Sunday, May 17, 2026

Re-installation of the waste statue ತ್ಯಾಜ್ಯ ಮೂರ್ತಿಯ ಪುನಃ ಪ್ರತಿಷ್ಠೆ

ತ್ಯಾಜ್ಯ ಮೂರ್ತಿಯ ಪುನಃ ಪ್ರತಿಷ್ಠಾಪನೆ ( ಒಂದು ವಿವೇಚನೆ )

ಒಂದು ದೇವಸ್ಥಾನದಲ್ಲಿಯ ವಿಗ್ರಹವು ಶಿಥಿಲವೋ, ಭಿನ್ನವೋ ಆದಾಗ ಅದನ್ನೇ ಪೂಜಿಸಬಹುದೇ ? ಪುನಃ ಪ್ರತಿಷ್ಠಾಪಿಸಬಹುದೇ ? ಯಾವ ಸಂದರ್ಭದಲ್ಲಿ ಬಿಂಬತ್ಯಾಗ ಮಾಡಿ ಹೊಸಬಿಂಬ ಪ್ರತಿಷ್ಠಾಪಿಸಬೇಕು? ಭಿನ್ನವಾದ ವಿಗ್ರಹವನ್ನು ಬಿಂಬತ್ಯಾಗ ವಿಧಿ ಅನುಸರಿಸಿ ನೀರಿನಲ್ಲಿ ತ್ಯಾಗ ಮಾಡಿರುವಾಗ ಜ್ಯೋತಿಶ್ಶಾಸ್ತ್ರ ಪ್ರಕಾರ ಅದನ್ನು ತಂದು ಪುನಃ ಪ್ರತಿಷ್ಠಾಪಿಸಬಹುದೇ ? ಎಂಬಿತ್ಯಾದಿ ವಿಚಾರಗಳ ಕುರಿತು ಜ್ಯೋತಿಷ್ಯ, ವಾಸ್ತುಶಾಸ್ತ್ರ, ಶಿಲ್ಪಶಾಸ್ತ್ರ ,ಆಗಮ ಮುಂತಾದ ಶಾಸ್ತ್ರಗಳಲ್ಲಿ ಏನು ಉಲ್ಲೇಖವಿದೆ ಎಂದು ಈ ಲೇಖನದಲ್ಲಿ ಚರ್ಚಿಸಲಾಗಿದೆ.

ಆಗಮ ಶಾಸ್ತ್ರದ ಗ್ರಂಥವಾದ ಅನುಷ್ಠಾನ ಪದ್ಧತಿಯಲ್ಲಿ ಬಿಂಬತ್ಯಾಗವಿಧಿಯ ಕೆಲ ಅಂಶಗಳು ಹೀಗಿವೆ.

ಅತ್ರ ಪೀಠೇ ಯಾಮ್ಯಶಿರಸ್ಕಂ ಶಾಯಯಿತ್ವಾ ಕ್ಷಾಲಯಿತ್ವಾ ಮನಾಗಿಷ್ಟ್ವಾ ವಾಸನಾಂ ಪೂರ್ವವದುದ್ವಾಸ್ಯ ವಸ್ತ್ರಾಚ್ಛಾದಿತಶಿರಃಪೂರ್ವಕಂ ಬಹಿರ್ನೀತ್ವಾ ಪ್ರಾಸಾದದಕ್ಷಿಣಸ್ಥಮಂಡಲೇ ಸ್ಥಂಡಿಲಂ ಕೃತ್ವಾ ಸಿಕತಾ ದರ್ಭಾಶ್ಚ ವಿನ್ಯಸ್ಯ ದಕ್ಷಿಣಶಿರಸ್ಕಂ ನ್ಯಸ್ಯ ತಿಲಾಕ್ಷತಾನ್ ವಿಕಿರನ್ ಅಪಸವ್ಯೇನ ಬಿಂಬಂ ತ್ರಿಧಾ ಪರ್ಯೇತು | ಪುನರ್ವಸ್ತ್ರಾದಿ ವಿಸೃಜ್ಯಾಭಿಷಿಚ್ಯ ಕಿಂಚಿದುಪಹೃತ್ಯ ತತ್ಸ್ಥಾಂ ಶೇಷವಾಸನಾಮಪಿ ರವೌ ಸಮುದ್ವಾಸ್ಯ ಕುಶೈಶ್ಚ ಸುವೇಷ್ಟ್ಯ ನದ್ಯಾದಿಜಲಾಶಯಂ ಗಚ್ಛೇತ್| ಅಗಾಧೇ ಜಲೇ ಇಷ್ಟಪೀಠೇ ನಿರ್ಮಾಲ್ಯಧಾರಿಣಂ ತತ್ತನ್ಮಂತ್ರೇಣಾವಾಹ್ಯ ಸಂಪೂಜ್ಯ ಬಿಂಬಂ ತದಧೀನಂ ಕೃತ್ವಾ ಅಪ್ಸು ಪ್ರಕ್ಷಿಪೇತ್| ಕರ್ತ್ರಾ ಸಹ ಸ್ನಾತ್ವಾ ಯಥಾವಿಧಾನಂ ಸ್ವಮೂಲಮಂತ್ರೇಣ ತರ್ಪಯೇತ್| ಪುನರಾಗತ್ಯ ಪೀಠನಪುಂಸಕಶಿಲಾದ್ಯಮಪನೀಯ ಮೂಲ ಪ್ರಾಸಾದಮಭಿರಕ್ಷ್ಯ ಸಜೀವ ಕುಂಭಾಲ್ಪಬಿಂಬಪ್ರತಿಷ್ಠಾದಿ ಸರ್ವಂ ಕರ್ಮ ಕುರ್ಯಾತ್ ||

ಬಿಂಬತ್ಯಾಗ ಪಕ್ಷದಲ್ಲಿ - ತಂತ್ರಸಮುಚ್ಚಯದ ಪ್ರಯೋಗರೂಪವಾದ  ಅನುಷ್ಠಾನ ಪದ್ಧತಿಯಲ್ಲಿ ಕಲಾಸಂಕೋಚ, ಜೀವಕಲಶದಲ್ಲಿ ಆವಾಹನ, ಬಿಂಬವನ್ನು ಪೀಠದಿಂದ ತೆಗೆಯುವುದು,  ಬಿಂಬತ್ಯಾಗ ಹೋಮ ಇನ್ನಿತರ ಪ್ರಕ್ರಿಯೆಗಳ ಅನಂತರ ಮಾಡಬೇಕಾದ ವಿಧಿಯನ್ನು ಹೀಗೆ ಹೇಳಿದೆ.

 ಬಿಂಬವನ್ನು ಪೀಠದಲ್ಲಿ ದಕ್ಷಿಣಕ್ಕೆ  ತಲೆ ಬರುವಂತೆ ಮಲಗಿಸಿ ಜಲಪ್ರಕ್ಷಾಲನ ಮಾಡಿ ಶೇಷವಾಸನೆಯನ್ನು(ಚೈತನ್ಯವನ್ನು) ಉದ್ವಾಸಿಸಿ, ಶಿರವನ್ನು ವಸ್ತ್ರದಿಂದ ಮುಚ್ಚಿ ಹೊರಗೆ ತಂದು ಪ್ರಾಸಾದದಕ್ಷಿಣದ ಸ್ಥಂಡಿಲದಲ್ಲಿ ದರ್ಭೆ ಹಾಸಿ ದಕ್ಷಿಣ ಶಿರಸ್ಕವಾಗಿ ಮಲಗಿಸಿ ತಿಲಾಕ್ಷತೆ ಹಾಕಿ ಆಚಾರ್ಯನು ಅಪಸವ್ಯವಾಗಿ ಮೂರು ಬಾರಿ ಬಿಂಬವನ್ನು ಸುತ್ತಿ, ವಸ್ತ್ರಾದಿ ತೆಗೆದು ಅಭಿಷೇಕ, ಉಪಚಾರ ಮಾಡಿ ಶೇಷವಾಸನೆ(ಚೈತನ್ಯ)ಯನ್ನು ಸೂರ್ಯನಲ್ಲಿ ಉದ್ವಾಸಿಸಿ ಪುನಃ ವಸ್ತ್ರ ದರ್ಭೆ ಮುಚ್ಚಿ ನದ್ಯಾದಿ ಜಲಾಶಯಕ್ಕೆ ಹೋಗಿ ಅಗಾಧಜಲದಲ್ಲಿ ಇಷ್ಟಪೀಠದಲ್ಲಿ ನಿರ್ಮಾಲ್ಯಧಾರಿಯನ್ನು ಆಯಾ ಮಂತ್ರದಿಂದ ಆವಾಹಿಸಿ ಪೂಜಿಸಿ ಬಿಂಬವನ್ನು ಅದರ ಅಧೀನಕ್ಕೆ ಕೊಟ್ಟು ನೀರಿನಲ್ಲಿ ವಿಸರ್ಜಿಸಿ ಸ್ನಾನ ಮಾಡಿ ಮೂಲಮಂತ್ರದಿಂದ  ತರ್ಪಣ ಕೊಟ್ಟು ದೇವಸ್ಥಾನಕ್ಕೆ ಬಂದು ಸಜೀವಕುಂಭ ಅಲ್ಪಬಿಂಬಪ್ರತಿಷ್ಠಾದಿ ಸರ್ವಕರ್ಮಗಳನ್ನು ಮಾಡುವುದು.

ತಂತ್ರಸಮುಚ್ಚಯದಲ್ಲಿ ಹೀಗೆ ಹೇಳಿದೆ.

ಯಥೈವದೇವಪೂಜಾಯಾಂವಿನಿಯುಕ್ತಮನಿಂದಿತಮ್ । ದ್ರವ್ಯಂ ಪುಷ್ಪಾದಿಕಂ ಪಶ್ಚಾನ್ನಿರ್ಮಾಲ್ಯಮಿತಿ ನಿಂದ್ಯತೇ ||

ಹೇಗೆ ದೇವರ ಪೂಜೆಯಲ್ಲಿ ಉಪಯೋಗಿಸಲ್ಪಟ್ಟ ನಿಷಿದ್ಧವಲ್ಲದ ದ್ರವ್ಯ, ಹೂವು ಮೊದಲಾದುವುಗಳು ಉಪಯೋಗಿಸಿ ಬಿಟ್ಟ ಅನಂತರದಲ್ಲಿ 'ನಿರ್ಮಾಲ್ಯ' ಎನ್ನುವುದಾಗಿ ಹೇಳಲ್ಪಡುತ್ತದೆ 

ಏವಂ ಬಿಂಮಮದುಷ್ಟಂ ಯತ್ಪೂ ಜಾಯಾಂ ವಿನಿಯುಜ್ಯತೇ | ತದೇವ ದೂಷಿತಂ ಪಶ್ಚಾನ್ನಿರ್ಮಾಲ್ಯಮಿತಿ ನಿಂದ್ಯತೇ ||

ಹೀಗೆಯೇ ಸತ್ವಲಕ್ಷಣ ಸಂಪದ್ಭರಿತವಾದ ನಿಷಿದ್ಧವಲ್ಲದುದು ವಿಗ್ರಹವು ಪೂಜೆಯಲ್ಲಿ ಉಪಯೋಗಿಸಲ್ಪಡುತ್ತದೆ. ಅದೇ ಮೂರ್ತಿಯು ಹಲವಾರು ದೋಷ ಭೂಯಿಷ್ಠವಾಗಿದ್ದಲ್ಲಿ ಆಮೇಲೆ 'ನಿರ್ಮಾಲ್ಯ' ಎನ್ನುವುದಾಗಿ ದೂಷಿಸಲ್ಪಡುತ್ತದೆ ||

ತಸ್ಮಾದ್ದುಷ್ಟಮಿದಂಬಿಂಬಂ ಭವದ್ಧಿರ್ಮುಕ್ತ ಸಂಶಯೈಃ | ನಿರ್ಮಾಲ್ಯಬುದ್ಧ್ಯಾ ತ್ಯಕ್ತವ್ಯಮಿತಿ ಶಾಸ್ತ್ರಸ್ಯ ಶಾಸನಮ್ ||೨೯||

ಆ ಕಾರಣವಾಗಿ ದೋಷಭೂಯಿಷ್ಠವಾದ ಈ ಮೂರ್ತಿಯು ಯಾವ ರೀತಿಯ ಸಂದೇಹಕ್ಕೊಳಗಾಗದೇ ತಮ್ಮಿಂದ 'ನಿರ್ಮಾಲ್ಯ'ವೆಂಬ ಗ್ರಹಿಕೆಯಿಂದ ಬಿಡಲ್ಪಡಬೇಕು. (ತ್ಯಾಗ ಮಾಡಲ್ಪಡಬೇಕು.) ಇದು ಆಗಮ ಶಾಸ್ತ್ರದ (ಶಿಸ್ತು) (ಅಪ್ಪಣೆ) ಹೇಳುವುದಾಗಿರುತ್ತದೆ.

ಹೀಗೆ ಎಲ್ಲ ವಿಧಿ ಅನುಸರಿಸಿದ್ದರೂ ಅಗಾಧಜಲದಲ್ಲಿ ಅಂದರೆ ಆಳವಾದ ನದಿಯಲ್ಲಿ ಇಲ್ಲವೇ  ಸಮುದ್ರದಲ್ಲಿ ಭಿನ್ನ ಬಿಂಬವನ್ನು ಬಿಡದೇ ಅದು ಮತ್ತೆ ಸಿಗುವ ಹಾಗೆ ಅಲ್ಪಪ್ರಮಾಣದ ನೀರಿನಲ್ಲಿ/ವೃಕ್ಷದ ಕೆಳಗೆ/ ದೇವಸ್ಥಾನದಲ್ಲಿಯೇ ಒಂದು ಮೂಲೆಯಲ್ಲಿ ಇಟ್ಟಿರುವ ಪರಿಣಾಮ ಮುಂದಿನಂತೆ ಆಗಬಹುದು.(ಎಲ್ಲ ಕಡೆ ಅಲ್ಲ)

ಈಗ ವಿಷಯ ಏನೆಂದರೆ ಈ ರೀತಿ ಉತ್ತರಕ್ರಿಯೆಯ ಸ್ವರೂಪದಲ್ಲಿ ನಿರ್ಮಾಲ್ಯವೆಂಬ ಗ್ರಹಿಕೆಯಿಂದ ತ್ಯಾಗ ಮಾಡಿದ ಬಿಂಬವನ್ನು ಅಥವಾ ಲಿಂಗವನ್ನು ಅದು ಋಷಿಗಳಿಂದ/ಮಹಾತ್ಮರಿಂದ ಇಲ್ಲವೇ ದ್ವಾಪರಯುಗದಲ್ಲಿ ಪ್ರತಿಷ್ಠಾಪನೆ ಆದದ್ದು, ಈಗ ಅದು ನೀರಿನಲ್ಲಿ/ಬಯಲಿನಲ್ಲಿ/ವೃಕ್ಷದ ಕೆಳಗೆ ಇದ್ದು ಭಿನ್ನವಾಗಿದ್ದರೂ ಅದರಲ್ಲೇ ಶಕ್ತಿ ಇದೆ, ಅದು ತೊಂದರೆ ಕೊಡುತ್ತಿದೆ, ಬಿಂಬತ್ಯಾಗ ವಿಧಿ ಅನುಸರಿಸಿಲ್ಲ, ಶತ್ರುಗಳ ದಾಳಿಯಲ್ಲಿ ಹಾನಿಗೊಳಗಾಗಿದ್ದರೂ ಅದರಲ್ಲೇ ಸಾನ್ನಿಧ್ಯವಿದೆ, ಅದನ್ನೇ ಪುನಃಪ್ರತಿಷ್ಠೆ ಮಾಡಬೇಕು ಅಂತ ಕೆಲವು ದೈವಜ್ಞರು ಅಷ್ಟಮಂಗಲ ಪ್ರಶ್ನೆಯಲ್ಲಿ ಹೇಳಿ ನೀರಿನಲ್ಲಿ/ ಭೂಮಿಯ ಮೇಲೆ ಎಲ್ಲಿ ಇದ್ದರೂ ತೆಗೆಸಿ ಪುನಃ ಪ್ರತಿಷ್ಠೆ ಮಾಡಿಸುತ್ತಾ ಇದ್ದಾರೆ. (ಹೆಚ್ಚಿನ ಅಷ್ಟಮಂಗಲದ ದೈವಜ್ಞರು ಹೀಗೆ ಹೇಳುತ್ತಿಲ್ಲ. ಕೆಲವರು ಮಾತ್ರ ಹೇಳುತ್ತಿರುವುದು) ಹೀಗೆ ರಾಜ್ಯದ ಬಹಳ ಕಡೆ ತ್ಯಾಗಬಿಂಬ /ಲಿಂಗ ಪುನಃ ಪ್ರತಿಷ್ಠೆ ನಡೆದುಹೋಗಿದೆ. ಆಗಮಿಕರು ಅಷ್ಟಮಂಗಲದವರು ಹೇಳಿದ್ದಾರೆ ಅಂತ ಮಾಡಿಸಿ ಆಗಿದೆ. ನೂತನ ಬಿಂಬದ ವಿಧಿ ಅನುಸರಿಸಿರಬಹುದು. ಮುಂದೆ ಬಹಳ ಕಡೆ ಆಗುವುದು ಹೇಗೂ ಇದೆ.

 ಪ್ರಶ್ನಶಾಸ್ತ್ರದ ಮೂಲಗ್ರಂಥಗಳಾದ ದೈವಜ್ಞವಲ್ಲಭ, ಷಟ್ ಪಂಚಾಶಿಕಾ, ಆರ್ಯಾಸಪ್ತತಿ, ಪ್ರಶ್ನತಂತ್ರ, ಪ್ರಶ್ನಶಿರೋಮಣಿ, ಕೃಷ್ಣೀಯ,  ಪ್ರಶ್ನಾನುಷ್ಠಾನಪದ್ಧತಿಗಳಲ್ಲಿ  ಹಾಗೂ ದೇವಪ್ರಶ್ನ ಮತ್ತು ಅಷ್ಟಮಂಗಲಪ್ರಶ್ನಗಳ ಗ್ರಂಥಗಳಾದ ದೇವಪ್ರಶ್ನಮ್, ಪ್ರಶ್ನಮಾರ್ಗಮ್, ಪ್ರಶ್ನರೀತಿ , ಪ್ರಶ್ನಕೌತುಕಮ್,  ದೇವಪ್ರಶ್ನಾನುಷ್ಠಾನಪ್ರದೀಪಮ್ ಮೊದಲಾದವುಗಳಲ್ಲಿ ತ್ಯಾಗಬಿಂಬದ ಪುನಃಪ್ರತಿಷ್ಠೆ ಅಥವಾ ಇಂತಹ ಗ್ರಹಸ್ಥಿತಿ ಇದ್ದರೆ ಬಿಂಬತ್ಯಾಗವಿಧಿ ಸರಿಯಾಗಿಲ್ಲವಾದ್ದರಿಂದ ಪುನಃಪ್ರತಿಷ್ಠೆ ಮಾಡಬೇಕು ಈ ಕುರಿತು ಶ್ಲೋಕಗಳು ಕಂಡುಬರುವುದಿಲ್ಲ.  ರವಿಯು ಪರಮೋಚ್ಚದಲ್ಲಿದ್ದಾಗ, ನಿರ್ದಿಷ್ಟ ಸ್ಥಾನದಲ್ಲಿದ್ದಾಗ ಉಚ್ಚಮರ್ತ್ಯರು ಅಂದರೆ ಋಷಿಗಳು, ಮಹಾತ್ಮರು ಪ್ರತಿಷ್ಠಾಪಿಸಿದ್ದು ಅನ್ನುವ ವಿಚಾರವಿದೆ. ಬೇರೆ ಗ್ರಹರು ಪರಮೋಚ್ಚದಲ್ಲಿದ್ದಾಗ ಆಯಾ ದೇವತೆ ಪ್ರತಿಷ್ಠೆ ಉಚ್ಚಮರ್ತ್ಯರಿಂದ ಆಗಿದೆ ಅಂತ ಅನ್ವಯಿಸಿಕೊಳ್ಳಬಹುದಾದರೂ ಅದು ಬರುವುದು ವರ್ಷದಲ್ಲಿ ಬರುವುದು ಕೆಲವೇ ದಿನಗಳು ಮಾತ್ರ. ನೂರಕ್ಕೆ ಒಂದೆರಡು ಅಷ್ಟಮಂಗಲ ಪ್ರಶ್ನೆಯಲ್ಲಿ ಹೀಗೆ ಬರಬಹುದು.ಆದರೆ  ಅಷ್ಟಮಂಗಲ ಪ್ರಶ್ನೆ ಹೇಳುವ ಕೆಲವು ದೈವಜ್ಞರು ಹತ್ತು ಅಷ್ಟಮಂಗಲದಲ್ಲಿ ಐದು ಕಡೆಯಾದರೂ ಇದು ಋಷಿಗಳಿಂದ/ಮಹಾತ್ಮರಿಂದ ಪ್ರತಿಷ್ಠೆ ಆಗಿದೆಯೆಂದು ಹೇಳಿಬಿಡುತ್ತಾರೆ. ಇದಕ್ಕೆ ಯಾವುದೇ ಶ್ಲೋಕಾಧಾರ ಇರುವುದಿಲ್ಲ. ಊಹಾಪೋಹದಿಂದ  ಹೇಳಿರುತ್ತಾರೆ. ಹಾಗೆಯೇ ಪೂರ್ವಬಿಂಬ ನೀರಿನಲ್ಲಿ ಇದೆ ಅಂತಾದರೆ ಅದರಲ್ಲೇ ಶಕ್ತಿ ಇದೆ. ಅದನ್ನೇ ತಂದು ಪುನಃ ಪ್ರತಿಷ್ಠೆ ಮಾಡಬೇಕು ಎಂದುಬಿಡುತ್ತಾರೆ. ಮಹಾತ್ಮರ ಪ್ರತಿಷ್ಠೆ ಅಂತ ಕೇಳಿದ ಕೂಡಲೇ ಪರವಶರಾಗಿದ್ದ ಭಕ್ತಜನರು ತ್ಯಾಗಮಾಡಿದ ಬಿಂಬವನ್ನೇ ಪ್ರತಿಷ್ಠಾಪಿಸಲು ಮುಂದಾಗಿಬಿಡುತ್ತಾರೆ.

ವಿಗ್ರಹದ ಗುಣದೋಷ  ಕುರಿತು ಮೇರುಗ್ರಂಥವಾದ  ಬೃಹತ್ಸಂಹಿತೆಯಲ್ಲಿ ಹೀಗೆ ವಚನಗಳಿವೆ. 

ಸೌಮ್ಯಾ ತು ಹಸ್ತಮಾತ್ರಾ ವಸುದಾ ಹಸ್ತದ್ವಯೋಚ್ಛ್ರಿತಾ ಪ್ರತಿಮಾ | ಕ್ಷೇಭಸುಭಿಕ್ಷಾಯ ಭವೇತ್ ತ್ರಿಚತುರ್ಹಸ್ತಪ್ರಮಾಣಾ ಯಾ ನೃಪಭಯಮತ್ಯಂಗಾಯಾಂ ಹೀನಾಂಗಾಯಾಮಕಲ್ಯತಾ ಕರ್ತುಃ | ಶಾತೋದರ್ಯಾ ಕ್ಷುದ್ಭಯಮರ್ಥವಿನಾಶಃ ಕೃಶಾಂಗಾಯಾಮ್ ||

ಮರಣಂ ತು ಸಕ್ಷತಾಯಾಂ ಶಸ್ತ್ರನಿಪಾತೇನ ನಿರ್ದಿಶೇತ್ ಕರ್ತುಃ | ವಾಮಾವನತಾ ಪತ್ನೀಂ ದಕ್ಷಿಣವಿನತಾ ಹಿನಸ್ತ್ಯಾಯುಃ || ಅಂಧತ್ವಮೂರ್ಧ್ವದೃಷ್ಟ್ಯಾ ಕರೋತಿ ಚಿಂತಾಮಧೋಮುಖೀ ದೃಷ್ಟಿಃ ಸರ್ವಪ್ರತಿಮಾಸ್ವೇವಂ ಶುಭಾಶುಭಂ ಭಾಸ್ಕರೋಕ್ತಸಮಮ್ ||

ಒಂದು ಹಸ್ತಪ್ರಮಾಣದ  ಸೂರ್ಯನ ಪ್ರತಿಮೆ ಶುಭ, ಎರಡು ಹಸ್ತ ಎತ್ತರದ ಪ್ರತಿಮೆ ಧನಪ್ರದ. ಮೂರು ಹಸ್ತ ಪ್ರಮಾಣದ  ಪ್ರತಿಮೆಯು ಕ್ಷೇಮ ಮತ್ತು ಸುಭಿಕ್ಷೆಯನ್ನು ಕೊಡುತ್ತದೆ. ಅಧಿಕ ಅಂಗವುಳ್ಳ ಪ್ರತಿಮೆಯಿಂದ  ರಾಜ  ಭಯ, ಹೀನಾಂಗ ಪ್ರತಿಮೆಯಿಂದ   ಕರ್ತೃವಿಗೆ ಅಂದರೆ ಯಜಮಾನನಿಗೆ ರೋಗಪ್ರಾಪ್ತಿ, ಕೃಶವಾದ ಹೊಟ್ಟೆ ಇರುವ  ಪ್ರತಿಮೆಯಿಂದ ಕ್ಷುದ್ಭಯ ಮತ್ತು ಅರ್ಥನಾಶ,  ಕ್ಷತ ಪ್ರತಿಮೆಯಿಂದ  ಶಸ್ತ್ರದಿಂದ ಮೃತ್ಯು,  ಎಡಕ್ಕೆ ವಾಲಿರುವ ಪ್ರತಿಮೆಯಿಂದ ಪತ್ನೀನಾಶ, ಬಲಕ್ಕೆ ವಾಲಿರುವ ಪ್ರತಿಮೆಯಿಂದ ಆಯುಷ್ಯ ಹೀನತೆ, ಊರ್ಧ್ವದೃಷ್ಟಿಯ ಪ್ರತಿಮೆಯಿಂದ ಅಂಧತ್ವ, ಅಧೋದೃಷ್ಟಿ ಇರುವ ಪ್ರತಿಮೆಯಿಂದ ಚಿಂತೆ, ಸೂರ್ಯನ ಪ್ರತಿಮೆಗೆ ಈ ಲಕ್ಷಣ ಹೇಳಿರುವುದಾದರೂ ಎಲ್ಲಾ ದೇವತೆಗಳ ಪ್ರತಿಮೆಗೂ ಇದು ಅನ್ವಯಿಸುತ್ತದೆ.

ಕೃಶದೀರ್ಘಂ ದೇಶಘ್ನಂ ಪಾರ್ಶ್ವವಿಹೀನಂ ಪುರಸ್ಯ ನಾಶಾಯ | ಯಸ್ಯ ಕ್ಷತಂ ಭವೇನ್ಮಸ್ತಕೇ ವಿನಾಶಾಯ ತಲ್ಲಿಂಗಮ್ ||

ಶಿವಲಿಂಗವು  ಕೃಶ ಇಲ್ಲವೇ  ದೀರ್ಘವಾಗಿದ್ದರೆ ದೇಶದ ನಾಶ,  ಎರಡೂ ಪಾರ್ಶ್ವ ವಿಹೀನವಾಗಿದ್ದರೆ ನಗರದ ನಾಶ .ತಲೆಯು ಕ್ಷತವಾಗಿದ್ದರೆ ಸ್ವಾಮಿಯ ನಾಶವನ್ನುಂಟುಮಾಡುತ್ತದೆ. 

ಶಂಕೂಪಹತಾ ಪ್ರತಿಮಾ ಪ್ರಧಾನಪುರುಷಂ ಕುಲಂ ಚ ಘಾತಯತಿ | ಶ್ವಭ್ರೋಪಹತಾ ರೋಗಾನುಪದ್ರವಾಂಶ್ಚ ಕ್ಷಯಂ ಕುರುತೇ ||

ಯಾವುದೇ ರೀತಿಯ  ಕೀಲದಿಂದ  ಪೀಡ಼ಿತ ಪ್ರತಿಮೆಯಿಂದ ಪ್ರಧಾನ ಪುರುಷ ಮತ್ತು ಸಂತಾನದ ನಾಶ ಮತ್ತು ಛಿದ್ರವಾದ ಪ್ರತಿಮೆಯು ರೋಗ, ಉಪದ್ರವ ಮೃತ್ಯುಪ್ರದವಾಗಿದೆ.

ಇದಕ್ಕೆ  ಕಶ್ಯಪ ಋಷಿಯ ವಚನ-

ಯಾರ್ಚಾ ಶಂಕೂಪಹತಾ ಸಾ ತು ಪ್ರಧಾನಕುಲನಾಶಿನೀ | ಛಿದ್ರೇಣೋಪಹತಾ ಯಾ ತು ಬಹುದೋಷಕರೀ ಮತಾ ||ವೈಕಲ್ಯಂ ಕುರುತೇ ಹೀನಾ ಕೃಶಾಂಗೀ ದೇಹನಾಶಿನೀ | ಮರಣಂ ಸಕ್ಷತಾಯಾಂ ತು ಸುದೀರ್ಘಾ ವಿತ್ತನಾಶಿನೀ || ವಾಮೇ ನತಾ ಹಂತಿ ಪತ್ನೀಂ ಕರ್ತುರ್ದಕ್ಷಿಣಭಾಗಗಾ| ಊರ್ಧ್ವದೃಷ್ಟಿರ್ನೇತ್ರರೋಗಂ ಗೋಕರ್ಣಾ ಸ್ಯಾದಧೋಮುಖೀ || ಸುರೂಪಾ ಸುಪ್ರಭಾಗೈವ ಸರ್ವಾಭರಣಭೂಷಿತಾ | ಸ್ವಾಯುಧೈಶ್ಚ ಸಮಾಯುಕ್ತಾ ಕರ್ತವ್ಯಾ ಪ್ರತಿಮಾ ಶುಭಾ ||

ಜ್ಯೋತಿಶ್ಶಾಸ್ತ್ರದಲ್ಲಿ ವರಾಹಮಿಹಿರಾಚಾರ್ಯರ ವಚನಗಳು ಪರಮಪ್ರಮಾಣ.  ಹಾಗಾಗಿ ಜ್ಯೋತಿಶ್ಶಾಸ್ತ್ರದ ಪ್ರಕಾರ ಭಿನ್ನ ಪ್ರತಿಮೆಯ ಪ್ರತಿಷ್ಠೆ  ಹೇಳುವುದು ಯುಕ್ತವಲ್ಲ. 

ಈ ದೇವಾಷ್ಟಮಂಗಲ ಪ್ರಶ್ನೆ ಎನ್ನುವುದು ಪರಾಶರ, ಗರ್ಗ, ವಸಿಷ್ಠ ಮುಂತಾದ ಋಷಿಪ್ರಣೀತ ಗ್ರಂಥಗಳಲ್ಲಾಗಲೀ, ವರಾಹಮಿಹಿರ, ಪೃಥುಯಶ, ಕಲ್ಯಾಣವರ್ಮ, ಶ್ರೀಪತಿ ಮುಂತಾದ ಆಚಾರ್ಯರು ಬರೆದಿರುವ ಗ್ರಂಥಗಳಲ್ಲಾಗಲೀ ಇಲ್ಲ. ದೇವಪ್ರಶ್ನೆಯ ಮೂಲವು ಕೃಷ್ಣೀಯ, ಪ್ರಶ್ನಶಿರೋಮಣಿ ಮುಂತಾದ  ಗ್ರಂಥಗಳಲ್ಲಿ ಕಿಂಚಿತ್ ಇದೆ. ಅದು ದೇವಾಲಯದ ದೇವತಾವಿಗ್ರಹಕ್ಕೆ ನೇರ ಸಂಬಂಧಿಸಿದ್ದಲ್ಲ. ಬೃಹಜ್ಜಾತಕ, ಬೃಹತ್ಸಂಹಿತೆಯನ್ನೂ ಪೂರಕವಾಗಿ ಬಳಸಿಕೊಳ್ಳಲಾಗುತ್ತದೆ.

ಸಾನ್ನಿಧ್ಯ, ಕ್ಷೇತ್ರ, ಬಿಂಬ, ರಕ್ಷಕ, ನೈವೇದ್ಯ, ಪರಿಚಾರಕ, ಪ್ರಾಸಾದ, ಉಪವೇಶ್ಮ, ಪಲ್ಲಕ್ಕಿ, ಉತ್ಸವ, ಅಶುದ್ಧಿ, ಕ್ಷೇತ್ರೇಶ, ದೇವಲಕ, ಆಚಾರ್ಯ, ಕರ್ತೃ ಮುಂತಾದ ವಿಚಾರಗಳನ್ನು ದೇವಾಷ್ಟಮಂಗಲದಲ್ಲಿ ವಿಮರ್ಶಿಸಲಾಗುತ್ತದೆಯೋ ಅದು ಆಗಮ ಮೂಲವನ್ನು ಹೊಂದಿದೆ. ತಂತ್ರಸಮುಚ್ಚಯಾದಿ ಆಗಮ ಗ್ರಂಥಗಳಲ್ಲಿ ಹೇಳಿರುವ ಅಂಶಗಳನ್ನು ಆಧರಿಸಿ ಗ್ರಹ, ರಾಶಿ, ಭಾವಗಳಿಗೆ ಅನ್ವಯಿಸಿ  ದೇವಪ್ರಶ್ನೆಯ ಗ್ರಂಥಗಳಲ್ಲಿ ಶ್ಲೋಕ ರಚನೆ ಮಾಡಲಾಗಿದೆ. ಎದುರಿಗೆ ಹೇಳುವುದು ಜ್ಯೋತಿಶ್ಶಾಸ್ತ್ರಾನುಸಾರ ಎಂದು ಕಂಡರೂ ಹೇಳುವುದು ಆಗಮದ ವಿಷಯವೇ ಆಗಿರುತ್ತದೆ. ಜ್ಯೋತಿಶ್ಶಾಸ್ತ್ರದ ಮೂಲಪ್ರಮಾಣಗ್ರಂಥಗಳಲ್ಲಿ ಈ ವಿಷಯಗಳಿಲ್ಲ. ಹಾಗಾಗಿ ನೀರಿನಲ್ಲಿ ತ್ಯಾಗಮಾಡಿದ ಬಿಂಬವನ್ನೇ ಪುನಃ ಪ್ರತಿಷ್ಠೆ ಮಾಡಿ ಈಗ ಪೂಜೆ ಆಗುತ್ತಿರುವ  ಚೆನ್ನಾಗಿರುವ ಬಿಂಬವನ್ನೇ ನೀರಿನಲ್ಲಿ ತ್ಯಾಗ ಮಾಡಬೇಕೆಂದು ಅಷ್ಟಮಂಗಲದಲ್ಲಿ ನಿರ್ದೇಶಿಸುವುದು ಜ್ಯೋತಿಶ್ಶಾಸ್ತ್ರ ಪ್ರವರ್ತಕರಾದ ಪರಾಶರಾದಿ ಮಹರ್ಷಿಗಳಿಗೆ, ವರಾಹಮಿಹಿರಾದಿ ಆಚಾರ್ಯರಿಗೆ ಮಾಡುವ ಅಪಚಾರವಾಗಿರುತ್ತದೆ. ಏಕೆಂದರೆ ಇದು ಆಗಮಶಾಸ್ತ್ರಕ್ಕೆ ಸಂಬಂಧಿಸಿದ ವಿಷಯ. ಪರಿಹಾರ ಏನಿದ್ದರೂ ಅದು ಆಗಮ, ತಂತ್ರ, ವೇದ, ಕರ್ಮಕಾಂಡ ಮುಂತಾದವುಗಳಿಗೆ ಸಂಬಂಧಿಸಿದ್ದು. ಇದನ್ನು ಜ್ಯೋತಿಷ್ಯದ ಹೆಸರಿನಲ್ಲಿ ಋಷಿಗಳ, ಆಚಾರ್ಯರ ವಚನವೆನ್ನುವಂತೆ  ಹೇಳಿಬಿಡುವುದು ಅಪಚಾರವಾಗುತ್ತದೆ.

ವಾಸ್ತುಶಾಸ್ತ್ರದ ಪ್ರಮಾಣ ಗ್ರಂಥವಾದ ಮಯಮತದಲ್ಲಿ ಹೀಗೆ ಉಕ್ತಿಗಳಿವೆ.

ವಕ್ರಂ ಚ ವಕ್ರವೃತ್ತಂ ತಲ್ಲಿಂಗಂ ಯತ್ತದೇವ ತತ್ಸಮಿತಮ್ ||ತಲ್ಲಿಂಗಂ ತು ನಿಮಗ್ನಂ ಕಾಲಜ್ಞಾತಂ ತ- [ಥ-] ವಾಪಿ ತದಧೋಗತಮಿತ್ಯುಕ್ತಂ ತಲ್ಲಿಂಗಂ ಚೋ- [ದ್ಧರೇತ್ ಸಮಿತಮ್] ||ತಲ್ಲಿಂಗಂ ತು ನಿಮಗ್ನಂ ಕಾಲಾಜ್ಞಾತ ಮೂರ್ಧ್ವಗತಮ್ | ತತ್ರ ಸ್ಥಾಪ್ಯಂ  [ಪುನರಪಿ] ನಿರ್ದೋಷಕಂ ಯದಿದಮ್ ||

ಇಲ್ಲಿ ಲಿಂಗವು ಭೂಗತವಾಗಿದ್ದರೆ ಅದನ್ನು ಎತ್ತಿ ಅದು ನಿರ್ದೋಷವಾಗಿದ್ದರೆ ಪುನಃ ಪ್ರತಿಷ್ಠಾಷನೆ ಮಾಡಬೇಕೆಂದು ಹೇಳಿದೆ.

(ಸರಿತಃ ಸ್ತ್ರೋತಃ) ಪತಿತಂ ನೀತ್ವಾ ಶತದಂಡಮನ್ಯಸ್ಮಿನ್ |ಸ್ಥಾಪ್ಯಂ ತದ್ದೈವಿಕವಿಧಿನಾ ಶುದ್ಧೇ ದೇಶೇ ಮುಖಂ ಪ್ರಾಗ್ವತ್ ||

ದೈವಿಕಲಿಂಗ ಆಗಿದ್ದರೆ ನೀರಿನಲ್ಲಿ ಬಿದ್ದಿದ್ದರೂ ಅದನ್ನು ತಂದು ಮೊದಲಿನ ಸ್ಥಳದಿಂದ ನೂರುದಂಡದೂರದಲ್ಲಿ ಶುದ್ಧದೇಶದಲ್ಲಿ ಹಿಂದಿನಂತೆ ಯಾವ ಕಡೆ ಮುಖವಾಗಿತ್ತೋ ಅದೇ ಮುಖವಾಗಿ ಪ್ರತಿಷ್ಠಾಪಿಸಬೇಕು.(ಇಲ್ಲಿ ಬಿಂಬತ್ಯಾಗ ಆಗಿರುವುದಿಲ್ಲ)  (ದೈವಿಕ ಲಿಂಗಗಳು ಜ್ಯೋತಿರ್ಲಿಂಗವೇ ಮುಂತಾದ ಲಿಂಗಗಳು ಇವು ಇರುವುದು ತುಂಬಾ ಕಡಿಮೆ )

ಹೀನಂ ಜ್ವಲನಾಲೀಢಂ ಜೀರ್ಣಂ ಸಸ್ಫೋಟಕಂ ಚ ಭಗ್ನಂ ಚ ಲಿಂಗಂ  ಸಾರ್ಘ್ಯಂ ತ್ಯಕ್ತ್ವಾಪುನಸ್ತತ್ಸ್ಥಾಪಯೇನ್ನವಂ ಲಿಂಗಮ್ ||

ಲಿಂಗವು ಹೀನವಾಗಿದ್ದರೆ, ಅಗ್ನಿಯಿಂದ ಜ್ವಲನವಾಗಿದ್ದರೆ, ಜೀರ್ಣವಾಗಿದ್ದರೆ,  ಬಿರುಕು ಬಿಟ್ಟಿದ್ದರೆ, ಭಗ್ನವಾಗಿದ್ದರೆ ಆ ಲಿಂಗವನ್ನು ತ್ಯಜಿಸಿ ಹೊಸದಾದ ಲಿಂಗವನ್ನು ಪ್ರತಿಷ್ಠಾಪಿಸಬೇಕು.

ದ್ವಾದಶವರ್ಷಾದೂರ್ಧ್ವಂ ಶೂನ್ಯತ್ವಂ ಯಾತಿ ಯಲ್ಲಿಂಗಮ್ | ತತ್ತನ್ನಿರ್ದೋಷಂ ಯದಿ ನಾಗ್ರಾಹ್ಯಮಿದಂ ವದಂತಿ ಕೇಚಿಜ್ಜ್ಞಾಃ || ಶಿಲಾಮಯಂ " ತರ್ಹ್ಯುದಕೇ ನಿಕ್ಷಿಪೇತ್ ತ್ವರಿತಂ ಬುಧಃ ||

ಹನ್ನೆರಡು ವರ್ಷಗಳಿಗೂ ಅಧಿಕಕಾಲ ಲಿಂಗವು ಶೂನ್ಯತ್ವವಾಗಿದ್ದರೆ ಅಂದರೆ ಪೂಜೆ ಇಲ್ಲದಿದ್ದರೆ ಅದು ನಿರ್ದೋಷವಾಗಿದ್ದರೂ ಕೂಡ ಗ್ರಾಹ್ಯವಲ್ಲವೆಂದು ಕೆಲವು ಜ್ಞಾನಿಗಳು ಹೇಳುತ್ತಾರೆ. ಶಿಲಾಮಯವಾಗಿದ್ದರೆ ಕೂಡಲೇ ನೀರಿಗೆ ಹಾಕಬೇಕು. ( ಈಗ ಕೆಲವೆಡೆ ಆಗುತ್ತಿರುವುದೇನು ? 12 ವರ್ಷ ಅಲ್ಲ 120, 240 ವರ್ಷ ನೀರಲ್ಲಿದ್ದರೂ ಅದು ಭಿನ್ನವಾಗಿದ್ದರೂ ಸಹ ಎತ್ತಿತಂದು ಪ್ರತಿಷ್ಠಾಪಿಸಲಾಗುತ್ತಿದೆ )

ಬೇರೇ ಶಿಲಾಮಯೇ ಚೈವ ವೃಕ್ಷಜೇ ವಿಕಲಾಂಗಕೇ |ಸಂತ್ಯಜ್ಯ ಸಹಸಾ ಬೇರಂ ಸ್ಥಾಪಯೇತ್ ಪೂರ್ವವನ್ನವಮ್ ||

ಮಾನೋನ್ಮಾನಾದುಪೇತಂ ಚ ಜೀರ್ಣವತ್ಸ್ಫೋಟನಾದಿಕಮ್ಬೇ ರಂ ತ್ಯಕ್ತ್ವಾನ್ಯಮತ್ರೈವ ಸ್ಥಾಪಯೇದ್ ವಿಧಿನಾ ಪುನಃ ||ಬೇರವು ಅಂದರೆ ವಿಗ್ರಹವು ಶಿಲಾಮಯ ಇಲ್ಲವೇ ವೃಕ್ಷಮಯ ಆಗಿದ್ದು ವಿಕಲಾಂಗವಾಗಿದ್ದರೆ ಅದನ್ನು ತ್ಯಜಿಸಿ ಹೊಸದನ್ನು ಪ್ರತಿಷ್ಠಾಪಿಸಬೇಕು. ಮಾನಕ್ಕೆ ಸರಿಯಾಗಿಲ್ಲದಿದ್ದರೆ, ಜೀರ್ಣ , ಬಿರುಕು ಮುಂತಾದ್ದು ಆಗಿದ್ದರೆ ಅದನ್ನು ತ್ಯಜಿಸಿ ಹೊಸದನ್ನು ಪ್ರತಿಷ್ಠಾಪಿಸಬೇಕು.

ಲೋಹಜೇ ಮೃಣ್ಮಯೇ ಬೇರೇ ಹಸ್ತನಾಸಾಂಘ್ರಿಭೂಷಣೇ | ಕರ್ಣದಂತಾದಿಹೀನಂ ತು ತತ್ತದ್ದವ್ಯೈರ್ದೃಢೀಕೃತಮ್ | ಉತ್ತಮಾಂಗವಿಹೀನೇ ತು ತ್ಯಕ್ತ್ವಾನ್ಯಂ ಯೋಜಯೇನ್ನವಮ್ || ಲೋಹದ ಅಥವಾ ಮಣ್ಣಿನ ಪ್ರತಿಮೆ ಆಗಿದ್ದಲ್ಲಿ ಕೈ, ಮೂಗು, ಬೆರಳು, ಆಭರಣ, ಕಿವಿ, ದಂತಹೀನ ಆದಲ್ಲಿ ಆಯಾ ದ್ರವ್ಯದಿಂದ ಪೂರಣ ಮಾಡಿ ಪೂಜಿಸಬೇಕು. ಉತ್ತಮಾಂಗವೇ ಹೀನವಾಗಿದ್ದಲ್ಲಿ ಅದನ್ನು ತ್ಯಜಿಸಿ ಹೊಸದನ್ನು ಪ್ರತಿಷ್ಠಾಪಿಸಬೇಕು. 

ಮಯಮತದಲ್ಲಿ ಕೂಡಾ ದೈವಿಕಲಿಂಗವೊಂದನ್ನು ಹೊರತುಪಡಿಸಿ ಭಿನ್ನವಾದ, ದೋಷಯುಕ್ತವಾದ ಪ್ರತಿಮೆಗಳನ್ನು ತ್ಯಜಿಸಿ ಹೊಸಬಿಂಬ ಪ್ರತಿಷ್ಠಾಪನೆಯನ್ನೇ ಹೇಳಿದೆ.

ಅಗ್ನಿಪುರಾಣದ ವಚನ ಹೀಗಿದೆ.

ಚಾಲಿತಂ ಚಲಿತಂ ನಿಮ್ನಮತ್ಯರ್ಥಂ ವಿಷಮಸ್ಥಿತಮ್ | ದಿಙ್ಮೂಢಂ ಪಾತಿತಂ ಲಿಂಗಂ ಮಧ್ಯಸ್ಥ ಪತಿತಂ ತಥಾ || ಏವಂ ವಿಧಂ ಚ ಸಂಸ್ಥಾಪ್ಯಂ ನಿರ್ವ್ರಣಂ ಚ ಭವೇದ್ಯದಿ  | ನಾದೇಯೇನ ಪ್ರವಾಹೇಣ ತದಪಾಕ್ರಿಯತೇ ಯದಿ || ತತೋಽನ್ಯತ್ರಾಪಿ ಸಂಸ್ಥಾಪ್ಯಂ ವಿಧಿದೃಷ್ಟೇನ ಕರ್ಮಣಾ ||

( ಅಗ್ನಿಪುರಾಣ ೧೦೩-೩-೫)

ಚಾಲಿತ, ಚಲಿತ, ಕೆಳಗೆ ಹೋದ, ಅತ್ಯಂತ ವಿಷಮ ಸ್ಥಿತಿಯಲ್ಲಿರುವ,ದಿಙ್ಮೂಢವಾಗಿರುವ, ಗರ್ತದೊಳಗೆ ಕೆಳಗೆ ಬಿದ್ದಿರುವ, ಪೀಠಮಧ್ಯದಲ್ಲಿಯೇ ಕೆಳಗೆ ಹೋಗಿರುವ, ನದೀ ಪ್ರವಾಹದಲ್ಲಿ ತೇಲಿ ಹೋಗಿರುವ ಲಿಂಗವಾದರೂ  ಕೂಡ ಅದು ಅವ್ರಣ ಅಂದರೆ ಸುಸ್ಥಿತಿಯಲ್ಲಿದ್ದರೆ ವಿಧಿವತ್ತಾಗಿ ಪುನಃ ಪ್ರತಿಷ್ಠೆ ಮಾಡಬೇಕು. ಸುಸ್ಥಿತಿಯಲ್ಲಿಲ್ಲದೆ ಭಗ್ನವಾಗಿದ್ದರೆ ಅದನ್ನೇ ಪ್ರತಿಷ್ಠಾಪಿಸಬಾರದು ಎಂದೂ ಅರ್ಥವಾಗುತ್ತದೆ. 

ಪ್ರತಿಷ್ಠಾಮಯೂಖದಲ್ಲಿ ಸಿದ್ಧಾಂತಶೇಖರ ಗ್ರಂಥವಚನ ಹೀಗಿದೆ.

ಸ್ಫುಟಿತೇ ಖಂಡಿತೇ ಭಗ್ನೇ ದಗ್ಧೇ ವಾಽಶನಿನಾಽಗ್ನಿನಾ | ಉನ್ಮತ್ತೈಃ ಶತ್ರುಭಿಶ್ಚೌರೈಃ ಕರಿಣಾ ಸ್ರೋತಸಾ ಹೃತೇ | ಲಿಂಗೇ ಪೀಠಾದಿಕೇ ವಾಽಪಿ ವಿಶೀರ್ಣೇ ಕಾಲಪರ್ಯಯಾತ್ || ದೇಹಂ ಜೀರ್ಣಂ ಯಥಾ ದೇಹೀ ತ್ಯಕ್ತ್ವಾನ್ಯದುಪಗಚ್ಛತಿ | ಲಿಂಗಾದೀನ್ಯತಿಜೀರ್ಣಾನಿ ತಥಾ ಮುಂಚಂತಿ ದೇವತಾಃ || ಖಂಡಿತಂ ಚೂರ್ಣಿತಂ ಲಿಂಗಂ ಪ್ರೇತಾದ್ಯಾ ಆಶ್ರಯಂತಿ ಚ | ಲಿಂಗಾದ್ಯಂ ಸತ್ತ್ವಶೂನ್ಯತ್ವಾತ್ತಥಾ ಚ ಬ್ರಹ್ಮರಾಕ್ಷಸಾಃ || ಕರ್ತೃನೃಪಾಣಾಂ ರಾಷ್ಟ್ರಸ್ಯ ತದ್ಗ್ರಾಮಸ್ಯ ವಿಶೇಷತಃ|

ಪೀಡಾಂ ಕುರ್ವಂತಿ ತೇ ಹ್ಯುಗ್ರಾಂ ದುರ್ಭಿಕ್ಷ ಮರಣಾದಿಕಮ್ || ತಸ್ಮಾತ್ಸರ್ವಪ್ರಯತ್ನೇನ ಕುರ್ಯಾದುದ್ಧರಣಕ್ರಿಯಾಮ್* |ಲಿಂಗವು ಬಿರುಕು ಬಿಟ್ಟಿದ್ದರೆ, ತುಂಡಾಗಿದ್ದರೆ, ಭಗ್ನವಾಗಿದ್ದರೆ, ಸುಟ್ಟಿದ್ದರೆ, ಸಿಡಿಲು ಹೊಡೆದಿದ್ದರೆ, ಉನ್ಮತ್ತರಿಂದ, ಶತ್ರುಗಳಿಂದ, ಚೋರರಿಂದ ಅಪಹೃತವಾಗಿ ಹಾನಿಗೊಳಗಾಗಿದ್ದರೆ, ಆನೆಯಿಂದ ಹಾನಿಗೊಳಗಾಗಿದ್ದರೆ, ನದೀಪ್ರವಾಹದಲ್ಲಿ ತೇಲಿ ಹೋಗಿ ಹಾನಿಗೊಳಗಾಗಿದ್ದರೆ, ಲಿಂಗಪೀಠಕ್ಕೆ  ಬಹುಸಮಯ ಆದ ಕಾರಣ ಜೀರ್ಣವಾಗಿದ್ದರೆ ಆಗ ಹೊಸ ಲಿಂಗ ಮತ್ತು ಪೀಠದ ಪ್ರತಿಷ್ಠಾಪನೆ ಮಾಡಬೇಕು. (ಇಲ್ಲಿ ವಿಧಿವತ್ತಾಗಿ ಬಿಂಬತ್ಯಾಗ ಆಗಿರುವುದಿಲ್ಲ. ಆದಾಗ್ಯೂ ಅದನ್ನೇ ತಂದು ಪುನಃ ಪ್ರತಿಷ್ಠಾಪಿಸಲು ಹೇಳದೆ ನೂತನವಾಗಿ ಮಾಡಬೇಕೆಂದು ಹೇಳಿದೆ) ದೇಹವು ಜೀರ್ಣವಾದಾಗ ಆತ್ಮವು ಅದನ್ನು ಬಿಟ್ಟು ಬೇರೆ ದೇಹವನ್ನು ಹೊಂದುತ್ತದೆ. ಲಿಂಗಾದಿಗಳು ಅತಿಜೀರ್ಣವಾದಾಗ ದೇವತೆಗಳು ಅದನ್ನು ಬಿಡುತ್ತವೆ. (ಹಾಗಾಗಿ ಹೊಸಬಿಂಬ ಪ್ರತಿಷ್ಠಾಪಿಸಬೇಕು) ತುಂಡಾದ ಮತ್ತು ಚೂರಾದ ಲಿಂಗವನ್ನು ಪ್ರೇತಾದಿಗಳು ಆಶ್ರಯಿಸುತ್ತವೆ. ಲಿಂಗಾದಿಗಳು ಸತ್ತ್ವಶೂನ್ಯ ಆಗುವುದರಿಂದ ಬ್ರಹ್ಮರಾಕ್ಷಸರೂ ಅದನ್ನಾಶ್ರಯಿಸುತ್ತಾರೆ. ಇವು ಕರ್ತೃವಿಗೆ (ಯಜಮಾನ),ರಾಜನಿಗೆ, ರಾಷ್ಟ್ರಕ್ಕೆ, ಆ ಗ್ರಾಮಕ್ಕೆ ವಿಶೇಷವಾಗಿ ಉಗ್ರಪೀಡೆ ಉಂಟುಮಾಡುತ್ತವೆ. ದುರ್ಭಿಕ್ಷ, ಅಕಾಲಮರಣಾದಿಗಳು ಉಂಟಾಗುತ್ತದೆ. ಆದ್ದರಿಂದ ಸರ್ವಪ್ರಯತ್ನಪೂರ್ವಕ ಉದ್ಧರಣ ಮಾಡಬೇಕು. ( ಹೊಸಬಿಂಬ ಇತ್ಯಾದಿ ಪ್ರತಿಷ್ಠಾಪಿಸಬೇಕು)

ಬಾಹುಪಾದಶಿರೋಹೀನಾಂ ಕರ್ಣನಾಸಾಸ್ಯಹೀನಕಾಮ್ | ತಾದೃಶೀಂ ಪರಿವಾರಾಣಾಂ ಪ್ರತಿಮಾಂ ಪರಿವರ್ಜಯೇತ್ ಯದ್ ದ್ರವ್ಯಂ ಯತ್ಪ್ರಮಾಣಂ ಚ ಲಿಂಗಂ ವಾ ಪ್ರತಿಮಾಪಿ ವಾ | ತಾದೃಕ್ತೇನೈವ ಮಾನೇನ ತದ್ ದ್ರವ್ಯೇಣ ಪ್ರಕಲ್ಪಯೇತ್ ||ಬಾಹುಗಳು, ಪಾದಗಳು, ಶಿರಸ್ಸುಹೀನ ಪ್ರತಿಮೆ ಆಗಿದ್ದರೆ, ಕಿವಿ, ಮೂಗು,ಮುಖಹೀನ ಪ್ರತಿಮೆ ಆಗಿದ್ದರೆ ಪರಿವರ್ಜಿಸಬೇಕು.

ಯಾವ ದ್ರವ್ಯ(ಶಿಲಾ, ಲೋಹ ಇತ್ಯಾದಿ) , ಯಾವ ಆಯಮಾನದ ಪ್ರತಿಮೆ ಅಥವಾ ಲಿಂಗ ಆಗಿತ್ತೋ ಅದೇ ದ್ರವ್ಯ ಮತ್ತು ಮಾನಾನುಸಾರ ಹೊಸ ಪ್ರತಿಮೆ ಅಥವಾ ಲಿಂಗವನ್ನು ರೂಪಿಸಿ ಪ್ರತಿಷ್ಠಾಪಿಸಬೇಕು.

ಸ್ವಾಯಂಭುವೇ ಚ ದೇವೇ ಚ ಬಾಣಲಿಂಗೇ ತಥೈವ ಚ | ಋಷಿಭಿಶ್ಚಾಸುರೈರ್ದೇವೈಸ್ತತ್ತ್ವವಿದ್ಭಿಃ ಪ್ರತಿಷ್ಠಿತೇ| ಲಿಂಗೆಜೀರ್ಣಾದಿದುಷ್ಟೇಽಪಿ ನೋದ್ಧಾರಂ ತತ್ರ ಕಾರಯೇತ್ ||ಸ್ವಯಂಭೂಲಿಂಗ, ದೇವತೆಗಳಿಂದ, ಋಷಿಗಳಿಂದ, ಅಸುರರಿಂದ, ತತ್ತ್ವವಿದರಿಂದ ಅಂದರೆ ಮಹಾತ್ಮರಿಂದ ಪ್ರತಿಷ್ಠಿತವಾದ  ಲಿಂಗವು ಜೀರ್ಣಾದಿದುಷ್ಟವಾಗಿದ್ದರೂ ಜೀರ್ಣೋದ್ಧಾರ ಮಾಡಬಾರದು. (ಹೀಗೆ ನಿರ್ಣಯಿಸಲು  ಪುರಾಣಗಳಲ್ಲಿ ಆ ದೇವಸ್ಥಾನದ ಉಲ್ಲೇಖ ಇರಬೇಕು ಅಥವಾ ಪರಂಪರಾಗತವಾದ ಸ್ಥಳಪುರಾಣವಾದರೂ ಇರಬೇಕು. ಇವೆರಡೂ ಇಲ್ಲದೆ ಪ್ರಶ್ನೆಯಲ್ಲಿ ಆಧಾರಶ್ಲೋಕವೂ ಇಲ್ಲದೆ ಋಷಿಗಳಿಂದ, ಮಹಾತ್ಮರಿಂದ ಪ್ರತಿಷ್ಠೆ ಆದದ್ದು ಅಂತ ಕಲ್ಪಿಸಿ ಹೇಳಿದರೆ ಅದು ಸಿಂಧು ಆಗುವುದಿಲ್ಲ)

ಶಿಲ್ಪಶಾಸ್ತ್ರದ ಪ್ರಮಾಣ ಗ್ರಂಥ ಶಿಲ್ಪರತ್ನಂನಲ್ಲಿ ಹೀಗೆ ಹೇಳಿದೆ.

ಜೀರ್ಣೋದ್ಧಾರವಿಧಿಂ ವದಾಮಿ ಶಿಥಿಲೇ ಜೀರ್ಣೇಽಥ ದಗ್ಧೇಽಥವಾ  ಪ್ರಾಸಾದೇ ಸ್ಫುಟಿತೇ ವಿಪರ್ಯಯಗತೇ ಲಿಂಗೇಽಥವಾ ಚೋಭಯೇ | ಐಶಾನ್ಯಾಂ ದಿಶಿ ತಸ್ಯ ಗೇಹಮಭಿತ ಕೃತ್ವಾ ನವಂ ಮಂದಿರಂ 'ತತ್ಪಾರ್ಶ್ವೇ ಚತುರಶ್ರಕಂ ಚ ಪುರತಃ ಕುರ್ಯಾತ್ ಪುನರ್ಮಂಡಪಮ್||

ಪ್ರಾಸಾದ ಅಥವಾ ಲಿಂಗವು ಶಿಥಿಲ, ಜೀರ್ಣ,  ದಗ್ಧ, ಬಿರುಕು ಇತ್ಯಾದಿಗಳು ಆದಲ್ಲಿ ಜೀರ್ಣೋದ್ಧಾರ ಮಾಡಬೇಕು. ಬಾಲಾಲಯ ಇತ್ಯಾದಿ ವಿಷಯ ಹೇಳಿದೆ.

ದೋಷೇ ಲಘುತರೇ ಬಿಂಬಂ ನೈವ ತ್ಯಾಜ್ಯಂ ಕದಾಚನ | ಬಾಹುಚ್ಛೇದೇ ಕರಚ್ಛೇದೇ ಪಾದಚ್ಛೇದೇ ತಥೈವ ಚ || ತಥೈವ ಸ್ಫುಟಿತೇ ಭಿನ್ನೇ ಯಸ್ಮಿನ್ನವಯವೇ ಗತೇ | ವೈರೂಪ್ಯಂ ಜಾಯತೇ ಯಸ್ಯ ತತ್ ತ್ಯಾಜ್ಯಂ ಪ್ರಾಯಶೋ ಭವೇತ್ಅಂಗುಲ್ಯಾದಿಪರಿಚ್ಛೇದೇ ಬಂಧನಂ ಶಸ್ಯತೇ ಬುಧೈಃ | ಮಹಾದೋಷಸಮಾಯುಕ್ತೇ ಸಾನ್ನಿಧ್ಯಂ ಲಕ್ಷ್ಯತೇ ಯದಿ || ತಥೈವ ಬದ್ಧ್ವಾ ಸಂಶೋಧ್ಯ ಪ್ರಾಯಶ್ಚಿತ್ತಂ ಸಮಾಚರೇತ್ ||ಬಿಂಬದ ದೋಷವು ಲಘುತರವಾಗಿದ್ದರೆ ಬಿಂಬತ್ಯಾಜ್ಯ ಮಾಡಬಾರದು. ಬಾಹುಗಳು, ಕೈಗಳು, ಕಾಲುಗಳು ಛೇದವಾಗಿದ್ದರೆ, ಅದೇ ರೀತಿ ಅವಯವಗಳು ಬಿರುಕು ಬಿಟ್ಟಿದ್ದು, ಭಿನ್ನವಾಗಿದ್ದು ವಿರೂಪವಾದಲ್ಲಿ ಆ ಬಿಂಬವನ್ನು ತ್ಯಜಿಸಬೇಕು. ಬೆರಳುಗಳು ಹೋಗಿದ್ದರೆ ಪೂರಣ ಮಾಡಬೇಕು. ಮಹಾದೋಷಗಳಿದ್ದರೂ ಸಾನ್ನಿಧ್ಯವು ಲಕ್ಷ್ಯದಲ್ಲಿದ್ದರೆ ಪೂರಣ ಮಾಡಿ ಪ್ರಾಯಶ್ಚಿತ್ತ ಮಾಡಬೇಕು. (ಇದು ಋಷಿಗಳು, ಮಹಾತ್ಮರು ಪ್ರತಿಷ್ಠಾಪಿಸಿದ ಬಿಂಬದ ಕುರಿತು ಹೇಳಿರಬಹುದೆಂದು ಕಾಣುತ್ತದೆ)

ಶ್ರೀವಿದ್ಯಾರ್ಣವತಂತ್ರದಲ್ಲಿ ಹೀಗೆ ಹೇಳಿದೆ.

ಖಂಡಿತೇ ಸ್ಫುಟಿತೇ ದಗ್ಧೇ ಭ್ರಷ್ಟೇ ಮಾನವಿವರ್ಜಿತೇ | ವ್ಯಂಗೇನರ್ಹಪಶುಸ್ಪೃಷ್ಟೇ ಪತಿತೇ ದುಷ್ಟಭೂಮಿಷು | ಅನ್ಯಮಂತ್ರಾರ್ಚಿತೇ ಚೈವ ಪತಿತಸ್ಪರ್ಶದೂಷಿತೇ | ದಶಸ್ವಪಿ ಚ ನೋ ಕುರ್ಯುಃ ಸನ್ನಿಧಾನಂ ದಿವೌಕಸಃ ||

ವಿಗ್ರಹವು ತುಂಡಾಗಿದ್ದರೆ, ಸೀಳುಗಳು ಬಂದಿದ್ದರೆ, ಸುಟ್ಟಿದ್ದರೆ, ಭ್ರಷ್ಟವಾಗಿದ್ದರೆ, ಆಯಮಾನಕ್ಕೆ ಸರಿಯಾಗಿ ಇಲ್ಲದಿದ್ದರೆ, ಅಂಗಗಳು ವ್ಯತಿರಿಕ್ತವಾಗಿದ್ದರೆ, ಅನರ್ಹ ಪಶುಗಳಿಂದ ಸ್ಪೃಷ್ಟವಾಗಿದ್ದರೆ, ಕೆಟ್ಟಭೂಮಿಯಲ್ಲಿ ಬಿದ್ದಿದ್ದರೆ, ಅನ್ಯಮಂತ್ರಾರ್ಚಿತವಾಗಿದ್ದರೆ, ಪತಿತರ ಸ್ಪರ್ಶದಿಂದ ದೂಷಿತವಾಗಿದ್ದರೆ - ಈ ಹತ್ತು ದೋಷಗಳಲ್ಲಿ ದೇವತೆಯು ಸಾನ್ನಿಧ್ಯವನ್ನು ವಹಿಸುವುದಿಲ್ಲ.

ನಿರ್ಣಯಸಿಂಧುವಿನಲ್ಲಿ ಹೀಗೆ ಹೇಳಿದೆ.

ಅಥ ಜೀರ್ಣೋದ್ಧಾರ ನಿರ್ಣಯಃ | ಸ ಚ ಲಿಂಗಾದೌ ದಗ್ಧೇ ಭಗ್ನೇ ಚಲಿತೇ ವಾ ಕಾರ್ಯಃ | ಅಯಂ ಚಾನಾದಿ ಸಿದ್ಧ ಪ್ರತಿಷ್ಠಿತಲಿಂಗಾದೌ ಭಂಗಾದಿದುಷ್ಟೇಪಿ ನ ಕಾರ್ಯಃ || 

ಲಿಂಗವೇ ಮೊದಲಾದವು ಸುಟ್ಟಿದ್ದರೆ, ಭಗ್ನವಾಗಿದ್ದರೆ, ಚಲಿಸುತ್ತಿದ್ದರೆ ಜೀರ್ಣೋದ್ಧಾರ ಮಾಡಬೇಕು ಅಂದರೆ ಹೊಸಮೂರ್ತಿ ಪ್ರತಿಷ್ಠಾಪಿಸಬೇಕು. ಅನಾದಿಸಿದ್ಧಪ್ರತಿಷ್ಠಿತ ಲಿಂಗಾದಿಗಳು ಭಂಗಾದಿ ದುಷ್ಟವಾಗಿದ್ದರೂ ಜೀರ್ಣೋದ್ಧಾರ ಮಾಡಬಾರದು ಎಂದು ಹೇಳಿದೆ. ಅನಾದಿಸಿದ್ಧಪ್ರತಿಷ್ಠಿತ ಲಿಂಗಾದಿಗಳು  ಲೋಕಪ್ರಸಿದ್ಧಿ ಹೊಂದಿರುತ್ತವೆ. ದೇವಪ್ರಶ್ನೆಯಲ್ಲಿ ಆಧಾರವಚನಗಳಿಲ್ಲದೆ ಊಹೆಯಿಂದ ಹೇಳಿದ್ದು ಸಿದ್ಧವಾಗುವುದಿಲ್ಲ. ಉಕ್ತಿಯುಕ್ತಿವಿರೋಧೇ ತು ಉಕ್ತಿರೇವ ಗರೀಯಸೀ || ಎಂದು ವಚನವಿದೆ.

ಸೂಕ್ಷ್ಮಾಗಮದಲ್ಲಿ ಹೀಗೆ ಹೇಳಿದೆ.

ಮೃಣ್ಮಯಂ ದಾರುಜಂ ವಾಪಿ ಲೋಹಜಂ ವಾ ಶಿಲಾಮಯಮ್ ಸ್ಥಾಪಿತಂ ಪೂಜಿತಂ ಬೇರಂ ಜೀರ್ಣಂ ವಾ ಭಿನ್ನಮೇವ ವಾಛಿನ್ನಂ ವಾಪ್ಯಗ್ನಿದಗ್ಧಂ ವಾ ದೃಷ್ಟ್ವಾ ಬೇರಂ ನ ಪೂಜಯೇತ್ ಪೂಜಯೇದ್ಯದಿ ಮೋಹೇನ 'ರಾಜರಾಷ್ಟ್ರಂ ವಿನಶ್ಯತಿ || ತಸ್ಮಾದ್ಬೇರಂ ಸಮುದ್ಧೃತ್ಯ ಜಲೇ 'ವಾಪಿ ಸ್ಥಲೇಽಪಿ ವಾ| ಪ್ರಕ್ಷಿಪ್ಯ ಮೃದ್ಭಿರಾಚ್ಛಾದ್ಯ "ಪ್ರತಿಮಾಂ ಕಾರಯೇನ್ನವಮ್||  ಮೃಣ್ಮಯಂ ಚೇನ್ಮೃದಾ ಕುರ್ಯಾದ್ 'ದಾರುಜಂ ದಾರುಣಾ ಕುರು| ಲೋಹಜಂ ಯದಿ ಲೋಹೇನ "ಶಿಲಾ ಚೇಚ್ಛೈಲಜಂ 'ವರಮ್ || ಮೃಣ್ಮಯಾದ್ದಾರುಜಂ ಶ್ರೇಷ್ಠಂ "ದಾರುಜಾಚ್ಛೈಲಜಂ ವರಮ್ | "ಶೈಲಜಾತ್ ಲೋಹಜಂ ಶ್ರೇಷ್ಠಂ "ಲೋಹಜಾದ್ರತ್ನಜಂ 'ಶುಭಮ್ಅನ್ಯದ್ವಾ ಬಾಣಲಿಂಗಂ ವಾ ಸ್ಥಾಪಯೇದ್ 'ವಿಧಿನಾ ಬುಧಃ ||ಸ್ಥಾಪಿತವಾದ, ಪೂಜೆಗೊಳ್ಳುತ್ತಿರುವ ವಿಗ್ರಹವು ಜೀರ್ಣವೂ, ಭಿನ್ನವೂ, ಛಿನ್ನವೂ, ಅಗ್ನಿದಗ್ಧವೂ ಆದಲ್ಲಿ ಅದನ್ನು ಪೂಜಿಸಬಾರದು. ಮೋಹದಿಂದ ಪೂಜಿಸಿದರೆ ರಾಜರಾಷ್ಟ್ರವಿನಾಶ ಎಂದು ಹೇಳಿದೆ. ಅದನ್ನು ಜಲದಲ್ಲಿ ಹಾಕಬೇಕು ಇಲ್ಲವೇ ಸ್ಥಲದಲ್ಲಿ ಮಣ್ಣಿನಿಂದ ಮುಚ್ಚಿ ಹೊಸಬಿಂಬ ಮಾಡಿಸಬೇಕು ಎಂದು ಹೇಳಿದೆ. ಬಿಂಬತ್ಯಾಗ ಮಾಡಿ ಹೊಸಬಿಂಬ ಸ್ಥಾಪಿಸಬೇಕೆಂದರ್ಥ. ಜಲದಲ್ಲಿ ಇಲ್ಲವೇ ಸ್ಥಲದಲ್ಲಿ ತ್ಯಾಗಮಾಡಿದ ವಿಗ್ರಹವನ್ನು ತಂದು ಪ್ರತಿಷ್ಠಾಪಿಸಿ ಎಂದು ಹೇಳಿಲ್ಲ 

ಇನ್ನು ಉಪಾಂಗಗಳು ಭಿನ್ನವಾದರೆ ಲೋಹ ಇತ್ಯಾದಿಗಳಿಂದ ಪೂರಣ ಮಾಡಿ ಪೂಜಿಸಬೇಕು(ತ್ಯಾಗ ಮಾಡಿದ ಬಿಂಬಕ್ಕಲ್ಲ. ಪೂಜೆ ಆಗುತ್ತಿರುವ ಬಿಂಬಕ್ಕೆ ) ಪ್ರಧಾನಾಂಗ ಹೀನವಾದರೆ ಪರಿತ್ಯಾಗ ಮಾಡಿ ಹೊಸಬಿಂಬ ಪ್ರತಿಷ್ಠಾಪಿಸಬೇಕು ಎಂದು ಹೇಳಿದೆ.

ಪೌರಾಣಿಕಸ್ಯ ಲಿಂಗಸ್ಯ ಯವಮಾನಕ್ಷಯಂ ಯದಿ| ಸಂಪ್ರೋಕ್ಷಣಂ ತಥಾ ಕುರ್ಯಾಚ್ಛಾಸ್ತ್ರದೃಷ್ಟೇನ ಕರ್ಮಣಾ ||

ಯೇನ 'ಕೇನ ಪ್ರಕಾರೇಣ 'ನ ನಿರ್ದಿಷ್ಟಂ ನ ನಿಶ್ಚಯಮ್ |. ಏತತ್ಪೌರಾಣಿಕಂ ಲಿಂಗಂ ಪಾರಂಪರ್ಯೇಣ ಮಾನಕೃತ್ ||  ತಸ್ಯ ಲಿಂಗಸ್ಯ ಜೀರ್ಣೇ ತು "ಖಂಡಸ್ಫೋಟಾದಿಕೇ ಸತಿ |ತಸ್ಯೈವ ಪುರತಃ ಸಮ್ಯಗ್ 'ಮೂರ್ತಿಲಿಂಗಂ ಪ್ರತಿಷ್ಠಯೇತ್ || 

ಯವಾಂತರಪ್ರಮಾಣೇನ ಹೀನಂ ಚಾಪಿ ನ ದೋಷಭಾಕ್| "ತಸ್ಮಾದಧಿಕಹೀನಂ ಚೇತ್ ಸ್ವರ್ಣೇನ ರಜತೇನ ವಾ ||  ತಾಮ್ರಪಟ್ಟೇನ ವಾ ಕುರ್ಯಾದಥ ಸಂಪೂರಣಂ ಬುಧಃ | ಪುನಃ ಸ್ಥಾಪನಮಾರ್ಗೇಣ ಕಾರಯೇಲ್ಲಿಂಗವದ್ಭವೇತ್ ||

ಪೌರಾಣಿಕ ಲಿಂಗವಾದರೆ - ಜೀರ್ಣವಾಗಿದ್ದರೆ/ಖಂಡಿತವಾಗಿದ್ದರೆ/ ಬಿರುಕು ಬಿಟ್ಟಿದ್ದರೆ ಅದನ್ನು ಹಾಗೆಯೇ ಇಟ್ಟುಕೊಂಡು ಅದರ ಮುಂದೆ ಹೊಸಲಿಂಗ ಪ್ರತಿಷ್ಠಾಪಿಸಿ ಪೂಜಿಸಬೇಕೆಂದು ಉಕ್ತವಾಗಿದೆ. ಅಂತಹ ಲಿಂಗಗಳನ್ನು ತ್ಯಾಗ ಮಾಡಬಾರದೆಂದರ್ಥ. ಸ್ವಲ್ಪ ಭಿನ್ನತೆ ಇದ್ದಲ್ಲಿ ಸ್ವರ್ಣ/ರಜತ/ತಾಮ್ರ ಮುಂತಾದವುಗಳಿಂದ ಪೂರಣ ಮಾಡಿ ಸ್ಥಾಪನೆಯು ವಿಧಿಸಲ್ಪಟ್ಟಿದೆ.

ಕಾರಣಾಗಮದಲ್ಲಿ ಹೀಗೆ ಹೇಳಿದೆ.

ಜೀರ್ಣಾಂತಸ್ಯೈವ ಬಿಂಬಸ್ಯ ಉದ್ಧಾರಂಚಾಧುನಾ ಶ್ರುಣು | ಶಿರೋಬಾಹೂ ತಥಾ ಪಾದೌ ಹೀನೇ ಸ್ಯಾತ್ಪರಿವರ್ಜಯೇತ್ || ಜೀರ್ಣೋ ಲೋಹೇನ ತತ್ಕುರ್ಯಾತ್ಪ್ರಮಾಣೇನ ಚ ಪೂರ್ವವತ್ | ಕೃತ್ವಾ ತು ಸ್ಥಾಪಯಿತ್ವಾ ತು ಪೂರ್ವವತ್ ಸಮ್ಯಗರ್ಚಯೇತ್ || ಭ್ರೂರೇಖಾ ಚಕ್ಷುರೇಖಾ ಚ ಆಸ್ಯರೇಖಾ ಚ ನಾಸಿಕಾ | ಏತೇಷಾಂ ಚ ಕ್ಷಯಂದೃಷ್ಟ್ವಾ ಪ್ರತಿಮಾಂ ಪರಿವರ್ಜಯೇತ್ ||ತಲೆ, ಕೈಗಳು, ಪಾದಗಳು ಭಿನ್ನವಾದ ಮೂರ್ತಿಗಳನ್ನು ಪರಿವರ್ಜಿಸಬೇಕು.  ಹೀಗೆ ಆಗಿರದಿದ್ದಾಗ ಲೋಹದಿಂದ ಪೂರಣ ಮಾಡಿ ಪೂಜಿಸಬೇಕು. ಭ್ರೂಮಧ್ಯರೇಖೆ, ಕಣ್ಣಿನ ರೇಖೆ, ಮುಖದ ರೇಖೆ, ಮೂಗಿನ ರೇಖೆ ಕ್ಷಯವಾಗಿದ್ದು ಕಂಡುಬಂದರೆ ಪ್ರತಿಮೆಯನ್ನು ಪರಿತ್ಯಜಿಸಬೇಕು.

ಕಾಮಿಕಾಗಮದಲ್ಲಿ ಹೀಗೆ ಹೇಳಿದೆ.

ಸರ್ವೈರಂಗೈರ್ವಿಶೀರ್ಣಂ ಚೇತ್ ಪುನಸ್ಸಂಸ್ಥಾಪಯೇನ್ನವಮ್ | ಲಿಂಗೇ ಸ್ವಾಯಂಭುವಾದೌ ತು ಜೀರ್ಣಾದೌ ಶಾಂತಿರೀರಿತಾ ||

ಸ್ವಾಯಂಭುವಾದಿ ಲಿಂಗ ಆಗಿದ್ದರೂ ಕೂಡ ಸರ್ವಾಂಗ ಜೀರ್ಣವಾಗಿದ್ದರೆ ಹೊಸಲಿಂಗ ಪ್ರತಿಷ್ಠಾಪಿಸಬೇಕು.

ಶಿಲ್ಪಶಾಸ್ತ್ರದ ಗ್ರಂಥವಾದ "ದೇವತಾ ಮೂರ್ತಿ ಪ್ರಕರಣ" ದಲ್ಲಿ = ಜೀರ್ಣವಾದರೂ ಪರಿತ್ಯಾಗ ಮಾಡದೇ ಪೂಜಿಸಬೇಕಾದ ಪ್ರತಿಮೆಗಳ ಕುರಿತು ಹೀಗೆ ಹೇಳಿದೆ‌.

ಅತೀತಾಬ್ದಶತಾ ಯಾ ಸ್ಯಾನ್ ಮೂರ್ತಿ: ಸ್ಥಾಪ್ಯಾ ಮಹತ್ತಮೈ: | ಖಂಡಿತಾ ಸ್ಪುಟಿತಾಪ್ಯರ್ಚ್ಯಾ ಅನ್ಯಥಾ ದುಃಖದಾಯಿಕಾ || ಎಂದಿದ್ದು, ಮಹಾಪುರುಷರಿಂದ ಸ್ಥಾಪಿತವಾಗಿದ್ದು ಒಂದು ನೂರು ವರ್ಷಕ್ಕಿಂತ ಪುರಾತನವಾಗಿದ್ದರೆ, ಮೂರ್ತಿಯು ಭಗ್ನ ಅಥವಾ ಶಿಥಿಲ ಹೊಂದಿದ್ದರೂ ಅದು ಪೂಜನೀಯವಾಗಿರುತ್ತದೆ. ಇಲ್ಲದಿದ್ದಲ್ಲಿ ದುಃಖವನ್ನುಂಟು ಮಾಡುತ್ತದೆ. (ಮಹಾಪುರುಷರಿಂದ ಸ್ಥಾಪಿತವಾದದ್ದು ಎನ್ನುವ ಐತಿಹ್ಯ ಇರಬೇಕು. ಪ್ರಶ್ನೆಯಲ್ಲಿ ಮಹಾಪುರುಷರಿಂದ ಸ್ಥಾಪಿತ ಎಂದು ಹೇಳಿದರೆ ಐತಿಹ್ಯ ಇಲ್ಲದೆ ಇದಮಿತ್ಥಂ ಎಂದು ನಿರ್ಣಯಿಸಲಾಗದ ಕಾರಣ ಮಾನ್ಯವಾಗುವುದಿಲ್ಲ.)

ಮೇಲಿನ ಎಲ್ಲಾ ಗ್ರಂಥಗಳಲ್ಲಿ ವಿಗ್ರಹದ ಲಕ್ಷಣದ ಮೇಲೆ, ಕೆಲವು ಪರಿಸ್ಥಿತಿಗಳಲ್ಲಿ, ಕೆಲವು ಘಟನೆಗಳ ವಶದಿಂದ ಏನು ಮಾಡಬೇಕೆಂಬುದನ್ನು ಋಷಿಗಳು, ಆಚಾರ್ಯರು ನಿರ್ದೇಶಿಸಿದ್ದಾರೆ. ಎಲ್ಲಿಯೂ ಪ್ರಶ್ನೆಯ ಗ್ರಹಸ್ಥಿತಿಯ ಉಲ್ಲೇಖವಿಲ್ಲ. ಊಹಾಪೋಹ ಇಲ್ಲ. ಹಾಗಾಗಿ ಇದು ಸಿದ್ಧಾಂತವಾಗುತ್ತದೆ. ಪ್ರಶ್ನಕುಂಡಲಿಯಲ್ಲಿ ಗ್ರಹಗಳ ಸ್ಥಿತಿಯಿಂದ ಊಹಿಸುವುದು ಹಲವಾರು ದೈವಜ್ಞರಿಂದ ಹಲವಾರು ರೀತಿ ಬರಬಹುದಾದ್ದರಿಂದ ಅದು ಸಿದ್ಧಾಂತ ಆಗುವುದಿಲ್ಲ.

ಇನ್ನು ಕೆಲವರು ಗಣಪತಿಗೆ ಸೊಂಡಿಲು, ಸ್ತ್ರೀದೇವತೆಗಳಿಗೆ ಸ್ತನಭಾಗ, ಶಿವನಿಗೆ ಪೂಜಾಂಶವಾದ ಶಿರೋಭಾಗ, ವಿಷ್ಣುವಿಗೆ ನಾಭಿ ಭಿನ್ನವಾದಲ್ಲಿ ಮಾತ್ರ ಅದನ್ನು ತ್ಯಜಿಸಿ ಅದೇ ರೀತಿಯ ಹೊಸವಿಗ್ರಹ ಮಾಡಿಸಬೇಕು. ಈ ಭಾಗ ಭಿನ್ನ ಆಗಿಲ್ಲದಿದ್ದರೆ ಅದನ್ನೇ ಪೂರಣ ಮಾಡಿ ಪ್ರತಿಷ್ಠಾಪಿಸಬೇಕು ಎಂದು ಹೇಳುವುದಿದೆ. 

ಪ್ರಾಮಾಣಿಕನಾದ ಜ್ಯೋತಿಷಿ ಜ್ಯೋತಿಷ್ಯ, ಆಗಮ, ವಾಸ್ತು, ಕರ್ಮಕಾಂಡ ಎಲ್ಲವನ್ನೂ ಲಕ್ಷ್ಯದಲ್ಲಿಟ್ಟುಕೊಂಡು ಫಲ ಹೇಳುತ್ತಾನೆ. ಬಂದಷ್ಟು ಅಷ್ಟಮಂಗಲ ಪ್ರಶ್ನೆ ಸಾಕು ಎನ್ನುತ್ತಾನೆ. ಇಂತಹ ದೈವಜ್ಞರೂ ಬಹುಮಂದಿ ಇದ್ದಾರೆ.

ಇನ್ನು ಆಗಮಿಕರು ಈ ತ್ಯಾಜ್ಯ ಬಿಂಬ ಪ್ರತಿಷ್ಠೆ ನಾನು ಮಾಡಿಸುವುದಿಲ್ಲ ಎಂದೇ ಹೇಳಬೇಕು. ಹಾಗೆ ಹೇಳಲು ಎಲ್ಲರಿಗೂ ಧೈರ್ಯ ಇರುವುದಿಲ್ಲ ಅಥವಾ ಜ್ಯೋತಿಷಿ ಹೇಳಿದ್ದು ಹೌದೆನಿಸಿರಲೂಬಹುದು ಅಥವಾ ದೈವಜ್ಞರು ಹೇಗೂ ಹೇಳಿದ್ದಾರೆ, ಹಾಗಾಗಿ ಮಾಡಿಸಿದರಾಯಿತು, ನಾನು ಮಾಡಿಸದಿದ್ದರೆ ಮತ್ತೊಬ್ಬರು ಮಾಡಿಸುತ್ತಾರೆ ಎಂದೂ ಮಾಡಿರಬಹುದು. ಅದು ವಿಧಿಹೀನ ಪ್ರತಿಷ್ಠೆ ಆಗಿರುತ್ತದೆ. 

ವೈದಿಕರು ಕೂಡಾ ತ್ಯಾಗಬಿಂಬಪುನಃಪ್ರತಿಷ್ಠೆ ಮಾಡಲು ಬರುವುದಿಲ್ಲ ಎಂದು  ಜನರಿಗೆ ತಿಳಿವಳಿಕೆ ಮೂಡಿಸುವ ಅಗತ್ಯವಿದೆ. ಜ್ಯೋತಿಷಿಗಳು ಕೂಡಾ  ತಿಳಿವಳಿಕೆ ಕೊಡುವ ಅಗತ್ಯವಿದೆ.

ಇನ್ನು ಜನರೂ ಕೂಡ ಪ್ರಜ್ಞಾವಂತರಾಗಬೇಕು. ದೈವಜ್ಞರು ಹೇಳಿದುದೆಲ್ಲವನ್ನೂ ಕಣ್ಣುಮುಚ್ಚಿ ಒಪ್ಪಿಕೊಳ್ಳುವ ಸ್ಥಿತಿಗೆ ಹೋಗಬಾರದು. ಸಂದಿಗ್ಧದ ವಿಚಾರಗಳ ಕುರಿತು ಬೇರೆ ಬೇರೆ ವಿದ್ವಾಂಸರನ್ನು ಸಂಪರ್ಕಿಸಿ ನಿರ್ಧಾರ ಕೈಗೊಳ್ಳಬೇಕು.

ಇನ್ನು ಆಗಮದ ಪ್ರಕಾರ ಪ್ರಯೋಗ ವಿಧಿಯ ಕುರಿತು ಚಿಂತಿಸುವುದಾದರೆ - ಹನ್ನೆರಡು ವರ್ಷ ನಾಪತ್ತೆಯಾದವನಿಗೆ ಔರ್ಧ್ವದೈಹಿಕ ಸಂಸ್ಕಾರಗಳನ್ನು ಮಾಡಿ ಅನಂತರ ಆತ ಬಂದುಬಿಟ್ಟರೆ  ಕೃತೌರ್ಧ್ವದೈಹಿಕಸ್ಯ ಸಂಗ್ರಹವಿಧಿಃ  ಅಂತ ಪ್ರಯೋಗದಲ್ಲಿ ಇರುವಂತೆ - ಆಗಮದಲ್ಲಿ -  ವಿಧಿವತ್ತಾಗಿ ತ್ಯಾಗ ಮಾಡಿದ ಮೇಲೆ ಎಷ್ಟೇ ವರ್ಷ ನೀರಿನಲ್ಲಿ ಇದ್ದಿರಲಿ ಭಿನ್ನವಾದ ವಿಗ್ರಹವನ್ನು ನೀರಿನಿಂದ ತೆಗೆದು ಪ್ರತಿಷ್ಠೆ ಮಾಡುವುದಾದರೆ  ತ್ಯಾಗಬಿಂಬಸ್ಯ ಪುನರ್ಗ್ರಹಣವಿಧಿಃ ಅಂತೊಂದು ಪ್ರಯೋಗ ವಿಧಿ ಅವಶ್ಯವಾಗಿ ಬೇಕಾಗುತ್ತದೆ. ಅಥವಾ ಬಿಂಬಪರಿಗ್ರಹ ಮಾಡದೆ ಹಾಗೆಯೇ ತಂದು ಪ್ರತಿಷ್ಠಾಪಿಸಬಹುದೇ ?ಈಗ ಪೂಜೆ ಮಾಡುತ್ತಿರುವ ಚೆನ್ನಾಗಿರುವ ವಿಗ್ರಹಕ್ಕೆ ಕಲಾಸಂಕೋಚನ ಮಾಡಿ ಹಳೆಯ ಬಿಂಬಕ್ಕೆ ಜೀವಕುಂಭಾಭಿಷೇಕ ಮಾಡಲಿಕ್ಕೆ  ಪೂರ್ವಬಿಂಬೇ ಜೀವಕಲಶಾಭಿಷೇಕ ವಿಧಿಃ  ಬೇಕಾಗುತ್ತದೆ. ಹೊಸಬಿಂಬಕ್ಕೆ ಜೀವಕುಂಭಾಭಿಷೇಕ ಇದೆಯೇ ಹೊರತು ಹಳೆಯ ಬಿಂಬಕ್ಕೆ ಹೊಸಬಿಂಬದ ಜೀವಕಲಶಾಭಿಷೇಕ ಸಾಮಾನ್ಯವಾಗಿ ಕಂಡುಬರುವುದಿಲ್ಲ. ಇನ್ನು ಈಗ ಪೂಜಿಸುತ್ತಿರುವ ಪೂಜೆಗೆ ಯೋಗ್ಯವಾಗಿರುವ ಬಿಂಬವನ್ನು ತ್ಯಾಗ ಮಾಡಬೇಕಲ್ಲ. *ಪೂಜಾಯೋಗ್ಯಬಿಂಬಸ್ಯ ತ್ಯಾಗ ವಿಧಿಃ* ಅಂತ ಬೇಕಾಗುತ್ತದೆ.(ಇಲ್ಲದಿದ್ದರೆ ಈಗಿನ ಪೂಜಾ ಯೋಗ್ಯಬಿಂಬಕ್ಕೆ ಇನ್ನೊಂದು ದೇವಸ್ಥಾನ ಕಟ್ಟಿಸಬೇಕು) ಒಟ್ಟಿಗೆ ಮೂರು ರೀತಿಯ ಪ್ರಯೋಗ ವಿಧಿ ಬೇಕು. ಈ ವಿಧಿಗಳು ಆಗಮದ ಮೂಲಗ್ರಂಥಗಳಲ್ಲಿ ಇವೆಯೇ ಅಂತ ಹಲವಾರು ಆಗಮವಿದ್ವಾಂಸರನ್ನು ಕೇಳಿದಾಗ ಮೇಲಿನ ಮೂರು ವಿಧಿಯಲ್ಲಿ ಯಾವ ವಿಧಿಯೂ ಆಗಮಗಳಲ್ಲಿ ಇಲ್ಲ ಎಂದು ತಿಳಿಸಿದ್ದಾರೆ. ವಿಧಿ ಇಲ್ಲದಿದ್ದರೆ ಅದು ವಿಧಿಹೀನ ಪ್ರತಿಷ್ಠೆ ಆಗಿಬಿಡುತ್ತದೆ. ಅಷ್ಟಮಂಗಲ ಪ್ರಶ್ನತಜ್ಞರನ್ನೂ ಹಲವರನ್ನು ಸಂಪರ್ಕಿಸಿ ಕೇಳಿದಾಗ ಭಿನ್ನವಾದ, ವಿಧಿವತ್ತಾಗಿ ತ್ಯಾಗ ಮಾಡಲ್ಪಟ್ಟ ಬಿಂಬವನ್ನು ತಂದು ಪುನಃ ಪ್ರತಿಷ್ಠಾಪನೆ ಮಾಡಲು ಬರುವುದಿಲ್ಲ ಎಂದೇ ತಿಳಿಸಿದ್ದಾರೆ. 

ಈಗ ಎಷ್ಟೋ ಕಡೆ ಜೀರ್ಣೋದ್ಧಾರ ದಲ್ಲಿ ಬಿಂಬತ್ಯಾಗ ವಿಧಿ ಅನುಸರಿಸಿ ನೀರಿನಲ್ಲಿ ತ್ಯಾಗ ಮಾಡಿಸಲು ಆಗಮಿಕರು/ ವೈದಿಕರು ಹೆದರುತ್ತಿದ್ದಾರೆ. ಮುಂದೆ ಅಷ್ಟಮಂಗಲದವರು ಅದರಲ್ಲೇ ಶಕ್ತಿ ಇದೆ ಪುನಃಪ್ರತಿಷ್ಠೆ ಮಾಡಬೇಕು ಅಂತ ಹೇಳಿಬಿಟ್ಟರೆ ಅಂತ. ಪ್ರತಿಷ್ಠೆ ಮಾಡಿಸುವುದಕ್ಕೂ, ಪ್ರಾಯಶ್ಚಿತ್ತ ಕಾರ್ಯಕ್ರಮ ಮಾಡಲಿಕ್ಕೂ ಆಗಮಿಕರು/ವೈದಿಕರು ಹೆಚ್ಚಿನವರು  ಹೆದರುತ್ತಿದ್ದಾರೆ. ಮಾಡಿದ್ದು ಸರಿಯಾಗಿಲ್ಲ ಅಂತ ಹೇಳಿಬಿಟ್ಟರೆ ಎಂದು. ಯಜಮಾನರೂ, ಭಕ್ತಜನರೂ ಕೂಡ ಮುಂದೆ ಯಾರೂ ಪ್ರತಿಷ್ಠೆ ಸರಿಯಾಗಿಲ್ಲ ಅಂತ ಹೇಳಬಾರದು ಹಾಗೆ ಪ್ರತಿಷ್ಠೆ ಮಾಡಿಸಬೇಕು ಅಂತ ಹೇಳುವುದು ಭಯವನ್ನು ಇನ್ನೂ ಹೆಚ್ಚಿಸುತ್ತದೆ. ಶ್ರದ್ಧಾವಂತ ಆಗಮಿಕರಿಗೆ/ವೈದಿಕರಿಗೆ ಕಷ್ಟ ಆಗುತ್ತಿದೆ. ಶಾಸ್ತ್ರೀಯವಾಗಿ ಬಿಂಬತ್ಯಾಗ ಮಾಡಿಸಿದ ಆಗಮಿಕರ ಮೇಲೆ ಜನ ಅನುಮಾನಪಟ್ಟು ಅವರಿಗೆ ಅವಮಾನ ಕೆಲವೆಡೆ ಆಗಿದೆ. ಐವತ್ತು, ನೂರು ವರ್ಷಗಳ ಹಿಂದಿನ ಆಗಮಿಕರು  ಆಗಿದ್ದು ಈಗ ಇಲ್ಲದಿದ್ದರೂ ಕೂಡ ಆ ಆಗಮಿಕರ ನಿಷ್ಠೆ ಜನರ ಬಾಯಲ್ಲಿರುತ್ತದೆ. ಅದಕ್ಕೂ ಕುತ್ತು ಬರುತ್ತದೆ. ಶ್ರದ್ಧೆಯಿಂದ ಪ್ರತಿಷ್ಠೆ ಮಾಡಿಸಿದರೂ ಪ್ರತಿಷ್ಠೆ ಮಾಡಿಸಿದ್ದು ಸರಿಯಾಗಿಲ್ಲ ಅಂತ ಕೆಲವು ಜ್ಯೋತಿಷಿಗಳು ಹೇಳಿ ನೊಂದುಕೊಂಡು ಕಣ್ಣೀರು ಹಾಕಿದ ಅದೆಷ್ಟೋ ಆಗಮಿಕರು/ವೈದಿಕರಿದ್ದಾರೆ. ಮುಂದೆ ಕಾರ್ಯಕ್ರಮ ಮಾಡಿಸುವ ಆಸಕ್ತಿ ಕಳೆದುಕೊಂಡವರೂ ಇದ್ದಾರೆ. ಇದು ಬ್ರಾಹ್ಮಣ ಶಾಪ ಆಗುವುದಿಲ್ಲವೇ ? ನೂರಕ್ಕೆ ನೂರು ಸರಿಯಾಗಿ ಮಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಋಷಿಗಳೇ ಬರಬೇಕಷ್ಟೆ. ದ್ರವ್ಯಲೋಪ, ಮಂತ್ರಲೋಪ, ಕ್ರಿಯಾಲೋಪ ಒಂದಿಷ್ಟು ಆಗಿಯೇ ಆಗುತ್ತದೆ.  ಅದಕ್ಕೂ ಪರಿಹಾರಗಳಿವೆ.  ಅಷ್ಟಮಂಗಲ ಪ್ರಶ್ನೆಯು ಬೆಳಕನ್ನು ತೋರಿಸುವಂತಿರಬೇಕೇ ಹೊರತು  ಭಯ ಹುಟ್ಟುಹಾಕುವಂತಿರಬಾರದು.

ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನೆ ನೋಡಿಸಬಾರದು ಅಂತ ನನ್ನ ಅಭಿಪ್ರಾಯವಲ್ಲ. ಅದಕ್ಕೂ ಒಂದು ಮಿತಿ ಇದೆ. ದೇವಾಲಯ ವಿಚಾರವಾಗಿ ಮಹತ್ತ್ವದ ನಿರ್ಧಾರ ಕೈಗೊಳ್ಳಲು ಆಗಮಶಾಸ್ತ್ರ, ವಾಸ್ತು ಶಾಸ್ತ್ರ, ಶಿಲ್ಪಶಾಸ್ತ್ರ ಮುಂತಾದ ಶಾಸ್ತ್ರಗಳೂ ಬೇಕಾಗುತ್ತವೆ. ಐನೂರು ವರ್ಷಗಳಿಗೂ ಹಿಂದೆ ಅಷ್ಟಮಂಗಲ ಪ್ರಶ್ನವಿಧಿಯೇ ಹುಟ್ಟಿರದ ಕಾಲದಲ್ಲಿ ವಿದ್ವಾಂಸರು ಹೇಗೆ ನಿರ್ಣಯ ಮಾಡುತ್ತಿದ್ದರು ಎನ್ನುವುದನ್ನೂ ಯೋಚಿಸಬೇಕು. ಅಷ್ಟಮಂಗಲ ಪ್ರಶ್ನವಿಧಿ ರೂಪಿಸಿದ ಪಂಡಿತರು ಒಳ್ಳೆಯ ಉದ್ದೇಶಕ್ಕಾಗಿಯೇ ರಚಿಸಿದ್ದಾರೆ. ಜೀರ್ಣೋದ್ಧಾರ ಆಗಲಿಕ್ಕೆ, ಭಕ್ತರಿಗೆ ದೇವತಾನುಗ್ರಹ ಆಗಲಿಕ್ಕೆ ಅಷ್ಟಮಂಗಲ ಪ್ರಶ್ನೆಯು ಮಾರ್ಗದರ್ಶಿ, ದಾರಿದೀಪ ಖಂಡಿತ ಹೌದು. ಇದನ್ನು ಒಳ್ಳೆಯ ರೀತಿಯಲ್ಲಿ ಬಳಸಿ ನೂರಾರು/ಸಾವಿರಾರು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಮಾರ್ಗದರ್ಶನ ಮಾಡಿದ ಅದೆಷ್ಟೋ ದೈವಜ್ಞರಿದ್ದಾರೆ. ಅವರು ಸದಾ ಸ್ಮರಣೀಯರು.

ಸಂಗ್ರಹಿತ (ಸೌಜನ್ಯದ ಮೇರೆಗೆ)

No comments:

Post a Comment