Sunday, April 19, 2026

CURD POT. ಮೊಸರು ಗಡಿಗೆ

                       ಮೊಸರು ಗಡಿಗೆ 

            ಊರು ದೇವರ ಜಾತ್ರೆ ಅಥವಾ ಕೃಷ್ಣ ಜನ್ಮಾಷ್ಟಮಿಯ (ಗೋಪಾಲಕರ ಹಬ್ಬ) ಸಂದರ್ಭದಲ್ಲಿ ಮೊಸರು ಗಡಿಗೆ ಒಡೆಯುವ (ಮೊಸರು ಕುಡಿಕೆ) ಆಚರಣೆಯು ವಿಶೇಷ ಮಹತ್ವವನ್ನು ಹೊಂದಿದೆ. ಇದರ ಹಿಂದಿನ ಪ್ರಮುಖ ಪ್ರಯೋಜನಗಳು ಮತ್ತು ಉದ್ದೇಶಗಳು 

ಕೃಷ್ಣನ ಲೀಲೆಯ ಸ್ಮರಣೆ.     ಶ್ರೀಕೃಷ್ಣನು ಬಾಲ್ಯದಲ್ಲಿ ಗೋಪಿಕೆಯರ ಮನೆಯಲ್ಲಿ ಮೊಸರು, ಬೆಣ್ಣೆ ಕಳ್ಳತನ ಮಾಡಿ ತಿನ್ನುತ್ತಿದ್ದ ಲೀಲೆಯನ್ನು ಇದು ನೆನಪಿಸುತ್ತದೆ. ಇದು ಭಗವಂತನ ಬಾಲ್ಯದ ಕ್ರೀಡೆಯ ಸಂಕೇತವಾಗಿದೆ.

ಸಾಮೂಹಿಕ ಸಂಭ್ರಮ ಮತ್ತು ಭಕ್ತಿ. ಈ ಆಚರಣೆಯು ಹಳ್ಳಿಯ ಜನರಲ್ಲಿ ಒಗ್ಗಟ್ಟು, ಸಂತೋಷ ಮತ್ತು ಭಕ್ತಿಯನ್ನು ಮೂಡಿಸುತ್ತದೆ. ಯುವಕರು ಗುಂಪುಗೂಡಿ, ಮಾನವ ಪಿರಮಿಡ್ ನಿರ್ಮಿಸಿ ಗಡಿಗೆ ಒಡೆಯುವುದರಿಂದ ಸಾಹಸ ಮತ್ತು ಕ್ರೀಡಾ ಮನೋಭಾವ ಹೆಚ್ಚುತ್ತದೆ.

ಕಷ್ಟಗಳನ್ನು ಜಯಿಸುವ ಸಂಕೇತ.  ಎತ್ತರದಲ್ಲಿ ನೇತುಹಾಕಿದ ಗಡಿಗೆಯನ್ನು ಒಡೆಯಲು ಪ್ರಯತ್ನಿಸುವುದು, ಜೀವನದ ಸವಾಲುಗಳು ಮತ್ತು ಅಡೆತಡೆಗಳನ್ನು ಭಕ್ತಿಯಿಂದ ಜಯಿಸಬಹುದು ಎಂಬುದನ್ನು ಸೂಚಿಸುತ್ತದೆ.

ಸಂಪ್ರದಾಯದ ಉಳಿವಿನ.  ಇದು ಹಳೆಯ ಸಂಪ್ರದಾಯವಾಗಿದ್ದು, ಜಾತ್ರೆಯ ಸಂದರ್ಭದಲ್ಲಿ ಊರಿನ ಸಂಸ್ಕೃತಿ ಮತ್ತು ಐಕ್ಯತೆಯನ್ನು ಎತ್ತಿಹಿಡಿಯುತ್ತದೆ. 

ಮುಚ್ಚಳ ಸಹಿತ ಗಡಿಗೆ ತೆಗೆದುಕೊಂಡು ತೊಳೆದು ಮೇಲೆ ಕ್ಯಾವಿ ಮತ್ತು ಸುಣ್ಣದ ಗೆರೆಗಳನ್ನು ಹಾಕಿ ಅದರಲ್ಲಿ ಹೂ, ಮೊಸರು, ಹಾಲು, ಬೆಣ್ಣೆ ಮತ್ತು ನಾಣ್ಯಗಳನ್ನು ಹಾಕಿರುತ್ತಾರೆ. ಮೂಲ ದೇವರ ಸನ್ನಿಧಿಯಲ್ಲಿ ಯಥಾಪ್ರಕಾರ ಪೂಜೆ ಸಲ್ಲಿಸಿ ಮುತ್ತೈದೆಯರಿಂದ ಉಡಿ ತುಂಬಿಸಿ ಹೊಸ ಅರಿವೆಯ ಸಿಂಬೆಮಾಡಿ ತಲೆಯಮೇಲೆ ಹೊತ್ತು ಹಾಡುತ್ತ, ಕುಣಿಯುತ್ತ ಐದು ಪ್ರದಕ್ಷಿಣೆ ಹಾಕಿ ಗಂಡನ ಹೆಸರು ಹೇಳಿ ಕೆಳಗಿಳಿಸಿ ಮತ್ತೆ ಶ್ಲೋಕಗಳನ್ನು, ಗೋವಿಂದ ಗೀತ ಹೇಳುತ್ತಾ ಎತ್ತರದ ಹಗ್ಗಕ್ಕೆ ನೇತು ಹಾಕುತ್ತಾರೆ. ಯುವಕರು ಸಾಹಸದಿಂದ ಅದನ್ನು ಒಡೆದಾಗ, ಅದರೊಳಗಿನ ಪದಾರ್ಥಗಳು ಕೆಳಗೆ ಬಿದ್ದು, ಪ್ರಸಾದವಾಗಿ ಹಂಚಲ್ಪಡುತ್ತವೆ.

ಮುಖ್ಯ ದೇವಾಲಯದ ಆವರಣದಲ್ಲಿ  ನೆಲದ ಮೇಲೆ ತಗ್ಗು ತೆಗೆದು ಅದರಲ್ಲಿ ಮಣ್ಣು ಹಾಗೂ ನೀರು ಹಾಕಿ ಕೆಸರುಗದ್ದೆಯಂತೆ ಮಾಡಲಾಗಿರುತ್ತದೆ. ಮೈತುಂಬ ಕೆಸರು ಮೆತ್ತಿಸಿಕೊಂಡಿದ್ದ ಯುವಕರು ಪಿರಾಮಿಡ್ ನಿರ್ಮಿಸಿ ಮೇಲೆ ಎತ್ತರದಲ್ಲಿ ಹಗ್ಗದ ಮೇಲೆ ಕಟ್ಟಿದ್ದ ಮೊಸರು ಗಡಿಗೆಗಳನ್ನು ಒಡೆದು ಸಾಹಸ ಹಾಗೂ ಜಾಣ್ಮೆ ತೋರಿಸುತ್ತಾರೆ. ಕೃಷ್ಣ-ರಾಧೆಯರ ವೇಷಧಾರಿಗಳಾಗಿದ್ದ ಬಾಲಕ-ಬಾಲಕಿಯರು ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿರುತ್ತಾರೆ.

ಕೆಸರಿನಲ್ಲೇ ನಿಂತು ಒಡೆಯುವಂತೆ ಕಂಬ ಹಾಗೂ ಗಿಡದ ಮಧ್ಯದಲ್ಲಿ ಮೊಸರು ತುಂಬಿದ ಗಡಿಗೆಯನ್ನು ಹಗ್ಗದಿಂದ ಕಟ್ಟಿ ಜೋತು ಬಿಡಲಾಗಿರುತ್ತದೆ. ಗಡಿಗೆ ಒಡೆಯಲು ಯುವಕರು ಪಿರಾಮಿಡ್ ಮಾದರಿಯಲ್ಲಿ ಒಬ್ಬರ ಮೇಲೊಬ್ಬರು ಹತ್ತಿ ನಿಂತು ಮೊಸರು ಗಡಿಗೆ ಒಡೆಯುತ್ತಾರೆ. ಹೀಗೆ ಯುವಕರು ಹತ್ತುವಾಗ ಕಾಲು ಜಾರಲೆಂಬ ಉದ್ದೇಶದಿಂದಲೇ ಸಂಘಟನೆಯವರು ಆಗಾಗ ನೀರು ಎರಚಿ ಮತ್ತಷ್ಟು ಕೆಸರುಮಯ ಮಾಡುತ್ತಾರೆ.ಅದನ್ನೆ ಯುವಕರು ಸವಾಲಾಗಿ ಸ್ವೀಕರಿಸಿ ತಮ್ಮ ಸಾಹಸ ಪ್ರಜ್ಞೆ ಹಾಗೂ ಜಾಣ್ಮೆಯಿಂದ ಸತತ ಪ್ರಯತ್ನದ ಮೂಲಕ ಮೊಸರು ಗಡಿಗೆ ಒಡೆಯುವಲ್ಲಿ ಯಶಸ್ವಿಯಾಗುತ್ತಾರೆ.

        ಇನ್ನೊಂದು ಮಾನ್ಯತೆ ಏನೆಂದರೆ ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮದ ನಂತರ ಗಡಿಗೆಯಿಂದ ಬಿದ್ದ ವಸ್ತುಗಳನ್ನು ಪ್ರಸಾದವಾಗಿ ಸ್ವೀಕರಿಸುವ ಮನೋಭಾವ ರೂಢಿಯೂ ಇದೆ.  ಬಹಳಷ್ಟು ಮೈಮೇಲೆ ಹಾಲು ಮೊಸರು ಬಿದ್ದರೇ ಮನೆಯಲ್ಲಿ ಸ್ನೇಹ ಧಾನ್ಯಗಳ ಅಭಿವೃದ್ಧಿ, ಹೂ ಬಿದ್ದರೆ ಅದು ಕಲ್ಯಾಣಕಾರಿ, ಹಣ ಸಿಕ್ಕರೆ ಧನ ಸಮೃದ್ಧಿ ಹೀಗೆಲ್ಲ ತಿಳಿದುಕೊಳ್ಳುವುದುಂಟು ಅಲ್ಲದೆ ಮೊಸರು ಗಡಿಗೆಯ ಒಡೆದ ಚೂರುಗಳನ್ನೂ ಹೆಕ್ಕಿ ಮನೆಯಲ್ಲಿ ಮಜ್ಜಿಗೆ ಬೆಣ್ಣೆ ತೆಗೆಯುವ ಸ್ಥಳದಲ್ಲಿ, ದಿನಗಳ ಕೊಟ್ಟಿಗೆಯಲ್ಲಿ ಹೂತಿಡುತ್ತಾರೆ, ಹೈನು ಹೆಚ್ಚಾಗುವಿಕೆ, ಜಾನುವಾರುಗಳ ರೋಗ ರುಜಿನಾದಿಗಳಿಂದ ಸಂರಕ್ಷಣೆ ಇದೆಲ್ಲವೂ ಅವರವರ ನಂಬಿಕೆಯ ವಿಷಯ.

ಗೋವಿಂದ ಆಲಾ ರೇ ಆಲಾ....ಗೋಪಾಳಕಾಲಾ ಗೋಡಝಾಲಾ, ಗೋಪಾಲಾನೀ ಗೋಡಕೇಲಾ....


No comments:

Post a Comment