Friday, July 15, 2022

SHRAVANA SAMPATTU SHUKRAVAAR haadu ಶ್ರಾವಣ ಸಂಪತ್ತು ಶುಕ್ರವಾರದ ಹಾಡು

kruti: Harapanahalli Bheemavva

shravana sampattu shukarvara haadu

ಶ್ರಾವಣ ಸಂಪತ್ತು ಶುಕ್ರವಾರದ ಹಾಡು

                                                ರುದ್ರಕುಮಾರನ ಚರಣಕೆ ವಂದನೆ ಮಾಡಿ                                                                         

ವಿದ್ಯಾಭಿಮಾನಿ ವಾಣಿಯ ಸುಪದ್ಮ ಪಾದಗಳಿಗೆ ಎರಗಿ ನಾ ಪೇಳುವೆ ಶುದ್ದಾಗಿ ಕೊಡು ಮತಿಯ

ಶ್ರಾವಣಮಾಸ ಶುಕ್ಕುರುವಾರ ಶುಭಮುಹೂರ್ತಕಾಲದಿ ಕಮಲಾಕ್ಷಿಯನು ಆಲಯದೊಳಗೆ ಇಟ್ಟು ಆದರದಿಂದ ಪೂಜಿಸಿ ಬೇಡಿದ ಅಭೀಷ್ಟ ನೀಡುವಳು

ಇರುತಿರಲು ಒಂದು ಪಟ್ಟಣದಲ್ಲಿ ರಾಜನು ನಯರು ಇಲ್ಲದ ಕಾರಣವು. ವಿವಾಹದ ಉತ್ಸವಕೆಂದು ತೆರಳೋ ಪತಿಯ ಕಂಡು ತೆಗೆದಿಟ್ಟಳು ಆಯುಧವ

ಪಟ್ಟದ ಕತ್ತಿಯ ಬಿಟ್ಟು ಬಂದೆನೆಂದು ಅಟ್ಟಿಹ ತನ್ನ ದೂತರನುನೆಟ್ಟನೆ ಎರಡು ಕಾಲು ಚಾಚಿ ಕುಳ್ಳಿರಲು ಆಗ ತಟ್ಟನೆ ದಾಟಿ ನಡೆದನು

ಮೂರು ತಿಂಗಳು ಗರ್ಭವಾಸಕ್ಕಾಗಿ ಬಂದಿತು ನೀನು ಈಗ ದಾಟಿ ಪೋಗುವರೆ ಕೇಳಿ ಸಂಭ್ರಮದಿಂದ ಹೇಳೆ ರಾಜಗೆ ಬಂದು ತಾಳಿದ ಪರಮ ಹರುಷವನು

ಸದ್ದು ಮಾಡದೆ ಸೂಲಗಿತ್ತಿಯ ಕರೆಸಿ ತಾನು ಇದ್ದ ವಾರ್ತೆಗಳ ಹೇಳಿದಳು ಮುದ್ದುಕೂಸಿನ ತಂದು ಕೊಟ್ಟರೆ ನಿನಗೀಗ ಮುತ್ತಿಲು ತುಂಬ ಹೊನ್ನು ಕೊಡುವೆ

ಹುಡುಕುತ ಬಂದಳು ಕಡೆಯ ಬಜಾರಕ್ಕೆ ಬಡವ ಬ್ರಾಹ್ಮಣನ ಮಂದಿರದಿ ಬಡದಿಗೆ ಮೂರು ತಿಂಗಳು ಗರ್ಭವಾಗಿದೆ ಕಡೆಹಾಯಿಸಲು ಎನ್ನ ಕರೆಸೆಂದಳು

ಮೂರು ತಿಂಗಳ ರಾಜನರಸಿಗೆ ಮೊಗ್ಗೆಯು ಏಳುತಿಂಗಳು ಹೂವ ಮುಡಿಸಿ ಎಂಟು ತಿಂಗಳಿಗೆ ಸೀಮಂತದ ಉತ್ಸವ ಮಾಡಿ ಬಂತಾಗ ನವಮಾಸಗಳು

ವಿಪ್ರನ ಮಡದಿಗೆ ಒತ್ತಿ ಬಂದವು ಬ್ಯಾನೆಕಟ್ಟಿ ಕಣ್ಣುಗಳ ನಿಚ್ಚಣಿಕೆ ಹತ್ತಿ ಇಳಿದು ಹಡೆದಳು ಗಂಡುಕುಮಾರನ ಎತ್ತಿಕೊಂಡು ಒಯ್ದಳು ಆ ಕ್ಷಣವೆ

ಕಲ್ಲುಗುಂಡನೆ ಹಡೆದಿಯೆ ನೀನು ಎಂಬಂಥಸೊಲ್ಲು ಕೇಳುತಲೆ ತಲ್ಲಣಿಸಿಎಲ್ಲಿದ್ದರೆನ್ನ ಕುಮಾರನು ಸುಖದಿ ಬಾಳಲೆಂದಲ್ಲಿ ನೇಮವ ನಡೆಸಿದಳು

ಇತ್ತ ಕೂಸಿಗೆ ಮಧುವಿಟ್ಟು ಜಾತಕ ಬರೆಸಿ ಸಕ್ಕರೆ ಸಗಟದಿಂದ ಹಂಚಿದಕ್ಷಿಣೆ ತಾಂಬೂಲ ಸಹಿತ ಬ್ರಾಹ್ಮಣರಿಗೆಲ್ಲಾ ಇಟ್ಟು ಭೋಜನವ ಮಾಡಿಸಿದ

ನಾಮಕರಣ ಜಾವಳ ಜುಟ್ಟು ಉಪನಯನಪ್ರೇಮದಿಂದ ವಿದ್ಯವ ಕಲಿಸಿ ಸೋಮನಂದದಿ ಹೊರಗೆ ಹೊರಟ ತಮ್ಮಮ್ಮನ ನೋಡಿ ಮೋಹಿಸಿದನಾಕ್ಷಣದಿ

ಕತ್ತಲೊಳಗೆ ಬರುತಿರಲು ಬಾಗಿಲ ಮುಂದೆಕಟ್ಟಿದ್ದ ಗೋವು ಕಾಣದಲೆ ವತ್ಸದ ಕಾಲು ತುಳಿಯಲಾಗ ಅದು ಬಾಯಿ ಬಿಟ್ಟು ಒದರಿತು ಭಯದಿಂದ

ಅಮ್ಮ ನೀ ಬಾರೆ ತಮ್ಮ ಅಮ್ಮನ ಅರಿಯದವನಮ್ಮನ್ನು ಬಲ್ಲನೆ ಒಮ್ಮೆ ಅಲ್ಲದೆ ಎರಡು ಬಾರಿ ಆಲಿಸಿ ಅದರ ಮಾತು ತಮ್ಮ ಹಿರಿಯರ ಕೇಳಿದನು

ಮಂದಾಕಿನಿಯ ಸ್ನಾನವ ಮಾಡಿ ಬಂದರೆಸಂದೇಹ ಪರಿಹಾರವಾಗುವುದು ಹಾಗೆಂದು ಹೇಳಿದ ಹಿರಿಯರ ವಾಕ್ಯವ ಕೇಳಿ ಗಂಗಾಯಾತ್ರೆಗೆ ತೆರಳಿದನು

ನಡೆದು ಬಂದನು ನಡು ಮಾರ್ಗದಿ ಪಟ್ಟಣಹಡೆದ ಮನೆಯ ಬಾಗಿಲಲ್ಲಿಕೊಡಬೇಕು ನಮಗೆ ಇಷ್ಟು ಸ್ಥಳಗಳೆಂದೆನುತಲಿ ನುಡಿದು ಪವಡಿಸಿದ ತಾನಲ್ಲಿ

ಹೊರಗಿಂದ ಬಂದ ಶೆಟವಿ ಬಂದಳು ಮಹಾ ಲಕ್ಷುಮಿ ಒಳಗಿಂದ ಬಂದಳು ಎನ್ನ ವರಪುತ್ರ ಇವನ ದಾಟಲು ನಿನ್ನ ಶಿರವು ಸಿಡಿದು ಸಹಸ್ರ ಹೋಳಾಗೋದೆನಲು

ಅದು ಕೇಳಿ ಶೆಟವಿ ತಾ ತಿರುಗಿ ಪೋಗುತಲಿರೆ ಬದಿಯಲ್ಲಿ ಬದುಕಿದ್ದ ಶಿಶುವು ಇದು ನಿನ್ನ ಪುಣ್ಯದಿಂದ ಉಳಿದಿತೆಂದು ಎನುತಲಿರೆ ಅಧಿಕ ಸಂತೋಷವಾಗಿ ಹೊರಟು

ಭಾಗೀರಥಿಯ ಸ್ನಾನವ ಮಾಡಿ ತಾನುಪ್ರಯಾಗಕ್ಕೆ ನಡೆತರಲು ಬ್ಯಾಗ ಮಾಡಿದ ದಾನ ಧರ್ಮಕಾರ್ಯಗಳ ತಾನಾಗ ಕಂಡನು ಚತುರ್ಹಸ್ತ

ನಾಲ್ಕು ಹಸ್ತಗಳ ಕಂಡ ಕಾರಣ ಏನೆಂದು ವ್ಯಾಕುಲದಿಂದ ಕೇಳಿದನು ಸಾಕಿದವರು ಹಡೆದವರು ಉಂಟು ನಿನಗೆಂದು ವಿವೇಕ ಬುದ್ಧಿ ಅವರು ಹೇಳಿದರು

ಗೊತ್ತಿಲೆ ಬಂದನು ಪಟ್ಟಣದೊಳಗೊಂಡು ಹೆತ್ತ ಆರುದಿನದ ಮಂದಿರದಿ ಹೊಸ್ತಿಲೊಳಗೆ ಅಡ್ಡ ಮಲಗಿದ್ದ ಕಾಲಕ್ಕೆ ಮತ್ತಾಗ ಬಂದಳು ಶೆಟವಿ

ಚೊಚ್ಚಿಲ ಮಗನ ದಾಟಲು ನಿನ್ನ ಶಿರವು ಬಿಚ್ಚಿ ಸಹಸ್ರ ಹೋಳಾಗೋದು ಎನಲು ಲಕ್ಷ್ಮೀ ಮಾತಿಗೆ ತಿರುಗಿದಳೆನ್ನ ತುತ್ತಿಗೆ ಮಿರ್ತ್ಯಾದ ಪಾಪಿ ಎಂದೆನುತ

ಸತ್ಯವಂತನೆ ನಿನ್ನ ಪುಣ್ಯದಿಂದ ಇಬ್ಬರು ಪುತ್ರರು ಉಳಿದರೆಂತಿಹರು ಅರ್ಥಿಯಿಂದವರ ಮಾತುಗಳ ಕೇಳುತ ತನ ಪಟ್ಟಣಕ್ಕೆ ನಡೆತಂದ

ಗಂಗಾಸ್ನಾನವ ಮಾಡಿಕೊಂಡು ಕಾವಡಿ ಹೊತ್ತುಬಂದ ಶ್ರಾವಣ ಮಾಸದಲ್ಲಿ ಅಂದಿನಾರಭ್ಯ ಬ್ರಾಹ್ಮಣರಿಗೆ ಮೃಷ್ಟಾನ್ನ ಕುಟುಂಬ ಭೋಜನವ ಮಾಡಿಸಿದ

ನಿತ್ಯ ನಿತ್ಯದಿ ಭಕ್ಷ್ಯ ತುಪ್ಪ ಮಂಡಿಗೆ ಕ್ಷೀರಸಕ್ಕರೆ ಸೂರೆ ಮಾಡುತಲಿಗೊತ್ತಾಗದೆನ್ನ ಕಾರ್ಯಗಳು ಪಟ್ಟಣದೊಳು ಮತ್ತ್ಯಾರು ಉಳಿದವರೆಂದ

ಪಟ್ಟಣದೊಳು ಬಡ ಬ್ರಾಹ್ಮಣನರಸಿಯು ನಿಷ್ಟೆಲಿ ವ್ರತದಿಂದ ಇರುವಳು ಎಷ್ಟು ಕರೆದರು ಬಾರಳಾಕೆ ಶ್ರೀಗೌರಿಯ ಶುಕ್ರವಾರದ ವ್ರತವಂತೆ

ನಾನೆ ಬರಲೊ ತನ್ನ ಮಂದಿರಕಾಗಲೆ ತಾನೆ ಬರುವಳೊ ನಮ್ಮ ಮನೆಗೆ ಮಾಡಿದ ಅಪ್ಪಣೆ ಜುಲುಮಾನೆಯ ಕೊಡುವೊಳೆ ಕೇಳಿ ಬನ್ನಿ ಎಂದು ಕಳಿಸಿದನು

ಇಷ್ಟು ಛಲಗಳು ಯಾತಕೆ ಈಗ ಬರುವೆನೆಂದು ಲಕ್ಷ್ಮೀದೇವೇರ ಪೂಜೆ ಮಾಡಿಭಕ್ತಿಯಿಂದ ಆರತಿ ಮಟಿಗೆಯನೆ ಉಡಿಕಟ್ಟಿ ಬಂದಳು ಭಾಗ್ಯಶಾಲಿ

ಬರುತಿರಲು ಆಗ ಅಂಗನೆ ಅರಮನೆಯಿಂದ ಹರಿದ ಅಕ್ಕಿ ಕಚ್ಚು ಕಾಣುತಲಿ ಸ್ಥಿರವಾಗಲಿ ಎನ್ನ ಕುಮಾರಗೆ ಆಯುಷ್ಯಗಳೆಂದು  ಮಾರ್ಗದಲಿ ನಡೆದಳು

ಮೂರುಕಾಲಿನ ಮಣೆ ಮುಂದೆ ತಂದಿಟ್ಟರೆ ಕೂಡಲಾಗದು ನಮ್ಮ ವ್ರತವು ಹಾಗಲಹಂದರ ಪೋಗಲು ಹಸಿರು ಬಳೆಯ ಬಿಟ್ಟು ನೀಲನಿಟ್ಟಳು ಕರದಲ್ಲಿ

ಹಸಿರು ಪೀತಾಂಬರ ಹಸನಾದ ಕುಡಿ ಎಲೆ ಹೊಸಮೊರದೊಳಗೆ ಅನ್ನವನು ಬಿಸಿ ಬಿಸಿ ಮೊಗೆಯಲಿ ಸಾರು ತಂದು ಹಾಕಲು ಶಶಿಮುಖಿ ಅದು ಒಲ್ಲೆನೆನುತಲಿ

ಕಂದು ಕೆಂಪಿನ ಪೀತಾಂಬರವ ಉಡುಕೊಟ್ಟು ಛಂದವಾದೆಲೆಯ ಹಾಕಿದರು ಬಂಗಾರ ಹರಿವಾಣದೊಳಗೆ ಅನ್ನವು ಬೆಳ್ಳಿ ತಂಬಿಗೆ ಸಾರು ಬಡಿಸಿದರು

ಬಡವನ ಮಡದಿಯ ಬಡಿವಾರ ನೋಡಿರೆ ಸಡಗರ ಬಂತೇನು ಇವತ್ತೇ ಪಡೆದಳಾ ಅರಸಿನ ಐಶ್ವರ್ಯವೆನುತಲಿ ನುಡಿದರು ಜನರು ಹಾಸ್ಯದಲಿ

ಉಟ್ಟ ಪೀತಾಂಬರ ಕಟ್ಟಿದ ಉಡಿದಾರ ರತ್ನದ ಕಡಗ ಕೈಯಲ್ಲಿ ಪಚ್ಛದ ಪದಕ ಮುತ್ತಿನ ಕಂಠಿ ಕೊರಳಲ್ಲಿ ಪುತ್ಥಳಿ ಸರ ಹೊಳೆಯುತಲಿ

ನೀಲ ಮಾಣಿಕ್ಯದ ವಜ್ರದ ಹರಳಿನ ಉಂಗುರಗಳು ಆಣಿ ಮುತ್ತಿಟ್ಟು ಕಿವಿಯಲ್ಲಿ ಪಾಣಿಯ ಮುಗಿದು ಬ್ರಾಹ್ಮಣರಿಗೆ ಭೋಜನಕೆ ಉಪಚಾರ ಮಾಡುತಲಿ 

ದೊರೆಯು ತುಪ್ಪವ ಬಡಿಸುತಲಿ ಸಾಲೆಡೆಯಲ್ಲಿ ಬರುತಿರೆ ತಾಯಿಸ್ತನಗಳು ಭರದಿಂದ ಉಕ್ಕೇರಿ ಕ್ಷೀರಮುಖದಲ್ಲಿ  ಚಿಮ್ಮಿದವು ಹಾಲು ಬಿದ್ದರೆ ತನ್ನ ಶಾಲಿನಿಂದ ಒರೆಸುತ್ತಾ

ಮಹಲಿನ ಮ್ಯಾಲೆ ನಡೆದನು ಆಲಯಕ್ಕೆ ಅವರನು ಬಿಡದಂತೆ ಅಪ್ಪಣೆ ಮಾಡಿ ತಾ ಮಲಗಿದ ಮಂಚದಲ್ಲಿ. ಹುಟ್ಟಾ ಬಡವಿಯ ದೌಲತ್ತನೆ ನೋಡಿರೆ

ಉಟ್ಟಳು ಪೀತಾಂಬರವಗಟ್ಟಿಯಾಗಿ ಸೆರಗೊ ಹೊದಿಯದೆ ತನ್ನ ಮಾನವ ಬಿಟ್ಟಳೆಂದು ಆಡಿಕೊಂಬುವರು ಎತ್ತನೋಡಿದರಿಲ್ಲ ಚಿತ್ತ ಚಂಚಲವಾಗಿ

ಮತ್ತೆಲ್ಲೂ ಮಗನ ಕಾಣದಲೆ ಹತ್ತಿ ಬಂದಳು ಮಹಲಿನಲ್ಲೇ ಮಂಚದಿ ಮಲಗಿಪ್ಪೋ ಸುತನ ಕಂಡಳಾಗ ಎನು ಕಾರಣ ಮಲಗಿದಿ ಮಾತನಾಡೆಂದು

ಲಾಲಿಸಿ ಮಗನ ಮುದ್ದಿಸುತ ಬಾಲಕ ನೀನಿಷ್ಟು ಬಳಲುವುದು ಯಾಕೆಂದು ಕೇಳಿದಳು ಅತಿ ಮೋಹದಿಂದ ಹಡೆವರು ಯಾರೆ ಎನ್ನೊಡನೆ ನೀ ಹೇಳೆಂದು

ಬಿಡು ಭಯ ಬೇಡವೆಂದೆನುತ ಹಡೆಯಲಿಲ್ಲವೋ ಎನ್ನ ಮ್ಯಾಲೆ ರಾಜನು ಒಬ್ಬ ಮಡದಿಯ ತರುವೋನು ಹೊನ್ನು ಹಣವ ಕೊಟ್ಟು ನಿನ್ನನು ತರಿಸಿದೆ ಎನ್ನ ಕೂಸೆಂದು ಸಾಕಿದೆನು

ಇನ್ನ್ಯಾರ ಮಗನೋ ನಾನರಿಯೆನೆಂದೆನುತ ಮನ್ನಿಸಿ ಮಾತನಾಡಿದಳು ಆದರೇ ನಮ್ಮಯ್ಯ ರಾಜಸಿಂಹಾಸನ ಏರಿದೆ ನಿನ್ನ ಪುಣ್ಯದಲಿ ನೀ ಮಾಡಿದ

ಉಪಕಾರ ಮರೆಯಲಾರೆನೆಂದು ಪಾದಕ್ಕೆ ಬಂದೆರಗಿದನುಣ್ಣದ ಅಂದಣ ಕಳಿಸಿದ ಸೂಲಗಿತ್ತಿಗೆಮನ್ನಿಸಿ ಮಣೆಯನು ಹಾಕಿದರು

ಅಣ್ಣಯ್ಯ ಕರೆಸಿದ ಕಾರಣೇನೆಂದು ಬಣ್ಣಿಸಿ ಬಂದು ಕುಳಿತಳು. ಸಂಸ್ಥೆ ಒಂದುಎತ್ತಣಿಂದಲಿ ಎನ್ನ ತಂದೆ ವಾರ್ತೆಗಳನು

ಸತ್ಯವಾಗಿ ಹೇಳಬೇಕೆನುತ ವಿಪ್ರಸುತ ನಿನ್ನಿಲ್ಲಿಗೆ ತಂದುಕೊಟ್ಟೆನೋ ಮುತ್ತಿಲು ಹೊನ್ನಿಗೆ ಆಸೆ ಮಾಡಿಹಾಕಿದೆ ಕಲ್ಲುಗುಂಡನು ನಿಮ್ಮಮ್ಮಗೆ

ಹಾಕ್ಯಾ ಮಾತುಗಳ ಆಡಿದೆನು

ಗೋಕುಲಕೊಳು ಕೃಷ್ಣ ಬಂದಂತೆ ನಿನ್ನ. ಸಾಕಿದಳು ಯಶೋಧೆ ಮಕ್ಕಳನಗಲಿ ದೇವಕ್ಕಿಯಂದದಿ ನಿನ್ನ ಹೊಸ್ತಿಲೊಳಗೆ ಕುಳಿತಿಹರು

ಅಕ್ಕರದಿಂದ ಅವರ ಕೂಡೆಂದುನುತಲಿ ಹಸ್ತವ ಮುಗಿದು ಹೇಳಿದಳು ಮುದುಕಿ ಮಾತನು ಕೇಳಿ ಪದಕ ಮುತ್ತಿನ ಸರ ಹಾಕಿ ಕೊರಳಲ್ಲೇ

ಜರತಾರಿ ಸೀರೆ ಕುಪ್ಪುಸ ಉಡುಗೊರೆ ಕೊಟ್ಟು ಕರೆಸಿದ ತಾಯಿ ತಂದೆಯರೆದರು ಎಂದರೆ ಕಂಪ ಹುಟ್ಟಿತು ದೇಹದಿ ಸುರಿಸುತ ಕಣ್ಣ ಜಲಗಳ

ದೊರೆತನಕ್ಕೆದುರು ನಾವೇನೆಂದು ಮನದಲ್ಲಿ ಮರಗುತ ಯೋಚನೆಯ ಮಾಡಿದಳು ಬಡಿಸೋನೋ ಬೈದು ಬಿಡುವನೋ ಕೈಯಿಂದಲಿ

ಕೊಡಿಸೋನೊ ಹುಲುಮಾನವ ಇಡಿಸೋನೋ ಸೆರೆಮನೆ ಒಳಗೆ ನಮ್ಮಿಂದಲಿ ನುಡಿಸಿ ಬಿಡುವನೋ ತಪ್ಪೆನುತಾ ಏನು ಮಾಡುವನೋ ಬಂದ ಜನರೊಳು ನಮ್ಮಮಾನವ ಕಳೆದು ಬಿಡುವನೋ

ಮಾನಾಭಿಮಾನ ನಿನ್ನದು ಮಹಲಕ್ಷುಮಿ ಪಾದವೇ ಗತಿ ಎಂದರಾಗ ನಡುಗುತ ಬಂದರು ಮುಡಿಯ ಮುಂದಕೆ ಬಾಗಿ ಕಡು ಚಿಂತೆಯಿಂದ ನಿಂತಿರಲು

ಹಡೆದ ತಾಯಿ ತಂದೆ ನೀವೇ ಏನು ಎಂದು ನುಡಿದು ತಾ ಚರಣಕ್ಕೆರಗಿದನು ಕಂದ ನಾನೆಂದರೆ ಸಂಭ್ರಮವಾದ ಆನಂದ ಬಾಷ್ಪಗಳು ಉದುರಿದವು

ತಂದೆ ತಾಯಿ ಮಕ್ಕಳೊಂದಾದರೆನುತಲಿ ದುಂದುಭಿ ಭೇರಿ ಬಡಿದವು  ಹರುಷದಿಂದ ಇಬ್ಬರೂ ಒಂದಾಗಿ ತಮ್ಮ ತಾಯಂದಿರು  ಬರೆಸಿದರಾಗ ಪತ್ರಿಕವ

ಕರೆಸಿದರು ಬಂಧು ಬಳಗ ನಿಬ್ಬಣವನ್ನು ಅರಸ ಮದುವೆ ಸಂಭ್ರಮದಿ ಹಾದಿಗೆ ಹಂದರ ಹಾಕಿ ಮೇಲೆ ತೋರಣ ಕಟ್ಟಿ ಬೀದಿ ನೌಬತ್ತು ವಾಲಗವು

ಬ್ರಾಹ್ಮಣರೆಲ್ಲರು ನೆರೆದರು ನಾಲ್ಕು ವೇದವ ಹೇಳುತ ಮಂಗಳಾಷ್ಟಕವ ವಲ್ಲಭನೆದುರಿಗೆ ಚೆಲ್ವ ಸತಿಯ ತಂದು ಚೆಲ್ಲುತ ಮಂತ್ರಾಕ್ಷತೆಯ

ಮಲ್ಲಿಗೆ ಬಾಸಿಂಗವನು ಕಟ್ಟಿ ಕೊರಳ ಮಾಂಗಲ್ಯ ಬಂಧನ ಮಾಡಿದರು ಹಾಗಲ ಹಂದರದೊಳಗೆ ಹಸಿರು ಪತ್ತಲ ಕೊಟ್ಟು ಆಗ ನೇಮ ಬಿಡಿಸಿದರು

ಡಾಗುಕುಡಿಬಾಳೆ ಎಲೆಯ ಭೂಮವನುಂಡು ನಾಗವಲಿಗಳ ಮಾಡಿದರು ಮುತ್ತಿನ ಪಲ್ಲಕ್ಕಿ ಒಳಗೆ ಶ್ರೀಗೌರಿಯ ಪಟ್ಟಣದೊಳು ಮೆರೆಸುತಲಿ

ಅರ್ಥಿಯಿಂದಲಿ ಬಂದು ಅರಸು ಸಿಂಹಾಸನಕ್ಕೆ ಒಪ್ಪಿದಳು ಆಗ ಮಹಲಕ್ಷ್ಮೀಅರಿಷಿಣ ಕುಂಕುಮ ಅರಳು ಮಲ್ಲಿಗೆ ಗಂಧ ಪರಿಪರಿ ಭಕ್ಷ್ಯ ಪಾಯಸವು

ನರಸಿಂಹ ನರಸಿಗೆ ಅರ್ಪಿಸುತ ಆರತಿ ಮಾಡೆ ಹರುಷದಿಂ ವರವ ನೀಡುವಳು ಮಂಗಳ ಜಯವೆನ್ನಿ ಮಂಗಳ ಶುಭವೆನ್ನಿ ಮಂಗಳಾಂಗನೆ ಮಹಾಲಕ್ಷ್ಮೀ

ಕಂಗಳು ತೆರೆದು ಕಟಾಕ್ಷದಿ ನೋಡಲು ಹಿಂಗೋದು ಸಕಲ ಬಿತ್ತಿದ ಬೆಳೆರಾಸಿ ಒಕ್ಕುವ ಧಾನ್ಯವು ಉಕ್ಕುವ ಕ್ಷೀರದಂದದಲಿ ಲೆಕ್ಕವಿಲ್ಲದೆ ಮಕ್ಕಳಾಗೋರು ಮನೆತುಂಬ ಮುತ್ತೈದೆತನವ ನೀಡುವಳು

ತಾ ಸುರಕಾಮಧೇನುವಿನಂತೆ ಬಂದು ಭೀಮೇಶಕೃಷ್ಣನ ಸಹಿತಾಗಲೇ ಸಾದ ಸಕಲ ಸಂಪತ್ತನೆ ಕೊಟ್ಟು ತಾ ವಾಸ ಮಾಡೋಳು ಮನೆಯಲ್ಲಿ

                                                                                      ...ಹರಪನ ಹಳ್ಳಿ ಭೀಮವ್ವ 

No comments:

Post a Comment