Tuesday, October 01, 2024

SHRI SHANAISHCHARA CHARITAM I ಶ್ರೀ ಶನೈಶ್ಚರ ಚರಿತಂ ಪ್ರಥಮೋಧ್ಯಾಯಃ ( 01-148 )

                             SHRI SHANAISHCHARA CHARITAM  I  ( 01-148 )
                        ಶ್ರೀ ಶನೈಶ್ಚರ ಚರಿತಂ
                                               || श्री शनैश्चर देवताभ्यो नमः ||
                      ( ಕನ್ನಡ ಭಾಮಿನಿ ಮತ್ತು ವಾರ್ಧಿಕ ತೆರ ತ್ರಿಪದಿಗಳಲ್ಲಿ  ಒಟ್ಟು ಐದು ಸಂಧಿಗಳು  )
( ಶ್ರೀ ಶನೈಶ್ಚರ ಪ್ರತಿಮಾ ಪ್ರಾನಪ್ರತಿಷ್ಠಾಪನೆ, ಪದ್ಮ ಪುರಾಣ ಸ್ಥಿತ ಶ್ರೀ ಶನೈಶ್ಚರ ಕವಚ, ಶ್ರೀ ಶನೈಶ್ಚರೋರ್ನಾಮ ಅಷ್ಟೋತ್ತರ ಶತಂ ಜಪಃ, ಶ್ರೀ ದಶರಥ ಪ್ರೋಕ್ತ ಶ್ರೀ ಶನೈಶ್ಚರಸ್ತೋತ್ರಮ್, ಶ್ರೀ ಮಹರ್ಷಿ ವೇದವ್ಯಾಸ ವಿರಚಿತ  ಶ್ರೀ ಶನೈಶ್ಚರ ಚಕ್ರ ಸಹಿತ )
ಪ್ರಥಮ ಸವಿಗಥಾ ಸಂಧಿ ೧ 
( ಶ್ರೀ ಸೀತಾರಾಮಾಚಾರ್ಯ ಸುತ ತುಳಸಾತ್ಮಜ ಶ್ರೀಧರಾಚಾರ್ಯ ವಿರಚಿತ )

ಶ್ರೀ ಗಣೇಶನ ನಮಿಸಿ ಬೇಡುವೆ | ನೀಗಿಸೆಂದುಸುರುವೆನು ಸೇವೆಗೆ | ಶ್ಲಾಘಿಸುವೆ ಶ್ರೀ ಶನೈಶ್ಚರ ಮಹ ಚರಿತೆ ವಿಸ್ತರಿಸಿ         || ೧ ||
ವಾಗು ದೇವಿಯ ವಂದಿಸಿಯೇ ಭವ | ಭೋಗ ಭಾಗ್ಯವನೀವ ಪಿಂಗಳ- | ಮೋಘ ವರ್ಣನೆ ಮಾಳ್ಪ ಶಕ್ತಿಯು ಕೆಳ್ವೆ ಪ್ರೇರಣೆಯ  || ೨ ||
ಶ್ರೀ ಗುರುವೆ ಹರಿ ಬ್ರಹ್ಮ ಶಂಕರ | ಆಗು ಹೋಗುಗಳೆಣೆಯ ಸಾಗಿಪ | ಸಾಗರವೇ ಪ್ರಾರ್ಥಿಸುವೆ ಕೋಣಸ್ಥರಿವ ದೆಸೆಯಿಂದ     || ೩ ||
ಶ್ರೀ ಲಕುಮಿ ಗೋವಿಂದದೇವ ವಿ - | ಶಾಲ ಮರವಶ್ವತ್ಥ ರೂಪದ | ಓಲೈಸಿ ವಂದಿಸುವೆ ಕಾರ್ಯಕೆ ಯಶವನೀಯೆಂದು          || ೪ ||
ಶರಣ ಸಂತತಿ ಚರಣ ಸನ್ನಿಧಿ | ಕರುಣಿಸೆಂ ಬಯಸುತಲೆ ನುತಿಸುವೆ | ವರವಿರಲಿ ಬುಧರೆಲ್ಲ ಪ್ರೇರಿಸಿ ಕೃತಿಗೆ ಕೈಗೂಡಲಿ       || ೫ ||
ಮೂಲದೊಳು ಕಥೆ ಶಿವ ಭವಾನಿಗೆ | ಬಾಲ ಕುವರ ಷಡಾನನಾಲಿಸಿ | ಮೇಲು ಸ್ಕಂದ ಪುರಾಣದೊಳು ತಾ ಕಾಶಿಖಂಡೆಂದು   ||೬ ||
ಇದನಗಸ್ತಿಯು ಲೋಪಮುದ್ರೆಗೆ  |  ಬಾದರಾಯಣ ಶಿಷ್ಯರಲಿಯು |  ಮೋದದಲಿ ಶಿವಶರ್ಮ ವಿಷ್ಣುಗಣಗಳಿಮ್ ಕೇಳ್ದ             || ೭ ||
ಕಾಶಿ ಖಂಡುಪಖಂಡ ವಿಂಶತಿ | ಶ್ರೀ ಶನೈಶ್ಚರಜನ್ಮ ಕಥೆಯದು | ಭಾಷೆ ಕನ್ನಡ ಪೇಳೆ ತಾ ಗೋವಿಂದ ಕೃಪೆಯಿಂದ              || ೮ ||    
ದಕ್ಷಿಣದಿ ದಾನವರ ಹಾವಳಿ | ಭಕ್ಷಿಸುತಲಿರೆ ಮಾನವರ ಕುಲ | ರುಕ್ಷ ಬುದ್ಧಿಯ ಕ್ರೂರ ಮತಿಗಳ ನಾಶ ಪಡಿಸಲ್ಕೆ                 || ೯ ||
ದಾನವರ ನೀಗಿಸುವ ಕೃತಿಯದು | ತಾನೇ ಅಮರರಿಗೆಲ್ಲ ಆಗದೆ | ಮಾನ ಶರ ಶಪದಪಿಯು ಕುಂಭೋದ್ಭವಗೆ  ನೀಡಿದರು  || ೧೦ ||
ದೇವತೆಗಳಾದೇಶ ದಂತೆಯೇ | ನೋವು ಕಾಶಿಯ ವಿರಹ ತಾಳದೇ | ಧಾವಿಸಿದ ದಕ್ಷಿಣದ ಪಥವನೆ ತಿದ್ದಲಾಗಸ್ತಿ               || ೧೧ ||
ಆತಾಪಿ ವಾತಾಪಿ ಇಲ್ವಲ  |  ಘಾತಮಾಡಲಗಸ್ತಿ ಪೋಗುವ | ಪ್ರೀತಿ ಪರಿವಾರವನು ದಕ್ಷಿಣ ಭೀಮೆ ತಟದಿರಿಸಿ                  || ೧೨ ||
ದಕ್ಷ ದಾರ್ಢ್ಯರ ಪರ್ಣ ಕುಟಿರವು | ವೃಕ್ಷ ದ್ವಯ ಅಶ್ವತ್ಥ ನಿಂಬಕ  | ಅಕ್ಷಯದ ಶಿಲೆ ಉತ್ತುಂಗ ಪೀಠದಿ ವೃಕ್ಷ ರಾಜಮರ          || ೧೩ ||  
ಸತ್ವಗುಣ ಗೋವಿಂದ ರಾಜನೇ | ನಿತ್ಯ ಪಾಲಿಪನೆಂದು ತರು  ಅ - |  ಶ್ವತ್ಥ ದಡಿಯೊಳು ಭಾವಮೂರ್ತಿಯ ಸ್ಮರಿಸಿಪೋಗಿಪನು    || ೧೪ || 
ಅಸುರವಧೆಯನು ಮುಗಿಸಿಕೂಡಿದ | ಅಸಮಮರ ಗೋವಿಂದರಾಜನ | ಬೇಸಸಿ ಪೊರಟನು ಕಾಶಿಖಂಡದ ಕಥೆಯ ಪೇಳುತಲೇ  || ೧೫ ||
ಕೇಳು ಲೋಪಾಮುದ್ರೆ ಸತಿಯಳೆ | ಕೇಳುತಿಹ ಶಿವಶರ್ಮ ಗಣರಿಗೆ | ಕಾಳ ಕಂಕಣ ವಲಯವಾಗಿಹ ಲೋಕ ಯಾವುದಿದು  || ೧೬ ||
ಎಂದು ಕೇಳಲು ವಿಷ್ಣು ಗಣರಿಂ |  ತೆಂದು  ವದಿಸಿದ ಶ್ರೀ ಶನೈಶ್ಚರ | ಮಂದ ಗ್ರಹದ ಲೋಕ ಕಾಣುವುದೆಂದು ವರ್ಣಿಸುತ    || ೧೭ ||
ಕೃತ ಯುಗದ ಆರಭ್ಯ ಕಾಲದಿ | ಚತುರ ಮುಖಸುತ ಪ್ರಜಪತಿಯ ಅತಿ | ಚತುರತೆಯ ಗುಣದಿಂ ದಕ್ಷ ಬ್ರಹ್ಮ ಹೆಸರಾದ       || ೧೮ || 
ಕನ್ಯೆ ಸಂಜ್ಞಯ ದಕ್ಷ ಬ್ರಹ್ಮನು | ಭಾನು ನಾರಾಯಣಗೆ ಇತ್ತು ವಿ - | ಧಾನ ಪೂರ್ವಕ ಶುಭ ವಿವಾಹವು ಜರುಗಿಸಿರಲಾಗಿ        || ೧೯ ||
ತರಣಿ ಸಂಜ್ಞಯರಲ್ಲಿ ಜನಿಸಿದ | ಹಿರಿಯ ಮಗು ಕೃತಾಂತ ಕಾಲನು | ದೊರೆಯು ಯಮಲೋಕದಲಿ ದಕ್ಷಿಣ ಪೂರ್ಣ ಅಧಿಕಾರಿ || ೨೦ ||
ದ್ವಿತೀಯ ಪುತ್ರನೆ ಶ್ರೀ ಶನೈಶ್ಚರ - | ತ್ರಿತಿಯದಿಂ ಕ್ರಮ ಕ್ರಮದಿ ಪುಟ್ಟಿತ - | ಪತಿ ಭದ್ರೆಯು ಕಾಲಿಂದಿ  ಸಾವಿತ್ರಿ ಕನ್ಯೆಯರು  ||೨೧ ||  
ವಿಷ್ಣುವಿಗೆ ಕಾಳಿಂದಿ ಅರ್ಪಿಸಿ |  ಸೃಷ್ಟಿ ಕೃತುಗೆ ಸಾವಿತ್ರಿಯಿತ್ತು |  ಪೂಷ್ಣ ದೇವನು ಮದುವೆಯನು ಮಾಡಿದನು ವೈಭವದಿ          || ೨೨  || 
ಧರೆಯ ಮೇಗೆಡೆ ರವಿಕುವರಿಯರು |  ಗಿರಿಯಸ್ತಮದಿ ಭದ್ರೆಯಮುನೆಯು | ಹರಿದುಹೊಳೆ ಸಾವಿತ್ರಿತಪತಿಯು ಉದಯಚಲದುದಿಸಿ    || ೨೩ || 
ರವಿಯ ಸಹವಾಸದಲಿ ಸಂಜ್ಞೆಯ | ಯುವತಿ ಅವತೆಯು ಬಾಡುತಿರೆ ಬಾ - | ಳುವುದೇ ಕಷ್ಟವು ಪ್ರಖರ ಉಷ್ಣತೆ ಕಿರಣಗಳ ಬಳಿದು || ೨೪ ||
ಸವೆಯುತಿಹ ದೇಹವನು ಸಂಜ್ಞೆಯು | ಅವತೆ ನೋಡಿರೆ ದುಃಖದಿಂ ಬಲು | ಕವಿದು ಚಿಂತೆಯು ಚಿತೆಯ ರವಿಯಿಂ ಬಳಲಿ ಬೆಂಡಾಗಿ ||೨೫  ||
ತಾಳದೆಯೇ ಸತಿಸಂಜ್ಞೆ ತನ್ನಯ | ಹಾಳುಬಾಳುವೆ ಕುರಿತು ಹಳಿದಳು |   ಖುಳ್ಳ ಯುಕ್ತಿಯು ಯೋಜಿಸಿದಳಾ ತನ್ನ ಛಾಯೆಯೋಳು ||೨೬ ||
 ಛಾಯೇ ಸಂಜ್ಞೆ ಯ ವರ್ಣ ರೂಪದ | ಮಾಯೆ ಮೂರುತಿಯಾಗಿ ರೂಪಿಸಿ |  ಕಾಯ ಕಾಂತಿಯು ಏಕರೂಪ ಸವರ್ಣ ನಿರ್ಮಾಣ  || ೨೭ ||
ಪ್ರತಿಯ ರೂಪ ಸವರ್ಣೆ ನಿರ್ಮಿಸಿ | ಶ್ರುತಿಸಿ ಆಜ್ಞೆಯ ನಿತ್ತಳೀಪರಿ |  ಸತಿಯು ನೀ ರವಿಗಾಗಿ ರತಿ ಸುಖ ಪಡೆಯುತಿರುಯೆಂದು  || ೨೮ ||
ಮಿತ್ರ ಸತಿಯಾಗಿರುತೆ ನೀನು | ಗೊತ್ತು ಗುರಿ ತಪ್ಪಿಸಲು ಬೇಡ | ಕುತ್ತು ಬಂದರೆ ನನ್ನ ಸ್ಮರಣೆಯು ಮಾಡು ನೀಗಿಪೆನು  || ೨೯ ||
ಸೂರ್ಯನೊಂದಿಗೆ ವಿಷಯಸುಖವನು | ತೂರ್ಯದಿಂದುಪಭೋಗ ಗೊಳ್ಳುತೆ | ಕಾರ್ಯಕಂಟಕ ವೆನಿಸೆ ನೆನೆವುದು ನನ್ನಪೆಸರಿಂದೆ || ೩೦ || 
ಆಜ್ಞೆ ಛಾಯೆ ಸವರ್ಣೆ ಗಿತ್ತು ತಾ - | ಸಂಜ್ಞೆ ತಂದೆಯ ಮನೆಯ ಸೇರಲು | ಸೂಜ್ಞತೆಗೆ ನ್ಯೂನತೆಯು ಬರುವುದು ಕಂಡ ದಕ್ಷ ಪತಿ || ೩೧ ||
ಮಗಳೇ ನೀ ಬಂದಿಹುದು ಯಾಕದು ? | ಬಗೆಯು ಎನಿಹುದೆಂದು ಕೇಳಲು | ಖಗನ ಪ್ರಖರತೆ ಕುರಿತು ಹೇಳಲು ತಂದೆ ಬೋಧಿಸಿದ || ೩೨ ||
ಹಿರಿಯಳಾಗಿಹ ಮೇಲೆ ಕನ್ಯೆಯ | ಹಿರಿಯನಲಿ ಲಗ್ನವನು ಮಾಡಿರೆ | ಸರಿ ಸಮಾನರು ತಂದೆತಾಯಿಗೆ ಮಕ್ಕಳೆಂಬುವರು || ೩೩ ||
ಐದು ಮಕ್ಕಳ ಹೆತ್ತ ಹಿರಿಯಳೆ | ಐದಿದೆಯೆ ಪತಿಯಿಂದ ಪರದಲಿ | ಐದೆತನವಲ್ಲಹುದು ನಿನ್ನಯ ಕೃತಿಗೆ  ಧಿಕ್ಕಾರ ||೩೪ ||
ಕೇಡಿರಲಿ ಒಳ್ಳೆಯದೇ ಇರಲಿ | ಬೇಡಿರಲಿ ಬಿಡುವಾಗಿಯಾಗಲಿ | ನಾಡ ತಿರುಗದೆ ಪತಿಯೆ ಪರದೈವೆಂದು ಬಗೆಯುವುದು  || ೩೫ ||
ಮದುಯಾಗಿಹ ಮಗಳು ತನ್ನಯ | ಸದನದಲಿ ನಲಿನಲಿಯುತಿರುವುದು | ಕದನ ತೆಗೆಯುತ ಎರಡನೆಯ ಸ್ಥಳದಲ್ಲಿ  ಬೇಡುವುದು || ೩೬ ||
ತಾಯಿ ತಂದೆಯ ಸರಿಯೇ ನೀವಿರೆ | ಗಾಯಗೊಂಡರು ನಿಮ್ಮ ಸಂಸಾ - |  ರಾಯತದ ಹೊರ ಬಾರದಂತೆಯೇ ಸಹಿಸಿ ನಡೆಯುವುದು || ೩೭ ||
ಮನವು ಚಂಚಲ ಸ್ಥಿರವೆ ಇರಲಿ | ಘನವು ತನ್ನಯ ಮನೆಯು ಪಿಡಿದಿರೆ | ವಿನಃ ವೇಶ್ಯೆಯ ವೃತ್ತಿಗೆಳೆಯುವ ದೀ ಮನವು ಶುನಗ || ೩೮ ||
ಋತುಮತಿಯು ಆಗಿರಲು ಮಗಳನು | ಪತಿಯಮನೆ ಹೊರತಾಗಿಇರುವುದು | ಪತಿತಪಾಪಿಯು ಎನಿಪುದೂ ಇದು ತಂದೆಮನೆ ಉಂಟು || ೩೯ ||
ಹೆಣ್ಣು ಪುಣ್ಯದ ಪಣತಿ ದೀಪವು | ಬಣ್ಣ ಮೀರಲು ಕೋಟಿ ಕುಲಗಳ | ಗಣ್ಯವೆನೆ ನರಕದೊಳು ಬಿಳುವುದಿರಲು ನಿನ್ನಿಂದ || ೪೦ ||
ತವರಿನಲಿ ಹಿರಿ ಹೆಣ್ಣು ಇರಲದು | ಭವಿಸೆ ದೋಷವು ತಂದೆ ತಾಯಿಗೆ | ಯಾವ ತೀರ್ಥವು ಇಲ್ಲ ಶಕ್ಯವು ಪಾವನಾಗಲ್ಕೆ || ೪೧ ||
ಬೆಳೆದು ನಿಂತಿಹ ಕುದುರೆ ನೀನಿಹೆ | ಹಳಿದು ಪತಿಯನು ತವರು ಸೇರಿದೆ | ಕೀಳ ಕರ್ಮಕೆ ನೀನೆ ಹಯ ರೂಪದಲಿ ಚರಿಸೆಂದ || ೪೨ ||
ತಂದೆ ದೂಡಿದ ಹಳಿದ ಶಾಪಕೆ |  ಬೆಂದುಕೇಳೆ ವಿಶಾಪ ಸಂಜ್ಞೆಯು | ಎಂದುರವಿ ನೆನಪಿನಲಿ ಬರುವನೋ ಹಯದರೂಪದಲಿ || ೪೩ ||
ಬಂದು  ಅಂತಃ ಕರಣದಲಿ ತಾ - | ಚಂದ ಚಕ್ಕಂದವನು ಮಾಡಲು | ಬಿಂದು ಮೂಗಿನ ಮಕ್ಕಳಾದೊಡೆ ಪಾವನೆಯು ನೀನು || ೪೪ ||
ವಿಧವಿಧದಿ ತಿಳಿತಿಳಿಸಿ ದಕ್ಷನು  | ಒದವಿದನು ನುಡಿನೀತಿ ಮಾತನು | ಹೃದಯದುಃಖವ ತಾಳದೆಯೇ ಅಳುತಳುತ ನಡೆದಿಹಳು || ೪೫ ||
ತಂದೆ ತಾಯಿ ಗಳಾಜ್ಞೆ ಪಾಲಿಸಿ | ಸಂದಿಸಲು ಪತಿಪಾದ ಪಾವನ | ಎಂದರಿಯದೆಯೇ ಪಾಪಗುರಿ ಮಾಡಿದೆನು ನಾನಿಂದು || ೪೬ ||
ಬಿಟ್ಟು ಬಂದವಳೆಂದು ನೆರೆಹೊರೆ | ಕೆಟ್ಟ ದೃಷ್ಟಿಲೆ ನೋಳ್ಪರೆಲ್ಲರು | ಕೊಟ್ಟ ಪೆಣ್ಣದು ಕುಲದ ಹೊರತಾಗಿರುವುದೆಂಬುವುರು  || ೪೭ ||
ಪತಿಯ ಮನೆ ಸ್ವಾತಂತ್ರ್ಯ ತಪ್ಪಿಸಿ |  ಹತ ಪರಾಙಮುಖಿ ಪರಾಧೀನತೆ | ಮತಿಹೀನ ವಿಧವೆ ತೆರ ಎನ್ನಯ ಬಾಳು ಬರಿದಾಯ್ತು || ೪೮ ||
ಖಿನ್ನ ಮಾನಸಳಾಗಿ ದೇಹಕೆ | ವಹ್ನಿ ಯುಗ್ಗಲಿ ಉರಿದು ಹೋಗಲಿ | ಇನ್ನು ಜೀವಿಸಲೇನು ಫಲವು ಹೆಣ್ಣು ಜನ್ಮಕ್ಕೆ   || ೪೯ || 
ದಕ್ಷ ನುಪದೇಶವನು ಆಲಿಸಿ | ರಕ್ಷಣೆಯು ಇಲ್ಲೆಂದು ಹೊರಟಳು | ವೀಕ್ಷಿತವು ಒದಗಿಹುದು ಎಂದೆನುತಳುತ ನಡೆದಿಹಳು  || ೫೦ ||
ಡೇಟು ತಪ್ಪಿದ ಹಣ್ಣು ಕೊಳೆವುದು | ಮೇಟಿ ಇಲ್ಲದ ಕರುವು ಕಳೆವುದು | ದಾಟಿ ಹೊಸಲನು ತುಳಿದು ಹೊರಗಾಗಿರುವ ದುಃಖ ದಲಿ || ೫೧ ||
ಅಡವಿಯೊಳು ಏಕಾಂಗಿ ಬಾಲೆಯು | ನಡೆದು ಸಾಗಲು ಕಾಕ ಕಾಮಿಕ | ಕಡೆಯ ನೋಟಕೆ ಗುರಿಯುಆಗುವ ವೇಳೆ ಬಂದೊದಗೆ  || ೫೨ ||
ಮನೆಗೆ ಪೋದರೆ ಮೋಸ ತಿಳಿವುದು | ದಿನಕರನ ಕೋಪವನೆ ಸಹಿಸೆನು | ಶುನಗ ತಲುಪದು ಎಲ್ಲಿ ಅಗಸರ ಮನೆಗು ಹಳ್ಳಕ್ಕೂ  || ೫೩ ||
ಈ ಪರಿಯೋಳಾಲೋಚಿಸುತಲಾ | ಪಾಪಿ ನಾನೆಂದೆನುತ ಅಡವಿಯ | ರೂಪ ಪಲ್ಲಟ ವಾಗುದೇಸರಿ ಎಂದು ತಾ ತಿಳಿಯೇ || ೫೪ ||
ಕಳ್ಳಕಾಕರ ಕಾಮಿಕರ ಕೆಂ - | ಗಣ್ಣ ದೃಷ್ಟಿಗೆ  ಬೀಳದಾಪರಿ | ಮಾಳ್ಪುದೆಂದೆನುತಿರಲು ಆರ್ಕ ಧ್ಯಾನದೊಳು ಸತಿಯು  || ೫೫ ||
ಕೊನೆಗೆ ಭಯದಲಿ ನಡುಗಿನುಡಿದಳು | ದಿನಕರನೆಖಗ ಭಾನು ಭಾಸ್ಕರ | ಎನಗೆನೀನೆ ಗತಿಯು ಪತಿಯೆಂದೆನುತೆ ಕೈಮುಗಿದು || ೫೬ ||  
ಚೆಲುವೆ ಹಯರೂಪವನು ತಾಳಿತು | ಒಲುಮೆ ತೃಣದೊಳು ಪೂರ್ಣವಾಗಿಯೇ | ಗೆಲುಮೆ ಎನಿಸಿತು ವೃತೆಗೆ ತಾನಿದು ಹೇಯಹಯವೆನದೇ || ೫೭ ||  
ಪೂರ್ವ ಪ್ರಜ್ಞೆಯ ಉಳಿಸಿ ಹಯ ತಾ | ನೋರ್ವಳೆಯೇ ರವಿ ಧ್ಯಾನ ತಪವನು | ತೂರ್ಯದಿಂ ನಡೆಸಿಹಳು ನಿರಾಹಾರ ನಿಶ್ಚಲದಿ || ೫೮ ||   
ರವಿಗೆ ಸಂಶಯ ಬರದೆ ಬಹುವಿಧ | ಸವಿಯ ದಿನಗಳ ಕಳೆಯುತಿರಲಾ | ಸವರ್ಣಿಯನೆ ನಿಜ ಸಂಜ್ಞೆ ಎಂದರಿದಿಹನು ವಿಷಯದಲಿ || ೫೯ ||
ಗರತಿಯಾಗಿಹ ಛಾಯೆ ವರ್ಣೆಯು | ಸರತಿ ಕಾಯದೆ ಪೂಷ್ಣ ಮೋಹಿಸಿ | ಹೆರಿಗೆಯಾದಳು ಏಳು ಮಕ್ಕಳ ತಾಯಿ ತಾನಾಗಿ || ೬೦ ||
ಶ್ರಾದ್ಧ ಋಷಿ ಮನು ವ್ಯತಿಪಾತನು | ಅರ್ಧಯಾಮಕು ಲಿಕರು ಪುತ್ರರು | ಭದ್ರೆ ವೈಧೃತಿ ಜನಿಸಿ ಸವರ್ಣೆ ಕನ್ಯೆಯರು ||೬೧|| 
ಕೆಲವುದಿನಗಳು ಕಳೆಯೇ ಮಕ್ಕಳು | ಮಲಮಕ್ಕಳಿಂ ಪತಿಯ ಮಧ್ಯದಿ | ವಿಲಸಿತದಿ ಮಿಲಿಮಿಲಿತಳಾಗಿರೆ ತನ್ನ ಬಾಳಿನಲಿ ||೬೨||
ಒಂದುದಿನ ಶನಿ ಹಸಿವಯಿಂದಲಿ | ಕಂದಕಡು ಹಟಮಾಡಬೇಡಿದ | ತಿಂದುಕೊಳ್ಳುವಕುರಿತು ಕೊಡು ಎಂದೆನುತೆ ಕೇಳಿದನು||೬೩ ||
ಪೂಜೆ ನೈವೆದ್ಯಗಳು ಮುಗಿಯಲಿ | ತೇಜರಾಜರು ಬಂದಬಳಿ ಕೀ | ಭೋಜನವ ನೀಡುವೆನು ತಾಳು ಎಂದಳಾ ತಾಯಿ ||೬೪ ||
ಮೊದಲು ನನಗೆಡೆ ಮಾಡಿಕೊಡು ನೀ| ಉದರದುರಿಯನು ತಾಳೆ ನಾನೇಂ |ದೆದುರಿಸಿದ ಕೆಂಗಣ್ಣ ಕಿಡಿಗಳ ಬಾಲ ಶನಿ ದೇವ ||೬೫ ||
ಸಲುಗೆಯಿಂದಲಿ ಕಂದ ಪಿಂಗಳ | ಬಲದ ಕಾಲನೆ ಎತ್ತಿ ಒದೆದನು | ನಲುಮೆಯರಿಯದೆ ಸವತಿ ಭಾವನೆ ವ್ಯಕ್ತ ಮಾಡಿದಳು ||೬೬||
ಎಲವೋ ಶನಿ ನೀ ನನ್ನ ಮೇಗೆಡೆ | ಛಲದಿ ಕೆಂಗೆಣ್ಣ ಗಳ ತಿರುವಿದಿ | ಬಲದ ಕಾಲನು ಎತ್ತಿದುದು ತಾ ಬತ್ತಿ ಹೋಗಿರಲಿ ||೬೭ ||
ತಾಯಿ ಮನ್ನಣೆಬಿಟ್ಟು ಒದೆಯುವಿ |ಹೇಯಕಾರ್ಯಕೆ ಮನವ ಒಪ್ಪಿತೆ | ಮಾಯೆ ಮೋಹವ ಅರಿಯದಿಹ ಹುರಿಗಾಲ ಕಾಲನೆ ನೀ ||೬೮ ||
ಹೆಳವನಾಗೆಲೋ ಒಲುಮೆ ಬೇಡೆಲೋ | ಹಳಿದು ಶಾಪವ ಕೊಟ್ಟುಬಿಟ್ಟಳು | ಅಳುತೆ ತಾಯಿಯ ಬಗೆಗೆ ಸಂಶಯಕಂಡ ಕಂದ ಶನಿ ||೬೯ || 
ಕಳವಳದಿ ಶನಿ ತಂದೆ ಎಡೆ ನಡೆ | ಗಳುಹಿದನು ಹಳಿ ಹಳಿದ ಶಾಪವ || ತಿಳುಹಿ ತಾಯಿಯ ಬಗೆಗೆ ಸಂಶಯ ಬರುವುದೆನಗೆಂದ ||೭೦ ||
ಪಿಂಗಳನ ಕಂಗಳದಿ ಕಂಬನಿ | ಯಂಗಳನು ಗಲಿತವನು ಕಂಡೊಡೆ | ಹಿಂಗಿಸಲು ಹಟವನ್ನು ಕೇಳಿದ ನುಡಿಯ ರವಿ ರಾಯ || ೭೧ || 
ಸುತಗೆ ಶಾಪವ ನೀವ ಘಟನೆಯು | ಮಾತೃವೃತ್ತಿ ಗಧರ್ಮ ವೆನಿಸಿತು | ಮಾತುಮೊದಲಿದೆ ಲೋಕದೊಳ್ ಕೇಳಿದುದು ಅಚ್ಚರಿಯ ||೭೨ ||
ಮಗನ ಹಟಕೆದುರಾಗಿ ಶಾಪವ | ನಿಗುವ ತಾಯಿಯು ನಿಜವೊಸುಳ್ಳೋ | ಬಗೆಯು ಸುಜ್ಞಾನದೊಳು ದೃಷ್ಟಿಯನಿರಿಸಿ ನೋಡಿದನು ||೭೩||
ತಿಳಿದು ಅಂತರ್ಜ್ಞಾನ ದಿಂದಲೇ | ಉಳಿದ ಛಾಯೆ ಸವರ್ಣಿ ಸಂಜ್ಞೆಯು | ಅಳಿದು ಹೋಗಿದ ರೂಪ ತನು ಹಯವಾಗಿ ತಪದಲ್ಲಿ ||೭೪||
ಮಗನ ತಿಳುವಳಿಕೆಯನು ಗ್ರಹಿಸಿಯೇ | ಖಗನು ಕೇಳಿದ ವರ್ಣೆ ಸತಿಯಳ | ನಿಗಿನಿಗಿಪ ಬಲು ಕೆಂಡಕೋಪದಿ ಬಂದು ಕೇಳಿದನು ||೭೫ ||
ಮೊಸದಂದಲೇ ಇರುವ ನೀನು | ವಾಸಮಾಡಿದೆ ಯಾರು ಪೇಳದು | ನೇಸರನು ನಿಜ ಕೇಳೆ ತಾನದು  ವರ್ಣೆ ಪೇಳಿದಳು  ||೭೬||
ನಾನು ಸಂಜ್ಞೆ ಯ ದೇಹ ನೆರಳು | ತಾನೇ ನಿರ್ಮಿಸಿ ನನ್ನ ನಿರಿಸಿದ | ಭಾನು ಸೇವೆಯ ಹಚ್ಚಿ ಹೋದಳು ಸಂಜ್ನೆದೇವಿಯು ತಾ ||೭೭ ||
ಗರತಿ ಸರತಿಯು ನನ್ನ ಏಳು | ವರಕುಮಾರರು ಕುವರಿಯವರು | ಇರುವ ನನ್ನೆಡೆ  ದೋಷವಿಲ್ಲವು ವರ್ಣೆ ಪೇಳಿದಳು  || ೭೮|| 
ಬಳಿಕ ಸೂರ್ಯನು ಶನಿಗೆ ಪೇಳಿದ | ತಿಳಿಯುದೀಕೆಯು ತಾಯಿ ಸರಿ ಎಂ | ದಳಯು ಶಾಪವು ವ್ಯರ್ಥ ವಾಗದೆ ಹೆಳವತನವಹುದು ||೭೯||
ಕಾಲುಗಳು ಪರಿಪೂರ್ಣ ಹೋಗದೆ | ಪಾಲನೆಯು ಉಂಟಾಗಲವಳಿಂ | ಬಾಲಕನೆ ಕುಂಟಾಗಿ ಉಳಿಯುವಿ ಬಾಧೆ ಇಲ್ಲೆಂದ || ೮೦ ||
ಚಿಕ್ಕ ಮಗು ತಾ ಶೋಕದಿಂದಲಿ | ಬಿಕ್ಕಿ ಬಿಕ್ಕಳುತಿರಲು ಸೂರ್ಯನು | ನಿಕ್ಕು ತಾಯಿಯು ತಪದಿ ತಲ್ಲಿ ನಿಹಳು ಮೇರುವಲಿ  || ೮೧ ||
ಮೋಸದಿಂ ಮನೆಬಿಟ್ಟು ಪೋಗಿಹ | ಹೇಸಿ ಹೆಂಗಸು ಪಶ್ಚಾತ್ತಾಪದಿ | ಬೇಸಿ ಬೇಯಲಿ ಇನ್ನು ಬಹುದಿನ ಎಂದು ರವಿ ನುಡಿದ ||೮೨ ||
ಶನಿಯು ದುಃಖದಿ ನಿಜದ ತಾಯಿಯ | ನೆನೆದು ಕೊರಗುತೆ ಅಣ್ಣ ಯಮನಿಗೆ | ಕನವರಿದು ಕೇಳಿದನು ಅವಮಾನಿತನು ತಾನಾದ ||೮೩ || 
ಕಾಲರಾಯನೆ ತಾಯಿ ಕಳೆದಳು | ಕಾಲ ಕುಂಟತೆ ಶಾಪವಾಯಿತು   | ಮೂಲ ಅಂತಃಕರಣ ತಾಯಿಯ ಇಲ್ಲದಿರೆ ಎಮಗೆ ||೮೪ ||
ತಾಯಿ ಇಲ್ಲದ ತಬ್ಬಲಿಯು ಮಲ- | ತಾಯಿ ಮತ್ಸರದಿಂದ ಶಿಕ್ಷೆಯು | ಆಯಿತೀತೆರ ಸಹನೆ ಮೀರಿತು ಅಣ್ಣ ಕೇಳೆಂದ ||೮೫ ||
ಅಂತಕನು ಈ ಮಾತು ಆಲಿಸಿ | ಅಂತಃಕರಣದಿ ತಮ್ಮ ನಿಗೆ ತ-| ನ್ನಂತರಂಗವ ಅರುಹಿದನು ತಪಕುರಿತು ದುಡಿಯುವನು ||೮೬||
ನಮ್ಮ ಪುಣ್ಯವೇ ಕಡಿಮೆಯಾಗಿದೆ | ತಮ್ಮ ಹೆರವರ ಹಳಿದು ಫಲವೇ? | ಬ್ರಹ್ಮ ಬರಹಕೆ ಸಾಟಿಯಾರಿಹರೀ ಜಗದಿ ಜೀವಿ ||೮೭||
ವಾರಣಾಸಿಗೆ ಹೋಗಿ ಈಶನ | ಕುರಿತು ತಪವನು ಮಾಡಬೇಕು | ಹಿರಿಮೆ ದೈವಿ ಶಕ್ತಿ ಪ್ರಾಪ್ತಿಯ ಮಾಡಿಕೊಳ್ಳೋಣ ||೮೮||
ಭದ್ರೆ ಯಮ ಶನಿ ನಡೆದು ಕಾಶಿಗೆ | ಶುದ್ಧರಾದರು ಗಂಗೆ ಮಿಂದರು | ಸಿದ್ಧಿತಪ ಆನಂದ ವನದಲಿ ಮಾಲ್ಪುದಕೆ ಪೋಗಿ ||೮೯||
ರುದ್ರ ದೇವರ ಪೂಜೆ ನ್ಯಾಸವು | ಸಿದ್ಧಿ ಸಂಕಲ್ಪವನು ಮಾಡಿಯೇ | ಬದ್ಧ ಪದ್ಮಾಸನದಿ ಆನುಷ್ಠಾನ ನಡೆಸಿದರು ||೯೦||
ಲಿಂಗ ರಚಿಸಿದ ಶ್ರೀ ಶನೈಶ್ಚರ | ತಂಗಿ ಭದ್ರೆಶ್ವರ ಯಮೆಶ್ವರ | ಅಂಗ ನಾಮವೆ ಇರಿಸಿ ಉಗ್ರತೆಯಿಂದ ಜಪಿಸಿದರು ||೯೧||
ತಪವ ಗೈಯುತ್ತಿರಲು ಮೂವರು | ಅಪರಿಮಿತ ದಿನಗಳೆಯ ಪ್ರತಿಫಲ | ಕುಪಿತ ಸೂರ್ಯನು ಶಾಂತ ವೃತ್ತಿಯ ಹೊಂದಿ ದಯಹುಟ್ಟಿ ||೯೨||
ವಿರಹ ವ್ಯಥೆಯಿಂ ಮರಗುತಿಹ ಸತಿ | ಇರುವ ಮೇರುವ ಹುಡುಕಿ ಬಂದನು | ತುರಗ ರೂಪದಿ ಕುಳಿತ ಸಂಜ್ಞೆಯ ಕಂಡು ಬೆರಗಾದ ||೯೩||
ದಕ್ಷ ಪ್ರಜಪತಿ ನುಡಿದ ಸಿಟ್ಟಿನ | ರುಕ್ಷ ಮಾತಿಗೆ ಮಗಳ ನಡತೆಗೆ | ತಕ್ಕ ಶಿಕ್ಷೆಯ ತಿಳಿದು ರವಿ ಹಯ ರೂಪ ಧರಿಸಿದನು ||೯೪||
ಪತಿಯ ರೂಪ ಸರುಪ್ಯವಾಗಿ | ಅತಿಶಯದಿ ಪ್ರೆಮಾಂಬು ಪುಟ್ಟಿ | ಋತುಮತಿಯು ತಾನಿಹುದು ತಿಳಿದು ಸಂಜ್ಞೆ ಸಾನಿಧ್ಯ ||೯೫||
ಸಾಮಿಪ್ಯದೊಳು ರವಿ ಹರುಷದಿರಲು | ಕಾಮ ವಾಸನೆ ಹುಟ್ಟಿ ಮುದ್ದಿಸೆ | ಪ್ರೇಮ ಸಲ್ಲಾಪದೊಳು ಸೂರ್ಯ ವೀರ್ಯವು ಸ್ಖಲಿಸೆ ||೯೬||
ವೀರ್ಯ ವಾಸನೇ ಘ್ರಾಣ ಮಾರ್ಗದಿ | ತೂರ್ಯದೊಳು ಎಳೆ ಸಂಜ್ಞೆ ತನ್ನೊಳು | ಭಾರ್ಯೆ ಮೂಗಿನ ಮಡಿಲು ಗರ್ಭವು ಪಿಡಿದು ಕೆಲ ದಿನದಿ ||೯೭|| 
ವೀಡೆ ಪಿಂಗಲೇ ಹೊರಳಿ ಗಳಿತದಿ | ನಾಡ ಸುಂದರ ಅವಳಿ ಪುತ್ರರು | ಕಾಡಿನಲಿ  ಅಶ್ವಿಜಯ ವೈವಸ್ವತರು ಜನಿಸಿದರು ||೯೮||
ಅವಳಿಗಳು ಮೊಮ್ಮೊದಲ ವೈದ್ಯರು | ಕುವರ ಅಶ್ವಿನಿ ಎಂಬ ಪೆಸರಿಂ -| ದಿವಿಜ ಕುಲ ಶುಶ್ರೂಷೆ ಅಧಿಪತಿ ಎನಿಸಿ ಕೊಂಡಿಹರು ||೯೯||
ಕುದುರೆಯಾಗಿಹ ಸೂರ್ಯ ಸಂಜ್ಞೆ | ಉದಯಿಸಿದ ಪಶು ಯೋನಿಯಿಂ ಮುಂ - | ಕ್ತ ದುವು ಎಲ್ಲಿದೆ ಎಂಬ ಚಿಂತೆಯ ಮಾಡಿ ನಡೆದಿಹರು ||೧೦೦||
ತಿರುಗುತಿಹ ತಾಯ್ತಂದೆಗಳ ಈ | ಪರಿಯ ಪಾವನ ಕುರಿತು ತಪದೊಳು | ಇರುತಿರಲು ಹನ್ನೆರಡು ಸಾವಿರ ವರುಷ ಶನಿ ಕಳೆಯೇ || ೧೦೧ ||
ಶಂಕರಗೆ ಆನಂದ ವಾಗಲು | ಕಿಂಕರನೆ ಶನಿ ತಪಕೆ ಮೆಚ್ಚಿದೆ | ಶಂಕೆ ಬಿಡುನೀ ಶಿವನು ಬಂದಿಹೆ ಕಣ್ಣು ತೆರೆಎಂದ || ೧೦೨||
ಚಂದ್ರ ಮೌಳಿಯ ನೋಡಿ ಪಿಂಗಳ | ಮಂದ್ರ ಸರದಲಿ ಪ್ರಾರ್ಥಿಸಿದ ಮ - | ಹೇಂದ್ರ ಗೌರಿ ವರನೇ ಶಂಭುವೆ ಶೂಲ ಖಟ್ವಾನ್ಗ || ೧೦೩ ||
ಗಂಗೆ ಜಡೆ ರುದ್ರಾಕ್ಷಿ ಧಾರಿ ಭ -| ಸ್ಮಾಂಗ ಸುಂದರ ಫಾಲ ನಯನನೆ | ಶೃಂಗಿ ಭೃಂಗಿ ಗಳಿಂದ ರಂಜಿಪ ಲಿಂಗ ಜಂಗಮನೆ || ೧೦೪ ||
ಮೈದಡವಿ ಮೇಲೆತ್ತಿ ಶಿವ ತಾ – | ನೈದೆ ಭಕ್ತಿಗೆ ಒಲಿದೆ  ಬೇಡುನಿ | ವೇದಿಸೆಂದಭಯವನು ಕೊಟ್ಟನು ನಮಿಸಿ ಶನಿರಾಯ || ೧೦೫ ||
ಏನು ಬೇಡಲಿ ದೇವ ನಿನ್ನೊಳು | ನೀನೆ ನನ್ನವನಾಗಿ ಉಳಿಯಲಿ | ಜ್ಞಾನ ದೃಷ್ಟಿಯ ಸರ್ವ ಅಂತರ್ಯಾಮಿ ನೀನಿರುವೆ || ೧೦೬ |\
ಬೇಕು ಬೇಡೆಂಬುವುದು ನನ್ನೊಳ | ಎಕೆ ನುಡಿಸುವಿ ದೇವ ಅರಿತವ | ಸಾಕು ತಿಳಿದವ ನೀಗಿಪುದು ವಾಂಛಿತವು ನಿನಾಗೇ || ೧೦೭ ||
ವಚನವ ಕೇಳಿ ಶಂಭುವು | ವದನ ನುಡಿ ಬಿತ್ತರಿಸಿ ಪೇಳಿದ | ಸದಯ ಹೃದಯನೆ ಮಂದ ನೀಲನೇ ಪೂರ್ತಿ ನಿನ್ನಿಷ್ಟ || ೧೦೮ ||
ನಿನ್ನ ತಾಯಿಯ ಪೂರ್ವ ರೂಪವು | ನಿನ್ನ ತಂಗಿಯು  ಯಮುನೆ ಮಿಂದಿರೆ | ನಿನ್ನ ಮನದಿಂಗಿತವು ಅಕ್ಕುದು ಇದುವೇ ಸಹಜಾಯ್ತು || ೧೦೯ ||
ವಾಜಿ ರೂಪದ ನಿನ್ನ ತಾಯಿಯ | ಹೆಜ್ಜೆ ಕೆಳಗದು ಲಾಳ ಗುರುತನು | ತಜ್ಜನಿತ ಚಿರ ಚಿತ್ತ ವಿರಿಸುತೆ ಶೋಧಿಸುವುದೆಂದ || ೧೧೦ ||        
ತಪದ ಫಲವಿದು ಅಲ್ಲ  ನಾನೇ -| ಸುಪ್ರಸನ್ನದಿ ದಯವು ಮಾದುತೆ | ಸಪ್ತಗ್ರಹ ಶ್ರೇಷ್ಟತೆಯು ನಿನಗಿದೆ ಎಲ್ಲ ಗ್ರಹಗಳಲಿ || ೧೧೧ ||
ತಪ್ಪು ಮಾಡಿರೆ ಶಿಕ್ಷೆ ವಿಧಿಸುವೆ | ತಪ್ಪು ಯಾವುದೆಂ ತಿಳಿಯ ಹೇಳುವೆ | ತಪ್ಪಿಗೆಡೆ ಮಾಡುತಿರೆ ನ್ಯಾಯದಿ ಶಾಸನವು ಖಚಿತ ||೧೧೨ ||
ಪೀಡೆಕೊಡುವುದರಲ್ಲಿ ಎಲ್ಲರ | ಕಾಡುಗ್ರಹಗಳ ನಡುವೆ ಶ್ರೇಷ್ಟನು | ನಾಡ ದೇವತೆ ನಡುಗುವರು ನೀ  ನೋಡೆ ವಿವಿಧದಲಿ || ೧೧೩ ||
ದೃಷ್ಟಿ ಬಲ ಬಹು ಉಗ್ರ ವ್ಯಗ್ರವು | ಕಷ್ಟ ಕಾರ್ಪಣ್ಯತೆಯು ಪುಟ್ಟಿಪ | ಇಷ್ಟ ನಿಷ್ಠ ಗಳೆಲ್ಲ ನಡೆವುದು ಡೊಂಕು ಸಾಗುಣಿಯ ||೧೧೪ ||
ತ್ರಯತ್ರಿOಶತಿ ಕೋಟಿ ದೇವತೆ | ಭಯವು ಪಡೆವರು ನಿನ್ನ ಕಂಡೊಡೆ | ಜಯಪಜಯಗಳು ಸೌಖ್ಯ ದುಃಖ ಗಳೆಲ್ಲ ನಿನ್ನಿಂದ ||೧೧೫ ||
ನಿಂದ ರಾಶಿಗೆ ಎರಡುವರೆ ಇರೆ | ಮುಂದು ರಾಶಿಗೆ ವಕ್ರ ದೃಷ್ಟಿಯು | ಹಿಂದೆ ರಾಶಿಗೆ ಸೌಮ್ಯ ನಾಗುತ ಏಳುವರೆ ವರುಷ ||೧೧೬ ||
ಸರ್ವ ಗ್ರಹಗಳ ಮಧ್ಯ ಬಲ ಶಾ -| ಲಿರ್ವ  ಗ್ರಹ ಗಂಭೀರ ಉಗ್ರನು | ದರ್ಪ ಗೈಯುವ ನಿನ್ನ ಸರಿ ಇಲ್ಲೆಂದ ಗೌರಿಹರ ||೧೧೭ ||
ಪನ್ನೆರಡು ರಾಶಿಗಳ ಭೋಗಿಪ | ತನ್ನಡುವೆ ಎರಡೂವರೆ ವರುಷದಿ | ತನ್ನ ಸುತ್ತಿದ ಜೇಡನಂತೆ ಉದರದೊಳೆ ಬರುವಿ ||೧೧೮ ||
ಎರಡುವರೆ ವರುಷದಲಿ ಚಾಂಡಲ | ಚರಣದಿರಿಸುವಿ ಜನರ ಜೀವನ | ದುರಹಂಕಾರಕೆ ಪಾರುಪತ್ಯವ ಗೈವೆ ಶನಿ ಕುವರ ||೧೧೯ ||
ಸ್ಥಾಪಿಸಿದ ಲಿಂಗಕ್ಕೆ ನಿನ್ನಯ | ಔಪ್ಯ ನಾಮವು ಶನೈಶ್ವರ ವೆಂ-| ದಪ್ಪುದೈ ನಾನಿಟ್ಟ ಪೆಸರಿದು ಪೂರ್ಣ ರೂಪದಲಿ ||೧೨೦ ||
ಇಷ್ಟ ಲಿಂಗದು ಶನೈಶ್ಚರನಿಗೆ | ನಿಷ್ಠೆಯಿಂ ಪೂಜೆಯನು ಮಾಳ್ಪರ |  ಕಷ್ಟ ಸಂಕಟ ದುರಿತ ದೂರಿ ಕರಿಸುವುದು ಎಂದ  ||೧೨೧||
ಕಡುಮಮತೆಯಲಿ ತಲೆಮೇಲೆ ಕೈಯನು | ಇಡುತೆ ಹರಿಸಿದ ಶುಭವನಿನಗಿದೆ | ಮೃಡನು ಅಂತರ್ಧಾನ ಗೌಪ್ಯನು ಆದನೆದರಿನಲಿ ||೧೨೨||
ಶನಿಯು ಸಾಷ್ಟಾಂಗವನೆ ಹಾಕಿದ | ಕೊನೆಗೆ ಉತ್ತರ ಪೂಜೆ ಮುಗಿಸಿಯೇ | ವಿನಯದಿಂದಲೇ ಹೊರಟು ನಡೆದನು ಮೇರುಗಿರಿಎಡೆಗೆ ||೧೨೩||
ಮಾತೃ ಸ್ಥಾನವು ಶೋಧಿಸುತೆ ಅಣು | ಮಾತ್ರ ಚಿತ್ತವು ಸುಳಿವು ಹೊಳವು ಗ - | ಳೆತ್ತಿ ಅತ್ತಲು ನೋಡುತಿರೆ ಕುರುಹೊಂದು ದೊರಕಿಹುದು ||೧೨೪||
ದೇವತೆಗಳಾ ಹೆಜ್ಜೆ ಗುರುತಿಸೆ | ಧಾವಿಸಿದ ಒಂದೆರಡು ಕಂಡವು | ಠಾವಿನಿಂ ರವಿ ಪಾದ ಎಂಬುದು ತಿಳಿದು ನಮಿಸಿದನು || ೧೨೫ ||
ಮುಂದೆ ಮುಂದೆಡ ಸಾಗುತಿರಲಾ | ನಿಂದ ತಾಯಿಯ ತಪದ ಸ್ಥಳದೊಳು | ಚಂದ್ರ ಲಾಳದ ಹೆಜ್ಜೆ ಎಂಟಡಿಗಳನು ಗುರುತಿಸಿದ ||೧೨೬||
ಲಾಳ ಗುರುತನು ಹುಡುಕಿ ನಡೆಯಲು | ಕಾಳ ವಿಂಧ್ಯದ ಕಪ್ಪು ಗಿರಿಯೆಡೆ | ನೋಳ್ಪುವುದರೋಳ್ ತಂಗಿ ಮನೆಯನು ಕಂಡ ಕ್ಷಣದೊಳಗೆ ||೧೨೭||
ತಂಗಿ ಕಂಡೊಡೆ ಹರುಷದಿಂದಲಿ | ಇಂಗಿತವು ಇದು ಏನು ಎಂದೊಳೆ | ಮಂಗಳದ ಸೂತ್ರಾಧಿಪತಿ ಕಾಳಿಂದ ಗಿರಿರಾಯ || ೧೨೮ ||
ಕಪ್ಪು ಹಸಿರಿನ ವರ್ಣ ತಿರುಗಿದ | ಒಪ್ಪು ಪತಿ ರೂಪವನು ಧರಿಸಿದ | ಇಪ್ಪ ತನ್ನಯ ಕತೆಯ ಪೇಳಿದ ಯಮುನೆ ಸೌಭಾಗ್ಯ ||೧೨೯ ||
ಅಣ್ಣ ತಿರುಗುವುದೇನು ಕಾರಣ | ಸಣ್ಣ ಮುಖವನೆ ಮಾಡಿ ಕುಳಿತಿಹೆ | ಬಣ್ಣ ಗೆಟ್ಟಿಹ ನನ್ನ ಬಗೆಗೆ ಚಿಂತೆ ನಿನಗಾಯ್ತೆ ||೧೩೦ ||  
ಹಸಿರು ನೀಲಿಹ ಪತಿಯು ವರ್ಣದಿ | ರಸವಿಸಿಯೇ ಹರಿದಿಹೆನು ಬೆಳ್ಳನ | ಹಸನ ನೀರದು ಕಪ್ಪು ವರ್ಣದಿ ತಿರುಗಿ ತಿರುಗಿರುವೆ ||೧೩೧ ||
ಓಘದಲಿ ಪೋದೆಡೆ ಮುಂದೆ ಗಂ -| ಗೌಘ ಕೂಡಿದೆ ಉದಯ ಚಲದೆಡೆ | ಬಾಗಿ ಸಾಗಿದೆ ಅಷ್ಟದಿಸೆಗಳ ವ್ಯಾಪಿಸಿದೆ ಮುಂದೆ ||೧೩೨ ||
ತಂದೆ ಕೈಪಿಡಿದೆನ್ನ ಪೃಥ್ವಿಯ | ಹೊಂದಿಸಿದ ಕಾಳಿಂದಿ ನಾಮವು | ಇಂದು ಪಡೆದೆನು ಸಪ್ತ ಸಾಗರ ಕೂಡಿ ಒಡನಾಡಿ ||೧೩೩ ||
ತಂಗಿ ಯಮುನೆಯೇ ಪ್ರಮಾದವೇ ತು -| ರಂಗರಾಗಿಯೇ ತಂದೆತಾಯಿ ಗ- | ಳಂಗ ಬದಲಿಸಿ ಹೋಗಿ ತಿರುಗುತೆ ಪೋದರವರೆಲ್ಲಿ ||೧೩೪ ||
ಎಂಬುದನು ಹುಡುಕುತಲೇ ನಡೆದಿಹೆ | ಅಂಬು ದೇವಿಯೇ ನಿನ್ನ ಕಂಡೆನು | ಮುಂಬರುವ ಕುರುಹನ್ನೇ ಅರಿತಿಹೆ ನೀನೆ ಪಾವನೆಯು ||೧೩೫ ||
ಹಯದ ರೂಹನು ಬದಲಿಸಲ್ಕೆಯು | ದಯದ ಉದಕಯು ನಿನ್ನದಾಗಿದೆ | ದಯದಿ ನಿನ್ನಯ ನೆನೆದೊಡನೆ ಬರಬೇಕು ಕೇಳೆಂದ ||೧೩೬ ||
ಲಾಳ ಹೆಜ್ಜೆಯ ಹುಡುಕಿ ಬಂದೆನು | ಕಾಳ ಪರ್ವತ ರಾಜ ಕಂಡೆನು | ತಾಳಿ ಕೊಳ್ಳೌ ತಿರುಗಿ ಬರುವೆನು ಹೊರಟ ಶನಿರಾಯ ||೧೩೭ ||
ಚಿತ್ತ ಐಕ್ಯತೆ ತಾಯ ಅಡಿಯೊಳು | ಮತ್ತೆ ಮುಂದಕೆ ನಡೆದು ನೋಡುತೆ | ಸುತ್ತರಿದ ನವಖಂಡ ಪೃಥ್ವಿಯ ಪರಿಘ ತಿರುಗಿದೆನು ||೧೩೮ ||
ಕಟ್ಟಕಡೆಯಲಿ ಉದಯಚಲದಡಿ | ದಿಟ್ಟಿ ಇಡುತಿರೆ ಎದುರು ಹಯಗಳು | ತಟ್ಟನೆಯೇ ನೆನೆ ತಂಗಿ ಯಮುನೆ ಹರಿದು ಬಂದಿಹಳು ||೧೩೯||
ಯಮುನೆ ಹರಿಯುತ ಒಲವಿನಿಂದಲಿ | ಶಮನ ಗೈದಳು ಹಯದ ರೂಹವ | ನಮನ ಗೈದರು ಶನಿಯುಯಮುನೆಯು ತಂದೆತಾಯರಿಗೆ ||೧೪೦||  
ತಾಯಿ ಸಂಜ್ನೆಯ ಅಪ್ಪಿ ಶನಿ ತಾ - | ಕಾಯ ಕಲ್ಪ ತರುವನ್ನು ನಂಬಿದ | ಪ್ರಿಯ ನಿನ್ನಯ ಪಾದ ಲಾಳವೇ ನನ್ನ ಮೂರುತಿಯು ||೧೪೧ ||
ಅಮರರೆಲ್ಲರು ಅಮರಪುರಿಯಿಂ | ಸುಮನ ವೃಷ್ಟಿಯ ಮಾಡಿ ಜಯ ಜಯ | ಚಮರವಾಡಿಸಿ ಸಂಜ್ಞಸುತ ಸಂಸ್ತುತನ ಕೊಂಡಾಡಿ ||೧೪೨||
ಶನಿಯ ನೆನವಿಗೆ ಅವನ ಲೋಕವೇ | ವನಿತೆ ಶತ ಕಂಕಣೆಯ ಕೂಡಿಯೇ | ಘನತೆಯಿಂ ಬಾಳಿದನು ದೇವತೆಗಳಿಗೆ ಮಿಗಿಲಾಗಿ ||೧೪೩||
ತಂದೆ ತಾಯಿಯ ಸೇವೆ ಗೈದನು | ಇಂದುಧರ ಪ್ರಸನ್ನ ಪಡೆದನು | ಸಂಡಿದನು ಶಿವ ಸನ್ನಿಧಾನದಿ ಶ್ರೇಷ್ಠ ಗ್ರಹನೆಂದು ||೧೪೪||
ವಿರಹಿಗಳಿಗಿದು ಒಂದು ಮಾಳ್ಪುದು | ತರುಳರೊಳು ನಿಷ್ಟೆಯನು ಪುಟ್ಟಿಪ ದುರುಳರಿಂ ರಕ್ಷಿಪುದು ಕೇಳೆ ಕಥೆಯು ಶನಿ ಜನುಮ ||೧೪೫|| 
ಸರಳಗನ್ನಡ ಭಾಷೆಯಲಿ ಕಥೆ | ಬರೆಹದಿಂ ವರ್ಣಿಸಿದೆ ನ್ಯೂನತೆ - | ಬರದತೆರ ಅರ್ಥವನು ಬುದ್ಧಿಗೆ ನೀಡಿ ಶನಿದೇವ ||೧೪೬||
ಇಂತಿಶ್ರೀ ಶನೈಶ್ಚರ ಚರಿ ತಾ - | ದ್ಯಂತ ಸ್ಫೂರ್ತಿಯ ನೀಡುತಿರೆ ತಾ - | ನಾಂತು ಮಹತಿಯು ಗೈಮೆ ಶ್ರೀ ಗೋವಿಂದರಾಜಮರ ||೧೪೭||
ಇತಿ ಪುರಾತಿಹದ ಕಥೆಗಳು | ಮಥಿಸಿ ಸೀತಾರಾಮ ತುಳಸಾ - | ಸುತನಸವಿಗತೆ  ಪ್ರಥಮದ  ಶ್ರೀ ಕೃಷ್ಣ ಅರ್ಪಣೆಯು ||೧೪೮||
ಇಂತಿ ಶ್ರೀ ಶನೈಶ್ಚರ ಚರಿತಂ ಪುರಾಣದೋಳ್ ಪ್ರಥಮ ಸವಿಗಥಾ ಸಂಧಿ ಒಂದಕ್ಕುಂ ಪರಿಪೂರ್ಣಂ



No comments:

Post a Comment