Monday, February 18, 2019

SHRAADDHA & VAIRAAGYA - XIX (ಶ್ರಾದ್ಧ ಮತ್ತು ವೈರಾಗ್ಯ - 14)

                                                                                                                                          ಸಂಗ್ರಹಿತ 
ಶ್ರಾದ್ಧ ಮತ್ತು ವೈರಾಗ್ಯ

ಅನಾದರ ಅತಿಕ್ರಮ್ಯ ನಮಸ್ಕಾರೋಕ್ತಿ ಪೂರ್ವಕಂ | 
ಉಭಯೋ ಕರಬದ್ಧೋಹಂ ಆ ಸೀಮಾಂತಂ ಅನುವೃಜೇ ||
ಶ್ರಾದ್ಧ ಒಂದು ಭಾವನಾತ್ಮಕ ಕರ್ಮ. "ಪಿತೃದೋಷ" ಎನ್ನುವದಾಗಲೀ ಶ್ರಾದ್ಧ ಮಾಡುವದರಿಂದ ಮುಂದೆ ತನಗೆ ಏನೋ ಒಳ್ಳೆಯದಾಗುತ್ತದೆ ಎಂಬ ಕಾಮ್ಯ ಭಾವನೆಯಾಗಲೀ ಇರುವದೇ ಇಲ್ಲ. ಹಿರಿಯರು ಕಾಡುತ್ತಾರೆ, ಪಿತೃಶಾಪ ಮೊದಲಾದ ವಿಷಯಗಳು ಕೇವಲ ಕಪೋಲ ಕಲ್ಪಿತ. ಶ್ರಾದ್ಧಮಂತ್ರಗಳಲ್ಲಿ ಇಂಥ ವಿಷಯ ಬಂದೇ ಇಲ್ಲ.

ಪಿತೃಭಕ್ತಿಯಿಂದ ಶ್ರಾದ್ಧಕರ್ಮ ಮಾಡುವ ವ್ಯಕ್ಯಿ  ಶ್ರಾದ್ಧ ಮುಂದುವರೆದಂತೆ ಕ್ರಮೇಣ ವೈರಾಗ್ಯದತ್ತ ಹೊರಳುತ್ತಾನೆ. 

ಪಿತೃದೇವತೆಗಳಿಗೆ ಅತ್ಯಂತ ವಿಧೇಯನಾಗಿ ಕರ್ಮವನ್ನು ನಡೆಸುತ್ತಾನೆ. ತಾನು, ತನ್ನ ಪರಿವಾರ, ತನ್ನ ಎಲ್ಲ ಅಸ್ತಿತ್ವಕ್ಕೆ ಕಾರಣರಾದ ಪಿತೃಗಳ ಋಣವನ್ನು ನೆನೆಯುತ್ತಾನೆ. ಆವಾಹಿಸಿದ ಪಿತೃದೇವತೆಗಳಿಗೆ ಯಾವಕಾರಣಕ್ಕೂ ಅಪಚಾರ ಆಗದಂತೆ ಪ್ರಯತ್ನಿಸುತ್ತಾನೆ.

ಬ್ರಹ್ಮಾರ್ಪಣಂ ಬ್ರಹ್ಮಹವಿಃ ಬ್ರಹ್ಮಾಗ್ನೌ ಬ್ರಹ್ಮಣಾಹುತಮ್ | 
ಬ್ರಹ್ಮೈವ ತೇನ ಗಂತವ್ಯಂ ಬ್ರಹ್ಮಕರ್ಮ ಸಮಾಧಿನಾ || 

ತಾನು ಮಾಡುವ ಎಲ್ಲ ಕ್ರೀಯೆಗಳೂ ದೇವರೇ ತನ್ನೊಳಗಿದ್ದು ಮಾಡಿಸುತ್ತಿದ್ದಾನೆ ಎಂಬ ಕರ್ಮ ಸಮರ್ಪಣಾ ಭಾವ ಇರುತ್ತದೆ. "ನಾನು, ನನ್ನದು, ನನ್ನಿಂದ" ಎಂಬ ಅಹಂಕಾರದಿಂದ ಮುಕ್ತನಾಗಿರುತ್ತಾನೆ.

ಕೋಪ, ಆವೇಶಗಳಿಗೆ ಒಳಗಾಗದೇ, ಬೇಸರಗೊಳ್ಳದೇ, ಮರುಮಾತನಾಡದೇ ಶಾಂತಚಿತ್ತನಾಗಿ ಕಾರ್ಯವನ್ನು ನಿರ್ವಹಿಸುತ್ತಾನೆ. ಶ್ರಾದ್ಧಕ್ಕಾಗಿ ಮಾಡಿದ ಅಡುಗೆ, ಮನೆಯ ಆವರಣ ಎಲ್ಲವೂ ಶುದ್ಧವಾಗಲೀ ಎಂದು ದೇವರಲ್ಲಿ ಪ್ರಾರ್ಥಿಸುತ್ತಾನೆ. 

ತನ್ನಲ್ಲಿ ಮತ್ತು ಶ್ರಾದ್ಧಕ್ಕಾಗಿ ಬಂದ ಬ್ರಾಹ್ಮಣರಲ್ಲಿ ಯಾವದೇ ದೋಷವನ್ನು ಎಣಿಸದೇ ಬಂದ ಅತಿಥಿಯಲ್ಲಿಯೇ ದೇವರನ್ನು ಕಾಣುತ್ತಾನೆ. ಪ್ರತಿ ಹಂತದಲ್ಲಿಯೂ ಪಿತೃದೇವತೆಗಳ ಆಜ್ಞೆ ಪಡೆದು ಮುಂದುವರೆಯುತ್ತಾನೆ. 

ಪಿತೃವಂಶ, ಮಾತೃವಂಶ, ಆಪ್ತರು, ಸ್ನೇಹಿತರು, ಗುರುಗಳು, ಪಶು-ಪಕ್ಷಿ, ಗಿಡ-ಮರ ಹೀಗೆ ತನಗೆ ಉಪಕಾರ ಮಾಡಿ ಮೃತರಾದ ಎಲ್ಲರನ್ನೂ ನೆನೆಯುತ್ತಾನೆ. ಅವರಿಗಾಗಿ ಪ್ರಾರ್ಥಿಸುತ್ತಾನೆ. ಅವರಿಗೆ ಸದ್ಗತಿಯಾಗಲೀ ಎಂದು ಕೋರಿಕೊಳ್ಳುತ್ತಾನೆ.

ಪಿತೃದೇವತೆಗಳಿಗೆ ನಮಸ್ಕಾರಗಳಿಂದ ಜನ್ಮ ಸಫಲವಾಯಿತು ಎಂಬ ಧನ್ಯತಾ ಭಾವ ಇರುತ್ತದೆ. ವಶಿಷ್ಟರಂತಹ ಬ್ರಾಹ್ಮಣರೇ ಇರುವಾಗ, ಪರ್ವಗಳಿಗೆ ಸಮನಾದ ತಿಥಿ ಇರುವಾಗ ಯಾವದೂ ಕಡಿಮೆ ಆಗಲಾರದು, ಏನೇ ಲೋಪದೋಷಗಳಿದ್ದರೂ "ಅಚ್ಯುತನನ್ನು" ನೆನೆಸಿದರೆ ದೂರಾಗುವವು ಎಂಬ ವಿಶ್ವಾಸದಿಂದ ಕೂಡಿರುತ್ತಾನೆ.

ವೈರಾಗ್ಯಪೂರ್ಣತೆಯಿಂದ ನಮಸ್ಕರಿಸಿ, ಈ ಲೋಕ, ಇಲ್ಲಿಯ ಯಾವದೇ ವೈಭೋಗ ತನಗೆ ಬೇಡ ! ಪಿತೃಲೋಕವನ್ನು ಹೊಂದಿದ ತನ್ನ ಹಿರಿಯರನ್ನೇ ಅನುಸರಿಸಿ ತಾನೂ ಕೂಡ ಅವರನ್ನು ಹಿಂಬಾಲಿಸುತ್ತೇನೆ ಎಂದು ಕೇಳಿಕೊಳ್ಳುತ್ತಾನೆ !!

ಪಿತೃದೇವತೆಗಳ ಕೃಪೆಗೆ ಪಾತ್ರನಾಗುತ್ತಾನೆ. ದೇವತೆಗಳು ಆಯುಷ್ಯ, ಆರೋಗ್ಯ, ಸಂತಾನ, ವಿದ್ಯೆ ಮೊದಲಾದ ಎಲ್ಲ ಭಾಗ್ಯಗಳೂ ನಿನಗೆ ದೊರೆಯಲಿ, ನಿನ್ನ ವಂಶ ಅಭಿವೃದ್ಧಿಯಾಗಲಿ ಎಂದು ಆಶೀರ್ವದಿಸುತ್ತಾರೆ. ಶ್ರದ್ಧಾಮೇವ ಶ್ರಾದ್ಧಮ್ 

No comments:

Post a Comment