ಜೀಮೂತ ಮಲ್ಲ
ಅಜ್ಞಾತವಾಸದ ವ್ಯಕ್ತಿವಿಶೇಷಗಳುಸಮಸ್ತ ಭೂಮಿಗೂ ಒಡೆಯನಾಗಿದ್ದ ನೀನು ವನವಾಸ ಕಾಲದಲ್ಲಿ ಸಹ ಯಾರೊಬ್ಬರಿಗೂ ಅಧೀನನಾಗಿರಲಿಲ್ಲ. ಅಂಥವನು ಹೇಗೆ ಇನ್ನೊಬ್ಬರ ಆಶ್ರಯದಲ್ಲಿರುತ್ತೀ? ಹೇಗೆತಾನೆ ನಾವು ಅದನ್ನು ಸಹಿಸಲು ಸಾಧ್ಯ? ನೀನು ಇನ್ನೊಬ್ಬ ದೊರೆಯ ಅಧೀನನಾಗಿರುವುದನ್ನು ಕಲ್ಪಿಸಿಕೊಳ್ಳಲೂ ಆಗದು!" ಎಂದನು. ಯುಧಿಷ್ಠಿರನು ನಕ್ಕು, ಅವನ ಕೈಯನ್ನು ನೇವರಿಸಿ, ಕಣ್ಣೊರೆಸಿ, `ಅರ್ಜುನ, ದುಃಖಿಸಬೇಡ. ಯಾರೂ ನನ್ನನ್ನು ಅವಮಾನಿಸಲು ನಾನು ಬಿಡುವುದಿಲ್ಲ. ನಾನು ಮತ್ಸ್ಯರಾಜನ ಗೆಳೆಯನಾಗಿರಲು ನಿರ್ಧರಿಸಿದ್ದೇನೆ. ತುಳಸೀಮಣಿಗಳ ಹಾರವನ್ನು ಧರಿಸಿ, ಯಾವಾಗಲೂ ಜಪ ಮಾಡುತ್ತ, ಅವನ ಬಳಿ ಹೋಗಿ ನಾನು ಕಂಕನೆಂಬ ವಿರಕ್ತನೆಂದೂ, ವೇದವಿದ್ಯೆಗಳನ್ನೂ ಅಕ್ಷಹೃದಯವನ್ನೂ ಬಲ್ಲವನೆಂದೂ ನಿನ್ನ ಜೊತೆಗಿದ್ದು ನಿನ್ನನ್ನು ರಂಜಿಸುತ್ತಿರುತೇನೆಂದೂ ಹೇಳಿಕೊಂಡು ಈ ಹನ್ನೆರಡು ತಿಂಗಳುಗಳನ್ನು ಕಳೆಯುತ್ತೇನೆ
ಭೀಮ, ನಿನ್ನ ಅತಿಶಯವಾದ ಬಲವನ್ನೂ ಹುರಿಗಟ್ಟಿದ ವಿಶಾಲಕಾಯವನ್ನು ಕೌರವರ ಮೇಲಿನ ಸಿಟ್ಟನ್ನೂ ಈ ಹನ್ನೆರಡು ತಿಂಗಳು ಹೇಗೆ ತಡೆದುಕೊಂಡಿರುತ್ತೀಯೆ? ದ್ರೌಪದಿ ಬಯಸಿದ ಹೂಗಳಿಗಾಗಿ ರಾಕ್ಷಸ ಸಮೂಹವನ್ನೇ ಕೊಂದೆ. ಸ್ವಲ್ಪವೇ ಪ್ರಚೋದನೆಯಿದ್ದರೂ ನಿನ್ನ ಕಣ್ಣುಗಳು ತಾಮ್ರದಂತೆ ಕೆಂಪಡರುತ್ತವೆ. ನೀನು ವಿರಾಟರಾಜನ ಆಶ್ರಯದಲ್ಲಿ ಏನು ಮಾಡಿಕೊಂಡಿರಬೇಕು ಎಂದುಕೊಂಡಿದ್ದೀಯೆ?" ಎನ್ನಲು ಭೀಮನು, ``ನಾನು ಅಲ್ಲಿ " ಬಲ್ಲವ "ನೆಂಬ ಹೆಸರಿನಿಂದ ಅಡುಗೆಯವರ ಮುಖ್ಯನಾಗಿರುತ್ತೇನೆ. ನನಗೆ ಮೊದಲಿನಿಂದಲೂ ಅಡುಗೆ ಮಾಡುವುದೆಂದರೆ ತುಂಬ ಇಷ್ಟ! ಅದೂ ಅಲ್ಲದೆ ತರುಣರನ್ನು ಮಲ್ಲಯುದ್ಧದಲ್ಲಿ ಪರಿಣಿತಗೊಳಿಸುವೆ ಎನ್ನುತ್ತೇನೆ. ಬಹುಶಃ ಇದು ರಾಜನಿಗೆ ಇಷ್ಟವಾಗುತ್ತದೆ. ಪೂರ್ವೋತ್ತರಗಳನ್ನು ಕೇಳಿದರೆ ಯುಧಿಷ್ಠಿರನ ಬಳಿ ಇದ್ದೆನೆಂದೂ ಅವನು ವನವಾಸಕ್ಕೆ ಹೋದಮೇಲೆ ಬೇರೆ ಕೆಲಸ ನೋಡಬೇಕಾಯಿತೆಂದೂ ಹೇಳುತ್ತೇನೆ.
ಯುಧಿಷ್ಠಿರನು ಅರ್ಜುನನನ್ನು ವಿಚಾರಿಸಲು ಅವನು, ಅಣ್ಣ, ನನಗೆ ಊರ್ವಶಿಯ ಶಾಪದಿಂದಾಗಿ ನಪುಂಸಕ ಆಗಬೇಕಾಗಿದೆಯಲ್ಲ? ಅದನ್ನು ಒಂದು ವರ್ಷಕಾಲ ಅನುಭವಿಸಬೇಕೆಂದೂ, ಅದು ಈ ಅಜ್ಞಾತವಾಸ ಕಾಲದಲ್ಲಿ ಪ್ರಯೋಜನವಾಗುವುದೆಂದೂ ಇಂದ್ರನು ಹೇಳಿದ್ದಾನೆ. ಅಲ್ಲದೆ ನನ್ನ ಧನುರ್ವಿದ್ಯಾಕುಶಲತೆಯಿಂದಾಗಿ ಭುಜಗಳ ಮತ್ತು ಎದೆಯ ಮೇಲೆ ಆಗಿರುವ ಗಾಯಗಳ ಕಲೆಗಳನ್ನು ನೋಡಿ ಜನಗಳು ಗುರುತಿಸುವುದನ್ನು ಸ್ತ್ರೀಯರಂತೆ ಕಂಚುಕ ಧರಿಸುವುದರಿಂದ ಹಾಗೂ ಉದ್ದವಾಗಿ ಕೂದಲು ಬಿಡುವುದರಿಂದ ತಡೆಯಬಹುದು. ನಾನು ಬೃಹನ್ನಳೆಯೆಂಬ ನಪುಂಸಕನೆಂದೂ ತರುಣಿಯರಿಗೆ ಸಂಗೀತ ನೃತ್ಯ ಮೊದಲಾದ ಕುಶಲಕಲೆಗಳನ್ನು ಕಲಿಸುತ್ತೇನೆಂದೂ ಹೇಳಿ ವಿರಾಟರಾಜನ ಅಂತಃಪುರದಲ್ಲಿ ಇರುತ್ತೇನೆ" ಎಂದನು
ಮಗು ನಕುಲ, ನಿನ್ನ ಅತಿಶಯವಾದ ಸೌಂದರ್ಯವನ್ನು ಅಡಗಿಸಿಕೊಂಡು ಆತ್ಮಗೌರವವನ್ನೂ ಹೇಗೆ ಕಾಪಾಡಿಕೊಳ್ಳುತ್ತೀಯೆ?" ಎನ್ನಲು ಅವನು ನಕ್ಕು, ಅಣ್ಣ, ನಿನಗೆ ಗೊತ್ತು ನಾನು ಕುದುರೆಗಳನ್ನು ಬಹು ಚೆನ್ನಾಗಿ ಪಳಗಿಸಬಲ್ಲೆನೆಂದು. ಅವು ನನ್ನನ್ನು ಪ್ರೀತಿಸುತ್ತವೆ; ನಾನು ಹೇಳಿದಂತೆ ಕೇಳುತ್ತವೆ. ನಾನು ವಿರಾಟರಾಜನ ಆಸ್ಥಾನದಲ್ಲಿ ದಾಮಗ್ರಂಥಿಯೆಂಬ ಹೆಸರಿಟ್ಟುಕೊಂಡು ಅಶ್ವಪಾಲಕನಾಗಿರುತ್ತೇನೆ" ಎಂದನು. ಕೊನೆಯದಾಗಿ ಸಹದೇವನನ್ನು ಕುರಿತು, `ಮಗು ಸಹದೇವ, ನೀನು ಬೃಹಸ್ಪತಿಗಿಂತಲೂ ಮಿಗಿಲಾದ ಬುದ್ಧಿವಂತನು. ಶುಕ್ರಾಚಾರ್ಯನಿಗಿಂತಲೂ ಮಿಗಿಲಾದ ರಾಜತಂತ್ರಜ್ಞನು. ಹಸ್ತಿನಾಪುರವನ್ನು ಬಿಡುವಾಗ ಕುಂತಿಯು ಸಹದೇವನನ್ನು ಚೆನ್ನಾಗಿ ನೋಡಿಕೋ ಎಂದು ನನ್ನನ್ನು ವಿಶೇಷವಾಗಿ ಒತ್ತಾಯಿಸಿದ್ದಳು. ನಿನ್ನಂತಹ ಎಳೆಯನನ್ನು ಸಾಮಾನ್ಯನೊಬ್ಬನ ಸೇವೆಯಲ್ಲಿ ನಾನು ಹೇಗೆತಾನೆ ಬಿಡಲಿ? ಏನು ಮಾಡಬೇಕೆಂದಿರುವೆ ಸಹದೇವ?"ಎನ್ನಲು ಅವನು, ಅಣ್ಣ, ನಾನೇನೂ ಮಗುವಲ್ಲ. ನಾನು ನಿಮ್ಮೊಂದಿಗೆ ಹೊಂದಿಕೊಂಡಿದ್ದಷ್ಟೇ ಸುಲಭವಾಗಿ ರಾಜನೊಂದಿಗೆ ಇರಬಲ್ಲೆ. ವಿರಾಟನು ತನ್ನ ಗೋಸಂಪತ್ತಿಗಾಗಿ ಪ್ರಸಿದ್ಧನು. ನಾನು ತಂತ್ರೀಪಾಲನೆಂಬ ಹೆಸರಿನಿಂದ ಅವನ ಗೋಪಾಲಕನಾಗಿರುತ್ತೇನೆ" ಎಂದನು.
ದ್ರೌಪದಿಯನ್ನು ಏನು ಮಾಡಬೇಕೆಂದಿರುವೆ ಎಂದು ಕೇಳಲು ಯುಧಿಷ್ಠಿರನಿಗೆ ತುಂಬ ಮುಜುಗರವಾಯಿತು. ಬಹು ಕಷ್ಟದಿಂದ, ``ದ್ರೌಪದಿ, ನೀನು ನಮಗೆಲ್ಲರಿಗೂ ಜೀವಕ್ಕಿಂತ ಹೆಚ್ಚಿನವಳು. ನಮ್ಮ ತಾಯಿಗೂ ಪ್ರಿಯಳಾದವಳು. ನಿನ್ನ ಪ್ರಕೃತಿ ಬಹು ಸೂಕ್ಷ್ಮ. ನೀನು ಹೇಗೆತಾನೆ ಕೆಲಸಮಾಡುವೆ? ಏನು ಮಾಡುವೆ? ಮೃದುಸ್ವಭಾವದ ನೀನು ಅದೆಷ್ಟು ನಲುಗುವೆಯೋ ಎಂದು ನನಗೆ ಆತಂಕವಾಗಿದೆ. ನೀನು ನನ್ನಿಂದಾಗಿ ಪಟ್ಟ ಕಷ್ಟಗಳಿಗೆ ಕೊನೆಮೊದಲಿಲ್ಲ. ಇನ್ನು ಹನ್ನೆರಡು ತಿಂಗಳು ಅಷ್ಟೇ. ನೀನು ಏನು ಮಾಡಬೇಕೆಂದಿದ್ದೀಯೆ?" ಎನ್ನಲು ಅವಳು ಅವನನ್ನು ಪ್ರೀತಿಯಿಂದ ನೋಡಿ ನಗುತ್ತ. ಆರ್ಯಪುತ್ರ, ಅದೇಕೆ ಅಷ್ಟೊಂದು ವಿಚಲಿತನಾಗಿರುವೆ? ಚಕ್ರವರ್ತಿಯಾಗಿದ್ದ ನೀನೇ ಸಾಧಾರಣ ಸೇವೆ ಮಾಡಲು ಹೊರಟಿರುವಾಗ, ನಿನ್ನನ್ನುಳಿದು ಇನ್ನಾರಿಗೂ ತಲೆಬಾಗದ ಭೀಮನೇ ಅಡುಗೆಯ ಮನೆಯಲ್ಲಿ ಕೆಲಸಮಾಡಲಿರುವಾಗ, ದೇವೇಂದ್ರನನ್ನೇ ಸೋಲಿಸಿ ಲೋಕದ ಧನುರ್ಧಾರಿಗಳಲ್ಲೆಲ್ಲ ಅದ್ವಿತೀಯನೆನಿಸಿದ ಅರ್ಜುನನೇ ನೃತ್ಯಗೀತಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲಿರುವಾಗ, ಈ ಘನಶ್ಯಾಮಸುಂದರನಾದ ನಕುಲನು ಕುದುರೆಲಾಯದಲ್ಲಿ ಕೆಲಸಮಾಡಲಿರುವಾಗ, ಬುದ್ಧಿಶಾಲಿ ಸಹದೇವನು ದನ ಕಾಯಲಿರುವಾಗ, ನಾನು ಕ್ಷೇಮವಾಗಿ ಈ ಹನ್ನೆರಡು ತಿಂಗಳು ಕಳೆಯಲಾರೆನೆ? ನಾನು ರಾಣಿಯ ಬಳಿ ಹೋಗಿ ಪ್ರಸಾಧನ ವಿದ್ಯೆ ನನಗೆ ತಿಳಿದಿದೆ, ಹುಡುಗಿಯರಿಗೆ ರೂಪಾಲಂಕರಣದಲ್ಲಿ ಪರಿಶ್ರಮವಿದೆ ಎಂದು ಹೇಳಿಕೊಂಡು ಸೈರಂಧ್ರಿಯೆಂಬ ಹೆಸರಿನ ದಾಸಿಯಾಗಿ ಅವಳೊಡನೆ ಇರುತ್ತೇನೆ. ನಡೆಯಿರಿ, ವಿರಾಟನ ಬಳಿಗೆ ಹೋಗೋಣ" ಎಂದಳು.ಯುಧಿಷ್ಠಿರನಿಗೆ ಬಹು ಸಂತೋಷವಾಯಿತು. ಆತಂಕಪಡುತ್ತಲೇ ಈ ಹೊಸ ಸಾಹಸಕ್ಕೆ ಹೊರಟರು. ದ್ವೈತ ವನದಿಂದ ಕಾಮ್ಯಕ ವನಕ್ಕೆ ಬಂದು, ಯಮುನಾ ನದಿಯನ್ನು ಬಳಿಸಾರಿ, ಅದರ ದಕ್ಷಿಣ ದಂಡೆಗುಂಟ ನಡೆದರು. ಅನೇಕ ಅರಣ್ಯಗಳನ್ನೂ ಸುಂದರ ತಪೋವನಗಳನ್ನೂ ಹಾದು, ಮತ್ಸ್ಯರಾಜ್ಯವನ್ನು ಸೇರಿದರು. ಅಲ್ಲಿ ಯುಧಿಷ್ಠಿರನು ಧೌಮ್ಯರನ್ನು ಕುರಿತು, `ಈಗ ನೀವು ಪಾಂಚಾಲಕ್ಕೆ ಹೋಗಿ ದ್ರುಪದನ ಆಸ್ಥಾನದಲ್ಲಿದ್ದು ಕಾಲಕಳೆಯಬೇಕು. ನಾವೆಲ್ಲಿದ್ದೇವೆಂದು ಅವನಿಗೆ ಹೇಳಬೇಡಿ. ಪಾಂಡವರು ದ್ವೈತ ವನವನ್ನು ಬಿಟ್ಟು ಅಜ್ಞಾತವಾಸಕ್ಕಾಗಿ ಹೊರಟು ಹೋದರು ಎಂದಷ್ಟೇ ಹೇಳಿರಿ" ಎನ್ನಲು, ಅವರು, `ಹಾಗೆಯೇ ಆಗಲಿ!" ಎಂದು ಪಾಂಡವರೆಲ್ಲರನ್ನೂ ಆಶೀರ್ವದಿಸಿ ಹೊರಟುಹೋದರು.
ತಮ್ಮ ದಿವ್ಯಾಯುಧಗಳನ್ನು ಎಲ್ಲಿ ಅಡಗಿಸಿಡುವುದು ಎಂಬುದು ಅವರ ಮುಂದಿನ ಸಮಸ್ಯೆಯಾಯಿತು. ಈ ಆಯುಧಗಳೊಂದಿಗೆ ನಾವು ನಗರವನ್ನು ಪ್ರವೇಶಿಸಿದರೆ ರಸ್ತೆಗಳಲ್ಲಿ ಜನರು ನಿಂತು ಕುತೂಹಲದಿಂದ ನೋಡತೊಡಗುತ್ತಾರೆ. ಯಾರ ಗಮನವನ್ನೂ ನಾವು ಸೆಳೆಯಬಾರದು. ಗಾಂಡೀವದ ಪ್ರಖ್ಯಾತಿಯನ್ನು ಪ್ರಚಂಡ ಗದೆಯನ್ನು ಅರಿಯದವರಾರು? ಆದ್ದರಿಂದ ನಮ್ಮೆಲ್ಲರ ಆಯುಧಗಳನ್ನೂ ಎಲ್ಲಾದರೊಂದು ಕಡೆ ಬಚ್ಚಿಡಬೇಕು. ಒಂದು ವರ್ಷ ಕಳೆದಾದ ಮೇಲೆ ಬಂದು ತೆಗೆದುಕೊಳ್ಳಬಹುದು. ದುರ್ಯೋಧನನ ಗೂಢಚಾರರು ಎಲ್ಲಿರುವರು ಎಂದು ಹೇಳಲು ಬರುವಂತಿಲ್ಲ"ಎಂದ ಯುಧಿಷ್ಠಿರನ ಮಾತಿಗೆ ಎಲ್ಲರೂ ಒಪ್ಪಿದರು.
ಅರ್ಜುನನು, ಇದು ಊರ ಹೊರಗಡೆ ಇರುವ ಸ್ಮಶಾನ. ಅಲ್ಲೊಂದು ಶಮೀವೃಕ್ಷ ಕಾಣುತ್ತಿದೆಯಲ್ಲ! ಅದು ದೊಡ್ಡದು. ಬಹು ಶಾಖೆಗಳನ್ನುಳ್ಳ ಅದು ಬಲವಾದ ರೆಂಬೆಗಳನ್ನುಳ್ಳದ್ದು. ನೋಡಲು ಭಯವಾಗುವಂತಿದೆ. ಇಲ್ಲಿ ಯಾರೂ ಓಡಾಡುವ ಲಕ್ಷಣಗಳಿಲ್ಲ. ನಮ್ಮೆಲ್ಲ ಆಯುಧಗಳನ್ನೂ ಚರ್ಮದಲ್ಲಿ ಸುತ್ತಿ ಶವದಂತೆ ಕಾಣುವ ಹಾಗೆ ಮಾಡಿ ಅದನ್ನು ಈ ಮರದ ಮೇಲಿನ. ರೆಂಬೆಗೆ ಕಟ್ಟಿಬಿಡೋಣ. ಯಾರೂ ಅದೇನೆಂದು ಪರೀಕ್ಷಿಸುವ ಧೈರ್ಯ ಮಾಡಲಾರರು. ಯುಧಿಷ್ಠಿರನು ದೇವತೆಗಳನ್ನು ಆಹ್ವಾನಿಸಿ ಅವರಿಗೆ ಆಯುಧಗಳನ್ನು ಒಪ್ಪಿಸಿ, ನಮ್ಮ ಪ್ರಾಣಗಳಿಗಿಂತಲೂ ಹೆಚ್ಚಾದ ಈ ಆಯುಧಗಳನ್ನು ನಿಮ್ಮ ವಶಕ್ಕೆ ಕೊಟ್ಟುಹೋಗುತ್ತಿದ್ದೇವೆ. ನೀವು ನಮಗಾಗಿ ರಕ್ಷಿಸಿಟ್ಟುಕೊಂಡಿದ್ದು ನಮ್ಮ ಅಜ್ಞಾತವಾಸವು ಮುಗಿದ ಮೇಲೆ ನಮಗೆ ಒಪ್ಪಿಸಬೇಕು ಯಶಸ್ವಿಯಾಗುವಂತೆ ಆಶೀರ್ವದಿಸಿ. ನಮ್ಮ ಇರವು ಯಾರಿಗೂ ಪತ್ತೆಯಾಗದಂತೆ ಅನುಗ್ರಹಿಸಿ ಕಳುಹಿಸಿಕೊಡಿ" ಎಂದು ಭಕ್ತಿಯಿಂದ ಪ್ರಾರ್ಥಿಸಿದನು. ನಂತರ ತಾನೇ ಮರವನ್ನು ಹತ್ತಿ, ಆಯುಧಗಳ ಕಟ್ಟನ್ನು ಮೇಲಿನ ಕೊಂಬೆಗೆ ಕಟ್ಟಿದನು. ಆಪತ್ಕಾಲದಲ್ಲಿ ಬಳಕೆಗೆ ಬೇಕಾಗಬಹುದೆಂದು ಧರ್ಮರಾಜ, ಭೀಮ, ಅರ್ಜುನ, ನಕುಲ, ಸಹದೇವರುಗಳು ಕ್ರಮವಾಗಿ ಜಯ, ಜಯೇಶ, ವಿಜಯ, ಜಯತ್ಸೇನ ಮತ್ತು ಜಯದ್ಬಲ ಎಂದು ಗುಪ್ತನಾಮವನ್ನಿಟ್ಟುಕೊಂಡರು. ಅನಂತರ ಒಬ್ಬೊಬ್ಬರಾಗಿ ವಿರಾಟನಗರದ ಕಡೆಗೆ ಹೊರಟರು.ಬೆಳಗಾಯಿತು. ಎಲ್ಲರೂ ನದಿಯಲ್ಲಿ ಮಿಂದರು. ಯುಧಿಷ್ಠಿರನು ತನ್ನ ವೇಷವನ್ನು ಹಾಕಿಕೊಂಡು, ತಮ್ಮಂದಿರಿಗೂ ದ್ರೌಪದಿಗೂ ವಿದಾಯ ಹೇಳಿ, ಅರಮನೆಯ ಕಡೆಗೆ ಹೊರಟನು. ವಿರಾಟರಾಜನನ್ನು ನೋಡಿ ಅವನಿಗೆ ಸಂತೋಷವಾಯಿತು. ಅವನೆದುರು ಹೋಗಿ ಸುಮ್ಮನೆ ನಿಂತನು. ಮತ್ಸ್ಯರಾಜನು ತನ್ನಲ್ಲಿಯೆ ತಾನು, ``ಈತ ಯಾರಿರಬಹುದು? ನನಗೆ ಇವನು ನಮಸ್ಕರಿಸಲಿಲ್ಲ; ಆದರೂ ನನಗೆ ಬೇಸರವಿಲ್ಲ. ಬದಲಿಗೆ ನಾನೇ ಮೇಲೆದ್ದು ಇವನಿಗೆ ಮರ್ಯಾದೆ ತೋರಿಸಬೇಕನಿಸುತ್ತಿದೆ. ಬ್ರಾಹ್ಮಣನಂತೆ ವೇಷ ಧರಿಸಿದ್ದರೂ ಇವನ ಧೀರೋದಾತ್ತ ನಡುಗೆ ಕ್ಷತ್ರಿಯನದು. ಲೋಕವನ್ನಾಳುವುದಕ್ಕೇ ಹುಟ್ಟಿರುವವನಂತಿದ್ದಾನೆ. ಯಾರೇ ಆಗಿರಲಿ, ಇವನನ್ನು ನಾನು ಮೆಚ್ಚಿಸಬೇಕು" ಎಂದುಕೊಂಡನು. ಇಷ್ಟರಲ್ಲಿ ಯುಧಿಷ್ಠಿರನು ಸಿಂಹಾಸನದ ಬಳಿಗೆ ಬಂದು ನಿಂತಿದ್ದನು. ರಾಜನು ಮೇಲೆದ್ದು ಅವನಿರುವಲ್ಲಿಗೆ ನಡೆದುಹೋಗಿ, ಅವನಿಗೆ ಹಸ್ತಲಾಘವ ಕೊಟ್ಟು, ``ನಿನ್ನಂತಹ ಬ್ರಾಹ್ಮಣ ನನ್ನ ಬಳಿಗೆ ಬಂದದ್ದು ನನಗೆ ದೊಡ್ಡ ಗೌರವವೆನಿಸುತ್ತಿದೆ. ನಿನಗೇನು ಬೇಕು ಹೇಳು" ಎಂದನು. ಯುಧಿಷ್ಠಿರನು ಹೇಳಲಾರ; ಆದರೆ ಸತ್ಯವನ್ನು ಅಡಗಿಸಿಡಬೇಕಾದ ಸಂದರ್ಭ. ಇಂದ್ರಪ್ರಸ್ಥದ ದೊರೆ ಯುಧಿಷ್ಠಿರನ ಪರಮಾಪ್ತ ಗೆಳೆಯ ನಾನು. ದ್ಯೂತದ ಪರಿಣಾಮವಾಗಿ ಅವನು ತನ್ನ ತಮ್ಮಂದಿರು ಹಾಗೂ ಹೆಂಡತಿಯೊಡನೆ ವನವಾಸಕ್ಕೆ ತೆರಳಿದುದು ನಿನಗೆ ಗೊತ್ತಿರಬಹುದು. ನೀನು ನನ್ನನ್ನು ಅವನ ಜೀವಾತ್ಮನೆಂದೇ ತಿಳಿಯಬಹುದಾದಷ್ಟು ನಾವಿಬ್ಬರೂ ಆಪ್ತರು. ನನ್ನ ಹೆಸರು ಕಂಕ; ಸದಾಕಾಲವೂ ದ್ಯೂತವಾಡಿ ಯುಧಿಷ್ಠಿರನನ್ನು ವಿನೋದಪಡಿಸುವುದೇ ನನ್ನ ಕೆಲಸವಾಗಿತ್ತು. ಆದರೆ ಅವನು ದ್ಯೂತವಾಡಿ ಸೋತ ಕಾಲದಲ್ಲಿ ಇದ್ದುದಕ್ಕಿಂತ ನಾನೀಗ ಪಗಡೆಯಾಟವನ್ನು ಉತ್ತಮಪಡಿಸಿಕೊಂಡಿದ್ದೇನೆ. ಅವನು ನನಗರಿಯದಂತೆ ಏನನ್ನೂ ಮಾಡುತ್ತಿರಲ್ಲಿ. ಅವನು ಈಗ ಅಜ್ಞಾತವಾಸದಲ್ಲಿದ್ದಾನೆ. ಅವನಿಗೂ ಅವನ ಸೋದರರಿಗೂ ಬಂದಿರುವ ದುರ್ಗತಿಯಿಂದ ಕಂಗೆಟ್ಟಿರುವೆ. ನೀನು ಔನ್ನತ್ಯದಲ್ಲಿ ಯುಧಿಷ್ಠಿರನಿಗೆ ಸಮನೆಂದು ಕೇಳಿ ನಿನ್ನ ಬಳಿಗೆ ಆಶ್ರಯಕ್ಕಾಗಿ ಬಂದಿರುವೆ. ನನ್ನವರೆಂಬುವರು ಯಾರೂ ಇಲ್ಲ; ನನ್ನದೆಂಬುದು ಏನೂ ಇಲ್ಲ. ನನಗಿಂದು ಸುಖವೂ ಒಂದೇ, ಕಷ್ಟವೂ ಒಂದೇ. ನನಗೆ ಆಸೆ ಎಂಬುದೇ ಇಲ್ಲ. ನಾನು ಶಾಂತಿಯನ್ನರಸಿ ಇಲ್ಲಿಗೆ ಬಂದಿರುವೆ. ನನಗಿಲ್ಲಿ ಅದು ದೊರಕಬಹುದೆ?" ಎಂದನು. ಯುಧಿಷ್ಠಿರನ ಸಭ್ಯ ನಡವಳಿಕೆ ರಾಜನಿಗೆ ಮೆಚ್ಚಿಕೆಯಾಯಿತು. ಪರಮ ಗೌರವದಿಂದ ಅವನು, ನಿನ್ನಂತಹ ಬ್ರಾಹ್ಮಣೋತ್ತಮನು ನನ್ನ ಬಳಿಗೆ ಬಂದದ್ದು ನನಗೆ ಹೆಮ್ಮೆಯೆನಿಸುತ್ತಿದೆ. ನನಗೂ ಪಗಡೆಯಾಟವೆಂದರೆ ಇಷ್ಟ; ಅದನ್ನು ಬಲ್ಲ ನಿನ್ನ ಜೊತೆಯಾಟ ಸಂತೋಷದ ಸಂಗತಿಯೇ. ನನ್ನ ರಾಜ್ಯಕೋಶಾದಿಗಳೆಲ್ಲ ನಿನ್ನವೇ ಎಂದು ತಿಳಿದು ನೀನು ಇಲ್ಲಿರಬಹುದು. ನಿನಗೇನು ಬೇಕು ಹೇಳು" ಎನ್ನಲು, ಯುಧಿಷ್ಠಿರನು, ``ನನಗೆ ರಾಜ್ಯಕೋಶಾದಿಗಳ ಅಗತ್ಯವಿಲ್ಲ, ದೊರೆಯೇ. ಒಂದು ವರವನ್ನು ಮಾತ್ರ ಕೇಳುತ್ತೇನೆ: ನಾನು ಯಾರು ಮುಟ್ಟಿದ ಅನ್ನವನ್ನೂ ತಿನ್ನಲಾರೆ; ಅಲ್ಲದೇ ರಾತ್ರಿ ಒಂದು ಹೊತ್ತು ಮಾತ್ರವೇ ಆಹಾರ ತೆಗೆದುಕೊಳ್ಳುತ್ತೇನೆ; ಒಂದು ವರ್ಷದ ಮಟ್ಟಿಗೆ ಇದೊಂದು ವ್ರತ ನನ್ನದು" ಎಂದನು. ರಾಜನು ಸಂತೋಷದಿಂದ ಇದನ್ನು ಒಪ್ಪಿಕೊಂಡನು. ಅಲ್ಲಿಗೆ ರಾಜರಿಬ್ಬರ ಭೇಟಿ ಮುಗಿಯಿತು.
ಕೆಲವು ದಿನಗಳ ನಂತರ ಭೀಮನು ಕೈಯಲ್ಲೊಂದು ಸೌಟನ್ನು ಹಿಡಿದುಕೊಂಡು ವಿರಾಟನಗರವನ್ನು ಪ್ರವೇಶಿಸಿ ರಾಜಾಸ್ಥಾನಕ್ಕೆ ಬಂದನು. ಅವನ ಅಂಗಸೌಷ್ಠವವನ್ನು ನೋಡಿ ಎಲ್ಲರಿಗೂ ಅಚ್ಚರಿಯೋ ಅಚ್ಚರಿ. ರಾಜನು ಅವನನ್ನು ನೋಡುತ್ತಲೇ ಮೆಚ್ಚಿಕೊಂಡನು. ಭೀಮನು ಸಿಂಹಾಸನದ ಬಳಿಗೆ ಬಂದು, ``ಮತ್ಸ್ಯರಾಜನಿಗೆ ಭಗವದನುಗ್ರಹವಿರಲಿ. ದೊರೆಯೇ, ಕಷ್ಟದಲ್ಲಿರುವವರ ಮೇಲಣ ನಿನ್ನ ಸಹಾನುಭೂತಿಯನ್ನು ಕೇಳಿ ತಿಳಿದು ನಿನ್ನಲ್ಲಿಗೆ ಬಂದಿರುವೆನು. ನಾನು ವಲಲನೆಂಬ ಪಾಕಶಾಸ್ತಜ್ಞ. ಯಾರೂ ತನ್ನನ್ನು ಕುರಿತು ತಾನೇ ಹೇಳಿಕೊಳ್ಳಬಾರದು; ಆದರೆ ಇಲ್ಲಿ ಯಾರೂ ನನ್ನನ್ನು ಅರಿತವರಿಲ್ಲವಾದ್ದರಿಂದ ಹೇಳುತ್ತೇನೆ; ನಾನು ಒಂದು ಸಾವಿರ ಬಗೆಯ ರುಚಿಕಟ್ಟಾದ ಅಡುಗೆಗಳನ್ನು ಮಾಡಬಲ್ಲೆ. ನಿನ್ನ ಅಡುಗೆಯವನಾಗಿದ್ದುಕೊಂಡು ನಿನ್ನನ್ನು ಸಂತೋಷಪಡಿಸಲು ಬಯಸುತ್ತೇನೆ" ಎಂದನು. ರಾಜನು ಅವನನ್ನು ನೋಡಿ, ``ಅಯ್ಯಾ ತರುಣ! ಅಡುಗೆಯವನ ಕೆಲಸಕ್ಕೆ ಯೋಗ್ಯವಾಗಿ ನೀನು ತೋರುವುದಿಲ್ಲ. ಮಾರುವೇಷದಲ್ಲಿರುವ ರಾಜಕುಮಾರನಂತೆ ಕಾಣುತ್ತಿ. ಚೆನ್ನಾಗಿ ಅಂಗಸಾಧನೆ ಮಾಡಿರುವ ನೀನು ಸೇನಾಧಿಪತಿಯಾಗಿ ರಥದಲ್ಲಿಯೋ ಆನೆಯ ಮೇಲೋ ಕುಳ್ಳಿರುವುದಕ್ಕೆ ಅರ್ಹನಾಗಿದ್ದಿ" ಎನ್ನಲು ಭೀಮನು, ಹೌದು ದೊರೆಯೇ, ವೃತ್ತಿಯಿಂದ ನಾನು ಅಡುಗೆಯವನಲ್ಲ; ನಾನೊಬ್ಬ ಕುಸ್ತಿಪಟು. ಪ್ರಪಂಚದಲ್ಲಿರುವ ಮಲ್ಲರನ್ನೆಲ್ಲ ನಾನು ಸೋಲಿಸ ಬಲ್ಲೆ. ಅಡುಗೆ ನನ್ನ ಹವ್ಯಾಸ; ಅದು ನನಗೆ ಸಂತೋಷವನ್ನು ಕೊಡುತ್ತದೆ. ನಾನು ನಿನ್ನ ಗರಡಿಯನ್ನೂ ನೋಡಿಕೊಂಡು, ನಿಮ್ಮ ತರುಣರನ್ನು ವ್ಯಾಯಾಮಕಲೆಯಲ್ಲಿ ಪಳಗಿಸುವೆ; ಪಾಕಶಾಲೆಯನ್ನೂ ನೋಡಿಕೊಳ್ಳುವೆ" ಎಂದನು. ರಾಜನು, ``ನೀನು ನನ್ನ ಮನಸ್ಸನ್ನು ಸೆರೆಹಿಡಿದಿರುವೆ. ಹಾಗೆಯೇ ಆಗಲಿ" ಎನ್ನಲು, ಭೀಮನಿಗೆ ಸಂತೋಷವಾಯಿತು. ಯುಧಿಷ್ಠಿರನಿದ್ದುದರಿಂದ ರಾಜನ ಆಸ್ಥಾನವು ಶೋಭಾಯಮಾನವಾಗಿ ಕಂಗೊಳಿಸುತ್ತಿತ್ತು.ಇನ್ನೂ ಕೆಲದಿನಗಳ ನಂತರ, ಭುಜಗಳನ್ನು ಮುಚ್ಚುವಷ್ಟು ಉದ್ದ ಕೂದಲನ್ನು ಬಿಟ್ಟುಕೊಂಡು, ಮುತ್ತು ಹವಳಗಳ ಹಾರವನ್ನು ಧರಿಸಿ, ಕೆಂಪು ರೇಷ್ಮೆಯ ಅಂಗವಸ್ತ್ರವನ್ನು ಹೊದ್ದು, ರತಿ ವರ್ಚಸ್ಸಿನಿಂದ ಮುಗುಳ್ನಗುತ್ತ, ರಾಹುಗ್ರಸ್ತ ಚಂದ್ರನಂತಿದ್ದ ಅರ್ಜುನನು ವಿರಾಟನ ಆಸ್ಥಾನವನ್ನು ಪ್ರವೇಶಿಸಿದನು. ನೇರವಾಗಿ ಸಿಂಹಾಸನದತ್ತ ನಡೆದು, ``ನಾನು ಬೃಹನ್ನಳೆಯೆಂಬ ನರ್ತಕಿ. ಸ್ತ್ರೀಯರಿಗೆ ಅಗತ್ಯವಾದ ಲಲಿತಕಲೆಗಳನ್ನೆಲ್ಲ ತಿಳಿದವಳು. ಅತಿಶಯ ಸುಂದರವಾದ ಹೂಮಾಲೆಗಳನ್ನು ಹೆಣೆಯಬಲ್ಲೆ. ಒಬ್ಬ ಗಂಧರ್ವನಿಂದ ಸಂಗೀತನರ್ತನಗಳನ್ನು ಕಲಿತಿರುವೆ. ಈ ಕಲೆಗಳಲ್ಲಿ ಯಾರೂ ನನ್ನನ್ನು ಸರಿಗಟ್ಟಲಾರರು. ನೀನು ಒಪ್ಪುವುದಾದರೆ, ನಿನ್ನ ಆಸ್ಥಾನದಲ್ಲಿದ್ದುಕೊಂಡು ಹೆಣ್ಣುಮಕ್ಕಳಿಗೆ ಈ ವಿದ್ಯೆಗಳನ್ನು ಕಲಿಸಲು ಇಷ್ಟಪಡುತ್ತೇನೆ" ಎನ್ನಲು, ರಾಜನು ``ನೀನು ನೃತ್ಯಪಟುವೆನ್ನುತ್ತೀ, ಆದರೆ ನಿನ್ನ ಭುಜಗಳೂ ನಪುಂಸಕನಾಗಿ ಕಾಣಿಸುವುದಿಲ್ಲ. ನೀನೊಬ್ಬ ಬಿಲ್ಲುಗಾರನಿರಬೇಕು. ನನ್ನ ರಾಜ್ಯವನ್ನೇ ನಿನಗೆ ವಹಿಸುವೆ, ನನ್ನ ಮಗನಂತೆ ಇದ್ದುಬಿಡು. ನನಗೂ ವಯಸ್ಸಾಯಿತು. ನೀನು ರಾಜ್ಯವಾಳುವುದಕ್ಕೇ ಅರ್ಹ, ನೃತ್ಯ ಮಾಡುವುದಕ್ಕಲ್ಲ" ಎಂದನು. ಅರ್ಜುನನು ಮಾದಕ ನಗೆಯನ್ನು ನಕ್ಕು, ``ರಾಜಾ, ನಾನು ತಟ್ಟುವ ನಾಣೆಂದರೆ ವೀಣೆಯ ತಂತಿಯೇ; ನನಗೆ ಗೊತ್ತಿರುವ ವಿದ್ಯೆಯೆಂದರೆ ನೃತ್ಯ; ಅದನ್ನು ನಿನ್ನ ಮಗಳು ಉತ್ತರೆಗೆ ಹೇಳಿಕೊಟ್ಟು ಅವಳನ್ನು ಅದ್ವಿತೀಯ ನೃತ್ಯಗಾತಿಯಾನ್ನಾಗಿ ಮಾಡುವೆ. "ಎನ್ನಲು, ರಾಜನು ಹಾಗೆಯೇ ಆಗಲಿ!" ಎಂದು ಉತ್ತರಗೆ ಹೇಳಿಕಳುಹಿಸಿ, ``ಮಗಳೇ, ಇವಳು ಉತ್ತಮಕುಲದವಳಾಗಿ ಕಾಣುತ್ತಾಳೆ. ಸಾಮಾನ್ಯ ನೃತ್ಯಗಾತಿಯಲ್ಲ. ಇವಳನ್ನು ರಾಣಿಯಂತೆ ಗೌರವಿಸಿ, ಇವಳಿಂದ ಸಂಗೀತನೃತ್ಯಗಳನ್ನು ಕಲಿತುಕೋ" ಎಂದನು. ಅಂತೆಯೇ ನೃತ್ಯಾಭ್ಯಾಸವನ್ನು ಪ್ರಾರಂಭಿಸಿದ ಸುಂದರಿಯಾದ ಉತ್ತರೆಯನ್ನೂ ಅವಳ ಸಖಿಯರನ್ನೂ ನೋಡಿ ಅರ್ಜುನನಿಗೆ ಸಂತೋಷವಾಯಿತು. ಅಜ್ಞಾತವಾಸವು ತಾನೆಣಿಸಿದುದಕ್ಕಿಂತ ಸುಖಮಯವಾದುದಾಗಿ ಅವನಿಗೆ ಕಾಣಿಸಿತು.ರಾಜನು ನಿತ್ಯದ ಪರಿವೀಕ್ಷಣೆಯಂತೆ ಲಾಯಕ್ಕೆ ಹೋಗಿ ಕುದುರೆಗಳನ್ನು ಪರೀಕ್ಷಿಸುತ್ತಿರುವಾಗ ಅಲ್ಲೊಬ್ಬ ಶ್ಯಾಮಸುಂದರನು ಕುದುರೆಗಳತ್ತ ಪ್ರೀತಿಯಿಂದ ನೋಡುತ್ತಿರುವುದನ್ನು ಗಮನಿಸಿದನು. ತನ್ನಲ್ಲಿ ತಾನು, ``ನಾನು ನೋಡಿರುವವರೆಲ್ಲೆಲ್ಲ ಈತನೇ ಅತ್ಯಂತ ರೂಪವಂತ. ಎಂಥ ಆಕರ್ಷಣೆ! ಇವನು ಅಶ್ವಹೃದಯವನ್ನು ತಿಳಿದವನಿರಬೇಕು" ಎಂದುಕೊಳ್ಳುತ್ತಿರಲು, ಅಷ್ಟರಲ್ಲಿ ಅಲ್ಲಿಗೆ ಬಂದ ನಕುಲನು ರಾಜನಿಗೆ ವಂದಿಸಿ, ``ನಾನು ನಿನ್ನ ನಗರಕ್ಕೇ ಉಪಜೀವನದ ಸಂಪಾದನೆಗಾಗಿ ಬಂದಿರುವೆನು. ಎಂತಹ ತುಂಟ ಕುದುರೆಗಳನ್ನೇ ಆದರೂ ನಾನು ಪಳಗಿಸಬಲ್ಲೆ, ನಿನ್ನ ಸೇವೆಗೆ ನನ್ನನ್ನು ತೆಗೆದುಕೊಂಡರೆ ನಾನು ಕೃತಜ್ಞ'' ಎಂದನು. ಅದಕ್ಕೆ ಆ ವಿರಟನು, ``ಹಾಗೆಯೇ ಆಗಲಿ, ನನ್ನ ಅಶ್ವಗಳನ್ನೆಲ್ಲ ನೋಡಿಕೊಂಡಿರು. ಆದರೆ ನಿನ್ನನ್ನು ನೋಡಿದರೆ ಉತ್ತಮಕುಲದವನಾಗಿ ಕಾಣಿಸುತ್ತಿ. ಕೆಲಸ ಕೇಳಿಕೊಂಡು ಬರುವಂಥದೇನಾಯಿತು? ನೀನು ಕೆಲಸಗಾರನ ಬದಲು ಅವರ ಅಧಿಪತಿಯಂತೆ ಕಾಣಿಸುತ್ತಿರುವೆ" ಎನ್ನಲು, ನಕುಲನು, ``ನನ್ನ ಹೆಸರು ದಮಗ್ರಂಥಿ. ಹಾರ್ದಿಕವಾಗಿ ಕೆಲಸ ಮಾಡುತ್ತೇನೆ. ಆಶ್ರಯಕ್ಕಾಗಿ ಕೃತಜ್ಞ" ಎಂದನು.ಕೊನೆಯವನಾಗಿ ಗೋವಳನಂತೆ ಉಡುಪು ಧರಿಸಿ, ಕೈಯಲ್ಲಿ ಕೋಲನ್ನು ಹಿಡಿದು, ಕೃಷ್ಣನಂತೆ ಕಾಣುತ್ತಿದ್ದ ಸಹದೇವನು ವಿರಾಟನ ಸಭೆಯನ್ನು ಪ್ರವೇಶಿಸಿ, ``ರಾಜಾ, ನಾನು ಗೋಪಾಲಕನು. ನಿನ್ನ ಹಸುಗಳನ್ನು ಚೆನ್ನಾಗಿ ಪೋಷಿಸುವೆ. ನಾನು ಕರೆದರೆ ಅವು ತುಂಬ ಹಾಲನ್ನು ಕೊಡುವುವು. ನನ್ನ ಹೆಸರು ತಂತ್ರೀಪಾಲ. ನಿನ್ನ ಗೋಧನದ ಕೀರ್ತಿಯನ್ನು ಕೇಳಿ ಇಲ್ಲಿಗೆ ಬಂದಿರುವೆ. ನಿನ್ನ ಗೋಶಾಲೆಯಲ್ಲಿ ನನಗೆ ಆಶ್ರಯವನ್ನು ಕೊಡು" ಎನ್ನಲು, ರಾಜನು, ``ನೀನು ಯಾರಾದರೂ ಆಗಿರು. ಆದರೆ ಒಳ್ಳೆಯ ದಿನಗಳನ್ನು ಕಂಡವನಂತೆ ತೋರುತ್ತೀ. ಈ ಸಣ್ಣ ಕೆಲಸ ಕೇಳಿಕೊಂಡು ಬರುವಂಥದೇನಾಯಿತು? ಆಗಲಿ, ನನ್ನ ಗೋಪಾಲಕನಾಗಿರು. ವಿರಾಟನು ಬೇಡಿದವರಿಗೆ ಇಲ್ಲವೆನ್ನುವವನಲ್ಲ. ನೀನು ಬಂದದ್ದು ನನಗೆ ಸಂತೋಷ" ಎಂದನು. ಹೀಗೆ ಪಾಂಡವರೈವರೂ ವಿರಾಟರಾಜನ ಆಸ್ಥಾನದಲ್ಲಿ ಆಶ್ರಯ ಪಡೆದರು. ಬಹಳ ಕಾಲದ ನಂತರ ಅವರ ಹೃದಯಗಳು ಹಗುರವಾದವು. ಅಜ್ಞಾತವಾಸದ ಸಮಸ್ಯೆ ಪರಿಹಾರವಾದಂತಾಯಿತು.
ದ್ರೌಪದಿಯು ಸೈರಂಧ್ರಿಯ ವೇಷದಲ್ಲಿ ನಗರವನ್ನು ಪ್ರವೇಶಿಸಿದಳು. ಅಷ್ಟೊಂದು ಕಳಪೆ ಹಾಗೂ ಕೊಳೆಯಾದ ವಸ್ತ್ರವನ್ನು ಧರಿಸಿದ್ದರೂ ಅವಳ ಸೌಂದರ್ಯವು ಹಾದಿಹೋಕರನ್ನು ಅಯಸ್ಕಾಂತದಂತೆ ಸೆಳೆಯುತ್ತಿತ್ತು. ತನ್ನ ನೀಳವಾದ ಕೂದಲನ್ನು ಕೈಯಲ್ಲಿ ಹಿಡಿದಿದ್ದ ಅವಳ ಮುಖದ ಮೇಲೆ ಮುಗುಳ್ನಗುವು ಶೋಭಿಸುತ್ತಿತ್ತು. ರಾಣೀವಾಸದ ಕಡೆಗೆ ತ್ವರಿತವಾಗಿ ನಡೆದು ಬರುತ್ತಿದ್ದ ಅವಳನ್ನು ಕೇಕೆಯ ರಾಜಪುತ್ರಿಯಾದ ರಾಣಿ ಸುದೇಷ್ಣೆಯು ಅರಮನೆಯ ಗವಾಕ್ಷದಿಂದ ನೋಡುತ್ತಿದ್ದಳು. ಈ ಅಪ್ರತಿಮ ಸುಂದರಿಯ ಲಾವಣ್ಯವು ಅವಳನ್ನೂ ಬೆಚ್ಚಿಬೀಳಿಸಿತು. ಜನರು ಅವಳೊಂದಿಗೆ ನಡೆಯುತ್ತ ಅಶ್ಲೀಲವಾಗಿ ಮಾತನಾಡಿಕೊಂಡು ನಗುತ್ತಿರಲು, ಬೆಚ್ಚಿದ ಅವಳು ಇನ್ನೂ ವೇಗವಾಗಿ ನಡೆಯುತ್ತಿದ್ದಳು. ಜೊತೆಯಲ್ಲಿ ಯಾರೂ ಇಲ್ಲದೆ ಏಕಾಕಿನಿಯಾಗಿದ್ದ ಅವಳ ಮೇಲೆ ರಾಣಿಗೆ ಮರುಕವುಂಟಾಯಿತು. ಜನರ ಮಧ್ಯದಲ್ಲಿ ಸಿಕ್ಕಿಹಾಕಿಕೊಂಡಿದ್ದ ಅವಳನ್ನು ಕರೆತರುವಂತೆ ಹೇಳಿ ದಾಸಿಯರನ್ನು ಕಳುಹಿಸಿದಳು. ದ್ರೌಪದಿಯು ಅವರೊಂದಿಗೆ ಅರಮನೆಗೆ ಬಂದು ರಾಣಿಯ ಮುಂದೆ ನಿಂತಳು. ಕೈಯಲ್ಲಿದ್ದ ಕೂದಲನ್ನು ಸುರುಳಿಸುತ್ತಿ ಬೆನ್ನ ಹಿಂದಕ್ಕೆ ಹಾಕಿಕೊಂಡಳು. ಜನಗಳ ಹೀನಾಯದಿಂದ ನೊಂದಿದ್ದ ಅವಳು ಗಡಗಡನೆ ನಡುಗುತ್ತಿದ್ದಳು. ಮುಗ್ಧತೆಯೇ ಮೈವೆತ್ತು ಬಂದಂತಿದ್ದ ಅವಳನ್ನು ನೋಡಿ ಮಮ್ಮಲ ಮರುಗಿದ ರಾಣಿ ತಾನೇ ಮೇಲೆದ್ದು ಬಂದು, ಕೈಹಿಡಿದು ಕರೆದೊಯ್ದು ಕುಳ್ಳಿರಿಸಿಕೊಂಡಳು. ``ಏನಮ್ಮ, ನೀನು ಅಷ್ಟೊಂದು ಸುಂದರಿ; ಒಬ್ಬಳೇ ಎಲ್ಲಿಂದ ಬಂದೆ? ಯಾರು ನೀನು? ನಿನ್ನಂಥವಳನ್ನು ಏಕಾಕಿಯಾಗಿ ಕಂಡ ಜನರು ಸುಮ್ಮನಿರುವರೇ?" ಎಂದಳು. ದ್ರೌಪದಿಯು, ರಾಣಿಯೇ, ಜೀವನಾಶ್ರಯಕ್ಕಾಗಿ ನಾನು ನಿನ್ನಲ್ಲಿಗೆ ಬಂದಿರುವೆ. ಅಲಂಕರಣದಲ್ಲಿಯೂ ಪ್ರಸಾಧನ ವಿದ್ಯೆಯಲ್ಲಿಯೂ ನುರಿತವಳು ನಾನು. ಪಾಂಡವರ ರಾಣಿ ದ್ರೌಪದಿಯ ಸಖಿಯಾಗಿದ್ದೆ. ಅವರು ವನವಾಸಕ್ಕೆ ಹೋದ ಮೇಲೆ ನನಗೆ ಗತಿಯಿಲ್ಲದಂತಾಯಿತು. ಆ ದುರ್ದೈವಿ ದ್ರೌಪದಿಗೆ ಇನ್ನೇಕೆ ನನ್ನ ಪ್ರಸಾಧನ ? ನಿನ್ನ ಕೀರ್ತಿಯನ್ನು ಕೇಳಿ ನಿನ್ನನ್ನು ನನ್ನ ವಿದ್ಯೆಯಿಂದ ಸಂತೋಷಗೊಳಿಸಬೇಕೆಂದು ಬಂದೆ. ನನ್ನ ಆಸೆ ಹುಸಿ ಹೋಗುವುದಿಲ್ಲವೆಂದುಕೊಡಿದ್ದೇನೆ" ಎಂದು ನುಡಿದಳು.``ಆಗಲಮ್ಮ, ಧಾರಾಳವಾಗಿ ನಮ್ಮೊಂದಿಗೆ ನೀನು ಇರಬಹುದು. ಅರಮನೆಯು ನಿನ್ನದೇ ಎಂದುಕೋ. ಪಾಂಡವ ರಾಣಿಯ ಜೊತೆಗಿರುವಾಗ ನೀನು ಅದೆಷ್ಟೋ ಸುಖಸೌಲಭ್ಯಗಳನ್ನು ಅನುಭವಿಸಿರಬಹುದು. ನೀನು ಏಕಾಂತದಲ್ಲಿರುವಾಗ ನನ್ನ ಈ ಉದ್ಯಾನವನವನ್ನು ಬಳಸಿಕೊಳ್ಳಬಹುದು. ತುಂಬ ಕಷ್ಟ ಪಟ್ಟಿರುವವಳಂತೆ ಕಾಣುತ್ತಿ; ನಿನ್ನ ಕಷ್ಟವೇನೆಂದು ಕೇಳಬಹುದೇ?" ಎಂದು ರಾಣಿ ಉಪಚರಿಸಿದಾಗ ದ್ರೌಪದಿಗೆ ದುಃಖವನ್ನು ತಡೆಯಲಾಗಲಿಲ್ಲ. ಬಿಕ್ಕಿಬಿಕ್ಕಿ ಅತ್ತಳು. ಸುದೇಷ್ಣೆಯು ಅವಳನ್ನು ತೊಡೆಯ ಮೇಲೆ ಕೂರಿಸಿಕೊಂಡು ಮಗುವನ್ನು ಸಮಾಧಾನ ಮಾಡುವಂತೆ ಸಂತೈಸಿದಲು. ದ್ರೌಪದಿಯು, `ಅಮ್ಮ, ನಾನು ಸೈರಂಧ್ರಿ. ನನಗೆ ಐವರು ಗಂಧರ್ವರು ಪತಿಗಳಾಗಿರುವರು. ಶಾಪವೊಂದರಿಂದಾಗಿ ಅವರು ನನ್ನನ್ನು ಹೀಗೆ ಬಿಟ್ಟು ಹೋಗಬೇಕಾಯಿತು. ಒಂದು ವರ್ಷ ಕಳೆಯುತ್ತಲೂ ಶಾಪವಿಮೋಚನೆಯಾಗುವುದು. ಅವರನ್ನು ಎಂದೂ ಬಿಟ್ಟಿರದ ನನಗೆ ಈಗ ಬಿಟ್ಟಿರಬೇಕಾಗಿರುವುದು ತುಂಬ ದುಃಖವಾಗಿದೆ. ನನ್ನ ದುಃಖದ ದಿನಗಳು ಮುಗಿಯುವವರೆಗೂ ನನಗೊಬ್ಬಳು ತಾಯಿಯಂತಿರುವ ಅಕ್ಕ ಸಿಕ್ಕಿದಳು ಎಂದುಕೊಳ್ಳುತ್ತೇನೆ" ಎನ್ನಲು, ಸುದೇಷ್ಣೆಯು ಸ್ವಲ್ಪ ಹೊತ್ತು ಸುಮ್ಮನಿದ್ದು, ಒಂದು ಸಂಗತಿಯನ್ನು ಹೇಳಬೇಕಾಗಿದೆ. ಇಷ್ಟೊಂದು ಸುಂದರಿಯಾದ ನಿನ್ನನ್ನು ಒಂದು ವೇಳೆ ರಾಜನು ಪ್ರೇಮಿಸಿಬಿಟ್ಟರೆ? ಎಂಬುದೇ ನನ್ನ ಆತಂಕ" ಎಂದಳು. ದ್ರೌಪದಿಯು, `ರಾಣಿ ಚಿಂತಿಸಬೇಡ. ನಾನು ರಾಜನ ಕಣ್ಣಿಗೆ ಬೀಳುವುದೇ ಇಲ್ಲ. ಒಳಗೇ ಇರುತ್ತೇನೆ. ಯಾರಾದರೂ ನನ್ನನ್ನು ಅಪಮಾನಿಸಿದರೆ ಅವರನ್ನು ನೋಡಿಕೊಳ್ಳಲು ಗಂಧರ್ವರು ಇದ್ದೇ ಇರುತ್ತಾರೆ. ನಿನಗೆ ನೋವಾಗುವಂಥದು ಏನು ಆಗದಂತೆ ಜಾಗ್ರತೆಯಾಗಿರುತ್ತೇನೆ. ಚಿಂತಿಸಬೇಡ" ಎಂದು ಭರವಸೆಯಿತ್ತಳು. ದ್ರೌಪದಿಯ ನಡತೆ ಸುದೇಷ್ಣೆಗೆ ತುಂಬ ಹಿಡಿಸಿತು. ದ್ರೌಪದಿಯೆಂದಳು, ``ನನ್ನ ಇನ್ನೆರಡು ಬೇಡಿಕೆಗಳಿವೆ. ನಾನು ಇನ್ನೊಬ್ಬರು ತಿಂದುಳಿಸಿದ್ದನ್ನು ತಿನ್ನುವುದಿಲ್ಲ; ಇನ್ನೊಬ್ಬರ ಕಾಲನ್ನೊತ್ತುವುದಿಲ್ಲ. ಈ ಕೆಲಸಗಳನ್ನು ಮಾಡಿದರೆ ನನ್ನ ಗಂಡಂದಿರು ಸಿಟ್ಟಿಗೇಳುತ್ತಾರೆ. ಹೀಗಾಗದಂತೆ ನೀನು ನೋಡಿಕೊಳ್ಳಬೇಕು. " ಸುದೇಷ್ಣೆಯು ಅಂತಹ ಸಂದರ್ಭವೇ ಬಾರದಂತೆ ತಾನು ಎಚ್ಚರ ವಹಿಸುವೆನೆಂದು ಮಾತು ಕೊಟ್ಟಳು.
ವಿರಾಟ ನಗರದಲ್ಲಿ ಮೂರು ತಿಂಗಳ ಕಾಲ ಬದುಕು ಸುಖವಾಗಿ ಸಾಗಿತು. ನಾಲ್ಕನೆಯ ತಿಂಗಳಿನಲ್ಲಿ ಶಿವಾರಾಧನೆಯ ಅಂಗವಾಗಿ ಕುಸ್ತಿಯನ್ನು ನಗರದಲ್ಲಿ ಏರ್ಪಡಿಸಲಾಗಿತ್ತು. ಅನೇಕ ದೇಶಗಳಿಂದ ಮಲ್ಲರು ಸ್ಪರ್ಧೆಗಾಗಿ ಬಂದಿದ್ದರು. ರಾಜನು ಪರಿವಾರದವರೊಂದಿಗೆ ಕುಸ್ತಿಯನ್ನು ನೋಡಲು ಬಂದಿದ್ದನು. ಅನ್ಯದೇಶದಿಂದ ಬಂದಿದ್ದ ಜೀಮೂತಮಲ್ಲನೆಂಬ ಒಬ್ಬ ಕುಸ್ತಿ ಪಟು ವಿರಾಟನಗರದ ಎಲ್ಲ ಮಲ್ಲರನ್ನೂ ಸೋಲಿಸಿದನಲ್ಲದೆ ರಂಗಮಧ್ಯದಲ್ಲಿ ನಿಂತು, ``ನಾನು ಲೋಕೈಕವೀರನಾದ ಮಲ್ಲ. ನನ್ನೆದುರು ಯಾರೂ ನಿಲ್ಲಲಾರರು. ಯಾರಾದರೂ ಗಂಡಸರಿದ್ದರೆ ಬರಲಿ!" ಇಲ್ಲವಾದರೆ ಈ ರಾಜ್ಯದಲ್ಲಿ ನನ್ನನ್ನು ಸೋಲಿಸುವ ಮಲ್ಲರು ಯಾರೂ ಇಲ್ಲವೆಂದು ಜಯಪತ್ರ ಬರೆದು ಕೊಡಬೇಕು ಇತ್ಯಾದಿಯಾಗಿ ಕೊಚ್ಚಿಕೊಳ್ಳತೊಡಗಿದನು. ಇಷ್ಟೊತ್ತಿಗೆ ಬಲಶಾಲಿ ಪರಾಕ್ರಮಿ ಯಾದ ಸುಧೇಷ್ಣೆಯ ತಮ್ಮ ಕಿಚಕ ವಧೆಯಾಗಿತ್ತು, ಅಷ್ಟೊಂದು ಪರಾಕ್ರಮಿ ಅಲ್ಲದ ವಿರಾಟ ರಾಜನಿಗೆ ಕೀಚಕನೇ ಸರ್ವಸ್ವನಾಗಿದ್ದ ಅವನಿಗೆ ಸೇನಾಧಿಪತ್ಯವನ್ನೂ ಒಪ್ಪಿಸಿದ್ದ. ಕೀಚಕ ನಿಲ್ಲದ ವಿರಾಟ ರಾಜ್ಯದ ಮೇಲೆ ನೆರೆಯ ರಾಜರು ಕಣ್ಣಿತ್ತು. ವಿರಾಟ ರಾಜನಿಗೆ ಪಿಚ್ಚೆನಿಸಿತು. ಈ ವೈಪರೀತ್ಯದಿಂದ ಹೊರಬರಲು ದಾರಿ ಇಲ್ಲವೇ ?`ಈ ಮನುಷ್ಯನ ಸವಾಲನ್ನೆದುರಿಸಿ ಅವನಿಗೆ ಒಂದು ಪಾಠ ಕಲಿಸಬಲ್ಲವರು ಇಲ್ಲಿ ಯಾರೂ ಇಲ್ಲವೆ?" ಎಂದನು. ಪಕ್ಕದಲ್ಲಿ ಕುಳಿತಿದ್ದ ಯುಧಿಷ್ಠಿರನು, ನಾನು ಇಂದ್ರಪ್ರಸ್ಥದಲ್ಲಿ ಯುಧಿಷ್ಠಿರನೊಂದಿಗೆ ಇದ್ದಾಗ ಒಬ್ಬ ಕುಸ್ತಿಪಟುವನ್ನು ನೋಡಿದ್ದೆ. ಅವನು ಈತನನ್ನು ಖಂಡಿತ ಸೋಲಿಸಬಲ್ಲ. ಅದೃಷ್ಟವಶಾತ್ ಅವನೇ ನಿನ್ನ ಗರಡಿಮನೆಯ ಮುಖ್ಯಸ್ಥನಾಗಿರುವವನು. ಅವನನ್ನು ಕರೆಯಿಸು" ಎಂದು ಸಲಹೆ ಕೊಟ್ಟನು. ವಿರಾಟನಿಗೆ ಸಂತೋಷವಾಯಿತು. ಭೀಮನಿಗೆ ಕರೆ ಹೋಯಿತು. ``ಅಯ್ಯಾ ವಲಲ, ಬಲ್ಲವನೇ ಇಂದ್ರಪ್ರಸ್ಥದಲ್ಲಿ ನೀನು ಕುಸ್ತಿಯಾಡುತ್ತಿದ್ದುದನ್ನು ನೋಡಿರುವೆನೆಂದು ಕಂಕನು ಹೇಳುತ್ತಾನೆ. ಎಲ್ಲರಿಗೂ ಸವಾಲು ಹಾಕುತ್ತಿರುವ ಈತನನ್ನು ನೀನು ಸೋಲಿಸಬಲ್ಲೆ ಎಂದು ಕಂಕನೆನ್ನುತ್ತಾನೆ. ಈ ದುರಹಂಕಾರಿಯನ್ನು ಎದುರಿಸಬಲ್ಲೆಯಾ?" ಎಂದನು. ತನ್ನ ಮಲ್ಲತಂತ್ರಪ್ರದರ್ಶನದಿಂದ ತಾನಾರೆಂದು ತಿಳಿದುಬಿಡಬಹುದೆಂದು ಈವರೆಗೂ ಸುಮ್ಮನಿದ್ದ ಭೀಮನು, ಈಗ ಅಣ್ಣನೂ ರಾಜನೂ ಹೇಳಿದ ಮೇಲೆ ಸುಮ್ಮನಿರುವನೆ? ಕೋಪಗೊಡ ಚಿರತೆಯಂತೆ ಹಾರಿ ರಂಗಕ್ಕೆ ಬಂದಾಗ ಉದ್ರಿಕ್ತ ಜನಸ್ತೋಮವು ಉಘೇ ಎಂದಿತು. ಭೀಮನ ಸಿಂಹನಾದದೊಡನೆ ಕುಸ್ತಿಯು ಪ್ರಾರಂಭವಾಯಿತು. ಇಬ್ಬರು ಮಲ್ಲರೂ ಎರಡು ಮಹಾ ಕಾಳಮೇಘಗಳಂತೆ ಒಬ್ಬರನ್ನೊಬ್ಬರು ಸೆಣಸಿದರು. ಜನರು ಒಂದಿನಿತೂ ಚಲಿಸದೆ ವಿಗ್ರಹಗಳಂತೆ ಕುಳಿತಿದ್ದರು. ಅಂತಹ ಕುಸ್ತಿಯನ್ನು ಎಂದೂ ಯಾರೂ ನೋಡಿರಲಿಲ್ಲ. ಜೀಮೂತಮಲ್ಲನು ಗೆದೆಯುವ ಭರದಲ್ಲಿ ಭೀಮನ ಮರ್ಮ ಸ್ಥಾನಗಳ ಮೇಲೆ ಹೊಡೆಯ ತೊಡಗಿದ. ಗಮನಿಸಿದ ವಲಲನು, ಈ ಮಲ್ಲನ ವಿಚಾರ ಚೆನ್ನಾಗಿಲ್ಲ ನನ್ನನ್ನು ಕೊಲ್ಲುವುದಕ್ಕಾಗಿ ಹವಣಿಸುತ್ತಿದ್ದಾನೆ. ಈ ಕುಸ್ತಿ ಪಂದ್ಯಾಟದಲ್ಲಿ ನಿಮ್ಮ ಮಲ್ಲನಿಗೆ ಏನಾದರೂ ಹೆಚ್ಚು ಕಡಿಮೆಯಾದರೆ ನಾನು ಹೊಣೆಗಾರನಲ್ಲ ಎಂದು ಹೇಳಿ, ಕೊನೆಗೆ ಭೀಮನು ತನ್ನ ಎದುರಾಳಿಯನ್ನು ಅನಾಮತ್ತಾಗಿ ಮೇಲಕ್ಕೆತ್ತಿ, ಅವನು ಮೂರ್ಛೆ ಹೋಗುವವರೆಗೂ ಗಿರಗಿರನೆ ತಿರುಗಿಸಿ ತನ್ನ ಮೊಣಕಾಲ ಮೇಲೆ ಜೋರಾಗಿ ಕುಕ್ಕಿ ಅವನ ನಿಟ್ಟೆಲುಬನ್ನೇ ಮುರಿದು ಕೊಂದುಬಿಟ್ಟನು. ಭೀಮನ ಶೌರ್ಯವನ್ನು ನೋಡಿ ರಾಜನಿಗೆ ಬಹಳ ಸಂತೋಷವಾಯಿತು. ಲೋಕೈಕ ವೀರನಾಗಿದ್ದ ಮಲ್ಲನನ್ನೂ ಸೋಲಿಸಿದವನೊಬ್ಬನು ತಮ್ಮಲ್ಲಿರುವನೆಂಬ ಹೆಮ್ಮೆ ಅವನದಾಯಿತು.ಈ ಘಟನೆಯಿಂದ ಭೀಮನು ರಾಜನಿಗೆ ತುಂಬ ಆಪ್ತನಾಗುವಂತಾಯಿತು. ಪಾಂಡವರು ವಿರಾಟ ನಗರದಲ್ಲಿ ತಮಗೆ ಬಹುಕಾಲದಿಂದ ಸಿಕ್ಕಿರದ ಶಾಂತಿ ಸುಖಗಳಿಂದ ನೆಮ್ಮದಿಯಾಗಿದ್ದರು. ವಿರಾಟನ ಪ್ರೀತಿಯ ಆಶ್ರಯವು ಅನ್ಯಾಯ ಪರಂಪರೆಯಿಂದ ಘಾಸಿಗೊಂಡ ಅವರ ಹೃದಯಗಳಿಗೆ ಅಮೃತ ಸೇಚನ ಮಾಡಿಸಿದಂತಿತ್ತು.

No comments:
Post a Comment