Friday, November 23, 2018

GONANDAA JALA ( ಗೋನಂದಾ ಜಲ )

                                                                                    ಸಂಗ್ರಹಿತ 
ಮೃತ ಗೋವಿನಿಂದ ಗೋನಂದಾ ಜಲ

ಕೆಚ್ಚಲು ಬತ್ತಿದ ಕೂಡಲೇ ಸಾಕಿದವನಿಗೆ ಹೊರೆಯಾಗಿ ಕಸಾಯಿಖಾನೆಯ ದಾರಿ ಕಾಣುವ ಗೋವನ್ನು ಸಹಜವಾಗಿ ಸಾಯುವವರೆಗೆ ಸಲಹಿದರೆ ಲಕ್ಷಾಂತರ ರೂ. ಆದಾಯ ಗಳಿಸುವ ಮಾರ್ಗವೊಂದರ ಆವಿಷ್ಕಾರ ನಡೆದಿದೆ. ಇದನ್ನು ದಕ್ಷಿಣ ಕನ್ನಡ ಸಹಿತ ರಾಜ್ಯದ ಹತ್ತಾರು ರೈತರು ಪ್ರಯೋಗಿಸಿ ಯಶಸ್ಸು ಕಾಣುತ್ತಿದ್ದಾರೆ.

ಗೋವಿನ ಶವವನ್ನು ಸಂಸ್ಕರಿಸಿ ಮೌಲ್ಯವರ್ಧನೆಗೆ ಒಳಪಡಿಸಿ ಕೃಷಿಕನ ಕಿಸೆ ತುಂಬಿಸುವ ನೂತನ ಆವಿಷ್ಕಾರ ದೇಶದಲ್ಲೇ ಪ್ರಪ್ರಥಮ ಬಾರಿಗೆ ಸಾಗರದ ಉಪ್ಪಳ್ಳಿ ಗ್ರಾಮದ ಆನಂದ ಆ. ಶ್ರೀ. ಅವರ ನಂದಗೋಕುಲ ಗೋಶಾಲೆಯಲ್ಲಿ ನಡೆದಿದ್ದು, ಇದರಿಂದ ತಯಾರಾಗುವ ದ್ರಾವಣಕ್ಕೆ ‘ಗೋನಂದಾ ಜಲ’ವೆಂದು ಹೆಸರಿಸಲಾಗಿದೆ.

ಏನಿದು?: ಮನೆಯಲ್ಲಿ ಸಹಜವಾಗಿ ಮೃತಪಟ್ಟ ಜಾನುವಾರುಗಳನ್ನು ಮಣ್ಣಿಗೆ ಸೇರಿಸುವುದು ವಾಡಿಕೆ. ಇದರ ಬದಲಾಗಿ ಜಾನುವಾರಿನ ಶವವನ್ನು ಶಾಸ್ತ್ರಸಮ್ಮತವಾಗಿಯೇ ಪಂಚಭೂತಗಳಲ್ಲಿ ಒಂದಾದ ನೀರಿನಲ್ಲಿ ಕರಗಿಸಿ ಪಡೆಯುವ ಸತ್ವಯುತ ದ್ರಾವಣ ಗೋನಂದಾ ಜಲ.

ಮೃತ ಜಾನುವಾರಿನ ಶವವನ್ನು ನಿರ್ದಿಷ್ಟ ಪ್ರಮಾಣದಲ್ಲಿ ಬೆಲ್ಲ, ಮಜ್ಜಿಗೆ, ಗೋಮೂತ್ರ, ಸಗಣಿ ಹಾಗೂ ಬಲಿತ ಹಣ್ಣುಗಳೊಂದಿಗೆ ಸೇರಿಸಿ ಡ್ರಮ್ಲ್ಲಿ ಹಾಕಿ ಗಟ್ಟಿಯಾಗಿ ಮುಚ್ಚಿಡಬೇಕು. 3-4 ತಿಂಗಳ ಅವಧಿಯಲ್ಲಿ ಗೋನಂದಾ ಜಲ ಸಿದ್ಧವಾಗುತ್ತದೆ. ಕೊಂಬು, ಗೊರಸು, ಕೆಲವು ದೊಡ್ಡ ಎಲುಬುಗಳನ್ನು ಹೊರತುಪಡಿಸಿ ಶವದ ಬಹುತೇಕ ಮೂಳೆಗಳು ಕರಗಿರುತ್ತವೆ. ಬಲಿತ ಹಣ್ಣುಗಳನ್ನು ಬಳಸುವುದರಿಂದ ಗೋನಂದಾಜಲ ವಾಸನೆ ಬೀರುವುದಿಲ್ಲ. ಬಹುಕಾಲ ಶೇಖರಿಸಿ ಇಡುವುದೂ ಸಾಧ್ಯವಿದೆ.

ಹತ್ಯೆ ತಡೆಗೆ ಪ್ರಬಲ ಅಸ್ತ್ರ: ಹಾಲು ನಿಲ್ಲಿಸಿದ ಗೋವಿನ ಪಾಲನೆ ಕಷ್ಟವೆಂದು ಅದರ ಉಳಿದ ಪ್ರಯೋಜನಗಳೆಲ್ಲವನ್ನೂ ಕಡೆಗಣಿಸಿ ಮಾರಲಾಗುತ್ತದೆ. ಇಂಥ ಗೋವುಗಳು ಕಸಾಯಿಖಾನೆ ಸೇರುತ್ತವೆ. ಹೀಗೆ ಚಿಲ್ಲರೆ ಕಾಸಿಗೆ ಮಾರುವ ದನವೇ ಮುಂದೆ ಗೋನಂದಾ ಜಲದ ರೂಪದಲ್ಲಿ ತನ್ನ ಭೂಮಿಯ ಫಲವತ್ತತೆ ಹೆಚ್ಚಿಸುವುದರೊಂದಿಗೆ ಉತ್ತಮ ಇಳುವರಿ ನೀಡಿ ದೀರ್ಘಾವಧಿಗೆ ಆದಾಯ ಹೆಚ್ಚಿಸಬಲ್ಲದು. ಇದು ಮನವರಿಕೆಯಾದಲ್ಲಿ ಗೋಹತ್ಯೆ ಗಣನೀಯವಾಗಿ ಇಳಿಕೆಯಾಗುತ್ತದೆ ಎಂಬುದು ಆನಂದರ ದೃಢವಾದ ನಂಬಿಕೆ. ಹೆಚ್ಚಿನ ಮಾಹಿತಿಗೆ ಆನಂದ ಆ.ಶ್ರೀ: 9448204831

ಆದಾಯದ ಮಾರ್ಗ: 250-300 ಕೆ.ಜಿ. ತೂಕದ ದನದ ಮೃತ ದೇಹದಿಂದ 500-600 ಲೀ. ಗೋನಂದಾ ಜಲ ಉತ್ಪತ್ತಿಯಾಗುತ್ತದೆ. ಒಂದು ಎಕರೆ ಭೂಮಿಯ ಫಲವತ್ತತೆ ಹೆಚ್ಚಿಸಲು 5 ಲೀಟರ್ ಗೋನಂದಾ ಜಲ ಸಾಕು. ಪ್ರಾಯೋಗಿಕವಾಗಿ ಯಶಸ್ಸು ಪಡೆದಿರುವ ಗೋನಂದಾ ಜಲವನ್ನು ಲೀಟರ್​ಗೆ 500 ರೂ.ನಂತೆ ಮಾರಿದರೂ ಉತ್ತಮ ಆದಾಯ ಗಳಿಸಬಹುದಾಗಿದೆ. ಮಾರುಕಟ್ಟೆಯಲ್ಲಿ ರಾಸಾಯನಿಕಯುಕ್ತ ‘ಗ್ರೋಥ್ ರೆಗ್ಯುಲೇಟರ್’ಗಳಿಗೆ ಲೀಟರ್​ಗೆ 6,000 ರೂ. ಬೆಲೆ ಇರುವುದರಿಂದ ಗೋನಂದಾ ಜಲ ಲಾಭದಾಯಕವಾಗಿದೆ.

ಇತರ ಪ್ರಾಣಿಗಳಿಂದಲೂ ಸಾಧ್ಯ: ಜಾನುವಾರುಗಳ ಮೃತದೇಹ ವಿಲೇವಾರಿ ಸಮಸ್ಯೆಗೂ ಗೋನಂದಾ ಜಲ ತಯಾರಿ ಪರಿಹಾರ. ಇದರಿಂದ ಪರಿಸರ ಕಲುಷಿತಗೊಳ್ಳುವುದು, ಬೀದಿನಾಯಿಗಳಿಗೆ ಆಹಾರವಾಗುವುದು ಕೂಡ ತಪ್ಪಿ ಸ್ವಚ್ಛ ಭಾರತ್ ಪರಿಕಲ್ಪನೆಗೂ ಪೂರಕವಾಗುತ್ತದೆ. ಈ ಪ್ರಯೋಗಕ್ಕೆ ಸಹಜವಾಗಿ ಸಾಯುವ ಯಾವುದೇ ಸಾಕುಪ್ರಾಣಿಗಳ ಶವಗಳನ್ನೂ ಬಳಸಬಹುದಾಗಿದೆ. ಆದರೆ ದನ, ಎತ್ತು, ಎಮ್ಮೆಗಳಷ್ಟು ಪೋಷಕಾಂಶ ಇತರ ಪ್ರಾಣಿಗಳಿಂದ (ನಾಯಿ, ಕುರಿ ಇತ್ಯಾದಿ) ಸಿಗುವುದಿಲ್ಲ ಎನ್ನುತ್ತಾರೆ ಈ ಬಗ್ಗೆ ಅಧ್ಯಯನ ನಡೆಸಿರುವ ಶಿವಮೊಗ್ಗದ ಹಿರಿಯ ಪಶುವೈದ್ಯಾಧಿಕಾರಿ ಡಾ. ಗಿರೀಶ್.

ಈ ಸಂಸ್ಕಾರ ಶಾಸ್ತ್ರಸಮ್ಮತ

ವರಾಹ ಮಿಹಿರನ ಬೃಹತ್ಸಂಹಿತೆ, ಚಾವುಂಡರಾಯನ ಲೋಕೋಪಕಾರಂ, ಸುರಪಾಲರ ವೃಕ್ಷಾಯುರ್ವೆದ ಮುಂತಾದ ಪ್ರಾಚೀನ ಗ್ರಂಥಗಳಲ್ಲಿ ಸತ್ತ ಪ್ರಾಣಿಗಳ ದೇಹದಿಂದ ಗಿಡಗಳಿಗೆ ಪೋಷಕಾಂಶ ನೀಡುವ ದ್ರವ್ಯಗಳ ತಯಾರಿಯ ಉಲ್ಲೇಖವಿದೆ. ಈ ವಿಧಾನವನ್ನೇ ಪ್ರಸ್ತುತ ಅನುಕೂಲತೆಗೆ ತಕ್ಕಂತೆ ಬಳಸಿಕೊಂಡು ಗೋನಂದಾ ಜಲ ಸಿದ್ಧಪಡಿಸಲಾಗಿದೆ. ಈ ನೂತನ ಸಂಸ್ಕಾರ ಪದ್ಧತಿಗೆ ಧಾರ್ವಿುಕ ಆಚಾರ-ವಿಚಾರಗಳ ಹಾಗೂ ಶಾಸ್ತ್ರಗಳ ಒಮ್ಮತ ಇದೆ ಎನ್ನುತ್ತಾರೆ ಪ್ರಯೋಗದ ರೂವಾರಿ, ದೇಶೀಯ ಗೋ ತಳಿ ಸಂರಕ್ಷಕರಿಗೆ ನೀಡುವ ಕೇಂದ್ರ ಸರ್ಕಾರದ ರಾಷ್ಟ್ರೀಯ ಗೋಪಾಲರತ್ನ ಪ್ರಶಸ್ತಿ ಪುರಸ್ಕೃತ ದಕ್ಷಿಣ ಭಾರತದ ಏಕೈಕ ಕೃಷಿಕ ಆನಂದ ಆ. ಶ್ರೀ.

ಉಪಯೋಗ ಏನೇನು?

ಗೋನಂದಾ ಜಲವನ್ನು ಜೀವಾಮೃತದ ಮಾದರಿಯಲ್ಲೇ ಗಿಡಗಳಿಗೆ ಸಿಂಪಡಿಸಿ ಕೃಷಿ ಆದಾಯ ದ್ವಿಗುಣಗೊಳಿಸಬಹುದಾಗಿದೆ. ಈಗಾಗಲೇ ರಾಜ್ಯಾದ್ಯಂತ ಸಾವಯವ ಪರಿವಾರದ 15-20 ರೈತರು ತಾವೇ ತಯಾರಿಸಿ, ತಮ್ಮ ಭೂಮಿಗೆ ಪ್ರಯೋಗಿಸಿ ಉತ್ತಮ ಇಳುವರಿ ಪಡೆದಿದ್ದಾರೆ. ಎಲ್ಲ ಬೆಳೆಗಳಿಗೂ ಪುಷ್ಟಿ ನೀಡುವ ಇದರ ಸಿಂಪಡಣೆಯಿಂದ ಗಿಡದ ಬೆಳವಣಿಗೆ, ಫಸಲಿನ ಗಾತ್ರ, ರುಚಿ ಹಾಗೂ ಮಣ್ಣಿನ ಫಲವತ್ತತೆ ಅವರು ಕಂಡುಕೊಂಡಿದ್ದಾರೆ. ಉತ್ತಮ ಇಳುವರಿ ಜತೆಗೆ ಅಡಕೆ ರೋಗಕ್ಕೆ ತಗುಲುವ ಎಲೆ ಹಳದಿ ರೋಗದಂತಹ ಸಮಸ್ಯೆಯನ್ನು ಗೋನಂದಾ ಜಲ ನಿವಾರಿಸಿರುವ ಉದಾಹರಣೆ ಇದೆ. ಎಂಟು ವರ್ಷಗಳ ಪರಿಶ್ರಮದಿಂದ ತಯಾರಾದ ಗೋನಂದಾ ಜಲ ಕೃಷಿ ವಿವಿ ವಿಜ್ಞಾನಿಗಳಿಂದಲೂ ಸೈ ಎನಿಸಿಕೊಂಡಿರುವುದು ವಿಶೇಷ.

ಮಣ್ಣಿನಿಂದ ಸಸ್ಯಗಳ ಮೂಲಕ ಆಹಾರದ ರೂಪದಲ್ಲಿ ಪಡೆದ ಪೋಷಕಾಂಶವನ್ನು ದ್ರವದ ರೂಪದಲ್ಲಿ ಪುನಃ ಮಣ್ಣಿಗೆ ಸೇರಿಸುವ ವೈಜ್ಞಾನಿಕ ಪ್ರಯೋಗ ‘ಗೋನಂದಾ’ ಜಲ. ಪ್ರಾಣಿಜನ್ಯ ವಸ್ತುಗಳಾದ ಸಗಣಿ, ಗಂಜಲದಂತೆಯೇ ಗೋನಂದಾ ಜಲ. ಹಾಗಾಗಿ ಉಪಯೋಗಿಸಲು ಯಾವ ಹಿಂಜರಿಕೆಯೂ ಬೇಡ.

| ಡಾ.ಗಿರೀಶ್, ಮುಖ್ಯ ಪಶುವೈದ್ಯಾಧಿಕಾರಿ

No comments:

Post a Comment