Tuesday, December 02, 2025

YELLU AMAVASYE. ಎಳ್ಳು ಅಮಾವಾಸ್ಯೆಯ ಮಹತ್ವ ಆಚರಣೆ

ಎಳ್ಳು ಅಮಾವಾಸ್ಯೆಯ ಮಹತ್ವ ಮತ್ತು ಆಚರಣೆ

        
ಎಳ್ಳು ಅಮಾವಾಸ್ಯೆಯ ಮಹತ್ವ ಭೂತಾಯಿಗೆ ಪೂಜೆ: ಈ ಹಬ್ಬವು ಭೂಮಿ, ನೀರು ಮತ್ತು ಬೆಳೆಯ ಅರೋಗ್ಯವನ್ನು ಪ್ರತಿನಿಧಿಸುತ್ತದೆ. ರೈತರು ಭೂಮಿಗೆ ಸೀಮಂತ ಮಾಡುವ ರೀತಿಯಲ್ಲಿ ಪೂಜೆ ಸಲ್ಲಿಸುತ್ತಾರೆ.
ಚರಗ ಚೆಲ್ಲುವ ಸಂಪ್ರದಾಯ: ಹಿಂಗಾರು ಬೆಳೆಗಳಲ್ಲಿ ಬೆಳೆಯುವ ಕಾಯಿಕೊರಕ ಹುಳಗಳನ್ನು ನಿಯಂತ್ರಿಸಲು ಹಕ್ಕಿಗಳಿಗೆ ಆಹಾರ ನೀಡುವುದು ಚರಗ ಚೆಲ್ಲುವಿಕೆಯ ಹಿಂದಿರುವ ವೈಜ್ಞಾನಿಕ ಕಾರಣವಾಗಿದೆ.
     ಸಾಮೂಹಿಕ ಊಟ: ಕುಟುಂಬದೊಂದಿಗೆ ಹೊಲಕ್ಕೆ ಭೇಟಿ ನೀಡಿ, ಎತ್ತಿನ ಬಂಡಿಯಲ್ಲಿ ಊಟದ ಬುತ್ತಿಯ ಗಂಟುಗಳನ್ನು ಕಟ್ಟಿ, ವಿಶೇಷವಾದ ಆಹಾರವನ್ನು ಒಟ್ಟಿಗೆ ಸವಿಯಲಾಗುತ್ತದೆ.
         ವಿವಿಧ ತರಹದ ಆಹಾರಗಳು: ಸಜ್ಜೆ,  ಸೆಜ್ಜೆಯ ಗುಂಡು ಗುಂಡಾದ ಕಡುಬುಗಳು ಭಜ್ಜಿ ಜೋಳದ ರೊಟ್ಟಿ, ಎಣ್ಣೆಗಾಯಿ, ಶೇಂಗಾ ಹೋಳಿಗೆ, ಚಟ್ನಿ, ಕಾಳು ಮುಂತಾದ ಸಾಂಪ್ರದಾಯಿಕ ಆಹಾರಗಳನ್ನು ತಯಾರಿಸಲಾಗುತ್ತದೆ.
ದಾನ ಮತ್ತು ಪಿತೃ ತರ್ಪಣ: ಪೂರ್ವಜರ ಆತ್ಮಗಳ ಶಾಂತಿಗಾಗಿ ಮತ್ತು ಶುಭ ಫಲಗಳಿಗಾಗಿ ಈ ದಿನ ದಾನ (ಹಸುಗಳು, ಬಡವರಿಗೆ ಆಹಾರ, ಬಟ್ಟೆ, ಹಣ) ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ.
ಪಾಂಡವರು ಹಾಗೂ ಕೌರವರ ನಡುವೆ ನಡೆದ ಕುರುಕ್ಷೇತ್ರ ಯುದ್ಧದಲ್ಲಿ ಮಡಿದಂತಹ ಅವರ ಬಂಧುಮಿತ್ರರಿಗಾಗಿ ಪಿಂಡ ಪ್ರಧಾನ ಮಾಡಿರುವ ಎಳ್ಳು ನೀರು ಬಿಟ್ಟಿರುವ ಹಿನ್ನಲೆಯಲ್ಲಿ ಈ ದಿನವನ್ನು ಎಳ್ಳಮವಾಸ್ಯೆ (ಎಳ್ಳು ಅಮವಾಸ್ಯೆ) ಎಂದು ಆಚರಿಸಲಾಗುತ್ತದೆ.
ಗ್ರಾಮೀಣ ಸಂಸ್ಕೃತಿ: ಎತ್ತುಗಳಿಗೆ ಶೃಂಗರಿಸಿ, ಗ್ರಾಮೀಣ ಸೊಗಡನ್ನು ಪ್ರದರ್ಶಿಸಲಾಗುತ್ತದೆ. ಈ ಹಬ್ಬವನ್ನು ಜಾತಿ, ಮತ ಭೇದವಿಲ್ಲದೆ ಆಚರಿಸಲಾಗುತ್ತದೆ. ಇದೊಂದು ದಿನ ರೈತರ ಹಬ್ಬ. ರೈತರು ಅವರ ಜಮೀನಿನಲ್ಲಿ ಎಳ್ಳು ಹಾಗೂ ಬೆಲ್ಲವನ್ನು ಚಿಮ್ಮುತ್ತಾರೆ. ಇವುಗಳು ಭೂಮಿಯ ಫಲವತ್ತತೆಯನ್ನು ಕಾಪಾಡುವ ಎರೆಹುಳಗಳಿಗೆ ಆಹಾರವಾಗುತ್ತದೆಯೆಂಬ ಉದ್ದೇಶದಿಂದ ಚಿಮ್ಮಲಾಗುತ್ತದೆ. ಅವರ ಹೊಲದಲ್ಲಿ ಬೆಳೆದ ಹಿಂಗಾರು ಪೈರುಗಳ ನಡುವೆ ಬನ್ನಿಮರವನ್ನು  ಹುಡುಕಿ ಐದು ಜೋಳದ ದಂಟುಗಳನ್ನು ಮೇಲ್ಭಾಗದಲ್ಲಿ ಕಟ್ಟಿ ಅದಕ್ಕೆ ಪೂಜೆ ಮಾಡಿ ಭೂಮಿತಾಯಿಗೆ ಚರಗ ಚೆಲ್ಲುವುದು ಈ ಹಬ್ಬದ ವಿಶೇಷವಾಗಿದೆ. ಕೆಲವರು ಪಾಂಡವರ ಸ್ವರೂಪವಾಗಿ ಐದು ಕಲ್ಲುಗಳಿಗೆ ಅವಕ್ಕೆ ಸುಣ್ಣ ಮತ್ತು ಹುರಮುಂಜ ( ಕ್ಯಾವಿ ) ಹಚ್ಚಿ ಪೂಜೆ ಸಲ್ಲಿಸುತ್ತಾರೆ. "  ಸೆಜ್ಜಿ ರೊಟ್ಟಿ ಚೌಳಿಕಾಯಿ ಚಂಗಭಲೋ " ಎನ್ನುತ್ತಾ ಮನೆಯ ಎಲ್ಲರೂ ಕೈಯಲ್ಲಿ ಆ ದಿನ ತಂದಿದ್ದ ಎಲ್ಲಾ ಆಹಾರದ ಎಡೆ ಹಿಡಿದು ಐದು ಸಲ ಪ್ರದಕ್ಷಿಣೆ ಹಾಕಿ ನಮಸ್ಕರಿಸುವ ರೀತಿ ನಡೆದು ಬಂದಿದೆ.ಈ ಹಬ್ಬಕ್ಕೆ ಮೂರು ನಾಲ್ಕು ದಿನವಿರುವಾಗಲೇ ರೈತರ ಮನೆಗಳಲ್ಲಿ ನಾನಾ ರೀತಿಯ ಚಟ್ನಿ, ಕಾಳು, ಎಣ್ಣೆಗಾಯಿ, ಎಳ್ಳು ಹಾಗೂ ಸೇಂಗಾ ಹೋಳಿಗೆ, ಎಳ್ಳು ಹಚ್ಚಿದ ಸಜ್ಜೆ, ಜೋಳದ ರೊಟ್ಟಿ, ಚಿಕ್ಕಿ, ಬರ್ತಾ, ಪಾಲಕ್ ಮೆಂತ್ಯೆ, ಉಪಯೋಗಿಸಿ ತಯಾರಿಸುವ ತಿಂಡಿ, ಭಜ್ಜಿ ಸೇರಿದಂತೆ ನಾನಾ ಬಗೆಯ ಖಾದ್ಯವನ್ನು ತಯಾರಿಸಿ ನಂತರ ಕೃಷಿಕರು ಕುಟುಂಬ ಸಮೇತರಾಗಿ ಸಹಭೋಜನ ಮಾಡಿ ಸಂಭ್ರಮಿಸುತ್ತಾರೆ.
     ಎಳ್ಳು ಅಮಾವಾಸ್ಯೆಯ ಸಮಯದಲ್ಲಿ ಹಿಂಗಾರು ಪೈರುಗಳು ಬೆಳೆದಿರುತ್ತವೆ. ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಜೋಳ ಮತ್ತು ಕಡಲೆಯನ್ನು ಬೆಳೆಯುತ್ತಾರೆ. ಹಾಗಾಗಿ ಜೋಳದ ಮಧ್ಯೆ ಕಡಲೆ ಬೆಳೆಗೆ ಕಾಯಿಕೊರಕ ಹುಳುವು ಬಿದ್ದು ಬೆಳೆಯ ನಾಶಕ್ಕೆ ಕಾರಣವಾಗುತ್ತದೆ. ಆದ್ದರಿಂದ ನಾನಾ ಬಗೆಯ ಖಾದ್ಯಗಳನ್ನು ಚರಗ ಚೆಲ್ಲಿದಾಗ ಅವುಗಳನ್ನು ತಿನ್ನುವ ಸಲುವಾಗಿ ಹಕ್ಕಿಗಳು ಹೊಲಕ್ಕೆ ಬಂದಾಗ ಈ ಹುಳಗಳನ್ನು ಕಂಡು ಅವುಗಳನ್ನು ತಿನ್ನುತ್ತವೆ. ಇದರಿಂದ ಕಾಯಿಕೊರಕದ ಹುಳುಗಳ ನಿಯಂತ್ರಣವಾಗುತ್ತದೆ. ಈ ಕಾರಣಕ್ಕಾಗಿ ಚರಗ ಚೆಲ್ಲುವ ಪರಿಪಾಠವಿದೆ.
        ಈ ದಿನ ಎತ್ತುಗಳಿಗೆ ಝೂಲ ಹಾಕಿ ಕೋಡಗಳಿಗೆ ಅಣಸು, ಗೊಂಡೆ, ಹೂ ಹಣೆಕಟ್ಟುಗಳಿಂದ ಅಲಂಕಾರ ಮಾಡುತ್ತಾರೆ. ಅವುಗಳ ಕೊರಳಿಗೆ ಮತ್ತು ಕೊರಳಿಗೆ ಹಣೆಗೆ ಕಟ್ಟಿದ ಗೆಜ್ಜೆಯನ್ನು ನುಡಿಸುತ್ತ ಹೊಲಗಳ ಕಡೆಗೆ ಬಂಡಿಯನ್ನು ಎಳೆಯುವ ರೀತಿಯು ಗ್ರಾಮೀಣ ಸೊಗಡನ್ನು ಪರಿಚಯಿಸುತ್ತದೆ ಎತ್ತುಗಳಿಗೆ ಆಕಳು ಎಮ್ಮೆ  ಕೋಣ ಆಡು ಜಾನುವಾರುಗಳಿಗೆ ನೆನೆ ಹಾಕಿದ ಜೋಳ ಅಥವಾ ಗೋಧಿಯನ್ನು ತಿನ್ನಿಸುತ್ತಾರೆ. ಹಾಗೆಯೇ ಎತ್ತಿನಗಾಡಿ, ಟ್ರ್ಯಾಕ್ಟರುಗಳಿಗೆ ರಿಬ್ಬನ್, ಬಲೂನುಗಳನ್ನು ಕಟ್ಟಿ ಸಿಂಗರಿಸುತ್ತಾರೆ.
      ಈ ದಿನ ರೈತರು ಉತ್ತಮ ಇಳುವರಿಗಾಗಿ ಪ್ರಾರ್ಥಿಸಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಿಸುತ್ತಾರೆ. ಶನಿ ದೋಷ ಇರುವವರು, ಸಾಡೇಸಾತಿ ಪೂಜೆ ಸಲ್ಲಿಸಿ ಎಳ್ಳು ಎಣ್ಣೆ ಅರ್ಪಿಸಿ ಶನಿ ದೇವರಿಗೆ ಪ್ರಾರ್ಥನೆ ಮಾಡುತ್ತಾರೆ
           ಮಹಾಭಾರತದಲ್ಲಿ ಪಾಂಡವರು ಕುರುಕ್ಷೇತ್ರ ಯುದ್ಧದಲ್ಲಿ ಮಡಿದ ಅವರ ಬಂಧಗಳಿಗೆ ತರ್ಪಣ ಬಿಟ್ಟಿರುವ ದಿನ. ಹಾಗಾಗಿ ಈ ದಿನ ಶ್ರಾದ್ಧಕಾರ್ಯಗಳನ್ನು ಮಾಡಲು ಸೂಕ್ತವಾದ ದಿನವಾಗಿದೆ. ಈ ದಿನ ತರ್ಪಣ ಬಿಟ್ಟು, ಬಡವರಿಗೆ ಊಟ ಹಾಕಿ, ದಾನ ನೀಡಿ ಶ್ರಾದ್ಧ ಕಾರ್ಯಗಳನ್ನು ಮಾಡುವುದರಿಂದ ಬದುಕಿನಲ್ಲಿ ಶಾಂತಿ, ನೆಮ್ಮದಿ ಇರುತ್ತದೆಯೆಂಬ ನಂಬಿಕೆಯಿದೆ. ವಿಶೇಷವಾಗಿ ಎಳ್ಳನ್ನು ದಾನ ಮಾಡುತ್ತಾರೆ. ಎಳ್ಳಿಗೆ ಪಾಪ ನಾಶಮಾಡುವ ಶಕ್ತಿಯಿದೆ ಎನ್ನುವ ನಂಬಿಕೆ ಜನರಲ್ಲಿದೆ.
       ಎಳ್ಳು ಅಮಾವಾಸ್ಯೆಯನ್ನು ಭೂಮಿ ತಾಯಿಗೆ ಸೀಮಂತ ಮಾಡುವ ದಿನದ ರೀತಿಯಲ್ಲಿ ಆಚರಿಸುವುದು ವಿಶಿಷ್ಟ. ಭೂಮಿ, ನೀರು ಹಾಗೂ ನೀರೇಯನ್ನು ಸಮಾನವಾಗಿ ಪೂಜಿಸುವ, ಮೂರನ್ನೂ ಸಮೀಕರಿಸಿ ಆರಾಧಿಸುವ ವಿಶಿಷ್ಟ ಆಚರಣೆಯಿದು.
ಸೀಮಂತದಲ್ಲಿ ಸಮೃದ್ಧಿಯ ಸಂಕೇತವಾಗಿರುವ ಹಣ್ಣು ಹಂಪಲಗಳನ್ನು, ಆಹಾರಗಳನ್ನು ನೀಡುವಂತೆ ಎಳ್ಳಮಾವಾಸ್ಯೆಯ ದಿನ ಭೂತಾಯಿಗೆ ಹೊಲದಲ್ಲಿ  ಪೂಜಿಸಲಾಗುತ್ತದೆ.
    ಬೇಸಿಗೆಕಾಲದ ಪೂರ್ವಾರ್ಧದಲ್ಲಿ ಈ ಅಮಾವಾಸ್ಯೆ ಬರುವುದು. ಸಂಕ್ರಮಣಕ್ಕಿಂತ ಮೊದಲು. ಸುಗ್ಗಿ ಕಾಲದಲ್ಲಿ. ಆಗ ಎಲ್ಲ ಕಡೆ ಭೂಮಿ  ಬೆಳೆಗಳಿಂದ ನಳನಳಿಸುತ್ತಿರುತ್ತದೆ. ಚಳಿ ತೀವ್ರವಾಗಿರುತ್ತದೆ. ಮನುಷ್ಯನ ಜೀರ್ಣಾಂಗಗಳು ಸಂಕುಚಿತಗೊಳ್ಳುತ್ತವೆ. ಜೀರ್ಣಕ್ರಿಯೆ ಸಹ ಸರಾಗವಾಗಿರುವುದಿಲ್ಲ. ಎಳ್ಳು ಶರೀರದಲ್ಲಿ ಎಲುಬು  ರಕ್ತ ಮಾಂಸ ಖಂಡಗಳಲ್ಲಿ ಸ್ಥಿತಿ ಸ್ಥಾಪಕ ಹೆಚ್ಚಿಸುತ್ತದೆ ಸ್ನಿಗ್ಧದಿಂದ ದೇಹ ಬೆಚ್ಚಗಿಡುವ ಆಹಾರ ಪದಾರ್ಥಗಳ ಸೇವನೆಯಿಂದ ಅದನ್ನು ಸರಿದೂಗಿಸಲಾಗುತ್ತದೆ
     ವಿಶೇಷವಾಗಿ ಅವರೆಬೀಜ, ಕಡಲೆ ಬೀಜ, ವಟಾಣಿ, ತೊಗರಿ ಬೀಜ, ನೆನೆಸಿದ ಕಾಳು, ಮೆಂತಿಪಲ್ಯ, ಪಾಲಕ್, ಹುಳಿಚಿಕ್ಕಿ, ಹಸಿ ಹುಣಸೆ, ಈರುಳ್ಳಿ ಸೊಪ್ಪು, ಕೊತ್ತಂಬರಿ, ಕರಿಬೇವು, ಬೆಳ್ಳುಳ್ಳಿ, ಕಡಲೆ ಹಿಟ್ಟು ಮೊದಲಾದವುಗಳಿಂದ ‘ಭಜ್ಜಿ’ ತಯಾರಿಸುತ್ತಾರೆ. ಅಂಬಲಿ, ಜೋಳದ ಬಾನಾ, ಸಜ್ಜಿ ರೊಟ್ಟಿ, ಬಿಳಿಜೋಳದ ರೊಟ್ಟಿ, ಶೇಂಗಾ ಹೋಳಿಗೆ, ಜೋಳದಅಕ್ಕಿ ಹುಗ್ಗಿ, ಕನೋಲಿ, ಕರಜಿಕಾಯಿ ಮಾಡಲಾಗುತ್ತದೆ. ಇದಿಲ್ಲದೆ ಹಬ್ಬ ಅಪೂರ್ಣ. ಬೆಳ್ಳುಳ್ಳಿ ಕಾಯಿಸಿದ ಎಣ್ಣೆ ಹಾಕಿಕೊಂಡು ಭಜ್ಜಿಯೊಂದಿಗೆ ಸವಿಯುವುದೇ ಸಗ್ಗಸುಖ. ಪಚನಕ್ರಿಯೆಗೆ ಈ ಖಾದ್ಯ ಸಹಕಾರಿ ಎಂಬುದನ್ನು ವೈದ್ಯಕೀಯ ಕ್ಷೇತ್ರದವರೂ ಒಪ್ಪುತ್ತಾರೆ.
ಎಳ್ಳು ಅಮಾವಾಸ್ಯೆಯ ಹಿಂದಿನ ದಿನ ಕಾಯಿಪಲ್ಯ ದಿನವೆಂದು ಆಚರಿಸುತ್ತಾರೆ. ಅಂದರೆ, ಭಜ್ಜಿ ಸೇರಿದಂತೆ ಇತರೆ ಖಾದ್ಯಗಳನ್ನು ತಯಾರಿಸುವ ದಿನ ಎಂದರ್ಥ. ದಿನವಿಡೀ ಕಾಯಿಪಲ್ಯ, ಕಾಳು ಸ್ವಚ್ಛಗೊಳಿಸಿ, ಭಜ್ಜಿ, ರೊಟ್ಟಿ, ಅಂಬಲಿ, ಜೋಳದ ಬಾನಾ ತಯಾರಿಸುತ್ತಾರೆ. ಮರುದಿನ ತಯಾರಿಸಿದ ಎಲ್ಲ ಖಾದ್ಯಗಳನ್ನು ಬಿದಿರಿನಿಂದ ತಯಾರಿಸಿದ ಹೊಸ ಬುಟ್ಟಿಯಲ್ಲಿ ಸಂಗ್ರಹಿಸಿ, ತಲೆಯ ಮೇಲೆ ಇಟ್ಟುಕೊಂಡು ಹೊಲಕ್ಕೆ ಕೊಂಡೊಯ್ಯುತ್ತಾರೆ.  ಹೊಸ ಬಿದಿರಿನ ಬುಟ್ಟಿಯಲ್ಲಿಯ ಆಹಾರ ಪದಾರ್ಥಗಳ ಸಮೇತ ಆರಾಧನೆ ನಡೆಯುತ್ತದೆ ಅದರೊಂದಿಗೆ ಕುಟುಂಬದ ಎಲ್ಲ ಸದಸ್ಯರು ದೇವರ ಸ್ಮರಣೆ ಮಾಡುತ್ತ ಹೋಗುತ್ತಾರೆ. ಹೀಗೆ ಹೋಗುವಾಗ ಹಿಂತಿರುಗಿ ನೋಡುವುದಿಲ್ಲ. ಯಾರೊಂದಿಗೂ ಮಾತನಾಡುವುದಿಲ್ಲ. ಹೊಲದಲ್ಲಿ ಜೋಳದ ಕಳಿಕೆಯಿಂದ ಮಾಡಿರುವ ಕೊಂಪೆಯಲ್ಲಿ ಇಡುತ್ತಾರೆ.
ಕಬ್ಬು, ಬಿಳಿ ಜೋಳದ ದಂಟು, ಕಡಲೆ, ಕುಸುಬಿ, ಅಗಸಿ, ಗೋಧಿ ತೆನೆಗಳಿಂದ ಕೊಂಪೆಯನ್ನು ಸಿಂಗರಿಸುತ್ತಾರೆ. ಲಕ್ಷ್ಮಿ, ಭೂದೇವಿ, ಸರಸ್ವತಿ, ಪಾರ್ವತಿ ಹಾಗೂ ತಾಯಿಯರ ಪ್ರತೀಕವಾಗಿ ಐದು ಮಣ್ಣಿನ ಹೆಂಟೆ ಅಥವಾ ಕಲ್ಲುಗಳನ್ನಿಟ್ಟು ಗೋಧಿ ಹಿಟ್ಟಿನಿಂದ ಮಾಡಿದ ಹಣತೆ ದೀಪ ಬೆಳಗಿಸಿ ಪೂಜಿಸುತ್ತಾರೆ. ಕೊಂಪೆಯಲ್ಲಿ ಇರಿಸಿದ ವಿವಿಧ ಆಹಾರ ಪದಾರ್ಥಗಳನ್ನು ಮಿಶ್ರಣ ಮಾಡಿದ ದ್ರವರೂಪದ ಆಹಾರವನ್ನು ನೀರಿನ ತಂಬಿಗೆಯಲ್ಲಿ ತೆಗೆದುಕೊಂಡು ಕೊಂಪೆಯ ಸುತ್ತ ಜೋಳದ ದಂಟಿನಿಂದ ಚರಗ ಚೆಲ್ಲುತ್ತಾರೆ. ಮುಂದಿದ್ದಾತ ‘ವಲಿಗ್ಯಾ.. ವಲಿಗ್ಯಾ.. ಎಂದರೆ ಹಿಂದಿರುವ ವ್ಯಕ್ತಿ ‘ಚಾಲೋ ಪಲಿಗ್ಯಾ’ ಎನ್ನುವ ರೂಢಿಯೂ ಇದೆಯಂತೆ.
ಕೊನೆಯಲ್ಲಿ ಸರಗವನ್ನು ಚೆಲ್ಲಿ ಕೊಂಪೆಗೆ ನಮಸ್ಕಾರ ಮಾಡಿ, ಮನೆಯ ಮುತ್ತೈದೆಯವರು ಕನೊಲಿ, ಕರಜಿಕಾಯಿ ಅವರಲ್ಲಿ ಹಿರಿಯನ ಬೆನ್ನ ಮೇಲಿಡುವರು. ದೇವರಿಗೆ ನಮಸ್ಕರಿಸುವ ವ್ಯಕ್ತಿ ಎಡಗೈಯಿಂದ ಪಡೆದು ತಿನ್ನುವನು. ನಂತರ ಎಲ್ಲರೂ ಕುಳಿತು ಸಾಮೂಹಿಕವಾಗಿ ಊಟ ಮಾಡುವರು. ಬಂಧು ಬಾಂಧವರು, ನೆರೆಹೊರೆಯವರು, ಸ್ನೇಹಿತರನ್ನು ಹೊಲಕ್ಕೆ ಕರೆಸಿ ಉಣಬಡಿಸಲಾಗುತ್ತದೆ. ಕಬ್ಬು, ಕಡ್ಡಿ (ಹಸಿಕಡಲೆಗೆ ಸುಲಗಾಯಿ ಕಡ್ಡಿ ಎಂದು ಕರೆಯಲಾಗುತ್ತದೆ) ಸೇರಿದಂತೆ ಹೊಸ ಫಸಲನ್ನು ಕೊಟ್ಟು ಕಳಿಸುತ್ತಾರೆ. ಆಗ ಹೊಲದ ಅರಣಿಯ ಹೊಟ್ಟೆಯಲ್ಲಿ ನಿಂತ ನೀರನ್ನೇ ಸೋಶಿ  ಕುಡಿಯುವುದಂತೆ. 
ಹೆಣ್ಣು ಮಕ್ಕಳು ಹೊಲದಲ್ಲಿ ಗಿಡಕ್ಕೆ ಜೋಕಾಲಿ ಕಟ್ಟಿ ಆಡಿ ಸಂಭ್ರಮಿಸುತ್ತಾರೆ. ಗಂಡು ಮಕ್ಕಳು ಗಾಳಿಪಟ ಹಾರಿಸುತ್ತಾರೆ. ಸಂಜೆ ಅಗ್ನಿಕುಂಡದಲ್ಲಿ ಹಾಲುಕ್ಕಿಸುತ್ತಾರೆ. ಬುಟ್ಟಿ ಕೊಂಪೆಯಲ್ಲಿ ದೀಪ ಹಚ್ಚಿಕೊಂಡು ಅದನ್ನು ತಲೆಯ ಮೇಲೆ ಇಟ್ಟುಕೊಂಡು ಮನೆಗೆ ವಾಪಸಾಗುತ್ತಾರೆ. ಮನೆ ತಲುಪುವವರೆಗೆ ಎಲ್ಲೂ ನಿಲ್ಲುವುದಿಲ್ಲ. ತಂದಿದ್ದ ಹೊಸ ಫಸಲನ್ನು ಮನೆಯ ಚೌಕಟ್ಟಿಗೆ ತೋರಣವಾಗಿ ಕಟ್ಟುವ ವೈಶಿಷ್ಟ್ಯಪೂರ್ಣ ಪರಂಪರೆಯಿದೆ. ಇದು ನಾವು ಭಾರತೀಯರು ಸನಾತನದವರು ಭೂದೇವಿಯ ಗರ್ಭಜಾತರು ಒಂದೊಂದು ಕಡೆ ಒಂದೊಂದು ತರ ಬೇರೆ ಬೇರೆಯಾಗಿ ಸ್ಮರಿಸುವ ಸಂಭ್ರಮದ ಹಬ್ಬ.

ಧನ್ಯವಾದಗಳು 


No comments:

Post a Comment