Friday, May 17, 2019

VISHNU SAHASRANAAM ( ವಿಷ್ಣುಸಹಸ್ರನಾಮ - ಒಂದು ಜಿಜ್ಞಾಸೆ )

                                                                                                                                           ಸಂಗ್ರಹಿತ 
ವಿಷ್ಣುಸಹಸ್ರನಾಮ - ಒಂದು ಜಿಜ್ಞಾಸೆ.

ಭಾಗ ೧
ನಾನು ಬಹಳ ಚಿಕ್ಕವಯಸ್ಸಿನಿಂದ ಕೇಳುತ್ತಿದ್ದೇನೆ ಬಹಳಷ್ಟು ಜನ  ಹೇಳುತ್ತಾರೆ ವಿಷ್ಣುಸಹಸ್ರನಾಮವನ್ನು ಸ್ತ್ರೀಯರು ಮತ್ತು ಅನ್ಯವರ್ಣೀಯರು ಹೇಳಬಾರದು ಎಂದು. ಆದರೆ, ಇದುವರೆಗೂ ಒಬ್ಬ ವಿದ್ವಾಂಸರೂ ಕೂಡ ಶಾಸ್ತ್ರಗಳ ಆಧಾರ ಕೊಟ್ಟು ಸೋದಾಹರಣವಾಗಿ ಈ ನಿಷೇಧವನ್ನು ನಿರೂಪಿಸಿಲ್ಲ. ಮತ್ತು ತೃಪ್ತಿಕರವಾದ ಸಮಾಧಾನವನ್ನೂ ಹೇಳಿಲ್ಲ. ಬದಲಿಗೆ,  ವಿಷ್ಣುಸಹಸ್ರನಾಮವನ್ನು ಸ್ತ್ರೀಯರೂ ಇತರರೂ ಹೇಳಬಹುದು ಎಂದು ವಾದಾಮಾಡುವವರು ತಮ್ಮ ವಾದಕ್ಕೆ ಇತಿಹಾಸ ಪುರಾಣ ಮತ್ತು ಇತರ ವ್ಯಾಖ್ಯಾನಗ್ರಂಥಗಳಿಂದ ಸಾಕಷ್ಟು ಪುಷ್ಟಿಕರವಾದ ಪ್ರಮಾಣಗಳನ್ನು ಕೊಡುತ್ತಾರೆ.
ಕೆಲವರು ಹೇಳುತ್ತಾರೆ, ವಿಷ್ಣುಸಹಸ್ರನಾಮ, ಅದು ಮಹಾಮಂತ್ರವಾದ್ದರಿಂದ ಅದನ್ನು ಉಪವೀತರಾಗಿ, ಮಂತ್ರಪಠಣ ಯೋಗ್ಯತೆಯಿರುವವರು ಮಾತ್ರ ಪಠಿಸಬೇಕು. ಆದರೆ, ಇದನ್ನು ಮಹಾಭಾರತದ ಅನುಶಾಸನ ಪರ್ವದಲ್ಲಿ ಹೇಳಿರುವಂತೆ ಭೀಷ್ಮ ತನ್ನ ಮೊಮ್ಮಗ ಯುಧಿಷ್ಠಿರನಿಗೆ  ಒಂದು ಮಂತ್ರದಂತಲ್ಲ ಬದಲಿಗೆ ಸಂವಾದರೂಪದಲ್ಲಿ ಸ್ತೋತ್ರರೂಪದಲ್ಲಿ ಹೇಳಿದಹಾಗಿದೆ. 
ಏಕೆಂದರೆ, ಮಂತ್ರೋಪದೇಶ ಮಾಡುವವರು ಮಡಿಯುಟ್ಟು ಶುದ್ಧಾಚಮನಮಾಡಿ ರಹಸ್ಯವಾಗಿ ಉಪದೇಶಿಸಬೇಕು. ಆದರೆ, ಮೂಲತಃ ಭೀಷ್ಮರಿಂದ ಉಪದಿಷ್ಟವಾದ  ಈ ಸ್ತೋತ್ರವನ್ನು ನಂತರ ವ್ಯಾಸರು ಮಹಾಭಾರತದಲ್ಲಿ ಧ್ಯಾನಮಂತ್ರ ಮತ್ತು ಫಲಶ್ರುತಿಗಳೊಂದಿಗೆ ಸೇರಿಸಿರುವುದಾಗಿ ಶಾಸ್ತ್ರಜ್ಞರು ಹೇಳುತ್ತಾರೆ. 
ಅದೂ ಅಲ್ಲದೆ, ವಿಷ್ಣುಸಹಸ್ರನಾಮವನ್ನು ಮಂತ್ರ ರೂಪದಲ್ಲಿ ಪಠಿಸುವವರು ಕರನ್ಯಾಸ ಅಂಗನ್ಯಾಸ ದಿಗ್ಬಂಧನ ಧ್ಯಾನ ಸಹಿತ 
ಓಂ ವಿಶ್ವಾಯ ನಮಃ ಓಂ, 
ಓಂ ವಿಷ್ಣವೇ ನಮಃ ಓಂ 
ಎಂಬುದಾಗಿ ಎಲ್ಲಾ ಶ್ರೀನಾಮಗಳನ್ನೂ ಓಂಕಾರದ ಸಂಪುಟೀಕರಣದೊಂದಿಗೆ ಹೇಳಬೇಕು. ಹಾಗಾಗಿ ಉಪನೀತರಾಗದ ಸ್ತ್ರೀಯರು ಮತ್ತು ಚತುರ್ಥವರ್ಣ ದವರು ಇದನ್ನು ಪಠಿಸಬಾರದೆಂದು ಹೇಳುತ್ತಾರೆ.
             ಸ್ತ್ರೀಯರ ಕುರಿತಾದ ನಿಷೇಧಕ್ಕೆ ಪ್ರತ್ಯೇಕ ವೈದ್ಯಕೀಯ ಮನೋದೈಹಿಕ ಕಾರಣಗಳೂ ಇವೆ. ವೈದ್ಯಕೀಯ ಶಾಸ್ತ್ರಜ್ಞರು ಹೇಳುವಂತೆ ಒಂದು ಹೆಣ್ಣಿನ ಮನಸ್ಸಿನ ಮೇಲೆ ಸತತವಾಗಿ ಅತಿಯಾದ ಒತ್ತಡ ಬಿದ್ದರೆ ಆಕೆಯ ಗರ್ಭಕೋಶ ನಿಃಶಕ್ತವಾಗುತ್ತದೆ. ಮತ್ತು ಆಕೆಗೆ ಹುಟ್ಟುವ ಮಗು ಮಾನಸಿಕ ಅಥವಾ ದೈಹಿಕ ಅಂಗ ವೈಕಲ್ಯದೊಂದಿಗೆ ಹುಟ್ಟುವ ಸಾಧ್ಯತೆ ಇರುತ್ತದೆ.                           ಸ್ತ್ರೀಯರು ತಮ್ಮ ಮುಟ್ಟಿನ ಸಮಯಗಳಲ್ಲಿ ಸ್ತೋತ್ರ ಪಠಿಸ ಕೂಡದು ಎಂಬ ಅರ್ಥದಲ್ಲಿ ಮಾತ್ರ ಇದೆ.  ಆದ್ದರಿಂದ ಸಂಸಾರದಲ್ಲಿ ಆಸಕ್ತಳಾದ ಸ್ತ್ರೀ ಮಂತ್ರಾರ್ಥ ಚಿಂತನೆಯಲ್ಲಿ ತೊಡಗಲು ನಿಷೇಧವಿತ್ತು. ಆದರೆ, ಅದು ಮಂತ್ರಾರ್ಥ ಚಿಂತನೆಗೆ ಹೊರತು ಮಂತ್ರ ಅಥವ ಸ್ತೋತ್ರ ಪಠಣಕ್ಕಲ್ಲ. ಈ ನಿಷೇಧಗಳೆಲ್ಲಾ ಪರಂಪರಾಗತ ನಂಬಿಕೆಯೇ ಹೊರತು ಶಾಸ್ತ್ರೋಕ್ತವೂ ಅಲ್ಲ ಮತ್ತು ಮತತ್ರಯರಲ್ಲಿ ಯಾವೊಬ್ಬ ಆಚಾರ್ಯಪುರುಷರೂ ಈ ರೀತಿಯ ನಿಷೇಧವನ್ನು ಹೇಳಿಲ್ಲ. 
ಈ ನಿಷೇಧಕ್ಕೆ ಇರಬಹುದಾದ ಇನ್ನೊಂದು ಕಾರಣ -
ಪೂರ್ವ ಪೀಠಿಕಾ ಶ್ಲೋಕಗಳಲ್ಲಿ ಮತ್ತು ಫಲಶ್ರುತಿಯಲ್ಲಿ ಎಲ್ಲಾಕಡೆ ಕರ್ತೃವನ್ನು ಹೇಳುವಾಗ ಪುರುಷ  ಶಬ್ದವನ್ನು ಬಳಸಲಾಗಿದೆ, ಮತ್ತು ಎಲ್ಲಾ ಕ್ರಿಯಾಪದಗಳು ಮಾಡುತ್ತಾನೆ, ಪಠಿಸುತ್ತಾನೆ ಎಂಬರ್ಥದಲ್ಲಿ ಪುಲ್ಲಿಂಗಶಬ್ದಗಳೇ ಇವೆ. ಆದ್ದರಿಂದ, ಪುರುಷ ಎಂದರೆ ಗಂಡು ಎಂದು ತಪ್ಪಾಗಿ ಅರ್ಥೈಸಿಕೊಂಡವರಿಂದ ಈ ತಪ್ಪು ಪರಂಪರೆ ಬಂದಿರಬಹುದು. ನಿಜವಾಗಿ ಪುರುಷಶಬ್ದವಾಚ್ಯ ಭಗವ‌ತನೊಬ್ಬನೇ, ಆದರೆ,  ಉಪನಿಷದ  ಪ್ರಕಾರ ಪೌರುಷರಿರುವವರೆಲ್ಲರೂ ಪುರುಷರೇ  ಇದೇ ಅರ್ಥದಲ್ಲಿ " ಉದ್ಯೋಗಂ ಪುರುಷ ಲಕ್ಷಣಂ " ಎಂಬ ಉಕ್ತಿ ಇದೆ.  ಸ್ಥೂಲ ಅರ್ಥದಲ್ಲಿ ನಿರ್ವಚನಕಾರರು ಹೇಳುವಂತೆ ಪುರುಷ ಶಬ್ದದ ನಿರ್ವಚನ “ಪುರಿ ಷೇತೇ ಇತಿ ಪುರುಷಃ” ಪುರ ಅಂದರೆ ಭಾಗವತ ಪುರಾಣದಲ್ಲಿ ಹೇಳುವ ಪುರ “ ಪುರಂ ಏಕಾದಶ ದ್ವಾರಂ ಅಜಸ್ಯಾವಕ್ರಚೇತಸಃ” ಪುರ ಎಂದರೆ ಹನ್ನೊಂದು ಬಾಗಿಲುಗಳ ಮಾನವ ಶರೀರ. ಅದರಲ್ಲಿ ವಾಸಮಾಡುವ ಜೀವಿ ಪುರುಷ. ಅದು ಗಂಡಾದರೂ ಆಗಬಹುದು ಹೆಣ್ಣಾದರೂ ಆಗಾಬಹುದು. ಜೀವ, ಪ್ರಾಣ ಮತ್ತು ಪುರುಷ ಶಬ್ದವೂ ಪುಲ್ಲಿಂಗದಲ್ಲಿದೆ. 
ಸಂಸ್ಕೃತದ ವೈಶಿಷ್ಟ್ಯವೇ ಹಾಗೆ. ಸ್ತ್ರೀಯರಿಗೆ ಪುಲ್ಲಿಂಗ ಶಬ್ದಗಳ ಬಳಕೆ ಇದೆ. ಉದಾ… ಆಕಾರಾಂತ  ಶಬ್ದ ಧಾರಾ ಎಂದು. ಅಂದರೆ ಹೆಂಡತಿ. ಆದರೆ ಪುಲ್ಲಿಂಗ ಶಬ್ದ. 
ಪುಲ್ಲಿಂಗ ಶಬ್ದಗಳಿಂದ ಗಂಡಸರು ಮತ್ತು ಸ್ತ್ರೀಲಿಂಗ ಶಬ್ದಗಳಿಂದ ಹೆಂಗಸರು ಮಾತ್ರ ವಾಚ್ಯರಾಗಬೇಕೆಂದು ಯಾವ ನಿಯಮವೂ ಇಲ್ಲ. 
ಮೊದಲು ವಿಷ್ಣುಸಹಸ್ರನಾಮದ ಪೂರ್ವಪೀಠಿಕಾ ಮತ್ತು ಫಲಶ್ರುತಿಯ ಶ್ಲೋಕಗಳನ್ನು ನೋಡಿ ಮತ್ತೆ ಮಹಾಭಾರತ ಮತ್ತು ವಿಷ್ಣುಸಹಸ್ರನಾಮ ವ್ಯಾಖ್ಯಾನದ ಶ್ಲೋಕಗಳನ್ನು ನೋಡೋಣ.
ಈ ಸ್ತೋತ್ರದ ಪೀಠಿಕೆ ಮೊದಲಾಗುವುದೇ ಯುಧಿಷ್ಠಿರನ ಪ್ರಶ್ನೆಯಿಂದ. ಅವನುಕೇಳುವುದು –
ಕಿಮೇಕಂ ದೈವತಂ ಲೋಕೇ ಕಿಂ ವಾಪ್ಯೇಕಂ ಪರಾಯಣಮ್ |
ಸ್ತುವಂತಃ ಕಂ ಕಮರ್ಚಂತಃ ಪ್ರಾಪ್ನುಯುರ್ಮಾನವಾಃ ಶುಭಮ್ ||
ಯಾರು ಒಬ್ಬನೇ ಎಲ್ಲಾ ಶಸ್ತ್ರಗಳಿಂದ ಸ್ತುತ್ಯನಾದ ಹಿರಿಯ ದೇವತೆ ? ಯಾರು ಒಬ್ಬನೇ ಸರ್ವರಿಗೂ ಕೊನೆಯ ಆಸರೆ ? ಯಾರನ್ನು ಸ್ತುತಿಸುತ್ತಾ ಆರಾಧಿಸುತ್ತಾ ಮಾನವರು ಒಳಿತನ್ನು ಪಡೆಯುವರು ?
ಕೋ ಧರ್ಮಃ ಸರ್ವಧರ್ಮಾಣಾಂ ಭವತಃ ಪರಮೋ ಮತಃ | ಕಿಂ ಜಪನ್ ಮುಚ್ಯತೇ ಜಂತುಃ ಜನ್ಮ ಸಂಸಾರಬಂಧನಾತ್ ||
ನಿಮ್ಮ ಅಭಿಪ್ರಾಯದಂತೆ ಯಾವುದು ಸರ್ವ ಶ್ರೇಷ್ಠವಾದ ಧರ್ಮ ?( ನಮ್ಮ ಸರ್ಕಾರ ಹೇಳುವ ರಿಲೀಜನ್ ಅರ್ಥದ ಧರ್ಮವಲ್ಲ)
ಏನನ್ನು ಜಪಿಸುತ್ತಾ ಜಂತುಃ – ಜನನ ಮರಣ ಶೀಲವಾದ ಜೀವಿಯು ಈ ಸಂಸಾರಗಳ ಬಂಧನದಿಂದ ಬಿಡುಗಡೆ ಹೊಂದುತ್ತಾನೆ ?
ಮಹಾ ದಯಾಪರನಾದ ಧರ್ಮರಾಜ ಕೇಳುವುದು ಸಮಸ್ತ ಜೀವಿಗಳ ಒಳಿತಿನ ಮಾರ್ಗದಬಗ್ಗೆ.
ಅದಕ್ಕೆ ಭೀಷ್ಮನ ಉತ್ತರ ಕೂಡ ಸಮಸ್ತ ಜೀವ ಸಂಕುಲದ ಒಳಿತನ್ನು ತೋರುವ ಮಾಹಾ ದಾರಿದೀಪಕ.
ಜಗತ್ಪ್ರಭುಂ ದೇವದೇವಂ ಅನಂತಂ ಪುರುಷೋತ್ತಮಮ್ | ಸ್ತುವನ್ನಾಮಸಹಸ್ರೇಣ ಪುರುಷಃ ಸತತೋತ್ಥಿತಃ || ತಮೇವಚಾರ್ಚಯನ್ನಿತ್ಯಂ ಭಕ್ತ್ಯಾಪುರುಷಮವ್ಯಯಮ್ |  ಧ್ಯಾಯನ್ ಸ್ತುವನ್ನಮಸ್ಯಂಶ್ಚಯಜಮಾನಸ್ತಮೇವ ಚ ||              
ಅನಾದಿನಿಧನಂ ವಿಷ್ಣುಂ ಸರ್ವಲೋಕಮಹೇಶ್ವರಮ್ | ಲೋಕಾಧ್ಯಕ್ಷಂ ಸ್ತುವನ್ನಿತ್ಯಂ ಸರ್ವದುಃಖಾತಿಗೋ ಭವೇತ್ ||
ಪುರುಷಃ – ಶರೀರಸ್ಥನಾದ ಯಾವ ಯೋಗ್ಯ ಜೀವಿಯು ಜಗತ್ತಿಗೆಲ್ಲ ಒಡೆಯನೂ, ನಾಶರಹಿತನೂ, ಜ್ಞಾನಾನಂದಾದಿಗಳಲ್ಲಿ ಏರುಪೇರು ಇಲ್ಲದವನೂ, ಆದಿ ಅಂತ್ಯಗಳಿಲ್ಲದವನೂ, ಅನಂತ ರೂಪವುಳ್ಳವನೂ, ಎಲ್ಲಾಲೋಕಗಳಿಗೂ ಅಧಿನಾಯಕನೂ  ಒಡೆಯನೂ ಆದ ಪುರುಷನಾಮಕನಾದ ಭಗವಂತನನ್ನು ಪ್ರತಿನಿತ್ಯವೂ   ಭಕ್ತಿಪೂರ್ವಕವಾಗಿ, ಭಗವಂತನನ್ನೇ ಧ್ಯಾನಿಸುತ್ತಾ ನಮಸ್ಕರಿಸುತ್ತಾ  ಸಾವಿರನಾಮಗಳಿಂದ  ಸ್ತುತಿಸುತ್ತಾನೋ ಅವನು ಎಲ್ಲಾ ದುಃಖಗಳನ್ನೂ ಅಧಿಗಮಿಸಿ ಶಾಶ್ವತ ಆನಂದವನ್ನು ಹೊಂದುತ್ತಾನೆ.
ಭಾಗ ೨.
ಇನ್ನು ಫಲಶ್ರುತಿಯ ಶ್ಲೋಕಗಳನ್ನು ನೋಡೋಣ.
ಇತೀದಂ ಕೀರ್ತನೀಯಸ್ಯ ಕೇಶವಸ್ಯ ಮಹಾತ್ಮನಃ |
ನಾಮ್ನಾಂ ಸಹಸ್ರಂ ದಿವ್ಯಾನಾಂ ಅಶೇಷೇಣ ಪ್ರಕೀರ್ತಿತಮ್ || ಯ ಇದಂ ಶ್ರುಣುಯಾನ್ನಿತ್ಯಂ ಯಶ್ಚಾಪಿ ಪರಿಕೀರ್ತಯೇತ್ |  ನಾಶುಭಂ ಪ್ರಾಪ್ನುಯಾತ್ ಕಿಂಚಿತ್ ಸೋಮುತ್ರೇಹ ಚ ಮಾನವಃ || ವೇದಾಂತಗೋ ಬ್ರಾಹ್ಮಣಃ ಸ್ಯಾತ್ ಕ್ಷತ್ರಿಯೋ ವಿಜಯೀ ಭವೇತ್ | ವೈಶ್ಯೋ ಧನಸಮೃದ್ಧಃ ಸ್ಯಾತ್ ಶೂದ್ರಃ ಸುಖಮವಾಪ್ನುಯಾತ್ ||
ಮಹಾತ್ಮನಾದಂತಹ, ಎಲ್ಲರಿಂದಲೂ ಸ್ತುತ್ಯನಾದ ಕೇಶವನ ದಿವ್ಯವಾದ, ದೇವಾಧಿದೇವತೆಗಳಿಂದಲೂ ಕೀರ್ತಿತವಾದ ಈ ಸಾವಿರನಾಮಗಳನ್ನು ಯಃ ಮಾನವಃ - ಯಾವ ಮನುಷ್ಯನು,  ನಿತ್ಯಂ – ನಿತ್ಯವೂ, ಶ್ರುಣುಯಾತ್ – ಕೇಳುತ್ತಾನೋ, ಯಶ್ಚಾಪಿ ಪರಿಕೀರ್ತಯೇತ್ – ಯಾರು ನಾನಾವಿಧವಾಗಿ ಕೀರ್ತಿಸುತ್ತಾನೆಯೋ, ಸಃ- ಅವನು, ಇಹ – ಈ ಸಂಸಾರದಲ್ಲಿ, ಮತ್ತು, ಅಮುತ್ರ ಚ – ಪರಲೋಕದಲ್ಲಿ ಕೂಡ, ಕಿಂಚಿತ್ ಅಪಿ – ಸ್ವಲ್ಪವೂ ಕೂಡ, ಅಶುಭಂ – ಕೆಟ್ಟದ್ದನ್ನು, ನ ಪ್ರಾಪ್ನುಯಾತ್ – ಪಡೆಯುವುದಿಲ್ಲ. 
ಜ್ಞಾನ ಮಾರ್ಗಿಯಾದ ಬ್ರಾಹ್ಮಣನು ವೇದದ ರಹಸ್ಯನ್ನೂ, ದುಷ್ಟಶಿಕ್ಷಣ ರತನಾದ, ಸಾಮ್ರಾಜ್ಯ ವಿಸ್ತರಣಾ ರತನಾದ ಕ್ಷತ್ರಿಯನು ವಿಜಯವನ್ನೂ, ವ್ಯಾಪಾರ ವ್ಯವಹಾರಗಳಲ್ಲಿ ರತನಾದ ವೈಶ್ಯನು ಧನಸಂಪದವನ್ನೂ ಮತ್ತು ಮೇಲಿನ ಮೂರೂ ಜನಗಳಿಗೆ ಸಹಾಯಮಾಡುವ, ದೈಹಿಕ ಶ್ರಮದಿಂದ ದಣಿದ ಶೂದ್ರನು (ಜಾತಿಶೂದ್ರನಲ್ಲ ಗುಣ ಶೂದ್ರ) ಆನಂದವನ್ನೂ ಪಡೆಯುತ್ತಾನೆ ಮತ್ತು ಧರ್ಮ ಅರ್ಥ ಕಾಮ ಮತ್ತು ಬೇರೆ ಫಲಗಳನ್ನು ಬಯಸುವವರು ತಮ್ಮ ಬಯಕೆಗಳನ್ನು ಪಡೆಯುತ್ತಾರೆ.
ಅಂದರೆ,  ಯಾವುದೇ ಜಾತಿ ವರ್ಣ ಕುಲಾಚಾರಗಳ ಮನುಷ್ಯ ಕೂಡ ವಿಷ್ಣುಸಹಸ್ರನಾಮವನ್ನು ಪಠಿಸಬಹುದೆಂದು ಇಲ್ಲಿ ಹೇಳಿರುವುದು ತಿಳಿಯುತ್ತದೆ.
ಭಕ್ತಿಮಾನ್ ಯಃ ಸದೋತ್ಥಾಯ ಶುಚಿಸ್ತದ್ಗತ ಮಾನಸಃ |
ಸಹಸ್ರಂ ವಾಸುದೇವಸ್ಯ ನಾಮ್ನಾಮೇತತ್ ಪ್ರಕೀರ್ತಯೇತ್ ||
ಈ ಶ್ಲೋಕದಲ್ಲಂತೂ, ಬೆಳಿಗ್ಗೆ ಎದ್ದತಕ್ಷಣ ಭಕ್ತಿವಂತನಾಗಿ ಶುದ್ಧಮನಸ್ಸಿನಿಂದ ಭಗವಾನ್ ವಾಸುದೇವನ ಈ ಸಾವಿರನಾಮಗಳನ್ನು ಪಠಿಸಬೇಕು ಎಂದಿದೆ. ಅಂದರೆ, ಈ ಸ್ತೋತ್ರವನ್ನು ದೇಶ ಕಾಲ ಮಡಿ ಮೈಲಿಗೆಗಳ ಗೋಜಿಲ್ಲದೆ ಯಾವಾಗ ಭಕ್ತಿಯುಂಟಾಯಿತೋ ಆ ಕೂಡಲೇ ಹಾಸಿಗೆಯಮೇಲಿದ್ದರೂ ಕೂಡ ಆಗಲೇ ಹೇಳಬಹುದು ಎಂದಿದ್ದಾರೆ. ಯಃ ಎನ್ನುವ ಶಬ್ದ ಹಿಂದೆ ಹೇಳಿದ ಪುರುಷ ಮತ್ತು ಮಾನವ ಶಬ್ದಗಳಿಗೆ ಪೂರಕವಾಗಿಯೇ ಬಂದಿದೆ‌.
ದುರ್ಗಾಣ್ಯತಿತರತ್ಯಾಶು ಪುರುಷಃ ಪುರುಷೋತ್ತಮಮ್ | ಸ್ತುವನ್ನಾಮಸಹಸ್ರೇಣ ನಿತ್ಯಂ ಭಕ್ತಿಸಮನ್ವಿತಃ ||
ಮನುಷ್ಯನು ನಿತ್ಯವೂ ಭಕ್ತಿಯಿಂದ ಕೂಡಿದವನಾಗಿ ಸಾವಿರ ನಾಮಗಳಿಂದ ಪುರುಷೋತ್ತಮನಾದ ಭಗವಂತನನ್ನು ಸ್ತುತಿಸುತ್ತಾ ಸಮಸ್ತ ಕಷ್ಟಗಳನ್ನೂ ಕೂಡಲೇ ದಾಟಬಲ್ಲ.
ಇಮಂ ಸ್ತವಂ ಭಗವತೋ ವಿಷ್ಣೋರ್ವ್ಯಾಸೇನ ಕೀರ್ತಿತಮ್ | ಪಠೇದ್ ಯ ಇಚ್ಛೇತ್ ಪುರುಷಃ ಶ್ರೇಯಃ ಪ್ರಾಪ್ತುಂ ಸುಖಾನಿ ಚ || ವಿಶ್ವೇಶ್ವರಮಜಂ ದೇವಂ ಜಗತಃ ಪ್ರಭವಾಪ್ಯಯಮ್ | ಭಜಂತಿ ಯೇ ಪುಷ್ಕರಾಕ್ಷಂ ನ ತೇ ಯಾಂತಿ ಪರಾಭವಮ್ ||
ಸುಖ ಮತ್ತು ಯಶಸ್ಸನ್ನು ಬಯಸುವ  ಮನುಷ್ಯನು ವ್ಯಾಸೋಕ್ತವಾದ ಭಗವಾನ್ ವಿಷ್ಣುವಿನ ಈ ಸ್ತೋತ್ರವನ್ನು ಹೇಳಲಿ. 
ಯಾರು ಕಮಲದಂತೆ ಕೆಂಪಾದ ಕಣ್ಣುಗಳುಳ್ಳ, ಹುಟ್ಟುಸಾವುಗಳಿರದ, ಕ್ರೀಡಾದಿಗುಣಸಂಪನ್ನನಾದ, ಸಮಸ್ತ ಜಗತ್ತಿಗೂ ಒಡೆಯನಾದ ವಿಷ್ಣುವನ್ನು ಭಜಿಸುತ್ತಾನೆಯೋ ಆ ಮನುಷ್ಯ ಎಂದಿಗೂ ಎಲ್ಲಿಯೂ ಸೋಲನ್ನು ಹೊಂದುವುದಿಲ್ಲ ( ಮೋಕ್ಷವೆಂಬ ಶಾಶ್ವತ ಗೆಲುವನ್ನೇ ಪಡೆಯುತ್ತಾನೆ) 
ಹೀಗೆ ಈ ಸ್ತೋತ್ರದ ಪೀಠಿಕೆ ಮತ್ತು ಫಲಶ್ರುತಿಗಳಲ್ಲಿ ಕೂಡ ಮಾನವ, ಪುರುಷ, ಜಂತು ಎಂಬ ( ಹೆಣ್ಣು ಗಂಡು ಭೇದವಿಲ್ಲದೆ) ಶಬ್ದಗಳನ್ನು ಬಳಸಿದ್ದಾರೆ ಹೊರತು ಗಂಡು ಮಾತ್ರ ಎಂದು ಹೇಳಿಲ್ಲ.
ಒಂದುವೇಳೆ ಭೀಷ್ಮರಿಗೆ ಮತ್ತು ವ್ಯಾಸರಿಗೆ ಸ್ತ್ರೀಯರು ಮತ್ತು ಇತರ ವರ್ಣೀಯರು ಈ ಸ್ತೋತ್ರವನ್ನು ಹೇಳುವಬಗ್ಗೆ ವಿರೋಧವಿದ್ದರೆ ಪುರುಷ ಎನ್ನುವ ಬದಲು ಪುಮಾನ್ ಎಂದೋ ದ್ವಿಜ ಎಂದೋ ಹೇಳಿರುತ್ತಿದ್ದರಲ್ಲವೇ ?
ಇನ್ನು ಮಹಾಭಾರತವನ್ನು ರಚಿಸಿದ ಸಾಕ್ಷಾತ್ ವ್ಯಾಸರೇ ರಚಿಸಿದ ಭಾಗವತದ ಒಂದು ಪ್ರಸಿದ್ಧ ಶ್ಲೋಕ –
ಸ್ತ್ರೀ ಶೂದ್ರ ದ್ವಿಜಬಂಧೂನಾಂ ತ್ರಯೀ ನ ಶ್ರುತಿಗೋಚರಾ | ಇತಿ ಭಾರತಮಾಖ್ಯಾನಂ ಕೃಪಯಾ ಮುನಿನಾ ಕೃತಮ್ ||
(ಮುನಿನಾ ಸಂಪ್ರಕೀರ್ತಿತಂ ಎಂಬ ಪಾಠಭೇದವೂ ಇದೆ)
ಅಂದರೆ, ಸಂಸಾರದ ಕಷ್ಟಗಳಲ್ಲಿ ಮುಳುಗಿರುವ, ಮಕ್ಕಳು ಮತ್ತು ಮನೆವಾಳ್ತೆಗಳಲ್ಲೇ ದಿನ ಕಳೆಯುವ ಸ್ಥಿತಿಯಲ್ಲಿರುವ ಸ್ತ್ರೀಯರು, ಸ್ವಂತ ಬಲವಿಲ್ಲದ, ಯಾವನೋ ಅನ್ನ ಕೊಡುವ ಧಣಿಯ ಹಂಗಿನಲ್ಲಿದ್ದು ದಿನವೆಲ್ಲಾ ಆ ಯಜಮಾನನ ಆಜ್ಞಾರಾಧಕನಾಗಿ ಬಾಳುತ್ತಿರುವ ಶೂದ್ರ (ಜಾತಿಶೂದ್ರನಲ್ಲ ಗುಣ ಶೂದ್ರ) ಮತ್ತು ದ್ವಿಜ ಬಂದು – ವೇದಜ್ಞರಾದ ಬ್ರಾಹ್ಮಣರ ಮನೆತನದಲ್ಲೇ ಹುಟ್ಟಿದರೂ ಕೂಡ ವೇದಾಧ್ಯಯನ ಅಧ್ಯಾಪನಗಳಿಲ್ಲದೇ, ಪೂಜಾ ಆರಾಧನಾದಿ ಸತ್ಕಾರ್ಯಗಳಿಲ್ಲದೇ, ಹೊಟ್ಟೆಪಾಡಿಗಾಗಿ ಇನ್ನೊಬ್ಬರ ಹಂಗಿಗೆ ಬಿದ್ದಿರುವ, ನಾನಾ ದುಶ್ಚಟಗಳಿಗೆ ತುತ್ತಾಗಿರುವ ಜಾತಿ ಬ್ರಾಹ್ಮಣರು ಇಂಥವರಿಗೆ ವೇದಾಧ್ಯಯನವಿರಲಿ ವೇದಗಳನ್ನು ಕೇಳುವುದಕ್ಕೂ ಅವಕಾಶವಿರುವುದಿಲ್ಲ. ಆದ್ದರಿಂದ, ಮಹಾ ಕರುಣಾಸಮುದ್ರರಾದ ಭಗವಾನ್  ವೇದವ್ಯಾಸರಿಂದ, ಇಂಥಾ ಜೀವಿಗಳ ಮೇಲಿನ ಅನುಕಂಪೆಯಿಂದ, ಅವರ ಉದ್ಧಾರಕ್ಕಗಿಯೇ, ಸಕಲ ವೇದೋಪನಿಷತ್ತುಗಳ ಸಾರಭೂತವಾದ, ಐದನೆಯ ವೇದವೆಂದು ಖ್ಯಾತವಾದ ಮಹಾಭಾರತವೆಂಬ ಆಖ್ಯಾನವು ರಚಿಸಲ್ಪಟ್ಟಿತು.
ಅಂದರೆ, ಯಾರ ಉದ್ಧಾರಕ್ಕಾಗಿಯೇ ಮಹಾಭಾರತ, ತದಂತರ್ಗತ ಆಖ್ಯಾನೋಪಾಖ್ಯಾನಗಳು, ಗೀತಾ ವಿಷ್ಣುಸಹಸ್ರನಾಮಾದಿ ಸ್ತೋತ್ರಗಳು ರಚಿಸಲ್ಪಟ್ಟಿವೆಯೋ ಅಂಥವರಿಗೇ ನಿಷೇಧ ಹೇರಿ, ಈ ಸ್ತೋತ್ರದಿಂದ ದೂರಮಾಡಿದರೆ ಅದಕ್ಕಿಂತ ಮಿಗಿಲಾದ  ಭಗವದ್ದ್ರೋಹ, ಭಗವದಪಚಾರ ಇದೆಯೇ ? 
ಭಾಗ ೩.
ಈಗ ಹಿರಿಯ ಯತಿವರೇಣ್ಯರ ವ್ಯಾಖ್ಯಾನಗ್ರಂಥದಲ್ಲಿ ಹೇಳಿರುವ ವಿಷಯ ನೋಡೋಣ.
ಸುಮಾರು 1783-1794 ರಲ್ಲಿ ಉತ್ತರಾಧಿಮಠದ ಪರಂಪರೆಯಲ್ಲಿ ಪೀಠದಲ್ಲಿದ್ದ, ಮಹಾ ತಪಸ್ವಿಗಳೂ, ಅಪರೋಕ್ಷಜ್ಞಾನಿಗಳೆಂದೂ ಪ್ರಸಿದ್ಧರಾದ ಸತ್ಯಸಂಧ ತೀರ್ಥರು ತಮ್ಮ ವಿಷ್ಣುಸಹಸ್ರನಾಮ ವ್ಯಾಖ್ಯಾನದಲ್ಲಿ ಹೀಗೆ ಹೇಳುತ್ತಾರೆ.
ಇಹ ನಾನಾವಿಧ ವ್ಯಸನರಾಶಿ ಭವಾವಭುಘ್ನಶಿರಸಾಂ ಕಲಿಮಲಾವಕುಂಠಿತಮನಸಾಂ ನಿಶ್ರೇಯಸಾಧನಸಂವಿದ್ ವಿಧುರಾಣಾಂ ವೇದ ಅನಧಿಕಾರಿಣಾಂ ಸ್ತ್ರೀ ಶೂದ್ರ ಆದೀನಾಂ ಸಂಸಾರಾರ್ಣವ ತಾರಣಾಯ ಮಹಾಕಾರುಣಿಕ ಕಮಲಾಕಮಲಾಸನಸುರವರನಿಕರ ಪ್ರಾರ್ಥಿತೇನ ನಿರ್ವ್ಯಾಜಕರುಣಶ್ರೀರಮಣೇನ ಸ್ವೀಕೃತ ವ್ಯಾಸರೂಪೇಣ ನಿರ್ಮಿತ ಸಹಸ್ರನಾಮಾನಿ ಪೂರ್ವತನೈಃ ವ್ಯಾಖ್ಯಾತಾನ್ಯಪಿ ಬುದ್ಧಿಶುದ್ಧಯೇ ಯಥಾಮತಿ ವ್ಯಾಖ್ಯಾಸ್ಯಂತೇ.
ಅರ್ಥ:
ಇಹ – ಈ ಸಂಸಾರದಲ್ಲಿ,  ನಾನಾವಿಧ ವ್ಯಸನರಾಶಿ – ಅನೇಕಬಗೆಯ ದುಷ್ಕರ್ಮಗಳ ರಾಶಿಯಲ್ಲಿ,  ಭವಾವಭುಘ್ನಶಿರಸಾಂ – ಸಂಸಾರವೆಂಬ ಒರಳುಕಲ್ಲಿನಲ್ಲಿ ಸಿಲುಕಿ ಕಾಲನ ಪೆಟ್ಟಿಗೆ ಒದ್ದಾಡುತ್ತಿರುವ,  ಕಲಿಮಲ – ಕಲಿಗಾಲದ ದೋಷಗಳಿಂದ, ವಕುಂಠಿತಮನಸಾಂ – ನಾನವಿಧವಾಗಿ ಬದ್ಧವಾದ,  ನಿಶ್ರೇಯ – ಮೋಕ್ಷ, ಸಾಧನ – ಸಾಧಕವಾದ, ಸಂವಿತ್ – ಜ್ಞಾನದಿಂದ,   ವಿಧುರಾಣಾಂ – ವಿರಹಿತರಾದವರಿಗೆ,  ವೇದ ಅನಧಿಕಾರಿಣಾಂ – ವೇದಾಧ್ಯಯನಕ್ಕೆ ಕಾಶವಿಲ್ಲದ, ಸ್ತ್ರೀ -  ಮನೆವಾಳ್ತೆಯಲ್ಲಿಯೇದಿನ ಕಳೆಯುವ ಸ್ಥಿತಿಯಲ್ಲಿರುವ ಸ್ತ್ರೀಯರು, ಶೂದ್ರ - ಸ್ವಂತ ಬಲವಿಲ್ಲದ, ಯಾವನೋ ಅನ್ನ ಕೊಡುವ ಧಣಿಯ ಹಂಗಿನಲ್ಲಿದ್ದು ದಿನವೆಲ್ಲಾ ಆ ಯಜಮಾನನ ಆಜ್ಞಾರಾಧಕನಾಗಿ ಬಾಳುತ್ತಿರುವ ಜನ (ಜಾತಿಶೂದ್ರನಲ್ಲ ಗುಣ ಶೂದ್ರ)  ಆದೀನಾಂ – ಇವರೇ ಮೊದಲಾದ ಅನೇಕ ಜೀವಿಗಳಿಗೆ,  ಸಂಸಾರಾರ್ಣವ – ಸಂಸಾರವೆಂಬ ಸಮುದ್ರವನ್ನು,  ತಾರಣಾಯ – ದಾಟಿಸುವುದಕ್ಕೋಸ್ಕರ,  ಮಹಾಕಾರುಣಿಕ – ಅತ್ಯಂತ ಕರುಣಾಶಾಲಿಗಳಾದ,  ಕಮಲಾ – ಲಕ್ಷ್ಮೀ ದೇವ್ೈ, ಕಮಲಾಸನ – ಚತುರ್ಮುಖ ಬ್ರಹ್ಮ, ಸುರವರನಿಕರ – ದೇವತಾಶ್ರೇಷ್ಠರಾದ ಇಂದ್ರಾದಿ ದೇವತೆಗಳಿಂದ,  ಪ್ರಾರ್ಥಿತೇನ – ಪ್ರಾರ್ಥಿತನಾದ,  ನಿರ್ವ್ಯಾಜಕರುಣ – ಯಾವ ನೆಪ ಕಾರಣಗಳ ಹಂಗಿಲ್ಲದೇ ಸಮಸ್ತ ಜೀವಸಂಕುಲಕ್ಕೆ ಕರುಣೆ ತೋರುವ ಕರುಣಾಸಮುದ್ರನಾದ,  ಶ್ರೀರಮಣೇನ – ಲಕ್ಷ್ಮೀಪತಿಯಾದ ಶ್ರೀಮನ್ನಾರಾಯಣನಿಂದ,  ಸ್ವೀಕೃತ – ತೆಗೆದುಕೊಳ್ಳಲ್ಪಟ್ಟ,  ವ್ಯಾಸರೂಪೇಣ – ಭಗವಾನ್ ವೇದವ್ಯಾಸರೂಪದಿಂದ,  ನಿರ್ಮಿತ – ರಚಿಸಲ್ಪಟ್ಟ,  ಸಹಸ್ರನಾಮಾನಿ – ಸಾವಿರ ಹೆಸರುಗಳು, ( ವಿಷ್ಣುಸಹಸ್ರನಾಮಸ್ತೋತ್ರ) ಪೂರ್ವತನೈಃ – ಪ್ರಾಚೀನರಿಂದ, ವ್ಯಾಖ್ಯಾತಾನಿ ಅಪಿ – ವ್ಯಾಖ್ಯಾನ ಮಡಲ್ಪಟ್ಟಿದ್ದರೂ ಕೂಡ,   ಬುದ್ಧಿಶುದ್ಧಯೇ – ಕಲಿಮಲದಿಂದ ಕಲುಷಿತಗೊಂಡ ಬುದ್ಧಿಯ ಶುದ್ಧೀಕರಣಕ್ಕೋಸ್ಕರ,  ಯಥಾಮತಿ – ತಿಳಿದಮಟ್ಟಿಗೆ,  ವ್ಯಾಖ್ಯಾಸ್ಯಂತೇ – ವ್ಯಾಖ್ಯಾನಿಸಲ್ಪಡುತ್ತಿದೆ.
ಅಂದರೆ, ಸಂಸಾರದ ಕಷ್ಟಗಳಲ್ಲಿ ಮುಳುಗಿರುವ, ಮಕ್ಕಳು ಮತ್ತು ಮನೆವಾಳ್ತೆಗಳಲ್ಲೇ ದಿನ ಕಳೆಯುವ ಸ್ಥಿತಿಯಲ್ಲಿರುವ ಸ್ತ್ರೀಯರು, ಸ್ವಂತ ಬಲವಿಲ್ಲದ, ಯಾವನೋ ಅನ್ನ ಕೊಡುವ ಧಣಿಯ ಹಂಗಿನಲ್ಲಿದ್ದು ದಿನವೆಲ್ಲಾ ಆ ಯಜಮಾನನ ಆಜ್ಞಾರಾಧಕನಾಗಿ ಬಾಳುತ್ತಿರುವ ಶೂದ್ರ (ಜಾತಿಶೂದ್ರನಲ್ಲ ಗುಣ ಶೂದ್ರ) ಮತ್ತು ದ್ವಿಜ ಬಂದು – ವೇದಜ್ಞರಾದ ಬ್ರಾಹ್ಮಣರ ಮನೆತನದಲ್ಲೇ ಹುಟ್ಟಿದರೂ ಕೂಡ ವೇದಾಧ್ಯಯನ ಅಧ್ಯಾಪನಗಳಿಲ್ಲದೇ, ಪೂಜಾ ಆರಾಧನಾದಿ ಸತ್ಕಾರ್ಯಗಳಿಲ್ಲದೇ, ಹೊಟ್ಟೆಪಾಡಿಗಾಗಿ ಇನ್ನೊಬ್ಬರ ಹಂಗಿಗೆ ಬಿದ್ದಿರುವ, ನಾನಾ ದುಶ್ಚಟಗಳಿಗೆ ತುತ್ತಾಗಿರುವ ಜಾತಿ ಬ್ರಾಹ್ಮಣರು ಇಂಥವರಿಗೆ ವೇದಾಧ್ಯಯನವಿರಲಿ ವೇದಗಳನ್ನು ಕೇಳುವುದಕ್ಕೂ ಅವಕಾಶವಿರುವುದಿಲ್ಲ. ಹಾಗಾಗಿ ಅಂಥವರ ಉದ್ಧಾರಕ್ಕೋಸ್ಕರ ಲಕ್ಷ್ಮೀದೇವಿಯೇ ಮೊದಲಾದ ದೇವತಾಗಣಗಳಿಂದ ಪ್ರಾರ್ಥಿಯನಾದ ಭಗವಂತ ವ್ಯಾಸರೂಪದಿಂದ ಮಹಾಭರತವನ್ನೂ ಮತ್ತು ತದಂತರ್ಗತ ವಿಷ್ಣುಸಹಸ್ರನಾಮವನ್ನೂ ರಚಿಸಿದ. ಅಂಥಾ ಸಹಸ್ರನಾಮವನ್ನು ಪ್ರಾಚೀನ ವ್ಯಾಖ್ಯಾನಗಳಿದರೂ ಕೂಡ ಭಗವತ್ ನಾಮ ಚಿಂತನೆಯಮೂಲಕ ಮನಸ್ಸಿನ ಶುದ್ಧೀಕರಣಕ್ಕಾಗಿ ಈ ವ್ಯಾಖ್ಯಾನ ಮಾಡುತ್ತಿದ್ದೇನೆ ಎಂಬುದಾಗಿ ಸತ್ಯಸಂಧ ತೀರ್ಥರಂಥಾ ಮಾಹಾ ಜ್ಞಾನಿಗಳೇ ವಿಷ್ಣು ಸಹಸ್ರನಾಮವು ರಚನೆಯಾದದ್ದೇ ವಿಶೇಷವಾಗಿ ಹೆಂಗಸರು ಮತ್ತು ಇತರರಿಗಾಗಿ ಎಂದು ಸ್ಪಷ್ಟ ಪಡಿಸಿದ್ದಾರೆ. 
ಇದರಿಂದ ಸುಮಾರು ಹದಿನೇಳು ಹದಿನೆನ್ಟನೇ ಶತಮಾನದ ವರೆಗೂ ಈ ರೀತಿಯಾದ ನಿರ್ಬಂಧವಿರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ. 
ಇನ್ನು ಶಂಕರಾಚಾರ್ಯರು ತಮ್ಮ ವ್ಯಾಖ್ಯಾನದಲ್ಲಿ
ಕಿಂ ಜಪನ್ ಮುಚ್ಯತೇ ಜಂತುಃ ಎನ್ನುವಲ್ಲಿ – ಜಂತು ಎಂದರೆ ಜನನ ಮರಣ ಶೀಲವಾದ ಜೀವ ಎಂದೇ ವ್ಯಾಖ್ಯಾನ ಮಾಡಿದ್ದಾರೆ. ಮುಂದೆ 
ವೇದಾಂತಗೋ ಬ್ರಾಹ್ಮಣಃ ಸ್ಯಾತ್ ಕ್ಷತ್ರಿಯೋ ವಿಜಯೀ ಭವೇತ್ | ವೈಶ್ಯೋ ಧನಸಮೃದ್ಧಃ ಸ್ಯಾತ್ ಶೂದ್ರಃ ಸುಖಮವಾಪ್ನುಯಾತ್  ।।
ಎನ್ನುವಲ್ಲಿ ಯಥಾ ಯೋಗ್ಯಂ – ಅಂದರೆ ಅವರವರ ಸಾಧನೆಗೆ ತಕ್ಕಂತೆ ತಮಗೆ ಯೋಗ್ಯವಾದದ್ದನ್ನು ಪಡೆಯುತ್ತಾರೆ ಎಂಬುದಾಗಿ ವಿವರಿಸುತ್ತಾರೆ 
(ಆ ಪರಂಪರೆಯ ವಿದ್ವಾಂಸರು ಹೇಳುವಂತೆ ಆಚಾರ್ಯ ಶಂಕರರು ಎಲ್ಲಿಯೂ ಸ್ತ್ರೀಯರಿಗೆ ನಿಷೇಧ ಹೇಳಿಲ್ಲ)
ರಮಾನುಜ ಪರಂಪರೆಯ, ಸುಮಾರು ಹನ್ನೊಂದು ಹನ್ನೆರಡನೆಯ ಶತಮಾನದಲ್ಲಿದ್ದ ಪರಾಶರ ಭಟ್ಟರು ಕೂಡಾ ತಮ್ಮ ವ್ಯಾಖ್ಯಾನದಲ್ಲಿ ಈ ರೀತಿಯ ನಿಷೇಧವನ್ನು ಹೇಳಿಲ್ಲ ಎಂಬುದಾಗಿ ಅದೇ ಪರಂಪರೆಯ ವಿದ್ವಾಂಸರಿಂದ ಕೇಳಿಬಲ್ಲೆ.
ಇನ್ನು, ಮೋಕ್ಷವೆಂಬುದು ಕೇವಲ ಸನ್ಯಾಸಿಗಳಿಗಷ್ಟೇ ಅಲ್ಲ, ಸ್ತ್ರೀಯರು, ಜನ್ಮತಃ ಶೂದ್ರರಲ್ಲಿ ಕೂಡ ಮೋಕ್ಷಯೋಗ್ಯಜೀವಿಗಳಿದ್ದಾರೆ ಎಂಬುದಾಗಿ ಸಾರಿದ, ಹರಿಭಕ್ತಿ ಪ್ರಸಾರಕ್ಕಾಗಿಯೇ ಅವತರಿಸಿದ
ಆಚಾರ್ಯ ಮಧ್ವರಂತೂ ಈ ರೀತಿಯ ಅಶಾಸ್ತ್ರೀಯ ನಿಷೇಧಗಳನ್ನು ಎಲ್ಲಿಯೂ ಹೇಳಿಲ್ಲವೆಂಬುದು ಸರಿಯೇ ಸರಿ.
ವಾಸ್ತವ ಹೀಗಿರುವಾಗ, ಸ್ತ್ರೀಯರಿಗೆ ವಿಷ್ಣುಸಹಸ್ರನಾಮ ಹೇಳಲು ನಿಷೇಧಿಸುವ ಜನರು ಯಾವ ಆಧಾರದಿಂದ ಹಾಗೆ ನಿಷೇಧ ಹೇರಿದ್ದಾರೆಯೋ ಅವರೇ ಬಲ್ಲರು . ದೇವರ ದಯೆಯಿಂದ ಇದುವರೆಗೂ ಒಬ್ಬ ವಿದ್ವಾಂಸರೂ ಸಾಧಾರವಾಗಿ ಈ ನಿಷೇಧವನ್ನು ನಿರೂಪಿಸಿಲ್ಲ ಎಂಬುದೇ ನಿಜಕ್ಕೂ ಸೋಜಿಗದ ಸಂಗತಿ.
ಯಾರು ಏನೇ  ಹೇಳಿದರೂ ಭೀಷ್ಮರ ಮಾತಿನಂತೆ ಸಮಸ್ತ ಜೀವಜಾತಿಯ ಉದ್ಧಾರಕ್ಕಾಗಿ  ಇರುವಂಥ  ಈ ವಿಷ್ಣುಸಹಸ್ರನಾಮವನ್ನು ಭಕ್ತಿಯಿಂದ ನಿತ್ಯವೂ ಪಠಿಸುವ ಪ್ರಯತ್ನ ಮಾಡೋಣ ಎಂಬುದಾಗಿ ಆಶಿಸುತ್ತಾ ಈ ಸಣ್ಣ ಲೇಖನವನ್ನು ಮುಗಿಸುತ್ತಿದ್ದೇನೆ.

No comments:

Post a Comment