Friday, July 24, 2020

GOTRA VEDA BRANCH SUTRA (ಗೋತ್ರ-ವೇದ-ಶಾಖೆ-ಸೂತ್ರ)

              ಗೋತ್ರ-ವೇದ-ಶಾಖೆ-ಸೂತ್ರ
.    
 
          ಬ್ರಾಹ್ಮಣರಲ್ಲಿ ನೂರಾರು ಒಳಪಂಗಡಗಳಿವೆ. ಅವುಗಳಲ್ಲಿ ’ವೈಷ್ಣವ , ಸ್ಮಾರ್ತ’  ಇನ್ನಿತರ ಹೀಗೆ ಇರುವುದು ಜನಜನಿತವಾದ ಮಾತು. ಆದರೇ ಇದು ಶುದ್ಧವಾದ ನಿರ್ಣಯವಲ್ಲ. ಏಕೆಂದರೆ ಈ ನಿಲುವು ತಪ್ಪುಗ್ರಹಿಕೆಯ ಆಧಾರದ ಮೇಲೆ ನಿಂತಿದೆ. ಆ ತಪ್ಪು ಗ್ರಹಿಕೆಯೇನು? ಅಷ್ಟಕ್ಕೂ ಈ ಪಂಗಡಗಳ ವಿಭಾಗೀಕರಣಕ್ಕೆ ಆಧಾರವೇನು? ಸಂಪ್ರದಾಯ ಎಂದರೇನು? ಶಾಖೆ ಎಂದರೇನು? ಮತ ಎಂದರೇನು? ಇಂತಹ ಮೂಲಭೂತವಾದ ಆದರೆ ಎಲ್ಲರೂ ತಿಳಿದರಲೇಬೇಕಾದ ಕೆಲವು ಪರಿಕಲ್ಪನೆಗಳನ್ನು ಕುರಿತು ವಿಶ್ಲೇಷಿಸುವುದೇ ಈ ಲೇಖನದ ವಿಷಯ. ಈ ವಿಷಯವನ್ನು ಸ್ಪಷ್ಟವಾಗಿ ಅರಿತು ಸ್ಮಾರ್ತ, ವೈಷ್ಣವ, ತ್ರಿಮತಸ್ಥ, ಇತ್ಯಾದಿ ಪದಗಳನ್ನು ಅವುಗಳು ಸೂಚಿಸುವ ಅರ್ಥದಲ್ಲಿಯೇ ಬಳಸುವಂತಾಗಬೇಕೆಂಬುದು ಈ ಲೇಖನದ ಉದ್ದೇಶ.

ಬ್ರಾಹ್ಮಣನೊಬ್ಬನು ತನ್ನ ಪರಿಚಯ ಮಾಡಿಕೊಳುವಾಗ ತನ್ನ ಗೋತ್ರ-ಪ್ರವರಗಳನ್ನು ಹೇಳಿ ಆಮೇಲೆ ಅಭಿವಾದಿಸುತ್ತಾನೆ. ಅರ್ಥಾತ್ ಈ ಗೋತ್ರ-ಪ್ರವರಗಳು ಅವನ ಐಡೆಂಟಿಟಿ; ಅಸ್ತಿತ್ವದ ಗುರುತುಪತ್ರ. ಅದನ್ನು ಹೇಳುವ ಕ್ರಮ ಹೀಗಿರುತ್ತದೆ.
“೧.ಚತುಃಸಾಗರಪರ್ಯಂತಂ ಗೋಬ್ರಾಹ್ಮಣೇಭ್ಯಃ ಶುಭಂಭವತು | ೩.ವಸಿಷ್ಠ-ಮೈತ್ರಾವರುಣ-ಕೌಂಡಿನ್ಯ ಇತಿ ತ್ರಯಾಋಷಿಃ ತ್ರಿಃಪ್ರವರಾನ್ವಿತ ೨.ವಸಿಷ್ಠ ಗೋತ್ರೋತ್ಪನ್ನಃ ೪.ಋಗ್ವೇದಾಂತರ್ಗತ ೫.ಆಶ್ವಲಾಯನ ಸೂತ್ರ ೬.ಶಾಖಲ ಶಾಖಾಧ್ಯಾಯೀ _____ಶರ್ಮಾ ಅಹಮ್| ಭೋಃ ಅಭಿವಾದಯೇ|” 
ಈ ಎರಡೂವರೆ ಸಾಲುಗಳು ಬಹಳಷ್ಟು ಅರ್ಥವನ್ನು ವಿವರಣೆಗಳನ್ನು ಒದಗಿಸುತ್ತವೆ. ಒಂದೊಂದಾಗಿ ವಿಶ್ಲೇಷಿಸೋಣ.
೧. ಮೊದಲನೇಯ ವಾಕ್ಯವು ಭೌಗೋಳಿಕವಾಗಿ ನಮ್ಮ ಮೂಲವನ್ನು ಹೇಳುತ್ತದೆ. ಅಂದರೇ ನಮ್ಮ ಮೂಲಸ್ಥಾನ, ನೇಟಿವ್. ಚತುಃಸಾಗರಪರ್ಯಂತದ ಭೂಭಾಗ ನಮ್ಮ ಮೂಲಸ್ಥಾನ. ಆಧುನಿಕ ವಿಜ್ಞಾನಿಗಳ ಪ್ರಕಾರ ಭೂಮಂಡಲ ಮೊದಲು ಒಂದೇ ಆಗಿದ್ದು ನಂತರ ಕಾಲಕ್ರಮೇಣ ಭೂಭಾಗಗಳು ದೂರ ಸರಿಯುತ್ತ ಇವತ್ತಿನ ಏಳು ಖಂಡಗಳಾದವು. ಭೂಭಾಗ ಒಂದೇ ಆಗಿದ್ದಾಗ ಈ ಮೇಲಿನ ಮಾತು ಹೇಳಿದ್ದು. ಅದನ್ನು ನಾವಿಂದಿಗೂ ಮರೆತಿಲ್ಲ. ಇದರ ಆಧಾರದ ಮೇಲೆ ’ಮೂಲನಿವಾಸಿಗಳು ದ್ರಾವಿಡರು, ಆರ್ಯರು ಹೊರಗಿನಿಂದ ಬಂದವರು” ಎಂಬ ವಾದ ಬಿದ್ದು ಹೋಗುತ್ತದೆ.  ’ವಸುಧೈವ ಕುಟುಂಬಕಮ್’ ಎಂಬ ಆರ್ಷವಾಣಿಯನ್ನು ಎತ್ತಿಹಿಡಿಯುತ್ತದೆ.
೨. ಗೋತ್ರ:
ಗೋತ್ರವು ನಮ್ಮಡಿಎನ್ಎ ಯನ್ನು ಸೂಚಿಸುತ್ತದೆ. ಕಲ್ಪದ ಆದಿಯಲ್ಲಿ ಬ್ರಹ್ಮ ಮಾನಸ ಪುತ್ರರಾದ ಸಪ್ತರ್ಷಿಗಳ ಸಂತಾನ ನಾವುಗಳು. ಅರ್ಥಾತ್ ನಮ್ಮ ದೇಹದಲ್ಲಿ ಅಗಸ್ತ್ಯ, ವಸಿಷ್ಠ , ಭರದ್ವಾಜ, ಕಶ್ಯಪ ಅತ್ರಿ,ಇತ್ಯಾದಿಗಳ ರಕ್ತವೇ ಹರಿಯುತ್ತಿದೆ. ನಾವುಗಳು ಮನಸ್ಸುಮಾಡಿದರೆ ಆ ಋಷಿಗಳ ಎತ್ತರಕ್ಕೆ ಬೇಳೆಯಬಹುದು. ಏಕೆಂದರೇ ಅವರ ಡಿಎನ್ಎ ನೇ ನಮ್ಮ ರಕ್ತಕಣದಲ್ಲಿರುವುದು. ಬೇಕಾಗಿರುವುದು ಅದರ ಶುದ್ಧೀಕರಣ ಮತ್ತು ಸಶಕ್ತೀಕರಣ.
೩. ಪ್ರವರ:
ಸಪ್ತರ್ಷಿಗಳ ನಂತರದ ಕಾಲದಲ್ಲಿ ಯಾರು ಯಾರನ್ನು ಮದುವೆಯಾಗಬಹುದು ಎಂಬುದನ್ನಿಟ್ಟುಕೊಂಡು ಒಂದು ವ್ಯವಸ್ಥೆಮಾಡಿಕೊಂಡರು. ಈ ಒಂದು/ಮೂರು/ಐದು/ಏಳು ಋಷಿಗಳಾದ ನಾವುಗಳು ಮೂಲತಃ ಒಂದೇ ಋಷಿಯ ಸಂತಾನ ಪರಂಪರೆಯಾದ್ದರಿಂದ ಈ ಗುಂಪನಿಂದ ಹೊರಗಿನ ಋಷಿ ಸಂತಾನವನ್ನು ಮದುವೆಯಾಗುವುದು. ಈ ವ್ಯವಸ್ಥೆಯೇ ಪ್ರವರ ವ್ಯವಸ್ಥೆ. ಇದು ಪ್ರಧಾನವಾಗಿ ಮದುವೆಯ ಉದ್ದೇಶದಿಂದಲೇ ನಿರ್ಮಾಣವಾದ ವ್ಯವಸ್ಥೆ. 
೪.ವೇದ:
ಗೋತ್ರ-ಪ್ರವರಗಳ ಜನನ, ರಕ್ತಮೂಲದ ಆಧಾರಮೇಲೆ ವಿಭಾಗಗಳಾದರೇ ವೇದ ಅಧ್ಯಯನ ಪರಂಪರೆಯ ಆಧಾರದ ಮೇಲೆ ನಿರ್ಮಿಸಲಾದ ವರ್ಗೀಕರಣ. ಭಗವಾನ್ ಬಾದರಾಯಣರು ತಮ್ಮ ನಂತರದ ಶಿಷ್ಯರಲ್ಲಿ ಸಮಗ್ರವೇದವನ್ನು ಅಭ್ಯಸಿಸಿ ಅರ್ಥಮಾಡಿಕೊಂಡು ಆಚರಣೆಯಲ್ಲಿ ತರುವುದರ ಮುಖಾಂತರ ವೇದದ ರಕ್ಷಣೆಯಲ್ಲಿ ಅಸಮರ್ಥರಾಗಿರುವುದನ್ನು ಕಂಡಿರಬಹುದು. ಅದಕ್ಕಾಗಿ ಒಂದೇ ಆಗಿರುವ ವೇದರಾಶಿಯಿಂದ ಛಂದೋಬದ್ಧವಾಗಿರುವ ಮತ್ರಗಳನ್ನೆಲ್ಲಾ ಒಂದುಕಡೆ ಸೇರಿಸಿ ತಮ್ಮ ಶಿಷ್ಯನಾದ ಪೈಲ ಎಂಬ ಋಷಿಗೆ ಒಪ್ಪಿಸಿದರು. ಅದು ’ಋಗ್ವೇದ’ವೆನಿಸಿಕೊಂಡಿತು. ಋಕ್ ಎಂದರೇ ಛಂದೂಬದ್ಧವಾಗಿರುವುದು ಅಂದರ್ಥ. ಅಂತೆಯೇ ಗೇಯಾನುಕೂಲವಾದ ಮಂತ್ರಗಳನ್ನು ಒಂದುಕಡೆ ತಂದು ಅವನ್ನು ತಮ್ಮ ಇನ್ನೊಬ್ಬ ಶಿಷ್ಯನಾದ ಜೈಮಿನಿ ಎಂಬ ಋಷಿಗೆ ಒಪ್ಪಿಸಿದರು. ಅದು ’ಸಾಮವೇದ’ವಾಯಿತು. ಸಾಮ ಎಂದರೆ ಧ್ವನಿಯ ಏರು-ಪೇರುಗಳು. ಹಾಗೆಯೇ ಲೌಕಿಕ ಪ್ರಯೋಜನಗಳುಳ್ಳ ಮಂತ್ರಗಳನ್ನೆಲ್ಲಾ ಒಂದುಗೂಡಿಸಿ ’ಸುಮಂತು’ ಎಂಬ ಶಿಷ್ಯನಿಗೊಪ್ಪಿಸಿದರು. ಆಶ್ಚರ್ಯವೆಂದರೇ ಈ ಎಲ್ಲ ಮಂತ್ರಗಳು ಅಥರ್ವ ಮತ್ತು ಅಂಗಿರಸ ಗೋತ್ರದ ಋಷಿಗಳಿಂದಲೇ ದೃಷ್ಟವಾಗಿದ್ದವು. ಆದ್ದರಿಂದ ಇದು ’ಅಥರ್ವವೇದ’ ಪ್ರಸಿದ್ಧಿ ಪಡೆಯಿತು. ಇನ್ನು ಉಳಿದ ಭಾಗವನ್ನು ’ವೈಶಂಪಾಯನ’ ಎಂಬ ಶಿಷ್ಯನಿಗೆ ಒಪ್ಪಿಸಿದರು. ಇದು ’ಯಜುರ್ವೇದ’ವೆನಿಸಿತು. ವೇದಗಳ ಆವಿರ್ಭಾವವೇ ಯಜ್ಞಕ್ಕೋಸ್ಕರ ಎಂದು ಯಾಸ್ಕರು ಹೇಳುತ್ತಾರೆ. ಮುಂದೆ ಸಾಯಣರೂ ಇದನ್ನೇ ಪ್ರತಿಪಾದಿಸಿದರು. ಆದ್ದರಿಂದ ಉಳಿದ ಭಾಗ ’ಯಜುರ್ವೇದ’ ಎಂದು ಹೆಸರು ಪಡೆದಿದ್ದು ಸರಿಯಾಗಿಯೇ ಇದೆ.  ಈ ಈತಿ ವೇದಗಳನ್ನು ವಿಂಗಡಿಸಿದ್ದರಿಂದ ಬಾದರಾಯಣರು ’ವೇದವ್ಯಾಸ’ರೆನಿಸಿಕೊಂಡರು.
ಮುಂದೆ ಈ ವೈಶಂಪಾಯನ ಋಷಿಗೆ ’ಯಾಜ್ಞವಲ್ಕ್ಯ’ ಎಂಬ ಋಷಿ ಶಿಷ್ಯರಾದರು. ಇವರು ಮಹಾನ್ ಮೇಧಾವಿಗಳು ಮತ್ತು ಸೂರ್ಯೋಪಾಸರು. ತಾವು ಗುರುಗಳಿಂದ ಅಭ್ಯಸಿಸಿದ ವೇದ ಭಾಗವಲ್ಲದೇ ಸೂರ್ಯನ ಉಪಾಸನೆಯಿಂದ ಹೆಚ್ಚಿನದನ್ನೂ ಸಂಪಾದಿಸಿಕೊಂಡರು. ಗುರುಗಳಿಂದ ಕಲಿತ ವೇದಭಾಗವನ್ನು ತಮ್ಮ ಸಹಾಧ್ಯಾಯಿಗೆ ಒಪ್ಪಿಸಿ ತಾವು ಸಂಪಾದಿಸಿದ ಭಾಗವನ್ನು ತಾವೇ ಮುಂದುವರಿಸಿದರು. ತಮ್ಮ ಅಧ್ಯಯನ-ಅಧ್ಯಾಪನ ಪರಂಪರೆಯಲ್ಲಿ ಮಂತ್ರ ಮತ್ತು ಬ್ರಾಹ್ಮಣವಾಕ್ಯಗಳನ್ನು ಬೇರೆ ಬೇರೆಯಾಗಿ ಹೇಳುವ ಕ್ರಮ ರೂಢಿಸಿಕೊಂಡರು. ಆದ್ದರಿಂದ ಇದು ’ಶುಕ್ಲ-ಯಜುರ್ವೇದ’ ವೆಂದು ಪ್ರಸಿದ್ಧಿಯನ್ನು ಪಡೆಯಿತು. ಇವರ ಸಹಾಧ್ಯಾಯಿಗಳಾದರೋ ಮಂತ್ರ-ಬ್ರಾಹ್ಮಣವಾಕ್ಯಗಳನ್ನು ಬೆರಕೆ ಮಾಡಿಕೊಂಡೇ ಹೇಳತೊಡಗಿದರು. ಅದು ಬೆರಕೆಯಾಗಿದ್ದರಿಂದ ’ಕೃಷ್ಣ-ಯಜುರ್ವೇದ’ವೆಂದು ಪ್ರಸಿದ್ಧವಾಯಿತು. 
ವ್ಯಾಸರ ಶಿಷ್ಯರಾದ ಪೈಲಋಷಿಯ ಶಿಷ್ಯ ಪರಂಪರೆಯಲ್ಲಿ ಬಂದವರೆಲ್ಲಾ ’ಋಗ್ವೇದಿ’ಗಳಾದರು. ಹೀಗೆಯೇ ಯಾಜ್ಞವಲ್ಕ್ಯರ ಶಿಷ್ಯಪರಂಪರೆಯಲ್ಲಿ ಬಂದವರು ಶುಕ್ಲ-ಯಜುರ್ವೇದಿಗಳು; ವೈಶಂಪಾಯನ ಋಷಿಗಳ ಶಿಷ್ಯಪರಂಪರೆಯಲ್ಲಿ ಬಂದವರು ಕೃಷ್ಣ-ಯಜುರ್ವೇದಿಗಳು; ಜೈಮಿನಿಋಷಿಗಳ ಶಿಷ್ಯಪರಂಪರೆಯವರು ಸಾಮವೇದಿಗಳು; ಸುಮಂತು ಋಷಿಗಳ ಶಿಷ್ಯ ಪರಂಪರೆಯವರು ಅಥರ್ವವೇದಿಗಳಾದರು.
೫. ಶಾಖೆ:
ಈ ಮೇಲೆ ಹೇಳಿದ ಐದು ಋಷಿಗಳ ಶಿಷ್ಯಂದಿರು ತಮ್ಮ ತಮ್ಮ ಶಿಷ್ಯರುಗಳಿಗೆ ತಾವು ಕಲಿತ ವೇದಗಳನ್ನು ಹೇಳಿಕೊಡುತ್ತ ಅವುಗಳನ್ನು ಸಂರಕ್ಷಿಸುತ್ತ ನಡೆದರು. ಕಾಲಕ್ರಮದಲ್ಲಿ ಅವರ ಶಿಷ್ಯರೂ ಸಹ ತಮ್ಮಗುರುಗಳಿಂದ ಕಲಿತ ಪಾಠದಲ್ಲಿ ತಮಗೆ ದಕ್ಕಿದಷ್ಟು ಅಥವಾ ತಾವು ಕಲಿತ ಕ್ರಮದಲ್ಲಿ ತಮ್ಮ ಶಿಷ್ಯರುಗಳಿಗೆ ಹೇಳಿಕೊಟ್ಟರು. ಈ ಪ್ರಕಾರ ಒಂದೇ ವೇದಭಾಗದಲ್ಲಿ ಶಿಷ್ಯರ ಹೆಸರಿನಲ್ಲಿ ಅವರವರ ಪಾಠಗಳನ್ನಾಧರಿಸಿ ’ಶಾಖೆ’ಗಳು ಹುಟ್ಟಿಕೊಂಡವು. 
ಪ್ರಸ್ತುತ ಋಗ್ವೇದದಲ್ಲಿ ೧.ಶಾಕಲ, ೨.ಬಾಷ್ಕಲ, ೩.ಆಶ್ವಲಾಯನ, ೪.ಶಾಂಖಾಯನ ಮತ್ತು ಮಾಂಡೂಕಾಯನ ಎಂಬ್ ಐದು ಶಾಖೆಗಳು ಉಳಿದುಕೊಂಡಿವೆ.ಶುಕ್ಲ-ಯಜುರ್ವೇದದಲ್ಲಿ ಮಾಧ್ಯಂದಿನ(ವಾಜಸನೇಯ) ಮತ್ತು ಕಾಣ್ವ ಎಂಬ ಎರಡು ಶಾಖೆಗಳು;  ಕೃಷ್ಣಯಜುರ್ವೇದದಲ್ಲಿ  ೧.ತತ್ತಿರೀಯ, ೨. ಮೈತ್ರಾಯಣಿ, ೩.ಕಠ ಮತ್ತು ೪.ಕಪಿಷ್ಠಲ ಎಂಬ ನಾಲ್ಕು ಶಾಖೆಗಳು; ಸಾಮವೇದದಲ್ಲಿ ೧.ಕೌಥುಮೀಯ, ೨. ರಾಣಾಯನೀಯ ಮತ್ತು ೩.ಜೈಮಿನೀಯ ಎಂಬ ಮೂರು ಶಾಖೆಗಳು; ಹಾಗೂ ಅಥರ್ವವೇದದಲ್ಲಿ ೧.ಪಿಪ್ಪಲಾದ, ೨.ಶೌನಕ, ೩.ಮೌದಮಹಾಭಾಷ್ಯ, ೪.ಸ್ತೌದ, ೫. ಜಾಜಲ, ೬.ಜಲದ, ೭.ಬ್ರಹ್ಮವೇದ, ೮.ದೇವದರ್ಶ ಮತ್ತು ೯.ಚಾರಣವೈದ್ಯ ಎಂಬ ಒಂಬತ್ತು ಶಾಖೆಗಳು ಉಳಿದುಕೊಂಡಿವೆ.    
೬.ಸೂತ್ರ:
ವೇದಾಧ್ಯಯನದ ಶಿಷ್ಯ ಪ್ರಶಿಷ್ಯ ಪರಂಪರೆಯ ಜೊತೆಗೆ ಈ ವೇದಮಂತ್ರಗಳನ್ನು ಯಜ್ಞಗಳಲ್ಲಿ ವಿನಿಯೋಗ ಗೊತ್ತುಮಾಡುವ ಮತ್ತು ಯಜ್ಞಸಂಸ್ಥೆಯ ಕುರಿತು ನಿಯಮಗಳು, ವಿಧಿ-ಪ್ರಯೋಗಗಳು ರಚಿಸಲ್ಪಟ್ಟವು. ಇವುಗಳು ಸೂತ್ರರೂಪದಲ್ಲಿದ್ದುದರಿಂದ ಇವುಗಳ ರಚನಾಕಾರರು ಸೂತ್ರಕಾರರೆಂದೆನಿಸಿಕೊಂಡರು. ಈ ಸೂತ್ರಕಾರರೂ ಸಹ ವೇದಗಳ ವರ್ಗೀಕರಣಕ್ಕೆ ಒಳಪಟ್ಟವರೇ. ಅಂದರೆ ಆ ಯಾ ವೇದಕ್ಕನುಗುಣವಾಗಿ ಆ ಯಾ ಸೂತ್ರಕಾರರಿರುವರು. 
ಋಗ್ವೇದದಲ್ಲಿ ’ಆಶ್ವಲಾಯನ’ ಮತ್ತು ’ಶಾಂಖಯನ(ಕೌಷೀತಕಿ)’ ಎಂಬ ಎರಡು ಸೂತ್ರಕಾರರಿರುವರು. ಶುಕ್ಲ-ಯಜುರ್ವೇದದಲ್ಲಿ ’ಕಾತ್ಯಾಯನ’ ಎಂಬ ಒಬ್ಬ ಸೂತ್ರಕಾರರು; ಹಾಗೂ ಕೃಷ್ಣ-ಯಜುರ್ವೇದದಲ್ಲಿ ’ಆಪಸ್ತಂಬ’, ’ಬೌಧಾಯನ’, ’ವೈಖಾನಸ’ , ಹಿರಣ್ಯಕೇಶೀ’, ಮತ್ತು ’ಸತ್ಯಾಷಾಢೀ’ ಎಂಬ ಐದು ಸೂತ್ರಕಾರರು ಕಾಣಿಸಿಕೊಳ್ಳುತ್ತಾರೆ. ಸಾಮವೇದದಲ್ಲಿ ’ಗೋಭಿಲ’, ’ಗೌತಮ’ ಮತ್ತು ’ಜೈಮಿನೀಯ’ ಎಂಬ ಮೂರು ಸೂತ್ರಕಾರರು ಸಿಗುತ್ತಾರೆ. ಕೊನೆಯದಾಗಿ ಅಥರ್ವವೇದದಲ್ಲಿ ’ವೈತಾನ’ ಮತ್ತು ’ಕೌಶಿಕ’ ಎಂಬ ಎರಡು ಸೂತ್ರಕಾರರಿರುವರು.
ನಾವು ಯಾರನ್ನು ಮರೆತರೂ ಈ ಸೂತ್ರಕಾರರನ್ನು ಮರೆಯಕೂಡದು. ಏಕೆಂದರೇ ಇಂದು ನಾವು ಧರ್ಮಾಚರಣೆಯ ಹೆಸರಿನಲ್ಲಿ ಸಂಧ್ಯಾವಂದನೆಯಿಂದ ಹಿಡಿದು ಅಂತ್ಯೇಷ್ಟಿ(ದಹನಸಂಸ್ಕಾರ)-ಶ್ರಾಧಾದಿಗಳೆಲ್ಲ ಆಚರಣೆಗಳು ಇವರು ಹೇಳಿಕೊಟ್ಟಿದ್ದೇ. ದುರ್ದೈವದಿಂದ ಉಪಾಕರ್ಮದ ದಿನದಂದು ಮಾತ್ರ ಇವರು ಹೆಸರುಗಳು ಕೇಳುವಂತಾಗಿದೆ. 
ಆದ್ದರಿಂದ ನಾವು ಯಾವ ಗೋತ್ರದವರು? ಪ್ರವರ ಏನು?ಯಾವ ಶಾಖೆ? ಯಾವ ಸೂತ್ರ? ಎಂಬಿತ್ಯಾದಿ ವಿಷಯಗಳನ್ನು ಪ್ರಯತ್ನ ಪೂರ್ವಕವಾಗಿ ನೆನಪಿಟ್ಟುಕೊಳ್ಳಬೇಕು. ಇದು ನಮ್ಮ ಆದ್ಯ ಕರ್ತವ್ಯ ಮತ್ತು ಆ ಋಷಿಗಳಿಗೆ ನವು ಸಲ್ಲಿಸಬೇಕಾದ ಕನಿಷ್ಠ ಗೌರವ. ಹೀಗೆ ಒಂದು ಗೋತ್ರೋಚ್ಚಾರಣೆಯಿಂದ ಇಷ್ಟೆಲ್ಲ ನಮ್ಮ ಪರಿಚಯ ಸಿಗುತ್ತದೆ. ಆದ್ದರಿಂದಲೇ ನಮ್ಮ್ ಹಿರಿಯರು ಸಂಧ್ಯವಂದನೆ, ಹಿರಿಯರಿಗೆ ನಮಸ್ಕಾರ, ಅತಿಥಿಗಳಿಗೆ ಅಭಿವಾದನೆ ಮಾಡುವಾಗ ಸಂಪೂರ್ಣ ಗೋತ್ರ-ಪ್ರವರ-ಶಾಖೆ-ಸೂತ್ರಗಳನ್ನು ಹೇಳುವುದು ಸಂಸ್ಕೃತಿಯ ಮತ್ತು ಸಂಸ್ಕಾರದ ಒಂದು ಭಾಗವಾಗಿಸಿದ್ದಾರೆ.

No comments:

Post a Comment