Monday, December 30, 2024

Life in the Ovum ಡಿಂಬದಲ್ಲಿರುವ ಜೀವ

                      ಡಿಂಬದಲ್ಲಿ ಇರುವ ಜೀವ


ಡಿಂಬದಲ್ಲಿ ಇರುವ ಜೀವ ಕಂಬಸೂತ್ರ ಗೊಂಬೆಯಂತೆ ಎಂದಿಗಿದ್ದರೊಂದು ದಿನ ಸಾವು ತಪ್ಪದು ||ಪ||


ಹುಟ್ಟುತೇನು ತಾರಲಿಲ್ಲ ಸಾಯುತೇನು ಒಯ್ಯಲಿಲ್ಲ 

ಸುಟ್ಟು ಸುಟ್ಟು ಸುಣ್ಣದ ಹರಳಾಯಿತೀ ದೇಹ 

ಹೊಟ್ಟೆ ಭಾಳ ಕೆಟ್ಟದೆಂದು ಎಷ್ಟು ಕಷ್ಟ ಪಟ್ಟರೂನು 

ಬಿಟ್ಟು ಹೋಗುವಾಗ ಗೇಣು ಬಟ್ಟೆ ಕಾಣದು  ||1||


ಹತ್ತು ಎಂಟು ಲಕ್ಷ ಗಳಿಸಿ ಮತ್ತೆ ಸಾಲದೆಂದು ಪರರ ಅರ್ಥಕಾಗಿ ಆಸೆಪಟ್ಟು ಸುಳ್ಳು ನ್ಯಾಯ ಮಾಡ್ವರು

ಬಿತ್ತಿ ಬೆಳೆದು ತನ್ನದೆಂಬ ವ್ಯರ್ಥಚಿಂತೆಯನ್ನು ಮಾಡೆ

ಸತ್ತು ಹೋದ ಮೇಲೆ ಅರ್ಥ ಯಾರಿಗಾಹುದೊ ||2||


ಹೊನ್ನು ಹೆಣ್ಣು ಮಣ್ಣು ಮೂರು ತನ್ನಲಿದ್ದು ಉಣ್ಣಲಿಲ್ಲ

ಅಣ್ಣ ತಮ್ಮ ತಾಯಿ ತಂದೆ ಬಯಸಲಾಗದು

ಅನ್ನ ವಸ್ತ್ರ ಭೋಗಕಾಗಿ ತನ್ನ ಸುಖವ ಕಾಣಲಿಲ್ಲ ಮಣ್ಣುಪಾಲು ಆದಮೇಲೆ ಯಾರಿಗಾಹುದೊ ||3||


ಬೆಳ್ಳಿ ಬಂಗರಿಟ್ಟುಕೊಂಡು ಒಳ್ಳೆ ವಸ್ತ್ರ ಹೊದ್ದುಕೊಂಡು ಅಳ್ಳಾಚಾರಿ ಗೊಂಬೆಯಂತೆ ಆಡಿ ಹೋಯಿತು

ಹಳ್ಳ ಹರಿದು ಹೋಗುವಾಗ ಗುಳ್ಳೆ ಬಂದು ಒಡೆಯುವಂತೆ ಉಳ್ಳೆ ಪೊರೆಯಂತೆ ಕಾಣೊ ಸಂಸಾರದಾಟವು ||4||


ವಾರ್ತೆ ಕೀರ್ತಿಯೆಂಬುವೆರಡು ಸತ್ತ ಮೇಲೆ ಬಂದವಯ್ಯ ವಸ್ತು ಪ್ರಾಣನಾಯಕನು ಎಲ್ಲಿ ದೊರಕ್ಯಾನು

ಕರ್ತೃ ಕಾಗಿನೆಲೆಯಾದಿಕೇಶವನ ಚರಣಕಮಲ

ನಿತ್ಯದಲ್ಲಿ ಭಜಿಸಿ ಸುಖಿಯಾಗಿ ಬಾಳೆಲೊ ||5||

                                                    ಶ್ರೀ ಕನಕದಾಸರು 

No comments:

Post a Comment