ಇಂದು ಎನಗೆ ಗೋವಿಂದ
ಶ್ರೀ ರಾಘವೇಂದ್ರ ಸ್ವಾಮಿಗಳು ಉಡುಪಿ ಕೃಷ್ಣನನ್ನು ಕಂಡಾಗ ಸಂಪೂರ್ಣ ಶರಣಾಗತಿ ಹಾಗೂ ಭಕ್ತಿ ಭಾವದಿಂದ ರಚಿಸಿದ ಕೃತಿ ..“ಇಂದು ಎನಗೆ ಗೋವಿಂದ|ನಿನ್ನಯ ಪಾದಾರವಿಂದವ ತೋರೋ ಮುಕುಂದನೆ...” ರಾಯರು ರಚಿಸಿದ ಏಕೈಕ ಕನ್ನಡ ಕೀರ್ತನೆ ಇದು ಎನ್ನಲಾಗಿದೆ. “ಧೀರ ವೇಣುಗೋಪಾಲ” ಎಂಬದು ಅವರ ಅಂಕಿತನಾಮ.
ಇಂದು ಎನಗೆ ಗೋವಿಂದ ನಿನ್ನಯ
ಪಾದಾರವಿಂದವ ತೋರೋ ಮುಕುಂದನೆ ||ಪ||
ಸುಂದರ ವದನನೆ ನಂದಗೋಪನ ಕಂದ
ಮಂದರೋದ್ಧಾರ ಆನಂದ ಇಂದಿರಾ ರಮಣ ||ಅಪ||
ನೊಂದೆನಯ್ಯ ಭವಬಂಧನದೊಳು ಸಿಲುಕಿ|
ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು|
ಕಂದನಂತೆಂದೆನ್ನ ಕುಂದುಗಳೆಣಿಸದೆ
ತಂದೆ ಕಾಯೊ ಕೃಷ್ಣ ಕಂದರ್ಪಜನಕನೆ ||೧||
ಮೂಢತನದಿ ಬಹು ಹೇಡಿ ಜೀವ ನಾನಾಗಿ
ದೃಢಭಕುತಿಯನು ಮಾಡಲಿಲ್ಲವೊ ಹರಿಯೆ|
ನೋಡಲಿಲ್ಲವೊ ನಿನ್ನ ಪಾಡಲಿಲ್ಲವೊ ಮಹಿಮೆ|
ಗಾಡಿಕಾರ ಕೃಷ್ಣ ಬೇಡಿ ಕೊಂಬೆನೊ ನಿನ್ನ ||೨||
ಧಾರುಣಿಯೊಳು ಭೂಭಾರಜೀವ ನಾನಾಗಿ
ದಾರಿತಪ್ಪಿ ನಡೆದೆ ಸೇರಿದೆ ಕುಜನರ|
ಆರೂ ಕಾಯುವರಿಲ್ಲ ಸೇರಿದೆ ನಿನಗಯ್ಯಾ
ಧೀರವೇಣುಗೋಪಾಲ ಪಾರುಗಾಣಿಸೊ ಹರಿಯೆ |೩|
No comments:
Post a Comment