Sunday, January 26, 2025

Shri Yadavacharya. ಉಮರ್ಜಿ ಮನೆತನ

                     ಉಮರ್ಜಿ ಮನೆತನ

       ( ಶ್ರೀ ಮಾನ್ ಬಂಡು ಕಟ್ಟಿಯವರು ಬರೆದ ಲೇಖನವನ್ನು ಸೌಜನ್ಯ ಪೂರ್ವಕವಾಗಿ ಅಳವಡಿಸಲಾಗಿದೆ )

            ನನ್ನ ತಾಯಿಯು ಉಮರ್ಜಿ ಮನೆತನಕ್ಕೆ ಸೇರಿದವರು. ಉಮರ್ಜಿಗಳೆಂದು ಕರೆಯುವ ಈ ಮನೆತನದವರು ಮಹಾಸಾಧಕ ಯಾದವಾರ್ಯರ ಶಿಷ್ಯ ಪರಂಪರೆಯವರು. ಪಂಢರಪುರದ ಬಳಿ ಇರುವ ಭೀಮಾ ತೀರದ (ಉಮರಜ, ಉಂಬ್ರಜ ಎಂದೂ ಸಹ ಕರೆಯಲಾಗುತ್ತದೆ)  ಉಮರ್ಜಿ ಗ್ರಾಮದ ಹೊರವಲಯದಲ್ಲಿರುವ ಆಶ್ವತ್ಥಕಟ್ಟೆಯು ಈ ಮನೆತನದವರ ಮೂಲ ಶ್ರೀ ಲಕ್ಷ್ಮೀ ಗೋವಿಂದರಾಜ ಕುಲ ದೇವರ ಪೂಜಾಸ್ಥಳ.

     17ನೆಯ ಶತಮಾನದಲ್ಲಿ ಬದುಕಿದ ಶ್ರೀಪಾದಂಗಳವರ ಶ್ರೇಷ್ಠ ಶಿಷ್ಯರಲ್ಲಿ ಒಬ್ಬರು. ತರ್ಕಶಾಸ್ತ್ರದಲ್ಲಿ ನಿಶಿತಮತಿ ಯಾಗಿದ್ದ ತಿರುಮಲಾಚಾರ್ಯರು ಕಾಶಿಯವರೆಗೆ ದಿಗ್ವಿಜಯ ಮಾಡಿ ಅಲ್ಲಿಯ ಹೆಸರಾಂತ ಪಂಡಿತರನ್ನು ಶಾಸ್ತ್ರಾರ್ಥದಲ್ಲಿ ಸೋಲಿಸಿ ಅಲ್ಲಿಯ ರಾಜರಿಂದ ಜಯಪತ್ರ, ಮಾನಪತ್ರಗಳನ್ನು ಗಳಿಸಿದವರು. ಇವರು ಬರೆದ 'ತರ್ಕ ದೀಪಾವಲಿ' ಎಂಬ ಗ್ರಂಥವು ಪಂಡಿತ ವಲಯದಲ್ಲಿ ಸಾಕಷ್ಟು ಪ್ರಶಂಸೆ ಗಳಿಸಿತ್ತು. ಇವರ ವಿದ್ವತ್ತನ್ನು ಮೆಚ್ಚಿದ ಶ್ರೀ ಸತ್ಯಾಭಿನವತೀರ್ಥರು ಇವರನ್ನು ತಮ್ಮ ಆಸ್ಥಾನ ವಿದ್ವಾಂಸರನ್ನಾಗಿ ಮಾಡಿಕೊಂಡು ಸಂಚಾರ ಕಾಲದಲ್ಲಿ ಜತೆಗೆ ಕರೆದೊಯ್ಯುತ್ತಿದ್ದರು.

           ಶ್ರೀಗಳು ಒಮ್ಮೆ ಉತ್ತರ ದೇಶಕ್ಕೆ ತೀರ್ಥಯಾತ್ರೆಗೆ ಹೋದಾಗ ಉಮರ್ಜಿ ಆಚಾರ್ಯರನ್ನೂ ಜತೆಗೆ ಕರೆದೊಯ್ದಿದ್ದರು. ಗಂಗಾ ನದಿಯ ತಟದಲ್ಲಿದ್ದ ಮಣ್ಣಿನ ದಂಡೆಯಲ್ಲಿ ಕುಳಿತು ಆಹ್ನೀಕ ಪೂರೈಸಿದ ಆಚಾರ್ಯರು ಅಲ್ಲಿಯೇ ಕುಳಿತು ಧ್ಯಾನಸ್ಥ ಭಂಗಿಯಲ್ಲಿ ಜಪ ಮಾಡತೊಡಗಿದ್ದರು. ಅವರಿಗೆ ಜಗತ್ತಿನ ಪರಿವೆಯೇ ಇರಲಿಲ್ಲ. ಒಮ್ಮಿಂದೊಮ್ಮೆಲೇ ಇವರು ಆನಿಸಿ ಕುಳಿತಿದ್ದ ಮಣ್ಣಿನ ಗುಡ್ಡೆಯು ಕಡಿದು ಇವರ ಮೇಲೆ ಬಿತ್ತು. ಪ್ರವಾಹದಿಂದ ಹರಿದು ಬಂದ ಉಸುಕು ಇವರನ್ನು ಸಂಪೂರ್ಣವಾಗಿ ಮುಚ್ಚಿಬಿಟ್ಟಿತು. ಹತ್ತಿರದಲ್ಲಿದ್ದವರೆಲ್ಲ ಜೋರಾಗಿ ಕೂಗುತ್ತಾ "ಆಚಾರ್ಯರು ಹೋದರು! ಆಚಾರ್ಯರು ಹೋದರು!" ಎಂದು ರೋದಿಸತೊಡಗಿದರು.

           ವಿಷಯ ತಿಳಿದ ಶ್ರೀಪಾದಂಗಳವರು ಗಾಬರಿಯಾಗಿ ಮಣ್ಣು ಉಸುಕು ತೆಗೆಸುವ ಕಾರ್ಯವನ್ನು ಕೈಗೊಂಡರು. ರಾಶಿಗಟ್ಟಲೇ ಮೈಮೇಲೆ ಬಿದ್ದ ಉಸುಕನ್ನು ತೆಗೆಸಲು ಸುಮಾರು ಏಳೆಂಟು ಗಂಟೆ ಸಮಯ ಹಿಡಿದಿರಬಹುದು. ಎಲ್ಲ ಮಣ್ಣನ್ನೂ ತೆಗೆದು ನೋಡಲಾಗಿ ತಿರುಮಲಾಚಾರ್ಯರು ಧ್ಯಾನಾರೂಢರಾಗಿ ಕಣ್ಣು ಮುಚ್ಚಿ ಜಪಮಾಲೆಯಿಂದ ಪಠಿಸುತ್ತಿರುವ  ದೃಶ್ಯವನ್ನು ನೋಡಿ ಶ್ರೀಗಳಿಂದ ಹಿಡಿದು ಎಲ್ಲರೂ ಆಶ್ಚರ್ಯಚಕಿತರಾದರು. ಆಚಾರ್ಯರು ಕಣ್ಣು ಬಿಟ್ಟು ಏನೂ ಆಗೇ ಇಲ್ಲವೆಂಬಂತೆ ಎದ್ದು ಬಂದರು.

       ಈ ಘಟನೆಯಿಂದ ಅತ್ಯಂತ ಹರ್ಷಿತರಾದ ಉತ್ತರಾದಿ ಮಠಾಧೀಶ ಶ್ರೀ ಸತ್ಯಾಭಿನವತೀರ್ಥ ಶ್ರೀಪಾದಂಗಳು ಉಮರ್ಜಿ ತಿರುಮಲಾಚಾರ್ಯರನ್ನು ಹಾರೈಸಿ " ಶ್ರೀ ನರಸಿಂಹದೇವರು ಪ್ರಹ್ಲಾದರಾಜರನ್ನು ಸಂರಕ್ಷಿಸಿದಂತೆ ಶ್ರೀಕೃಷ್ಣನು ನಿಮ್ಮನ್ನು ರಕ್ಷಿಸಿದ್ದಾನೆ ಆದ್ದರಿಂದ ಇಂದಿನಿಂದ ನೀವು "ಪ್ರಹ್ಲಾದ ಕೃಷ್ಟಾಚಾರ್ಯ" ಎನ್ನುವ ಹೊಸ ಹೆಸರಿನಿಂದ ಪ್ರಸಿದ್ಧರಾಗಿರಿ ಎಂದು ಗದ್ಗದ ಕಂಠದಿಂದ ಆಶೀರ್ವದಿಸಿದರು. ಅಂದಿನಿಂದ ಉಮರ್ಜಿ ಮನೆತನಕ್ಕೆ ಪ್ರಹ್ಲಾದ ಕೃಷ್ಟಾಚಾರ್ಯ ವಂಶವೆಂಬುದು ರೂಡಿ ನಾಮವಾಗಿದೆ.

ಶ್ರೀ ಮಾನ್ ಬಂಡು ಕಟ್ಟಿ ಯವರು ಬರೆದ ಲೇಖನವನ್ನು ಸೌಜನ್ಯ ಪೂರ್ವಕವಾಗಿ ಅಳವಡಿಸಲಾಗಿದೆ 

No comments:

Post a Comment