Saturday, June 27, 2026

Talking God Yalaguresha ಮಾತನಾಡುವ ದೇವರು ಯಲಗೂರದಪ್ಪ

      ಮಾತನಾಡುವ ದೇವರು ಯಲಗೂರದಪ್ಪ

ಓಂ ಸಪ್ತಗ್ರಾಮಾಧಿದೇವೋ ಭೂತ  ಸರ್ವೇಷಾಂ ಜಗತಾಂ ಪತಿ: | ಹನೂಮಾನ್ ಸ ಸ್ವಯಂ ವ್ಯಕ್ತೋ ಯತೋ ರಾಮಾಜ್ಞಯಾ ಸ್ಥಿತ: || ...ವಾಶಿಷ್ಟ್ಯ ರಾಮಾಯಣ 

         ಈ ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦". ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ. ಯಲಗೂರ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲ್ಲೂಕಿನಲ್ಲಿದೆ. ಜಿಲ್ಲಾ ಕೇಂದ್ರದಿಂದ ೬೫ ಕಿ.ಮೀ. ಅಂತರದಲ್ಲಿ ರಾಷ್ಟ್ರೀಯ ಹೆದ್ದಾರಿ - ೧೩ ರ ಹತ್ತಿರದಲ್ಲಿ ಯಲಗೂರ ಗ್ರಾಮವಿದೆ. ಈ ಪುಣ್ಯಕ್ಷೇತ್ರವೂ ಆಲಮಟ್ಟಿ ಜಲಾಶಯದಿಂದ ಕೇವಲ ೫ ಕಿಮಿ ದೂರದಲ್ಲಿದ್ದು, ನಿಡಗುಂಡಿಯಿಂದ ೩ ಕಿಮಿ ದೂರದಲ್ಲಿದೆ.

         ಕೃಷ್ಣಾ ನದಿ ತಟದಲ್ಲಿ ಪ್ರಸಿದ್ಧ ಆಂಜನೇಯ (ಯಲಗೂರೇಶ) ದೇವಸ್ಥಾನವಿದೆ. ಈ ದೇವಾಲಯಕ್ಕೆ ೩೫೦ ವರ್ಷಗಳ ಇತಿಹಾಸವಿದ್ದು ವಾಸಿಷ್ಠ ರಾಮಾಯಣ ಕಾಲಕ್ಕೆ ಹೋಗುತ್ತದೆ ಎಂದು ಆಖ್ಯಾಯಿಕೆಗಳಿವೆ. ಶ್ರೀ ಯಲಗುರೇಶನ ಯಲಗೂರ ಗ್ರಾಮದಲ್ಲಿ ಶ್ರೀ ರಾಮನ ಆದೇಶದ ಮೇರೆಗೆ ಏಳು ಹಳ್ಳಿಗಳಿಗೆ (ಎಳುಊರೇಶ =ಯಲ್ಗುರೇಶ) ಎಂದು ನೆಲೆಗೊಂಡಿದೆ. 

           ಶ್ರೀ ಹನುಮನ ವಿಗ್ರಹವು ಒರಗಿದ ಗೋವಿಂದರಾಜ ದೇವರ ಕೆರೆಯಲ್ಲಿತ್ತು ಎಂದು ಹೇಳಲಾಗುತ್ತದೆ ( ಈಗ ಗೋಣಿ ಕೆರೆ ಎಂದು ಕರೆಯಲಾಗುತ್ತದೆ). ಸಮೀಪದಲ್ಲಿ ಗೋಣೀ ಕೆರೆಯ ವಾಯುವ್ಯದಲ್ಲಿ ಅಡ್ಕಲ ಗುಡಿ ಇದೆ, ಅಲ್ಲಿ ಶ್ರೀ ವೆಂಕಟೇಶನ 'ಸನ್ನಿಧಾನ' ಇದೆ ಮತ್ತು ಈಗ ಶ್ರೀ ವೆಂಕಟೇಶ್ವರ ಮತ್ತು ಶ್ರೀದೇವಿಯ ವಿಗ್ರಹಗಳನ್ನು ಇರಿಸಲಾಗಿದೆ ಮತ್ತು ಬಿಜಾಪುರದ ಮುಸ್ಲಿಂ ರಾಜರ ಭಯದಿಂದಾಗಿ ದೊಡ್ಡ ಕಲ್ಲಿನ ಮಧ್ಯದಲ್ಲಿ ಚಿಕ್ಕ ದೇವಾಲಯವನ್ನು ನಿರ್ಮಿಸಲಾಯಿತಂತೆ. 

       ಬಿಜಾಪುರ ಸಾಮ್ರಾಜ್ಯದ ಪತನದ ನಂತರದ ಒಂದು ಘಟನೆ ಒಂದು ರಾತ್ರಿ ಪೂಜಾರಿ ಕನಸು ಕಂಡನು; ಶ್ರೀ ಹನುಮನ ವಿಗ್ರಹವನ್ನು ಮರೆಮಾಡಿದ್ದ ಕಲ್ಲಿಗೆ ಪೂಜೆ ಮಾಡುತ್ತಿದ್ದ; ಆ ಕಲ್ಲನ್ನು ಒಡೆದು ವಿಗ್ರಹವನ್ನು ಪಡೆಯಲು; ಪೂಜಾರಿ ಕಲ್ಲನ್ನು ತಾನೇ ಸ್ವತಃ ತನಗೆ ಅನುಕೂಲವಾಗುವಂತೆ ಒಡೆಯುತ್ತಿದ್ದಂತೆ, ಅಚಾತುರ್ಯದಿಂದ ವಿಗ್ರಹವೂ ಸಹ ತುಂಡುಗಳಾಗಿ ಒಡೆದುಹೋಯಿತು.  ಪೂಜಾರಿಯು ಮಾಡಬೇಕಾದ ಪೂಜೆ ಮತ್ತು ದೇವರ ಬಗ್ಗೆ ಆದ ಘಟನೆಯ ಬಗ್ಗೆ ಚಿಂತಿತನಾಗಿದ್ದನು ಆಗ ಮತ್ತೆ ಅವನಿಗೆ ಮತ್ತೆ ಒಂದು ಕನಸು ಬಿದ್ದು  ಆ ಎಲ್ಲ ತುಣುಕುಗಳನ್ನು ಈಗಿರುವ ದೇವಾಲಯದ ಗರ್ಭಗುಡಿಯ ಸ್ಥಳಕ್ಕೆ ತಂದು ಸರಿಯಾದ ರೀತಿಯಲ್ಲಿ ಇರಿಸಿ ಏಳು ದಿನಗಳವರೆಗೆ ಬಾಗಿಲು ಮುಚ್ಚುವಂತೆ ಅವನಿಗೆ ಆದೇಶಿಸಲಾಯಿತು, ಆದರೆ ಪೂಜಾರಿಯು ಆ ವಿಗ್ರಹವನ್ನು ನೋಡಲು ತುಂಬಾ ಉತ್ಸುಕನಾಗಿರುತ್ತಿದ್ದು ಮತ್ತು ಆತಂಕವನ್ನು ತಡೆಯಲು ಸಾಧ್ಯವಾಗದೆ, ಏಳನೇ ದಿನ ಬೆಳಿಗ್ಗೆಯೇ  ಬಾಗಿಲು ತೆರೆದನಂತೆ,  ವಿಗ್ರಹದ ಮೇಲ್ಭಾಗದಲ್ಲಿ ಸಂಪೂರ್ಣವಾಗಿ ಸೇರಿಕೊಂಡಿದ್ದು ಕೆಲವು ತುಣುಕುಗಳು ವಿಗ್ರಹದ ಕೆಳಭಾಗದಲ್ಲಿ ಸಂಪೂರ್ಣವಾಗಿ ಸೇರಿಕೊಂಡಿರದೇ ಇದ್ದದ್ದು  ಅವನು ನೋಡಿದನು (ಈಗಲೂ ಸೇರದ ಭಾಗಗಳನ್ನು ಕಾಣಬಹುದು). ಅದರ ನಂತರ ಪೂಜಾರಿಗೆ ಮತ್ತೆ ಕನಸು ಬಿದ್ದು ದೇವರು ಅವನಿಗೆ ಕೃಷ್ಣಾ ನದಿಯಿಂದ ಪವಿತ್ರ ನೀರನ್ನು ತಂದು ಅಭಿಷೇಕ ಮಾಡಿ ಯಥೋಚಿತವಾಗಿ ಸುವರ್ಣ ಸ್ಪರ್ಶ ಜೊತೆ ವಜ್ರಲೇಪನ ಮಾಡಿಸಿ ಪ್ರಾಣ ಪ್ರತಿಷ್ಠಾಪನೆ ಮಾಡುವಂತೆ ಆದೇಶಿಸಿದನು. ದೇವರ ಆದೇಶದಂತೆ ಎಲ್ಲಾ ಕೆಲಸಗಳನ್ನು ಯಥಾವತ್ತಾಗಿ ಮಾಡಿದುದರಿಂದ ದೇವರು ಭಕ್ತರನ್ನು ಆಶೀರ್ವದಿಸಲು ಪೂರ್ಣ ಶಕ್ತಿಯಲ್ಲಿದ್ದು ಜಾಗ್ರತ ನಾಗಿದ್ದಾನೆ ಎಂದು ಹಿರಿಯರ ವಿದ್ವಾಂಸರ ಹೇಳಿಕೆಗಳಿವೆ. 

         ಮರಾಠಾ ಸಾಮಂತರಾಜ ಶ್ರೀ ಬಾಜಿರಾವ ಪೇಶ್ವೆ ಆಳ್ವಿಕೆಯಲ್ಲಿ ೪೮೦ ಎಕರೆ ಭೂಮಿಯನ್ನು ದೇವಾಲಯಕ್ಕೆ ಜಹಗೀರು ರೂಪದಲ್ಲಿ ನೀಡಲಾಯಿತಂತೆ ಮತ್ತು ಪೂಜಾರಿ ಮತ್ತು ಇತರ ಸೇವಕರಿಗೆ ಪ್ರತಿದಿನ ಪೂಜೆ ಮತ್ತು ಇತರ ಎಲ್ಲಾ ಸೇವೆಗಳನ್ನು ತಪ್ಪದೆ ಮಾಡಲು ವಿತರಿಸಲಾಯಿತು ಎಂದು ತಿಳಿದುಬರುತ್ತದೆ.

ತ್ರೇತಾಯುಗದಲ್ಲಿ ಶ್ರೀರಾಮಚಂದ್ರ ದೇವರು ಸೀತಾ ಮಾತೆಯ ಅನ್ವೇಷಣೆ ಸಮಯದಲ್ಲಿ ಲಂಕೆಗೆ ಹೋಗುವ ವೇಳೆ ಇಲ್ಲಿಗೆ ಆಗಮಿಸಿದ್ದರು ಅನ್ನೋ ಐತಿಹ್ಯವಿದೆ. ಹೀಗಾಗಿ ಇಲ್ಲಿ ಪ್ರತಿ ವರ್ಷವೂ ರಾಮನವಮಿಯನ್ನು ವಿಶೇಷವಾಗಿ ನಿಯಮಿತವಾಗಿ ಆಚರಿಸಲಾಗುತ್ತದೆ.  ಗ್ರಾಮದ ಜನರು ಜಾತಿ ಮತ ಪಂಥ ಬೇಧವಿಲ್ಲದೇ ಯಲಗೂರೇಶನ ಮುಂದೆ ಒಂದಾಗಿ ತಮ್ಮ ಸೇವೆ ಸಲ್ಲಿಸುತ್ತಿರುವುದು ಇಲ್ಲಿನ ವಿಶೇಷವಾಗಿದೆ.

            ಶ್ರೀ ರಾಮಚಂದ್ರ ದೇವರ ಅಣತಿಯಂತೆ (ಏಳು ಊರಿನ) ಸುತ್ತಮುತ್ತಲ ಏಳು ಹಳ್ಳಿಗಳ ರಕ್ಷಣೆಗಾಗಿ ನಿಂತ ಯಲಗೂರ ಆಂಜನೇಯ ದೇವರು ಚಂದ್ರಗಿರಿ, ಆರಳದಿನ್ನಿ, ಕಾಶಿನಕುಂಟೆ, ಬೂದಿಹಾಳ, ಮಸೂತಿ, ನಾಗಸಂಪಿಗೆ ಹೀಗೆ ಏಳು ಹಳ್ಳಿಗಳ ಗ್ರಾಮಸ್ಥರ ಕುಲದೈವವೂ ಹೌದು. ಏಳೂ ಊರುಗಳಿಗೆ ಒಬ್ಬನೇ ಆಂಜನೇಯ ಎಂಬುದೇ ವಿಶೇಷ. ಶ್ರೀರಾಮನ ಆಜ್ಞೆಯಂತೆ ಕೃಷ್ಣೆಯ ತೀರದ ವಿಜಯಪುರದ ಯಲಗೂರ ಗ್ರಾಮದಲ್ಲಿ ಹನುಮಂತ ನೆಲೆ ನಿಂತಿದ್ದಾನೆ ಅನ್ನೋ ಐತಿಹ್ಯವಿದೆ. ಪೇಶ್ವೆ ಮತ್ತು ಆದಿಲಶಾಹಿ ಕಾಲದಲ್ಲಿ ಈ ದೇವಸ್ಥಾನ ಜೀರ್ಣೋದ್ಧಾರಗೊಂಡಿದೆ ಎಂದು ತಿಳಿದುಬರುತ್ತದೆ 

       ಮಹಾದ್ವಾರದ ಮುಂದೆ ಎರಡು ಪುರಾತನ ವೀರಗಲ್ಲುಗಳಿವೆ. ಗರ್ಭಗುಡಿಯಲ್ಲಿ ಸುಮಾರು 7 ಅಡಿ ಎತ್ತರದ ಆಂಜನೇಯನ ವಿಗ್ರಹ ದೇಗುಲದ ಇತಿಹಾಸವನ್ನು ತಿಳಿಸುತ್ತಿದೆ. ಪ್ರಾಂಗಣದ ಬಲಭಾಗದಲ್ಲಿ ಸೂರ್ಯನಾರಾಯಣನ ಚಿಕ್ಕ ದೇವಾಲಯ, ಹಿಂಬದಿಯಲ್ಲಿ ತುಳಸಿ ಬೃಂದಾವನ ಇದೆ

             ವಿಶಾಲವಾದ ಪ್ರಾಂಗಣದಲ್ಲಿನ ಗರ್ಭಗುಡಿಯಲ್ಲಿ ನೆಲೆಸಿರುವ ಆಳೆತ್ತರದ ಹನುಮನ ದಿವ್ಯ ತೇಜಸ್ಸನ್ನು ಬಣ್ಣಿಸಲು ಶಬ್ದಗಳು ಸಾಲದು. ಹನುಮನ ಶ್ರೀರಕ್ಷೆಗಾಗಿ ಅರಸಿ ಬರುವ ಭಕ್ತರಿಗೆ ಅಭಯ ನೀಡುತ್ತಾ ನಿಂತಿರುವ ಈ ಭವ್ಯ ಮೂರ್ತಿ ನಿಜಕ್ಕೂ ಯಲಗೂರನ್ನು ಪರಮ ಪವಿತ್ರ ಕ್ಷೇತ್ರವನ್ನಾಗಿಸಿದೆ. ಸುತ್ತಲಿನ ಗರುಡಗಂಬ, ಶಿವಲಿಂಗ, ಗಣಪತಿ, ಸೂರ್ಯನಾರಾಯಣ, ತುಳಸಿ ಬೃಂದಾವನ ದೀಪಸ್ತಂಭ ಇದೆಲ್ಲವೂ ಆಸ್ತಿಕರನ್ನೂ ಪರಮಾರ್ಥದೆಡೆಗೆ ಕೊಂಡೊಯುತ್ತದೆ. ಗರ್ಭ ಗುಡಿಯ ಸುತ್ತಣ ಗೋಡೆಯನ್ನು ಆವರಿಸಿರುವ ವರ್ಣರಂಜಿತ ಹನುಮನ ಕೀರ್ತಿಯನ್ನು ಬಿಂಬಿಸುವ ರಾಮಾಯಣದ ಭಿತ್ತಿ ಚಿತ್ರಗಳು ಕಣ್ಮನ ಸೆಳೆಯುತ್ತವೆ.

             ಕೃಷ್ಣೆಯ ತಟದಲ್ಲಿರುವ ಈ ಕ್ಷೇತ್ರದ ಯಲಗೂರೇಶನಿಗೆ ಪ್ರತಿ ದಿನ ಮೂರು ಬಾರಿ ವಿಶೇಷ ಪೂಜೆ ನಡೆಯುತ್ತದೆ. ನಸುಕಿನಲ್ಲಿ ಕಾಕಡಾರತಿ, ಮಧ್ಯಾಹ್ನ ಕೃಷ್ಣಾ ನದಿ ನೀರಿನಿಂದ ಅಭಿಷೇಕ ಹಾಗೂ ಮಹಾಪೂಜೆ ( ಈಗ ಭಕ್ತಾದಿಗಳು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ  ಬೇಡಿಕೆ ಈಡೇರಿಕೆಗೆ ದೇವರ ಜೊತೆ ಮಾತನಾಡುತ್ತಾರೆ ಪ್ರಶ್ನೆಗಳನ್ನು ಕೇಳಿ ಯಥೋಚಿತ ಉತ್ತರ ಪಡೆದು ಸಂತುಷ್ಟರಾಗುತ್ತಾರೆ ಇದು ಅವರವರ ಅನುಭವ ಅದಕ್ಕೆಂದೇ ಯಲಗುರದಪ್ಪನನ್ನು ಮಾತನಾಡುವ ದೇವರೆಂದೇ ಪ್ರಚೀತಿ ಇದೆ ) ಮತ್ತು ಸಂಜೆ ಧೂಪಾರತಿ ಜರುಗುತ್ತದೆ. ಇಲ್ಲಿ ಪ್ರತಿ ದಿನ ದಾಸರ ಸೇವೆ ವೈಶಿಷ್ಟ್ಯ ಪೂರ್ಣವಾಗಿರುತ್ತದೆ. ಇದಲ್ಲದೆ ಪ್ರತಿ ಶನಿವಾರದಂದು ವಿವಿಧ ಬಗೆಯ ವಿಶೇಷ ಪೂಜೆಗಳು, ಪ್ರತಿನಿತ್ಯ ಮತ್ತು ನೈಮಿತ್ತಿಕ ಪ್ರಸಂಗಗಳಿಗೆ ಅನುಗುಣವಾಗಿ ವಿದ್ವಾಂಸ ವಿಪ್ರ ವೃಂದದಿಂದ ಕೈಂಕರ್ಯಗಳು ಜರುಗುತ್ತವೆ.

           ಸಂಜೆ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಕೃಷ್ಣಾ ನದಿಯಲ್ಲಿ ಜಲಾಭಿಷೇಕವನ್ನ ಮಾಡಲಾಗುತ್ತದೆ. ಬಳಿಕ ದೇಗುಲದ ಪ್ರಾಂಗಣದಲ್ಲಿ ಪಲ್ಲಕ್ಕಿ ಕರೆ ತರುವ ವೇಳೆಗೆ ಮಕ್ಕಳಿಂದ ವಯೋವೃದ್ಧರವರೆಗೆ ಎಲ್ಲರೂ ಅಡ್ಡಲಾಗಿ ಬೋರಲಾಗಿ ಮಲಗಿ ನಮಸ್ಕರಿಸುವುದು ಪದ್ಧತಿ  ವಾಡಿಕೆ, ನೋಟ ಪ್ರೇಕ್ಷಣೀಯ ವಾಗಿರುತ್ತದೆ 

            ಕಾರ್ತಿಕ ಮಾಸದ ಕಾರ್ತಿಕೋತ್ಸವವು ಎರಡು ದಿನಗಳ ವರೆಗೆ ಬಹಳ ವಿಜೃಂಭಣೆಯಿಂದ ಜರಗುತ್ತದೆ.ಅಲ್ಲದೆ ಚೈತ್ರ ಮಾಸದ ಶ್ರೀ ರಾಮ ನವಮಿ ಉತ್ಸವದಿಂದ, ಹನುಮ ಜಯಂತಿಯ ವರೆಗೆ ಅತ್ಯಂತ ಭಕ್ತಿ ಭಾವದಿಂದ ಸತತವಾಗಿ ಸಂಭ್ರಮದಿಂದ ಅನ್ನ ಸಂತರ್ಪಣೆಯನ್ನು ನಿಯೋಜಿಸಲಾಗುತ್ತದೆ. 

            ಉತ್ಸವಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಭಕ್ತರಿಗೆ ಪ್ರಸಾದ ಬಡಿಸುವ ಸ್ಥಳ ಉಗ್ರಾಣವಿದ್ದು, ಇದು ತುಂಬಾ ಸುಂದರವಾದ ಸ್ಥಳವಾಗಿದೆ. ಈ ಸ್ಥಳವು ಅಪಾರ ಸಂಖ್ಯೆಯ ಬೃಹತ್ ಮತ್ತು ಸುಂದರವಾದ ತೆಂಗಿನ ಮರಗಳನ್ನು ಹೊಂದಿದ್ದು, ಇದು ಉಗ್ರಾಣವನ್ನು ತುಂಬಾ ತಂಪಾದ ಮತ್ತು ಶಾಂತ ಸ್ಥಳವನ್ನಾಗಿ ಮಾಡುತ್ತದೆ. 

            ಶ್ರೀ ಯಲಗುರೇಶನ ಈ ಪುಣ್ಯ ಕ್ಷೇತ್ರದ  ಪಶ್ಚಿಮಕ್ಕೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ೩೫ ಎಕರೆ ಭೂಮಿಯಲ್ಲಿ ಆವರಿಸಿರುವ ಶ್ರೀ ಪ್ರಮೋದಾತ್ಮಾ ಗೋ ಸಂರಕ್ಷಣಾ ಕೇಂದ್ರವಿದ್ದು ಸುಮಾರು ಒಂದು ಸಾವಿರ ವರೆಗೆ ಹಸುಗಳು ಕರುಗಳಿವೆ. ಸತತವಾಗಿ ನಿಗರಾಣಿಯಲ್ಲಿ ನೋಡಿಕೊಳ್ಳಲು ಸುಮಾರು ೧೫ ಜನ ಗೋಪಾಲಕ ಸಿಬ್ಬಂದಿಗಳಿದ್ದಾರೆ. ಸನಾತನ ಹಿಂದೂ ಸಂಸ್ಕೃತಿಯ ಪ್ರತೀಕವಾಗಿರುವ ಪವಿತ್ರ ಎಂದೆನಿಸುವ ಕಾಮಧೇನುಗಳನ್ನು ಭಕ್ತಿ, ಕಾಳಜಿ, ಮತ್ತು ಆಧ್ಯಾತ್ಮಿಕ ಆತ್ಮೀಯತೆಯಲ್ಲಿ ಆರೋಗ್ಯ ಪೂರ್ಣವಾಗಿ ರಕ್ಷಿಸಿ ಪೋಷಿಸುವ ನಿರಂತರ ಸೇವಾ ಕಾರ್ಯ ಅನುಕರಣೀಯವಾಗಿದೆ.

ಶ್ರೀ ಕ್ಷೇತ್ರದ ಆಂಜನೇಯ ಸ್ವಾಮೀ ಸನ್ನಿಧಿಯು ಭಕ್ತರ ಸಕಲ ಅಭಿಷ್ಟ ಇಷ್ಟಾರ್ಥಗಳನ್ನು ಈಡೇರಿಸುವ ಪುಣ್ಯ ಕ್ಷೇತ್ರವೆಂಬುದು ಎಲ್ಲರ ನಂಬಿಕೆಯಾಗಿದ್ದು  ಅದು ಸತ್ಯವೂ ಹೌದು.

Click here = ಶ್ರೀ ಯಲಗೂರೇಶಾಷ್ಟಕಂ :  ದುಃಸ್ವಪ್ನ, ಗ್ರಹಪೀಡೆ ರೋಗ ರುಜಿನಾದಿಗಳಿಂದ ದೂರವಿರಲು, ಜೀವನದಲ್ಲಿ ನೆಮ್ಮದಿ, ಸುಖ, ಸ್ಥೈರ್ಯ,ಆಯುಷ್ಯ, ಆರೋಗ್ಯ ಕಾಪಾಡಿಕೊಳ್ಳಲು ಈ ಶ್ರೀ ಯಲಗೂರೇಶಾಷ್ಟಕದ ಪಾರಾಯಣವು ಫಲಪ್ರದವಾಗಿದೆ ಎಂದು ದ್ರಷ್ಟಾರರ ಅಭಿಪ್ರಾಯಗಳಿವೆ.

ಸರ್ವೇ ಜನಾಃ ಸುಖಿನೋ ಭವಂತು 


No comments:

Post a Comment