Sunday, May 10, 2026

Devil's claw. ದೆವ್ವದ ಅರಳಿ ಗಿಡ

     Devil's claw. ದೆವ್ವದ ಅರಳಿ ಗಿಡ

       ಊರು ಸ್ಮಶಾನದ ಪಕ್ಕದಲ್ಲೇ ಹರಿಯುವ ಬೋರನದಿಯ ದಡದಲ್ಲಿ, ಒಂದು ಹಳೆಯ ಅಶ್ವತ್ಥ ಮರವಿತ್ತು, ಅದನ್ನು ಗ್ರಾಮಸ್ಥರು "ದೆವ್ವದ ಅರಳಿ ಗಿಡ" ಎಂದೆ ಕರೆಯುತ್ತಿದ್ದರು. 

ಹಗಲಿನಲ್ಲಿ, ಹಸುಗಳು ಜಾನುವಾರುಗಳು ಅದರ ಕೆಳಗೆ ಕುಳಿತುಕೊಳ್ಳುತ್ತಿದ್ದವು, ತಂಪಾದ ನೆರಳಿನಲ್ಲಿ ಮಕ್ಕಳು ಆಟವಾಡುತ್ತಿದ್ದವು, ಗಿಡದ ಕೆಳಗೆ ಅಲ್ಲಲ್ಲಿ ಬಿದ್ದು ಹೋಗಿದ್ದ ಕಟ್ಟೆಯ ಮೇಲೆ ದಾರಿ ಹೋಕರು ಕುಳಿತು ವಿಶ್ರಾಂತಿ ಪಡೆಯುತ್ತಿದ್ದುದು ಉಂಟು. ಆದರೆ ಸಂಜೆಯಾಗುತ್ತಿದ್ದಂತೆ ಯಾರೂ ಅಲ್ಲಿಗೆ ಹೋಗುತ್ತಿರಲಿಲ್ಲ. ರಾತ್ರಿಯಲ್ಲಿ ಆ ಗಿಡದಿಂದ ಯಾರೋ ಅಳುತ್ತಿರುವಂತೆ ಶಬ್ದ ಕೇಳಬರುತ್ತಿತ್ತು ಎಂದು ಜನ ಹೇಳುತ್ತಿದ್ದರು.

ಆ ಅಶ್ವತ್ಥ ಮರದಿಂದ ದಾರಿಯ ಈಚೆಯ ಹೊಲದಲ್ಲಿ ಹತ್ತು ಹೆಜ್ಜೆ ದೂರದಲ್ಲಿ, ಶಂಭುಲಿಂಗಯ್ಯ ಒಂದು ಹಳೆಯದಾದ ಗುಡಿಸಲಿನಲ್ಲಿ ವಾಸಿಸುತ್ತಿದ್ದನು. ಅವನಿಗೆ ಅರವತ್ತು ವರ್ಷ ದಾಟಿತ್ತು, ಅವನ ಹೆಂಡತಿ ಮೂರು ವರ್ಷಗಳ ಹಿಂದೆ ಎಲ್ಲೋ ಹೊರಟು ಹೋಗಿದ್ದಳು, ಮತ್ತು ಅವನ ಮಗ ನಗರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ಶಂಭುಲಿಂಗಯ್ಯಗೆ ತಾಮ್ರದ ಪಾತ್ರೆ, ಕಾವೀಪಂಚೆ ರುದ್ರಾಕ್ಷಿ ಜಪಮಾಲೆ ಮತ್ತು ದೇವನಲ್ಲಿ ಅಚಲ ನಂಬಿಕೆ ಮಾತ್ರ ಇತ್ತು.

ಪ್ರತಿದಿನ ಬೆಳಿಗ್ಗೆ ಚುಮು ಚುಮು ನಸುಕಿನಲ್ಲಿ ಬೋರ ನದಿಯಲ್ಲಿ ಜಳಕ ಮಾಡಿ, ಪಾತ್ರೆಯಲ್ಲಿ ನೀರನ್ನು ತುಂಬಿಸಿ, ಅಶ್ವತ್ಥ ಮರದ ಕೆಳಗೆ ಇರುವ ಶಿಲೆಯ ಹಾವಿನಿಂದ ಸುತ್ತಿಕೊಂಡಿರುವ ಚಿಕ್ಕ ಶಿವಲಿಂಗದ ಮೇಲೆ ಸುರಿಯುತ್ತಿದ್ದನು ಮತ್ತು ನಂತರ, ಅಲ್ಲಿಯೇ ಕುಳಿತು ನಿಧಾನವಾಗಿ ನೂರೆಂಟು ಬಾರಿ " ಓಂ ನಮೋ ರುದ್ರಾಯ "ಎಂದು ಜಪಿಸುತ್ತಿದ್ದನು—

ಜೋರಾದ ಧ್ವನಿ ಇಲ್ಲ, ಪ್ರದರ್ಶನವಿಲ್ಲ. ಜಪಮಾಲೆ ಮಾತ್ರ ತಿರುಗುತ್ತಲೇ ಇತ್ತು, ಅವನ ತುಟಿಗಳು ಚಲಿಸುತ್ತಿದ್ದವು. "ಅಯ್ಯನೋರೇ, ನೀವು ಈ ಅರಳಿ ಗಿಡದ ಕೆಳಗೆ ಜಪಿಸಿದರೆ, ದೆವ್ವಗಳು ನಿಮಗೆ ಬಡಿದುಕೊಳ್ಳುತ್ತವೆ " ಎಂದು ಗ್ರಾಮಸ್ಥರು ಚೇಷ್ಟೆ ಮಾಡುತ್ತಾ ನಗುತ್ತಿದ್ದರು. ಶಂಭು ಸ್ವಾಮಿಗಳೂ ನಗುತ್ತಿದ್ದರು, "ಭೂತಗಳಿಗೂ ಮುಕ್ತಿ ಪಡೆಯಲು ರುದ್ರ ಭೂಮಿಯ ಶಿವ ಬೇಕೆ ಬೇಕು" ಎಂದು ಹೇಳುತ್ತಿದ್ದರು.

ಆ ಅರಳಿಗಿಡದೊಳಗೆ ನಿಜವಾಗಿಯೂ ಯಾರೋ ದೆವ್ವವಾಗಿ ಇದ್ದರಂತೆ, ಆದರೆ ಇಲ್ಲಿಯ ವರೆಗೂ ಯಾರಿಗೂ ಪೀಡಿಸುತ್ತಿರಲಿಲ್ಲ, ಕಾಣಿಸಿಯೂ ಇಲ್ಲ, ಭಯ ಮಾತ್ರ ಇತ್ತು 

ವರ್ಷಗಳ ಹಿಂದೆ, ಗ್ರಾಮಪರಿಸರದಲ್ಲಿ ಬರಗಾಲ ಬಿದ್ದಾಗ  ಧನಿಕ ಸಾಲದಾತ ಲೆಕ್ಕಪತ್ರಗಾರ ಸಿದ್ರಾಮಪ್ಪ ಶೆಟ್ಟಿ, ತನ್ನ ಧಾನ್ಯದ ಉಗ್ರಾಣದ ಕೀಲಿಗಳನ್ನು ಇಟ್ಟುಕೊಂಡಿದ್ದನು. ಊರಜನ ಎಷ್ಟು ಕೇಳಿದರೂ ಏನೂ ಕೊಡದೆ  "ಬೀಗ ತೆರೆಯಬೇಡಿ, ಇನ್ನೂ ಬೆಲೆಗಳು ಏರಲಿ" ಎಂದು ತನ್ನ ರಕ್ಷಕರಿಗೆ ಹೇಳಿದನು. ಸಿಟ್ಟಿಗೆದ್ದ ಪ್ರಕ್ಷುಬ್ಧ ಜನ ಸಮೂಹದ ಮುಖಂಡ ಕಲ್ಯಾಣಪ್ಪ ಸರಿ ರಾತ್ರಿಯಲ್ಲಿ ಉಗ್ರಾಣದ ಬಾಗಿಲು ಮುರಿದು ಬಡವರಿಗೆ ಚೀಲ ಚೀಲ ಧಾನ್ಯಗಳನ್ನು ರಹಸ್ಯವಾಗಿ ಹಂಚಿದನು. ಅವನನ್ನು ಬೆಳಿಗ್ಗೆ ಹಿಡಿದು, ಹೊಡೆದು, ಅದೇ ಅರಳಿ ಮರದ ಕೊಂಬೆಗೆ ನೇಣು ಹಾಕಲಾಯಿತು. ಯಾವುದೇ ಅಂತ್ಯಕ್ರಿಯೆಯ ವಿಧಿಗಳನ್ನು ನಡೆಸಲಾಗಲಿಲ್ಲ, ಊರು ಜನರ ಸಲುವಾಗಿ ಮಾಡಿದ ಅವನ ಕೆಲಸದ ಬಗ್ಗೆ ಕಾಳಜಿ ಕೃತಜ್ಞತೆ ಯಾವುದೂ ಯಾರಲ್ಲೂ ಕಾಣಲಿಲ್ಲ. ಸಿಟ್ಟು, ಹಸಿವು, ಅವಮಾನ ನೋವು ಮತ್ತು ಈಡೇರದ ಆಸೆಗಳಿಂದಾಗಿ, ಅವನು ಪ್ರೇತ ದೆವ್ವನಾಗಿದ್ದನಂತೆ. ಕೇವಲ ತಣ್ಣನೆಯ ಗಾಳಿಯಲ್ಲಿ ಗಾಳಿಯಾಗೇ ಉಳಿದನು ಎಷ್ಟೋ ವರ್ಷಗಳ ಕಾಲ, ಅವನು ಜನರನ್ನು ಹೆದರಿಸಲಿಲ್ಲ, ಅವನ ಅಳು ಮಾತ್ರ ಕೇಳಿಸುತ್ತಿತ್ತು. 

ಒಂದು ದಿನ, ಶಂಭುಲಿಂಗಯ್ಯ"ಓಂ ನಮೋ ರುದ್ರಾಯ " ಎಂದು ಜಪಿಸಿದಾಗ, ಪ್ರೇತ ರೂಪದ ಕಲ್ಯಾಣಪ್ಪನಿಗೆ ಯಾರೋ ತನ್ನ ಕಳೇಬರದ ಮೇಲೆ ನೀರು ಚಿಮುಕಿಸಿದಂತೆ ಭಾಸವಾಯಿತು. ಪ್ರತಿ ಜಪದೊಂದಿಗೆ, ಅವನೊಳಗಿನ ಉರಿಯುವ ಸಂವೇದನೆ ಸ್ವಲ್ಪ ಸ್ವಲ್ಪ ಕಡಿಮೆಯಾಗುತ್ತಿತ್ತು. ಅವನು ಪ್ರತಿದಿನ ನಸುಕಿನಲ್ಲಿ ಅಶ್ವತ್ಥ ಮರದ ದಪ್ಪನೆಯ ಕೊಂಬೆಯ ಮೇಲೆ ಕುಳಿತು ಕೇಳುತ್ತಿದ್ದನು.

ಮೂರು ವರ್ಷಗಳು ಕಳೆದವು. ಶಂಭುಲಿಂಗನ ದಿನಚರಿ ಬದಲಾಗಲಿಲ್ಲ. ಅದು ಬಿರುಗಾಳಿಯಾಗಿರಲಿ  ಬಿಸಿಲಿರಲಿ, ಚಳಿಯಾಗಿರಲಿ ಮಳೆಇರಲಿ ಅಥವಾ ಆರೋಗ್ಯ ತಪ್ಪಿರಲಿ ಜ್ವರವಾಗಿರಲಿ, ಅವನು ತನ್ನ ಪಾತ್ರೆಯನ್ನು ತಂದು, ಮರಕ್ಕೆ ನೀರು ಅರ್ಪಿಸಿ, ಜಪಿಸುತ್ತಲೇ ಇದ್ದನು.

ಶ್ರಾವಣ ಮಾಸದ ಒಂದು ಕತ್ತಲ ರಾತ್ರಿ. ಸಿಡಿಲು ಬಡಿದು, ಅರಳಿಗಿಡದ ಆ ಕೊಂಬೆ ಮುರಿದು ಶಿವಲಿಂಗದ ಮೇಲೆ ಬಿದ್ದಿತ್ತು. ಶಂಭುವು ಈ ಅಘಟಿತ ನೋಡಿ ಓಡಿ ಬಂದು, ಕೊಂಬೆಯನ್ನು ತೆಗೆದು ಲಿಂಗವನ್ನು ಸ್ವಚ್ಛಗೊಳಿಸಿದನು. ಒಂದು ಬಿಂದಿಗೆ ನೀರು ಹಾಕಿ  ಓಂ ನಮೋ ರುದ್ರಾಯ ಎಂದು ಜಪ ಪ್ರಾರಂಭಿಸಿದ ಕೂಡಲೆ, ಮೊದಲ ಬಾರಿಗೆ, ಪ್ರೇತ ರೂಪದ ಕಲ್ಯಾಣಪ್ಪ ಸ್ಪಷ್ಟವಾದ ಧ್ವನಿಯನ್ನು ಹೇಳಿದನು, ಗಾಳಿಯಲ್ಲಿ ಗಿಡದ ಕೊಂಬೆ ಕೊಂಬೆಗಳಿಂದ —

"ಅಯ್ಯನೋರೇ ಸುಮಾರು ಒಂದು ತಪವಾಗಿರಬಹುದು, ತಮ್ಮ ಕೈಯಿಂದ ನೀರು, ಮಂತ್ರ ಪಠಣ ಕೇಳಿ ಕೇಳಿ ಕಿವಿಗಳು ತಣ್ಣಗಾಗಿ  ನನ್ನ ಸ್ವರೂಪ ಈ ಅಶ್ವತ್ಥ ಮರದಿಂದ ಏಕೆ ಪ್ರೇತ ರೂಪದಿಂದಲೇ ಮುಕ್ತಿ ಹೊಂದುತ್ತೇನೆ." ತಮಗೆ ಕೃತಜ್ಞತೆ ಸಲ್ಲಿಸಿ ಸಾಷ್ಟಾಂಗ ಪ್ರಣಾಮಗಳ ಅರ್ಪಿಸುವೆ.

ಶಂಭುಲಿಂಗ ಗಾಬರಿಯಾಗಲಿಲ್ಲ. ಅವನು ಕಣ್ಣು ಮುಚ್ಚಿ, ತನ್ನ ಜಪಮಾಲೆಯನ್ನು ಹಿಡಿದು, "ಏನೇ ಬೇಕಾದರೂ ನೀನು ಶಿವನ ಹೆಸರನ್ನು ಜಪಿಸುತ್ತಾ ಇರು" ಎಂದು ಹೇಳಿದನು. ಗಾಳಿಯಲ್ಲಿಯ ಚಲನೆಯಿಂದ ಗಿಡದ ಎಲೆಗಳು ಅಲುಗಾಡುತ್ತಿದ್ದವು.  ಶಂಭು ಉಳಿದ ನೀರನ್ನು ಅಶ್ವತ್ಥ ಮರದ ಬುಡದಲ್ಲಿ ಪಾತ್ರೆಯಿಂದ ಲಿಂಗದ ಮೇಲೆ ಸುರಿದು, "ಹಾಗಾದರೆ ಕೇಳು. ನಾನು ನಿಮಗಾಗಿ ಜಪಿಸುತ್ತೇನೆ" ಕಾಳಜೀ ಬೇಡ ಎಂದು ಹೇಳಿದನು.

ಆ ದಿನದಿಂದ, ಶಂಭುಲಿಂಗ ತನ್ನ ದಿನಚರಿಯನ್ನು ಬದಲಾಯಿಸಿದನು. ಅವನು ಬೆಳಿಗ್ಗೆ 108 ಬಾರಿ, ಸಂಜೆ 108 ಬಾರಿ, ಅದೇ ಅರಳಿ ಗಿಡದ ಕೆಳಗೆ ಕುಳಿತು ಜಪಿಸಲು ಪ್ರಾರಂಭಿಸಿದನು. ಪ್ರತಿ ಬಾರಿಯೂ, "ಓ ರುದ್ರದೇವನೇ, ನನ್ನ ಜಪದಲ್ಲಿ ಏನಾದರೂ ಪುಣ್ಯವಿದ್ದರೆ, ಆ ಪುಣ್ಯ ಗಿಡದಲ್ಲಿಯ ಅಪರಿಚಿತ ಪ್ರೇತ ರೂಪದ ಜೀವಿಗೆ ದಯಪಾಲಿಸಲಿ" ಎಂದು ತೀರ್ಮಾನಿಸಿ. ಸಂಕಲ್ಪಿಸಿದನು. ಕಲ್ಯಾಣಪ್ಪನ ಪ್ರೇತ ನಿಧಾನವಾಗಿ ಬದಲಾಗುತ್ತಿತ್ತು. ಅರಳೀಕಟ್ಟಿ ಗಿಡದ ಎಲೆಗಳ ನಿಧಾನದ ಸಳ ಸಳ ಶಬ್ದವು ಅವನನ್ನು ಮುಕ್ತಿ ವಾಗುವ ತೆರ ಪ್ರೇರೇಪಿಸುತ್ತಿದ್ದವು. 

ಗ್ರಾಮಸ್ಥರು ಈಗ ನಿಜವಾಗಿಯೂ ಭಯಭೀತರಾಗಿದ್ದರು. "ಲಿಂಗಯ್ಯ ಬಾಬಾ ಹುಚ್ಚನಾಗಿದ್ದಾನೆ, ಅವನು ದೆವ್ವಗಳೊಂದಿಗೆ ಮಾತನಾಡುತ್ತಾನೆ." ಎಂದು ಹೆದರಿ ನಗರದಿಂದ ಮಗನನ್ನು ಕರೆ ಕಳುಹಿಸಿದರು , ಆದರೆ ಶಂಭುಲಿಂಗಯ್ಯ ಹೋಗಲಿಲ್ಲ.

ಆ ವರ್ಷದ, ಮಹಾಶಿವರಾತ್ರಿಯಂದು ಹಳ್ಳಿಯಲ್ಲಿ ಜಾಗರಣೆ ಇತ್ತು, ಆದರೆ ಶಂಭುಲಿಂಗ ಹೋಗಲಿಲ್ಲ. ಅವನು ಒಬ್ಬಂಟಿಯಾಗಿ ಅಶ್ವತ್ಥ ಮರದ ಕೆಳಗೆ ಕುಳಿತನು. ಅವನು ರಾತ್ರಿಯಿಡೀ ತನ್ನ ಜಪಮಾಲೆಯನ್ನು ಬಿಡಲಿಲ್ಲ. ಪೂರ್ವ ಜಾವದ ಸುಮಾರಿಗೆ, ಅವನ ಧ್ವನಿಯ ಜೊತೆ ಇನ್ನೊಂದು ದನಿಯೂ ಕೂಡಿ ಬರುತ್ತಿತ್ತು ಆಗ  ಒಂದು ಮಸುಕಾದ ಬಿಳೀ ಆಕೃತಿ ಅರಳಿ ಗಿಡದಿಂದ ಕೆಳಗಿಳಿಯಿತು.

ಕೃಶವಾದ ಶರೀರ, ಕೆಳಮುಖವಾದ ಕ್ಷೀಣ ಕಣ್ಣುಗಳು, ನೆಲದಿಂದ ಸುಮಾರು ಅರ್ಧ ಮೊಳ ಎತ್ತರದಲ್ಲಿ ತಿರುಗಿದಪಾದಗಳು. ಪ್ರೇತ ರೂಪದ ಕಲ್ಯಾಣಪ್ಪ ಸಶರೀರಿಯಾಗಿ ಕೈ ಜೋಡಿಸುವ ಪ್ರಯತ್ನದಲ್ಲಿದ್ದ ಆದರೆ ಅವನ ಕೈಗಳು ನಡುಗುತ್ತಿದ್ದವು. ಶಂಭುಲಿಂಗಯ್ಯ ಜಪಮಾಲೆಯನ್ನು ನಿಲ್ಲಿಸಲಿಲ್ಲ, ಶಾಂತನಾಗಿ "ಕುಳಿತುಕೊ" ಎಂದು ಕಣ್ಣುಗಳಿಂದ ಸನ್ನೆ ಮಾಡಿದನು. ಕಲ್ಯಾಣಪ್ಪನ ಜೀವ ಪಿಸುಗುಟ್ಟಿತು, "ಎಷ್ಟೋ ವರ್ಷಗಳಿಂದ ಯಾರೂ ನನ್ನ ಸಲುವಾಗಿ ಜಪಿಸಿಲ್ಲ. ಇಂದು, ನಿವು ನನ್ನ ಹೊರೆ ಹಗುರಗೊಳಿಸಿದ್ದೀರಿ."

ಶಂಭುಲಿಂಗಯ್ಯ ಪಾತ್ರೆಯನ್ನು ಕೊಟ್ಟು "ನೀರು ತೆಗೆದುಕೊಂಡು ಬಾ , ನಂತರ ನಾಮವನ್ನು ಜಪಿಸು". ಆದರೇ ಕಲ್ಯಾಣಪ್ಪ ನೀರನ್ನು ಮುಟ್ಟಲಿಲ್ಲ, ಆದರೆ ಶಂಭುಲಿಂಗ ಮತ್ತೆ "ಓಂ ನಮೋ ರುದ್ರಾಯ " ಎಂದು ಹೇಳುತ್ತಿದ್ದಂತೆ, ಕಲ್ಯಾಣಪ್ಪನ ತುಟಿಗಳು ಚಲಿಸಿದವು. ಮೊದಲ ಬಾರಿಗೆ, ಗೊಗ್ಗರು ಧ್ವನಿಯಲ್ಲಿ, ಅವನು ಪುನರಾವರ್ತಿಸಿದನು - "ಓಂ ನಮೋ ರುದ್ರಾಯ"

ಆ ಕ್ಷಣದಲ್ಲಿ, ಅಶ್ವತ್ಥ ಎಲೆಗಳು ನಿಂತವು, ಗಾಳಿ ನಿಂತುಹೋಯಿತು ಮಸುಕಾದ ನೀಲಿ ಜ್ವಾಲೆಯು ಕಲ್ಯಾಣಪ್ಪನ ಸುತ್ತಲೂ ಸುತ್ತುತ್ತಾ ಮೇಲಕ್ಕೆ ಏರಿತು. ಕಿರುಚಾಟವಿಲ್ಲ, ಸ್ಫೋಟವಿಲ್ಲ. ಅಳಲು ಇಲ್ಲ ಎಷ್ಟೋ ವರ್ಷಗಳಷ್ಟು ಹಳೆಯದಾದ  ಅಶ್ವತ್ಥ ಮರದ ಕೊಂಬೆ ಮುರಿದು ಬಿದ್ದಿತು, ಮತ್ತು ಆಗ ಒಂದು ಅಶ್ವತ್ಥ ಪತ್ರ ತನ್ನಷ್ಟಕ್ಕೆ ತಾನೇ ಕೆಳಗಿನ ಚಿಕ್ಕ ಶಿವಲಿಂಗದ ಮೇಲೆ ಬಿದ್ದಿತು.

ಬೆಳಿಗ್ಗೆ, ಗ್ರಾಮಸ್ಥರು ಶಂಭುಲಿಂಗನನ್ನು ಅಶ್ವತ್ಥ ಮರದ ಕೆಳಗೆ ಮಲಗಿರುವುದನ್ನು ಕಂಡುಕೊಂಡರು, ಅವನ ಕೈಯಲ್ಲಿ ಜಪಮಾಲೆ ಇತ್ತು. ತುಂಬಿದ ಪಾತ್ರೆಯು ಗಿಡದ ಬುಡದಲ್ಲಿ ಇತ್ತು  ಶಂಭುಲಿಂಗಯ್ಯನೂ ಸಹ ಶಿವ ಲಿಂಗದಲ್ಲಿ ಲೀನನಾಗಿದ್ದ. 

ಅಂದಿನಿಂದ ಆ ಮರ ದೆವ್ವಗಳ ಅಸ್ತಿತ್ವದಿಂದ ಭಯದಿಂದ ನಿರಾತಂಕವಾಯಿತು ಆದರೆ ಈಗಲೂ ಜನ "ದೆವ್ವದ ಅರಳಿ ಗಿಡ "ಎಂದೆ ಹೇಳುತ್ತಾರೆ 

ಪರಶಿವನ ಹೆಸರು ಮುಕ್ತಿಯನ್ನು ನೀಡುವುದಲ್ಲದೆ, ಕೇಳುವವನನ್ನು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅದನ್ನು ಜಪಿಸುವವನನ್ನು ಸಹ ಮುಕ್ತಗೊಳಿಸುತ್ತದೆ 

                                                  ..... ಅಜ್ಜ ಹೇಳಿದ  ಕಥೆ 

No comments:

Post a Comment