Monday, January 13, 2025

MORALE ಮನೋಬಲ

                              ಮನೋಬಲ - 


        ಪುರುಷರು, ಸ್ತ್ರೀಯರು, ಸನ್ಯಾಸಿಗಳು, ಗೃಹಸ್ಥರು, ಸನ್ಯಾಸಿಗಳು - ಎಲ್ಲರೂ ಈ ಐದು ವಿಷಯಗಳ ಬಗ್ಗೆ ತಪ್ಪದೇ ದೃಷ್ಟಿಯನ್ನು ಇಡಿ

1. ಯಾವುದೋ ಒಂದು ದಿನ ನನಗೆ ವೃದ್ಧಾಪ್ಯವು ಬರುತ್ತದೆ - ಅದನ್ನು ನಾನು ತಪ್ಪಿಸಿಕೊಳ್ಳಲಾರೆನು.

2. ಯಾವುದೋ ಒಂದು ದಿನ ನಾನು ಅನಾರೋಗ್ಯಕ್ಕೆ ತುತ್ತಾಗುತ್ತೇನೆ  ಅದನ್ನು ನಾನು ತಪ್ಪಿಸಿಕೊಳ್ಳಲಾಗುವುದಿಲ್ಲ.

3. ಯಾವ ಕ್ಷಣವಾದರೂ ಮೃತ್ಯು ನನ್ನನ್ನು ಕಬಳಿಸುತ್ತದೆ - ಅದನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ.

4. ನಾನು ಅತಿಹೆಚ್ಚಾಗಿ ಪ್ರೀತಿಸಿ, ನನ್ನದು ಎಂದು ಭಾವಿಸಿ ಅಕ್ಕರೆಯನ್ನು ಬೆಳೆಸಿಕೊಂಡ ವಸ್ತುಗಳೆಲ್ಲವೂ ಬದಲಾವಣೆ ಹೊಂದಬಹುದು, ನಾಶವಾಗಬಹುದು, ದೂರವಾಗಬಹುದು - ಅದನ್ನು ನಾನು ತಪ್ಪಿಸಿಕೊಳ್ಳಲಾಗುವುದಿಲ್ಲ.

5. ನಾನು ಮಾಡಿದ ಕೆಲಸಗಳು ಎಂದರೆ ಸ್ವಕರ್ಮಗಳಿಂದಲೇ ನಾನು ಹೀಗೆ ತಯಾರಾಗಿದ್ದೇನೆ. ನನ್ನ ಕೆಲಸಗಳು ಒಳ್ಳೆಯದಾಗಲಿ, ಕೆಟ್ಟದಾಗಲಿ - ಅದಕ್ಕೆ ನಾನು ಸ್ವತಃ ಜವಾಬ್ದಾರಿಯನ್ನು ವಹಿಸಲೇಬೇಕು.

                   ಗೌತಮ ಬುದ್ಧನು ಬೋಧಿಸಿದ ಈ ಐದು ವಿಷಯಗಳು "ಅಂಗುತ್ತರನಿಕಾಯ" ಎನ್ನುವ ಗ್ರಂಥದಲ್ಲಿ ಕಾಣಿಸುತ್ತದೆ. ಇವೆಲ್ಲವೂ ಪ್ರತಿ ಮನುಷ್ಯನಿಗೂ ಜೀವನದಲ್ಲಿ ಎದುರಾಗುತ್ತದೆ. ಆದರೆ ಪರಿಸ್ಥಿತಿಗಳು ಚೆನ್ನಾಗಿದ್ದಾಗ ನಾವು ಪ್ರತಿಕೂಲವಾದ ವಿಷಯಗಳನ್ನು, ನಮಗೆ ನೋವುಂಟು ಮಾಡುವ ವಿಷಯಗಳ ಬಗ್ಗೆ ಆಲೋಚಿಸುವುದಿಲ್ಲ. ಕೆಲವೊಂದನ್ನು ಸ್ವೀಕರಿಸಲು ನಾವು ಮಾನಸಿಕವಾಗಿ ಸಿದ್ಧವಾಗಿರುವುದಿಲ್ಲ. ಅದರಿಂದಾಗಿ ಆಕಸ್ಮಿಕವಾಗಿ ಎದುರಾಗುವ ಪ್ರತಿಕೂಲತೆಗಳಿಗೆ ಒದ್ದಾಡುತ್ತೇವೆ. ಮಾನಸಿಕ ಒತ್ತಡವು ಉಂಟಾಗುತ್ತದೆ. 

              ಈ ಪರಿಸ್ಥಿತಿಯು ಎದುರಾಗಬಾರದು ಎಂದರೆ ಮನಸ್ಸಿನಲ್ಲಿ ಸಾನುಕುಲ ವಾತಾವರಣವನ್ನು ಸೃಷ್ಟಿಸಿ ಕೊಳ್ಳಬೇಕು. ವೃದ್ಧಾಪ್ಯವನ್ನು ಧ್ಯಾನಿಸುವುದರ ಮೂಲಕ ಯೌವನದಿಂದ ಉಂಟಾಗುವ ಅಹಂಕಾರವನ್ನು, ಅನಾರೋಗ್ಯವನ್ನು ಧ್ಯಾನಿಸುವುದರ ಮೂಲಕ ಆರೋಗ್ಯದಿಂದ ಉಂಟಾಗುವ ಅಹಂಕಾರವನ್ನು, ಮೃತ್ಯುವನ್ನು ಧ್ಯಾನಿಸುವುದರ ಮೂಲಕ ಜೀವನ ವಿಧಾನದಿಂದ ಉಂಟಾಗುವ ಅಹಂಕಾರವನ್ನು ಹಾಗೂ ಪ್ರತಿ ವಸ್ತುವಿನಲ್ಲಿ ಉಂಟಾಗುವ ಬದಲಾವಣೆಯನ್ನು, ನಾಶವನ್ನು ಧ್ಯಾನಿಸುವುದರ ಮೂಲಕ ಎಲ್ಲಾ ತನಗೆ ಬೇಕು ಎನ್ನುವ ತೀವ್ರವಾದ ಹಂಬಲವನ್ನು ಅದುಮಬಹುದು ಅಥವಾ ಕನಿಷ್ಠ ಕಡಿಮೆಯಾದರೂ ಮಾಡಬಹುದು. 

            ನಾವು ಮಾಡುವ ಕೆಲಸಗಳ ಫಲಿತವನ್ನೇ ನಾವು ಅನುಭವಿಸುತ್ತಿದ್ದೇವೆ ಎನ್ನುವುದನ್ನು ಧ್ಯಾನಿಸುವುದರ ಮೂಲಕ ಆಲೋಚನೆಗಳಲ್ಲಿ, ಮಾತುಗಳಲ್ಲಿ ಕೆಡುಕು ಮಾಡಬೇಕೆಂಬ ಕೆಟ್ಟ ಸ್ವಭಾವವು ಕಡಿಮೆ ಆಗುತ್ತದೆ ಎನ್ನುವುದು ಬುದ್ಧನ ಉಪದೇಶ. ಇಲ್ಲಿ ಧ್ಯಾನವೆಂದರೆ ಒಂದು ವಿಷಯದ ಮೇಲೆ ದೃಷ್ಟಿಯನ್ನು ನಿಲ್ಲಿಸುವುದು, ಅದರ ಬಗ್ಗೆ ಆಲೋಚಿಸುವುದು, ಮರೆಯದೇ ಇರುವುದು.


ಮನಸ್ಸು ದೃಢವಾಗಿದ್ದರೇನೆ ಮೇಲೆ ತಿಳಿಸಿರುವುದೆಲ್ಲವೂ ಸಾಧ್ಯವಾಗುತ್ತದೆ. ಮನಸ್ಸಿನ ಪ್ರಧಾನ ಲಕ್ಷಣವು ಸಂಕಲ್ಪ ವಿಕಲ್ಪಗಳು. ಸಂಕಲ್ಪ ಬಲವು ಪ್ರಬಲವಾಗಿದ್ದರೆ ಆ ದಿಸೆಯಲ್ಲಿಯೇ ನಮ್ಮ ಅವಯವಗಳು ಕೆಲಸ ಮಾಡುತ್ತವೆ. ದಕ್ಷತೆಯನ್ನು ಹೊಂದಿರುವ ಮನಸ್ಸು ಇಂದ್ರಿಯಗಳ ಮೇಲೆ ಹಿಡಿತವನ್ನು ಹೊಂದಿ, ತನಗೆ ಬೇಕಾಗಿರುವ ಕೆಲಸಗಳನ್ನೆಲ್ಲಾ ಮಾಡಿಸಿಕೊಳ್ಳುತ್ತದೆ. ಕೋರಿಕೆಗಳನ್ನೆಲ್ಲಾ ಈಡೇರಿಸಿ ಕೊಳ್ಳುತ್ತದೆ. 

         ಯಾವ ವಿಷಯವನ್ನಾದರೂ ಅನುಭವಿ ಸುವುದು ಮನಸ್ಸೇ ಹೊರತು ಇಂದ್ರಿಯಗಳಲ್ಲ. ಅವು ಕೇವಲ ಉಪಕರಣಗಳು. ಆದುದರಿಂದ ಇಂದ್ರಿಯಗಳಿಗೆ ಅಥವಾ ಭೌತಿಕ ವಿಷಯಗಳಿಗೆ ಸಂಭವಿಸಿದ ಯಾವುದೇ ರೀತಿಯ ಪ್ರತಿಕೂಲ ಪರಿಸ್ಥಿತಿಯನ್ನಾದರೂ ಧೈರ್ಯವಾಗಿ ಎದುರಿಸುವ ವಾತಾವರಣವನ್ನು ಮನಸ್ಸು ನಿರ್ಮಿಸಿ ಕೊಳ್ಳಬೇಕು. ಮನಸ್ಸು ಶುದ್ಧವಾಗಿ ಇಟ್ಟುಕೊಳ್ಳುವುದರಿಂದ ಮಾತ್ರವೇ ಇದು ಸಾಧ್ಯವಾಗುತ್ತದೆ. ಪರಿಶುದ್ಧವಾದ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳು ಪ್ರವೇಶಿಸುವುದಿಲ್ಲ. ಯಾವ ವಿಷಯವನ್ನಾದರೂ, ಯಾವ ಮನುಷ್ಯನ ಬಗ್ಗೆ ಆದರೂ ಅನುಕೂಲಕರವಾಗಿ ಆಲೋಚಿಸುತ್ತದೆ. 

                   ದುರಾಶೆ, ಮೋಹ, ಮೋಸ, ಈರ್ಷೆ, ದ್ವೇಷ, ಕೋಪದಂತಹ ವಿಷಯಗಳನ್ನು ಮನಸ್ಸಿನಿಂದ ಹೊರ ಗೋಡಿಸಿದಾಗ ಮನಸ್ಸು ಕ್ಷಾಳವಾಗುತ್ತದೆ. ಮಾಲಿನ್ಯ ರಹಿತವಾದ ಮನಸ್ಸು ದೃಢವಾಗಿ ಇರುತ್ತದೆ. ಮಾನಸಿಕವಾಗಿ ದೃಢವಾಗಿ ಇರುವವನು ಯಾವುದಕ್ಕೂ ಭಯ ಪಡುವುದಿಲ್ಲ. ಅದನ್ನು ಧೈರ್ಯವಾಗಿ, ಗಂಭೀರವಾಗಿ ಸ್ವೀಕರಿಸುತ್ತಾನೆ. ಸುಖವನ್ನು, ದುಃಖವನ್ನು ಒಂದೇ ರೀತಿಯಲ್ಲಿ ಆಸ್ವಾದಿಸಬಲ್ಲನು!

No comments:

Post a Comment