Saturday, May 18, 2019

TEERTHA HOLY BATH ( ತೀರ್ಥಸ್ನಾನ )

ಸಂಗ್ರಹಿತ 
ತೀರ್ಥಸ್ನಾನದ ವಿಧಿವಿಧಾನಗಳು
ಸ್ನಾನವನ್ನು ಒಂದು ಧಾರ್ಮಿಕ ವಿಧಿಯಾಗಿ, ಪವಿತ್ರ ಕರ್ಮವಾಗಿ ನಡೆಸುವಾಗ ಅದಕ್ಕೆ ವಿಧಿಸಲಾದ ಆರು ಅಂಗಗಳು ಇಂತಿವೆ: 
೧. ಸಂಕಲ್ಪ, 
೨. ಸ್ತುತಿ, 
೩. ಅರ್ಘ್ಯ, 
೪. ಅವಗಾಹನಸ್ನಾನ, 
೫. ತರ್ಪಣ ಮತ್ತು 
೬. ಪೂಜೆ

೧. ಸಂಕಲ್ಪ: ಇಂಥಾ ದೇಶ, ಇಂಥಾ ಕಾಲದಲ್ಲಿ, ಇಂಥಾ ಫಲವನ್ನು ಬಯಸಿ, ಇಂಥಾ ದೇವತೆಯ ಪ್ರೀತಿಯನ್ನು ಗಳಿಸಲು ಈ ತೀರ್ಥದಲ್ಲಿ ಅವಗಾಹನ ಸ್ನಾನ[ಮುಳುಗಿ ಸ್ನಾನ] ಮಾಡುವೆನೆಂದು ಘೋಷಿಸುವುದು.
                            ಯೋಗ್ಯ ಫಲವನ್ನು ಬಯಸಿ ಕರ್ಮವನ್ನು ಮಾಡುವುದು ತಪ್ಪಲ್ಲ, ಅನ್ಯಮನಸ್ಕರಾಗಿ ದುಷ್ಕರ್ಮಗಳನ್ನು ಮಾಡುವುದಕ್ಕಿಂತಾ ಫಲವನ್ನು ಬಯಸಿ ಉತ್ತಮಕರ್ಮವನ್ನು ಮಾಡುವುದು ವಿಹಿತವಾದದ್ದು-ಅದು ಸಕಾಮಕರ್ಮವೆನಿಸುತ್ತದೆ. ಯಾವ ಫಲವನ್ನೂ  ಬಯಸದೇ ಕೇವಲ ಭಗವತ್ ಪ್ರೀತಿಗಾಗಿ ಮಾಡುವ ಕರ್ಮ ಸಕಾಮಕರ್ಮಕ್ಕಿಂತಾ ಮೇಲು-ಅದು ನಿಷ್ಕಾಮಕರ್ಮವೆನಿಸುತ್ತದೆ.  ನಮಗೆ ಕಾಮನೆಯೂ ಇಲ್ಲ, ಯಾವ ಕರ್ಮವೂ ಬೇಡಾ ಎನ್ನುವುದು ತಾಮಸ ಭಾವನೆ ಎನಿಸಿಕೊಳ್ಳುತ್ತದೆ! 
೨. ಸ್ತುತಿ: ಎಲ್ಲ ನದಿಗಳಲ್ಲೂ ಗಂಗೆಯ ಸನ್ನಿಧಾನವಿದೆ. ಆದರಿಂದ ಸ್ನಾನಕ್ಕೂ ಮೊದಲು ಗಂಗಾ ಸ್ತುತಿಯ ಜೊತೆಗೆ ಇತರ ನದಿಗಳ ಕುರಿತು ಸ್ತುತಿಗಳನ್ನು ಪಠಿಸಿ ಪ್ರಾರ್ಥಿಸುವುದು ಅಗತ್ಯ. 
೩. ಅರ್ಘ್ಯ: ಪರಮಾತ್ಮ, ಇಷ್ಟದೇವತೆ, ಸೂರ್ಯ, ಗಂಗೆ ಇತ್ಯಾದಿಯಾಗಿ ದೇವರಿಗೆ ಬೊಗಸೆಯಲ್ಲಿ ನೀರನ್ನು ತುಂಬಿಕೊಂಡು ಎತ್ತಿ ಸ್ತುತಿಪೂರ್ವಕವಾಗಿ ಅರ್ಪಿಸುವುದು ಅರ್ಘ್ಯವೆನಿಸುತ್ತದೆ.
೪. ಅವಗಾಹನ ಸ್ನಾನ: ನೀರಿನಲ್ಲಿ ಮೂರಾವರ್ತಿ ಮುಳುಗುಹಾಕುವುದು ಮತ್ತು ಪ್ರಾಣಾಯಾಮ ಬಲ್ಲವರಾದರೆ ಅಲ್ಲೇ ಕುಂಭಕ ಪ್ರಾಣಾಯಾಮಮಾಡಿ ಶಕ್ತ್ಯಾನುಸಾರ ಜಪವನ್ನು ನಡೆಸುವುದು. [ಪ್ರಾಣಾಯಾಮ ಅರಿಯದವರು ಹಾಗೆ ಪ್ರಯತ್ನಿಸಬಾರದು]
೫. ತರ್ಪಣ: ನೀರಿನಲ್ಲಿಯೇ ನಿಂತು, ಋಷಿಗಳಿಗೆ, ಪಿತೃಗಳಿಗೆ ನೀರಿನಿಂದ ತರ್ಪಣ ಕೊಡುವುದು.
೬. ಪೂಜೆ: ನೀರಿನಿಂದ ಮೇಲೆದ್ದು ಹೊರಗೆಬಂದು ಮೈ ಒರೆಸಿಕೊಂಡು, ಶುದ್ಧವಸ್ತ್ರ ಧರಿಸಿ, ಸಂಕ್ಷೇಪವಾಗಿ  ಇಷ್ಟದೇವತೆಯನ್ನು ಪೂಜೆಮಾಡುವುದು, ಮಾಡಿದ ಪೊಜೆಯ ಫಲಪ್ರಾಪ್ತಿಗಾಗಿ ಫಲ-ತಾಂಬೂಲ ಮತ್ತು ದಕ್ಷಿಣೆಗಳನ್ನು ದಾನಮಾಡುವುದು. ಮಧ್ಯೆ ಮಧ್ಯೆ ಆಗಿರಬಹುದಾದ ಲೋಪದೋಷಗಳಿಗಾಗಿ ಪ್ರಾಯಶ್ಚಿತ್ತವಾಗಿ ಹೇಳಿರುವ ನಾಮ ಜಪಮಾಡುವುದು ಮತ್ತು ಅಂತ್ಯದಲ್ಲಿ ಎಲ್ಲಾ ಕರ್ಮವನ್ನೂ ಭಗವಂತನ ಪಾದಾರವಿಂದಗಳಲ್ಲಿ ಸಮರ್ಪಿಸಿ ಧನ್ಯರಾಗುವುದು. 
ಗಂಗೆ-ಯಮುನೆ-ಸರಸ್ವತಿಯರ ತ್ರಿವೇಣಿ ಸಂಗಮದಲ್ಲಿ ಜನ್ಮದಲ್ಲಿ ಒಮ್ಮೆಯಾದರೂ ಸ್ನಾನಮಾಡಲೇ ಬೇಕೆಂಬುದು ಭಕ್ತ-ಭಾವುಕರ ಆಸೆ. ’ಬಿಳಿ ಮತ್ತು ಕಪ್ಪು ನದಿಗಳು ಸೇರುವೆಡೆಯಲ್ಲಿ ಸ್ನಾನಮಾಡಿದರೆ ಸ್ವರ್ಗಕ್ಕೆ ಏರುವರು ಅಲ್ಲಿ ತಮ್ಮ ದೇಹಗಳನ್ನು ಬಿಡುವ ಧೀರರು ಅಮೃತತ್ವವನ್ನು ಹೊಂದುವರು ’ ಎಂದು ವೇದದಲ್ಲಿ ಹೇಳಿದೆ. ಮನುಸ್ಮೃತಿ ಅದನ್ನೇ ಹೀಗೆ ತಿಳಿಸುತ್ತದೆ : ಜಹ್ನು ಋಷಿಯ ಮಗಳಾದ ಗಂಗೆ ಬಿಳಿಯ ಬಣ್ಣದ ಅಲೆಗಳಿಂದಲೂ ಸೂರ್ಯನ ಮಗಳಾದ ಯಮುನೆ ಕಪ್ಪುಬಣ್ಣದ ಅಲೆಗಳಿಂದಲೂ ಶೋಭಿಸುತ್ತಾರೆ. ಆ ನದಿಗಳು ಎಲ್ಲಿ ಸೇರುತ್ತವೆಯೋ ಮತ್ತು ಎಲ್ಲಿ ಅಕ್ಷಯವಾದ ಆಲದಮರ ಇದೆಯೋ ಆ ಸ್ಥಳವೇ ತೀರ್ಥರಾಜ ಪ್ರಯಾಗವಾಗಿ ಮೆರೆಯುತ್ತಿದೆ.

ಸ್ನಾನದ ಮಹತ್ವ
ಬೇಗ ಏಳು- ಬೇಗ ಮಲಗು ಪದ್ಧತಿ ಈಗಿಲ್ಲ. ರಾತ್ರಿ 12ರ ಮೇಲೆ ನಿದ್ರೆ ಮಾಡುವವರ ಸಂಖ್ಯೆಯೇ ಹೆಚ್ಚು. ಇದರಿಂದಾಗಿ ಬೆಳಿಗ್ಗೆ ಏಳುವುದು ತಡವಾಗುತ್ತದೆ. ಸೂರ್ಯೋದಯಕ್ಕಿಂತ ಮೊದಲ ಸ್ನಾನ ಮಾಡುವವರ ಸಂಖ್ಯೆ ಅತೀ ಕಡಿಮೆ. ಸೂರ್ಯ ನೆತ್ತಿ ಮೇಲೆ ಬಂದರೂ ಕೆಲವರಿಗೆ ಸ್ನಾನ ಆಗಿರುವುದಿಲ್ಲ. ನೀವು ಇಂತವರಲ್ಲಿ ಒಬ್ಬರಾಗಿದ್ದರೆ ಎಚ್ಚರ. 
ನೀವು ಸ್ನಾನ ಮಾಡುವ ಸಮಯ ನಿಮ್ಮ ಸುಖ, ಸಂತೋಷ, ಆರ್ಥಿಕ ವ್ಯವಸ್ಥೆ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. 
ಧರ್ಮಶಾಸ್ತ್ರದಲ್ಲಿ ನಾಲ್ಕು ರೀತಿಯ ಸ್ನಾನವನ್ನು ಹೇಳಲಾಗಿದೆ. 
ಬೆಳಗಿನ ಜಾವ 4 ಗಂಟೆಯಿಂದ ಐದು ಗಂಟೆಯೊಳಗೆ ಮಾಡುವ ಸ್ನಾನವನ್ನು "ಮುನಿ ಸ್ನಾನ" ಎಂದು ಕರೆಯಲಾಗುತ್ತದೆ. ಇದು ಸ್ನಾನ ಮಾಡಲು ಅತ್ಯುತ್ತಮವಾದ ಸಮಯ. ಮುನಿ ಸ್ನಾನ ಮಾಡುವುದರಿಂದ ಮನೆಯಲ್ಲಿ ಸುಖ-ಶಾಂತಿ, ಸಮೃದ್ಧಿ ನೆಲೆಸುತ್ತದೆಂದು ನಂಬಲಾಗಿದೆ. 
ಬೆಳಿಗ್ಗೆ ಐದು ಗಂಟೆಯಿಂದ ಆರು ಗಂಟೆಯೊಳಗೆ ಸ್ನಾನ  ಮಾಡಿದರೆ ಆಯಸ್ಸು, ಕೀರ್ತಿ, ಧನ, ಸಂತೋಷ ಲಭಿಸುತ್ತದೆ. ಇದನ್ನು "ದೇವಿ ಸ್ನಾನ" ಎಂದು ಕರೆಯಲಾಗುತ್ತದೆ. ಶಾಸ್ತ್ರಗಳ ಪ್ರಕಾರ ಈ ಸ್ನಾನ ಕೂಡ ಉತ್ತಮವಾದದ್ದು.
ಮೂರನೇ ಸ್ನಾನವನ್ನು "ಮನುಷ್ಯ ಸ್ನಾನ" ಎಂದು ಕರೆಯಲಾಗುತ್ತದೆ. ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯ ಒಳಗೆ ಮಾಡುವ ಸ್ನಾನ ಇದಾಗಿದೆ. ಈ ಸಮಯದಲ್ಲಿ ಸ್ನಾನ ಮಾಡಿದರೆ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂದು ನಂಬಲಾಗಿದೆ.
ಕೊನೆಯ ಸ್ನಾನ "ರಾಕ್ಷಸಿ ಸ್ನಾನ". ಇದೀಗ ಸಾಮಾನ್ಯವಾಗಿದೆ. 8 ಗಂಟೆ ನಂತರ ಮಾಡುವ ಸ್ನಾನ ಈ ಶ್ರೇಣಿಯಲ್ಲಿ ಬರುತ್ತದೆ. ಇದನ್ನು ಧರ್ಮ ನಿಷೇಧವೆಂದು ಪರಿಗಣಿಸಲಾಗಿದೆ. ಈ ಸ್ನಾನ ಮಾಡುವುದರಿಂದ ಮನೆಯಲ್ಲಿ ಬಡತನ, ಕಲಹ, ಅಶಾಂತಿ, ಅನಾರೋಗ್ಯ ಕಾಡುತ್ತದೆ...

No comments:

Post a Comment