ಮತ್ತೆ ಬರುವನೇನೇ ಗೋಪಿ, ಕೃಷ್ಣ ಗೋಕುಲ ಧಾಮಕೆ
ತರುವನೇನೇ ಮತ್ತೆ ಕಳೆಯ ಕಳೆದ ವನದಭಿರಾಮಕೆ
ಅಂದು ತಂದೆಯ ತಲೆಯನೇರಿ ಬಂದ ನಂದರ ಗುಡಿಲಿಗೆ,
ವಧಿಸಲೆಂದೇ ವರಗಿಕೊಂಡ ಕ್ರೂರ ಪೂತನಿ ಮಡಿಲಿಗೆ
ವಿವಿಧ ಜಾತರ ಬೆನ್ನನೇರಿ ಮಥಿತ ಬೆಣ್ಣೆಯ ಕದಿಯುತ
ಹಂಚಿತಿನ್ನುವ ಪುಟ್ಟಪೋರ ಮರಳಿ ಬರುವನೆ ಇಲ್ಲಿಗೆ
ಯಮುನೆಯಲೆಯಲೆ ಸಾಕ್ಷಿಯಾಗಿದೆ ಅರಿವೆ ಕದಿಯುವ ಲೀಲೆಗೆ
ದಾವದೆಲೆ ಎಲೆ ಕಿವಿಗಳಾಗಿವೆ ದಿವಿಯ ಕೊಳಲಿನ ನಾದಕೆ
ಪ್ರೇಮ ಯೋಗದ ಭೋಗ ನೀಡಿದ ರಾಸಲೀಲೆಯನಾಡುತ
ಆಸೆಯಿಂದಲಿ ಕರೆವ ದನಿಗಳ ಕೇಳಿ ಬರುವನೆ ಇಲ್ಲಿಗೆ
ಯಾವ ಕಟ್ಟಳೆ ಕಟ್ಟಿಹಾಕಿದೆ ಕೇಳಲಿಲ್ಲವೆ ಮಾತೃಕೆ
ಪ್ರೇಮಕಿಂತ ಕರ್ಮ ಹಿರಿದೇ ಇಳಿಯಲಿಲ್ಲವೆ ವಾದಕೆ
ಕಜ್ಜ ಗುರಿಗಳ ಬೆನ್ನನೇರಿ ಮೃದಲತನವನು ಮರೆತನೇ
ಮತ್ತೆ ಮೊದಲಿನ ಕೃಷ್ಣನಾಗಿ ಮರಳಿ ಬರುವನೆ ಇಲ್ಲಿಗೆ
ಜಾನಕಿರಾಮ
( ಸೀತಾ ರಾಮ ಕಟ್ಟಿ)

No comments:
Post a Comment