Friday, January 23, 2026

ARUNDHATI. ಅರುಂಧತಿ

                  ಮಹಾ ಸತಿ ಅರುಂಧತಿ  

ಶ್ರೀ ಗುರುಭ್ಯೋ ನಮಃ ಹರಿ: ಓಂ 

ಕಶ್ಯಪೋತ್ರಿರ್ಭರದ್ವಾಜೋ
ವಿಶ್ವಾಮಿತ್ರೋಥ ಗೌತಮಃ |
ಜಮದಗ್ನಿರ್ವಸಿಷ್ಠಶ್ಚ 
ಸಪ್ತೈತೇ ಋಷಯ: ಸ್ಮೃತಾ: ||

      ಸಪ್ತ ಋಷಿಗಳಲ್ಲಿ ವಸಿಷ್ಠ ಮಹರ್ಷಿಗಳು ಒಬ್ಬರು. ಶಾಂತಿ- ತಾಳ್ಮೆ -ಕ್ಷಮೆ ಇವು  ವಸಿಷ್ಠ ಮಹರ್ಷಿಗಳ  ಉಸಿರು ಮತ್ತು ತಪಸ್ಸು. ಇಕ್ವಾಕು ವಂಶದವರಿಗೆ ಯುಗ ಗಳಿಂದಲೂ  ಇವರೇ ಕುಲಗುರುಗಳಾಗಿ  ಮುನ್ನಡೆಸುತ್ತಾ ಬಂದವರು, ವಸಿಷ್ಠರ ಹಿರಿಯ ಮಗ 'ಶಕ್ತಿ' ಇವರ ಮಗ ಪರಾಶರ, ಪರಾಶರರ ಮಗ  ವೇದವ್ಯಾಸರು ದ್ವಾಪರಯುಗದಲ್ಲಿ ಕೌರವ ಪಾಂಡವರಿಗೆ ಸಲಹೆ ಸೂಚನೆ ಕೊಟ್ಟು ಮುನ್ನಡೆಸಿದರು. ಹೀಗೆ ವಸಿಷ್ಠರ ವಂಶದವರು ಋಗ್ವೇದಕಾಲದಿಂದಲೂ ಇದ್ದರು. ವೇದಕಾಲದ ಪ್ರಧಾನ ದೇವತೆಗಳು ಮಿತ್ರ ಮತ್ತು ವರುಣ. ಮಿತ್ರ ಎಂದರೆ ಸೂರ್ಯ, ವರುಣ ಎಂದರೆ ಮಳೆ. ಮಿತ್ರ- ವರುಣರು ಅಪ್ಸರೆ ಊರ್ವಶಿಯಲ್ಲಿ  ಮೋಹಿತರಾದರು. ಆನಂತರ ರೇತಸ್ಸನ್ನು  ಕುಂಭದಲ್ಲಿಟ್ಟು 'ಕುಂಭದಿಂದ' ಹುಟ್ಟಿದವರೇ ವಸಿಷ್ಠ ಮತ್ತು ಅಗಸ್ತ್ಯರು. ಇವರಿಬ್ಬರು ಅವಳಿ ಮಕ್ಕಳು. ವಸಿಷ್ಠರು ಜ್ಯೋತಿರ್ವಿಜ್ಞಾನ ಸೇರಿದಂತೆ ಹಲವು ಸಾಧನೆಗಳನ್ನು ಮಾಡಿ ಮಹರ್ಷಿಗಳಾದರು.

ಅರುಂಧತಿ:- ಪಂಚಮಹಾ ಪತಿವ್ರತೆಯರಲ್ಲಿ ಅರುಂಧತಿ ಯು ಒಬ್ಬಳು. ಒಮ್ಮೆ ಬ್ರಹ್ಮ ದೇವನು ಜಗತ್ತಿನ ಎಲ್ಲಾ ಸೌಂದರ್ಯವನ್ನು ಸೇರಿಸಿ ಸಂಧ್ಯಾ ಮತ್ತು ಮನ್ಮಥರನ್ವು  ಸೃಷ್ಟಿಮಾಡಿದನು. ನಂತರ ಐದು ಪುಷ್ಪ ಬಾಣ ಮೋಹಾಸ್ತ್ರ ಗಳನ್ನು  ಬ್ರಹ್ಮನು ಮನ್ಮಥನಿಗೆ ಕೊಟ್ಟು ಜಗತ್ತಿನ ಸೃಷ್ಟಿಗಾಗಿ ಯುವಕ ಯುವತಿಯರ ಮೇಲೆ ಮೋಹಾಸ್ತ್ರಗಳನ್ನು ಪ್ರಯೋಗಿಸು ಇದರಿಂದ ಸೃಷ್ಟಿ ಕಾರ್ಯವಾಗುತ್ತದೆ ಎಂದರು. ಪ್ರಯೋಗ ಮಾಡುವುದಾಗಿ ಮೊದಲ ಬಾಣವನ್ನು ಬ್ರಹ್ಮ ಲೋಕದಲ್ಲಿ ಪ್ರಯೋಗಿಸಿ ಇದರ ಪರಿಣಾಮ ಬ್ರಹ್ಮನು ಸೇರಿದಂತೆ ಅಲ್ಲಿದ್ದವರೆಲ್ಲರ ದೃಷ್ಟಿ ,ಮನಸ್ಸು  ರೂಪವತಿಯಾದ ಸಂಧ್ಯಾಳ ಮೇಲೆ ಹೋಗಿ ಮೋಹ  ಪರವಶರಾದರು. ಇದರಿಂದ ಭಯಭೀತಳಾದ ಸಂಧ್ಯಾ ಪರಮೇಶ್ವರನನ್ನು ಪ್ರಾರ್ಥಿಸಿದಳು. ಪರಮೇಶ್ವರನು ಬ್ರಹ್ಮಲೋಕಕ್ಕೆ ಕಾಲಿಡುತ್ತಿದ್ದಂತೆ ಬ್ರಹ್ಮ ಹಾಗೂ ಉಳಿದ ಎಲ್ಲರ ಮೋಹಪಾಷ ಹರಿಯಿತು.

ಮನ್ಮಥನು ತನ್ನ ಬಾಣವನ್ನು ಗೊತ್ತುಗುರಿ ಇಲ್ಲದೆ ಬ್ರಹ್ಮ ಲೋಕದಲ್ಲಿ ಪ್ರಯೋಗ ಮಾಡಿದ್ದರ ಪರಿಣಾಮ ಮನ್ಮಥ ನಿಗೆ  ನೀನು ಮುಂದೆ ಶಿವನ ಸಿಟ್ಟಿಗೆ ಕಾರಣನಾಗಿ ಅವನ ಮೂರನೇ ಕಣ್ಣಿನ ಜ್ವಾಲೆಯಿಂದ ಸುಟ್ಟು ಬೂದಿಯಾಗುವೆ ಎಂದು ಬ್ರಹ್ಮನು ಶಾಪ ಕೊಟ್ಟನು. ಎಲ್ಲಾ ನೋಡುತ್ತಿದ್ದ  ಸಂಧ್ಯಾಳಿಗೆ, ಈ ಎಲ್ಲಾ ಕಾರಣಗಳಿಗೆ ತನ್ನ ಸೌಂದರ್ಯವೇ ಕಾರಣವಾಗಿದೆ ಎಂದು ಬೇಸರವಾಗಿ ಕಠೋರ ತಪಸ್ಸು ಮಾಡಿ ತನ್ನ ದೇಹ ತ್ಯಾಗ ಮಾಡಲು ಹೊರಟಿದ್ದಳು. ಬ್ರಹ್ಮದೇವನು ಅವಳಿಗೆ ಶಿವನ ಮಂತ್ರ ಉಪದೇಶಿಸಲು ವಸಿಷ್ಠರನ್ನು ಕರೆಸಿದನು. ಅವರು ಅವಳಿಗೆ ಶಿವನ  ಪಂಚಾಕ್ಷರಿ ಮಂತ್ರವನ್ನು ಉಪದೇಶಿಸಿದರು.  ನಂತರ ಸಂಧ್ಯಾ ಕಠೋರ ತಪಸ್ಸು ಮಾಡಿ, ಶಿವನನ್ನು ಒಲಿಸಿಕೊಂಡಳು. ಶಿವನು ಮೂರು ವರ ಕೇಳುವಂತೆ ಹೇಳಿದನು, ಸಂಧ್ಯಾ ಮೊದಲನೇ ವರದಲ್ಲಿ, ಯಾವುದೇ ಜೀವಿಗಾದರೂ ಸರಿ ಯೌವ್ವನ ಬಂದ ನಂತರವೇ,  ಕಾಮದ ಭಾವ ಬರಲಿ, ಎರಡನೆಯ ವರ ನನ್ನ ಗಂಡ ಮಾತ್ರ ನನ್ನನ್ನು ಕಾಮ ದೃಷ್ಟಿಯಿಂದ ನೋಡಲಿ ಬೇರೆ ಯಾರೇ ನೋಡಿದರೂ ಅವರು ನಪುಂಸಕರಾಗಲಿ, ಮೂರನೆ ವರ ಇಷ್ಟೊಂದು ಜನರಿಂದ ಮೋಹಕ್ಕೊಳಗಾದ  ಈ ನನ್ನ ಶರೀರ ಸುಟ್ಟು ಬೂದಿಯಾಗಲಿ ಎಂದು ಕೇಳಿದಳು. ಪರಮೇಶ್ವರನು ಅವಳಿಗೆ ಎಲ್ಲಾ ವರಗಳನ್ನು ಅನುಗ್ರಹಿಸಿ ಅವಳಿಗೆ ಹೇಳಿದ  'ಮೇಧಾತೀತಿ' ಎಂಬ ಮಹರ್ಷಿ ಅನೇಕ ಕಾಲದಿಂದ ಯಾಗ ಮಾಡುತ್ತಿದ್ದಾನೆ. ಅಲ್ಲಿ ಹೋಗಿ ಯಜ್ಞ ಕುಂಡದಲ್ಲಿ ಆಹುತಿ ಯಾಗು. ಆಹುತಿ ಯಾಗುವ ಮೊದಲು ನೀನು ಮನದಲ್ಲಿ ಯಾರನ್ನು ನೆನೆಸಿಕೊಳ್ಳುತ್ತಿಯೋ ಆ ವ್ಯಕ್ತಿಯೇ ಮುಂದೆ ನಿನಗೆ ಪತಿಯಾಗುತ್ತಾನೆ. ನಿನ್ನ ಶರೀರ ದಹನವಾಗಿ ಮತ್ತೆ ಅದೇ ಯಜ್ಞ ಕುಂಡದಲ್ಲಿ ಹುಟ್ಟಿಬರುವೆ. ಎಂದು ಹೇಳಿ ಕೈಲಾಸಕ್ಕೆ ಹೋದನು.
ಆನಂತರ ಸಂಧ್ಯಾ ಮೇದಾತೀತಿ ಯಜ್ಞ ಮಾಡುವಲ್ಲಿ ಹೋಗಿ ಅಗ್ನಿಗೆ ಆಹುತಿಯಾಗುವ ಮೊದಲು ತನಗೆ ಶಿವನ ಮಂತ್ರೋಪದೇಶ ಮಾಡಿದ  ವಸಿಷ್ಠ ಮಹರ್ಷಿಗಳೆ ತನ್ನ ಪತಿಯಾಗಲಿ ಎಂದು ಬೇಡಿಕೊಂಡು. ಅಗ್ನಿಗೆ ಆಹುತಿಯಾಗಿ ಶರೀರ ದಹಿಸಿದ ಮೇಲೆ ಮತ್ತೆ ಶಿಶುವಾಗಿ ಹುಟ್ಟಿ ಬಂದಳು. ಆ ಮಗುವನ್ನು ಮೇದಾತೀತಿ ಮಹರ್ಷಿಗಳು  ಮಗುವಿಗೆ 'ಅರುಣ್ಜ್ಯೋತಿ'  ಎಂದು ಹೆಸರಿಟ್ಟರು. ಅರುಣ್ ಜ್ಯೋತಿಯನ್ನು  ತಮ್ಮ ಆಶ್ರಮದಲ್ಲಿ ಪೋಷಿಸಿ ಬೆಳೆಸಿ ದೊಡ್ಡವಳನ್ನಾಗಿ ಮಾಡಿದರು. ನಂತರ ಅವಳ ಇಚ್ಛೆಯಂತೆ ಅವಳನ್ನು ವಸಿಷ್ಟರಿಗೆ ಕೊಟ್ಟು ವಿವಾಹ ಮಾಡಿದರು. ಅರುಂಧತಿ ಪತಿಗೆ ತಕ್ಕ ಸತಿಯಾಗಿ ವಸಿಷ್ಠರು ಅರುಂಧತಿ ದಾಂಪತ್ಯ ಜೀವನವನ್ನು  ಕ್ರಮವಾಗಿ ನಡೆಸಿ ಬಹಳ ಕಾಲ  ಬಾಳಿದರು.

ಅರುಂಧತಿ ನಕ್ಷತ್ರದ ವಿಶೇಷ:- ಮೊದಲು  ಸೃಷ್ಟಿಯಾದ ಸಂಧ್ಯಾ ತನ್ನನ್ನೇ ಎಲ್ಲರೂ ಮೋಹಿಸಿದ ದೇಹವನ್ನು ದಹಿಸಿಕೊಂಡ  ಮಹಾ ಪತಿವ್ರತೆ ಅರುಂಧತಿ. 'ಅರುಣ್' ಎಂದರೆ ಬಂಗಾರ ಹಾಗೂ ಜ್ಯೋತಿ, ಎಂದು, 'ಧತಿ' ಎಂದರೆ ದಹಿಸಿದವಳು.‌ ಇವಳು ಮುಂದೆ ತನ್ನ ಪಾತಿವ್ರತ್ಯದ ಪ್ರಭಾವದಿಂದ ಆಕಾಶದಲ್ಲಿ, ಪತಿಯ ಜೊತೆಯಲ್ಲಿಯೇ ನಕ್ಷತ್ರವಾಗಿ ಚಿರಕಾಲವೂ ಇರುವಂಥ ಸ್ಥಾನ ಪಡೆದ ಮಹಾ ಪತಿವ್ರತೆ ಎಂಬ ಖ್ಯಾತಿಗೆ ಪಾತ್ರರಾದಳು. ಸಪ್ತ ಋಷಿಗಳ ಪತ್ನಿಯರಲ್ಲಿ ಅತ್ಯಂತ ಶ್ರೇಷ್ಠ ಳಾದವಳೇ ಅರುಂಧತಿ. ಒಮ್ಮೆ ಯಾಗಶಾಲೆ ಯಲ್ಲಿ ಸಪ್ತ ಋಷಿಗಳು ಯಾಗ ಮಾಡುತ್ತಿರುವಾಗ, ಸಪ್ತ ಋಷಿಗಳ ಪತ್ನಿಯರ ಮೇಲೆ ಅಗ್ನಿ ದೇವನಿಗೆ ಮೋಹ ಉಂಟಾಯಿತು. ಆದರೆ ಅಗ್ನಿಯು ಸಪ್ತ ಋಷಿಗಳ ಶಾಪಕ್ಕೆ ಹೆದರಿ ಸುಮ್ಮನಾದನು, ಇದನ್ನು ಅರಿತ ಅಗ್ನಿಯ ಪತ್ನಿ 'ಸ್ವಾಹಾ ದೇವಿ', ಸಪ್ತ ಋಷಿಗಳ ಪತ್ನಿಯರು ಅಂದರೆ ಸಾಮಾನ್ಯ ರಲ್ಲ ಎಂದು ಕೊಂಡ  ಅವಳೇ ಸಪ್ತ ಋಷಿಗಳ ಪತ್ನಿಯರ ರೂಪವನ್ನು ತನ್ನೊಳಗೆ ಧರಿಸಿ ಪತಿ ಅಗ್ನಿದೇವನನ್ನು  ತೃಪ್ತಿಪಡಿಸಿದಳು. ಆದರೆ ವಸಿಷ್ಠರ ಪತ್ನಿ 'ಅರುಂಧತಿ' ಹೊರತಾಗಿ ಉಳಿದೆಲ್ಲ ಋಷಿ ಪತ್ನಿಯರ ರೂಪವನ್ನು ಧಾರಣೆ ಮಾಡಲು ಸಾಧ್ಯ ಆಯಿತು ಮಹಾ ಪತಿವ್ರತೆ  'ಅರುಂಧತಿ' ರೂಪವನ್ನು  ಎಷ್ಟೇ ಪ್ರಯತ್ನ ಪಟ್ಟರು ಅವಳಿಂದ ಧಾರಣೆ ಮಾಡಲು  ಆಗಲಿಲ್ಲ. 
ವಸಿಷ್ಠರ ಶ್ರೇಷ್ಠತೆ:-  ವಸಿಷ್ಠರು ಎಂತಹ ಸಂದರ್ಭದಲ್ಲಿ ಯಾರಿಗೇ ಆದರೂ  ಶಾಪ ಕೊಡುವುದು, ದ್ವೇಷ ಸಾಧಿಸು ವುದು ಮಾಡುತ್ತಿರಲಿಲ್ಲ. ವಸಿಷ್ಠರ ಗುಣಗಳಿಗೆ ಮೆಚ್ಚಿ ದೇವೇಂದ್ರನು ಕಾಮಧೇನುವನ್ನು ಕೊಟ್ಟಿದ್ದನು. ಒಮ್ಮೆ ಗಾದಿ ರಾಜನ  ಮಗ  ರಾಜ ಕೌಶಿಕ ವಸಿಷ್ಠರ  ಆಶ್ರಮಕ್ಕೆ ಬಂದು ಆತೀಥ್ಯವನ್ನು ಸ್ವೀಕರಿಸಿ  ಕಾಮಧೇನುವನ್ನು ತನ್ನ ಅರಮನೆಗೆ ಬೇಕೆಂದು ಬಲವಂತದಿಂದ ತೆಗೆದುಕೊಂಡು ಹೊರಟಾಗ,  ಕಾಮಧೇನು ಕ್ಷಣಮಾತ್ರದಲ್ಲಿ ಸಾವಿರಾರು  ರಾಕ್ಷಸರನ್ನು  ಸೃಷ್ಟಿಸಿ ಯುದ್ಧ ಮಾಡಲು ಬಂದ ಕೌಶಿಕನನ್ನು ಸೋಲಿಸಿ ಕಳಿಸಿತು. ವಸಿಷ್ಠರ ಶಕ್ತಿಯನ್ನು ಕಂಡು ತಾನು ಸಹ  ವಸಿಷ್ಟರನ್ನೇ ಮೀರಿಸುವಂಥ  ಶಕ್ತಿ ಪಡೆಯಬೇಕು ಎಂದು, ವಸಿಷ್ಟರ ಮೇಲೆ ದ್ವೇಷ ಸಾಧಿಸಿ ಅವರ ಸಂತಾನವಾದ ನೂರು ಮಕ್ಕಳನ್ನು ಕೊಂದು ನಾಶ ಮಾಡಿದನು. ವಸಿಷ್ಟರಿಗೆ ಅವಮಾನ ಮಾಡಿ ಆಶ್ರಮವನ್ನು  ಸುಟ್ಟು ಹಾಕಲು ಹೊರಟನು ನಂತರ ತನ್ನ ತಪ್ಪಿನ ಅರಿವಾಗಿ  ವಸಿಷ್ಟರಲ್ಲಿ ಕ್ಷಮೆಕೋರಿ, ತಾನೇ ಸ್ವತಃ ಕಠಿಣ ತಪಸ್ಸು ಮಾಡಿ ಬಹಳ ಕಾಲದ  ನಂತರವೂ ವಸಿಷ್ಠರನ್ನು ಕೊಲ್ಲಲು ಮರೆಯಲ್ಲಿ ಬಂದು ನಿಂತಾಗ, ಅವನಿಗೆ ವಸಿಷ್ಠರ ಶ್ರೇಷ್ಠತೆಯ ಅರಿವಾಗಿ, ಅವರ ಶಾಂತಿ ಸಹನೆಯ, ಗುಣ ರಾಜ್ ಕೌಶಿಕನಿಗೆ ತಿಳಿಯಿತು,  ಶೌರ್ಯ,ಬಲ,ಪ್ರದರ್ಶಿಸುವುದು ಕ್ಷತ್ರಿಯರಿಗೆ ಶೋಭೆಯಾದರೆ,  ಕ್ಷಮಿಸುವುದೇ ಬ್ರಾಹ್ಮಣನ ಬಲ.  ತಕ್ಷಣ ಕೈಯಲ್ಲಿದ್ದ ಕತ್ತಿಯನ್ನು ಬಿಸಾಡಿ  ವಸಿಷ್ಠರ ಕಾಲಿಗೆ ಬಿದ್ದು  ಕ್ಷಮೆ  ಯಾಚಿಸಿ ವಸಿಷ್ಠರಿಂದಲೇ 'ಮಹರ್ಷಿ'ಎನಿಸಿ ಕೊಂಡನು.  ಆಗಿನಿಂದಲೇ ರಾಜನಾದ ಕೌಶಿಕನು ಬ್ರಹ್ಮರ್ಷಿ ವಿಶ್ವಮಿತ್ರರು ಎಂದೆನಿಸಿ ಕೊಂಡರು.   

ಮಹರ್ಷಿಗಳಲ್ಲೇ ಅತ್ಯಂತ ಶ್ರೇಷ್ಠರಾದ  ವಸಿಷ್ಠ ಮಹರ್ಷಿಗಳು, ಮಹಾಪತಿವ್ರತೆ 'ಅರುಂಧತಿ'  ಇವರು ವಿಷ್ಣುವನ್ನು ಕುರಿತು ಬಹಳ ಕಾಲ ತಪಸ್ಸು ಮಾಡಿದರು. ಪ್ರತ್ಯಕ್ಷನಾದ  ವಿಷ್ಣು ವರವನ್ನು ಕೊಡುತ್ತಾನೆ. 'ಲೋಕದಲ್ಲಿ  ಮದುವೆ ಯಾದ  ನವದಂಪತಿಗಳಿಗೆ, ಆಕಾಶ ಕಾಯದಲ್ಲಿ ಸ್ಥಿರವಾಗಿರುವ  ಏಳು ಸಪ್ತ ಋಷಿಗಳ ಮಂಡಲದಂತೆ  ಸುಖ, ಸಂತೋಷ  ಸಮೃದ್ಧಿಯಾಗಿ ಜೀವನ ನಡೆಸುವಿರಿ' ಎಂದು ಆಶೀರ್ವಾದ ಮಾಡುವಂತೆ  ವರವನ್ನು ಕೊಟ್ಟನು. ವಿವಾಹ ವಿಧಿಗಳಲ್ಲಿ ಕಾಶಿ ಯಾತ್ರೆ, ಧಾರೆ, ಮಾಂಗಲ್ಯ ಧಾರಣೆ, ಸಪ್ತಪದಿ ಸೇರಿದಂತೆ 'ಅರುಂಧತಿ' ನಕ್ಷತ್ರದ ದರ್ಶನ ಪ್ರಮುಖವಾಗಿದೆ.  ನೂತನ ವಧುವರರಿಗೆ, 'ಅರುಂಧತಿ' ನಕ್ಷತ್ರ ತೋರಿಸಿ, ಪೂಜೆ ಮಾಡಿಸಿ ಮದುಮಗಳ ಕೈಯಲ್ಲಿ ಹಿರಿಯ ಮುತ್ತೈದೆ ಯೊಬ್ಬರಿಗೆ 'ಅರುಂಧತಿ' ಬಾಗಿನ ಕೊಡಿಸಿ ನಮಸ್ಕರಿಸಿ ಆಶೀರ್ವಾದ ಪಡೆಯಲು ಹೇಳುತ್ತಾರೆ. 

ಸರ್ವೇ ಜನಾ ಸುಖಿನೋ ಭವಂತು 

No comments:

Post a Comment