ಸ್ತ್ರೀಕರ್ತೃ ಉತ್ತರ ಕ್ರಿಯಾಪ್ರಯೋಗಃ
ಪ್ರೋ . ಸುಬ್ರಾಯ. ವಿ. ಭಟ್ಟ . ರಾಜೀವಗಾಂಧಿ ಪರಿಸರ ಶೃಂಗೇರಿ
ಜಾರ್ಖಂಡ್ ರಾಜ್ಯದ ಹಜಾರಿಬಾಗ್ ಸಮೀಪದ ದರಿಯಾ ಗ್ರಾಮದ ಒಬ್ಬ ಬಡಬ್ರಾಹ್ಮಣ ಸ್ತ್ರೀಯ ವ್ಯಥೆಯ ಕಥೆಯಿದು. ಆಕೆಯ ಗಂಡ ಒಬ್ಬ ಪೂಜಾರಿ ಮತ್ತು ಬಡರೈತನಾಗಿದ್ದ. ಬಿಸಿಲಿನ ಝಳದಿಂದ ಕಿರಿ ವಯಸ್ಸಿನಲ್ಲಿ ಸತ್ತಾಗ ಅವನ ಅಂತ್ಯ ಸಂಸ್ಕಾರ ಮಾಡಲು ಪತ್ನಿ ಬಸಂತಿ ಮಿಶ್ರಾ ನಿರ್ಧರಿಸಿದಳು. ಅವರಿಗೆ ಗಂಡು ಮಕ್ಕಳಿರಲಿಲ್ಲ. ಇದ್ದವಳು ಒಬ್ಬ ಐದು ವರ್ಷದ ಹೆಣ್ಣು ಮಗಳಷ್ಟೆ. ಯಥಾಪ್ರಕಾರ ಸಾಂಪ್ರದಾಯಿಕರ ವಿರೋಧ ವ್ಯಕ್ತವಾಯಿತು. ಗಂಡು ಮಕ್ಕಳಿಲ್ಲದ ಕಾರಣ ತಾನು ಅಂತ್ಯ ಸಂಸ್ಕಾರ ಮಾಡಬಹುದೆಂಬ ಅವಳ ವಾದವನ್ನು ಸಂಪ್ರದಾಯದ ಹೆಸರಿನಲ್ಲಿ ಜನ ಒಪ್ಪಲಿಲ್ಲ. ಆದರೆ ತನ್ನ ನಿಲುವಿಗೆ ಬದ್ಧಳಾದ ಅವಳು ಅಂದು ಮಧ್ಯಾಹ್ನ ಗಂಡನ ಚಿತೆ ಸಿದ್ಧಪಡಿಸಿ ಅಗ್ನಿಸ್ಪರ್ಶ ಮಾಡಿದಳು. ಅಂತ್ಯ ಸಂಸ್ಕಾರ ಮಾಡುವವರು ಕೇಶಮುಂಡನ ಮಾಡಿಸಿಕೊಳ್ಳಬೇಕು, ಬಸಂತಿ ಮಾಡಿಸಿಕೊಂಡಿರಲಿಲ್ಲವಾಗಿ ಆಕೆ ದಶಾಕರ್ಮದ ದಿನ ಮುಂಡನ ಮಾಡಿಸಿಕೊಳ್ಳಲೇಬೇಕೆಂದು ಅವಳನ್ನು ಒತ್ತಾಯಿಸಲಾತು. ವಿಧಿಯಿಲ್ಲದೆ ಮುಂಡನ ಮಾಡಿಸಿಕೊಂಡ ಆಕೆ ಹೇಳಿದ್ದು: "ನಾನು ಅವರು ಹೇಳಿದಂತೆ ಮಾಡಿದೆ. ವಿರೋಧಿಸಿ ನಾನು ಎಲ್ಲಿಗೆ ಹೋಗಲಿ? ನನ್ನ ಗಂಡ ಹೋಗಿಬಿಟ್ಟ ಮತ್ತು ನಾನು ಈ ಸಮಾಜದಲ್ಲೇ ಬದುಕಬೇಕಲ್ಲಾ!" ಗ್ರಾಮದ ಇತರ ಹೆಣ್ಣುಮಕ್ಕಳಿಗೆ ಸಿಟ್ಟು ಉಕ್ಕಿ ಬರುತ್ತಿದ್ದರೂ ಅವರಿಗೆ ಮಾತನಾಡಲು ಧೈರ್ಯವಿರಲಿಲ್ಲ.
ನಮ್ಮ ಕರ್ನಾಟಕದ್ದೇ ಈ ಉದಾಹರಣೆ ಚೀಫ್ ಅಕೌಂಟೆಂಟ್ ಬಿ.ಜಿ.ಇಂದಿರಮ್ಮ ಒಬ್ಬ ಕೆ.ಎ.ಎಸ್. ಅಧಿಕಾರಿ. ಕೆಲವು ವರ್ಷಗಳ ಹಿಂದೆ ಅವರ ತಂದೆ ಬೆಳಗೊಳ ಗ್ರಾಮದ ಗೋವಿಂದೇಗೌಡ ಮೃತರಾದಾಗ ಅವರ ನಾಲ್ಕನೆಯ ಮಗಳಾದ ಈಕೆ ಬಲಮುರಿಯಲ್ಲಿ ತಂದೆಯ ಅಂತ್ಯ ಸಂಸ್ಕಾರ ಮಾಡಿದ್ದಲ್ಲದೆ ೧೧ನೆಯ ದಿನ ಸಂಪ್ರದಾಯದಂತೆ ಕೇಶಮುಂಡನವನ್ನೂ ಮಾಡಿಸಿಕೊಂಡರು. ತಾಯಿ ಸತ್ತಾಗ ಚಿತಾಭಸ್ಮವನ್ನು ವಾರಣಾಸಿಗೆ ಕೊಂಡೊಯ್ದು ಗಂಗೆಯಲ್ಲಿ ವಿಸರ್ಜಿಸಿದ್ದ ಇವರು, ತಂದೆಯ ಚಿತಾಭಸ್ಮವನ್ನು ಕಾವೇರಿಯಲ್ಲಿ ವಿಸರ್ಜಿಸಿದರು. "ನಮ್ಮ ತಂದೆ-ತಾಯಿಗೆ ನಾವು ಐವರು ಹೆಣ್ಣು ಮಕ್ಕಳು. ಅವರಿಗೆ ಗೌರವ ಕೊಡುವುದು ನಮ್ಮ ಕರ್ತವ್ಯ. ಅದರಲ್ಲಿ ತಪ್ಪೇನಿದೆ?" ಎಂಬುದು ಇಂದಿರಮ್ಮನವರ ಪ್ರಶ್ನೆ. ಇಂದಿರಮ್ಮನವರು ಸ್ವತಃ ವಿವಾಹಿತರಾಗಿದ್ದೂ ಕೇಶಮುಂಡನ ಮಾಡಿಸಿಕೊಂಡಿದ್ದು ಸರಿಯಲ್ಲವೆಂದು ಕೆಲವರು ಬಂಧುಗಳು ಆಕ್ಷೇಪಿಸಿದ್ದರೆ, ಕೆಲವರು ಬಂಧುಗಳು ಬೆಂಬಲಿಸಿದ್ದರು.
No comments:
Post a Comment