Sunday, February 01, 2026

Oh ! when will you come ? ಬಂದು ಹೋಗಿ ಊರಿಗೆ

       ಬಂದು ಹೋಗಿ ಊರಿಗೆ

ಋತುಗಳಾರು ಉರುಳುತಿಹವು ಬಂದು ಹೋಗಿ ಊರಿಗೆ 
ಚೂರು ನಗುವ ಚೆಲ್ಲಿ ಹೋಗಿ ನಗುವ ಮರೆತ ಸೂರಿಗೆ 

ಬೆಳೆದು ನಿಂತ ನಿಮ್ಮ ತಂಗಿ ಸೂಕ್ತ ವಯದ ಕನ್ಯೆಯು 
ಬಂದು ಹೋಗಿ ತಿಳಿಸಲಿಲ್ಲ ಗಂಡಿನವರು ಮೊನ್ನೆಯೂ 
ಮಾವನವರ ಚಿಂತೆ ಈಗ ಭಾರವಾಗಿ ಹೋಗಿದೆ 
ತಲೆಯ ಬಾಗದಂಥ ಅವರ ಬೆನ್ನು ಬಾಗಿ ಹೋಗಿದೆ 

ಹೊಟ್ಟೆತುಂಬ ಉಣ್ಣುವವರ ಹಸಿವೆ ಏಕೋ ಸತ್ತಿದೆ 
ಅತ್ತೆಯವರ ಕಣ್ಣ ಹನಿಯು ಕಣ್ಣಿನಲ್ಲೇ ಬತ್ತಿದೆ 
ಚೂರು ನಗುವ ಚೆಲ್ಲಿ ಹೋಗಿ ನಗುವ ಮರೆತ ಸೂರಿಗೆ 
ಋತುಗಳಾರು ಉರುಳುತಿಹವು ಬಂದು ಹೋಗಿ ಊರಿಗೆ

ಬೀಜ ಮೊಳೆತು ಸಸಿಗಳಾಗಿ ತೆನೆಗಳಾಗಿ ಹೋದವು 
ಕೆರೆಯು ಬತ್ತಿ ಮತ್ತೆ ತುಂಬಿ ದಿನಗಳಾಗಿ ಹೋದವು 
ಮಾವು ಮತ್ತೆ ಹೂವ ಬಿಟ್ಟು ಚೆಂದವಾಗಿ ನಿಂತಿದೆ 
ನೆನಪಿನಲ್ಲೇ ನೂರು ನೂರು ಕಾಲ ಉರುಳಿದಂತಿದೆ 

ಮೊಳಕೆಯೊಂದು ಹುಸಿಯದಾಗಿ ಮೊನ್ನೆ ಮೊನ್ನೆ ಕಳೆಯಿತು 
ನಿಮ್ಮ ಎದೆಯಮೇಲೆ ಅಳುವ ಆಸೆ ಮತ್ತೆ ಬೆಳೆಯಿತು  
ಚೂರು ನಗುವ ಚೆಲ್ಲಿ ಹೋಗಿ ನಗುವ ಮರೆತ ಸೂರಿಗೆ 
ಋತುಗಳಾರು ಉರುಳುತಿಹವು ಬಂದು ಹೋಗಿ ಊರಿಗೆ

ಗಟ್ಟಿ ಮನದ ಯೋಧ ನೀವು ಗಟ್ಟಿಯಲ್ಲವಲ್ಲ ನಾವು 
ಸಹಿಸುತಿಹೆವು ಆದರೂನು ಗಟ್ಟಿಯಾಗಿ ಎಲ್ಲ ನೋವು 
ಹೋಗಿ ಬರುವ ದಾರಿಗಳಲಿ ಕಣ್ಣ ನೆಟ್ಟು ಕಾದಿಹೆ 
ಚಿಕ್ಕ ಚಿಕ್ಕ ಸದ್ದುಗಳಿಗು ಹಂಗ ತೊರೆದು ಓಡಿಹೆ 

ಹುಚ್ಚಳಾಗುವುದಕು ಮುನ್ನ ಕಂಡು ಹೋಗು ಕಣ್ಣಿಗೆ 
ತಾಳಿಗಿಂತ ಮಿಗಿಲ ಬಯಕೆ ಯಾವುದುಂಟು ಹೆಣ್ಣಿಗೆ 
ಸಾಕು ಇನ್ನು ಸಾಕು ಈಗ ಬಂದು ಹೋಗಿ ಊರಿಗೆ 
ಚೂರು ನಗುವ ಚೆಲ್ಲಿ ಹೋಗಿ ನಗುವ ಮರೆತ ಸೂರಿಗೆ 

                                             ಜಾನಕಿರಾಮ

                                             ಸೀತಾರಾಮ ಕಟ್ಟಿ 

No comments:

Post a Comment