Saturday, April 11, 2026

Uddhava Says. ಉದ್ಧವೋವಾಚ

 ಉದ್ಧವೋವಾಚ



ನಿನ್ನ ಕೊನೆಯುಸಿರಿನಲಿ ಅಂತ್ಯವಾಯಿತು ಯುಗವು 
ಭಾಲಕಾ ತೀರ್ಥದಲಿ ಪಿಪ್ಪಲದ ನೆರಳಿನಲಿ 
ಯಾರು ಅರಿತರು ನಿನ್ನ ಇಡಿಯಾಗಿ ಮೋಹನನೆ 
ಅಲ್ಪ ಅರಿತವರೆಣಿಕೆ ಕೂಡ ಬೆರಳಿನಲಿ 

ಗರ್ಭಚೀಲದಿ ಧರಿಸಿ ನವಮಾಸ ಸಲುಹಿರುವ 
ದೇವಕಿಮಾತೆಗೆ ಅರಿವಾಯಿತೆ 
ತುಂಟತನವನು ಸಹಿಸಿ ನವನೀತ ಉಣಿಸಿದ 
ಆ ಗೋಪಮಾತೆಗೆ ಅರಿವಾಯಿತೆ 
ಯಮುನೆಯನು ದಾಟಿಸುತ ಸುತನನ್ನು ರಕ್ಷಿಸಿದ 
ತಂದೆ ವಸುದೇವನಿಗೆ ಅರಿವಾಯಿತೆ 
ಬಾಲಲೀಲೆಗೆ ಶುದ್ಧ ವೇದಿಕೆಯ ನೀಡಿರುವ 
ಗೋಕುಲದ ಭೂಮಾತೆಗರಿವಾಯಿತೆ   ೧

ಅಗ್ರಜನ ರೂಪದಲಿ ಸತತ ಜೊತೆಯಲೆ ಇದ್ದ ಬಲಭದ್ರದೇವನಿಗೆ ಅರಿವಾಯಿತೆ 
ನಿನ್ನಿಂದ ಹತನಾಗಿ ಸಾಯುಜ್ಯ ಸೇರಿರುವ 
ಆ ಕಂಸರಾಜನಿಗೆ ಅರಿವಾಯಿತೆ 
ಯಾರ ಸಾನಿಧ್ಯದಲಿ ನೀ ಜಗವ ಮರೆತೆಯೋ 
ಆ ಧೌಮ್ಯ-ಗರ್ಗರಿಗೆ ಅರಿವಾಯಿತೆ 
ಅಂಕಪಾದಾಶ್ರಮದಿ ಜ್ಞಾನದಾನವೆ ಗೈದ 
ಸಾಂದೀಪನೀಯತಿಗೆ ಅರಿವಾಯಿತೆ   ೨

ನಿನ್ನತನವನೆ ಹೊದ್ದು ತನ್ನತನವನೆ ಮರೆತ 
ಸತ್ಯಭಾಮಾಮಣಿಗೆ ಅರಿವಾಯಿತೆ 
ತಂದೆಯಾಗಿಹ ನಿನ್ನ ಹೆಗಲೇರಿ ಆಡಿರುವ 
ಚಾರುಮತಿ ಸಾಂಬರಿಗೆ ಅರಿವಾಯಿತೆ 
ಜಗದಾದಿ ಜ್ಞಾನವನು ನಿನ್ನಿಂದಲೇ ಪಡೆದ 
ಸವ್ಯಸಾಚಿಗೆ ನಿಜದ ಅರಿವಾಯಿತೆ 
ರಾಜನೀತಿಗೆ ಒಂದು ಪರ್ಯಾಯ ನೀತಿಯನು 
ನೀಡಿದ ವಿದುರನಿಗೆ ಅರಿವಾಯಿತೆ   ೩

ದೇಹ ಬಂಧನದಿಂದ ಮುಕ್ತನಾಗಿಹೆ ಇಂದು 
ಕಾಲ ಬಂಧನ ಕೂಡ ಸಡಿಲಾಗಿದೆ 
ನೀನು ಶಾಶ್ವತನೆನಲು ಏತಕೀ ದೇಹಾಂತ್ಯ 
ಮನವಿಂದು ಗೊಂದಲದ ಮಡಿಲಾಗಿದೆ 
ನಾ ನಿನ್ನನರಿತೆನೋ ಅರಿಯದೇ ಹೋದೆನೋ 
ಉಳಿಯುವ ಪ್ರಶ್ನೆಯದು ಅಳಿಯದಾಗಿ 
ನಾನು ಉದ್ಧವ ಇಲ್ಲಿ ನಿಂತಿಹೆನು ವನದಲ್ಲಿ 
ಮುಂದೇನು ಎಂಬುದೇ ತಿಳಿಯದಾಗಿ   ೪

ಗೋವಿಂದ ಉವಾಚ
ಮುರಲಿಯ ಗಾನವದು ಮನಮಿಂದು ಸೇವಿಪರ 
ಪಶುಧನದ ವೃಂದಕದು ಅರಿವಾಯಿತೆ
ಮಾಧವನ ವಿರಹದಲಿ ಧೈರ್ಯ ಗುಂದಿದ ಆs
ಗೋಕುಲದ ಗಣರಿಂಗೆ ಅರಿವಾಯಿತೆ
ಜೀವವಿಟ್ಟಿಹ ಪುರಕೆ ಸಾಂತವನ ನೀ ಹೇಳು
ವಿರಹದಿಂ ಬೇಯದೆ ಇರಲು ಹೇಳು 
ಉದ್ಧವನೆ ನೀ ಹೋಗಿ ಪ್ರೀಯಜನರೊಳು ಬೆರೆತು
ಭವದ ಬಂಧನದಿಂದ ಹೊರಬರಲು ಹೇಳು. ೫

ಜಾನಕಿರಾಮ

- ( ಸೀತಾರಾಮ ಕಟ್ಟಿ )

No comments:

Post a Comment