Thursday, July 25, 2019

VAISHNAVA SMAARTA (ವೈಷ್ಣವ, ಸ್ಮಾರ್ತ ತಾರತಮ್ಯ)

ಸಂಗ್ರಹಿತ 
VAISHNAVA SMAARTA (ವೈಷ್ಣವ, ಸ್ಮಾರ್ತ ತಾರತಮ್ಯ)
"ಬ್ರಾಹ್ಮಣರಲ್ಲೆ ವೈಷ್ಣವ, ಸ್ಮಾರ್ತ ಅನ್ನೋ ತಾರತಮ್ಯ ಸರೀನಾ" ಅಂತ....  ಪೂ.ವೆಂಕಟಾಚಲ ಅವಧೂತರ ಶಿಷ್ಯರೊಬ್ಬರು ಹೇಳಿದ್ದು.

ಇದಕ್ಕೆ ಉತ್ತರ ಯೊಚಿಸುತ್ತಾ  ನನ್ನ ಅರಿವಿಗೆ ಎಟುಕಿದ ಕೆಲವು ಮಾತುಗಳನ್ನು ಈ ಬಳಗದಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಜಗತ್ತಿನಲ್ಲಿ ಇರುವ ಎಲ್ಲ ಭಾಷೆಗಳಲ್ಲಿ ಸಂಸ್ಕೃತ ಶ್ರೇಷ್ಠವಾದ ಭಾಷೆ. ಏಕೆಂದರೆ ಇದೊಂದೇ ಭಾಷೆಯಲ್ಲಿ ಪ್ರತಿಯೊಂದು ವಸ್ತುವಿನ ನಾಮಕ್ಕೂ/ಶಬ್ದಕ್ಕೂ ಅದರ ಗುಣವನ್ನು ಹೇಳುವ ಸಾಮರ್ಥ್ಯ ಇರುವುದು ಎನ್ನುತ್ತಾರೆ ಭಾಷಾತಜ್ಞರು (Sanskrit is the only etymological Language in the world)... ವೈಷ್ಣವ, ಸ್ಮಾರ್ತ ಅನ್ನುವ ಶಬ್ದಗಳ ಅರ್ಥವನ್ನು ತಿಳಿದುಕೊಂಡಾಗ ನಮ್ಮ ಅಜ್ಞಾನದಿಂದ ಹುಟ್ಟಿಕೊಂಡ ಈ ತಾರತಮ್ಯಗಳೆಲ್ಲವೂ ಹೊರಟುಹೋಗುತ್ತವೆ. 

ನಾವು ಅನೇಕ ಸಂಸ್ಕೃತ ಮಂತ್ರಗಳನ್ನು ಹೇಳುವಾಗ ಕೇಳಿರುತ್ತೇವೆ, ಆದರೆ ಅದರ ಅರ್ಥ ನಮ್ಮ ಅರಿವಿಗೆ ಬಂದರೆ ನಮ್ಮ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಅಲ್ಲೇ ಇರುತ್ತದೆ. 
ಉದಾ :  "ಶ್ರೌತ ಸ್ಮಾರ್ತ ನಿತ್ಯಕರ್ಮಾನುಷ್ಠಾನ ಯೋಗ್ಯತಾ ಸಿದ್ದ್ಯರ್ಥಂ ಯಜ್ಞೋಪವೀತಧಾರಣಂ ಚ ಕರಿಷ್ಯೆ" ಅಂತಲೇ ಎಲ್ಲರೂ ಸಂಕಲ್ಪಮಾಡುವುದು. ಇಲ್ಲಿ ಶ್ರುತಿ ಸ್ಮೃತಿಗಳಿಗನುಸಾರವಾಗಿ (ಶ್ರುತಿ ಸ್ಮೃತಿಗಳು ಅಂದರೆ ವೇದಗಳು) ಕರ್ಮಗಳನ್ನು ಮಾಡುವವರು "ಶ್ರೌತರು"... ಸ್ಮೃತಿಗಳಿಗನುಸಾರವಾಗಿ ಕರ್ಮಗಳನ್ನು ಮಾಡುವವರು "ಸ್ಮಾರ್ತರು" ಅಂತ ಅರ್ಥ. ವೇದಗಳಲ್ಲಿ ಏನು ಹೇಳಿದ್ದಾರೋ ಅದನ್ನೇ  "ಸ್ಮೃತಿಕಾರರು" ಆಯ್ಕೆಮಾಡಿಕೊಂಡು, ವಿಸ್ತರಿಸಿ ಎಲ್ಲರಿಗೂ ಕರ್ಮಾಚರಣೆಯಲ್ಲಿ ಅನುಕೂಲವಾಗುವಂತೆ ಸ್ಮೃತಿಗ್ರಂಥಗಳನ್ನು/ಧರ್ಮಗ್ರಂಥಗಳನ್ನು ರಚಿಸಿ ಹೋಗಿದ್ದಾರೆ (ಉದಾ: ಮನುಸ್ಮೃತಿ, ಯಾಜ್ಞವಲ್ಕ್ಯಸ್ಮೃತಿ, ಪರಾಶರಸ್ಮೃತಿ... ಇತ್ಯಾದಿ) ಆದ್ದರಿಂದ ಮೂಲತಃ ಎಲ್ಲ ಬ್ರಾಹ್ಮಣರೂ "ಸ್ಮಾರ್ತರೆ".... ಅಂದರೆ ಶ್ರುತಿ-ಸ್ಮೃತಿಗಳಿಗನುಸಾರವಾಗಿ ಕರ್ಮಾನುಷ್ಠಾನ ಮಾಡುವವರು ಎಂಬುದು "ಸ್ಮಾರ್ತ" ಶಬ್ದದ ಅರ್ಥ.... ಹಾಗೆಂದ ಮೇಲೆ ವೈಷ್ಣವರು ಸ್ಮಾರ್ತರಲ್ಲವೆ ? ಖಂಡಿತಾ ಹೌದು !!  ಇದೆಲ್ಲ ವಿಷಯಗಳು ತಿಳಿದಾಗ ಬ್ರಾಹ್ಮಣರಲ್ಲಿ ಜಗಳವಿರುವುದಿಲ್ಲ  / ಭಿನ್ನಾಭಿಪ್ರಾಯಗಳು ಇರುವುದಿಲ್ಲ... 

ಈಗ ವೈಷ್ಣವರು "ವಿಷ್ಣು" ಪಾರಮ್ಯವನ್ನು ಒಪ್ಪುವವರು ಅನ್ನುತ್ತೀರಾ ?. ಹಾಗಾದರೆ ವಿಷ್ಣು ಶಬ್ದ ಏನು ಹೇಳುತ್ತದೆ ನೋಡೋಣ- ವೇವೇಷ್ಟಿ-ವಿಷಲ್ ವ್ಯಾಪ್ತೌ, ಎಂಬ ವಿಷ್ಣು ಶಬ್ದದ ನಿರ್ವಚನದಿಂದ ತಿಳಿಯುವ ಅರ್ಥ, ಎಲ್ಲ ಕಡೆಯೂ ತುಂಬಿರುವವನು, ಸರ್ವಶಕ್ತ, ಸರ್ವವ್ಯಾಪಿ, ವಿಶಂತಿ ಸರ್ವಭೂತಾನಿ - ಎಲ್ಲ ಜೀವಿಗಳ ಒಳಗೆ ಪ್ರವೇಶಿಸುವವ... ಹೀಗೆ ಭಗವಂತನ ಅನೇಕ ಗುಣಗಳನ್ನು ಹೇಳುವ ನಾಮ "ವಿಷ್ಣು" ... ಹಾಗಾದರೆ ವಿಷ್ಣು ಯಾರಿಗೆ ದೇವರಲ್ಲ ಹೇಳಿ ? ಕೇವಲ ವೈಷ್ಣವರಿಗೆ ಮಾತ್ರ ವಿಷ್ಣು ದೇವನೆ.... 
ಹಾಗೇ, ಶಿವನ ನಾಮ ವಿಷ್ಣುಸಹಸ್ರನಾಮದಲ್ಲಿ ಬಂದಿಲ್ಲವೇ "ಸರ್ವಃ ಶರ್ವಃ ಶಿವಃ ಸ್ಥಾಣುರ್ಭೂತಾದಿರ್ನಿಧಿರವ್ಯಯಃ..." ಅದರಿಂದ ಶಿವ ನಾಮವೂ ಭಗವಂತನ ನಾಮವಾಯಿತಲ್ಲವೇ... 
ದೇವರು ಒಬ್ಬನೇ ! ಆದರೆ, ಅವನ ನಾಮ ಹಲವು.... ಅದನ್ನರಿತು ನಡೆದಾಗ ಯಾವುದೂ ಗೊಂದಲವಿಲ್ಲ... ಅದನ್ನೆ ಶ್ವೇತಾಶ್ವತರೋಪನಿಷತ್ ಹೀಗೆ ಹೇಳಿತು : 
ಏಕೋ ದೇವಃ ಸರ್ವಭೂತೇಷು ಗೂಢಃ 
ಸರ್ವವ್ಯಾಪಿ ಸರ್ವಭೂತಾಂತರಾತ್ಮಾ ।
ಕರ್ಮಾಧ್ಯಕ್ಷಃ ಸರ್ವಭೂತಾಧಿವಾಸಃ
ಸಾಕ್ಷಿ ಚೇತಾ ಕೇವಲೋ ನಿರ್ಗುಣಶ್ಚ   ।।

ಕೊನೆಯದಾಗಿ ಒಂದು ಕಥೆ ಹೇಳಿ ಮುಕ್ತಾಯ ಮಾಡುತ್ತೇನೆ  : 
ಒಮ್ಮೆ ಅವಧೂತರ ಬಳಿ ಒಬ್ಬರು ಬಂದು ಒಂದು ಪ್ರಶ್ನೆ ಹಾಕಿದರು - ವಿಷ್ಣು ಮತ್ತು ಶಿವರಲ್ಲಿ ಯಾರು ಶ್ರೇಷ್ಠರು ? ಅಂತ. ಅದಕ್ಕೆ ಅವಧೂತರು ಮುಗುಳ್ನಗುತ್ತಾ ಕೊಟ್ಟ ಉತ್ತರ ತುಂಬ ಸರಳ ಹಾಗು ರೋಚಕವಾಗಿತ್ತು. ಅವರು ಮಾಡಿದ್ದು ಇಷ್ಟೇ ! ಅಲ್ಲಿಯೇ ಇದ್ದ ಒಂದು ತೆಂಗಿನ ಮರವನ್ನು ತೋರಿಸಿ, ಪ್ರಶ್ನೆಹಾಕಿದಾತನಿಗೆ ಅವರೊಂದು ಪ್ರಶ್ನೆ ಹಾಕಿದರು... "ನೊಡಪ್ಪಾ ! ಈ ತೆಂಗಿನ ಮರದಲ್ಲಿರುವ ಕಾಯಿ ಶ್ರೇಷ್ಠವೋ, ಗರಿ ಶ್ರೇಷ್ಠವೋ ? ಅಂತ.... " ಅವಧೂತರ ಪ್ರಶ್ನೆಗೆ ಉತ್ತರಿಸಲು ಆತನಿಗೆ ಮುಜುಗರವಾಯಿತು.... ಆಗ ಅವಧೂತರೆ ಹೇಳುತ್ತಾರೆ - "ಅವನವನ ಅವಶ್ಯಕತೆಯ ಮೇಲೆ ಇದು ಅವಲಂಭಿತವಾಗಿದೆಯಲ್ಲವೇ, ಒಂದು ವೇಳೆ ಅಡುಗೆಗೆ ಕಾಯಿ ಬೇಕಾಗಿದ್ದರೆ ಒಬ್ಬ ಕಾಯಿ ಕೊಯ್ತಾನೆ, ಒಬ್ಬನಿಗೆ ಮನೆಯ ಸಮಾರಂಭಕ್ಕೆ ಚಪ್ಪರ ಹಾಕಲು ಗರಿ ಬೇಕಾಗಿದೆ, ಆಗ ಅವ ಗರಿ ಕೊಯ್ತಾನೆ !!... ಆತನನ್ನು ಕರೆದು ಗರಿಗಿಂತ ಕಾಯಿ ಶ್ರೇಷ್ಠ ! ಕಾಯಿ ಕೊಂಡು ಹೋಗು ಅಂತ ಹೇಳಲಿಕ್ಕಾಗುತ್ತದೆಯೆ.... ಹಾಗೆ ಅವರವರ ಅವಶ್ಯಕತೆಯಂತೆ/ಮನದಿಚ್ಛೆಯಂತೆ ಬದುಕಿನ ನಡೆಯಲ್ಲೂ ಭಗವಂತನ ನಾಮ ಕೂಡ ಅಂತ ಹೇಳಿ ಹೊರಟು ಹೋಗುತ್ತಾರೆ.... 

ಸಮಾಜದಲ್ಲಿ ಎಲ್ಲಿಯತನಕ ಅರಿವಿನ ಬೆಳಕಿನ ಕೊರತೆ ಇರುತ್ತದೋ ಅಲ್ಲಿಯ ತನಕ ಬ್ರಾಹ್ಮಣರಲ್ಲೇ ಇಂತಹ ವಿಭಾಗಗಳನ್ನು ನಾವು ಕಾಣುತ್ತಿರುತ್ತೇವೆ.

No comments:

Post a Comment