Friday, May 20, 2022

*Preamble of Satya Narayana vrata ಶ್ರೀ ಸತ್ಯ ನಾರಾಯಣ ವ್ರತ ಪೀಠಿಕೆ

Please listen video of this post on YouTube channel CLICK HERE 

ಶ್ರೀ ಸತ್ಯ ನಾರಾಯಣ ವ್ರತ ಪೀಠಿಕೆ

ಶ್ರೀ ಸತ್ಯನಾರಾಯಣನ ಫೋಟೋವನ್ನು ಇಟ್ಟು ,ಆರಾಧ್ಯ ಮೂರ್ತಿಯನ್ನಿಟ್ಟು ಅದಕ್ಕೆ ಅಲಂಕಾರ ಮಾಡಿ ಪೂಜೆ ಸಲ್ಲಿಸಿ ಗೌರವಯುತವಾಗಿ ಕಥೆ ವಾಚನವನ್ನು ಮಾಡುವುದೇ ಸತ್ಯನಾರಾಯಣ ಪೂಜೆ. ಅನಾದಿ ಕಾಲದಿಂದಲೂ ಕೂಡ ಸತ್ಯನಾರಾಯಣ ಪೂಜೆಯನ್ನು ನಡೆಸುತ್ತ ಬಂದಿದ್ದಾರೆ. ಈ ಸತ್ಯನಾರಾಯಣ ವೃತವನ್ನು ಸಲ್ಲಿಸಿದ ಭಕ್ತರಿಗೆ ದೇವರ ಕೃಪೆ ಬೇಗ ಸಿಗುತ್ತದೆ ಎಂದು ನಂಬಿಕೆ. ಈ ಸತ್ಯ ನಾರಾಯಣ ಪೂಜೆಯನ್ನು ಭಕ್ತಿ ಮತ್ತು ಶ್ರದ್ಧೆಯಿಂದ ನೆರವೇರಿಸಿದರೆ ಸಾಕು ಆ ಭಕ್ತರ ಎಲ್ಲ ಕಷ್ಟಗಳನ್ನು ಬೇಗ ನಿವಾರಣೆ ಮಾಡುತ್ತಾನೆ. ಸತ್ಯ ಎಂದರೆ ನಿಜ ಎಂದರ್ಥ. ನಾರಾಯಣ ಎಂದರೆ ಎಲ್ಲವನ್ನೂ ಮತ್ತು ಎಲ್ಲರನ್ನೂ ಒಳಗೊಂಡಿರುವವನು ಎಂಬ ಅರ್ಥವನ್ನು ನೀಡುತ್ತದೆ ಭಗವಾನ್ ಶ್ರೀ ವಿಷ್ಣುವಿನ ಒಂದು ರೂಪವಾದ ನಾರಾಯಣನನ್ನು ಪೂಜಿಸುವ ಮೂಲಕ ಭಕ್ತರು ತಮಗೆ ಎದುರಾದ ತೊಂದರೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತಾರೆ. 



ಸಾಮಾನ್ಯವಾಗಿ ನಮಗೆ ಎದುರಾಗುವ ಕಷ್ಟಗಳು ಈ ಜನ್ಮದ ಹಾಗೂ ಪೂರ್ವಜನ್ಮದ ಪಾಪದ ಫಲಗಳೂ ಆಗಿರಬಹುದಾಗಿದ್ದು ಇದನ್ನು ಸರಿಪಡಿಸಲೂ ಸತ್ಯ ನಾರಾಯಣ ಪೂಜೆ ಹೆಚ್ಚಿನ ಮಹತ್ವ ಪಡೆದು ಕೊಂಡಿದೆ. ಸಾಮಾನ್ಯವಾಗಿ ಈ ಸತ್ಯ ನಾರಾಯಣ ಪೂಜೆಗೆ ಸ್ನೇಹಿತರನ್ನು ಮತ್ತು ಬಂಧು ಬಳಗದ ಆಪ್ತರನ್ನು ಆಹ್ವಾನಿಸಲಾಗುತ್ತದೆ. ಆಪ್ತರಲ್ಲಿ ಬಾಂಧವ್ಯ ಇನ್ನಷ್ಟು ಹೆಚ್ಚಲು ಈ ಸಂದರ್ಭ ಅತ್ಯಂತ ಯೋಗ್ಯವಾಗಿದೆ ಇದರಿಂದ ಪೂಜೆಗೆ ಒಳಗಾಗುವ ಎಲ್ಲರೂ ನಾರಾಯಣನ ಕೃಪೆಗೆ ಪಾತ್ರರಾಗಿ ಸಂತೋಷ, ಒಗ್ಗಟ್ಟು ಸೌಹಾರ್ದ್ಯ  ಮೂಡಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಪೂಜೆಯ ಬಳಿಕ ಸತ್ಯನಾರಾಯಣನ ಕಥೆ, ಪ್ರಸಾದ ವಿತರಣೆ ಅನಿವಾರ್ಯ ಮತ್ತು ಕೀರ್ತನೆಗಳ ವಾಚನವನ್ನು ಮಾಡುತ್ತಾರೆ. ಆಗ ಅಲ್ಲಿ ನೆಲೆಸಿರುವ ಎಲ್ಲರೂ ಕೂಡ ಸತ್ಯನಾರಾಯಣನ ಸ್ತುತಿ, ಭಜನೆ ಮತ್ತು ಭಕ್ತಿಗೀತೆಗಳನ್ನು ಹಾಡುವ ಮೂಲಕ ಎಲ್ಲರಲ್ಲಿಯೂ ಭ್ರಾತೃತ್ವ ಮತ್ತು ಧನಾತ್ಮಕ ಶಕ್ತಿ ಆವರಿಸುತ್ತದೆ. ಇದರಿಂದ ಋಣಾತ್ಮಕ ಶಕ್ತಿ ಕಡಿಮೆಯಾಗಿ ಎಲ್ಲರ ನಡುವೆ ನಡೆಯುವ ಕಲಹ ಮತ್ತು ಮನಸ್ತಾಪಗಳಿಗೆ ಕಡಿವಾಣ ಹಾಕುತ್ತದೆ.

ಶ್ರೀ ಸತ್ಯನಾರಾಯಣನ ಕಥೆ:   ಶ್ರೀ ಸತ್ಯನಾರಾಯಣ ಕಥೆಯ ಪ್ರಕಾರ ನಾರದರು ಒಮ್ಮೆ ಭೂಲೋಕದಲ್ಲಿ ಸಂಚರಿಸುತ್ತಿದ್ದಾಗ ಭೂವಾಸಿಗಳು ತಮ್ಮ ಕೆಟ್ಟ ಆಲೋಚನೆ ಮತ್ತು ಲೋಭಿತನದ ಕಾರಣ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದುದನ್ನು ಕಂಡರು. ಇದರ ಪರಿಹಾರಕ್ಕಾಗಿ ತಕ್ಷಣ ನಾರಾಯಣನ ಬಳಿ ಬಂದ ನಾರದರು ಇದಕ್ಕೆ ಪರಿಹಾರವನ್ನು ಸೂಚಿಸುವಂತೆ ಕೇಳಿಕೊಂಡರು. ನಂತರ ನಾರಾಯಣರು ಸೂಚಿಸಿದ ಸಲಹೆಯ ಪ್ರಕಾರ ಯಾರು ಉತ್ತಮ ಕಾರ್ಯಗಳನ್ನು ಮಾಡುತ್ತಾರೋ ಅವರಿಗೆ ಅದರ ಫಲ ಖಂಡಿತಾ ಸಿಗುತ್ತದೆ. ಇದನ್ನು ಕರ್ಮಫಲ ಎಂದು ಕರೆಯುತ್ತಾರೆ. ಆ ಪ್ರಕಾರ ಕೆಟ್ಟ ಕಾರ್ಯಗಳಿಗೂ ಈ ಜನ್ಮದಲ್ಲಿ ಅಲ್ಲದಿದ್ದರೂ ಮುಂದಿನ ಜನ್ಮದಲ್ಲಿಯಾದರೂ ಇದರ ಫಲಗಳನ್ನು ಅನುಭವಿಸಲೇಬೇಕು. ಸಾಮಾನ್ಯವಾಗಿ ಪೀಡಿತನಿಗೆ ತನ್ನ ಪೀಡೆಯ ಕಾರಣವೇ ಗೊತ್ತಿರುವುದಿಲ್ಲ. ಆದ್ದರಿಂದ ಸತ್ಯನಾರಾಯಣ ಪೂಜೆಯನ್ನು ನೆರವೇರಿಸುವ ಮೂಲಕ ಈ ಫಲಗಳನ್ನು ತುಂಬಾ ಶೀಘ್ರವಾಗಿ ಅನುಭವಿಸಿ ಮುಕ್ತಿ ಪಡೆಯಲು ಸಾಧ್ಯವಾಗುತ್ತದೆ. ಭಕ್ತನು ಈ ಸಂದರ್ಭದಲ್ಲಿ ಸತ್ಯವಂತನಾಗಿರುವುದನ್ನು ಪರಿಗಣಿಸಿದ ಸತ್ಯನಾರಾಯಣನು ಈ ಫಲಗಳನ್ನು ಶೀಘ್ರವಾಗಿ ನಿವಾರಿಸಲು ಅನುಗ್ರಹ ತೋರುತ್ತಾನೆ. ಇದೇ ಈ ಪೂಜೆಯ ಮಹತ್ವವಾಗಿದೆ.

ಹಾಗಾಗಿ ಸತ್ಯನಾರಾಯಣ ಪೂಜೆಯನ್ನು ಮಾಡುತ್ತಾರೆ ಹಾಗೂ ಈ ಪೂಜೆಯನ್ನು ಮಾಡುವ ಮನೆಗೆ ಅವರು ಕರೆದಿಲ್ಲ ಎಂದರು ಕೂಡ ಹೋಗಿ ಸತ್ಯನಾರಾಯಣನ ಕೃಪೆಗೆ ಪಾತ್ರವಾಗುವುದು ಒಳ್ಳೆಯದು. ಸತ್ಯನಾರಾಯಣ ಪೂಜೆಯನ್ನು ಮಾಡುವ ಮೊದಲು ಗಣಪತಿಯನ್ನು ಪೂಜಿಸಿ, ನಂತರ ಇಂದ್ರಾದಿ, ದಶದಿಕ್ಪಾಲಕರನ್ನು, ಲೋಕಪಾಲರನ್ನು, ಕೂಡ ಪೂಜಿಸಬೇಕು. ತದನಂತರ ಸತ್ಯನಾರಾಯಣ ಅಥವಾ ವಿಷ್ಣುವನ್ನು ಪೂಜಿಸಿ. ಸತ್ಯನಾರಾಯಣನನ್ನು ಪೂಜಿಸಿದ ನಂತರ ಲಕ್ಷ್ಮೀ ಮಾತೆಯನ್ನು ಹಾಗೂ ಪೂಜೆಯ ಕೊನೆಯಲ್ಲಿ ಪರಶಿವನನ್ನು ಮತ್ತು ಬ್ರಹ್ಮದೇವನನ್ನು ಪೂಜಿಸಬೇಕು. ಪೂಜೆ ಮುಗಿದ ನಂತರ ಎಲ್ಲಾ ದೇವರಿಗೆ ಆರತಿ ಬೆಳಗಿ, ಚರಣಾಮೃತವನ್ನು ಪ್ರಸಾದವನ್ನು ಸ್ವೀಕರಿಸಿ ವಿತರಿಸುವುದು ಅವಶ್ಯಕ.

ಭಕ್ತಾಧಿಗಳ ಪ್ರಕಾರ ಸತ್ಯನಾರಾಯಣ ಸ್ವಾಮಿ ವ್ರತವನ್ನು ಆಚರಿಸಿದರೆ ಶೀಘ್ರ ಫಲಸಿದ್ಧಿ ನಿಶ್ಚಿತ ಎನ್ನಲಾಗುತ್ತದೆ. ಇದನ್ನು ಮಾಡಲು ಕಷ್ಟಪಡಬೇಕಾಗಿಲ್ಲ. ಇದಕ್ಕೆ ಸಿಕ್ಕಾಪಟ್ಟೆ ನಿಯಮಗಳು ಸಹ ಇಲ್ಲ. ಈ ವ್ರತ ಅತ್ಯಂತ ಸರಳ. ಇದರ ಮತ್ತೊಂದು ಹೆಚ್ಚುಗಾರಿಕೆ ಎಂದರೆ ಇದನ್ನು ಪುರೋಹಿತರ ಸಮ್ಮುಖದಲ್ಲಿಯೇ ಮಾಡಬೇಕೆಂಬ ನಿಯಮವು ಸಹ ಇಲ್ಲ. ಇದನ್ನು ಜಾತಿ, ಮತ ಮತ್ತು ಲಿಂಗ ಬೇಧವಿಲ್ಲದೆ ಯಾರು ಬೇಕಾದರು ಮಾಡಬಹುದು. ಇತರೆ ವ್ರತಗಳಂತೆ ಇದಕ್ಕಾಗಿ ದೇವರ ಚಿತ್ರವು ಸಹ ಅವಶ್ಯಕತೆ ಇಲ್ಲ.ಇದನ್ನು ಮಾಡಲು ಶಾಶ್ವತವಾದ ಪೂಜಾಗೃಹವು ಸಹ ಅವಶ್ಯಕತೆ ಇಲ್ಲ. ಇದನ್ನು ನೀವು ಮನೆಯಲ್ಲಿ ಅಥವಾ ದೇವಾಲಯದಲ್ಲಿ ಎಲ್ಲಿ ಬೇಕಾದರೂ ಮಾಡಬಹುದು. ಈ ಪೂಜೆಯು ಕಲಿಯುಗದ ಪರಿಕಲ್ಪನೆಯ ಮೇಲೆ ರೂಪಿತಗೊಂಡಿದೆ. ಇದನ್ನು ಮಾಡಲು ಭಕ್ತಾಧಿಗಳು ವೇದಗಳನ್ನು ತಿಳಿದುಕೊಂಡಿರಬೇಕಾದ ಅಗತ್ಯವಿಲ್ಲ. ಅಲ್ಲದೆ ಮೋಕ್ಷವನ್ನು ಪಡೆಯಲು ಇವರು ಮಂತ್ರಗಳನ್ನು ಮತ್ತು ತಾಂತ್ರಿಕ ವಿದ್ಯೆಯನ್ನು ತಿಳಿದುಕೊಂಡಿರಬೇಕಾದ ಅಗತ್ಯವಿಲ್ಲ. ಭಕ್ತಿ ಮತ್ತು ಸಮರ್ಪಣಾ ಮನೋಭಾವದಿಂದ ನಾರಾಯಣನನ್ನು ಧ್ಯಾನ ಮಾಡಿದರೆ ಸಾಕು. ಈ ವ್ರತವನ್ನು ಅದ್ಧೂರಿಯಾಗಿ ಸಹ ಮಾಡಬೇಕಾದ ಅಗತ್ಯವಿಲ್ಲ. ಇದರ ವಿಧಿ ವಿಧಾನಗಳು ಸರಳಾತಿ ಸರಳ. ವ್ರತ ಮಾಡಿದರೆ ಸಾಕು ಅದಕ್ಕೆ ಪ್ರತಿಯಾಗಿ ಶ್ರೀಮನ್ ನಾರಾಯಣನ ಅನುಗ್ರಹವು ನಿಮಗೆ ತಪ್ಪದೆ ದೊರೆಯುತ್ತದೆ.

ಯಾರು ವ್ರತವನ್ನು ಮಾಡಬಹುದು : 

ವಿವಾಹವಾಗದವರು , ವಿವಾಹವಾದವರು , ಒಬ್ಬಂಟಿಗರಾದವರು , ದಂಪತಿಗಳು , ಹೆಣ್ಣುಮಕ್ಕಳು , ಗಂಡುಮಕ್ಕಳು , ವಿಧವೆಯರು , ವಿಧುರರು , ಶಿಷ್ಯರು , ಸೇವಕರು,ಸಮೂಹದಲ್ಲಿಯೂ  ಯಾರುಬೇಕಾದರು ಈ ವ್ರತವನು ಮಾಡಬಹುದು . ಯಾರು ತಮ್ಮ ಅಭ್ಯುದಯ , ಹಿತಚಿಂತನ ಬಯಸುತ್ತಾರೋ ಅವರೆಲ್ಲರೂ ಈ ವ್ರತವನ್ನು ಮಾಡಲು ಅಭ್ಯಂತರವಿಲ್ಲ .

ಎಲ್ಲಿ ವ್ರತವನ್ನು ಮಾಡಬಹುದು :

ಸ್ವಂತ ಮನೆ , ಬಾಡಿಗೆ ಮನೆ , ಗುಡಿಸಲಲ್ಲಿ , ಗಿಡದ ಕೆಳಗೆ , ನದಿ ತಟದಲ್ಲಿ, ದೇವಾಲಯಗಳಲ್ಲಿ , ಹೊಲ , ತೋಟ , ಗದ್ದೆಗಳಲ್ಲಿಯು ಪೂಜೆ ಮಾಡಬಹುದು . ಯಾವ ಸ್ಥಳ ನಿಮಗೆ ಪ್ರಶಸ್ಥಯೆನಿಸುವುದೋ ಅಲ್ಲಿ ಶ್ರೀ ಸತ್ಯ ನಾರಾಯಣ ಪೂಜೆ ಮಾಡಬಹುದು .

ಯಾವ ದಿನದಂದು ವ್ರತವನ್ನು ಮಾಡಬಹುದು :

ಹುಣ್ಣಿಮೆ , ಅಮಾವಾಸೆ , ಸಂಕ್ರಮಣ ಇತ್ಯಾದಿಗಳ ಪರ್ವಕಾಲ , ನಾಮಕರಣ , ಮುಂಜಿವೆ , ಮದುವೆ , ಇತ್ಯಾದಿ ಕಾರ್ಯಗಳ ನಂತರ ಯಾವ ದಿವಸವಾದರೂ , ಅನುಕೂಲಕರ ಕಂಡದಿನದಂದು ವ್ರತ ಮಾಡಬಹುದು . ನಿಮಗೆ ಆನಂದ ತಂದ ಘಟನೆಗಳ ನಂತರ ನಿಮ್ಮ ಆನಂದವನ್ನು ದ್ವಿಗುಣಿತವಾಗಿ ಮಾಡಲು ಇಷ್ಟ ಮಿತ್ರ ಬಾಂಧವರೊಡಗೂಡಿ ಪತ್ನಿ ಸೋಸೆಯಂದಿರು, ಮಕ್ಕಳೊಡಗೂಡಿ , ನೆರೆಹೊರೆಯವರ ಜೊತೆ ತಮಗಾದ ಆನಂದವನ್ನು ಹಂಚಿ ಕೊಳ್ಳುವುದಕ್ಕಾಗಿ ಹಿರಿಯರು ಮಾಡಿರುವ ವ್ರತ ರೂಪದ ಕಾರ್ಯ , ಇದರಿಂದ ವೈಮನಸ್ಸುಗಳು, ಮನಸ್ತಾಪಗಳು  ದೂರಾಗಿ ಸೌಹಾರ್ದ್ಯ ತಲೆದೋರಬಹುದು .

ಪರಿಧಾನ : ಪೂಜೆಗೆ ಉಪಸ್ಥಿತರಾಗುವವರು ಮಡಿ,ಮಡಿ ಪಂಚೆ, ಮಡಿ ಧೋತರ, ಶುಭ್ರ ಲುಂಗಿ, ಧಾಬಳಿ, ಇತ್ಯಾದಿಯಾಗಿ ಯಾವುದಾದರೂ ಪರಿಧಾನ ಮಾಡಬಹುದು.ಮೈಮೇಲೆ ಹೊದ್ದುಕೊಳ್ಳಲು ಉಪವಸ್ತ್ರ, ತಮ್ಮ ತಮ್ಮ ಸಂಪ್ರದಾಯಕ್ಕನುಗುಣವಾಗಿ ಲಾಂಛನಗಳನ್ನು ಹಚ್ಚಿಕೊಳ್ಳುವುದನ್ನು ಮರೆಯಬಾರದು.

ರೀತಿ :  ಶ್ರೀ ಸತ್ಯನಾರಾಯಣ ಪೂಜಾ ಸಂಕಲ್ಪ,ಗಣಪತಿ ಪೂಜಾ,ಪ್ರಾರ್ಥನಾ,ಕಲಶ ಸ್ಥಾಪನೆ –ಶಾಲಿಗ್ರಾಮ,ವಿಷ್ಣು ಪ್ರತಿಮೆ,ದೊಗ್ಗಾಲು ಕೃಷ್ಣ,ಲಿಂಗ ಅಥವಾ ನಿಮ್ಮ ಮನೆತನದ ರೂಢಿಗನುಗುಣವಾಗಿ ದೇವತಾ ಪ್ರತೀಕ. ಶಂಖ ಘಂಟಾ ಮಂಟಪ ಪೂಜಾ,ನವಗ್ರಹಾದಿ ಪೂಜಾ, ಅಷ್ಟ ದಿಕ್ಪಾಲಕರ ಪೂಜಾ, ಆಮೇಲೆ  ಶ್ರೀ ಲಕ್ಷ್ಮೀ ಸಹಿತ ಸತ್ಯನಾರಾಯಣ ಪೂಜಾ – ಷೋಡಶೋಪಚಾರ ಪೂಜಾ , ಪಂಚಾಮೃತ ಅಭಿಷೇಕ, ಶುದ್ಧೋದಕ ಅಭಿಷೇಕ, ( ಮನೆಯ ದೇವರ ಪೂಜೆ ಮುಗಿಸಿ ನೈವೇದ್ಯದ ಜೊತೆಗೆ ಶ್ರೀ ಸತ್ಯನಾರಾಯಣ ದೇವರ ನೈವೇದ್ಯ ತೋರಿಸುವುದು.) ಮನೆಯ ಯಾರಾದರು ಹಿರಿಯರು ಮನೆಯ ದೇವರ ನೈವೇದ್ಯಾನಂತರ ವೈಶ್ವದೇವ,ಬಲಿಹರಣಾದಿಗಳನ್ನು ಮುಗಿಸಿ ಭೂತ ಬಲಿಯನ್ನಿರಿಸಿ ಕೈಕಾಲು ತೊಳೆದು ಹಿನ್ನೋಡದೇ ಬಂದು ದೇವರಿಗೆ ವಂದಿಸಿ ಕಥಾ ಶ್ರವಣ ಮಾಡಬೇಕು. ಅನಂತರ ಮಹಾನಿರಾಂಜನ ದೀಪ ( ಐದು ಹೂರಣ, ಕೊಬ್ಬರಿ ಬೆಲ್ಲದ ಆರತಿಗಳು ) ಗಂಟೆ ಜಾಗಟೆ ಸಹಿತ ಆರತಿ ಮಾಡುವುದು, ಮಂತ್ರ ಪುಷ್ಪ,ದೀರ್ಘ ದಂಡ ನಮಸ್ಕಾರ,ಪ್ರಾರ್ಥನೆ, ಕ್ಷಮಾಪಣೆ,( ಇಷ್ಟಾರ್ಥಗಳನ್ನು ಬೇಡಿಕೊಳ್ಳುವ ಸಮಯ ) ಮಂಗಳಾರತಿ. 

                  ಪೂಜೆ ಮುಗಿದಾದ ನಂತರ ಮನೆಯ ಎಲ್ಲರೂ ,ಬಂಧು ಬಾಂಧವರು ,ಇಷ್ಟ ಮಿತ್ರರು ಎಲ್ಲರ ನಮಸ್ಕಾರಾನಂತರ ಯಜಮಾನನು ನಮಸ್ಕರಿಸುವುದು. ಎಲ್ಲರಿಗೂ ತಪ್ಪದೆ,ಮರೆಯದೆ ಪ್ರಸಾದ ಕೊಡುವುದು ಅವಶ್ಯಕ. ಬೇಡಿ ,ಕೇಳಿ ಪ್ರಸಾದ ತೆಗೆದುಕೊಂಡರೂ ತಪ್ಪಿಲ್ಲ.

ಅದೇ ವೇಳೆ,ಅದೇ ದಿವಸ ಸಂಜೆ, ಮರುದಿನ ಮುಂಜಾನೆ ಅನುಕೂಲವಾದಂತೆ ಪಂಚೋಪಚಾರ ಪೂಜೆಯ ನಂತರ ಉತ್ತರ ಪೂಜೆ ಮಾಡುವುದು 

|| ಶ್ರೀ ಕೃಷ್ಣಾರ್ಪಣಮಸ್ತು ||   

ಶ್ರಿ ಸತ್ಯ ನಾರಾಯಣ ವ್ರತ ಕಥಾ CLIK HERE     

ಶ್ರೀ ಸತ್ಯ ನಾರಾಯಣ ಪೂಜಾ    CLIK HERE                              


No comments:

Post a Comment