CINIWALI SHETIKAVVA AIDESHI PART I ಸಿನೀವಾಲಿದೇವಿ ಶೆಟಿಕವ್ವ ಐದೇಶಿ ಭಾಗ 1
ಅಷ್ಟಾದಶ ಪುರಾಣದಲ್ಲಿ " ವಾಯು ಪುರಾಣ" ದಲ್ಲಿ ಚಂದ್ರನು ತನ್ನ ತಪಸ್ಸಿನಿಂದ ಶಕ್ತಿಯನ್ನು ಪಡೆದುಕೊಂಡು,ಅದನ್ನು ಬಲಪಡಿಸಿಕೊಂಡನು.ಬ್ರಹ್ಮ ಅವನನ್ನು ಮಾನವ ಜೀವಿಗಳ ಮನಸ್ಸು ಕಾರಕನಾಗಿ ಮತ್ತು ಔಷಧಿ ಸಸ್ಯಗಳ ಸಾಂಮ್ರಾಜ್ಯಕ್ಕೆ ಅಧಿಪತಿಯನ್ನಾಗಿ ಮಾಡಿದ. ದಕ್ಷನು ತನ್ನ ಪುತ್ರಿಗಳಾದ ಅಶ್ವಿನಿ ಭರಣಿ ಇತ್ಯಾದಿ 27 ನಕ್ಷತ್ರ ಪುತ್ರಿಯರನ್ನು ಆತನಿಗೆ ವಿವಾಹ ಮಾಡಿ ಕೊಟ್ಟ.ಚಂದ್ರನು ದೇವ ಗುರುಗಳಾದ ಬೃಹಸ್ಪತಿಗಳಲ್ಲಿ ವಿದ್ಯಾಭ್ಯಾಸ ಮಾಡಿ,ರಾಜನಾದ ನಂತರ ಒಂದು ರಾಜಸೂಯ ಯಾಗವನ್ನು ಮಾಡಿದ. ಆ ಯಾಗಕ್ಕೆ ಬ್ರಹ್ಮನು ಬ್ರಹ್ಮತ್ವವನ್ನೂ, ಹಿರಣ್ಯಗರ್ಭನು ಉದ್ಗಾತನಾಗಿ, ನಾರಾಯಣನು ಸಭಾ ಮುಖಂಡನಾಗಿ, ಸನತ್ಕುಮಾರಾದಿಗಳು ಋತ್ವಿಕ್ಕುಗಳಾದರು. ರಾಜಸೂಯ ಯಾಗವು ಸುಗಮವಾಗಿ ಶುಭಕರವಾಗಿ ಪುರ್ಣಾಹುತಿ ಗೊಂಡಿತು ಚಂದ್ರನು ಬ್ರಹ್ಮನಿಗೆ ಋತ್ವಿಕರಿಗೆ ದೇವತೆಗಳಿಗೆ ಅತಿಥಿ ಅಭ್ಯಾಗತರಿಗೆ ದಕ್ಷಿಣೆಯನ್ನು ಕೊಟ್ಟು ಸುಖ ಸಂತೋಷಗಳಿಂದ ಬೀಳ್ಕೊಟ್ಟ. ಆ ರಾಜಸೂಯ ಯಾಗ ಪೂರ್ತಿಗೆ ಕುಹೂ ವಪು ಪುಷ್ಟಿ ಪ್ರಭ ವಸು ಕೀರ್ತಿ ಧೃತಿ ಸಿನೀವಾಲಿ ಲಕ್ಷ್ಮೀ ಎಂಬ ದೇವಿಯರು ಸೇವೆಗಾಗಿ ಇದ್ದರು.
ಹುಟ್ಟಿದ ಜೀವಿ ಮರಣ ಹೊಂದಲೇ ಬೇಕು, ಇದು ನಿಸರ್ಗ ನಿಯಮ, ಇದಕ್ಕೆ ವಿಧಿ ನಿಯಮವೆಂತಲೂ ಅನ್ನುತ್ತಾರೆ. ಜೀವಿಗಳ ಹುಟ್ಟಿಗೆ ಕಾರಣ ಕರ್ತರು ಪ್ರಕೃತಿ ಮತ್ತು ಪುರುಷ ಎಂದು ಹೇಳುತ್ತಾರೆ. ಭಾರತದ ಸನಾತನ ಇತಿಹಾಸದ ಪ್ರಕಾರ ಹುಟ್ಟುಗಳಿಗೆ ಕಾರಣಿಭೂತರು ಬ್ರಹ್ಮ ಪುತ್ರ ದಕ್ಷ ಪ್ರಜಾಪತಿ ಮತ್ತು ಅವನ ಪತ್ನಿ ಪ್ರಸೂತಾದೇವಿ. ಜೀವಿಗಳನ್ನು ಉತ್ಪತ್ತಿ ಮಾಡುತ್ತಲೇ ಇರುವಾಗ ಪ್ರಸೂತಾದೇವಿಗೊಂದು ಆಲೋಚನೆ ಬಂದು ಹುಟ್ಟಿದ ಜೀವಿಗಳ ಆಗು ಹೋಗುಗಳೇನು ? ಏನು ಮಾಡ ಬಲ್ಲವು,ಅವುಗಳ ನಡವಳಿಕೆ ಹೇಗೆ ? ಅವುಗಳ ಭವಿಷ್ಯ ಹೇಗಿರಬೇಕು, ಇದನ್ನೆಲ್ಲಾ ನಿರ್ಮಿಸುವವರಾರು ? ಬರೆಯುವವರೊಬ್ಬರು ಅವಶ್ಯಕ, ಎಂದು ಯೋಚಿಸಿ ತನ್ನದೇ ಒಬ್ಬ ಆಪ್ತ ಸಖಿಯಾದ ಸಿನೀವಾಲಿ ಎಂಬುವವಳನ್ನು ನಿಯಮಿಸಿ ಸೃಷ್ಟಿ ಸ್ಥಿತಿ ಲಯಗಳ ಅಭಿಮಾನವಾದ ರಜ,ಸತ್ವ, ತಮಗಳ, ಹುಟ್ಟಿಸುವ,ಪಾಲನೆ ಮಾಡುವ,ಇಲ್ಲದಂತೆ ಮಾಡುವ ಈ ಕ್ರಿಯೇಯಲ್ಲಿ ಪ್ರತಿ ಜೀವಿಯ ಹಣೆಬರಹವನ್ನು ರೂಪಿಸುವಲ್ಲಿ ತ್ರಿಮೂರ್ತಿಗಳ ಅನುಗ್ರಹ ಪಡೆಯುವಂತೆ ಸಿನೀವಾಲಿಗೆ ಹೇಳಿ ಆಶಿರ್ವದಿಸಿದಳು.
ಹುಟ್ಟಿದ ದಿನದಿಂದ ಐದನೇ ದಿನದಂದು ಆ ಕೆಲಸದ ಪೂರ್ವಾರಂಭಮಾಡಿ ಹತ್ತನೇ ದಿನಗಳ ವರೆಗೆ ನಿಯೋಜನೆ ಮಾಡಿ, ಹನ್ನೊಂದನೇ ದಿನದಿಂದ ಪ್ರತಿ ಜೀವಿಗಳ ಹುಟ್ಟಿನ ರಹಸ್ಯ , ಕಾರಣ ,ನಿಷ್ಟಾನಿಷ್ಟ ಕರ್ಮಗಳು ,ಪಾಪ ಪುಣ್ಯಗಳು ,ಅದರಿಂದ ಪಡೆಯಬಹುದಾದ ಫಲಗಳು ,ಭೋಗಿಸುವ ಬಗೆ,ಮತ್ತು ಮುಕ್ತಾಯ ಎಲ್ಲವು ಬರೆದು ಮುಗಿಸುತ್ತಾಳೆ.ಅದೇ ಹಣೆಬರಹ,ಬರೆಯುವವಳೇ ಸಿನಿವಾಲಿದೇವಿ ,ಅದನ್ನು ಜನಪದದಲ್ಲಿ “ ಶೆಟಿಕವ್ವ “ ಎಂದು ಕರೆಯುವುದು ವಾಡಿಕೆ.
ವೇದಗಳ ಕಾಲಘಟ್ಟದಲ್ಲಿ ಯಾವ ದೇವರ ಪೂಜೆಯನ್ನು ಹೇಳಿಲ್ಲ. ಕೇವಲ ನಿಸರ್ಗ ರೂಪದ ಪಂಚ ಮಹಾ ಭೂತಗಳ ಚಿಂತನೆಯೇ ಇದೆ. ಈ ಪಂಚ ಮಹಾಭೂತಗಳ ಸೌಮ್ಯರೂಪ, ರೌದ್ರಾವತಾರ ತಾಳುತ್ತಿರುವುದನ್ನು ಕಂಡು ಹೆದರಿ ಭಯಪಟ್ಟು ದೇವರೆಂದು ಪೂಜಿಸುತ್ತ ಬಂದಿರಬಹುದು. ಹಾಗೆಯೇ ತಮ್ಮಿಂದ ಜನಿಸಲ್ಪಟ್ಟ ಕೂಸಿನ ಶಾರೀರಿಕ ಆರೋಗ್ಯ, ಮಾನಸಿಕ ಸ್ಥಿತಿ ಉತ್ತಮವಾಗಿರಲೆಂದು, ಹಣೆಬರಹ,ಬರೆಯುವವಳೆಂದು ತಿಳಿದು ಸಿನೀವಾಲಿದೇವಿ “ ಶೆಟಿಕವ್ವ “ ಪೂಜೆಯೂ ನಡೆಯುತ್ತಾ ಬಂದಿರಬಹುದು. ಈ ಕ್ರಿಯೆಯಲ್ಲಿ ಯಾವುದೇ ರೀತಿಯ ಹುಚ್ಚು ನಂಬಿಕೆ ಅನ್ನಲಾಗದು. ಕೇವಲ ತಂದೆ ತಾಯಿಯರ ಕಾಳಜಿ ಎಂದರೆ ತಪ್ಪಾಗಲಾರದು.
ಐದೇಶಿ : ಕುಸು ಹುಟ್ಟಿದ ಐದನೇ ದಿನಕ್ಕೆ ಐದೇಶಿ ಎಂಬ ಕಾರ್ಯಕ್ರಮ ಮಾಡುವುದು ಸಂಪ್ರದಾಯ.ಆ ದಿನ ಐದು ಚಿಕ್ಕದಾಗಿರುವ ಗುಂಡಾಗಿರುವ ಕಲ್ಲುಗಳನ್ನು ಹುಡುಕಿ ತಂದು [ 1 ರಜ ( ಕೆಂಪು ಬಟ್ಟೆಯಲ್ಲಿ ಕಟ್ಟುವುದು ) 2 ಸತ್ವ ( ಹಳದಿ ಬಟ್ಟೆಯಲ್ಲಿ ಕಟ್ಟುವುದು ) 3 ತಮ ( ಕಪ್ಪು ಬಟ್ಟೆಯಲ್ಲಿ ಕಟ್ಟುವುದು ) 4 ಸಿನೀವಾಲಿದೇವಿ ( ಬಿಳಿ ಬಟ್ಟೆಯಲ್ಲಿ ಕಟ್ಟುವುದು ) 5 ಪ್ರಸುತಾದೇವಿ ( ಹಸಿರು ಬಟ್ಟೆಯಲ್ಲಿ ಕಟ್ಟುವುದು ) ] ಒಂದು ಆಸನದ ಮೇಲಿಟ್ಟು ಆವಾಹಿಸಿ, ತಿಳಿದುಕೊಂಡು ಅವುಗಳಿಗೆ ಸುತ್ತಲೂ ಕೆಂಪು ನಡುವೆ ಬಿಳಿ ಬಣ್ಣದ ಬೊಟ್ಟನ್ನಿಟ್ಟು ಮುಂದೆ ವಿಳ್ಯದ ಎಲೆ, ಅಡಿಕೆ ಬೆಟ್ಟು ಇಟ್ಟು ಅರಿಷಿಣ ಕುಂಕುಮ ಹಚ್ಚಿ ಉತ್ತತ್ತಿ ಬದಾಮು ನೈವೇದ್ಯ ತೋರಿಸಿ ಆರತಿ ಮಾಡುತ್ತಾರೆ.
ಆ ದಿನ ಕೂಸಿಗೆ ತಲೆಗೆ ಎಣ್ಣೆ ಹಾಕಿ ಉಜ್ಜಿ ಎರೆಯುತ್ತಾರೆ. ನಡುನೆತ್ತಿಗೆ ಬಜಿ ಪುಡಿಯನ್ನು ಹಾಕಿ ಕುಂಚಿಗೆ ಕಟ್ಟಿ ಸಾಂಬ್ರಾಣಿಯ ,ಊದಿನ ಹೊಗೆಯನ್ನು ಆಘ್ರಾಣಿಸಿ ಕುಸಿಗೂ ಬಾಣಂತಿಗೂ ಆರತಿ ಮಾಡುತ್ತಾರೆ. ಆರತಿಯ ಕಪ್ಪನ್ನು ಕೂಸಿನ ಮತ್ತು ತಾಯಿಯ ಹಣೆಗೆ ಗಲ್ಲಕ್ಕೆ ಹಚ್ಚುವ ವಾಡಿಕೆ. ಆ ಐದು ಕಲ್ಲು ದೇವರುಗಳ ಮುಂದೆ ಕೂಸನ್ನು ಅಡ್ಡ ಹಾಕಿ ಬಾಣಂತಿಯು ತನ್ನ ಇಚ್ಚಿತವನ್ನು ಕೂಸಿನ ದೇಹದ ,ಮಾನಸಿಕ ಆರೋಗ್ಯದ ಬಗ್ಗೆ ಸಿನೀವಾಲಿದೇವಿ ಶೆಟಿಕವ್ವಗೆ ಬೇಡಿಕೊಂಡು ನಮಸ್ಕರಿಸುವುದು. ಕೂಸು ಬಾಣಂತಿಯರಿಗೆ ಆರತಿ ಮಾಡುವುದು ರೂಢಿ.
ಪ್ರಸುತಾದೇವಿ ಎಂದು ಆರಾಧಿಸಿದ ಕಲ್ಲನ್ನು ಒಂದು ಹಸಿರು ಅರಿವೆಯಲ್ಲಿ ಹಾಕಿ ಅರಿಶಿನ ಕುಂಕುಮ ಹೂವು ದಕ್ಷಿಣೆ ವಿಳ್ಳೇಯದೆಲೆ ಅಡಿಕೆ ಬೆಟ್ಟು ಸಮೇತ ಕಟ್ಟಿ ಜೋಪಾನವಾಗಿಡುವ ಪದ್ಧತಿ. ಉಳಿದ ನಾಲ್ಕು ಕಲ್ಲುಗಳನ್ನು ಬಾಣಂತಿ ಮಲಗುವ ಮಂಚ,ಹೊರಸಿನ ನಾಲ್ಕು ಕಾಲುಗಳಿಗೆ ಮೇಲ್ಕಾಣಿಸಿದಂತೆಯೇ ಹಾಕಿ ಕಟ್ಟುತ್ತಾರೆ. ಆ ದಿನ ಬಾಣಂತಿಯನ್ನು ಚನ್ನಾಗಿ ಬಿಸಿಯಾದ ಕೊಬ್ಬರಿ ಎಣ್ಣೆ ಹಚ್ಚಿ ಉಜ್ಜಿ ಎರೆದು ಹಾಕಿ ತಲೆ ಮೈ ಕೈ ಸೊಂಟ ಬೆನ್ನು ಎಲ್ಲ ಅಗ್ಗಿಷ್ಟಿಗೆಯ ಬೆಂಕಿಯಲ್ಲಿ ಬೆಳ್ಳುಳ್ಳಿಯ ಸಿಪ್ಪೆ ಹಾಕಿ ಕಾಯಿಸಿಕೊಳ್ಳುವಂತೆ ಹೇಳುತ್ತಾರೆ.
ಹತ್ತು ದಿನದ ವೃದ್ಧಿಯ ಮುಕ್ತಾಯ : ಮರುದಿನ ಹನ್ನೊಂದನೆಯ ದಿನದಂದು ಮತ್ತೆ ಅದೇ ರೀತಿ ಕೂಸು ಬಾಣಂತಿಯರನ್ನು ಎರೆಹಾಕಿ ಊದನ್ನು ಆಘ್ರಾಣಿಸಿ ಕೂಸಿನ ತಲೆಗೆ ಬಜ್ಜ್ಜಿ ಪುಡಿ ಹಾಕಿ ಕುಂಚಿಗೆ ಕಟ್ಟಿ ಹೊಸ /ಮೆತ್ತಗಾದ ಮಡಿ ಬಟ್ಟೆ ಉಡಿಸಿ ಚನ್ನಾಗಿ ಅಗ್ಗಿಷ್ಟಿಗೆಯಲ್ಲಿ ಕಾಸಿಕೊಳ್ಳುವುದು.
ಐದನೇ ದಿನದಂದು ಆರಾಧಿಸಿದ ಪ್ರಸುತಾದೆವಿಯನ್ನು ಬಟ್ಟೆ ಸಮೇತ ಒಂದು ಆಸನದ ಮೇಲಿಟ್ಟು ಅರಿಶಿನ ಕುಂಕುಮ ಹೂವು ದಕ್ಷಿಣೆ ವಿಳ್ಳೇಯದೆಲೆ ಅಡಿಕೆ ಬೆಟ್ಟು ಗರಿಕೆಯನ್ನು ಏರಿಸಿ, ಇನ್ನೊಂದು ಮನೆಯಮೇಲೆ ಶುಭ್ರ ಕಾಗದ ಮತ್ತು ಲೇಖನಿಯನ್ನಿಟ್ಟು ಮೇಲೆ ಸಿನಿವಾಲಿಯನ್ನು ಬಟ್ಟೆ ಸಮೇತ ಇಟ್ಟು ಅರಿಶಿನ ಕುಂಕುಮ ಹೂವು ದಕ್ಷಿಣೆ ವಿಳ್ಳೇಯದೆಲೆ ಅಡಿಕೆ ಬೆಟ್ಟು ಗರಿಕೆಯನ್ನು ಏರಿಸಿ, ಆಮೇಲೆ ಎರಡು ಮಣೆಯ ಮುಂದೆ ಒಂದು ನಿಟಾಗಿ ನಿಂತಿರುವ ಬೊಂಬೆಯನ್ನು ಇನ್ನೊಂದು ವ್ಯತ್ಕ್ರಮವಾಗಿ ತಲೆ ಕೆಲಕಾಗಿರುವ ಬೊಂಬೆಯನ್ನು ಭೂಮಿಯ ಮೇಲೆ ಬರೆದು ಪುಟ್ಟ ಕೂಸನ್ನು ಬಿದಿರಿನ ಮೊರದಲ್ಲಾದರು, ಬುಟ್ಟಿಯಲ್ಲಾದರು ಹೊಸ ಕೆಂಪು ಬಟ್ಟೆ ಹಾಸಿ ಎರಡೂ ದೇವತೆಗಳ ಮುಂದೆ ಮಲಗಿಸುತ್ತಾರೆ,ವಿಧಿವತ್ತಾಗಿ ಪೂಜಿಸಿ , ನೈವೇದ್ಯ ತೋರಿಸಿ ಇಬ್ಬರಿಗೂ ಆರತಿ ಮಾಡುವುದು ನಡೆದು ಬಂದ ಪದ್ಧತಿ. ಬಾಣಂತಿಗೆ ಸಜ್ಜಿಗೆ ಮೆತ್ತಗಿನ ಅನ್ನ ತುಪ್ಪ ಮೆಂತೆ ಹಿಟ್ಟು ಉಣಬಡಿಸುವುದು
ಆ ದಿನದಿಂದ ಸಂಜೆಯ ಸಮಯದಲ್ಲಿ ಕೂಸಿಗೆ ಗುಟಿ ಹಾಕಲು ಪ್ರಾರಂಭಿಸುವ ಸಂಪ್ರದಾಯ. ಗುಟಿಯಲ್ಲಿ ಕೆಳಗೆ ಕಾಣಿಸಿದ ಸಾಮುಗ್ರಿಗಳು ತಾಯಿಯು ತನ್ನ ಹಾಲಲ್ಲಿ ತೇಯ್ದು ಮಿಶ್ರಣ ಮಾಡಿ ಕೂಸಿಗೆ ಕುಡಿಸುತ್ತಾರೆ, ಇದಕ್ಕೆ ಗುಟಿ ಹಾಕುವುದು ಎನ್ನುತ್ತಾರೆ. ಈ ಕ್ರಿಯೆಯು ಚನ್ನಾಗಿ ಹೆಚ್ಚಿಸುತ್ತ ಹೋಗಿ ಆರು ತಿಂಗಳುಗಳ ವರೆಗೆ ಮಾಡುವ ಪದ್ಧತಿ ಇದೆ. ಈ ಮಿಶ್ರಣ ಔಷಧೀ ರೂಪವಾಗಿ ಕೂಸಿನ ಬೆಳವಣಿಗೆ ಸರ್ವತೋಮುಖವಾಗಿ ಶರೀರವು ಆರೋಗ್ಯ ಪೂರ್ಣವಾಗಿ ಸುಧಾರಿಸುತ್ತಾ ಹೋಗುತ್ತದೆ. ಜೊತೆಗೆ ಬಂಗಾರ ಜೇನುತುಪ್ಪವನ್ನು ತೇದು ಹಾಕುವುದರಿಂದ ಮೆದುಳಿನ ಮತ್ತು ಮೇಧಾ ವೃದ್ಧಿಯಾಗುವುದು ಎಂಬುದು ವೈಜ್ಞಾನಿಕ ಸತ್ಯ.
1) ತ್ರಿಫಳಾ : ಒಣಗಿದ ನೆಲ್ಲಿಕಾಯಿ,ಮಾಪಳಕಾಯಿ,ತಾರಿಕಾಯಿ : ವಾತ ಪಿತ್ತ ಕಫಗಳನ್ನು ಸಮತೋಲಗೊಳಿಸಿ ಅಗ್ನಿ
ಉದ್ದೀಪನಗೊಳಿಸುವುದು.
2) ಮುರುಡಸಿಂಗಿ : ಹೊಟ್ಟೆಮುರಿ ನೋವನ್ನು ನಿವಾರಣೆ ಮಾಡುವ ಔಷಧಿ.
3 ) ಕೂಸಿನ ಬೋಳ : ಜ್ವರ ನಿವಾರಕ
4 ) ಬಜ್ಜಿ ವಾವಡಿಂಗ : ಶಾರೀರಿಕ ಶಾಖವನ್ನು ಕಾಪಾಡುವುದು.
5) ಹುಣಸೆ ಬೀಜ : ಸ್ಥಂಬನ ಮಲವಿಸರ್ಜನೆಯಲ್ಲಿ ನಿಯಮಿತತೆ.
6 ) ಜೇನು ತುಪ್ಪ : ಬೌದ್ಧಿಕ ಬೆಳವಣಿಗೆ
7 ) ಸುವರ್ಣ : ಪ್ರತ್ಯಕ್ಷ ಮೆದುಳಿನ ಮತ್ತು ಮೇಧಾ ವೃದ್ಧಿ
8 ) ಗಸಗಸೆ ಬಂಡಿ,ಅಥವಾ ಜಾಜಿಕಾಯಿ : ಯಾವಾಗಲಾದರು ಅವಶ್ಯಕವೆನಿಸಿದಾಗ ಸ್ವಲ್ಪವೇ ತೇದು ಹಾಕುವುದು,
ಆರಾಮದ ನಿದ್ರೆಗಾಗಿ,ಬಹಳೇ ಅಳುತ್ತಿರುವಾಗ,ಕಿರಿಕಿರಿ ಮಾಡುತ್ತಿರುವಾಗ ಯಾವಾಗಲೂ ಹಾಕುವುದಲ್ಲ
ಮುಂದೆ ಬಾಣಂತಿ ಕೂಸು ದೇವರ ಗುಡಿಗೆ ಹೋಗುವ ದಿನದಂದು ಎಲ್ಲ ಐದೂ ದೇವರುಗಳನ್ನು ಪೂಜಿಸಿ ಇಬ್ಬರಮೆಲಿಂದ ಮೇಲಿನಿಂದ ಕೆಳಗೆ ಐದುಸಲ ಇಳಿಸಿ ಕಟ್ಟಿದ ಬಟ್ಟೆ ಸಮೇತ ಕೆರೆಯಲ್ಲೋ,ಬಾವಿಯಲ್ಲೋ,ನದಿಯಲ್ಲೋ ವಿಸರ್ಜಿಸುವುದು ರೂಢಿ ಯಾಗಿ ಬಂದಿದೆ.
ಪಾಲಕಾರೋಹಣ ( ತೊಟ್ಟಿಲಲ್ಲಿ ಹಾಕುವುದು ) ನಾಮಕರಣ : ಜನ್ಮ ದಿನದಿಂದ ಬಾಲಕನಿಗೆ 12 ನೇ ದಿವಸ, ಬಾಲಕಿಗೆ 13 ನೇ ದಿವಸ ನಾಮಕರಣಕ್ಕೆ ಪ್ರಶಸ್ಥ ಮುಂದುಡಿದರೆ ಮುಹೂರ್ತ ನೋಡಬೇಕು.
ಶಿಶುವಿಗೆ ಪಯಃ ಪಾನ : ಪ್ರಸವ ದಿನದಿಂದ 12 ನೇ ದಿವಸ ಹೆಚ್ಚಿನ ಹಾಲು ಹಾಕಲು ಅನ್ನ ಪ್ರಾಶನೋಕ್ತ ದಿನಗಳಲ್ಲಿ ರಾಹು ರಹಿತವಾದ ದಿಕ್ಕಿನಲ್ಲಿ ಶಿಶುವಿನ ಮುಖಮಾಡಿ ಶಂಖದಿಂದ ಹಾಲನ್ನು ಕುಡಿಸಬೇಕು.
ಕರ್ಣ ವೇಧ ( ಕಿವಿ ಚುಚ್ಚುವುದು ) : ಜನ್ಮದಿನದಿಂದ 11,12,16 ನೇ ದಿವಸದಲ್ಲಿ ಕಿವಿ ಚುಚ್ಚುವುದು ಪ್ರಶಸ್ಥ
ಸೂತಿಕಾ ದೇವ ದರ್ಶನ (ಬಾಣಂತಿ ಕೂಸು ದೇವರ ಗುಡಿಗೆ ಹೋಗುವುದು ) : ಪ್ರಸವ ಮಾಸದಿಂದ 3 ನೇ ಅಥವಾ 4 ನೇ ತಿಂಗಳಲ್ಲಿ ದಿನ ಶುದ್ಧಿ ಇರುವಾಗ ಬಾಣಂತಿಗೂ ಕೂಸಿಗೂ ದೇವ ದರ್ಶನ ಪ್ರಶಸ್ಥ
ಅನ್ನ ಪ್ರಾಶನ : ಜನ್ಮದಿನದಿಂದ 6 ನೇ ಅಥವಾ 8 ನೇ ತಿಂಗಳಲ್ಲಿ ಬಾಲಕನಿಗೆ, 5 ನೇ ಅಥವಾ 7 ನೇ ತಿಂಗಳಲ್ಲಿ ಬಾಲಕಿಗೆ ಪಂಚಾಂಗ ಶುದ್ಧಿ ಇರುವಾಗ ಅನ್ನ ಪ್ರಾಶನ ಮಾಡಿಸುವುದು ಉತ್ತಮ.
ಪ್ರಥಮ ಕೇಶ ಖಂಡನ ( ಜಾವಳ ಬಾಲಕರಿಗೆ ) : ಒಂದು ಕಾಲದಲ್ಲಿ ಬಾಲಕಿಯರ ಜಾವಳವನ್ನು ತೆಗೆಯುತ್ತಿದ್ದರು, ಈಗ ವಾಡಿಕೆಯಲ್ಲಿಲ್ಲ.
ಅಕ್ಷರಾರಂಭ : ( ಉಪನಯನ ಪೂರ್ವದಲ್ಲಿ ) ಐದನೇ ವರ್ಷದಲ್ಲಿ ಉತ್ತರಾಯಣ, ಶುಭ ತಿಥಿ, ಸ್ಥಿರ ರಾಶಿ ರಹಿತ, ನಿರ್ದುಷ್ಟ ಲಗ್ನದಲ್ಲಿ ಅಕ್ಷರಾರಂಭ ಉತ್ತಮ.
|| ಶ್ರೀ ಕೃಷ್ನಾರ್ಪಣಮಸ್ತು ||
No comments:
Post a Comment