Saturday, August 24, 2024

SONGs ON DOLLU. ಗೊಳಗೆಪ್ಪನ ಡೊಳ್ಳಿನ ಪದ

               ಗೊಳಗೆಪ್ಪನ ಡೊಳ್ಳಿನ ಪದ 

ಗೋವಿಂದಪುರ ಶ್ರೀ ಗೋವಿಂದ ರಾಜ ದೇವರ ಡೊಳ್ಳಿನ ಪದ 


ಸ್ವಾಮಿ ನಮ್ಮಯ ದ್ಯಾವರು ಬಂದವ್ರೆ ..ಘೇ

ಸ್ವಾಮಿ ನಮ್ಮಯ ದ್ಯಾವರು ಬಂದವ್ರೆ ..ಉಘೇ ಉಘೇ

ಬರ್ರೆಲ್ಲ  ಕೇಳಕ್ಕ ಬರ್ರೇಲ್ಲ ನೋಡಲಿಕ್ಕ

ಬರ್ರೆಪ್ಪೋ ಗೋವಿಂದ ನೋಡ್ರೆಪ್ಪೋ  || ಸ್ವಾಮಿ ||


ನೀರ್ಗಣ್ಣ ಮೀನಾಗಿ ಎಲ್ಲರ ಹೊತ್ತಿಗಿ

ಎಂಗಾಡಿ ರಾಕ್ಷಸರ ಕೊಂದಾನ್ನ|

ಸಂಗಾಡಿ ದುಷ್ಟರ ಕೊಂದು ವೇದ ಉಳಿಸಿ

ಬಂಗಾರ ಒಡಲನಿಗೆ ಕೊಟ್ಟಾನ್ನ || ಸ್ವಾಮಿ  ||


ದೊಡ್ಡ ನೀರೀನಾಗ ನಮ್ಮಯ ಆಮೇಯ

ಗುಡ್ಡದ ಬೆನ್ನಲ್ಲಿ  ನಿಂತಾನ್ನ|

ಗುಡ್ಡದ ಬೆನ್ನಲ್ಲಿ ರೇವಿಗೆ ಹೊತ್ಗೊಂಡು 

ಮಡ್ಡ ಅಸುರ ಹುಚ್ಚ ಮಾಡ್ಯಾನ || ಸ್ವಾಮಿ ||


ಕಣ್ಣು ಕೆಂಪನ್ನ ಕಾಡಿನ ಹಂದ್ಯಾಗಿ

ಕಣ್ಣ ಬಂಗಾರನ್ನ ಕೊಂದಾನ್ನ |

ಕಣ್ಣ ಬಂಗಾರನ ಕೊಂದು  ಲಕ್ಕವ್ವನ |

ಘನ್ನ ಗೋವಿಂದನಿಗಿತ್ತಾನ್ನ || ಸ್ವಾಮಿ ||


ಸಿಟ್ಟಿನ ಸಿಂಹದು ಮೈಯ ಮನಶ್ಯಾರಂಗ |

ಹೊಟ್ಟೆಯ ಕರುಳನ್ನ ಕೊಳ್ಳೀಗಿಹಾಕ್ಯಾನ |

ಹೊಟ್ಟೆಯ ಕರುಳ ತಗದಾನ ನಮ ದೆವ

ಪುಟ್ಟನಿಗೆ ವರವ ಕೊಟ್ಟಾನ್ನ || ಸ್ವಾಮಿ ||


ಹುಡಗ ಹಾರುವನು ಗಿಡ್ಡ ವಾಮನಂಗ

ನಡು ನೆಲ ಮುಗಿಲಕ್ಕ ಬೆಳೆದಾನ |

ಕಡೆಗೆ ಬೆಳೆದು ತೆಳಗ ರಾಜ ಬಲಿಯನ್ನು

ತಡೀದೇ ಪಾತಾಳಕ್ಕ ಹಾಕ್ಯಾನ. || ಸ್ವಾಮಿ ||


ಅವ್ವ ಮಾತನು ಕೇಳಿ ಸಾವಿರ ಕೈಯವನ |

ಆವು  ಕಳ್ಳನ್ನ ಕೊಂದಾನ್ನ |

ಆವು ಒಯ್ದವನ ಕೊಂದು |

ಅವನೀಯ ಗೆದ್ದು ಹಾರುವರಿಗಿ ಕೊಟ್ಟಾನ || ಸ್ವಾಮಿ ||


ಪಿಂಗಳ ಕಣ್ಣಿನ ರಾಮ ಕೋತಿಗಳ ಹುಡಕೀ |

ಛಂಗನೆ ಲಂಕೆಗೆ ಹೋಗ್ಯಾನ |

ಹೊಂಗ ಲಂಕೆಗೆ ಹೋಗಿ  |

ಹೆಂಗಳ್ಳ  ರಾವಣಗ ಕೊಂದಾನ || ಸ್ವಾಮಿ ||


ಕರಿ ಹೊಲದೊಳಗ ಆಕಳ ಕಾಯುತ್ತಾ |

ಹೊಳೆಯ ಮಡುವಿನಾಗ ಹಾರ್ಯಾನ |

ಉರಗನ ಹತಲಮ್ಯಾಲ ಹಾರಾರಿ ಕುಣಿದಾನ

ಯಾರ್ಯಾರಿಗೆಲ್ಲಾನೆ ಕೊಟ್ಟಾನ || ಸ್ವಾಮಿ ||


ತಂಡತಂಡದಿಂದ  ಒಳ್ಳೆಯ ಮಂದೀಗಿ |

ಕಂಡ ಕಂಡಲ್ಲಿ ತಿರುಗಸ್ಯಾನ |

ಕಂಡಕಂಡಲ್ಲಿ ತಿರುಗಿ ಶ್ಯಾಣ್ಯಾರನ್ನ |

ಕೆಂಡ ಬುದ್ಧಿರ ಕೂಡಸ್ಯಾನ || ಸ್ವಾಮಿ ||


ಚೆಲುವ ತರಳೆಯ ತುರುಗನ್ನ ಮಾಡಿ |

ಒಳ್ಳೆಯ ಶೂರನೇ ಆಗ್ಯಾನ |

ಒಳ್ಳೆ ವೀರನು  ಕೆಟ್ಟವರ ಹೆಡಮುರಿಗಿ |

ಡೊಳ್ಳು ಹೊಟ್ಟೆಯ ಕಟ್ಟಿ ಒದ್ದಾನ || ಸ್ವಾಮಿ ||


ಡೊಳ್ಳಿನ ಕೈಯನ್ನು ಗೊಳಗೆಪ್ಪ ಹಾಕ್ಯಾನ |

ಹೊಳ್ಳೊಳ್ಳಿ ಹೊಳಿ ಭೀಮಾ ನೋಡ್ಯಾನ |

ಹೊಳಿ ಭೀಮಾ ಮುಂದಿರುವ  |

ಒಳ್ಳೆ ಗೋವಿಂದಪ್ಪ ನಮ್ಮನ್ನೆಲ್ಲ ಕೂಡ್ಸ್ಯಾನ ‌||ಸ್ವಾಮಿ||


ಗೋವಿಂದ ಗೋವಿಂದ ‌|

ಗೋವಿಂದಪುರ ಗೋವಿಂದ |

ಗೋವಿಂದ ದಾಸ ವಿಕ್ರಮ  |

ಗೋವಿಂದರಾಜ ಅಂತ ಕುಣಿದಾನ || ಸ್ವಾಮಿ ||

                                                    ಜಯಶ್ರೀ ನಂದನ


ಸ್ವಾಮಿ ನಮ್ಮಯ ದ್ಯಾವರು ಬಂದವ್ರೆ ..ಘೇ ಉಘೇ 





No comments:

Post a Comment