಲೆಗಳನ್ನೆಲ್ಲ ಸುಟ್ಟು, ಅನಂತರ ಕೃಷ್ಣನ ಪಾದದಡಿ ಬರುತ್ತದೆ. ಕೃಷ್ಣ ಬೆರಗಿನಿಂದ ಪಾದವೆತ್ತಿ ಎಲೆಯನ್ನು ತಲುಪಲು ಅವಕಾಶ ನೀಡುತ್ತಾನೆ. ಬಾಣ ಅದನ್ನೂ ಸುಟ್ಟುಹಾಕುತ್ತದೆ. ಇದರಿಂದ ಕೃಷ್ಣನಿಗೆ ಬರ್ಬರೀಕನ ಸಾಮರ್ಥ್ಯ ಅರಿವಾಗುತ್ತದೆ. ಆದರೆ ಇಂಥಾ ಅನುಗ್ರಹಿತ ಪರಾಕ್ರಮಿ ಯಾರ ಬಣದಲ್ಲಿ ಯುದ್ಧ ಮಾಡಬಹುದು ಎಂದು ಯೋಚಿಸುತ್ತಾ ಬಾರ್ಬರೀಕನನ್ನೇ ಕೇಳುತ್ತಾನೆ. ಅದಕ್ಕೆ ಉತ್ತರವಾಗಿ ಬಾರ್ಬರೀಕ, “ನಾನು ನನ್ನ ತಾಯಿ, ಹಾಗೂ ನನ್ನ ಗುರುಗಳಿಗೆ ನೀಡಿದ ವಾಗ್ದಾನದಂತೆ, ಯುದ್ಧದಲ್ಲಿ ಯಾವ ಸೈನ್ಯವು ದುರ್ಬಲವೋ ಅವರ ಜೊತೆಗೂಡಿ ಯುದ್ಧ ಮಾಡುತ್ತೇನೆ. ಬಲಿಷ್ಠ ಸೈನ್ಯದ ಪರವಹಿಸುವುದಿಲ್ಲ” ಅನ್ನುತ್ತಾನೆ.
ಸಂಖ್ಯೆಯಲ್ಲಿ ದೊಡ್ಡದಿದ್ದರೂ ಕೌರವರ ಸೇನೆಯೇ ದುರ್ಬಲ ಸೇನೆ. ಬರ್ಬರೀಕ ಕೌರವರ ಪಾಳಯಕ್ಕೆ ಹೋದರೆ ಪಾಂಡವರ ನಾಶ ಖಚಿತ ಎಂದು ಯೋಚಿಸಿದ ಕೃಷ್ಣ ಇದಕ್ಕೇನಾದರೂ ಮಾಡಬೇಕು ಎಂದು ಯೋಚಿಸುತ್ತಾನೆ. ಮತ್ತು, “ಎಲೈ ಬರ್ಬರಿಕನೇ, ನಿನ್ನ ಮಾತೃ ಭಕ್ತಿ, ಗುರು ಭಕ್ತಿ, ಶೌರ್ಯ, ಪರಾಕ್ರಮಗಳನ್ನು ಮೆಚ್ಚಿದ್ದೇನೆ. ನೀನು ಸಮಾಜದ ಉದ್ಧಾರಕ್ಕಾಗಿ ಯಾವುದಾದರೂ ವರವನ್ನು ಕೇಳು, ಅನುಗ್ರಹಿಸುತ್ತೇನೆ” ಎಂದು ಬರ್ಬರೀಕನಿಗೆ ಹೇಳುತ್ತಾನೆ.
ಇದಕ್ಕೆ ಉತ್ತರವಾಗಿ ಬಾರ್ಬರೀಕ, “ಭಗವಂತ! ನನಗೆ ಯಾವುದೇ ಅಪೇಕ್ಷೆಗಳಿಲ್ಲ. ನನ್ನಿಂದ ಸಮಾಜಕ್ಕೆ ಉಪಕಾರ ಮತ್ತು ಧರ್ಮವನ್ನು ಕಾಪಾಡುವ ಯಾವ ಕೆಲಸವಾದರನ್ನೂ ನೀಡು. ನಿನ್ನ ಆಜ್ಞೆ ಎಂದು ಸ್ವೀಕರಿಸಿ ನಡೆಸುತ್ತೇನೆ” ಅನ್ನುತ್ತಾನೆ.
ತಡಮಾಡದೆ ಶ್ರೀಕೃಷ್ಣ, “ಹಾಗಾದರೆ ನೀನು ನಿನ್ನ ಶಿರಸ್ಸನ್ನು ಕತ್ತರಿಸಿ ಕೊಡಬಲ್ಲೆಯಾ?” ಎಂದು ಕೇಳಿಬಿಡುತ್ತಾನೆ.
ಯಾವುದೇ ಗೊಂದಲವಿಲ್ಲದೆ, ಮುಗುಳ್ನಗುತ್ತಾ “ನನ್ನ ಶಿರಚ್ಛೇದನದಿಂದ ಧರ್ಮಕ್ಕೆ ಜಯ ಸಿಗುವುದೇ ಆದಲ್ಲಿ ಅದಕ್ಕೂ ನಾನು ಸಿದ್ಧ. ಆದರೆ ನನ್ನದೊಂದು ಮನವಿ. ನಾನು, ಈ ಕುರುಕ್ಷೇತ್ರ ಯುದ್ಧವನ್ನು ಸಂಪೂರ್ಣವಾಗಿ ನೋಡಲು ಅವಕಾಶ ಕಲ್ಪಿಸು” ಅನ್ನುತ್ತಾನೆ ಬರ್ಬರೀಕ.
“ ತಥಾಸ್ತು” ಎಂದು ಹರಸಿದ ಶ್ರೀಕೃಷ್ಣ, ತನ್ನ ಸುದರ್ಶನ ಚಕ್ರದಿಂದ ಬರ್ಬರೀಕನ ಶಿರಚ್ಛೇದ ಮಾಡುತ್ತಾನೆ. ಮತ್ತು ಆ ಶಿರವು ಕುರುಕ್ಷೇತ್ರ ರಣಾಂಗಣದ ಬಳಿ ಎತ್ತರದ ಗುಡ್ಡೆಯ ಮೇಲೆ ಬೀಳುವಂತೆ ಮಾಡುತ್ತಾನೆ. ಬರ್ಬರೀಕನ ಶಿರಸ್ಸು 18 ದಿನಗಳ ಕಾಲ ಅಲ್ಲಿಂದಲೇ ಯುದ್ಧವನ್ನು ವೀಕ್ಷಿಸುತ್ತದೆ.
ಯುದ್ಧ ಮುಗಿದ ಮೇಲೆ ಅವನ ಬಳಿ ಬಂದ ಶ್ರೀಕೃಷ್ಣ, “ಬರ್ಬರೀಕ, ಕುರುಕ್ಷೇತ್ರ ಯುದ್ಧದಲ್ಲಿ ಕೌರವರು ಸಂಪೂರ್ಣ ನಾಶವಾದರು. ನಿನ್ನ ಪ್ರಕಾರ ಪಾಂಡವರು ಯುದ್ಧದಲ್ಲಿ ಜಯಗಳಿಸಲು ಕಾರಣವೇನು? ಯಾರ ಪರಾಕ್ರಮದಿಂದ ಅವರು ಕೌರವರನ್ನು ಸೋಲಿಸಿದರು?” ಎಂದು ಕೇಳುತ್ತಾನೆ.
ಅದಕ್ಕೆ ಉತ್ತರವಾಗಿ ಬರ್ಬರೀಕ, “ಪರಮಾತ್ಮ! ಇಲ್ಲಿ ಯಾರ ಶಕ್ತಿ, ಯಾರ ಪರಾಕ್ರಮ ಎಂಬುದು ಮುಖ್ಯವಲ್ಲ. ಪಾಂಡವರು ಜಯಗಳಿಸಲು ಕಾರಣ ಕೇವಲ ನಿನ್ನ ಅನುಗ್ರಹ ಮಾತ್ರ. ಕೌರವರು ತಮ್ಮ ದಾಯಾದಿ ಮತ್ಸರ, ದ್ವೇಷಾಸೂಯೆಗಳಿಂದ ಅವನತಿ ಹೊಂದಿದರಷ್ಟೇ” ಅನ್ನುತ್ತಾನೆ.
ಅವನ ಉತ್ತರದಿಂದ ಸಂತುಷ್ಟನಾದ ಶ್ರೀಕೃಷ್ಣ, “ನಿನಗೆ ಸದ್ಗತಿ ಪ್ರಾಪ್ತಿಯಾಗಿ, ನೀನು ಮೋಕ್ಷವನ್ನು ಹೊಂದು. ನಿನ್ನ ಶೌರ್ಯ ಪರಾಕ್ರಮಗಳು ಮತ್ತು ಪ್ರಜ್ಞೆಗಳಿಂದಾಗಿ ಜನ ನಿನ್ನನ್ನು ಪೂಜಿಸುವಂತಾಗಲಿ” ಎಂದು ಹರಸುತ್ತಾನೆ. ಅದರಂತೆ ಬರ್ಬರೀಕನ ಶಿರಸ್ಸು ಲಯಗೊಂಡು ಅವನಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ.
ಉತ್ತರ ಭಾರತದಲ್ಲಿ ಘಟೋತ್ಕಚನಂತೆ ಬರ್ಬರೀಕನೂ ಪೂಜೆಗೊಳ್ಳುತ್ತಾನೆ. ಇವನನ್ನು ‘ಬರ್ಬರಿ’ ಎಂದೂ ಕರೆಯಲಾಗುತ್ತದೆ. ಹಿಮಾಚಲ ಪ್ರದೇಶದಲ್ಲಿ ಬಾರ್ಬರೀಕನನ್ನು ಕಮ್ರುನಾಗ್ ಮತ್ತು ರತನ್ ಯಕ್ಷ ಎಂದು ಪೂಜಿಸಲಾಗುತ್ತದೆ. ರಾಜಸ್ಥಾನದಲ್ಲಿ ಇವನನ್ನು ‘ಕಠುಶ್ಯಾಮ ಜಿ’ ಎಂದು ಕರೆದು ಪೂಜಿಸುತ್ತಾರೆ. ಗುಜರಾತ ನಲ್ಲಿ ಬಲಿಯ ದೇವ ಎಂದು ಬಾರ್ಬರಿಕ ಕರೆಸಿಕೊಂಡರೆ, ನೇಪಾಳಿಗರು ಇವನನ್ನು ರಾಜಾ ಯಲಂಬರ ಮತ್ತು ಆಕಾಶ ಭೈರವ ಎಂಬುದಾಗಿ ಭಜಿಸುತ್ತಾರೆ.
No comments:
Post a Comment