Friday, July 15, 2022

*GOVINDARAJA SHOBHANA GITA ಶ್ರೀ ಲಕ್ಷ್ಮೀ ಗೋವಿಂದರಾಜ ಶೋಭನ ಗೀತ

SHRI LAKSHMI GOVINDARAAJA SHOBHANA GEETA     
(ನಿವರಗಿ ತುಳಸಕ್ಕ ವಿರಚಿತ)
ಶ್ರೀ ಲಕ್ಷ್ಮೀ ಗೋವಿಂದರಾಜ ಶೋಭನ ಗೀತ
ಶ್ರೀ ಸರ್ವಮಂಗಳದಾಯಕರಾದ ಶ್ರೀಮಹಾಲಕ್ಷ್ಮೀದೇವಿಯ ಮತ್ತು ಶ್ರೀಗೋವಿಂದರಾಜನ ಮಂಗಳ ಮಹಿಮೆಯನ್ನು ನಿರೂಪಿಸಲು ಪ್ರವೃತ್ತವಾಗುವ ಈ ಮಂಗಳ ಸ್ವರೂಪದ ಗೀತೆಗೆ, ಶಿಷ್ಟಾಚಾರದಂತೆ ಆರಂಭದಲ್ಲಿ ಸ್ತುತಿರೂಪದ ಮಂಗಳವನ್ನು ಹಾಡಿ ಪ್ರಾರಂಭಿಸುವ ವಾಡಿಕೆಇದೆ.

          ಜಗತ್ತಿನ ಸೃಷ್ಟಿ , ಸ್ಥಿತಿ , ಲಯಾದಿ ಸರ್ವವನ್ನೂ ನಿರ್ವಹಿಸಲು ಸಮರ್ಥರಾದ ಶ್ರೀ ಮಹಾಲಕ್ಷ್ಮಿಸಹಿತ  ಗೋವಿಂದರಾಜ ದೇವರ ಕೃಪಾ ಕಟಾಕ್ಷದಿಂದ ಈ ವಿಧದ  ಸ್ತೋತ್ರವಲ್ಲದೆ ಬೇರಾವುದು ಮಂಗಳವೆನಿಸಲಾರದು. ಶ್ರೀ ಭಗವತಿ ಲಕ್ಷ್ಮೀ ದೇವಿಯು ಕೇವಲ ತನ್ನನ್ನು ಆರಾಧಿಸಿದರೆ ಪ್ರಸನ್ನಳಾಗುವುದಿಲ್ಲ ಜೊತೆಯಲ್ಲಿ ಶ್ರೀ ಗೋವಿಂದರಾಜ ದೇವರನ್ನೂ ಪೂಜಿಸಿದವರಿಗೆ ಮಾತ್ರ ಫಲಕೊಡುತ್ತಾಳೆ ಎಂಬ ಉಕ್ತಿಯು ಶ್ರೀ ಸೂಕ್ತದಲ್ಲಿವ್ಯಕ್ತವಾಗಿದೆ.
          ಗೃಹಲಕ್ಷ್ಮಿಯರೆನಿಸಿರುವ ಸ್ತ್ರೀಯರು, ಕರ್ತೃತ್ವ  ಹೊಂದಿರುವ ಪುರುಷರೂ ಮಕ್ಕಳೂ ಈ "ಅಶ್ವತ್ಥ ನಿಂಬಕಾವಿರ್ಭವ" ಶ್ರೀ ಲಕ್ಷ್ಮೀ ಗೋವಿಂದರಾಜ ಶೋಭನ ಗೀತೆ "ಯನ್ನು ದಿನನಿತ್ಯ, ನೈಮಿತ್ತಿಕವಾಗಿ, ಅಥವಾ ವಿಶೇಷವಾಗಿ ಹಾಡಿಕೊಂಡು ಶ್ರೀಮಹಾ ಸನ್ನಿಧಾನದಿಂದ ಸುಮಂಗಳೆಯರೆನಿಸಿ, ವಿಜಯೀ ಪುರುಷರೆನಿಸಿ ಹಾಗೂ ಕುಟುಂಬವರ್ಗದವರ, ಮಕ್ಕಳ  ಸೌಭಾಗ್ಯವನ್ನು ಸಾಧಿಸಲೆಂಬ ಕಾರಣದಿಂದ ಈ ಹಾಡನ್ನು ನಿವರಗಿ ಗ್ರಾಮದೇವರಾದ ಶ್ರೀ ಸಂಗಮೇಶ್ವರ ಶ್ರೀ ಮಹಾಲಕ್ಷ್ಮಿದೇವರ ಸನ್ನಿಧಿಯಲ್ಲಿ ಭಕ್ತರು ಅಪೇಕ್ಷೆ ಪೂರೈಸಿದ್ದಾರೆ.  ಬ್ರಹ್ಮಾದಿ ಸಕಲ ದೇವತೆಗಳಿಗೂ, ಮುಕ್ತಿಯೋಗ್ಯ ಜೀವರಿಗೂ ದೇವರು  ಅನುಗ್ರಹಿಸಲಿ, ಅತ್ಯವಶ್ಯಕವಿದ್ದಾಗ ಪಾಮರರಾದ ನಮಗೆ ದಾರಿದೀಪವಾಗಲಿ ಎಂದು ನಿತ್ಯವಿಯೋಗಿ ಯಜ್ಞೇಶನಾದ ಶ್ರೀ ಲಕ್ಷ್ಮೀ ಗೋವಿಂದನ ತೊರೆದು ಭಗವದ್ ಉಪಾಸನೆಯೇ ಇಲ್ಲ ಎಂಬುದು ಮಾತ್ರ ಖಚಿತ.
ಶ್ರೀ ಅಶ್ವತ್ಥ ನಿಂಬಕಾವಿರ್ಭವ ಶ್ರೀ ರಾಮ ಕೃಷ್ಣ ವೇದವ್ಯಾಸಾತ್ಮಕ ಭಾರತೀರಮಣ ಮುಖ್ಯ ಪ್ರಆಣಆಂತರ್ಗತ ಶ್ರೀ ಲಕ್ಷ್ಮೀ ಗೋವಿಂದರಾಜ ಶೋಭನ ಗೀತೆ ಪಾರಂಪಾರಿಕವಾಗಿ ಹಾಡುವ ತೆರ ರಚಿಸಲು ಪ್ರಯಾಸ ಮಾಡಿದ್ದಾರೆ. ಇದನ್ನು ಹಾಡಿದವರಿಗೂ, ಕೇಳುಗರಿಗೂ, ಸಂಗ್ರಹದಲ್ಲಿ ಇಟ್ಟವರಿಗೂ ಸರ್ವಾಭೀಷ್ಟವನ್ನು ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ.
ಶ್ರೀ ಲಕ್ಷ್ಮೀ ಗೋವಿಂದರಾಜ ಶೋಭನ ಗೀತ 
ಶೋಭಾನವೆನ್ನಿರೆ ಶ್ರೀ ಕ್ಷೇತ್ರ ರಾಜನಿಗೆ 
ಶೋಭಾನವೆನ್ನಿ ವೃಕ್ಷಕ್ಕೆ 
ಶೋಭಾನವೆನ್ನಿ ಅಶ್ವತ್ಥ ವೃಕ್ಷಕ್ಕೆ ಗೋವಿಂದಪುರವರಧೀಶನಿಗೆ ..|| ಪಲ್ಲ || ..ಶೋಭಾನವ
ಸನ್ನದ್ಧ ಪ್ರಭುವಿನ ಕೈಯಲ್ಲಿ ಚಕ್ರವು 
ಸನ್ನಿಧಿ ಶಂಖ ಗದೆಯನ್ನು 
ಸನ್ನಿಧಿ ಶಂಖ ಗದೆಯನ್ನು ಶರ ಚಾಪ ಅಭಯ  ಪ್ರದಾನ ಮಾಡುತಲಿ  || 1 || ....ಶೋಭಾನವ
ಉತ್ತುಂಗ ಪೀಠದಿ ಉದ್ಭವವಾಗಿರ್ಪ 
ಉತ್ಪತ್ತಿ ಸ್ಥಿತಿ ಲಯಕಾರಕನು 
ಉತ್ಪತ್ತಿ ಸ್ಥಿತಿ ಲಯಕಾರಕ ಜಗಧೀಶ ಯೋಗ ಸಂಭೂತ ಸ್ಥಿರವಾಗಿ   || 2 || ....ಶೋಭಾನವ
ಪಟ್ಟೆ ಪಿತಾಂಬರವ ಉಪವಸ್ತ್ರವು ಮೇಲೆ    
ಕಟ್ಟಿ ಕೌಸ್ತುಭ ಹಾರವ 
ಕಟ್ಟಿ ಕೌಸ್ತುಭ ಹಾರ ವಾರಿಜ ಪಾದದಿ ಪನ್ನಗಫ  ಣಿಯು  ಮೇಲಲ್ಲಿ      || 3 || ....ಶೋಭಾನವ
ವಾಮದಿ ಶ್ರೀಲಕ್ಷ್ಮೀ ಚಂದ್ರಲೇ ದಕ್ಷಿಣದಿ 
ಈರ್ವ ಕಳತ್ರ ವೈಭವದಿ 
ಈರ್ವ ಕಳತ್ರ ವೈಭವ ವಿಶ್ವೇಶ ದೇವನು ಗರುಡಾರೂಢನು    || 4 || ....ಶೋಭಾನವ
ಪಂಕಜ ಶ್ರೀ ಪೀಠೆ ಅಭಯ ಧನಧಾನ್ಯವ 
ಸೋಂಕು ಸರ್ವತ್ರ ಆದ್ಯಂತೆ 
ಸೋಂಕು ಸರ್ವತ್ರ ಲೋಕಕ್ಕೆ ಸಂಪತ್ತಿ ಅಖಿಲ ಸಿದ್ಧಿಯ ಕೊಡುತಿರಲು || 5 || ....ಶೋಭಾನವ
ಸರ್ವಜ್ಞೆ ಚಂದ್ರಲೇ ದುಃಖ ಹರೇ ದೇವಿ 
ಸರ್ವ ದುಷ್ಟಾಭಯಂಕರಿ
ಸರ್ವ ದುಷ್ಟಾ ಭಯಕರಿ ದೇವಿಯು ಕೈಯಲ್ಲಿ ಖಡ್ಗವ ಹಿಡಿದಿಹಳು    || 6 || ....ಶೋಭಾನವ
ಮಿತ್ರಾವರುಣಿ ಊರ್ವಸಿ ದೆಸೆಯಿಂ ಪ- 
ವಿತ್ರ  ಘಟೋದ್ಭವ  ಜನಿಸಿದರು 
ಪುತ್ರ  ಘಟೋದ್ಭವ ಸತಿಯು ಲೋಪಾಮುದ್ರೆ ಕರ್ತರು ದಾರ್ಢ್ಯಅಚ್ಯುತರು || 7 || ....ಶೋಭಾನವ
ದಾರ್ಢ್ಯಸುತನು ತಾನೇ ಬ್ರಹ್ಮಚಾರಿಯಾಗಿ 
ಆಢ್ಯ ಗೋವಾಸಿ ಆಶ್ರಮದಿ  
ಆಢ್ಯ ಗೋವಾಸಿ ಆಶ್ರಮದಿ ಸಹ ಉದರ ಅಚ್ಯುತಾಚಾರ್ಯ ಜೊತೆಯಾಗಿ || 8 || ....ಶೋಭಾನವ
ವಾರಣಾಸಿಯ ಸಿದ್ಧಾಶ್ರಮದಲ್ಲಿ 
ವೀರರಾಗಸ್ತ್ಯ ಅಸ್ತಿತ್ವ 
ವೀರರಾಗಸ್ತ್ಯ ತಪದಿಂದ ಶ್ರೀ ಕಾಶೀ ವಿಶ್ವೇಶ್ವರನ ಹೊಂದಿಹರು || 9 || ....ಶೋಭಾನವ
ವೇದಾದೀ  ವಿದ್ಯೆಯು ಶರ ಚಾಪದಾಯೋಗ 
ಕಾದಾಡೋ ಕ್ಷಾತ್ರ ವಿದ್ಯೆಯ 
ಕಾದಾಡೋ ವಿದ್ಯೆಯ ಶರಾದೀ –ಶಾಪಾದೀ ಸ್ಕಂದದೇವನಿಂ ಕಲಿತಿರಲು || 10 || ....ಶೋಭಾನವ
ರುದ್ರ ಪ್ರೇರಣೆಯಿಂದ ಲೋಕ ಹಿತಾರ್ಥಕ್ಕೆ 
ಭದ್ರ ಬುನಾದಿ ಅನುನಯವ 
ಭದ್ರ ಬುನಾದಿ ನಾರದರಿಂದಲೇ ವೈಷ್ಣವ  ತತ್ವ ಸಾರಿದರು      || 11 || ....ಶೋಭಾನವ
ದಕ್ಷಿಣ ರಾಕ್ಷಸ ವಿಧ್ವಂಸ ಮಾಡುತ್ತ 
ರುಕ್ಷ ವಿಂಧ್ಯದ ಸೊಕ್ಕನ್ನು 
ರುಕ್ಷ ವಿಂಧ್ಯದ ಸೊಕ್ಕನ್ನು ಅಡಗಿಸಿ ವಾತಾಪಿ ಇಲ್ವಲ ವಧಿಸಿದರು || 12 ||  ....ಶೋಭಾನವ
ಅವಂತಿ ಪುರ ರಾಜ ವಿಕ್ರಮಾರ್ಕನಿಂಗೆ 
ಭಾವ ಸ್ವಪ್ನದಲಿ ರಾಕ್ಷಸಿಯ  
ಭಾವದಿ ಸ್ವಪ್ನದ ರಾಕ್ಷಸಿ ವಧಿಸಲು ಚಕ್ರವರ್ತಿಯು ತಾ ಆಗಿಹನು|| 13 ||  ....ಶೋಭಾನವ
ಭೀಮರಥಿಯದು ದಕ್ಷಿಣವಾಹಿನಿಯಾಗಿ
ಸಮವಿಲ್ಲದಾ ಭರ ಪ್ರವಹಿಪುದು
ಸಮವಿಲ್ಲದಾ ಭರದ ತಟದಲ್ಲಿ ದೇವ ಸಾನಿಧ್ಯವ ನೋಡಲ್ಲಿ       || 14 ||  ....ಶೋಭಾನವ
ಉನ್ನತ ಪೀಠವು ಉತ್ತುಂಗ ಶಿಲೆಯಲ್ಲಿ
ಮಾನ್ಯ ಗೋವಿಂದ ವೃಕ್ಷದಲಿ 
ಮಾನ್ಯ ಗೋವಿಂದ ವೃಕ್ಷವು ಅಶ್ವತ್ಥ ನಿಂಬಕ ಬಿಂಬದಲ್ಲಿಯೇ  || 15 ||  ....ಶೋಭಾನವ
ಪಿಪ್ಪಲ ಸೊಕ್ಕನ್ನು ಶನಿದೇವ ದಮನಿಸಿ 
ಇರ್ಪ ಅಶ್ವತ್ಥ ವೃಕ್ಷಕ್ಕೆ 
ಇರ್ಪ ಅಶ್ವತ್ಥ ತರು ಗರ್ವ ಹರಣವ ಅಗಸ್ತ್ಯ ಮುನಿಗಳು ಗೈದಿಹರು ||16 ||  ....ಶೋಭಾನವ
ಅಶ್ವತ್ಥ ಪಿಪ್ಪಲ ತರುಗಳ ಸ್ಪರ್ಧೆಯ 
ಶಾಶ್ವತವಾಗಿ ಹಿಮ್ಮೆಟ್ಟಿ 
ಶಾಶ್ವತವಾಗಿ ಹಿಮ್ಮೆಟ್ಟಿ ತರುಗಳಿಗೆ ಪೂಜ್ಯ ರೂಪವ ಕೊಟ್ಟಿಹರು || 17 ||  ....ಶೋಭಾನವ
ಲಿಂಗ ರೂಪದ ರುದ್ರ ಸಿದ್ಧಿವಿನಾಯಕ ಅ –
ನಂಗ ಶೇಷ ಮರುತನ ಅ
ನಂಗ ಶೇಷ ಮರುತರು ಎದುರಲ್ಲಿ ವಿಹಿತ ಮೂರ್ತಿಯ ರೂಪದಿ  || 18 ||  ....ಶೋಭಾನವ
ರಕ್ಷಾಟ ಮಲ್ಲನ ರಾಕ್ಷಸ ವೃತ್ತಿಯದು 
ತೀಕ್ಷ್ಣವಾಗಿಯೇ ಪರಿಸರದಿ    
ತೀಕ್ಷ್ಣವಾಗಿಹ ಪರಿಸರ ರಕ್ಷಿಸಲು ರಕ್ಕಸರೂಪ ಬಿಡಿಸಿದರು    || 19 ||  ....ಶೋಭಾನವ
ಅಗಸ್ತ್ಯ ಮುನಿಗಳು  ರಕ್ಷಾಟ ಮಲ್ಲನ
ಅಗತ್ಯದಲಿ ಭೂತರಾಜನೆಂದು  
ಅಗತ್ಯದಲಿ ಭೂತರಾಜನ ತೊಡಗಿಸೆ ಲೋಕ ರಕ್ಷಣಕೆ ಮುಂದಾಗಿ || 20 ||  ....ಶೋಭಾನವ
ವಿಜಯ ಎರೆಯರೆಂಬ ಕಿರಾತ ದುಷ್ಟರು 
ನಿಜದಲಿ ಶಿಷ್ಟರ ಭಯ ಪಡಿಸೆ 
ನಿಜದಲಿ ಶಿಷ್ಟರ ಭಯದಿಂದ ಮುಕ್ತರ ಮಾಡಿದ ಮಹಾ ಯತಿಗಳು || 21 ||  ....ಶೋಭಾನವ
ಕಲಶೋದ್ಭವ ಸುತ ಅಚ್ಯುತ ಋಷಿಯಿಂದ 
ಮೂಲ ಕಟ್ಟಿಯ ಮನೆತನವು 
ನೀಲ ಮೇಘಶ್ಯಾಮ ಗೋವಿಂದರಾಜನ ಆದ್ಯ ಪುಜಕರೂ ಅವರೆಲ್ಲ || 22 ||  ....ಶೋಭಾನವ
ಅಚ್ಯುತ ಆಚಾರ್ಯರಿಂದಲೇ ಮನೆತನ 
ನಿಚ್ಚಳವಾಗಿ ಹರಡುತ್ತ
ನಿಚ್ಚಳವಾಗಿ ಹರಡುತ್ತ ಗೋವಿಂದ ಮಾಧವ ನೃಸಿಂಹರನುವಾಗಿ  || 23 ||  ....ಶೋಭಾನವ
ವಿಕ್ರಮ ಅಚ್ಯುತ ಪಾಂಡುರಂಗಾರ್ಯರು
ಸಕ್ರಿಯದಿ ತಾನೇ ಪೂಜಿಪರು 
ಸಕ್ರಿಯದಿ ಶ್ರೀಯು ತಾನಂತ ರಾಮರು ಸಕ್ತರು ಶ್ರೀದ್ವೈ ಪಾಯನರು || 24 ||  ....ಶೋಭಾನವ
ಆರಾಧಕರೆಂದು ವಿಜೃಂಭಿಸುತಲಿ
ಸಾಕಾರ ಸೀತಾರಾಮರು 
ಸಾಕಾರ ಸೀತಾರಾಮರ ಪತ್ಯ ನಿ-
ರಾಕಾರ ಶ್ರೀಧರ ಪೂಜಿಸುತ   || 25 ||  ....ಶೋಭಾನವ
ಮೂಲ ಗೋವಿಂದನೆ ವಾಹಿ ಗರುಡಧ್ವಜನೆ
ಸಾಲಾಗಿ ತ್ರೈಲೋಕ್ಯ ವಾಸಿಗರು      
ತ್ರಿಲೋಕ ವಾಸಿಗರ ತ್ರಯತಾಪ ಹರಣವ ಗೈಯಲು ನೀನು ದಯಮಾಡು || 26 ||  ....ಶೋಭಾನವ
ತಪೋಧಿ ಆನಂದತೀರ್ಥ ಗುರುವರ್ಯರ
ತಪದಿ ಅನುಗ್ರಹ ಪಡೆಯಲು  
ತಪದಿ ಅನುಗ್ರಹ ಪಡೆದು ನಿವರಗಿ ತುಳಸಕ್ಕ ಮಾಡುತ ಪ್ರಣಿಪಗಳ || 27 ||  ....ಶೋಭಾನವ
ಶೋಭಾನವೆನ್ನಿರೆ ಶ್ರೀ ಕ್ಷೇತ್ರ ರಾಜನಿಗೆ 
ಶೋಭಾನವೆನ್ನಿ ವೃಕ್ಷಕ್ಕೆ 
ಶೋಭಾನವೆನ್ನಿ ಅಶ್ವತ್ಥ ವೃಕ್ಷಕ್ಕೆ ಗೋವಿಂದಪುರವರಧೀಶನಿಗೆ ..||  ..ಶೋಭಾನವ
      ಶ್ರೀ ಲಕ್ಷ್ಮೀ ಗೋವಿಂದರಾಜ ಶೋಭನ ಗೀತಂ ಸಂಪೂರ್ಣಂ  






No comments:

Post a Comment