ಕನ್ನಡದಲ್ಲಿ ವರ್ಷದ ಪ್ರತಿಯೊಂದು ಹುಣ್ಣಿಮೆಗೂ ಬೇರೆ ಬೇರೆ ಹೆಸರುಗಳಿವೆ ಎನ್ನುವುದು ಸ್ವಲ್ಪ ಗಮನಿಸಿದರೆ ಸನಾತನ ಸಂಸ್ಕ್ರತಿಯ ಭವ್ಯ ಶ್ರೀಮಂತಿಕೆ ಹೆಚ್ಚಿಸಿದ ಕೀರ್ತಿ ಹಿಂದಿನ ನಾಗರಿಕ ಜನತೆಯದಾಗಿದೆ
ಶ್ರಾವಣ ಹುಣ್ಣಿಮೆ ದಿನ ಯಜುರ್ವೇದ ಉಪಾಕರ್ಮವನ್ನು, ಚತುರ್ದಶಿ ದಿನ ಋಗ್ವೇದದ ಉಪಾಕರ್ಮವನ್ನು ಆಚರಿಸುತ್ತ ಬಂದಿರುವುದು ನಮ್ಮ ಭಾರತದ ದೇಶಾದ್ಯಂತ ಸಂಸ್ಕೃತಿಯ ಪ್ರತೀಕವೆಂದು ಆಚರಿಸಲಾಗುತ್ತದೆ. ಉಪಾಕರ್ಮ ಅಂದರೆ 'ಆರಂಭ' ಎಂದರ್ಥ. ಅಂದರೆ ಇಂದಿನಿಂದ ಶುರು ಎಂದು ಅರ್ಥ.ಈ ಹಬ್ಬದ ಹುಟ್ಟು ವೇದ ಕಾಲದಿಂದಲೂ ಆಚರಣೆಯಾಗುತ್ತಾ ಬಂದಿದ್ದಕ್ಕೆ ಹಲವು ಪುರಾವೆಗಳು, ಪುರಾಣಗಳು ಸಾಕ್ಷಿಯಾಗಿವೆ. ನಮ್ಮ ದೇವರು, ದೇವತೆಗಳು, ಋಷಿ ಮುನಿಗಳು ಈ ದಿನವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದರು ಎಂದು ಇತಿಹಾಸ ಹೇಳುತ್ತದೆ.
ಉಪಾಕರ್ಮ ಹಬ್ಬವನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಹುಣ್ಣಿಮೆಯಂದು (ನೂಲು ಹುಣ್ಣಿಮೆ) ಎಂದು ಆಚರಿಸಲಾಗುತ್ತದೆ. ಧನಿಷ್ಠ ನಕ್ಷತ್ರದಂದು ಹೋಮವನ್ನು ಮಾಡಿ ಮತ್ತು ಹೊಸ ಜನಿವಾರ ಯಜ್ಞೋಪವೀತ ಧಾರಣೆ ಮಾಡುತ್ತಾರೆ.
ಉಪಾಕರ್ಮಕ್ಕೆ ಒಂದು ಕತೆ ಇದೆ. ಒಮ್ಮೆ ಬ್ರಹ್ಮದೇವನಿಗೆ ತನ್ನ ಜ್ಞಾನ ಮತ್ತು ತಾನೇ ಸೃಷ್ಟಿಕರ್ತನಾಗಿರುವ ಬಗ್ಗೆ ಜಂಭ ಉಂಟಾಗಿ ತ್ರಿಮೂರ್ತಿಗಳಲ್ಲಿ ತಾನೇ ಶ್ರೇಷ್ಠ ಎಂದು ಬೀಗಿದ. ಆಗ ಮಹಾವಿಷ್ಣು ಬ್ರಹ್ಮದೇವನು ಆಸೀನರಾಗಿದ್ದ ಕಮಲದ 2 ನೀರಿನ ಹನಿಯಿಂದ ಮಧು ಮತ್ತು ಕೈಠಭ ಎಂಬ ರಾಕ್ಷಸರನ್ನು ಸೃಷ್ಟಿಸಿ ಅವರಿಗೆ ಬ್ರಹ್ಮನು ರಚಿಸಿದ 4 ವೇದಗಳನ್ನು ಗುಪ್ತ ರೀತಿಯಲ್ಲಿ ಸಂರಕ್ಷಿಸ ಬೇಕೆಂದು ಆಜ್ಞಾಪಿಸಿದ. ಮಹಾವಿಷ್ಣುವಿನ ಅಣತಿಯಂತೆ ಮಧು ಮತ್ತು ಕೈಠಭರು ಬ್ರಹ್ಮನಿಂದ ವೇದಗಳನ್ನು ಅಪಹರಿಸಿದರು. ಆಗ ಬ್ರಹ್ಮದೇವನು ಮಹಾವಿಷ್ಣುವನ್ನು ಪ್ರಾರ್ಥಿಸಿ ತಾನು ಮಾಡಿದ ತಪ್ಪು ಅರಿವಾಯಿತು. ನಿನ್ನ ಆಜ್ಞೆಯಿಲ್ಲದೆ ಎಲ್ಲೂ ಏನು ನಡೆಯುವುದಿಲ್ಲ ಎಂದು ಅರಿವಾಯಿತು. ನನ್ನ ಮಹಾಪರಾಧವನ್ನು ಮನ್ನಿಸಿ ಆ ವೇದಗಳನ್ನು ಸಂರಕ್ಷಿಸಬೇಕೆಂದು ಕೋರುತ್ತಾನೆ. ಆಗ ಮಹಾವಿಷ್ಣು ಹಯಗ್ರೀವನಾಗಿ (ಕುದುರೆಯಾಗಿ) ಅವತಾರ ತಾಳಿ ಮಧು ಮತ್ತು ಕೈಠಭರಿಂದ ವೇದಗಳನ್ನು ಸಂರಕ್ಷಿಸಿದ ಎಂದು ಪುರಾಣದಲ್ಲಿ ಉಲ್ಲೇಖವಿದೆ.
ಈ ದಿನವನ್ನು 'ಹಯಗ್ರೀವ ಉತ್ಪತ್ತಿ' ಎಂದು ಸಂಸ್ಕೃತ ದಿನಾಚರಣೆ ಎಂಬುದಾಗಿಯೂ ಆಚರಿಸುತ್ತಾರೆ. ಎಲ್ಲಾ ವೇದಗಳನ್ನು ಸಂರಕ್ಷಿಸಿದ ದಿನವಾದ್ದರಿಂದ ಅಂದಿನ ದಿನದಿಂದ 'ಉಪಾಕರ್ಮ' ಹಬ್ಬವನ್ನು ಆಚರಿಸುವರು.
ಮೌಜೀಂ ಯಜ್ನೋಪವೀತ
ನವದಂಡಂಚ ಧಾರಣಂ ಅಂದರೆ ಕಟಿಸೂತ್ರಂಚ ನವವಸ್ತ್ರಂ ತಥೈವಚ ||
ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಈ ಹಬ್ಬವನ್ನು ಆಚರಿಸಲಾಗುವುದು. ಈ ದಿನ ಹಳೆಯ ಜನಿವಾರ(ಯಜ್ನೋಪವೀತ) ವನ್ನು ತೆಗೆದು ಹೊಸ ಜನಿವಾರವನ್ನು ಧರಿಸುವ ಸಂಪ್ರದಾಯ ನಡೆದು ಬಂದಿದೆ.
ಒಂದೊಂದು ಬಾರಿ ಎರಡು ಒಟ್ಟಿಗೆಯೂ ಬರಬಹುದು. ಈ ಹಬ್ಬವನ್ನು ಜನಿವಾರದ ಹಬ್ಬ ಎಂದೂ ಕರೆಯುತ್ತಾರೆ. ಉಪಾಕರ್ಮ ಒಂದು ವೈದಿಕ ಕ್ರಿಯಾವಿಧಿ , ಈ ಕ್ರಿಯಾವಿಧಿಯನ್ನು ದೈನಂದಿನ ಜೀವನದಲ್ಲಿ ಸಂಧ್ಯಾ ವಂದನೆ ಮಾಡುವ ಸಮುದಾಯದವರು ಆಚರಿಸುತ್ತಾರೆ ಇದನ್ನು ಸಾಮಾನ್ಯವಾಗಿ ತಮ್ಮ ಮನೆಗಳಲ್ಲಿ, ಭಜನೆ ಮನೆಗಳಲ್ಲಿ , ಯಜಮಾನರ ಪೇಟೆ ಮನೆಗಳಲ್ಲಿ, ಮತ್ತು ದೇವಾಲಯದಲ್ಲಿ ಸಾಮೂಹಿಕವಾಗಿ ಆಚರಿಸುವರು.
ಉಪಾಕರ್ಮದ ದಿನ ಗಾಯಿತ್ರಿ ಜಪವನ್ನು ಲೋಕ ಕಲ್ಯಾಣದ ದೃಷ್ಟಿಯಲ್ಲಿ ಮಾಡುತ್ತಾರೆ ಹಾಗೂ ಹಳೆಯ ಜನಿವಾರವನ್ನು ವಿಸರ್ಜಿಸುತ್ತಾರೆ. ವರ್ಷದಲ್ಲಿ ಮಾಡಿದ ಪಾಪವನ್ನು ಕಳೆಯಲು ಗಾಯಿತ್ರಿ ಮಂತ್ರ ಜಪಿಸುವ ಸಂಪ್ರದಾಯ ವಾಗಿರುತ್ತದೆ .
ನೂಲು ಹುಣ್ಣಿಮೆ ದಿನ ನೇಕಾರರುಗಳು ತಮ್ಮ ಮನೆಯಲ್ಲಿನ ನೂಲುಗಳನ್ನು ತಂದು ಕಳಸ ಪ್ರತಿಷ್ಠೆ ಮಾಡಿ ಎಲ್ಲಾ ರೀತಿಯ ನೇಕಾರಿಕೆಯ ವಸ್ತುಗಳನ್ನು ಮತ್ತು ಕತ್ತಿ ಗುಂಡು ಇತರೆ ಆಯುಧಗಳ ಪೂಜೆ ಮಾಡುವ ಪದ್ಧತಿ ಇದೆ.
ಅದೇ ದಿನ ರಕ್ಷಾ ಬಂಧನ ಅಥವಾ ರಾಖಿ ಹಬ್ಬವನ್ನು ಸೋದರ ಸೋದರಿಯರು ಆಚರಿಸುತ್ತಾರೆ. ಇವರುಗಳ ಅಕ್ಕರೆ, ಅನುರಾಗಗಳು ಜೀವನ ಪರ್ಯಂತ ಇರಬೇಕೆಂದು ನೆನಪಿಸುವ ದಿನವಿದು.
ಭಾರತೀಯರು ಶ್ರಾವಣ ಮಾಸದಲ್ಲಿ ಆಚರಿಸುವ ಒಂದು ಹಬ್ಬ. ಆ ದಿನ ಸಹೋದರಿಯರು ತಮ್ಮ ಸಹೋದರನ ಮುಂಗೈಗೆ ರಕ್ಷಾಸೂತ್ರ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ಬೇಡುತ್ತಾರೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟ ಗೊಳಿಸುವ ಹಬ್ಬ ಇದಾಗಿದೆ.
ಭಾರತದಲ್ಲಿ ಮಾತ್ರ ಹೆಚ್ಚು ಪ್ರಚಲಿತವಿದ್ದ 'ರಕ್ಷಾಬಂಧನ' ಅಥವಾ 'ರಾಖಿ' ಹಬ್ಬವನ್ನು ಇತ್ತೀಚಿನ ವರ್ಷಗಳಲ್ಲಿ ಭಾರತದಾದ್ಯಂತ ಎಲ್ಲರೂ ಆಚರಿಸುತ್ತಾರೆ. ಆದರೆ ಅಣ್ಣ ತಂಗಿಯರ ಬಾಂಧವ್ಯವನ್ನು ಪ್ರತಿಯೊಬ್ಬರೂ ಭಾವನಾತ್ಮಕವಾಗಿ ಸ್ಮರಿಸುವ ಈ ದಿನ ಬಾಲ್ಯದ ಅನೇಕ ಸಿಹಿಕಹಿ ನೆನಪುಗಳನ್ನು ಮೂಡಿಸುತ್ತದೆ.
ರಕ್ಷಾ ಬಂಧನ ಆಚರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ. ಪ್ರತಿಯೊಬ್ಬ ಸಹೋದರಿಯು ಸಮಾಜದ ದುಷ್ಟಶಕ್ತಿಗಳಿಂದ ರಕ್ಷಿಸೆಂದು ತನ್ನ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟುತ್ತಾಳೆ. ಪ್ರತಿಯೊಬ್ಬ ಸಹೋದರನೂ ಈ ಸಮಯದಲ್ಲಿ ಸಹೋದರಿಯೆಡೆಗೆ ತನ್ನ ಭ್ರಾತತ್ವ ಪ್ರೇಮವನ್ನು ಉಜ್ವಲಗೊಳಿಸಬೇಕೆಂಬುದು ರಕ್ಷಾಬಂಧನ ಹಬ್ಬದ ನೀತಿಯಾಗಿದೆ
No comments:
Post a Comment