Thursday, July 24, 2025

Jyotir Bhimeshwara Vrata Katha ಶ್ರೀ ಜ್ಯೋತಿರ್ಭೀಮೇಶ್ವರ ಕಥಾ

                ಶ್ರೀ ಜ್ಯೋತಿರ್ಭೀಮೇಶ್ವರ ಕಥನ 

              ಅಮಾವಾಸ್ಯೆ ವ್ರತ. ಪೂಜೆ ಮಾಡಿದ ಮೇಲೆ  ಈ ಕಥೆಯನ್ನು ಓದಬೇಕು, ಕೇಳಬೇಕು ಇಲ್ಲ ಹೇಳಬೇಕು. ಮದುವೆಯಾದ ಒಂಬತ್ತು ವರ್ಷಗಳ ವರೆಗೆ ನಮ್ಮ ತಂದೆ ನನ್ನಿಂದ  ವ್ರತ ಮಾಡಿಸಿ, ಕಥೆ ಹೇಳುತ್ತಿದ್ದರು. ಭಕ್ತಿಯಿಂದ  ಕೇಳಬೇಕೆಂದು ತಿಳಿಸುತ್ತಿದ್ದರು. 

ಪೂರ್ವದಲ್ಲಿ ನೈಮಿಷಾರಣ್ಯ ವಾಸಿಗಳಾಗಿದ್ದ ಶೌನಕಾದಿ ಮಹಾಮುನಿಗಳ  ಅತಿಥಿಯಾಗಿ ಬಂದಿದ್ದ ಸೂತ ಪುರಾಣಿಕರನ್ನು,"ಮಹಾತ್ಮರೆ ಸ್ತ್ರೀಯರು ದೀರ್ಘಸುಮಂಗಲಿಯರಾಗಿ, ಸಕಲ ಸಂಪತ್ತನ್ನು ಪಡೆದು ಪತಿಯೊಂದಿಗೆ ಸುಖವಾಗಿ, ದೀರ್ಘಕಾಲ ಬಾಳುವ ವ್ರತವಿದ್ದರೆ ತಿಳಿಸಿ" ಎಂದು ಕೇಳಿದಾಗ  ಈ ಕಥೆಯನ್ನು ತಿಳಿಸುತ್ತಾರೆ. 

ಹಿಂದೆ ಸೌರಾಷ್ಟ್ರ ದೇಶದಲ್ಲಿ ಒಬ್ಬ ರಾಜನಿದ್ದನು, ಆ ರಾಜನು ವೀರನೂ, ಧೀರನೂ, ಗುಣವಂತನು ಆಗಿದ್ದನು. ಈ ರಾಜನಿಗೆ ಜಯಶೀಲ ಎಂಬ ಮಗನಿದ್ದನು. ಅವನು ಅತಿ ಸುಂದರನೂ, ಸದ್ಗುಣನೂ ಆಗಿದ್ದನು. ಆದರೆ ಗ್ರಹಚಾರವಶಾತ್  ಯುವಕನಾಗಿರುವಾಗಲೇ ಮರಣಹೊಂದಿದನು.
ವಜ್ರಬಾಹು ರಾಜನಿಗೆ ಆಘಾತವಾಯಿತು. ಇದ್ದ ಒಬ್ಬ ಮಗ ಹೋಗಿಬಿಟ್ಟ. ತನಗೂ ತನ್ನ ಪಿತೃಗಳಿ ಗೂ ತಿಲೋದಕವನ್ನು ಕೊಡುವವರಿಲ್ಲ ಎಂದು  ದುಃಖಿತನಾದನು. ಹೀಗಿರುವಾಗ ಅವನಿಗೆ ಒಂದು ಯೋಚನೆ ಬಂದಿತು. ತನ್ನ ಮೃತ ಮಗನಿಗೆ ವಿವಾಹ ಮಾಡಿದರೆ ಆಗ ಹೆಣ್ಣಿನ ಮೂಲಕ ತನಗೂ ತನ್ನ ಪಿತೃಗಳಿಗೆ ಸದ್ಗತಿ ಒದಗಬಹುದೆಂದು ಚಿಂತಿಸಿದನು. 

ಕೂಡಲೇ ಕಾರ್ಯ ಪ್ರವೃತ್ತನಾದನು. "ಯಾರಾದರೂ ತನ್ನ ಮೃತ ಮಗನಿಗೆ ಹೆಣ್ಣು ಕೊಟ್ಟರೆ, ಅವರಿಗೆ ಯಥೇಚ್ಛವಾಗಿ ಧನವನ್ನು ಕೊಡುವುದಾಗಿ ಪ್ರಕಟಿಸಿದನು. ಅದೇ ಊರಿನ ಹತ್ತಿರ ಒಬ್ಬ ಸುಸಂಸ್ಕೃತನೂ, ವೇದಶಾಸ್ತ್ರ ಪಾರಂಗತನು ಆದ ಒಬ್ಬ ಬ್ರಾಹ್ಮಣನಿದ್ದನು. ಅವನ ಕರ್ಮಫಲದಿಂದದಟ್ಟ ದರಿದ್ರನಾಗಿದ್ದನು. ಅವನಿಗೆ ಮನೆತುಂಬಾ ಹೆಣ್ಣುಮಕ್ಕಳು. ಬಡತನದಿಂದ ಬಳಲಿದ್ದ ಆತ ತನ್ನ ಮಕ್ಕಳಲ್ಲಿ ಒಬ್ಬಳಾದ  "ಸುಶೀಲೆ "ಎಂಬ  ಮಗಳನ್ನು ಸತ್ತ ರಾಜಕುಮಾರಗೆ ಧಾರೆಯೆರೆದು ಕೊಟ್ಟನು. ಬಡ ಬ್ರಾಹ್ಮಣನಿಗೆ ಅಪಾರ ಧನ ಸಿಕ್ಕಿತು, ರಾಜನ ಇಷ್ಟಾರ್ಥವು ನೆರವೇರಿತು. ಮದುವೆಯಾದ ನಂತರ ರಾಜನು ರಾಜಕುಮಾರನ ಶವವನ್ನು ಸ್ಮಶಾನಕ್ಕೆ ಸಾಗಿಸಿ ಅಲ್ಲಿ ದಹನಕ್ರಿಯೆ ಏರ್ಪಡಿಸಿ ಸೊಸೆಯನ್ನು ಕರೆದು ಚಿತೆಗೆ ಬೆಂಕಿ ಇಡುವಂತೆ ಹೇಳಿದನು. ಮಂಗಳದ್ರವ್ಯ ಗಳಿಂದ, ಸಕಲಾ‌ ಭರಣ‌ಗಳಿಂದ ಶೋಭಿತಳಾಗಿ  ಪರಿ ಶುದ್ಧಳಾದ ಆ ಸೊಸೆ ಭಕ್ತಿಯಿಂದ ಪರಮಾತ್ಮನನ್ನು ಧ್ಯಾನಿಸುತ್ತಾ, ನಿರ್ವಿಕಾರ ಭಾವದಿಂದ ಚಿತೆಗೆ ಅಗ್ನಿಸ್ಪರ್ಶ ಮಾಡಿದಳು. 

ಭಗವಂತನ ಲೀಲೆ ಎಂಬಂತೆ ಆ ಕ್ಷಣಕ್ಕೆ ಜೋರಾಗಿ ಮಳೆ ಬಂದಿತು. ಚಿತೆಯ ಬೆಂಕಿ ಆರಿಹೋಯಿತು. ಸೂರ್ಯ ಮುಳುಗಿದ, ಆಷಾಡ ಮಾಸದ ಅಮಾವಾಸ್ಯೆ ಜೋರು ಮಳೆಯಿಂದಾಗಿ ಜಲಪ್ರವಾಹ ಹೆಚ್ಚಾಯಿತು. ಎಲ್ಲೆಲ್ಲೂ ಗಾಡಾಂಧಕಾರ ತುಂಬಿತು. ರಾಜನು ತನ್ನ ಕರ್ತವ್ಯ ಮುಗಿಯಿತೆಂದು ಪರಿವಾರ ದೊಂದಿಗೆ ಅರಮನೆಗೆ ಹೊರಟುಹೋದನು. ಅದೇ ದಿನವೇ ಮದುವೆಯಾದ ಪುಟ್ಟ ಬಾಲೆ, ಪತಿಯ ಶವವನ್ನು ಬಿಟ್ಟುಹೋಗದೆ ಅಲ್ಲೇ ಕುಳಿತಳು. ಸ್ಮಶಾನದಲ್ಲಿ ಅವಳಿಗೆ ಭಯವು ಆವರಿಸಿತು. ಕಣ್ಣೀರಿಡುತ್ತಾ ಪರಮಾತ್ಮನಲ್ಲಿ ಮೊರೆಯಿಟ್ಟಳು. 

ಹೇ ಭಗವಂತ, ಹಿಂದೆ ನಿನ್ನ ಕರುಣೆಯಿಂದ ಮಾರ್ಕಂಡೇಯನು ಚಿರಂಜೀವಿ ಯಾದನು. ಚ್ಯವನಮಹರ್ಷಿ ದೀರ್ಘಾಯುಸ್ಸನ್ನು ಪಡೆದನು. ರತಿ ಮನ್ಮಥರು ಪುನರ್ ಜೀವವನ್ನು ಪಡೆದರು. ಶ್ವೇತವಾಹನ ಪೂರ್ಣಾಯುಷ್ಯವನ್ನು ಪಡೆದನು. ಅಗ್ನಿಯ ಪತ್ನಿಯರಾದ ಸ್ವಾಹ -ಸ್ವಾಧಾ ದೇವಿ ಯರು ಸುಮಂಗಲಿಯರಾಗಿ  ಪುತ್ರರನ್ನು ಪಡೆದರು. ಹೀಗಿರುವಾಗ ನಾನೇನು ಪಾಪ ಮಾಡಿದೆ? ನನಗೇಕೆ ಇಂತಹ ಘೋರ ಶಿಕ್ಷೆ ದೇವಾ? ದಯಾಮಯನಾದ ನೀನು ನನ್ನನ್ನು ಅನಾಥಳನ್ನಾಗಿ ಮಾಡಿದೆ. ಈಗ ನಿನ್ನ ಕೃಪಾ‌ ಕಟಾಕ್ಷವನ್ನು ತೋರಿ ನನ್ನನ್ನು ಕಾಪಾಡಬೇಕು ಎಂದು ಕಣ್ಣೀರು ಹಾಕುತ್ತಾ ಭಕ್ತಿಯಿಂದ, 
ಪರಿಪರಿಯಾಗಿ ಬೇಡಿಕೊಂಡಳು. ಕರುಣಾ ಮಯನಾದ ಪರಮೇಶ್ವರನು ಸತಿ ಪಾರ್ವತಿ ಸಹಿತ ಪ್ರತ್ಯಕ್ಷನಾಗಿ,'ಮಗಳೇ ಚಿಂತಿಸಬೇಡ ನಿನ್ನ ಕೋರಿಕೆಯಂತೆ,  ಸಂಪತ್ತನ್ನು, ಸೌಭಾಗ್ಯವನ್ನು , ನೀಡಬಲ್ಲ ವ್ರಥ ಒಂದಿದೆ,  ಅದನ್ನು ನಿನಗೆ ಉಪದೇಶಿಸುವೆ. ಅದರಿಂದ ನೀನು ಸಕಲ ಸಂಪತ್ತನ್ನು ಹೊಂದುವೆ. 

ಆಷಾಡ  ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯ ದಿನದಲ್ಲಿ, ಮಂಗಳ ಸ್ನಾನವನ್ನು ಮಾಡಿ,  ಪೂಜಾ ಸ್ಥಳವನ್ನು ಶುಚಿ ಮಾಡಿಕೊಂಡು,ರಂಗೋಲಿ ಹಾಕಿ, ಅದರ ಮೇಲೆ ಅಕ್ಕಿ ತುಂಬಿದ ಒಂದು ತಟ್ಟೆಯ‌ ಮೇಲೆ ಒಂದು ತುಪ್ಪದ ದೀಪ ಮತ್ತೊಂದು ಎಣ್ಣೆ ತುಂಬಿದ ಬತ್ತಿಯ ದೀಪ ಹೀಗೆ ಎರಡು ದೀಪ ಸ್ತಂಭವನ್ನು ಇಟ್ಟು, ನನ್ನನ್ನು ಆವಾಹನೆ ಮಾಡಬೇಕು. ಇದರಲ್ಲಿ ಅಷ್ಟಮೂರ್ತಿ ಗಳು ನೆಲೆಸಿರುತ್ತಾರೆ. ಜ್ಯೋತಿರ್ಮಯನಾದ ನನಗೆ ಭೀಮೇಶ್ವರನೆಂದು ಹೆಸರು. ಚಂದ್ರ ನನಗೆ ಪ್ರಿಯವಾದವನು, ಚಂದ್ರನನ್ನು ಜ್ಯೋತಿಸ್ವರೂಪ ನೆಂದು, ನನ್ನನ್ನು ಮಹಾಲಿಂಗ ಸ್ವರೂಪನೆಂದು  ತಿಳಿದು ಭಕ್ತಿಯಿಂದ ಆರಾಧನೆ ಮಾಡು ಎಂದು ಹೇಳಿ,ವ್ರತದ ನಿಯಮಗಳನ್ನು ತಿಳಿಸಿ ಮಾಯವಾದನು. 

ಸ್ಮಶಾನದಲ್ಲಿದ್ದ ಆಕೆಯು, ಮಣ್ಣಿನಲ್ಲಿ ದೀಪದ ಕಂಬಗಳನ್ನು ಮಾಡಿದಳು. ಅರಳಿಎಲೆಗಳನ್ನು ವೀಳೆಯದೆಲೆಯಾಗಿಯೂ, ಅದರ ಕಾಯಿ ಗಳನ್ನು ಅಡಿಕೆ ಯಾಗಿಯೂ ಮಾಡಿಕೊಂಡು, ಗರಿಕೆ ಹುಲ್ಲುಗಳನ್ನೇ ಹೂವೆಂದು  ಭಾವಿಸಿ, ಮಣ್ಣಿನಿಂದಲೇ ಸಿಹಿ ಕಡುಬು ಗಳನ್ನು ಮಾಡಿ, ಧೂಪ- ದೀಪ ಮಾಡಿ ನೈವೇದ್ಯ ಎಲ್ಲವನ್ನು ಮಾನಸ ಪೂಜೆಯಂತೆ ಭಕ್ತಿಯಿಂದ ಮಾಡಿದಳು. ಇಂಥ ಪರಿಶುದ್ಧ ವಾದ ಪೂಜೆಯಿಂದ ಭಗವಂತ‌ ನು ಪ್ರಸನ್ನ ನಾಗಿ ಅನುಗ್ರಹಿಸಿದನು. ಆಮೇಲೆ ಕಣ್ಣುಬಿಟ್ಟು ನೋಡುತ್ತಾಳೆ, ಬಂಗಾರದ ಗೋಡೆಗಳಿಗೆ ರತ್ನಖಚಿತವಾದ ಕಂಬಗಳಿದ್ದ ಭವನವೊಂದು ಸಿದ್ಧವಾಯಿತು. ಎಲ್ಲೆಲ್ಲೂ ನವರತ್ನ ರಾಶಿಗಳು. ಚಿತೆಯೇ ರತ್ನದ ಮಂಚ ದಂತೆ ಹೊಳೆಯುತ್ತಿತ್ತು. ರಾಜಕುಮಾರ  ನಿದ್ದೆ ಯಿಂದ ಎದ್ದಂತೆ ಕಣ್ಣು ಬಿಟ್ಟನು.  ಚದುರಂಗ ಬಲವು ಅಲ್ಲಿ ನಿಂತಿತು. ಇದನ್ನೆಲ್ಲಾ ನೋಡುತ್ತಲೆ  ಆಶ್ಚರ್ಯ ಭರಿತಳಾದಳು. 

ಆಗಿನ್ನೂ ನಿದ್ದೆಯಿಂದ ಎದ್ದಂತೆ ರಾಜಕುಮಾರನು ಹಾಸಿಗೆಯಿಂದ ಮೇಲೆದ್ದು ಎದುರಿಗಿದ್ದ ಕನ್ಯಾಮ ಣಿ ಯನ್ನು ನೋಡಿದನು. ಸಂತೋಷಗೊಂಡು ಆಕೆ ಪತಿಗೆ, ನಡೆದ ವೃತ್ತಾಂತವನ್ನೆಲ್ಲಾ ಹೇಳಿ ದಳು. ಪತಿ  ಆನಂದ ಭರಿತನಾದನು. ಮರುದಿನ ರಾಜಭಟರು ಬಂದು ನೋಡಿ ಆಶ್ಚರ್ಯದಿಂದ ರಾಜನಿಗೆ ನಡೆದುದನ್ನೆಲ್ಲಾ ತಿಳಿಸಿದರು. ರಾಜನು ಮಗನನ್ನು ಗಾಢವಾಗಿ ಅಪ್ಪಿಕೊಂಡನು ಸೊಸೆ ಯನ್ನು ಸಂಭ್ರಮದಿಂದ ಅರಮನೆಗೆ ಕರೆ ತಂದು, ಯಥೇಚ್ಛವಾಗಿ ಬ್ರಾಹ್ಮಣ ಮುತ್ತೈದೆಯರಿಗೆ  ದಾನ ಧರ್ಮಗಳನ್ನು ಕೊಡಿಸಿದನು. ಬಹಳ ಸಂತೋಷದಿಂದ ಎಲ್ಲರೊಂದಿಗೆ ಅರಮನೆಯಲ್ಲಿ ಸುಖದಿಂದ ಇದ್ದರು. ಎಂದು ಸೂತ ಪುರಾಣಿಕರು ಶೌನಕಾದಿಗಳಿಗೆ ಈ ಕಥೆಯನ್ನು ತಿಳಿದರು.
ಅನ್ಯಥಾ ಶರಣಂ ನಾಸ್ತಿ  ತ್ವಮೇವ ಶರಣಂ ನಮಃ |
ತಸ್ಮಾತ್ ಕಾರುಣ್ಯ  ಭಾವೇನ | ರಕ್ಷ ಮಾಂ ಪರಮೇಶ್ವರ  ರಕ್ಷ ರಕ್ಷ ಜಗದೀಶ್ವರ ||

ಶ್ರೀ ಜ್ಯೋತಿರ್ ಭೀಮೇಶಾರ್ಪಣಮ‌ಸ್ತು

No comments:

Post a Comment