Friday, June 26, 2026

PRANADEVA STUTI. ಕೋರವಾರ ಶ್ರೀ ಪ್ರಾಣದೇವರ ಸ್ತುತಿ

                ಕೋರವಾರ ಶ್ರೀ ಪ್ರಾಣದೇವ ಸ್ತುತಿ:



         ಸೋಂದಾ ಶ್ರೀ ವಾದಿರಾಜ ತೀರ್ಥರು ಮಾಧ್ವ ಸಮುದಾಯದ ಶ್ರೇಷ್ಠ ಮಠಾಧೀಶರಲ್ಲಿ ಒಬ್ಬರು. ಒಮ್ಮೆ ತೀರ್ಥರು ತೀರ್ಥಯಾತ್ರೆಗೆ ಹೋದಾಗ, ಅವರು ಕೋರವಾರ ಗ್ರಾಮದ ( ಪೌರಾಣಿಕ ಹೆಸರು ಕೋಕಿಲಾಪುರ ) ಮೂಲಕ ಹಾದು ಹೋಗುತ್ತಲಿದ್ದಾಗ, ಶ್ರೀ ಲಂಕೆಯಲ್ಲಿ ವಿಜಯ ಸಾಧಿಸಿದ ನಂತರ ಶ್ರೀ ರಾಮಚಂದ್ರ ದೇವರು ಪರಿವಾರ ಸಮೇತ ಅಯೋಧ್ಯೆಗೆ ಹಿಂತಿರುಗುವಾಗ ಈ ಸ್ಥಳದಲ್ಲಿ ಸ್ವಲ್ಪ ಸಮಯ ತಂಗಿದ್ದರೆಂದು ಋಷಿ ವಾದಿರಾಜರಿಗೆ ತಿಳಿದಿತ್ತು. 
ಋಷಿ ವಾದಿರಾಜರು ಒಂದು ರಾತ್ರಿ ನಿದ್ರಿಸುತ್ತಿರುವಾಗ ಕನಸಿನಲ್ಲಿ, ಶ್ರೀ ಕಲಶೋದ್ಭವ ಕರಾರ್ಚಿತ ಶ್ರೀ ಆಂಜನೇಯನು ಪ್ರತ್ಯಕ್ಷ ಮಹರ್ಷಿ ಶ್ರೀ ಅಗಸ್ತ್ಯ ಋಷಿಗಳೊಂದಿಗೆ ಕಾಣಿಸಿಕೊಂಡನು. ಹನುಮನು ತೀರ್ಥರಿಗೆ ಹಳ್ಳಿಯ ಹತ್ತಿರದ ಹಿರಿದಾದ ಬಂಡೆಯೊಳಗೆ ಈಗಾಗಲೇ ಅಡಗಿರುವ ತನ್ನ  ವಿಗ್ರಹವನ್ನು ಪುನಃ ಸ್ಥಾಪಿಸಲು ತಿಳಿಸಿದನು. ಗ್ರಾಮಸ್ಥರ, ಗಣ್ಯರ ಸಹಾಯದಿಂದ ಋಷಿ ವಾದಿರಾಜರು ಬಂಡೆಯಲ್ಲಿ ಅಡಗಿರುವ ಹನುಮನ ವಿಗ್ರಹವನ್ನು ಹೊರ ತೆಗೆದರು ಯಥೋಚಿತವಾಗಿ ಪುಣ್ಯ ಪ್ರದ ಜಲ, ತೈಲ ಧಾನ್ಯಾದಿಗಳಿಂದ ಮಜ್ಜನಗೈದು, ಸುವರ್ಣ ಸ್ಪರ್ಶ ಜೊತೆ ವಜ್ರಲೇಪನ ಮಾಡಿಸಿ ಹೋಮ ಸಹಿತವಾಗಿ ಚೈತ್ರ ಮಾಸದ ಪ್ರತಿಪದ ದಿನದಂದು ಕೋರವಾರ ಗ್ರಾಮದಲ್ಲಿ ಸುಮಾರು ಐದು ಫೂಟ ಎತ್ತರದ ಸಾಲಿಗ್ರಾಮ ಶಿಲೆಯ ಈ ಮೂರ್ತಿ  ೧೫೩೫ ರಲ್ಲಿ ಈ ವಿಗ್ರಹವನ್ನು ಪ್ರಾಣಪ್ರತಿಷ್ಠಾಪನೆ ಮಾಡಿದರು.        
        ಹನುಮನ ಜಾಗ್ರತ ವಿಗ್ರಹವನ್ನು ವೀಕ್ಷಿಸಲು ಆರಾಧಿಸಲು ಸುತ್ತಮುತ್ತಲ ಹಳ್ಳಿಗಳಿಂದ ನಗರಗಳಿಂದ ಭಕ್ತರು ಸೇರುತ್ತಾರೆ. ಸನಾತನ ಹಿಂದೂ ಸಮಾಜದ ಕೆಲವು ಪರಿವಾರಗಳ ಕುಲದೈವನೆಂದು  ಪೂಜೆ ಗೊಳ್ಳುತ್ತಾನೆ. ದೇವಾಲಯದ ಆವರಣದೊಳಗಿನ ಪಾಕಶಾಲೆಯ ಬಳಿ ಪುಷ್ಕರಣಿಯೂ, ಉದ್ಭವ ಶಿವಲಿಂಗವೂ ಇದೆ ಎಂದು ತಿಳಿದುಬಂದಿದೆ.
          ಭಕ್ತರ ಸಕಲ ಮನೋಭಿಷ್ಟಗಳನ್ನು ಪೂರೈಸುವ ಭಜಕ ಕಲ್ಪದೃಮನಾದ ಶ್ರೀ ಪ್ರಾಣದೇವರ ಸ್ತುತಿ ಇಹಪರಗಳೆರಡರಲ್ಲಿ ನೆಮ್ಮದಿ, ಸದ್ಬುದ್ಧಿ, ಕ್ಷೇಮ, ಸ್ಥೈರ್ಯ, ಆಯುರಾರೋಗ್ಯಗಳನ್ನು ನೀಡುವುದರಲ್ಲಿ ಸಂದೇಹವಿಲ್ಲ. 
ಸರ್ವೇ ಜನಾಃ ಸುಖಿನೋ ಭವಂತು 

ಶ್ರೀ ಬಿಂದುರಾಜ ಮುತ್ತಗಿ ವಿರಚಿತ 
ಕೋರವಾರ ಶ್ರೀ ಪ್ರಾಣದೇವರ ಸ್ತುತಿ 
(ಅಶ್ವಧಾಟಿ)
ಶ್ರೀ ಗುರುಭ್ಯೋ ನಮ: ಹರಿ: ಓಂ 

ಶ್ರೀರಾಮದೂತನೇ ಸಮೀರಾಂಶದಿಂದಲೀ ಕಪಿರಾಜ ಪತ್ನಿ ಯುದರ
ವಾರಾನಿಧೀ ಜನಿತ ವೀರಾಗ್ರ್ಯ ರತ್ನ ಭುವಿ ಭಾರಾಖ್ಯ ರಕ್ಕಸ ರಿಪೋ 
ಶ್ರೀರಾಮನಾಜ್ಞೆಯ ಸುಹಾರಾವಲಿ ಧರಿಸಿ ನೀರೇಜ ನೇತ್ರೆಎನಿಪ 
ಶ್ರೀ ರಾಮ ಪತ್ನಿಂಗೆ ಮಹಾರಾಜನಂ ಗುರುವ ಧೀರೋದಾತ್ತ ನೀ ಸಲಿಸಿದೆ || 1 ||

ಲಂಕಾಧಿಪತ್ಯ ಸುರಲಂಕಾರಭೂತನ ಅಹಂಕಾರ ಛೇದಿಸುವೆಡೇ
ಪಂಕೇರುಹಾಕ್ಷನ ಸುಕೈಂಕರ್ಯ ಪೊಂದುತ ಅಹಂಕಾರ ಹೀನ ನೆನೆಸಿ 
ಶಂಕಾ ವಿಹೀನನೇ ಸುಶಂಕಾರಿ  ಭೃತ್ಸಹಿತ ಲಂಕಾಪುರಕ್ಕೆ ತೆರಳಿ 
ಲಂಕೇಶನಂ ಬಗೆದು ಸಂಕರ್ಷಣಾರಿಗೆ ಭಯಂಕಾರನಾಗಿ ಮೆರೆದೆ || 2 ||

ಶ್ರೀ ಸೀತೆ ದಾಶರಥಿ ಶೇಷಾಂಶ ಮುಖ್ಯ ವಸುಧೀಶನ್ನ ಬಾಂಧವರನು
ದೇಶಕ್ಕೆ ತಂದು ತವ ಕೌಶಲ್ಯ ಕಂದನಿಗೆ ದೇಶಾಧಿಪತ್ಯ ವಹಿಸಿ 
ಶ್ರೀ ಶಾಂತಿ ಸೌಖ್ಯ ಘನ ದೇಶಾಂತ ವಾಗಿರಲು ದಾಸಾಗ್ರ ಗಣ್ಯನೆನಿಸಿ
ಲೇಸಾಗಿ ಸೇವೆಯನು ಆಶಾಮಲಾಂಗನಿಗೆ ಈಶಾರ್ಣೆಂದು ಮುದದಿ. || 3 ||

ಭೀಮಾವತಾರವನು ಭೂಮಿಶರ ಗ್ರಹದಿ ನೀ ಮಾಡಿ ಪಾಂಡವರಲಿ
ಧೀಮಂತನೆಂದೆನಿಸಿ ಕೌಮಾರವಸ್ಥೆಯಲಿ ನೀ ಮೋಹಕಾಗಿ ಬೆಳೆದೆ 
ಶ್ರೀಮಂಗಳಾತ್ಮಕನೇ ಕಾಮಾಂಧ ಕೀಚಕನ ಭಾಮಾ ಶಿರೋಮಣಿಯಓಲ್ 
ಹೇಮಾಂಬರಂ ಧರಿಸಿ ಸಂಮೋಹ ಮಾಡುತಲಿ ದುರ್ಮೋಹಿಯಂ ಕೆಡುಹಿದೆ || 4 ||

ಶೇಷಾತ್ಮ ಕೇಶವನು ದುಷ್ಟಾತ್ಮ ಕೌರವನ ಪುಷ್ಪಾಂಗಮಂ ಬಗೆಯಲು
ಶ್ರೇಷ್ಟಾಂಗ ನಿನ್ನನವ ಶಿಷ್ಟೇಷ್ಟ ಸೂಚಿಸೆ ಸತೀಷ್ಟಾರ್ಥ ಪೂರ್ಣ ಗೊಳಿಸೆ
ಸೃಷ್ಟೀಸ ಗರ್ವಿಸುತ ಜೇಷ್ಠಾಗ್ರಜಂಗೆ ಸುಬಲಿಷ್ಟಾಂಗರಾದ ನುಜರಿಂ
ಸಾಷ್ಟಾಂಗ ವಂದಿಸುತ ತುಷ್ಟಾತ್ಮ ಧರ್ಮನಿಗೆ ಗರಿಷ್ಟಾಸನಂ ಸಲಿಸಿದೆ || 5 ||

ಭೂಮಂಡಲಸ್ಥ ಜನ ಸಮ್ಮೋಹ ಶಾಸ್ತ್ರದಿ ರಮಾಮೋಹನಾಂಘ್ರಿ ಮರೆತು 
ಬ್ರಹ್ಮಾಂಡ ವಲ್ಲಭನು ಸಾಮಾನ್ಯ ಜೀವಸಮ ಕಾಮಾರಿತಾವೆನುತಲಿ 
ವ್ಯಾಮೋಹದಲ್ಲಿರುವ ಧೂಮಿದ್ವಿ ಜರ್ಗಿನಿತು ನೀ ಮಧ್ಯಗೇಹರಸತಿ 
ಆ ಮಾತೆ ವೇದವತಿ ರಮ್ಯಾತ್ಮ ನಂದೆನಿಸಿ ಧೀಮಂತ ನೀನರುಹಿದೆ || 6 ||

ಶ್ರೀ ವೇಶ್ಮನುತ್ತಮನು ಜೀವೇಶ ಭೇದ ಜೇಡದೇವೇಶ ಭೇದ ಜಗದ 
ಜೀವಂಗಳಲ್ಲಿ ನಿಜ ಜೀವಂಗೆ ಭೇದಸಲೆ ಜೀವಂಗಳೋಳ್ ತರತಮ 
ಜೀವಂಗಳಲ್ಲಿ ಜಡ ಆವಾವಕಾಲದಲಿ ಯಾವಾಗ್ಯು ಭೇದ ಜಡದಿ 
ಶ್ರೀ ವಾಸ ನಿರ್ಮಿತವು ಈ ವಿಶ್ವ ಸತ್ಯವನು ತವಾಗ್ಮಿ ಸಾರಿ ಮೆರೆದ. || 7 ||

ಆನಂದ ತೀರ್ಥರ ಮತಾನಂದದಾಯಕವು  ಆನಂದ ಕಂದ ಹರಿಗೆ 
ಆನಂದತೀರ್ಥರೇ ನಿಜಾನಂದ ತೋರ್ಪರು ನಿಜಾನಂದವೇ ಮುಕುತಿಯು 
ಆನಂದ ತೀರ್ಥರಲಿ ಆ ನಂದಿವಾಹನರು ಆ ನಾರದಾದಿ ಮುನಿಗಳ 
ಆನಂದ ತೀರ್ಥ ಕೃತಿ ಆನಂದ ಲೋಕದಲಿ ಆನಂದದಿಂ ಪಠಿಪರು  || 8 ||

ಸರ್ವಜ್ಞ ವೇದನುತ ಸರ್ವೇಶನಾಗಮನ ಪೂರ್ವೋತ್ತರಜ್ಞರರಿತು
ಸರ್ವಾಂಗ ಸುಂದರ ಸುಶರ್ವಾದಿ ವಂದ್ಯನತಿ ಜಾರ್ವಾಂಗವಂ ಸ್ಮರಿಸುತ 
ಸರ್ವಜ್ಞರಂದು ಭುವಿಗೀರ್ವಾಣರಿಂ ನಡೆದು ಗುರ್ವಾಬ್ದಿ  ಗೈತರುತಿರೆ
ಸರ್ವೋತ್ತಮಾಖ್ಯ  ಹರಿ ಗುರ್ವಂತರಾತ್ಮಕನ ಪೂರ್ವ ಪ್ರತೀಕ ಬರಲು  || 9 ||

ಶ್ರೀಕಾಂತನಂ ವರ ನಿಶಾ ಕಾಂತ ಮೌಲೀಪುರ ಏಕಾಂತ ಮಂದಿರದಲಿ
ಏಕಾಂತ ಭಕ್ತರಿವರೇಕೈಕ ದೇವನನು ಸಾಕಲ್ಯದಿಂ ನಿಲಿಸುತ
ಶ್ರೀಕಾಂತೆ ರುಕ್ಮಿಣಿಯು ಈ ಕಂದ ರೂಪವನು ಏಕಾಗ್ರ ಚಿತ್ತ ವಿಡುತ
ಶ್ರೀಕಾಂತನರ್ಚಿಸುತ ತಾ ಕಾಂತೆ ಎಂದೆನಿಸಿ ದಾ ಕಾಲ ಬಣ್ಣಿಸಿದರು  || 10 ||

ವ್ಯಾಸಾಶ್ರಮೆಂದೆನಿಪ ಆ ಶೈಲ ದೇಶದಲಿ ಶಿಷ್ಟಾಬ್ದಿಯಿಂದ ಹರಿಯು 
ಲೇಸಾಗಿ ವೇದಕೇ ವಿಶೇಷಾರ್ಥ ಬಣ್ಣಿಸುತ ತಾ ಸೂರಿ ವಾಸಿಸುವೆಡೆ 
ದಾಸಾಗ್ರಗಣ್ಯ ಯತಿ ವೇಷಾತ್ಮ ಸಂತ ಜನ ದೋಷಾತಿ ದೂರ ನಡೆದು 
ಶ್ರೀ ಶಾತ್ಮಗೆಲ್ಲವನು ತಾ ಶಾಂತ ಭಾವದಿ ಮುನಿಶಾರ್ಪಣೆಂದು ಮುದದಿ. || 11 ||

ಶ್ರೀ ಲೋಲ ರಾಮನನು ಲೋಲಾಕ್ಷಿ ಸೀತೆಯನು ಮೇಲಾದ ಶಿಷ್ಯರೆನಿಪ 
ನೀಲಾಬ್ಜ ನಾಭಯತಿ ಭೂಲೋಕ ವಂದ್ಯರಿಗೆ ಮೇಲಾಗಿ ಒಪ್ಪುಗೊಡುತ 
ನೀಲಾಂಗ ಕೃಷ್ಣನ ಸುಶೀಲಾತ್ಮನೆಂದು ಜನ ಸಾಲಾಗಿ ಪೂಜೆ ಸಲಿಸಿ 
ನೀಲಾತ್ಮನ ಪ್ರತಿಮೆ ಮೇಲೆಂಟು ನೀಡುತಲಿ ಸಲ್ಲೀಲೆ ಪೂರ್ಣಗೊಳಿಸೆ  || 12 ||

ಜೀವಾಢ್ಯ ತಾ ತ್ರಿವಿಧ ಜೀವರ್ಗೆ ನಿತ್ಯದಲಿ ದೇವೇಶನಾಜ್ಞೆಗಯಂ ವೋಲ್ 
ಜೀವಾಂತ ಕರ್ಮಗಳ ಜೀವಾರ್ಹ ತಾನುಗುಣ ಈ ವಾಯು ಮಾಡಿಸುವರು 
ಜೀವಾಂತ ರಂಗಗಳಲೀ ವಾಸುದೇವನ ಸುಶೇನಾಖ್ಯ ಹಂಸ ಜಪವ 
ಜೀವೋತ್ತಮಾಖ್ಯನೇ ಸುಭಾವಿ ನಿರೀಕ್ಷಿತ ವಿಧಿ ಜೀವಾಂತ ಕಾಲ ಜಪಿಸೆ. || 13 || 

ವಿಶ್ವಾತ್ಮ ಮಾಧವನು ಈ ಶ್ವಾಸದಿಂದಲಿ ಸದಾ ಶ್ವಾಸ ರೂಪ ಜಪವ 
ವಿಶ್ವಸ್ಥ ಜೀವರಲಿ ಆ ಸ್ವಾಮಿ ಮಾಡಿಸುತ ಲೈಶ್ವರ್ಯದಿಂದ ಮೆರೆವನು 
ವಿಶ್ವಾಧ್ಯ ವೇದನುತ ವಿಶ್ವೇಶನಿಂದ ಸಕಲೈಶ್ವರ್ಯವಂ ಪಡೆಯಲು 
ವಿಶ್ವಾದಿಕಾರವನು  ವಿಶ್ವೋತ್ತಮಾಖ್ಯ ಹರಿ ವಿಶ್ವಾಸದಿಂ ಕೊಡುವನು  ||14 ||

ಶ್ರೀ ವಾದಿರಾಜ ಗುರು ದೇವಾಂಶ ರೀ ಹನುಮ ದೇವನ್ನ ಕಂಡು ಸ್ತುತಿಸಿ 
ಪಾವನ್ನವಾದ ಮಡಿ ಲಾವಾಸದಿಂದೊಲಿಸಿ ಕೋರ್ವಾರದೋಳಿರಿ ಸುತ
ಸಂವತ್ಸರಾದಿ ದಿನ ದಿವ್ಯಾತ್ಮ ನೀ ಪ್ರತಿಮೆ ಈ ವೇಶ್ಮದೋಳ್ ನಿಲಿಸುತ
ದೇವರ್ಷಿ ವಂದ್ಯ ಭುವಿ ಸುವಾಸ ಮಾಡಿದುದ ಆ ವಾಗ್ಮಿ ಧೇನಿಸಿದರು  || 15 ||

ಶ್ರೇಷ್ಠಾದ ಕೇಶಗಳು ತುಷ್ಟಾನ್ನ ನಾಬ್ಜವು ವಿಶಿಷ್ಟಾಕ್ಷಿ ನೋಟ ಕಿವಿಗಳ
ಕಷ್ಟಾರ್ತ ಮಾಲಿಪವು ಪುಷ್ಟಾದ ಬಾಹುಗಳು ದುಷ್ಟಾತ್ಮರಂ ವಧಿಪವು 
ಕ್ಲಿಷ್ಟಾದ ಪಂಚ ವಿಧ ಶಿಷ್ಟರ್ಗೆ ಬೋಧಿಸುವ ಸ್ಟರ್ ಇಷ್ಟಾರ್ಥದಾ ಕರಗಳು 
ಎಷ್ಟೆಂತ ಬಣ್ಣಿಸಲಿ ಮುಷ್ಟಿಂದ ಶೋಭಿಪುದು ಅಷ್ಟಾಪದಾಢ್ಯ ಗದೆಯು. || 16 ||

ವಕ್ಷ ಪ್ರದೇಶದಲಿ ಪಕ್ಷೀಶ ವಾಹನನು ಲಕ್ಷ್ಮೀ ಸಮೇತ ಮೆರೆವ 
ನಕ್ಷತ್ರದಂಥ ಮಣಿ ಯಕ್ಷೀಣ ಸೂತ್ರವದು ದೀಕ್ಷಾರ್ಹ ಸೂತ್ರ ಕಟಿಗೆ 
ಕುಕ್ಷಿಂಗೆ ಸದ್ವಸನ ವೃಕ್ಷಕ್ಕೆ ಪೋಲ್ವದೊಡೆ  ವೀಕ್ಷಾರ್ಹ ಪುಚ್ಛ  ಮೆರೆಗೆ 
ಪಕ್ಷೀಶ  ಶರ್ವಮುಖ ರಕ್ಷೋಭ್ಯ ಮಾನಸರ ಪೇಕ್ಷಾರ್ಹ ಪಾದ ಕಮಲ. || 17 ||

ಚಂದಾದ ಚೈತ್ರದಲಿ ಅಂದಾದಿ ಪಕ್ಷ ಶುಭದಿಂದೊಪ್ಪುವ ಪ್ರತಿಪದೇ
ಅಂದಾದಿಯಾಗಿ ಹರಿ ಕುಂದಾಕ್ಷಿ ಸೀತೆ ಸಹಿ ತಂದಾಗಿ ನಿಂದು ಮೆರೆಯೇ
ಒಂದೊಂದು ವಾಹನದಿ ಇಂದಿವರಾಕ್ಷ ನರವಿಂದಾಂಘ್ರಿ ಪೊಂದ ಹನುಮ
ಹೊಂದೇರ ನೇರುವನು ಮಂದಾಕ್ಷನಾದ ಶಮಿ ಸಂಧ್ಯಾರುಣಾಗುತಿರಲು. || 18 ||

ವೇದೋಕ್ತ ಯಾಗಕೃತ ಭೂದೇವ ವೃಂದವದು ವೇದಾಂಗಮಂ ಪಠಿಸಲು
ವೇದಾಭಿಮಾನಿ ರಥ ಪಾದಾಬ್ಜ ವೇದಿಕೆಗೆ ಮೋದಾಬ್ಧಿಯಿಂ ಬರುವುದು
ಈ ದಿವ್ಯ ವಾದ್ಯ ನಿದ್ರಾದೇವಿ ದುಂದುಭಿ ಗೆ ಸಾದೃಶ್ಯ ಮಾಗೆಸೆವುದು
ಈ ದಿವ್ಯ ಉತ್ಸವವ ನಾದೇವ ವೃಂದವದು ಮೈದೋರಿ ಈಕ್ಷಿಸುವುದು. || 19 ||

ಶ್ರೀ ಕೊರವಾರ ಪುರದೀ ಕೋವಿದಾಗ್ರಣಿಯ ಈ ಕೋಮಲಾಂಘ್ರಿ ಭಜಿಸಲ್
ಶ್ರೀಕಾಂತ ದಾಸರಲಿ ತಾ ಕೂಡಿಸೆಮ್ಮ ನಿವ ನಾಕಾಂಕ್ಷೆ ಪೂರ್ಣಗೊಳಿಪ
ನಾಕೇಶ ವಂದ್ಯಾ ನಿವ ನಾಕೇಶ ವಾಂಘ್ರಿಯಲಿ ಏಕಾಗ್ರ ನಿಷ್ಠೆ ಕೊಡುತ
ಪ್ರಾಕಾಮ್ಯ ನೀಡಿ ಭವ ಸಂಕೋಲೆಯಂ ಕಡಿದು ವೈಕುಂಠ ಸೌಖ್ಯ ಕೊಡುವ || 20 ||

ಪ್ರಾಣೇಶನಿ ಸ್ತುತಿಯಲೀನಾದೆ ಮಾನಸದಿ ಚೆನ್ನಾಗಿ ತಾ ಪಠಿಸುವ
ದೀನಾರ್ತ ಮಾನವನ ನೀನಾಥ ತಾ ಪೊರೆವ ದಾನೀಶನೀ ಹನುಮನು
ಶ್ರೀನಾಥ ಭಕ್ತನಿಗೆ ನೀನೆಂದು ನಂಬಿದರೆ ಧನ್ಯಾತ್ಮ ತಾನೊಲಿವನು
ಪ್ರಾಣೇಶ ತಾನೊಲಿಯೇ ಶೋಣಾಂಘ್ರಿಯಾ ತೊರವಿಯಾ ನಾರಸಿಂಹ ನೊಲಿವ || 21 ||
ಶ್ರೀ ಮದ್ವೇಶಾರ್ಪಣಮಸ್ತು



No comments:

Post a Comment