ದೇವಕಿಯ ಹಣೆ ಬರಹ ಯಾವ ಲೇಖನಿಯಲ್ಲಿ
ಬರೆದೆಯೋ ಪರಬೊಮ್ಮ ಯಾವ ಚಿತ್ತದಲಿ..
ಜೀವನದ ಹಾರದಲಿ ದುಃಖದಮಣಿಗಳೇ…
ಸುಖದ ಸುಳಿವೇ.. ಇಲ್ಲ ಭಾವವೃತ್ತದಲಿ…
ಮುಂದೆ ಆಗುವುದನ್ನು ಮುಂಚೆಯೇ ಘೋಷಿಸುವ
ಅನಗತ್ಯದಾನಂದ ಏಕೆ ಪ್ರಭುವೇ ?..
ಕೇಳದೆಯೆ ಜಾತಕವ ಹೇಳುವ ಪರಿಯೇಕೆ…
ಬಿರುಕು ಬಿತ್ತುವುದೇಕೆ ಪುಷ್ಕರಜನೇ ?
ಅಣ್ಣನನು ಕೊಲ್ಲುವ ಸುತನ ಬಲಿ ಸಿಂಧುವೇ?
ಸುತರ ಕೊಲ್ಲುತಲಿರುವ ಅಣ್ಣನ ಬಲಿಯೇ ?...
ಏತಕೀ ಆಯ್ಕೆಗಳು ದೇವಕಿಯ ಫಾಲದಲಿ...
ಪರಪೀಡೆ ಸುಖವಲ್ಲ ವೇದನಿಧಿಯೇ..
ತಾಯಿಯಾಗುವ ನಲಿವ ಅನುಭವದ ಮರುಚಣವೇ
ಶಿಶುಹನನದಾ ಅಳಲು ಮನವ ತುಂಬಿ...
ರವಿಯು ಮುಳುಗಲೇ ಇಲ್ಲ ದೇವಕಿಯ ಕಂಬನಿಯ....
ನೋಡದೆಯೇ ಪ್ರತ್ಯಾಹ ಸರ್ವವಿದನೇ...
ಮುಳುಗುವ ಮನುಜನಿಗೆ ತೃಣಕಾಷ್ಠದಾಧಾರ
ದೇವಕಿಗೆ ಆಧಾರ ಬ್ರಹ್ಮ ವಾಣಿ...
ಹರಿಗೆ ಜನ್ಮವನೀವ ಭಾಗ್ಯಕೇ ಬದುಕಿಹಳು...
ಸಂಪ್ರಜ್ಞಳಾಗಿಹಳು ಜಗತಪಿತನೇ...
- ಜಾನಕಿರಾಮ
ಸೀತಾರಾಮ ಕಟ್ಟಿ
No comments:
Post a Comment