ಶ್ರೀ ಶನೈಶ್ಚರ ಚರಿತಂ ೧ /೪೧ ರಿಂದ ೬೦
|| श्री शनैश्चर देवताभ्यो नमः ||
ಶ್ರೀ ಶನೈಶ್ಚರ ಚರಿತಂ
( ಕನ್ನಡ ಭಾಮಿನಿ ಮತ್ತು ವಾರ್ಧಿಕ ತೆರ ತ್ರಿಪದಿಗಳಲ್ಲಿ ಒಟ್ಟು ಐದು ಸಂಧಿಗಳು )
( ಶ್ರೀ ಶನೈಶ್ಚರ ಪ್ರತಿಮಾ ಪ್ರಾನಪ್ರತಿಷ್ಠಾಪನೆ, ಪದ್ಮ ಪುರಾಣ ಸ್ಥಿತ ಶ್ರೀ ಶನೈಶ್ಚರ ಕವಚ, ಶ್ರೀ ಶನೈಶ್ಚರೋರ್ನಾಮ ಅಷ್ಟೋತ್ತರ ಶತಂ
ಜಪಃ ,ಶ್ರೀ ದಶರಥ ಪ್ರೋಕ್ತ ಶ್ರೀ ಶನೈಶ್ಚರಸ್ತೋತ್ರಮ್ ,
ಮಹರ್ಷಿ ವೇದವ್ಯಾಸ ವಿರಚಿತ
ಶ್ರೀ ಶನೈಶ್ಚರ ಚಕ್ರಂ ಸಹಿತ )
ಶ್ರೀ ಸೀತಾರಾಮಾಚಾರ್ಯ ಸುತ ತುಳಸಾತ್ಮಜ ಶ್ರೀಧರಾಚಾರ್ಯ ವಿರಚಿತ
ಪ್ರಥಮ ಸಂಧಿ ( ೪೧ ರಿಂದ ೬೦ )
ತವರಿನಲಿ ಹಿರಿ ಹೆಣ್ಣು ಇರಲದು | ಭವಿಸೆ ದೋಷವು ತಂದೆ ತಾಯಿಗೆ | ಯಾವ ತೀರ್ಥವು
ಇಲ್ಲ ಶಕ್ಯವು ಪಾವನಾಗಲ್ಕೆ || ೪೧ ||
ಬೆಳೆದು ನಿಂತಿಹ ಕುದುರೆ ನೀನಿಹೆ | ಹಳಿದು ಪತಿಯನು ತವರು ಸೇರಿದೆ | ಕೀಳ ಕರ್ಮಕೆ
ನೀನೆ ಹಯ ರೂಪದಲಿ ಚರಿಸೆಂದ || ೪೨ ||
ತಂದೆ ದೂಡಿದ ಹಳಿದ ಶಾಪಕೆ |
ಬೆಂದುಕೇಳೆ ವಿಶಾಪ ಸಂಜ್ಞೆಯು | ಎಂದುರವಿ ನೆನಪಿನಲಿ ಬರುವನೋ ಹಯದರೂಪದಲಿ || ೪೩ ||
ಬಂದು ಅಂತಃ ಕರಣದಲಿ ತಾ - | ಚಂದ
ಚಕ್ಕಂದವನು ಮಾಡಲು | ಬಿಂದು ಮೂಗಿನ ಮಕ್ಕಳಾದೊಡೆ ಪಾವನೆಯು ನೀನು || ೪೪ ||
ವಿಧವಿಧದಿ ತಿಳಿತಿಳಿಸಿ ದಕ್ಷನು
| ಒದವಿದನು ನುಡಿನೀತಿ ಮಾತನು | ಹೃದಯದುಃಖವ ತಾಳದೆಯೇ ಅಳುತಳುತ ನಡೆದಿಹಳು || ೪೫ ||
ತಂದೆ ತಾಯಿ ಗಳಾಜ್ಞೆ ಪಾಲಿಸಿ | ಸಂದಿಸಲು ಪತಿಪಾದ ಪಾವನ | ಎಂದರಿಯದೆಯೇ
ಪಾಪಗುರಿ ಮಾಡಿದೆನು ನಾನಿಂದು || ೪೬ ||
ಬಿಟ್ಟು ಬಂದವಳೆಂದು ನೆರೆಹೊರೆ | ಕೆಟ್ಟ ದೃಷ್ಟಿಲೆ ನೋಳ್ಪರೆಲ್ಲರು | ಕೊಟ್ಟ
ಪೆಣ್ಣದು ಕುಲದ ಹೊರತಾಗಿರುವುದೆಂಬುವುರು || ೪೭
||
ಪತಿಯ ಮನೆ ಸ್ವಾತಂತ್ರ್ಯ ತಪ್ಪಿಸಿ |
ಹತ ಪರಾಙಮುಖಿ ಪರಾಧೀನತೆ | ಮತಿಹೀನ ವಿಧವೆ ತೆರ ಎನ್ನಯ ಬಾಳು ಬರಿದಾಯ್ತು || ೪೮ ||
ಖಿನ್ನ ಮಾನಸಳಾಗಿ ದೇಹಕೆ | ವಹ್ನಿ ಯುಗ್ಗಲಿ ಉರಿದು ಹೋಗಲಿ | ಇನ್ನು ಜೀವಿಸಲೇನು
ಫಲವು ಹೆಣ್ಣು ಜನ್ಮಕ್ಕೆ || ೪೯ ||
ದಕ್ಷ ನುಪದೇಶವನು ಆಲಿಸಿ | ರಕ್ಷಣೆಯು ಇಲ್ಲೆಂದು ಹೊರಟಳು | ವೀಕ್ಷಿತವು
ಒದಗಿಹುದು ಎಂದೆನುತಳುತ ನಡೆದಿಹಳು || ೫೦ ||
ಡೇಟು ತಪ್ಪಿದ ಹಣ್ಣು ಕೊಳೆವುದು | ಮೇಟಿ ಇಲ್ಲದ ಕರುವು ಕಳೆವುದು | ದಾಟಿ
ಹೊಸಲನು ತುಳಿದು ಹೊರಗಾಗಿರುವ ದುಃಖ ದಲಿ || ೫೧ ||
ಅಡವಿಯೊಳು ಏಕಾಂಗಿ ಬಾಲೆಯು | ನಡೆದು ಸಾಗಲು ಕಾಕ ಕಾಮಿಕ | ಕಡೆಯ ನೋಟಕೆ
ಗುರಿಯುಆಗುವ ವೇಳೆ ಬಂದೊದಗೆ || ೫೨ ||
ಮನೆಗೆ ಪೋದರೆ ಮೋಸ ತಿಳಿವುದು | ದಿನಕರನ ಕೋಪವನೆ ಸಹಿಸೆನು | ಶುನಗ ತಲುಪದು
ಎಲ್ಲಿ ಅಗಸರ ಮನೆಗು ಹಳ್ಳಕ್ಕೂ || ೫೩ ||
ಈ ಪರಿಯೋಳಾಲೋಚಿಸುತಲಾ | ಪಾಪಿ ನಾನೆಂದೆನುತ ಅಡವಿಯ | ರೂಪ ಪಲ್ಲಟ ವಾಗುದೇಸರಿ
ಎಂದು ತಾ ತಿಳಿಯೇ || ೫೪ ||
ಕಳ್ಳಕಾಕರ ಕಾಮಿಕರ ಕೆಂ - | ಗಣ್ಣ ದೃಷ್ಟಿಗೆ ಬೀಳದಾಪರಿ | ಮಾಳ್ಪುದೆಂದೆನುತಿರಲು ಆರ್ಕ ಧ್ಯಾನದೊಳು
ಸತಿಯು || ೫೫ ||
ಕೊನೆಗೆ ಭಯದಲಿ ನಡುಗಿನುಡಿದಳು | ದಿನಕರನೆಖಗ ಭಾನು ಭಾಸ್ಕರ | ಎನಗೆನೀನೆ ಗತಿಯು
ಪತಿಯೆಂದೆನುತೆ ಕೈಮುಗಿದು || ೫೬ ||
ಚೆಲುವೆ ಹಯರೂಪವನು ತಾಳಿತು | ಒಲುಮೆ ತೃಣದೊಳು ಪೂರ್ಣವಾಗಿಯೇ | ಗೆಲುಮೆ ಎನಿಸಿತು
ವೃತೆಗೆ ತಾನಿದು ಹೇಯಹಯವೆನದೇ || ೫೭ ||
ಪೂರ್ವ ಪ್ರಜ್ಞೆಯ ಉಳಿಸಿ ಹಯ ತಾ | ನೋರ್ವಳೆಯೇ ರವಿ ಧ್ಯಾನ ತಪವನು | ತೂರ್ಯದಿಂ
ನಡೆಸಿಹಳು ನಿರಾಹಾರ ನಿಶ್ಚಲದಿ || ೫೮ ||
ರವಿಗೆ ಸಂಶಯ ಬರದೆ ಬಹುವಿಧ | ಸವಿಯ ದಿನಗಳ ಕಳೆಯುತಿರಲಾ | ಸವರ್ಣಿಯನೆ ನಿಜ
ಸಂಜ್ಞೆ ಎಂದರಿದಿಹನು ವಿಷಯದಲಿ || ೫೯ ||
ಗರತಿಯಾಗಿಹ ಛಾಯೆ ವರ್ಣೆಯು | ಸರತಿ ಕಾಯದೆ ಪೂಷ್ಣ ಮೋಹಿಸಿ | ಹೆರಿಗೆಯಾದಳು ಏಳು
ಮಕ್ಕಳ ತಾಯಿ ತಾನಾಗಿ || ೬೦ ||
ಕ್ರಮಶಃ
No comments:
Post a Comment