Monday, July 15, 2024

BHIMASENA ಭೀಮಸೇನ

                BHIMASENA ಕೌಂತೇಯ ಭೀಮಸೇನ 


              ಮಗುವು ಹುಟ್ಟಿದ ಕೆಲವು ದಿನಗಳ ನಂತರ, ದೇವತಾ ಪೂಜೆಗೆಂದು ಶತಶೃಂಗದ ಬಳಿಯಿದ್ದ ದೇವಾಲಯವೊಂದಕ್ಕೆ ದಂಪತಿಗಳು ಹೊರಟಿದ್ದರು, ಅವರಿಬ್ಬರ ಜೊತೆಗೆ ಆ ಪುಟ್ಟ ಕಂದಮ್ಮನೂ ಕೂಡ ಇತ್ತು.

      ಹಾಗೆ ಅವರು ನಡೆದುಹೊರಟಿದ್ದಾಗ, ಅದಾವುದೊ ಗುಹೆಯೊಳಗಿದ್ದ ಹುಲಿಯೊಂದು ಅವಳ ಮೇಲೆರಗಲು ಹಾರಿಬಂತು. ಕ್ಷಣ ಮಾತ್ರದಲ್ಲಿ ಅವಳ ಪತಿಯು ಮೊನಚಾದ ಬಾಣಗಳನ್ನು ಪ್ರಯೋಗಿಸಿ, ಆ ಹುಲಿಯನ್ನು ಕೊಂದಿಕ್ಕಿದ. ಆದರೇನು, ಹುಲಿಯ ಭೀಷಣಾಕಾರವನ್ನು ಕಂಡು ಅವಳು ಹೆದರಿದ್ದರಿಂದ, ಆ ಗಲಿಬಿಲಿಯಲ್ಲಿ ಅವಳ ಕೈಯಲ್ಲಿದ್ದ ಮಗುವು ನೆಲಕ್ಕೆ ಬಿತ್ತು. ಇನ್ನೂ ಹತ್ತು ದಿನದ ಹಸುಗೂಸು! ಕಠಿಣವಾದ ಕಲ್ಲಿನ ಮೇಲೆ ಬಿದ್ದರೆ ಅದರ ಗತಿಯೇನಾಗಬೇಡ!?

ಆದರೆ, ಆದದ್ದೇ ಬೇರೆ. ಮಗುವು ನೆಲಕ್ಕೆ ಬಿದ್ದ ರಭಸಕ್ಕೆ ಆ ಕಲ್ಲು ಬಂಡೆಯೂ ಪುಡಿಪುಡಿಯಾಯಿತಂತೆ. ಮಗುವಿನ ದಾರ್ಢ್ಯ ಅಂಥದ್ದಿತ್ತು. ಅಂಥಾ ಮಗುವನ್ನು ಹೆತ್ತ ಕುಂತೀ ಪಾಂಡುವಿಗೆ ಅದೆಷ್ಟು ಸಂತಸವಾಗಿರಬೇಡ.! ಅಂಥಾ ಭೀಮಬಲದ ಮಗುವಿಗೆ ತಕ್ಕಂತೆ, ಭೀಮನೆಂದೇ ಹೆಸರಿಟ್ಟರು, ಅವರು.

ಪಂಪಭಾರತದಲ್ಲಿ, ಭೀಮನ ತುಂಟತನವನ್ನು ವರ್ಣಿಸುವ ಪದ್ಯವೊಂದಿದೆ : “ಮುನಿವನಮನೆ ಬಿಸುಟುವು ಮುಂ| ಮುನಿಯರ ಸೋಂಕಿಲೊಳೆ ಬಳೆದ ಸಿರಿಗಂಗಳ್ ಮು| ದ್ದಿನೊಳಡರ್ವ ಪಿಡಿವ ಗುರ್ದುವ| ಮನೆಗೆಳೆವನಿತರ್ಕಮಲಸಿ ಮರುದಾತ್ಮಜನೊಳ್”

ಪುಟ್ಟ ಮಕ್ಕಳ ಚೇಷ್ಟೆಗಳನ್ನು ಎಲ್ಲರೂ ನೋಡಿಯೇ ಇರುತ್ತೀರಿ. ಮನೆಯಲ್ಲಿ ಸಾಕು ನಾಯಿಗಳ ಕಿವಿ ಹಿಡಿದು ಎಳೆಯುವುದು, ಬೆಕ್ಕನ್ನೊ ನಾಯಿಮರಿಯನ್ನೊ ಯದ್ವಾತದ್ವಾ ಎತ್ತಿಕೊಂಡು ಕೊಂಡಾಟವಾಡುವುದು.. ಹೀಗೆ. ಭೀಮನಾದರೂ ಅಷ್ಟೆ: ಮುಂಚೆ ಆ ಆಶ್ರಮವಾಸಿಗಳ ಬಳಿ ಮುದ್ದಿನಿಂದ ಬೆಳೆದ ಸಿಂಹಗಳನ್ನು ಭೀಮನು ಮುದ್ದಿಸಿ ಎಳೆದಾಡುವುದು, ಗುದ್ದುವುದು, ಮನೆಗೆ ಎಳೆದುತರುವುದು — ಹೀಗೆಲ್ಲ ಮಾಡುತ್ತಿದ್ದನಂತೆ; ಇವನ ಕಾಟವನ್ನು ತಾಳಲಾರದೆ ಆ ಸಿಂಹಗಳು ಆ ಮುನಿವನವನ್ನೇ ಬಿಟ್ಟು ಓಡಿಹೋದುವಂತೆ. ಎಂತಹ ಮುದ್ದಾದ ಚಿತ್ರಣ!

ತಾವು ಅನುಭವಿಸಬೇಕಾದ ಕಷ್ಟಕೋಟಲೆಗಳಷ್ಟನ್ನೂ ಭೀಮನು ಹೇಗೆ ತಾನೆ ಮರೆತಾನು. ಅದರಲ್ಲೂ ದುರ್ಯೋಧನನ ಸಿಟ್ಟು ಹೆಚ್ಚಾಗಿ ಇದ್ದುದು ಭೀಮನ ಮೇಲೆಯೇ ಅಲ್ಲವೆ! ಅದಕ್ಕೆಂದೇ ತಾನೆ, ಹಗ್ಗ ಕಟ್ಟಿ ನೀರಿಗೆಸೆದು, ಕಾಳಸರ್ಪಗಳನ್ನು ಬಿಟ್ಟು, ವಿಷವೂಡಿಸಿ — ಭೀಮನನ್ನು ಕೊಲ್ಲುವ ಹವಣಿಕೆಯೆಲ್ಲ ಮಾಡಿದ್ದು.. ಮಾಡಿದ ಅನಾನುಕೂಲಗಳನ್ನು ಅನುಕೂಲವೆಂದು ಪರಿವರ್ತಿಸಿ ಕೊಂಡು ಸಹಸ್ರ ಆನೆಗಳ ಬಲವನ್ನು ಪಡೆದವ,

ಅದಲ್ಲದೆ, ಯುದ್ಧವೆಲ್ಲ ಮುಗಿದ ನಂತರ, ಪಾಂಡವರು ಧೃತರಾಷ್ಟ್ರ ಗಾಂಧಾರಿಯರನ್ನು ಕಾಣಲು ಬಂದಾಗ, ಇದೇ ಧೃತರಾಷ್ಟ್ರನಲ್ಲವೆ — ಭೀಮನನ್ನು ಹೋಲುವ ಲೋಹದ ಬೊಂಬೆಯನ್ನು ಪುಡಿಪುಡಿಮಾಡಿದ್ದು. ಏನೇನೆಲ್ಲ ಆದಮೇಲೆಯೂ ಭೀಮನ ಬಗ್ಗೆ ಧೃತರಾಷ್ಟ್ರನಿಗಿದ್ದ ಕೋಪವು ಅಂಥದ್ದು. ಇದರ ನೆನಪೆಲ್ಲ ಭೀಮನ ಮನಸ್ಸಿನಿಂದ ಮಾಸಿತ್ತೆ?

ಎಲ್ಲದರ ಫಲವಾಗಿಯೆ ಭೀಮನು ಧೃತರಾಷ್ಟ್ರನ ಬಗ್ಗೆ ಹಾಗೆ ವರ್ತಿಸುತ್ತಿದ್ದನೊ ಏನೊ! ಆದರೂ, ಭೀಮನ ಮನಸ್ಸು ನಿಜಕ್ಕೂ ಅಷ್ಟು ಕಠಿಣವಾಗಿತ್ತೆ? ಹಾಗಿದ್ದರೆ ಧೃತರಾಷ್ಟ್ರ ಗಾಂಧಾರಿಯರು ಅರಣ್ಯವಾಸಕ್ಕೆ ಹೊರಟಾಗ, ಭೀಮನು ವಿಲಪಿಸಿದ್ದು ಯಾಕೆ? ಅವರ ಜೊತೆಗೆ ಕುಂತಿಯು ತಾನೂ ಹೊರಡುವೆನೆಂದಾಗ, ಭೀಮನು ಚಿಕ್ಕಮಗುವಿನಂತೆ ‘ಇಷ್ಟೆಲ್ಲ ಆದಮೇಲೆ ನಮ್ಮನ್ನು ನೀನು ಬಿಟ್ಟುಹೋಗುವುದು ಸರಿಯೇ?’ ಎಂದು ಹಟಮಾಡಿ ಕೇಳುತ್ತಾನೆ. ಕುಂತಿಗೆ ಗೊತ್ತು, ಭೀಮನ ಮನಸ್ಸು ಎಂಥದ್ದೆಂದು. ಅದಕ್ಕೇ ಅವಳು ಅವನನ್ನು ಅನುನಯದ ಮಾತುಗಳಿಂದ ಸುಮ್ಮನಾಗಿಸಿ, ಹೊರಡುತ್ತಾಳೆ. ಅವನನ್ನು ಸಮಾಧಾನಗೊಳಿಸುವಂತೆ ಯುಧಿಷ್ಠಿರನಿಗೂ ತಿಳಿಸುತ್ತಾಳೆ. ಇಲ್ಲೆಲ್ಲ ಭೀಮನ ವ್ಯಕ್ತಿತ್ವದಲ್ಲಿ ಕಾಣುವ ಬದಲಾವಣೆ, ವೈರುಧ್ಯಗಳು ನಮ್ಮನ್ನು ಚಕಿತಗೊಳಿಸುತ್ತವೆ.

ಜೂಜಿನಾಟದಲ್ಲಿ ಧರ್ಮರಾಯನು ತನ್ನ ಸರ್ವಸ್ವವನ್ನೂ ಸೋತ. ದುಶ್ಶಾಸನನು ದ್ರೌಪದಿಯನ್ನು ಸಭೆಗೆ ಎಳೆತಂದ. ದುರ್ಯೋಧನನು, ದ್ರೌಪದಿಯು ತನ್ನ ದಾಸಿಯಾಗಲಿ ಎಂದು ದುಷ್ಟವಾಕ್ಯಗಳನ್ನಾಡುತ್ತ, ಪಾಂಡವರನ್ನು ಕೆಣಕಿದ. ನಡೆದುದನ್ನು ಕಂಡು ಭೀಮಾರ್ಜುನರಿಬ್ಬರಿಗೂ ಕೋಪ ಬಂತು. ಆದರೆ, ಅರ್ಜುನನಿಗೆ ಅಣ್ಣನ ಮಾತು ದಾಟಲಾಗದೆಂಬ ಕಟ್ಟಳೆ!

ಭೀಮನಿಗಾದರೆ, ಇಷ್ಟೆಲ್ಲ ಆಗಿದ್ದಕ್ಕೆ ಧರ್ಮರಾಯನೂ ಕಾರಣವೆಂಬ ರೋಷವುಕ್ಕಿತು. ಆ ಭರದಲ್ಲಿ, ಅವನು ಸಹದೇವನನ್ನು ಕರೆದು “ಹೋಗು, ಬೇಗನೆ ಬೆಂಕಿಯನ್ನು ತಗೊಂಡು ಬಾ. ಈ ಯುಧಿಷ್ಠಿರನ ತೋಳುಗಳನ್ನು ಈ ಸಭೆಯೆದುರಿಗೇ ಸುಟ್ಟುಹಾಕ್ತೀನಿ” ಎಂದು ಘರ್ಜಿಸಿದ. ಆಗ ಅರ್ಜುನನೇ ಭೀಮನನ್ನು ಶಾಂತಗೊಳಿಸಿದ.ಆ ನಂತರದಲ್ಲಿಯೂ ಅಷ್ಟೆ, ದುರ್ಯೋಧನನು ದ್ರೌಪದಿಯನ್ನು, ತನ್ನ ತೊಡೆಯನ್ನೇರಿ ಕೂರುವಂತೆ ಕರೆದಾಗ, ಭೀಮನ ಸಿಟ್ಟು ತಾರಕಕ್ಕೇರುತ್ತದೆ. ಆಗ, ದುಶ್ಶಾಸನನ ಎದೆಯನ್ನು ಬಗೆಯುವುದಾಗಿಯೂ, ದುರ್ಯೋಧನನ ಆ ತೊಡೆಗಳನ್ನೇ ಕೆಡವಿ ಕೊಲ್ಲುವುದಾಗಿ ಶಪಥ ಮಾಡುತ್ತಾನೆ, ಭೀಮ. ಇಲ್ಲೆಲ್ಲ, ಧರ್ಮಾದರ್ಶಗಳೆಂಬ ಯಾವ ಕಟ್ಟಳೆಗಳಿಗೂ ಸಿಗದ ಮಹಾರ್ಣವದಂತೆ ಉಕ್ಕೇರಿ ಕುದಿಯುತ್ತಾನೆ, ಭೀಮ. ಓದುಗರ ಮನಸ್ಸಾದರೂ ಭೀಮನಂತೆಯೇ ಚಿಂತಿಸುತ್ತದೆ, ಆ ಕ್ಷಣದ ಮಟ್ಟಿಗೆ.

ಮುಂದೆ ಇವರೆಲ್ಲ ಅರಣ್ಯವಾಸದಲ್ಲಿದ್ದಾಗಲೂ ಕೌರವರ ಉಪಟಳ ನಿಲ್ಲಲಿಲ್ಲ. ಆಗೊಮ್ಮೆ ಭೀಮನು ಸಿಟ್ಟಾಗಿ, ಧರ್ಮರಾಯನಿಗೆನ್ನುತ್ತಾನೆ: “ನಾನೂ ಅರ್ಜುನನೂ ಆ ಧಾರ್ತರಾಷ್ಟ್ರರನ್ನೆಲ್ಲ ಕೊಂದು, ರಾಜ್ಯವನ್ನು ನಮ್ಮ ವಶಕ್ಕೆ ತಗೋತೀವಿ. ನಿನಗೆ ಸಮಯಾತಿಕ್ರಮದ ಭಯವಿದ್ದರೆ, ನೀನು ಬೇಕಿದ್ರೆ ಈ ಕಾಡಿನಲ್ಲೇ ಹದಿಮೂರು ವರ್ಷಗಳೂ ಇದ್ದು, ಆಮೇಲೆ ಹಸ್ತಿನಾಪುರಕ್ಕೆ ಬಂದು ರಾಜ್ಯಾಭಿಷೇಕ ಮಾಡಿಸಿಕೊ” ಎನ್ನುತ್ತಾನೆ.

ಅಜ್ಞಾತವಾಸದ ಸಮಯದಲ್ಲಿ, ದ್ರೌಪದಿಯು ಕೀಚಕನಿಂದ ಒಮ್ಮೆ ಅವಮಾನಕ್ಕೊಳಗಾಗುತ್ತಾಳೆ. ಕೀಚಕನು ಎಲ್ಲರೆದುರೂ ಅವಳ ಜುಟ್ಟು ಹಿಡಿದೆಳದು, ಬೈದಾಡಿ ಅವಮಾನಿಸುತ್ತಾನೆ. ಅದನ್ನು ಕಂಡು ಭೀಮನ ಮನಸ್ಸು ಬೆಂಕಿಯಾಗುತ್ತದೆ. ಆದರೂ, ತನ್ನ ಸಿಟ್ಟನ್ನು ತೋರಿಸಿದರೆ ಅನರ್ಥವಾದೀತಲ್ಲ. ಅಜ್ಞಾತವಾಸದ ಕಟ್ಟಳೆಗೆ ಭಂಗವೊದಗುತ್ತದೆ! ಅದಕ್ಕೇ, ಅರಮನೆಯೆದುರಿನ ದೊಡ್ಡ ಮರವೊಂದನ್ನು ಹೊಡೆದುರುಳಿಸಿ ತನ್ನ ಸಿಟ್ಟನ್ನು ವ್ಯಕ್ತಪಡಿಸುತ್ತಾನೆ, ಭೀಮ.

ಮುಂದೆ ಹೇಗೂ ಕೀಚಕನನ್ನೂ ಉಪಕೀಚಕರನ್ನೂ ಕೊಂದಿಕ್ಕಿ, ತನ್ನ ಕೋಪವನ್ನು ಉಪಶಮನಗೊಳಿಸುತ್ತಾನೆ. ಕೀಚಕನನ್ನಾದರೂ ಹೇಗೆ ಹೊಸೆದುಹಾಕಿ ಕೊಂದಿರುತ್ತಾನೆಂದರೆ, ಯಾವುದೊ ಮೂಟೆಯಲ್ಲಿ ಮಾಂಸವನ್ನೆಲ್ಲ ತುರುಕಿಹಾಕಿದರೊ ಎಂಬಂತೆ ಕಾಣುತ್ತಿತ್ತಂತೆ — ಕೀಚಕನ ಹೆಣ. ಒಟ್ಟು ಸಭಾಪರ್ವದಲ್ಲಿ ದ್ರೌಪದಿಗಾದ ಅಪಮಾನಕ್ಕೆ, ಅವಳ ದುಃಖಕ್ಕೆ ಪ್ರತೀಕಾರ ತೀರಿಸುವುದು ಭೀಮನೇ.

ಇಷ್ಟೆಲ್ಲ ಆದರೂ, ಭೀಮನ ಮನಸ್ಸೂ ಅದೇಕೊ ಸಂಧಿಗೆ ಒಡಂಬಡುತ್ತದೆ. ಸಂಧಾನಕ್ಕೆಂದು ಕೃಷ್ಣನು ಹಸ್ತಿನಾವತಿಗೆ ಹೊರಟಾಗ, ಧರ್ಮರಾಯ, ಅರ್ಜುನರು ಅವನಿಗೆ ಸಂಧಿಯನ್ನು ಸಾಧಿಸುವಂತೆ ಹಲವಾರು ರೀತಿಯಲ್ಲಿ ಹೇಳುತ್ತಾರೆ. ಭೀಮನೂ ಹೇಳುತ್ತಾನೆ — ‘ಕೃಷ್ಣ! ದುರ್ಯೋಧನನು ಸ್ವಲ್ಪ ದುಡುಕು ಸ್ವಭಾವದವನು. ನನ್ನ ಮೇಲಿನ ದ್ವೇಷದಿಂದ ಅವನು ಸಂಧಿಮಾಡಿಕೊಳ್ಳಲು ಒಪ್ಪದೆ ಹೋಗಬಹುದು. ನೀನು ಶಾಂತವಾಗಿ ಅವನನ್ನು ಅನುನಯಿಸಿ, ಒಪ್ಪಿಸು’ ಎನ್ನುತ್ತಾನೆ.

ಆದರೂ ನಡೆದದ್ದು ಬೇರೆಯೇ. ಸಂಧಿಯೇ ಸಾಧ್ಯವಾಗುವುದಿದ್ದರೆ ಮಹಾಭಾರತದ ಕಥೆಯೇ ಬೇರೆ ತೆರನಾಗಿರುತ್ತಿತ್ತು, ಅಲ್ಲವೆ?

ಯುದ್ಧದಲ್ಲಿ ಕೌರವರ ಪೈಕಿ ಸಿಕ್ಕಸಿಕ್ಕವರನ್ನೆಲ್ಲ ಕೊಂದುಹಾಕಿದ, ಭೀಮ. ಆದರೂ, ಅವನ ಮುಖ್ಯ ಬೇಟೆಗಳೆಂದರೆ ದುಶ್ಶಾಸನ, ದುರ್ಯೋಧನರೇ. ದುಶ್ಶಾಸನನ ಎದೆ ಬಗೆದು ರಕ್ತಪಾನ ಮಾಡುವುದಾಗಿ ಪ್ರತೀಜ್ಞೆಯನ್ನೂ ಮಾಡಿದ್ದನಲ್ಲ.

ಅದೂ ನಡೆಯಿತು. ದುಶ್ಶಾಸನನನ್ನು ಅತಿ ಭೀಕರವಾಗಿ ಕೊಲ್ಲುತ್ತಾನೆ, ಭೀಮ. ಅವನ ಎದೆಯನ್ನು ಬಗೆದು, ಅಲ್ಲಿಂದ ಪುಟಿಯುತ್ತಿದ್ದ ಬಿಸಿರಕ್ತವನ್ನು ಕುಡಿಯುತ್ತ, “ಎಂತಹ ಜೇನೂ, ಕಬ್ಬಿನ ರಸವೂ ಇದರ ರುಚಿಗೆ ಸಾಟಿಯಲ್ಲ” ಎಂದು ಮನಸಾರೆ ಮೆಚ್ಚಿ ನುಡಿಯುತ್ತಾನೆ, ಭೀಮ.

ಭೀಮನ ವರ್ತನೆಯನ್ನೂ, ಆ ರೌದ್ರತೆಯನ್ನೂ ಕಂಡು ಎರಡೂ ಬಣದವರು ಗರಬಡಿದವರಂತೆ ನಿಂತಿದ್ದರು. ಭೀಮನು ಆ ಸಮಯಕ್ಕೆ ಅದೆಷ್ಟು ಮತ್ತನಾಗಿದ್ದನೆಂದರೆ, ‘ಸಾಧ್ಯವಿದ್ದರೆ ಈ ದುಶ್ಶಾಸನನನ್ನು ನನ್ನಿಂದ ಬಿಡಿಸಿಕೊಳ್ಳಿ’ ಎಂದು ಕೌರವ ವೀರರಿಗೂ, ಪಾಂಡವ ಸೈನ್ಯದವರಿಗೂ ಒಟ್ಟಿಗೆ ಸವಾಲು ಹಾಕುತ್ತಾನೆ. ಅಷ್ಟಕ್ಕೆ ನಿಲ್ಲದೆ, “ಏನಪ್ಪಾ ಅರ್ಜುನ! ಮೂರುಲೋಕದಲ್ಲೂ ನೀನು ಮಹಾ ಬಿಲ್ಲುಗಾರನೆಂಬ ಮಾತಿದೆ. ಅದನ್ನು ನಿರೂಪಿಸಿಕೊಳ್ಳುವಹಾಗಿದ್ದರೆ ಇವನನ್ನು ನನ್ನಿಂದ ಬಿಡಿಸಿಕೊ, ನೋಡೋಣ” ಎಂದು ಅಣುಕಿಸುತ್ತಾನೆ.

ಈ ಸಂಭಾಷಣೆ ಬರಿ ಕುಮಾರವ್ಯಾಸ ಭಾರತದಲ್ಲಿ ಮಾತ್ರ ಇರುವಂತೆ ತೋರುತ್ತದೆ. ಮೂಲದಲ್ಲಿ ಈ ಸಂಭಾಷಣೆಯಿಲ್ಲ. ಆದರೆ, ಮೂಲ ಭಾರತದಲ್ಲಿಯೂ ದುಶ್ಶಾಸನ ವಧೆಯ ಹೊತ್ತಿಗೆ ಭೀಮನು ರುದ್ರಸದೃಶನಾಗೇ ವರ್ತಿಸುತ್ತಾನೆ. ಅಲ್ಲಿಯ ವರ್ಣನೆಯೂ ಇಷ್ಟೇ ಭೀಷಣವಾಗಿದೆ.

ಮುಂದೆ, ದುರ್ಯೋಧನನೊಡನೆ ಗದಾಯುದ್ಧ. ಕುರುಕ್ಷೇತ್ರ ಸಂಗ್ರಾಮದ ನಿರ್ಣಾಯಕ ಘಟ್ಟ.! ಯುಧಿಷ್ಠಿರನು ದುರ್ಯೋಧನನಿಗೆ “ನಮ್ಮೈವರಲ್ಲಿ ನೀನು ಯಾರೊಟ್ಟಿಗಾದರೂ ದ್ವಂದ್ವ ಯುದ್ಧ ಮಾಡಬಹುದು; ಆಳಿನ ಆಯ್ಕೆಯೂ ನಿನ್ನದೆ, ಅಸ್ತ್ರದ ಆಯ್ಕೆಯೂ ನಿನ್ನದೆ” ಎಂಬ ಆಮಂತ್ರಣವಿತ್ತ. ದುರ್ಯೋಧನನಿಗಾದರೂ ಇನ್ನಾರೊಟ್ಟಿಗೆ ಕಾದುವುದೂ ಇಷ್ಟವಿರಲಿಲ್ಲ. ಕೊನೆಗೆ ಭೀಮ-ದುರ್ಯೋಧನರ ಗದಾಯುದ್ಧವು ಮೊದಲಾಯಿತು. ಬಹಳ ದೀರ್ಘಕಾಲದ ಸೆಣೆಸಾಟದ ನಂತರ ಭೀಮನು ದುರ್ಯೋಧನನ ತೊಡೆ ಮುರಿಯುವಂತೆ ಘಾತಿಸಿ, ಕೆಡವಿದ. ಗೆಲುವು ಪಾಂಡವರ ಪಾಲಾಯಿತು.

ಆದರೆ ಭೀಮನ ಸಿಟ್ಟು ತೀರಿತೆ? ಮನಸ್ಸು ತೃಪ್ತವಾಯಿತೆ? ಇಲ್ಲ!  ಇಷ್ಟೆಲ್ಲ ಅನರ್ಥಗಳಿಗೆ ಕಾರಣವಾದ ಆ ಕುರು ಸಾರ್ವಭೌಮನ ಕಿರೀಟವು ಹಾರಿಹೋಗುವಂತೆ, ಭೀಮನು ತನ್ನ ಎಡಗಾಲಿನಿಂದ ಝಾಡಿಸಿ, ದುರ್ಯೋಧನ ತಲೆಗೆ ಹೊಡೆದ; ದುರ್ಯೋಧನನ ಕಿರೀಟವು ಹಾರಿಬಿತ್ತು. ರನ್ನನ ‘ಸಾಹಸಭೀಮವಿಜಯ’ದಲ್ಲಿ ಬರುವಂತೆ — “ಭೀಮಸೇನನೊದೆದಂ ವಾಮಾಂಘ್ರಿಯಿಂ ರತ್ನಮಂಡಲ ರಶ್ಮಿ ಪ್ರಕಟಜ್ವಲನ್ಮಕುಟಮಂ ಕೌರವ್ಯರಾಜೇಂದ್ರನಾ”

ಈ ಸಂದರ್ಭದಲ್ಲಿ, ಭೀಮನ ವರ್ತನೆಯನ್ನು ಬಲರಾಮನು ಖಂಡಿಸುತ್ತಾನೆ. ಆದರೆ ಕೃಷ್ಣನು ಸೂಕ್ತ ಉತ್ತರದಿಂದ ಅವನನ್ನು ಸುಮ್ಮನಿರಿಸುತ್ತಾನೆ.

ಮುಂದೆ, ಮಲಗಿದ್ದ ಉಪ ಪಾಂಡವವೀರರ ಮೇಲೆರಗಿ ಕೊಂದ ಅಶ್ವತ್ಥಾಮನನ್ನು ಹುಡುಕಿ, ಅವನನ್ನು ಕೊಲ್ಲಹೋಗುವುದೂ ಭೀಮನೇ. ಆದರೇ ಅಶ್ವತ್ಥಾಮನು ಚಿರಂಜೀವಿಯಾದ್ದರಿಂದ ವಧೆ ಮಾಡಲಾಗದೆ  ಶ್ರೀ ವ್ಯಾಸ ಮಹರ್ಷಿಗಳ, ಮತ್ತು ಶ್ರೀ ಕೃಷ್ಣನ ಅನುಜ್ಞೆಯಂತೆ ಅಶ್ವತ್ಥಾಮನ ಹಣೆಯಲ್ಲಿರುವ ರತ್ನ ಗುದ್ದಿ ಹೊರತೆಗೆದಾಗ ಅವನಲ್ಲಿರುವ ಚೈತನ್ಯ ನಾಶವಾಗಿ ಹಣೆಗಾಯದೊಂದಿಗೆ ತಿರುಗುತ್ತಿರುವನು.



No comments:

Post a Comment