ಶ್ರೀ ವಿಘ್ನೇಶ್ವರ ಸಂಧಿ
ಶ್ರೀ ಹರಿ ಕಥಾಮೃತಸಾರ ಅಂತರ್ಗತ
ಶ್ರೀ ಗುರುಭ್ಯೋ ನಮಃ
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಪೇಳುವೆ ಪರಮ ಭಗವದ್ ಭಕ್ತರಿದ ನಾದರದಿ ಕೇಳುವುದು ||
ಶ್ರೀಶನಂಘ್ರಿ ಸರೋಜಭೃಂಗ ಮಹೇಶಸಂಭವ ಮನ್ಮನದೊಳು ಪ್ರಕಾಶಿಸನುದಿನ ಪ್ರಾರ್ಥಿಸುವೆ ಪ್ರೇಮಾತಿಶಯ ದಿಂದನೀ ಸಲಹು ಸಜ್ಜನರ ವೇದ ವ್ಯಾಸ ಕರುಣಾಪಾತ್ರ ಮಹದಾಕಾಶ. ಪತಿ ಕರುಣಾಳು ಕೈಪಿಡಿದೆಮ್ಮನುದ್ಧರಿಸು ||೧||
ಏಕದಂತ ಇಭೇಂದ್ರಮುಖ ಚಾಮೀಕರಕೃತ ಭೂಷಣಾಂಗ ಕೃಪಾಕಟಾಕ್ಷದಿ ನೋಡು ವಿಜ್ಞಾಪಿಸುವೆ ನೀ ಇಂತೆಂದುನೋಕನೀಯನ ನುತಿಸುತಿಪ್ಪ ವಿವೇಕಿಗಳ ಸಹವಾಸ ಸುಖಗಳ ನೀ ಕರುಣಿಸು ವುದೆಮಗೆ ಸಂತತ ಪರಮಕರುಣಾಳು ||೨||
ವಿಘ್ನರಾಜನೆ ದುರ್ವಿಷಯದೊಳು ಮಗ್ನವಾಗಿಹ ಮನವ ಮಹದೋ ಷಘ್ನನಂಘ್ರಿ ಸರೋಜಯುಗಳದಿ ಭಕ್ತಿಪೂರ್ವಕದಿ ಲಗ್ನವಾಗಲಿ ನಿತ್ಯಾನರಕ ಭಯಾಗ್ನಿ ಗಳಿಗಾನಂಜೆ ಗುರುವರ ಭಗ್ನಗೈಸೆನ್ನವ ಗುಣಗಳನು ಪ್ರತಿದಿವಸದಲ್ಲಿ ||೩||
ಧನಪ ವಿಷ್ವಕ್ಸೇನ ವೈದ್ಯಾಶ್ವಿನಿಗಳಿಗೆ ಸರಿಯೆನಿಪ ಷಣ್ಮುಖನನುಜ ಶೇಷಶತಸ್ಥದೇವೋತ್ತಮ ವಿಯದ್ಗಂಗಾ|ವಿನುತ ವಿಶ್ವೋಪಾಸಕನೆ ಸನ್ಮನದಿ ವಿಜ್ಞಾಪಿಸುವೆಲಕುಮೀವನಿತೆಯರಸನ ಭಕ್ತಿಜ್ಞಾನವ ಕೊಟ್ಟು ಸಲುಹುವುದು ||೪||
ಚಾರುದೇಷ್ಣಾಹ್ವಯನೆನಿಸಿ ಅವತಾರಮಾಡಿದೆ ರುಕ್ಮಿಣೀಯಲಿಗೌರಿಯರಸನ ವರದಿ ಉದ್ಧಟರಾದ ರಾಕ್ಷಸರ|ಶೌರಿಯಾಜ್ಞದಿ ಸಂಹರಿಸಿ ಭೂಭಾರವಿಳುಹಿದ ಕರುಣಿತ್ವತ್ಪಾ ದಾರವಿಂದಕೆ ನಮಿಪೆ ಕರುಣಿಪುದೆಮಗೆ ಸನ್ಮತಿಯ||೫||
ಶೂರ್ಪಕರ್ಣ ವಿರಾಜಿತೇಂದುವ ದರ್ಪಹರ ಉದಿತಾರ್ಕ ಸನ್ನಿಭಸರ್ಪವರ ಕಟಿಸೂತ್ರ ವೈಕೃತಗಾತ್ರ ಸುಚರಿತ್ರ|ಸ್ವರ್ಪಿತಾಂಕುಶಪಾಶಕರ ಖಳ ದರ್ಪಭಂಜನ ಕರ್ಮಸಾಕ್ಷಿಗತರ್ಪಕನು ನೀನಾಗಿ ತೃಪ್ತಿಯ ಬಡಿಸು ಸಜ್ಜನರ ||೬||
ಖೇಶಪರಮಸುಭಕ್ತಿಪೂರ್ವಕ ವ್ಯಾಸಕೃತ ಗ್ರಂಥಗಳನರಿತುಪ್ರಯಾಸವಿಲ್ಲದೆ ಬರೆದು ವಿಸ್ತರಿಸಿದೆಯೊ ಲೋಕದೊಳು|ಪಾಶಪಾಣಿಯೆ ಪ್ರಾರ್ಥಿಸುವೆನುಪದೇಶಿಸೆನಗದರರ್ಥಗಳಕರುಣಾಸಮುದ್ರ ಕೃಪಾಕಟಾಕ್ಷದಿ ನೋಡಿ ಪ್ರತಿದಿನದಿ||೭||
ಶ್ರೀಶನತಿನಿರ್ಮಲಸುನಾಭೀದೇಶವಸ್ಥಿತ ರಕ್ತಶೃಂಗಗದಾಸುಶೋಭಿತಗಾತ್ರ ಲೋಕಪವಿತ್ರ ಸುರಮಿತ್ರ|ಮೂಷಕಾಸುರ ವಾಹನ ಪ್ರಾಣಾವೇಶಯುತ ಪ್ರಖ್ಯಾತಪ್ರಭು ಪೂರೈಸು ಭಕ್ತರು ಬೇಡಿದಿಷ್ಟಾರ್ಥಗಳ ಪ್ರತಿ ದಿನದಿ||೮||
ಶಂಕರಾತ್ಮಜ ದೈತ್ಯರಿಗತಿಭಯಂಕರ ಗತಿಗಳೀಯಲೋಸುಗ ಸಂಕಟಚತುರ್ಥಿಗನೆನಿಸಿ ಅಹಿತಾರ್ಥಗಳ ಕೊಟ್ಟು|ಮಂಕುಗಳ ಮೋಹಿಸುವೆ ಚಕ್ರಧರಾಂಕಿತನೆ ದಿನದಿನದಿತ್ವತ್ಪದ ಪಂಕಜಗಳಿಗೆ ಎರಗಿ ಬಿನ್ನಯಿಸುವೆನು ಪಾಲಿಪುದು||೯||
ಸಿದ್ಧವಿದ್ಯಾಧರಗಣಸಮಾ ರಾಧ್ಯ ಚರಣಸರೋಜ ಸರ್ವಸುಸಿದ್ಧಿದಾಯಕ ಶೀಘ್ರದಿಂದಾಲಿಪುದು ಬಿನ್ನಪವ|ಬುದ್ಧಿವಿದ್ಯಾಜ್ಞಾನಬಲ ಪರಿಶುದ್ಧಭಕ್ತಿ ವಿರಕ್ತಿನಿರುತನವದ್ಯನ ಸ್ಮೃತಿಲೀಲೆಗಳ ಸುಸ್ತವನ ವದನದಲಿ ||೧೦||
ರಕ್ತವಾಸದ್ವಯವಿಭೂಷಣ ಉಕ್ತಿಲಾಲಿಸು ಪರಮಭಗವದ್ಭಕ್ತವರ ಭವ್ಯಾತ್ಮ ಭಾಗವತಾದಿ ಶಾಸ್ತ್ರದಲಿ|ಸಕ್ತವಾಗಲಿ ಮನವು ವಿಷಯ ವಿರಕ್ತಿ ಪಾಲಿಸು ವಿದ್ವದಾದ್ಯ ವಿಮುಕ್ತನೆಂದೆನಿಸೆನ್ನ ಭವಭಯದಿಂದ ಕರುಣದಲಿ ||೧೧||
ಶುಕ್ರಶಿಷ್ಯರ ಸಂಹರಿಪುದಕೆ ಶಕ್ರ ನಿನ್ನನು ಪೂಜಿಸಿದನುಉರುಕ್ರಮ ಶ್ರೀರಾಮಚಂದ್ರನು ಸೇತುಮುಖದಲ್ಲಿ|ಚಕ್ರವರ್ತಿ ಧರ್ಮರಾಜನು ಚಕ್ರಪಾಣಿಯ ನುಡಿಗೆ ಭಜಿಸಿದವಕ್ರತುಂಡನೆ ನಿನ್ನೊಳೆಂತುಂಟೋ ಈಶನನುಗ್ರಹವು||೧೨||
ಕೌರವೇಂದ್ರನು ನಿನ್ನ ಭಜಿಸದ ಕಾರಣದಿ ನಿಜಕುಲಸಹಿತಸಂಹಾರವೈದಿದ ಗುರುವರ ವೃಕೋದರನ ಗದೆಯಿಂದ|ತಾರಕಾಂತಕನನುಜ ಎನ್ನ ಶರೀರದೊಳು ನೀನಿಂತು ಧರ್ಮಪ್ರೇರಕನು ನೀನಾಗಿ ಸಂತೈಸೆನ್ನ ಕರುಣದಲಿ||೧೩||
ಏಕವಿಂಶತಿ ಮೋದಕಪ್ರಿಯ ಮೂಕರನು ವಾಗ್ಮಿಗಳ ಮಾಳ್ಪಕೃಪಾಕರೇಶ ಕೃತಜ್ಞ ಕಾಮದ ಕಾಯೊ ಕೈವಿಡಿದು|ಲೇಖಕಾಗ್ರಣಿ ಮನ್ಮನದ ದುರ್ವ್ಯಾಕುಲವ ಪರಿಹರಿಸು ದಯದಿ ಪಿನಾಕಿಭಾರ್ಯಾತನುಜ ಮೃದ್ಭವ ಪ್ರಾರ್ಥಿಸುವೆ ನಿನ್ನ||೧೪||
ನಿತ್ಯಮಂಗಲಚರಿತ ಜಗದುತ್ಪತ್ತಿಸ್ಥಿತಿಲಯ ನಿಯಮನಜ್ಞಾನತ್ರಯಪ್ರದ ಬಣ್ಧ್ಮೋಚಕ ಸುಮನಸಾಸುರರ |ಚಿತ್ತವೃತ್ತಿಗಳಂತೆ ನಡೆವ ಪ್ರಮತ್ತನಲ್ಲ ಸುಹೃಜ್ಜನಾಪ್ತನನಿತ್ಯದಲಿ ನೆನೆನೆನೆದು ಸುಖಿಸುವ ಭಾಗ್ಯ ಕರುಣಿಪುದು||೧೫||
ಪಂಚಭೇದಜ್ಞಾನವರುಪು ವಿರಿಂಚಿಜನಕನ ತೋರು ಮನದಲಿವಾಂಛಿತಪ್ರದ ಒಲುಮೆಯಿಂದಲಿ ದಾಸನೆಂದರಿದು|ಪಂಚವಕ್ತ್ರನ ತನಯ ಭವದೊಳು ವಂಚಿಸದೆ ಸಂತಯಿಸು ವಿಷಯದಿ ಸಂಚರಿಸಂದದಲಿ ಮಾಡು ಮನಾದಿಕರಣಗಳ||೧೬||
ಏನು ಬೇಡುವುದಿಲ್ಲ ನಿನ್ನ ಕುಯೋನಿಗಳು ಬರಲಂಜೆ ಲಕ್ಷ್ಮೀ ಪ್ರಾಣಪತಿತತ್ತ್ವೇಶರಿಂದೊಡಗೂಡಿ ಗುಣಕಾರ್ಯ|ತಾನೆ ಮಾಡುವನೆಂಬ ಈ ಸುಜ್ಞಾನವೆ ಕರುಣಿಸುವುದೆಮಗೆಮಹಾನುಭಾವ ಮುಹುರ್ಮುಹು ಪ್ರಾರ್ಥಿಸುವೆನಿನಿತೆಂದು||೧೭||
ನಮೋ ನಮೋ ಗುರುವರ್ಯ ವಿಬುಧೋತ್ತಮ ವಿವರ್ಜಿತನಿದ್ರಕಲ್ಪದ್ರುಮನೆನಿಪೆ ಭಜಕರಿಗೆ ಬಹುಗುಣಭರಿತ ಶುಭಚರಿತ|ಉಮೆಯ ನಂದನ ಪರಿಹರಿಸಹಂ ಮಮತೆ ಬುದ್ಧ್ಯಾದಿಂದ್ರಿಯಗಳಾ ಕ್ರಮಿಸಿ ದಣಿಸುತಲಿಹವು ಭವದೊಳಗಾವಕಾಲದಲಿ ||೧೮||
ಜಯಜಯತು ವಿಘ್ನೇಶ ತಾಪ ತ್ರಯವಿನಾಶನ ವಿಶ್ವಮಂಗಳಜಯಜಯತು ವಿದ್ಯಾಪ್ರದಾಯಕ ವೀತ ಭಯಶೋಕ|ಜಯಜಯತು ಚಾರ್ವಾಂಗ ಕರುಣಾ ನಯನದಿಂದಲಿ ನೋಡಿಜನ್ಮಾಮಯ ಮೃತಿಗಳನು ಪರಿಹರಿಸು ಭಕ್ತರಿಗೆ ಭವದೊಳಗೆ||೧೯||
ಕಡುಕರುಣಿ ನೀನೆಂದರಿದು ಹೇರೊಡಲ ನಮಿಸುವೆ ನಿನ್ನಡಿಗೆಬೆಂಬಿಡದೆ ಪಾಲಿಸು ಪರಮ ಕರುಣಾಸಿಂಧು ಎಂದೆಂದು|ನಡುನಡುವೆ ಬರುತಿಪ್ಪ ವಿಘ್ನವ ತಡೆದು ಭಗವನ್ನಾಮಕೀರ್ತನೆನುಡಿನುಡಿಗೆ ಎನ್ನಿಂದ ಪ್ರತಿ ದಿವಸದಲಿ ಮರೆಯದಲೆ||೨೦||
ಏಕವಿಂಶತಿ ಪದಗಳೆನಿಸುವ ಕೋಕನದ ನವ ಮಾಲಿಕೆಯ ಮೈನಾಕಿ ತನಯಾಂತರ್ಗತ ಶ್ರೀಪ್ರಾಣ ಪತಿಯೆನಿಪ| ಶ್ರೀಕರಜಗನ್ನಾಥವಿಠ್ಠಲ ಸ್ವೀಕರಿಸಿ ಸ್ವರ್ಗಾಪವರ್ಗದಿ ತಾ ಕೊಡುವ ಸೌಖ್ಯಗಳ ಭಕುತರಿಗಾವ ಕಾಲದಲಿ||೨೧||
ಇತಿ ಹರಿಕಥಾಮೃತಸಾರ ಅಂತರ್ಗತ ಶ್ರೀ ವಿಘ್ನೇಶ ಸಂಧಿ ಸಮಾಪ್ತಿ:
No comments:
Post a Comment